‘ಸುಬ್ಬರಾಯನ ಬಂಡೆ’ ಎಂದು ಕರೆಯಲಾಗುವ ಕಲ್ಗುಟ್ಟೆ ಇದೆ. ‘ಸುಬ್ಬರಾಯನ ಬಂಡೆ’ ಎಂದು ಹೆಸರು ಬರಲು ಕಾರಣವೇನು? ಅಲ್ಲಿ ಸಿಕ್ಕಂತಹ ಪಾದಾಕೃತಿಯ ಕುರಿತು ಹಿರಿಯ ಚಿಂತಕ ಡಾ.ವಡ್ಡಗೆರೆ ನಾಗರಾಜಯ್ಯ ಅವರು ಒಂದು ಲೇಖನವನ್ನು ಬರೆದಿದ್ದಾರೆ. ಮುಂದೆ ಓದಿ…
ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ವಡ್ಡಗೆರೆ ಗ್ರಾಮ ಎಂಬ ನಮ್ಮೂರಿನಾಚೆ ಯಾದಗೆರೆ ಗ್ರಾಮದ ರಸ್ತೆಯಲ್ಲಿ ‘ಸುಬ್ಬರಾಯನ ಬಂಡೆ’ ಎಂದು ಕರೆಯಲಾಗುವ ಕಲ್ಗುಟ್ಟೆ ಇದೆ. ವಿಶಾಲವಾದ ಹುಟ್ಟುಬಂಡೆಯ ಮೇಲೆ ಪುರಾತನರು ಕೊರೆದಿರುವ ಲಿಪಿಗಳು, ಏಳ್ಹೆಡೆ ಸರುಪ – ತ್ರಿಶೂಲದ ಚಿತ್ರಗಳಿವೆ. ಸುಬ್ಬರಾಯನೆಂಬ ವೀರನೊಬ್ಬನು ಪಾವಗಡದ ನಾಗಲಮಡಿಕೆ ಎಂಬ ಗ್ರಾಮದಿಂದ ದೊಡ್ಡಬಳ್ಳಾಪುರದ ಸಮೀಪದ ಘಾಟಿ ಎಂಬ ಸ್ಥಳಕ್ಕೆ ಹೋಗುತ್ತಿದ್ದಾಗ ನಮ್ಮೂರಿನ ಕಾಡಿನ ಪರಿಸರದಲ್ಲಿರುವ ಈ ಕಲ್ಗುಟ್ಟೆ ಬಂಡೆಯ ಮೇಲೆ ಹೆಜ್ಜೆಯೂರಿದನಂತೆ. ಹುಟ್ಟು ಬಂಡೆಯಲ್ಲಿ ಪಾದಾಕೃತಿಯಂತೆ ಮೂಡಿರುವ ಗುರುತುಗಳನ್ನು ಸುಬ್ಬರಾಯನ ಪಾದಗಳೆಂದು ಹೇಳಲಾಗುತ್ತದೆ. ಸುಬ್ಬರಾಯ ಒಂದು ಹಗಲು ಒಂದು ರಾತ್ರಿ ಇಲ್ಲಿ ವಸ್ತಿ ಮಾಡಿದನಂತೆ. ಅವನು ವಸ್ತಿ ಮಾಡಿದ ಜಾಗವನ್ನು ಸುಬ್ಬರಾಯನ ಬಂಡೆ ಎಂಬ ಹೆಸರಿನಿಂದಲೇ ನಮ್ಮ ಪೂರ್ವಿಕರ ಕಾಲದಿಂದಲೂ ಕರೆಯಲಾಗುತ್ತಿದೆ. ಉಗಾದಿ- ನಾಗರ ಪಂಚಮಿ ,ಶ್ರೆಷ್ಠಿಯಲ್ಲಿ ಇಲ್ಲಿ ವಿಶೇಷ ಪೂಜೆಗಳು ನಡೆಯುತ್ತಿದ್ದವಂತೆ. ಈಗ ಇಲ್ಲಿ ಯಾವುದೇ ಆಚರಣೆಗಳು ನಡೆಯುತ್ತಿಲ್ಲ.
