ಪಿ.ಯು. ಸಿ ಯಲ್ಲಿ ಚೂಡಿ, ಮಿಡಿ, ಸ್ಕರ್ಟ್, ಟಾಪ್ ಹಾಕಿಕೊಂಡು ಆರಾಮವಾಗಿ ಓಡಾಡುತ್ತಿದ್ದವರು ಟಿಸಿಎಚ್ ಕಲಿಯುವಾಗ ಸೀರೆ ಉಡುವುದು ಬಂದಾಗ ಏನಾಯಿತು ಶಿಕ್ಷಕಿ ಸರ್ವಮಂಗಳ ಜಯರಾಂ ಅವರ ಈ ಲೇಖನವನ್ನು ತಪ್ಪದೆ ಮುಂದೆ ಓದಿ….
ನಾವು ದಿನನಿತ್ಯದ ಕೆಲಸದಲ್ಲಿ ತೊಡಗಿದ್ದಾಗ ಕೆಲವೊಮ್ಮೆ ಸವಿ ನೆನಪುಗಳು ಮನದಲ್ಲಿ ಸುಳಿದು ಕಚಗುಳಿ ಇಡುತ್ತವೆ. ನೆನಪಿನಂಗಳವನ್ನು ಸದಾ ಹಸಿರಾಗಿಡುತ್ತವೆ. ಇಂತಹ ಒಂದು ನೆನಪು ನಿನ್ನೆ ನಾನು ಶಾಲೆಯಲ್ಲಿ ಪಾಠ ಮಾಡುವಾಗ ಮನದಲ್ಲಿ ಸುಳಿಯಿತು. ಎಂದಿನಂತೆ ಪಾಠ ಮುಗಿಸಿ ಬೋರ್ಡ್ ಮೇಲೆ ಉತ್ತರಗಳನ್ನು ಬರೆಯುತ್ತಿದ್ದೆ. ಹಿಂದಿನ ಸಾಲಿನ ವಿದ್ಯಾರ್ಥಿಯೊಬ್ಬ ” ಮ್ಯಾಮ್.. ತಲೆ.. ತಲೆ ” ಎಂದು ಗೊಣಗುತ್ತಿದ್ದ. ಏನೋ ಅದು …ತಲೆ ಎಂದೆ. ಮ್ಯಾಮ್ ನನಗೆ ಸರಿಯಾಗಿ ಕಾಣ್ತಿಲ್ಲ. ಇವನ ತಲೆ ಅಡ್ಡ….. ಏಯ್ ತಲೆ ತಗಿಯೋ ಎಂದು ಮುಂದಿದ್ದವನಿಗೆ ಹೇಳಿದ. ಎಲ್ಲಾ ಮಕ್ಕಳೂ ಜೋರಾಗಿ ನಕ್ಕರು. ಜೊತೆಗೆ ನಾನೂ ನಕ್ಕಿದ್ದೆ.
“ನಿನಗೆ ಕಾಣಿಸ್ತಿಲ್ವ… ಹಾಗಾದರೆ ಅವನ ತಲೆ ತೆಗೆದುಬಿಡೋಣ್ವಾ” ಎಂದೆ ನಗುತ್ತ. ಬೇಡ ಮ್ಯಾಮ್ ಎಂದ. ಮುಂದಿನ ಬೆಂಚಿಗೆ ಬಂದು ಬರೆದುಕೋ ಎಂದು ಅವನಿಗೆ ಹೇಳಿ ಅಂದಿನ ನನ್ನ ನೆನಪಿನ ಲೋಕಕ್ಕೆ ಜಾರಿದ್ದೆ.
