“ಅಬ್ಬೆ” ಕಾದಂಬರಿ ಪರಿಚಯ

“ಅಬ್ಬೆ” ಕಾದಂಬರಿ “ಚಡಗ ಕಾದಂಬರಿ ಪ್ರಶಸ್ತಿ”ಗೆ ಭಾಜನವಾಗಿದೆ. ಶ್ರೀ ಶಶಿಧರ ಹಾಲಾಡಿ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಹೆಚ್ ವಿ ಮೀನ ಅವರು ಈ ಕೃತಿಯ ಕುರಿತು ಬರೆದ ಪರಿಚಯವನ್ನು ತಪ್ಪದೆ ಮುಂದೆ ಓದಿ….

ಪುಸ್ತಕ : “ಅಬ್ಬೆ” ಕಾದಂಬರಿ
ಲೇಖಕರು : ಶ್ರೀ ಶಶಿಧರ ಹಾಲಾಡಿ
ಪ್ರಕಾಶನ : ಅಂಕಿತ ಪುಸ್ತಕ, ಬಸವನಗುಡಿ, ಬೆಂಗಳೂರು
ಬೆಲೆ : 250/-
ಮೋ ಸಂಖ್ಯೆ : 9019190502
26617755

ಪುಸ್ತಕದ ಮುಖ ಪುಟದಲ್ಲಿ ಚಿತ್ರಿಸಿರುವ ಜೇಡರ ಚಿತ್ರಕ್ಕೂ “ಅಬ್ಬೆ” ಎಂಬ ಹೆಸರಿಗೂ ಏನು ಸಂಬಂಧ? ಕುತೂಹಲದಿಂದ ಪುಸ್ತಕವನ್ನು ತೆರೆದು ಓದಲಾರಂಭಿಸಿದೆ.

“ಅಬ್ಬೆ” ಒಂದು ಪ್ರಕಾರದ ವಿಷಕಾರಕ “ಜೇಡ”ಎಂದು ಹಳ್ಳಿಯ ಜನರ ನಂಬಿಕೆ. ಆದರೇ….ಮನುಷ್ಯನ ವರ್ತನೆಗಳು ಅಬ್ಬೆಗಿಂತಲೂ ವಿಷಕಾರಿ ಎಂಬುದು ಕಥೆಯ ಪ್ರತೀ ಹಂತದಲ್ಲೂ ಗ್ರಹಿಸಬಹುದಾಗಿದೆ. ಒಂದು ಹಳ್ಳಿಯ ಮುಗ್ಧ ಜನರನ್ನು ಹಣದ ಬಲೆಗೆ ಸೆಳೆಯುತ್ತ,ನಿಸರ್ಗದಲ್ಲಿ ಹುಟ್ಟಿ ಬೆಳೆಯುವ ಅನೇಕ ವಿಸ್ಮಯಗಳ ನಾಶಕ್ಕೆ ಹಳ್ಳಿಯ ಜನರೇ ಕಾರಣರಾಗುವಂತೆ ಮಾಡುವ ಅನೇಕ ಅಧಿಕಾರಿಗಳ ಕೈಚಳಕದ ಸೂಕ್ಷ್ಮ ಚಿತ್ರಣವನ್ನು ಅಷ್ಟೇ ಸಹಜವಾಗಿ ತಮ್ಮ ಬರಹ ಶೈಲಿಯಲ್ಲಿ ನಿರೂಪಿಸಿದ್ದಾರೆ.

ಹಣವನ್ನು ಸಂಪಾದಿಸುವ ಅನೇಕ ದುರ್ಮಾರ್ಗಗಳು ಪರಿಸರದ ವಿನಾಶಕ್ಕೆ ಹೊಣೆಯಾಗುತ್ತಿವೆ ಎಂದು ತಿಳಿದಿದ್ದರೂ ವಿದ್ಯಾವಂತರಾದವರೇ ಜೀವನದ ಮೌಲ್ಯಗಳನ್ನು ಮರೆತುಬಿಡುತ್ತಾರೆ. ಅಂತೆಯೇ ….. ಈ ಕಥೆಯ ನಾಯಕ ಶಿವರಾಂ ನ ಹೊಸ ಜೀವನದ ಪುಟಗಳಲ್ಲಿ ……

