ಸಿ.ಪಿ . ಬೆಳ್ಳಿಯಪ್ಪ ಅವರ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ ಡಾ.ಡಿ.ಬಿ ರಾಮಚಂದ್ರಾಚಾರ್ ಅವರು. ಆ ಕೃತಿಯ ಹೆಸರು ಕಳೆದು ಹೋದ ಕೊಡಗಿನ ರಾಜಕುಮಾರಿ ‘ವಿಕ್ಟೋರಿಯಾ ಗೌರಮ್ಮ’ . ಈ ಕೃತಿಯ ಕುರಿತು ಲೇಖಕಿ ವಾಣಿಶ್ರೀ ಕೊಂಚಾಡಿ ಅವರು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಪುಸ್ತಕದ ಹೆಸರು: ವಿಕ್ಟೋರಿಯಾ ಗೌರಮ್ಮ
(ಕಳೆದು ಹೋದ ಕೊಡಗಿನ ರಾಜಕುಮಾರಿ)
ಲೇಖಕರ ಹೆಸರು: ಸಿ.ಪಿ . ಬೆಳ್ಳಿಯಪ್ಪ
( ಕನ್ನಡಕ್ಕೆ: ಡಾ.ಡಿ.ಬಿ ರಾಮಚಂದ್ರಾಚಾರ್ )
ಪ್ರಕಾಶಕರು: ಅಂಕಿತ ಪುಸ್ತಕ
ಬೆಲೆ: ೧೫೦.00 ರೂ
ಇದೊಂದು ಅನುವಾದಿತ ಕೃತಿ. ಕೊಡಗಿನ ಕೊನೆಯ ಮಹಾರಾಜನಿಗೆ ಹುಟ್ಟಿದ ರಾಜಕುಮಾರಿಯೊಬ್ಬಳು ಇಂಗ್ಲೆಂಡ್ ಗೆ ಹೋಗಿ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡು ತವರೂರನ್ನೇ ಮರೆತು ಬಾಳಿದವಳ ವ್ಯಥೆಯ ಕಥೆಯಾಗಿದೆ. ಬ್ರಿಟಿಷರ ಕುತಂತ್ರಕ್ಕೆ ಇಬ್ಬರು ರಾಜವಂಶದವರ ಬದುಕು ಬಲಿಯಾಗುವುದು ಮಾತ್ರ ಶೋಚನೀಯವಾಗಿದೆ.
ನಮ್ಮ ಬಳಗದಲ್ಲಿ ಈ ಪುಸ್ತಕದ ಪರಿಚಯವನ್ನು ಓದಿದಾಗ ಕುತೂಹಲ ತಡೆಯದೇ ಓದುವ ಹಂಬಲ ಹೆಚ್ಚಾಗಿ ಪುಸ್ತಕವನ್ನು ತರಿಸಿದೆ. ಅನುವಾದಿತ ಕೃತಿ ಇದಾದರೂ ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ. ಆದರೆ ಘಟನೆಗಳನ್ನು ನೆನಪಿಡಲು ತುಂಬಾ ಕಷ್ಟ. ಆದರೆ ಓದುವಾಗ ನಮಗೆ ತಿಳಿಯದ ಅದೆಷ್ಟು ವಿಷಯಗಳು ಚರಿತ್ರೆಯಲ್ಲಿವೆ ಅನ್ನಿಸಿತು.

ಆದರೆ ಈ ಪುಸ್ತಕ ಓದುವ ಮೊದಲು ಮಾಸ್ತಿಯವರ ‘ಚಿಕವೀರ ರಾಜೇಂದ್ರ’ ಕೃತಿಯನ್ನು ಓದಿದರೆ ಒಳ್ಳೆಯದು ಅಂತ ನನಗೆ ಮತ್ತೆ ಅನ್ನಿಸಿತು. ನಾನು ಓದಿಲ್ಲ. ಇನ್ನಾದರೂ ಓದಬೇಕು.ಚರಿತ್ರೆಯ ದೃಷ್ಟಿಯಿಂದ ಬಹು ಮುಖ್ಯವಾದ ಕಾದಂಬರಿ ಇದಾಗಿದೆ.