ನಾನಾಗ ಪ್ರಥಮ ಟಿ. ಸಿ. ಎಚ್. ನಲ್ಲಿ ಓದುತ್ತಿದ್ದೆ. ಶೈಕ್ಷಣಿಕ ವರ್ಷ ದ ಕೊನೆ ತಿಂಗಳಾದ್ದರಿಂದ ವಿಪರೀತ ಕೆಲಸದ ಒತ್ತಡ. ಕಿರು ಪರೀಕ್ಷೆಗಳಿಗೆ ತಯಾರಾಗುವುದು, ಎಲ್ಲಾ ವಿಷಯಗಳ ಅಸೈನ್ಮೆಂಟ್ ರೆಡಿ ಮಾಡುವುದು, ಪ್ರಾಕ್ಟೀಸ್ ಟೀಚಿಂಗ್ ಗೆ ಲೆಸೆನ್ ಪ್ಲಾನ್ ಬರೆಯುವುದು, ಫೈಲ್ ರೆಡಿ ಮಾಡುವುದು, ಕ್ರಿಟಿಸಿಸಂ ಡೈರಿ ಬರೆಯುವುದು, ಇವೆಲ್ಲದರ ಜೊತೆಗೆ ಪ್ರತಿ ಪಾಠಕ್ಕೆ ಸರಿ ಹೊಂದುವ ಬೋಧನೋಪಕರಣ ತಯಾರು ಮಾಡುವುದು.

ಫೋಟೋ ಕೃಪೆ : google
ಒಂದೇ ಎರಡೇ… ಹನ್ನೊಂದರಲ್ಲಿ ಇನ್ನೊಂದು ಎಂಬಂತೆ ಪ್ರತಿನಿತ್ಯ ಸೀರೆ ಉಡುವುದು ಒಂದು ದೊಡ್ಡ ಸವಾಲು. ಆಗ ತಾನೇ ಪಿ. ಯು. ಸಿ. ಮುಗಿಸಿ ಟಿ. ಸಿ. ಎಚ್ ಗೆ ಸೇರಿದ್ದ ನಮಗೆ ಸೀರೆ ಉಡಲು ಬರುತ್ತಿರಲಿಲ್ಲ. ಆಗ ನನಗಿಂತ ಎರಡ್ಮೂರು ವರ್ಷ ದೊಡ್ಡವಳಾದ ನನ್ನ ಗೆಳತಿ ಶಾಂತ ಪ್ರತಿನಿತ್ಯ ಅರ್ಧಗಂಟೆ ಮುಂಚೆ ನಮ್ಮ ಮನೆಗೆ ಬಂದು ಸೀರೆ ಉಡಿಸುತ್ತಿದ್ದಳು. ಪಿ. ಯು. ಸಿ. ಯಲ್ಲಿ ಚೂಡಿ, ಮಿಡಿ, ಸ್ಕರ್ಟ್, ಟಾಪ್ ಹಾಕಿಕೊಂಡು ಆರಾಮವಾಗಿ ಓಡಾಡುತ್ತಿದ್ದ ನಮಗೆ ಸೀರೆ ಎಂದರೆ ತಲೆನೋವು. ಓಡಾಡುವಾಗ ಕಾಲಿಗೆ ತೊಡರಿದಂತಾಗಿ ಎಷ್ಟೋ ಸಲ ಮುಗ್ಗರಿಸಿ ಬೀಳುವಂತಾಗುತ್ತಿತ್ತು. ಒಟ್ಟಿನಲ್ಲಿ ಸೀರೆ ಎಂದರೆ ಉಸಿರು ಕಟ್ಟಿದಂತಹ ಅನುಭವ. ಎಂದಿಗೆ ಈ ಕರ್ಮ ಮುಗಿಯುತ್ತದೆಯೋ ಅಂತ ಕಾಯುತ್ತಿದ್ದೆವು. ಆದರೆ.. ಹೋದೆಯಾ ಪಿಶಾಚಿ ಎಂದರೆ ಬಂದೆ ಗವಾಕ್ಷಿಯಲ್ಲಿ ಎಂಬಂತೆ ಸೀರೆ ನಮ್ಮ ಜೀವನದಲ್ಲಿ ಹಾಸುಹೊಕ್ಕಾಗಿ ಜೀವನದ ಅವಿಭಾಜ್ಯ ಅಂಗವಾಗಿದೆ.