ದಿನನಿತ್ಯವೂ ನಮ್ಮ ಸುತ್ತ ಮುತ್ತಲೂ ನಮ್ಮವರಿಂದಲೇ ಹೆಣೆಯಲ್ ಪಟ್ಟ ತಂತ್ರ ಕುತಂತ್ರಗಳನ್ನು ನೋಡಿಯೂ ನೋಡದಂತೆ ಇದ್ದು ಬಿಡುವುದೇ ಒಳಿತು ಎಂದು ಅದೆಷ್ಟೋ ಬಾರಿ ಅನಿಸುವುದೂ ಉಂಟು. ಇಲ್ಲದಿದ್ದಲ್ಲಿ ನಾವೇ ತೊಂದರೆಗಳ ಬಲೆಗೆ ಸಿಲುಕಿಕೊಳ್ಳುತ್ತೇವೆ. ಆದರೇ ಇಲ್ಲಿ ಕಥಾ ನಾಯಕ ಶಿವರಾಂನ ಯೋಚನಾ ರೀತಿ ನೀತಿಯೇ ಬೇರೆ.

ಬಿ ಎಸ್ಸಿ, ಬಾಟನಿ, ಜೂವಾಲಾಜಿ, ಕೆಮಿಸ್ಟ್ರಿ ಓದಿದ್ದ ಶಿವರಾಂನ ಶ್ರಮಕ್ಕೆ ಪ್ರತಿಫಲವಾಗಿ ಕಲ್ಕೆರೆ ಎಂಬ ಹಳ್ಳಿಯ ಬ್ಯಾಂಕ್ ಒಂದರ ಶಾಖೆಯಲ್ಲಿ ಕ್ಲರ್ಕ್ ಆಗಿ ಸೇರಿಕೊಳ್ಳುತ್ತಾನೆ. ಅವನಿಗೆ ಡೆಬಿಟ್, ಕ್ರೆಡಿಟ್ ಪದಗಳ ಅರ್ಥವೇನೆಂದು ತಿಳಿದಿರಲಿಲ್ಲ. ಜಾಣತನದಿಂದ ತನ್ನ ಕೆಲಸದ ಪ್ರೊಬೇಷನರಿ ಸಮಯದಲ್ಲಿ ನಿಷ್ಠೆಇಂದ ಕೆಲಸವನ್ನು ಕಲಿಯುವುದಲ್ಲದೆ, ಹಳ್ಳಿಯ ಜನರೊಂದಿಗೆ ಒಳ್ಳೆಯ ಸ್ನೇಹವನ್ನು ಗಳಿಸುತ್ತಾನೆ. ತನ್ನ ಶಾಕೆಯಲ್ಲಿನ ತಪ್ಪುಒಪ್ಪುಗಳನ್ನು ಗಮನಿಸಿ ಅದರ ಬಗ್ಗೆ ಸಹದ್ಯೋಗಿಗಳೊಂದಿಗೆ ಚರ್ಚಿಸುತ್ತಿದ್ದ ಶಿವರಾಮನನ್ನು ಕಂಡರೆ ಬ್ರಾಂಚ್ ಮ್ಯಾನೇಜರ್ ಗೆ ಆಗುತ್ತಿರಲಿಲ್ಲ. ಇವರಿಬ್ಬರ ನಡುವೆ ಭಿನ್ನಾಭಿಪ್ರಾಯಗಳು ಮೂಡುತ್ತವೆ. ಪಾಪ…. ಆದರ್ಶವಾದಿಯಾಗಿದ್ದ ಶಿವರಾಂ ತನ್ನ ಬ್ರಾಂಚ್ ಮ್ಯಾನೇಜರ್ ಇಂದ ಅವಮಾನಕ್ಕೆ ಒಳಪಡುತ್ತಾನೆ. ಒಂದಾದ ಮೇಲೆ ಒಂದಂತೆ ಅನೇಕ ಕಿರುಕುಳಗಳನ್ನು ಸಹಿಸಿಕೊಂಡು ಎದುರಾದ ಸಮಸ್ಯೆಗಳನ್ನು ಧೈರ್ಯದಿಂದ ಸ್ವೀಕರಿಸಿ ಜೀವಿಸುವುದನ್ನು ಕಲಿಯುತ್ತಾನೆ ಶಿವರಾಂ.