ಹಾಲೇರಿ ರಾಜ ವಂಶಸ್ಥನಾದ ರಾಜ ಲಿಂಗರಾಜೇಂದ್ರನ ಇಬ್ಬರು ಮಕ್ಕಳಲ್ಲಿ ಕಿರಿಯವನಾದ ಚಿಕ್ಕವೀರರಾಜೇಂದ್ರ ೧೮೨೦ ರಲ್ಲಿ ಕೊಡಗಿನ ಸಿಂಹಾಸನವೇರುತ್ತಾನೆ ರಾಜನ ತನ್ನ ಪ್ರಜೆಗಳ ವಿರುದ್ಧ ಅನೇಕ ಕಾರ್ಯಗಳು ಪ್ರಜೆಗಳು ರಾಜನನ್ನು ವಿರೋಧಿಸುವಂತೆ ಮಾಡುತ್ತದೆ.
೧೮೩೨ ರಲ್ಲಿ ಕೊಡಗು ಹಾಗೂ ಬ್ರಿಟಿಷರ ಸ್ನೇಹ ಇಳಿಮುಖವಾಗುತ್ತದೆ . ೧೮೩೪ ರಲ್ಲಿ ಫ್ರೇಜರ್ ನಾಯಕತ್ವದ ಬ್ರಿಟಿಷ್ ಸೈನ್ಯವು ರಾಜನನ್ನು ಸೆರೆಹಿಡಿದು ಕೊಡಗಿನ ಆಡಳಿತವನ್ನು ಕೈಗೆ ತೆಗೆದುಕೊಂಡು ರಾಜನನ್ನು ಗಡಿಪಾರು ಮಾಡುತ್ತದೆ .
ರಾಜ ಮತ್ತು ಅವನನ್ನು ಆರಿಸಿದ ಕುಟುಂಬ ವರ್ಗವನ್ನು ಮೊದಲು ವೆಲ್ಲೂರಿಗೆ ಕಳಿಸಿ ಆನಂತರ ೧೮೩೬ರಲ್ಲಿ ಬನಾರಸಿನ ಗೃಹಬಂಧನದಲ್ಲಿ ಇರಿಸುತ್ತಾರೆ . ಈ ಹವೇಲಿ ವಿಶಾಲವಾಗಿದ್ದರೂ, ರಾಜನ ಅರಮನೆಯಂತಿರುವುದಿಲ್ಲ. ಈ ಹವೇಲಿಯನ್ನು ಕೂರ್ಗ್ ನೆಸ್ಟ್ (Coorg nest) ಎಂದು ಕರೆಯುತ್ತಾರೆ. ಇಲ್ಲಿ ರಾಜ ಹಾಗೂ ಆತನ ಸಿಬ್ಬಂದಿಯ ಜೀವನಕ್ಕಾಗಿ ಕಂಪನಿ, ವಾರ್ಷಿಕ ೬೦,೦೦೦ ರೂ/ಗಳನ್ನು ಕೊಡುತ್ತದೆ.
೧೮೪೧ ರಲ್ಲಿ ಆತನ ಇಬ್ಬರು ಗರ್ಭಿಣಿ ಪತ್ನಿಯರಲ್ಲಿ ದೇವಮ್ಮಾಜಿ ಹೆಣ್ಣುಮಗಳಿಗೆ ಜನ್ಮ ನೀಡಿ ಮರಣಿಸಿದರೆ, ಇನ್ನೋರ್ವ ಪತ್ನಿ ಸುಭದ್ರಮ್ಮನಿಗೂ ಹೆಣ್ಣು ಮಗುವಾಗುತ್ತದೆ. ದೇವಮ್ಮಾಜಿಯ ಮಗಳು ಗೌರಮ್ಮನಾದರೆ
ಸುಭದ್ರಮ್ಮನ ಮಗಳು ಗಂಗಮ್ಮ. ಸುಭದ್ರಮ್ಮ ತನ್ನ ಮಗಳೊಡನೆ, ಗೌರಮ್ಮನನ್ನೂ ನೋಡಿಕೊಳ್ಳುತ್ತಾಳೆ.