ಅದಿರಲಿ… ಈಗ ಮುಖ್ಯ ವಿಷಯಕ್ಕೆ ಬರೋಣ. ಪ್ರತಿದಿನ ನಾನು ಮತ್ತು ನನ್ನ ಗೆಳತಿ ಶಾಂತ ಸರ್ಕಾರಿ ಬಸ್ನಲ್ಲಿ ಕಾಲೇಜಿಗೆ ಹೋಗುತ್ತಿದ್ದೆವು. ಅಂದು ಪ್ರಾಕ್ಟಿಕಲ್ ಎಕ್ಸಾಮ್ ಇತ್ತು. ಫೈನಲ್ ಎಕ್ಸಾಮ್ ಬೇರೆ…. ಅವತ್ತು ಆದಷ್ಟು ಬೇಗನೇ ಹೋಗಬೇಕೆಂದು ಬೆಳಿಗ್ಗೆ ಸುಮಾರು ಎಂಟು ಗಂಟೆಗೆ ಮನೆ ಬಿಟ್ಟೆವು. ಅಂದಿನ ಟೀಚಿಂಗ್ ಗೆ ಬೇಕಾದ ಬೋಧನೋಪಕರಣ ಗಳನ್ನು ರಾತ್ರಿಯೆಲ್ಲಾ ನಿದ್ದೆಗೆಟ್ಟು ತಯಾರಿಸಿದ್ದೆವು. ಥರ್ಮೋಕೋಲ್ ನಲ್ಲಿ ರೈತನ ಚಿತ್ರ ಕೊರೆದು ಕತ್ತರಿಸಿ, ಸೂಕ್ತ ಬಣ್ಣ ತುಂಬಿ ಜೋಪಾನವಾಗಿ ಎತ್ತಿಟ್ಟುಕೊಂಡಿದ್ದೆವು. ಪ್ರಾಕ್ಟಿಕಲ್ ಎಕ್ಸಾಮ್ ನಲ್ಲಿ ಬೋಧನೋಪಕರಣ ಬಳಸಿ ಪರಿಣಾಮ ಕಾರಿಯಾಗಿ ಬೋಧಿಸಿದಾಗ ಮಾತ್ರ ಹೆಚ್ಚಿನ ಅಂಕ ನಿರೀಕ್ಷಿಸಬಹುದಾಗಿತ್ತು.
ಬೆಳಿಗ್ಗೆ ಬೇಗನೇ ಎದ್ದು ರೆಡಿಯಾಗಿ ಕಾಲೇಜಿಗೆ ಹೊರಟರೆ.. ಹಾಳಾದವು ಒಂದೂ ಬಸ್ ಬರಲಿಲ್ಲ. ಕಾದು ಕಾದು ಸಾಕಾಯಿತು. ಬಸ್ ಪಾಸ್ ಮಾಡಿಸಿದ್ದರಿಂದ ಸರ್ಕಾರಿ ಬಸ್ ಗೆ ದಿನವೂ ಕಾಯುತ್ತಿದ್ದೆವು. ಆದರೆ ಅಂದು ಎಕ್ಸಾಮ್ ಸಲುವಾಗಿ ಬೇಗನೆ ಹೋಗಲು ಮಿನಿ ಬಸ್ ಹತ್ತಿದೆವು.