ಕರಾವಳಿಯ ಕಾಡು ಪ್ರದೇಶದಲ್ಲಿ ಹುಟ್ಟಿ ಬೆಳೆದ ಶಿವರಾಂ ಮೊಟ್ಟ ಮೊದಲ ಬಾರಿಗೆ ಬಯಲು ಸೀಮೆಯ ಕಲ್ಕೆರೆ ಹಳ್ಳಿಯತ್ತ ಪ್ರಯಾಣ ಮಾಡುತ್ತಿದ್ದಾಗ ಅವನ ಗಮನಕ್ಕೆ ಬಂದದ್ದು ಅಲ್ಲಿಯ ದೊಡ್ಡ ಬೆಟ್ಟ, ಆ ಬೆಟ್ಟದ ತುದಿಯಲ್ಲಿ ಕೋಟೆಯ ಗೋಡೆ, ಪೊದೆಗಳು, ಭಾರಿ ಗಾತ್ರದ ಬಂಡೆ,ಅದರ ನಡುವೆ ಪುಟ್ಟ ದೇಗುಲ. ನಂತರ ಕಣ್ಣಿಗೆ ಬಿದದ್ದು ಬ್ರಿಟೀಷರ ಕಾಲದ “ಗರುಡನಗಿರಿ ರಕ್ಷಿತಾರಣ್ಯ” ಎಂಬ ಪುರಾತನ ಫಲಕ. ಆ “ಗರುಡನಗಿರಿ ರಕ್ಷಿತಾರಣ್ಯ” ದಲ್ಲಿ ಕೇವಲ ಕುರುಚಲು ಗಿಡಗಳು ಮತ್ತು ಮರದ ಟೊoಗೆಗಳನ್ನು ಕಡಿದು ಸೊಪ್ಪನ್ನು ಮೇಕೆಗೆ ತಿನಿಸುತ್ತಿದ್ದ ಹಳ್ಳಿಯ ಜನರನ್ನು ನೋಡಿದ ಪರಿಸರ ಪ್ರೇಮಿಆಗಿದ್ದ ಶಿವರಾಂನ ಮನದಲ್ಲಿ ಅನೇಕ ವಿಚಾರಗಳು ಭುಗಿಲೇಳುತ್ತವೆ. ಹೆಸರು ಮಾತ್ರಕ್ಕೆ ಅರಣ್ಯ ಪ್ರದೇಶವಾಗಿದ್ದ ಆ ಅರಣ್ಯವನ್ನು ರಕ್ಷಣೆ ಮಾಡುವವರೇ ಇಲ್ಲದಿದ್ದಾಗ ಉಂಟಾಗುವು ಲೋಪ-ದೋಷಗಳತ್ತ ಅವನ ಚಿಂತನೆಗಳು ಸರಿಯುತ್ತವೆ.

ಶಿವರಾಂ ತಾನು ಕೆಲಸಕ್ಕೆ ಸೇರಿದ ಕೆಲವೇ ದಿನಗಳಲ್ಲಿ ಸಹೋದ್ಯೋಗಿಗಳ ಮಾನಸಿಕ ಸ್ಥಿತಿ ಹಾಗೂ ಹಳ್ಳಿಯ ಜನರ ಆಚಾರ ವಿಚಾರಗಳು, ಅವರ ಸಮಸ್ಯೆಗಳ ಬಗ್ಗೆ ಅರಿತುಕೊಳ್ಳುತ್ತಾನೆ. ತನ್ನ ಬಿಡುವಿನ ಸಮಯವನ್ನು ಹಳ್ಳಿಯ ಹುಡುಗರೊಂದಿಗೆ ಕಳೆಯುತ್ತಾ, ಅಲ್ಲಿಯ ಬೆಟ್ಟ ಗುಡ್ಡಗಳನ್ನು ಹತ್ತಿ ವಿಶೇಷ ವಿಸ್ಮಯ ಗಿಡ ಹೂಗಳ ಬಗ್ಗೆ ಅರಿತು ಅಲ್ಲಿಯ ಜನರಿಗೂ ಅರಿವನ್ನು ಮೂಡಿಸುವಲ್ಲಿ ಯಶಸ್ವಿಗೊಳ್ಳುತ್ತಾನೆ.