೧೮೩೦ ರಲ್ಲಿ ಡಾ.ಜಾಫರ್ಸನ್ ಎಂಬ ಬ್ರಿಟಿಷ್ ವೈದ್ಯ ತನ್ನ ಚಿಕಿತ್ಸೆಗೆಂದು ಬಂದಾಗ ರಾಜ ಆತನಿಗೆ ವಿಶೇಷ ಅತಿಥಿ ನೀಡಿರುತ್ತಾನೆ. ಈ ಆತಿಥ್ಯವನ್ನು ಮೆಚ್ಚಿದ ವೈದ್ಯರ ಮನಸ್ಸಿನಲ್ಲಿ ರಾಜನ ಬಗ್ಗೆ ವಿಶೇಷವಾದ ಪ್ರೀತಿ ಗೌರವಗಳು ಇರುತ್ತದೆ, ಹಾಗಾಗಿ ಅಲ್ಲಿಂದ ಬೀಳ್ಕೊಡುವಾಗ ಏನಾದರೂ ಸಹಾಯ ಬೇಕಿದ್ದರೆ ಮಾಡುವುದಾಗಿ ಭರವಸೆ ನೀಡಿರುತ್ತಾನೆ.

ರಾಜನಾದ ಚಿಕ್ಕವೀರರಾಜೇಂದ್ರನ ದೊಡ್ಡಪ್ಪ ಈ ಹಿಂದೆ ಈಸ್ಟ್ ಇಂಡಿಯಾ ಕಂಪನಿಯಲ್ಲಿ ತೊಡಗಿಸಿದ್ದ ಠೇವಣಿ ಇದೀಗ ಬಡ್ಡಿ ಸಮೇತ ಸುಮಾರು ಅಂದಾಜು ೧೨ ಲಕ್ಷ ಆಗಿರುತ್ತದೆ. ಅದನ್ನು ಪಡೆದುಕೊಳ್ಳಬೇಕೆಂಬ ಆಸೆ ಆತನಲ್ಲಿ ಸಹಜವಾಗಿ ಹುಟ್ಟುತ್ತದೆ.
ಆದರೆ ಈಸ್ಟ್ ಇಂಡಿಯಾ ಕಂಪನಿ ಅದಕ್ಕೆ ಒಪ್ಪಿರುವುದಿಲ್ಲ ಇದೀಗ ಠೇವಣಿಯ ವಿಷಯವಾಗಿ ಕಂಪನಿ ಒಪ್ಪದಿರುವ ವಿಷಯವನ್ನು ಜಾಫರ್ಸನ್ ನಲ್ಲಿ ಹಂಚಿಕೊಂಡು ಸಲಹೆ ಕೇಳಿದಾಗ ಆತ ಕಾನೂನು ರೀತಿಯ ದಾವೆ ಹೂಡಲು ಲಂಡನ್ನಿಗೆ ಹೋಗಬೇಕು ಎನ್ನುತ್ತಾರೆ .
ಒಬ್ಬ ಪದಚ್ಯುತ ರಾಜ ಶಕ್ತಿಶಾಲಿಯಾದ ಈಸ್ಟ್ ಇಂಡಿಯಾ ಕಂಪನಿಯ ವಿರುದ್ಧ ದಾವೆ ಹೂಡುವುದೆಂದರೆ ಅಂದಿನ ಕಾಲಕ್ಕೆ ಸುಲಭದ ಕೆಲಸವಾಗಿರುವುದಿಲ್ಲ.ಅಲ್ಲದೇ ರಾಜನನ್ನು ಲಂಡನಿಗೆ ಕಳುಹಿಸಲು ಲಾರ್ಡ್ ಡಾಲ್ ಹೌಸಿಯು ಒಪ್ಪದೇ ಇರುವ ಸಾಧ್ಯತೆ ಹೆಚ್ಚಿದೆಯೆಂದು ತಿಳಿದು ಬೇರೆ ಉಪಾಯವನ್ನು ಮಾಡುತ್ತಾರೆ.
ತಾನು ಸ್ವಲ್ಪ ದಿನ ಅವಕಾಶ ಕೊಟ್ಟರೆ ಠೇವಣಿ ಮತ್ತು ಬಡ್ಡಿಯ ಮರುಪಾವತಿಯ ವಿಷಯವಾಗಿ ಯೋಚಿಸಿ ಹೇಳುತ್ತೇನೆ ಎಂದು ಭರವಸೆ ಕೊಡುತ್ತಾನೆ. ರಾಜನಿಗೆ ತನ್ನ ಮಕ್ಕಳಲ್ಲಿ ಗೌರಮ್ಮ ಮತ್ತು ಗಂಗಾ ತುಂಬಾ ಇಷ್ಟವಿದೆಯೆಂದು ಜಾಫರ್ಸನ್ ಗೆ ಅರಿವಾಗುತ್ತದೆ. ಅದರಲ್ಲೂ ಗೌರಮ್ಮನನ್ನು ಕಂಡರೆ ಆತನಿಗೆ ಇನ್ನೂ ಇಷ್ಟ .
ಆತನ ಕೋರಿಕೆಯ ಮೇರೆಗೆ ಮಿಸಸ್ ಕಾರ್ಪೆಂಟರ್ ಆರು ವರುಷದ ಗೌರಮ್ಮನಿಗೆ ಇಂಗ್ಲಿಷ್ ನಲ್ಲಿ ಮಾತನಾಡುವುದನ್ನು ಕಲಿಸುವುದಲ್ಲದೆ, ಬೈಬಲ್ಲಿನ ಅನೇಕ ಕಥೆಗಳನ್ನು ಹೇಳಿಕೊಟ್ಟಿದ್ದಾರೆ ಎಂದು ತಿಳಿದಾಗ
ಆತನ ಖುಷಿ ಇಮ್ಮಡಿಯಾಗಿರುತ್ತದೆ.
ರಾಜ ತನ್ನ ಮಗಳನ್ನು ಕ್ರಿಶ್ಚಿಯನ್ ಮತಕ್ಕೆ ಮತಾಂತರಗೊಳ್ಳಲು ಮತ್ತು ಪಾಶ್ಚಾತ್ಯ ವಿದ್ಯಾಭ್ಯಾಸವನ್ನು ಪಡೆಯಲು ಬೆಂಬಲಿಸಿದ್ದ ಕಾರಣ ಆಗಿನ ಗವರ್ನರ್ ಜನರಲ್ ಲಾರ್ಡ್ ಡಾಲ್ ಹೌಸಿ ಮತ್ತು ರಾಣಿ ವಿಕ್ಟೋರಿಯಾ ಇವರ ಈತನ ಉದ್ದೇಶಕ್ಕೆ ಬೆಂಬಲವಾಗಿ ನಿಲ್ಲುತ್ತಾರೆ. ಆದರೆ ಇಂಗ್ಲೆಂಡಿಗೆ ಹೋಗುವ ರಾಜನ ಉದ್ದೇಶವೇ ಬೇರೆ ಆಗಿರುತ್ತದೆ.
ಹನ್ನೊಂದು ವರ್ಷದ ಗೌರಮ್ಮಳ ಬುದ್ಧಿ ವಿಕಾಸವಾಗಿರುವುದಿಲ್ಲ. ಹಾಗಾಗಿ ತಂದೆ ಹೇಳಿದಂತೆ ಪಾಶ್ಚಾತ್ಯ ಸಂಸ್ಕೃತಿ,ವೇಷ ಭೂಷಣ ವಿದ್ಯಾಭ್ಯಾಸ, ಕ್ರೈಸ್ತ ಧರ್ಮದ ವಿಚಾರಗಳನ್ನು ಬಹಳ ಆಸಕ್ತಿಯಿಂದ ಕಲಿಯುತ್ತಾಳೆ. ಕೊನೆಗೂ ೧೮೫೧ ರ ಡಿಸೆಂಬರ್ ಮಧ್ಯಭಾಗದಲ್ಲಿ ತನ್ನ ಆರಿಸಿದ ಪರಿವಾರದೊಂದಿಗೆ ಇಂಗ್ಲೆಂಡ್ ಗೆ ಪ್ರಯಾಣ ಬೆಳೆಸುತ್ತಾನೆ .
೧೮೫೨ರ ಜೂನ್ ೩೦ರಂದು ಕ್ಯಾಂಟರ್ ಬರಿ ಚರ್ಚಿನ ಆರ್ಚ್ ಬಿಷಪ್-ಜಾನ್ ಬರ್ಡ್ ಸಮ್ ನರ್ ಅವರು ಗೌರಮ್ಮನ ಮತಾಂತರ ಪ್ರಕ್ರಿಯೆಯನ್ನೂ, ಕ್ರೈಸ್ತ ಧರ್ಮದ ವಿಧಿ ವಿಧಾನಗಳ ಪ್ರಕಾರ ನೆರವೇರಿಸುತ್ತಾರೆ.ರಾಣಿ ವಿಕ್ಟೋರಿಯ ಸಮ್ಮುಖದಲ್ಲಿ ಕೊಡಗಿನ ಗೌರಮ್ಮ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡು ರಾಣಿಯಿಂದ ‘ವಿಕ್ಟೋರಿಯಾ ಗೌರಮ್ಮ’
ಎಂಬ ಹೆಸರು ಪಡೆಯುತ್ತಾಳೆ. ರಾಣಿ ವಿಕ್ಟೋರಿಯಾ, ಗೌರಮ್ಮನ ‘ ದೈವಿಕ ಮಾತೆ’ ಯಾಗುತ್ತಾಳೆ.
ಡಾ ಜಾಫರ್ಸನ್ ಕೋಲ್ಕತ್ತಾಗೆ ೧೮೪೬ರಲ್ಲಿ ಭೇಟಿ ಇತ್ತಾಗ ತನ್ನ ಸ್ನೇಹಿತ ಹಾಗೂ ಸಹೋದ್ಯೋಗಿ ಡಾ/ ಜಾನ್ ಸ್ಪೆನ್ಸರ್ ಲಾಗಿನ್ ಅವರನ್ನು ಐದು ವರ್ಷದ ಮಹಾರಾಜ ದುಲೀಪ್ ಸಿಂಗ್ ಅವರಿಗೆ ಪೋಷಕರನ್ನಾಗಿ ನೇಮಿಸಿರುವ ವಿಚಾರ ಪರಿಚಿತರಿಂದ ತಿಳಿದಿರುತ್ತದೆ. ದುಲೀಪ್ ಸಿಂಗ್ ಪಂಜಾಬಿನ ಮಹಾರಾಜ ರಣಜಿತ್ ಸಿಂಗ್ ಅವರ ಕಿರಿಯ ಮಗ ಮತ್ತು ಉತ್ತರಾಧಿಕಾರಿ.
ರಣಜಿತ್ ಸಿಂಗ್ ಮರಣಾನಂತರ ಈಸ್ಟ್ ಇಂಡಿಯಾ ಕಂಪನಿ ರಾಜ್ಯದ ವ್ಯವಹಾರಗಳಲ್ಲಿ ಕೈಹಾಕಲು ಪ್ರಾರಂಭಿಸಿ, ಅರಮನೆಯ ಅಂತರ್ ಯುದ್ಧದಲ್ಲಿ ರಣಜಿತ್ ಸಿಂಗನ ಕಡೆಯ ಮಗ ದುಲೀಪ್ ಸಿಂಗನನ್ನು ಹೊರತುಪಡಿಸಿ ಉಳಿದೆಲ್ಲಾ ಉತ್ತರಾಧಿಕಾರಿಗಳು ನಾಶವಾಗುತ್ತಾರೆ. ದುಲೀಪ್ ಸಿಂಗ್ ನ ತಾಯಿಯನ್ನು ಗೃಹಬಂಧನದಲ್ಲಿ ಇಟ್ಟಿರುತ್ತಾರೆ.
ಸುಮಾರು ೧೮೫೪ ರಲ್ಲಿ ೧೬ ವರ್ಷದ ರಾಜಕುಮಾರ ದುಲೀಪ್ ಸಿಂಗನನ್ನು ಆತನ ಜನರ ನಾಯಕತ್ವದಿಂದ ದೂರಮಾಡುವ ಉದ್ದೇಶದಿಂದ ಲಾಹೋರ್ ನಿಂದ ಪತೇಗರ್ ಗೆ ಕರೆದುಕೊಂಡು ಹೋಗುತ್ತಾರೆ. ೧೮೩೫ ದಿಲ್ಲಿ ‘ ಫತೇಗರ್ ಮಿಷನ್’ ಎಂಬ ಸಂಸ್ಥೆಯನ್ನು ಅಮೆರಿಕಾ ದೇಶದ ಮಿಷನರಿಯೊಂದು ಅದಾಗಲೇ ಸ್ಥಾಪಿಸಿರುತ್ತಾರೆ. ಮತಾಂತರಗೊಂಡ ಸ್ಥಳೀಯರ ಒಂದು ಸಣ್ಣ ಗ್ರಾಮವೊಂದು ಅಲ್ಲಿ ಸ್ಥಾಪನೆಯಾಗಿರುತ್ತದೆ.
ಅಲ್ಲಿ ದುಲೀಪ್ ಸಿಂಗ್ ನ ಮನಸ್ಸಿನ ಮೇಲೆ ಕ್ರಿಶ್ಚಿಯನ್ ಧರ್ಮದ ಪ್ರಭಾವ ಬೀರಲು ಇದೇ ಅನುಕೂಲಕರವಾದ ಸ್ಥಳವೆಂದು ಅವರು ತೀರ್ಮಾನಿಸುತ್ತಾರೆ. ಮತಾಂತರಗೊಳಿಸಿ ಪಾಶ್ಚ್ಯಾತ್ಯ ವಿದ್ಯಾಭ್ಯಾಸ ಕೊಡಿಸುವ ನೆಪದಲ್ಲಿ ಲಂಡನ್ನಿಗೆ ಸಾಗಿಸುತ್ತಾರೆ.
ರಾಣಿ ವಿಕ್ಟೋರಿಯಾ, ಗೌರಮ್ಮನ ದೈವಿಕ ಮಾತೆ ( god mother) ಆದುದಲ್ಲದೆ ದುಲೀಪ್ ಸಿಂಗ್ ನನ್ನೂ ಪ್ರೀತಿ, ಗೌರವದಿಂದ ಕಾಣುತ್ತಾಳೆ. ಒಟ್ಟಿನಲ್ಲಿ ಇಬ್ಬರಿಗೂ ಇಂಗ್ಲೀಷ್ ರಾಜ ಮನೆತನದವರಿಗೆ ಸಲ್ಲುವ ರಾಜಕುಮಾರ ರಾಜಕುಮಾರಿಯರ ಸ್ಥಾನಮಾನಗಳನ್ನು ನೀಡುತ್ತಾಳೆ.
ಗೌರಮ್ಮ ಮತ್ತು ದುಲೀಪ್ ಸಿಂಗ್ ಮದುವೆಯಾದರೆ ಆ ಮೂಲಕ ಭಾರತ ದೇಶದ ರಾಜರ ಮತ್ತು ಪದಚ್ಯುತ ರಾಜರ ಗುಂಪಿನಲ್ಲಿ ಒಂದು ಆಂದೋಲನವೇ ನಡೆದು ಎಲ್ಲರೂ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡು ಭಾರತ ದೇಶದಲ್ಲಿ ಉನ್ನತ ವರ್ಗದ ಕ್ರೈಸ್ತ ಧರ್ಮದ ಒಂದು ವರ್ಗ ನಿರ್ಮಾಣವಾಗುತ್ತದೆಯೆಂದು ಲಾರ್ಡ್ ಡಾಲ್ ಹೌಸಿಯನ್ನೊಳಗೊಂಡು ಎಲ್ಲಾ ಬ್ರಿಟೀಷ್ ಸರದಾರರು ಭಾವಿಸುತ್ತಾರೆ.
ಅವರ ಭಾವನೆಗೆ ಬೆಂಬಲವಾಗಿ ರಾಣಿ ವಿಕ್ಟೋರಿಯಾ ನಿಲ್ಲುತ್ತಾಳೆ. ತಮ್ಮ ಯೋಜನೆಗೆ ಗೌರಮ್ಮ ಮತ್ತು ದುಲೀಪ್ ಸಿಂಗರನ್ನು ದಾಳವಾಗಿ ಬಳಸಿಕೊಳ್ಳುತ್ತಾಳೆ. ಆದರೆ ತಾನೊಂದು ಬಗೆದರೆ ದೈವ ಇನ್ನೊಂದು ಬಗೆಯುತ್ತದೆ ಎನ್ನುವುದು ಸಾರ್ವಕಾಲಿಕ ಸತ್ಯ. ದಿನಗಳು ಉರುಳಿದಂತೆ ದುಲೀಪ್ ಸಿಂಗ್ ಗೆ ಬ್ರಿಟಿಷ್ ರ ಮೋಸದ ಅರಿವಾಗುತ್ತಾ ಹೋಗುತ್ತದೆ.
ಗೌರಮ್ಮನಿಗೆ ದುಲೀಪ್ ಸಿಂಗ್ ಕುರಿತಾಗಿ ಮಧುರ ಭಾವಗಳಿದ್ದರೂ , ದುಲೀಪ್ ಮಾತ್ರ, ಆಕೆಯ ಪ್ರಗತಿ ನನಗಿಷ್ಟ. ಆದರೆ ಅವಳನ್ನು ಪತ್ನಿಯಾಗಿ ಸ್ವೀಕರಿಸಲಾರೆ ಎನ್ನುತ್ತಾನೆ. ಮುಂದೆ ಭಾರತ ದೇಶಕ್ಕೆ ವಾಪಾಸ್ಸಾದ ಆತ ಕ್ರೈಸ್ತ ಧರ್ಮವನ್ನು ತ್ಯಜಿಸಿ ಮತ್ತೆ ಸಿಖ್ ಧರ್ಮಕ್ಕೆ ಸೇರುತ್ತಾನೆ.
ಅತ್ತ ಕೊಡಗಿನ ಗೌರಮ್ಮ ತನಗಿಂತ ವಯಸ್ಸಿನಲ್ಲಿ ತುಂಬಾ ಹಿರಿಯನಾದ ಲೆಫ್ಟಿನೆಂಟ್ ಕರ್ನಲ್ ಜಾನ್ ಕ್ಯಾಂಪ್
ಬೆಲ್ ನನ್ನು ಮದುವೆಯಾಗಿ, ಒಂದು ಹೆಣ್ಣು ಮಗುವಿನ ತಾಯಿಯೂ ಆಗುತ್ತಾಳೆ.
ಆದರೆ ತನ್ನ ಕುಟುಂಬದಿಂದ ಕ್ರಮೇಣ ದೂರವಾಗುವ ಆಕೆ ತನ್ನ ಮಾತೃಭಾಷೆಯನ್ನು ಸಂಪೂರ್ಣವಾಗಿ ಮರೆಯುವುದಲ್ಲದೇ ತಂದೆಯೊಡನೆ ಸಂಭಾಷಿಸಲೂ ಬೇರೆಯವರು ಸಹಾಯ ಬೇಕಾಗುತ್ತದಲ್ಲದೆ ಅವರ ಕೊನೆಗಾಲದಲ್ಲೂ ಜೊತೆ ಇರಲಾಗುವುದಿಲ್ಲ. ಅತ್ತ ರಾಜನಿಗೆ ತಾನು ಲಂಡನ್ನಿಗೆ ಬಂದ ಮೂಲ ಉದ್ದೇಶ , ಕಂಡು ಕನಸು ನೆರವೇರದೇ ನಾನಾ ರೀತಿಯ ಕ್ಲೇಶವನ್ನು ಅನುಭವಿಸುತ್ತಾನೆ.
ವಿಕ್ಟೋರಿಯಾ ಗೌರಮ್ಮನ ಕಥೆಯೇ ಒಂದು ರೋಚಕ .ಮದುವೆಯ ನಂತರದ ಆಕೆಯ ಅತೃಪ್ತಿಯ ಜೀವನ ,ಕ್ಯಾಂಪ್ ಬೆಲ್ ನ ಚಟಗಳು,ಅವನ ಹಠಾತ್ ಕಣ್ಮರೆ, ಇದರ ನಡುವೆ ಉಲ್ಬಣಿಸಿದ ಗೌರಮ್ಮನ ಅನಾರೋಗ್ಯ, ಅವಳ ತಂಗಿ ಗಂಗಮ್ಮನ ಜೀವನ , ತನ್ನವರನ್ನು ಕಾಣುವ ಹಂಬಲವಿದ್ದರೂ, ಅವರೊಡನೆ ಹೊಂದಿಕೊಳ್ಳಲು ಸಾಧ್ಯವಿಲ್ಲವೆಂಬ ಸತ್ಯದ ಅರಿವು, ದುಲೀಪ್ ಸಿಂಗ್ ನ ಬದುಕಿನ ಕಥೆ , ಈ ಎಲ್ಲವನ್ನೂ ಓದುವಾಗ ಯಾಕೋ ಮನಸ್ಸು ಭಾರವಾಗುತ್ತದೆ.
ಕೊನೆಯಲ್ಲಿ ಗೌರಮ್ಮ ಕೇವಲ ತನ್ನ ೨೩ ( ೪/೭/೧೮೪೧- ೩೦/೩/೧೮೬೪) ನೆಯ ವಯಸ್ಸಿನಲ್ಲಿ ಕ್ಷಯ ರೋಗದಿಂದ ತೀರಿ ಹೋಗುತ್ತಾಳೆಂಬ ವಿಷಯ ಓದಿದಾಗ ಆಕೆಯ ಬಗ್ಗೆ ಮರುಕವುಂಟಾಗುತ್ತದೆ. ರಾಜಕುಮಾರಿಯೊಬ್ಬಳ ಬದುಕೆಂದರೆ ಇಷ್ಟೇಯಾ? ಎಂಬ ಭಾವದ ಜೊತೆಗೆ ,ನಮ್ಮ ದೇಶದ ಸುಂದರ ನಾಡಿನ ‘ಕೊಡಗಿನ ರಾಜಕುಮಾರಿ’ಯೊಬ್ಬಳು ಕಳೆದೇ ಹೋದ ಬಗ್ಗೆ ವ್ಯಥೆಯೂ ಉಂಟಾಗುತ್ತದೆ.
ಇದು ಪರಿಚಯವಷ್ಟೇ…
ಕೊಡಗಿನ ಗೌರಮ್ಮನ ಬಗ್ಗೆ ಇನ್ನಷ್ಟು ವಿವರಗಳಿರುವ ಎಲ್ಲರೂ ಓದಲೇ ಬೇಕಾದ ಕೃತಿ ಇದಾಗಿದೆ. ಹಾಗಾದರೆ ಓದುವಿರಲ್ಲಾ?.. ಓದಿ ನಿಮಗೇನು ಅನ್ನಿಸಿತು? ಹಂಚಿಕೊಳ್ಳಲು ಮರೆಯದಿರಿ.
- ವಾಣಿಶ್ರೀ ಕೊಂಚಾಡಿ