ಕಿಟಕಿ ಪಕ್ಕ ಸೀಟ್ ಸಿಕ್ಕಿದ್ದರಿಂದ ತುಂಬಾ ಖುಷಿ ಆಯ್ತು.ಬೊಂಬೆಯನ್ನು ಜೋಪಾನವಾಗಿ ಇಟ್ಟುಕೊಳ್ಳಬಹುದೆಂದು. ಮಿನಿ ಬಸ್ ವೇಗವಾಗಿ ಮುಂದೆ ಮುಂದೆ ಚಲಿಸುತ್ತಿತ್ತು. ಆಗ ಇದ್ದಕ್ಕಿದ್ದಂತೆ ಜೋರಾಗಿ ಗಾಳಿ ಬೀಸಿತು. ಗಾಳಿಯ ರಭಸಕ್ಕೆ ಬೊಂಬೆಯ ತಲೆ ಕಳಚಿಕೊಂಡು ಕಿಟಕಿಯಿಂದ ಆಚೆ ಬಿದ್ದಿತು. ರಸ್ತೆ ಕಡೆ ನೋಡುತ್ತಿದ್ದ ನಾನು ಇದ್ದಕಿದ್ದಂತೆ ಬೊಂಬೆ ಕಡೆ ನೋಡಿದರೆ ತಲೆಯೇ ಇಲ್ಲ. ತಕ್ಷಣವೇ ಗಾಬರಿಯಿಂದ ನಾನು ” ಶಾಂತಾ…. ಇಲ್ಲಿ ನೋಡು ಬೊಂಬೆ ತಲೆ ಎಗರಿ ಹೋಗಿದೆ “ಎಂದೆ. ಆ ಕೂಡಲೇ ಅವಳು ಎದ್ದು ಡ್ರೈವರ್ ಗೆ ಬಸ್ ನಿಲ್ಲಿಸಿ.. ಬಸ್ ನಿಲ್ಲಿಸಿ ಎಂದು ಏದುಸಿರು ಬಿಡುತ್ತಾ ಕೂಗಿಕೊಂಡಳು.
ಬಸ್ ನಿಲ್ಲಿಸಿದ್ದೇ ತಡ… ನಾನು ಮತ್ತು ಶಾಂತ ಬಸ್ ನಿಂದ ಇಳಿದು ಆ ಬೊಂಬೆಯ ತಲೆ ಹುಡುಕುತ್ತಾ ಹೊರಟೆವು. ರಸ್ತೆಯ ಗುಂಟಾ ನಾನು.. ರಸ್ತೆ ಪಕ್ಕದ ಹೊಲದ ಗುಂಟಾ ಅವಳು ಓಡುತ್ತಿದ್ದೇವೆ. ಆ ತಲೆಯು ನಮಗಿಂತ ಜೋರಾಗಿ ನಮ್ಮನ್ನು ಆಟವಾಡಿಸಲು ಮುಂದೆ ಮುಂದೆ ಹೋಗುತ್ತಲೇ ಇದೆ. ದಾರಿ ಹೋಕರು ಗುಂಪು ಸೇರಿದರು. ರಸ್ತೆಯಲ್ಲಿ ದ್ವಿಚಕ್ರ ವಾಹನಗಳಲ್ಲಿ ಹೋಗುತ್ತಿರುವವರು ಗಾಡಿ ನಿಲ್ಲಿಸಿ ಏನಮ್ಮಾ… ಏನಾಯ್ತು ಎಂದು ಕೇಳುತ್ತಿದ್ದರೆ… ನಾವು ತಲೆ …ತಲೆ …ಎಂದುಕೊಂಡು ಓಡುತ್ತಿದ್ದೇವೆ. ನಮ್ಮ ಸಮಸ್ಯೆಯನ್ನು ಅರ್ಥ ಮಾಡಿಕೊಂಡ ಒಬ್ಬ ಪುಣ್ಯಾತ್ಮ ಗಾಡಿಯಲ್ಲಿ ವೇಗವಾಗಿ ಚಲಿಸಿ ಬೊಂಬೆಯ ತಲೆ ತಂದುಕೊಟ್ಟ. ಅವನಿಗೆ ಧನ್ಯವಾದಗಳನ್ನು ಹೇಳಿ… ಉಸ್ಸಪ್ಪಾ ಎಂದು ನಿಟ್ಟುಸಿರು ಬಿಟ್ಟೆವು. ಹೀಗೆ ಅಂದಿನ ತಲೆ ಪುರಾಣ ನೆನಪಾಗಿ ಮನದಲ್ಲೇ ಮುಗುಳ್ನಕ್ಕೆ.
- ಸರ್ವಮಂಗಳ ಜಯರಾಂ – ಶಿಕ್ಷಕಿ. SSEA ಪ್ರೌಢಶಾಲೆ, ಗೌರಿಬಿದನೂರು.