ಒಂದು ದಿನ ಊಟಕೆಂದು ಶಿವರಾಂ ಊರಿನ ಭಟ್ಟರ ಹೋಟೆಲ್ ಗೆ ನಡೆದು ಹೋಗುತ್ತಿದ್ದಾಗ ದಾರಿಯಲ್ಲಿ ಚಿಪ್ಪು ಹಂದಿಯ ಸೊಂಟಕ್ಕೆ ದಾರವನ್ನು ಕಟ್ಟಿ ಆಟವಾಡುತ್ತಿದ್ದ ವ್ಯಕ್ತಿಯ ಪರಿಚಯವಾಗುತ್ತದೆ. ಕೇವಲ ಪುಸ್ತಕಗಳಲ್ಲಿ ಚಿಪ್ಪು ಹಂದಿಯ ಬಗ್ಗೆ ಓದಿ ತಿಳಿದಿದ್ದ ಶಿವರಾಮನಿಗೆ ಅರಸಿಕೆರೆಯ ಒಂದು ಹಳ್ಳಿಯ ರಸ್ತೆಯ ಬದಿಯಲ್ಲಿ ಚಿಪ್ಪು ಹಂದಿಯನ್ನು ನೋಡುತ್ತಿದ್ದೇನೆ! ಎಂದು ಆಶ್ಚರ್ಯಪಡುತ್ತಾನೆ. ಕಾಡಿನಲ್ಲಿರಬೇಕಾದ ಚಿಪ್ಪುಹಂದಿ ಓರ್ವ ಮಾಸಿದ ಅಂಗಿ ತೊಟ್ಟು ತಲೆಗೆ ಬಟ್ಟೆ ಸುತ್ತಿಕೊಂಡಿದ್ದ ತೆಳ್ಳಗಿದ್ದ ವ್ಯಕಿಯ ಬಳಿ ಇದೆಯಲ್ಲಾ! ಶಿವರಾಂ ಆ ವ್ಯಕ್ತಿಯನ್ನು ಇದರ ಬಗ್ಗೆ ವಿಚಾರಿಸಿದಾಗ……

“ಸೋಮಿ…. ಇಲ್ಲೇ ಹತ್ತಿರದಲ್ಲಿರುವ “ಹಿರೇಕಲ್ಲು” ಬೆಟ್ಟದ ಕಾಡಿನ ಬಿಲವನ್ನು ತೋಡಿ ಇದನ್ನ ಹಿಡಿದು ತಂದೆ. ಆ ಬೆಟ್ಟದಲ್ಲಿ ಕರಡಿಯು ಐತೆ, ಚಿರತೆಯೂ ಐತೆ. ಇದಕ್ಕೆ ಪ್ಯಾಟೇಲಿ ಭಾರಿ ರೇಟ್ ಐತೆ”…. ಎಂದು ಹೇಳಿ ನಗುತ್ತಾನೆ. ಶಿವರಾಂನ ಮನದಲ್ಲಿ ಅನೇಕ ಪ್ರಶ್ನೆಗಳು ಉದ್ಭವಗೊಳ್ಳುತ್ತದೆ. ಹಣ ಮಾಡುವ ದಾರಿಗಳಲ್ಲಿ ಇದೂ ಒಂದು ಎಂಬ ಸುಳಿವು ಶಿವರಾಂಗೆ ಸಿಕ್ಕಿಬಿಡುತ್ತದೆ. ಇಂತಹ ಹಣ ಮಾಡುವ ಮಾರ್ಗದಲ್ಲಿ ಅದೆಷ್ಟೋ ಜನರು ಕೊಂಡಿಯಾಗಿ ಯಾರಿಗೂ ತಿಳಿಯದಹಾಗೆ ಸೃಷ್ಟಿಯ ಸಮತೋಲನಕ್ಕೆ ಹಾನಿ ಮಾಡುತ್ತಾರೆ.

ಇದಲ್ಲದೆ ಆ ಊರಿನ ಜನರು ಕಂಡಲ್ಲಿ “ಅಬ್ಬೆ” ಜೇಡವನ್ನು ಕಲ್ಲಿನಿಂದ ಜಜ್ಜಿ ಜಜ್ಜಿ ಕೊಲ್ಲುತ್ತಿದ್ದನ್ನು ನೋಡಿ ದಿಗಿಲು ಪಟ್ಟ ಶಿವರಾಂನನ್ನು ನೋಡಿ ನಕ್ಕ ಅಲ್ಲಿಯ ಜನರು.