#ಕುಕ್ಕೆ_ಸುಬ್ರಹ್ಮಣ್ಯ, ನಾಗಲಮಡಿಕೆ ಸುಬ್ರಹ್ಮಣ್ಯ ಹಾಗೂ ಘಾಟಿ ಸುಬ್ರಮಣ್ಯ ಕ್ಷೇತ್ರಗಳಲ್ಲಿ ನಡೆಯುತ್ತಿರುವ ‘ಮಡೆ ಮಡೆ ಸ್ನಾನ’ ‘ಎಡೆ ಸ್ನಾನ’ ಎಂಬ ವಿವಾದಿತ ಪದ್ದತಿಯ ಬಗ್ಗೆ ನೀವು ಕೇಳಿದ್ದೀರಿ. ಅದೇ ಪರಂಪರೆಗೆ ಸೇರಿದ ಸುಬ್ರಹ್ಮಣ್ಯ ಇವನು ಎಂದು ನಂಬಬಹುದು.
ಆದರೂ ವಡ್ಡಗೆರೆ ಗ್ರಾಮದಲ್ಲಿರುವ ವೀರಕ್ಯಾತರಾಯ ಎಂಬ ಕುಂಚಿಟಿಗರ ಸಾಂಸ್ಕೃತಿಕ ನಾಯಕನಿಗೂ ಸುಬ್ಬರಾಯನಿಗೂ ಪಂಥಾಹ್ವಾನ ಸ್ಪರ್ಧೆಗಳು ನಡೆದವೆಂದು, ಈ ಪಂಥಾಹ್ವಾನದ ಒಪ್ಪಂದದ ಪ್ರಕಾರ ಯುಗಾದಿ ಹಬ್ಬದಲ್ಲಿ ನಡೆಯುವ ವಡ್ಡಗೆರೆ ನಾಗಮ್ಮನ ಜಾತ್ರೆಗೆಂದು ಯಾದಗೆರೆ ದಾರಿಯಲ್ಲಿ ಬರುವ ಭಕ್ತರು ಸುಬ್ಬರಾಯನಿಗೆ ಮೊದಲ ಪೂಜೆ ಸಲ್ಲಿಸಬೇಕೆಂದು ಹುಕುಂ ಜಾರಿ ಮಾಡಿದನಂತೆ. ಈ ಬಗ್ಗೆ ಜಾನಪದ ಕಥನಗೀತೆಯೊಂದನ್ನು ಹಾಡುತ್ತಿದ್ದ ಯಾದಗೆರೆ ತಿಮ್ಮಕ್ಕಜ್ಜಿ ಮತ್ತು ಗೌರಮ್ಮ ಎಂಬ ಹಿರಿಯಜ್ಜಿಯರು ಈಗ ಜೀವಿಸಿಲ್ಲವೆಂದು ಯಾದಗೆರೆ ಗ್ರಾಮದ ಹಿರೀಕ ಅರಿವಿಗನಾದ ಕೊಡೆನಂಜಪ್ಪ ಕ್ಷೇತ್ರಕಾರ್ಯದ ಹೊತ್ತಿನಲ್ಲಿ ನನಗೆ ತಿಳಿಸಿದರು.
ವೀರಕ್ಯಾತರಾಯ ನಮ್ಮೂರಿನಲ್ಲಿ ಆಗಿಹೋದ ವೀರನಾಯಕ. ಅಂತೆಯೇ ಸುಬ್ಬರಾಯನೊಬ್ಬ ವೀರನೆಂದಾದ ಪಕ್ಷದಲ್ಲಿ ಸುಬ್ಬರಾಯನು ಸುಬ್ರಹ್ಮಣ್ಯನಂತಹ ಧಾರ್ಮಿಕ- ಪುರಾಣಿಮ ಪುರುಷನಾಗಿರದೆ ವೀರಕ್ಯಾತರಾಯನಂತೆಯೇ ಸಾಂಸ್ಕೃತಿಕ ನಾಯಕನಾಗಿರುತ್ತಾನೆಂದು ಅನ್ನಿಸ್ತಿದೆ. ಸುಬ್ಬರಾಯನ ಬಂಡೆ ಬಯಲು ಮಾಳದ ಕುರುಚಲು ಕಾಡುಗಳಲ್ಲಿ ಅಪರೂಪದ ಅನೇಕ ಗಿಡಮೂಲಿಕೆಗಳಿವೆ.
- ಡಾ.ವಡ್ಡಗೆರೆ ನಾಗರಾಜಯ್ಯ (ಸರ್ಕಾರಿ ಕಾಲೇಜಿನ ಇಂಗ್ಲಿಷ್ ಉಪನ್ಯಾಸಕರು,ಚಿಂತಕರು, ಲೇಖಕರು)