“ಅಯ್ಯೋ, ನಿಮಗೆ ಗೊತ್ತಿಲ್ವಾ? “ಅಬ್ಬೆ ಕಚ್ಚಿದರೆ ಹೆಬ್ಬಾಗಿಲಿಗೆ ಬರುವಷ್ಟರಲ್ಲಿ ಸಮಯವಿಲ್ಲವೆಂದು” …..
ಅಬ್ಬೆ ಕಚ್ಚಿದರೆ ಹತ್ತೇ ನಿಮಿಷದಲ್ಲಿ ಸಾವು ಖಚಿತ. ಅದಕ್ಕೇ ನಾವು ಅಬ್ಬೆಯನ್ನು ಕಂಡರೆ ಕಲ್ಲಲ್ಲಿ ಚಚ್ಚಿ ಹಾಕುತ್ತೇವೆ ” ಎಂಬ ಅವರ ತರ್ಕವನ್ನು ಒಪ್ಪದ ಶಿವರಾಂ…..

“ಅಬ್ಬೆ” ಕಚ್ಚಿದರೆ ಸಾವು ಸಂಭವಿಸುತ್ತದೆಯೇ!? ನಮ್ಮ ದೇಶದಲ್ಲಿ ಕಾಣಿಸಿಕೊಳ್ಳುವ ಅಬ್ಬೆಗಳು ಅಷ್ಟೊಂದು ವಿಶಕಾರಿಯೇ?!” ಶಿವರಾಮನಿಗೆ ಕಾಡುತ್ತಿದ್ದ ಈ ಪ್ರಶ್ನೆಗೆ ಉತ್ತರ ಕೊಟ್ಟವರು ಅ ಹಳ್ಳಿಗೆ ಹೊಸದಾಗಿ ಬಂದು ಕೆಲಸಕ್ಕೆ ಸೇರಿದ್ದ ಸಸ್ಯಶಾಸ್ತ್ರ ಪ್ರಾಧ್ಯಾಪಕರಾದ ಡಾ. ಕಲ್ಲೂರಾಯರು. ಆ ಊರಿನಲ್ಲಿ ಸಂಭವಿಸುತ್ತಿದ್ದ ಅನೇಕರ ಸಾವಿನ ಸುತ್ತಲೂ ಅನುಮಾನಗಳು ಹುಟ್ಟುತ್ತವೆ. ಇಂತಹ ಅನೇಕ ವಿಷಯಗಳು ಈ ಕಥೆಯಲ್ಲಿ ಅಡಗಿದೆ.

ಹೀಗಿದ್ದಾಗ…….ಬ್ಯಾಂಕ್ ಇಂದ ಸಿಗುವ ಸರಕಾರದ “ಪೂಜಾರಿ ಸಾಲ”ವನ್ನು ಪಡೆಯಲು ಹಳ್ಳಿಯ ಜನರು ತಮ್ಮ ತಮ್ಮ ಕಾಗದ ಪತ್ರಗಳೊಂದಿಗೆ ಮ್ಯಾನೇಜರ್ ಬಳಿ ಬರಲು ಪ್ರಾರಂಭಿಸುತ್ತಾರೆ.

ಸರಕಾರದ “ಪೂಜಾರಿ” ಸಾಲವನ್ನು ಕೊಡುವ ನೆಪದಲ್ಲಿ ಬ್ಯಾಂಕ್ ಮ್ಯಾನೇಜರ್ ಸಾಲಗಾರರಿಂದ ಕಮಿಷನ್ ಪಡೆಯುತ್ತಿದ್ದಾರೆ ಎಂಬ ವಿಷಯವು ಆಗಷ್ಟೇ ಆ ಬ್ಯಾಂಕ್ ನ ಕ್ಲರ್ಕ್ ಆಗಿ ಸೇರಿದ್ದ ಶಿವರಾಂನ ಕಿವಿಗೂ ಬೀಳುತ್ತದೆ. ಆಗ ಶಿವರಾಂ ಈ ವಿಷಯವನ್ನು ತನ್ನ ಬ್ಯಾಂಕ್ ನ ಮುಖ್ಯ ಅಧಿಕಾರಿಗಳಿಗೆ ತಿಳಿಸಿಬಿಡುತ್ತಾನೆ…..ಬ್ರಾಂಚ್ ಮ್ಯಾನೇಜರ್ ಹಾಗೂ ಕುಡಿತದ ಚಟಕ್ಕೆ ಬಲಿಯಾಗಿದ್ದ ಒಂದಿಬ್ಬರು ಸಹೋದ್ಯೋಗಿಗಳ ಬಂಡವಾಳ ಶಿವರಾಂನ ಶಿಸ್ತಿನ ಜೀವನಕ್ಕೆ ಜೇಡರ ಬಲೆಯಂತೆ ಸುತ್ತಿಹಾಕಿಕೊಳ್ಳುತ್ತದೆ.

ಅಬ್ಬೆ ಕಚ್ಚಿ ಮೃತಪಟ್ಟಿದ್ದ ಆ ಹಳ್ಳಿಯ ಸದಾಶಿವ ಎನ್ನುವವನ ಹೆಂಡತಿಗೂ “ಪೂಜಾರಿ” ಸಾಲದ ಭಾಗ್ಯ ದೊರಕುತ್ತದೆ. ಅವಳಿಗೆ ಪೂಜಾರಿ ಸಾಲದ ನೆಪದಲ್ಲಿ ಶಿವರಾಂ ನ ಪರಿಚಯವಾಗಿ, ಅವನಿಂದ ಸಾಲದ ಹಣ ಕಟ್ಟಲೆಂದು ಚಲನ್ ಬರೆಸಿಕೊಳ್ಳಲು ಶಿವರಾಂಗೆ ತನ್ನ ಪಾಸ್ ಬುಕ್ ಅನ್ನು ಕೊಡುತ್ತಾಳೆ. ಆ ಪಾಸ್ ಬುಕ್ ಅನ್ನು ಅವಳಿಂದ ಇಸಿಕೊಳ್ಳುವಾಗ ಶಿವರಾಂ ನ ಬೆರಳಿಗೆ ಅವಳ ಕೈ ಬೆರಳು ತಗಲುತ್ತದೆ …… ಅಷ್ಟೇ…..

“ನನ್ನ ಕೈ ಬೆರಳನ್ನು ಹಿಡಿದು ಚಿಗುಟಿ ಎಳೆದರು” ಎಂಬ ಕಂಪ್ಲೇಂಟ್ ಬರೆದು ಮ್ಯಾನೇಜರ್ ಗೆ ಕೊಡುತ್ತಾಳೆ. ಶಿವರಾಂ ತಲೆ ತಗ್ಗಿಸಿ ಕುಳಿತುಬಿಡುತ್ತಾನೆ …..ಮುಂದೇನಾಯಿತು?! ಸಂಚು-ದ್ವೇಷಗಳ ಹೊರಾಟದಲ್ಲಿ ಗೆಲುವು ಯಾರಿಗೋ!? ಕಥೆ ಓದಿ….

ಇನ್ನೂ ತನ್ನ ಪ್ರೊಬೇಷನರಿ ಸಮಯದಲ್ಲಿದ್ದ ಶಿವರಾಮನಿಗೆ ಆ ಜೇಡರ ಬಲೆಯಿಂದ ಬಿಡಿಸಿಕೊಳ್ಳಲು ಸಾಧ್ಯವಾಯಿತೇ? ನಂತರ ಶಿವರಾಂನ ಕಥೆ ಏನಾಯಿತು? ಕಥೆ ನೈಜತೆಯನ್ನು ಹೊಂದಿದ್ದು ಓದುಗರ ಮನಸ್ಸು ಕಥೆಯ ಪಾತ್ರಧಾರಿಗಳಲ್ಲಿ ಒಂದಾಗಿಬಿಡುತ್ತದೆ.

ಹಳ್ಳಿಯ ಜನರ ಸಮಸ್ಯೆಗಳನ್ನು , ಪರಿಸರ ನಾಶದ ಕಾರಣಗಳು ಅಲ್ಲಿಯ ಬೆಟ್ಟ ಗುಡ್ಡಗಳ ನಡುವೆ ಜೀವನವನ್ನು ಕಟ್ಟಿಕೊಂಡಿರುವವರ ಬಗ್ಗೆ, ಕಾಡಿನ ಮಧ್ಯೆ ಇರುವ ಪುರಾತನ ದೇವಸ್ಥಾನ, ಅಲ್ಲಿ ಕಂಡುಬರುವ ವಿಶೇಷ ಸಸ್ಯಸಂತತಿಗಳು, ಆ ಬೆಟ್ಟದಲ್ಲಿ ಆಗೊಮ್ಮೆ ಈಗೊಮ್ಮೆ ಕಾಣಿಸಿಕೊಳ್ಳುವ ಸನ್ಯಾಸಿಗಳ ಬಗ್ಗೆ ವಿಷಯಗಳನ್ನು ಸಂಗ್ರಹಿಸಿ ತಿಳಿಯುವ ಪ್ರಯತ್ನವನ್ನು ಮಾಡಿದ ಶಿವರಾಂಗೆ ಕುತೂಹಲ ಮತ್ತಷ್ಟು ಹೆಚ್ಚುತ್ತದೆ. ಈ ಕೌತುಕತೆಯು ಅವನನ್ನು ಕಲ್ಕೆರೆಯ ಬತ್ತಿ ಹೋಗಿದ್ದ ಕೆರೆಯ ಬದಿಗೆ ಕರೆದೌಯುತ್ತದೆ. ಅಲ್ಲಲ್ಲಿ ಕಡಿದು ಬಿದಿದ್ದ ಮರಗಳು ಹಾಗೂ ಗೂಡುಗಳನ್ನು ಕಳೆದುಕೊಂಡು ನೆಲದ ಮೇಲೆ ಬಿದ್ದು ವಿಲವಿಲನೆ ನರಳುತ್ತಾ ಸತ್ತು ಬಿದ್ದಿದ್ದ ಪಕ್ಷಿಗಳು, ಹೊಡೆದು ಹೋದ ಮೊಟ್ಟೆಗಳ ದೃಶ್ಯಗಳಿಂದ ದುಃಖಗೊಂಡ ಶಿವರಾಂ ಕೆಲವು ಸಮಯ ಮೌನಕ್ಕೆ ಶರಣಾಗುತ್ತಾನೆ.

“ರಿಸರ್ವ್ ಫಾರೆಸ್ಟ್ ” ನ ದುಃಖಕರ ಸ್ಥಿತಿ ಮಾನವ ಕುಲದ ಸರ್ವನಾಶದ ಸೂಚನೆ.

ವಾಸ್ತವ ಸತ್ಯಗಳ ಆಯಾಮಗಳನ್ನು ಹೊಂದಿರುವ “ಅಬ್ಬೆ” ಪುಸ್ತಕವನ್ನು ಓದಿದಾಗ ಲೇಖಕರಾದ ಶ್ರೀ ಶಶಿಧರ ಹಾಲಾಡಿಯವರ ಕಥೆ ಬರೆಯುವ ಶೈಲಿ ಹಾಗೂ ಪರಿಸರದಲ್ಲಿನ ವೈವಿಧ್ಯಮಯ ವಿಶೇಷ ಕಥಾ ಹಂದರ ಹಾಗೂ ನಿರೂಪಣೆ ಓದುಗರ ಅವಲೋಕನಕ್ಕೆ ಸ್ಫೂರ್ತಿಯನ್ನು ತುಂಬುತ್ತದೆ. ಮುಖಪುಟದಲ್ಲಿ ಶ್ರೀ ಶಶಿಧರ ಅವರ ಅನೇಕ ಬರಹಗಳಲ್ಲಿ ಪರಿಸರಕ್ಕೆ ಸಂಬಂಧಪಟ್ಟ ಅನೇಕ ವಿಷಯಗಳ ಬಗ್ಗೆ ಮಾಹಿತಿಗಳನ್ನು ಓದಿ ತಿಳಿದುಕೊಳ್ಳುತ್ತಿದ್ದ ನನಗೆ ಇಂತಹ ಮಹಾನ್ ಬರಹಗಾರರ ಕಾದಂಬರಿಯನ್ನು ಓದಲು ಅವಕಾಶ ದೊರಕಿದ್ದಕ್ಕೆ ಬಹಳ ಹೆಮ್ಮೆ ಎನಿಸುತ್ತಿದೆ.

ಶ್ರೀ ಶಶಿಧರ ಹಾಲಾಡಿಯವರಿಗೆ ಹಾಗೂ ಪ್ರಕಾಶಕರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು.


  • ಹೆಚ್ ವಿ ಮೀನ – ಬೆಂಗಳೂರು.

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW