ವೃತ್ತಿ ಜೀವನದ 33 ವರ್ಷಗಳ ನೆನಪು

ವೃತ್ತಿ ಜೀವನದ 33 ವರ್ಷಗಳು ಇಂದಿಗೆ ಸಂದುಹೋಗಿದೆ, ಸುದೀರ್ಘ ವೃತ್ತಿ ಜೀವನದಲ್ಲಿ ಅನೇಕ ಏರಿಳಿತಗಳನ್ನು ಕಂಡಿದ್ದೇನೆ, ಕಷ್ಟಗಳು, ಸಮಸ್ಯೆಗಳು, ತೊಂದರೆಗಳ ಬೆಟ್ಟಗಳನ್ನೂ ಏರಿದ್ದೇನೆ, ಪ್ರಪಾತಗಳನ್ನೂ ಕಂಡಿದ್ದೇನೆ ಆದರೆ ಆತ್ಮಸ್ಥೈರ್ಯವನ್ನು ಮಾತ್ರ ಕಳೆದುಕೊಳ್ಳದೇ ಮಕ್ಕಳಿಗೆ ನ್ಯಾಯ ಒದಗಿಸಿದ್ದೇನೆ. – ಸಿದ್ಧರಾಮ ಕೂಡ್ಲಿಗಿ ಅವರ ವೃತ್ತಿಯ ಬದುಕಿನ ಕುರಿತು ಭಾವುಕ ನುಡಿಗಳನ್ನು ತಪ್ಪದೆ ಮುಂದೆ ಓದಿ…

1988ರಲ್ಲಿ ಅದೇ ತಾನೇ ಎಂ.ಎ ಸ್ನಾತಕೋತ್ತರ ಪದವಿ ಮುಗಿಸಿ ಹೊರಬಂದಿದ್ದ ಆ ಯುವಕನನ್ನು ಹಿತೈಷಿ ಉಪನ್ಯಾಸಕರೊಬ್ಬರು ಕಾಲೇಜೊಂದರಲ್ಲಿ ಅರೆಕಾಲಿಕ ಉಪನ್ಯಾಸಕನನ್ನಾಗಿ ಸೇರಿಸಿದರು. ಮೊದಲ ದಿನವೇ ಅಗ್ನಿಪರೀಕ್ಷೆ. ಎದುರಿಗೆ ವಿದ್ಯಾರ್ಥಿಗಳ ಬೃಹತ್ ಸಮೂಹ. ಅದು ಪಿಯು ತರಗತಿ. ಅರೆಕ್ಷಣ ಗಾಬರಿ, ಭಯ, ಬಾಯಾರಿಕೆ, ಎಲ್ಲ ಒಟ್ಟಿಗೇ ಮೇಳೈಸಿದ ಕ್ಷಣ. ಈಜು ಬಾರದವನನ್ನು ನೇರ ಸಮುದ್ರಕ್ಕಿಳಿಸಿದಂತೆನಿಸಿತ್ತು. ಮುಂದೆಯೇ ಟೇಬಲ್ ಇತ್ತು. ಅದನ್ನು ಗಟ್ಟಿಯಾಗಿ ಹಿಡಿದುಕೊಂಡು ಆ ಯುವಕ ತನಗೆ ತಿಳಿದದ್ದನ್ನು ಹೇಳಿದ. ಅವಧಿ ಮುಗಿಸುವುದರೊಳಗೆ ಅವನಿಗೆ ಬೆವರಿನ ಸ್ನಾನವೇ ಆಗಿಹೋಗಿತ್ತು. ಆದರೆ ಏನು ಹೇಳಿದನೋ ಅದನ್ನು ಗಟ್ಟಿಯಾಗಿಯೇ ತನಗೆ ತಿಳಿದಂತೆ ಹೇಳಿದ್ದ.

ಅಲ್ಲಿಂದ ಶುರುವಾದ ಅವನ ವೃತ್ತಿ ಜೀವನದ ಪಯಣ ಮುಂದೆ ಹಲವಾರು ತಿರುವುಗಳನ್ನು ಪಡೆಯಿತು. 1990ರಲ್ಲಿ ಬೇರೊಂದು ಪಿಯು ಕಾಲೇಜಿಗೆ ಬಂದು ಸೇರಿಕೊಂಡ. ಅನುಭವ ಅವನನ್ನು ಬೆಳೆಸುತ್ತಾ ಹೋಯಿತು. ನಿಧಾನವಾಗಿ ತರಗತಿಯನ್ನು ತನ್ನ ನಿಯಂತ್ರಣದಲ್ಲಿ ತೆಗೆದುಕೊಳ್ಳಲು ಕಲಿತ. ವಿದ್ಯಾರ್ಥಿಗಳೊಂದಿಗೆ ಅವರ ಮಟ್ಟಕ್ಕೇ ಇಳಿದು ಕಲಿಸುವುದೇ ಸೂಕ್ತವಾದುದು ಎಂದು ಆ ರೀತಿಯಲ್ಲಿ ಕಲಿಸಲು ಯತ್ನಿಸಿ ಯಶಸ್ವಿಯೂ ಆದ. ಆ ಯುವಕನೇ ನಾನು.



ಹೀಗೇ ದಿನಗಳುರುಳಿದ್ದೇ ಗೊತ್ತಾಗಲಿಲ್ಲ ನೋಡಿ. ಈಗ ಇಂದಿಗೆ ನನ್ನ ವೃತ್ತಿ ಜೀವನ ಆರಂಭಿಸಿ ಸುದೀರ್ಘ 33 ವರ್ಷಗಳೇ ಕಳೆದವು. ಈ ಸುದೀರ್ಘ ಅವಧಿಯಲ್ಲಿ ನೀನು ಏನನ್ನು ಸಾಧಿಸಿದೆ ? ಎಂದು ಯಾರಾದರೂ ನನ್ನನ್ನು ಪ್ರಶ್ನಿಸಿದರೆ, ನಿಜ ಏನನ್ನೂ ಸಾಧಿಸಿಲ್ಲ. ಆ ಕುರಿತು ವಿಶಾದವಿದೆ. ಆದರೆ ಒಂದಂತೂ ನಿಜ ನಾನು ಕಲಿತದ್ದನ್ನು ಮಕ್ಕಳಿಗೆ ಪೂರ್ಣವಾಗಿ ಧಾರೆ ಎರೆದಿದ್ದೇನೆ ಆ ತೃಪ್ತಿ ನನಗಿದೆ. ಅವರಲ್ಲಿ ಹೊಸ ಆಲೋಚನೆಗಳು ಹೊಳೆಯುವಂತೆ ಮಾಡಿದ್ದೇನೆ ಆ ಹೆಮ್ಮೆ ನನಗಿದೆ. ಅವರು ಹೆಚ್ಚಿನ ಅಂಕಗಳನ್ನು ತೆಗೆದುಕೊಳ್ಳುವುದಕ್ಕಿಂತಲೂ ನಾಗರಿಕ ಸಮಾಜದಲ್ಲಿ ಹೇಗೆ ಬದುಕಬೇಕೆಂಬ ನೈತಿಕತೆಯನ್ನು ನೀಡಲು ಯತ್ನಿಸಿದ್ದೇನೆ ಆ ಕುರಿತು ನನಗೆ ಸಂತೋಷವಿದೆ. ಅವರಲ್ಲೊಂದು ಅರಿವು ಮೂಡಿಸಲು ಯತ್ನಿಸಿದ್ದೆನೆ ಖಂಡಿತ ನನಗೆ ಆತ್ಮತೃಪ್ತಿ ಇದೆ. ಪ್ರಾಮಾಣಿಕತೆ, ಸತ್ಯ, ನಿಷ್ಠೆ ಎಲ್ಲವುಗಳನ್ನೂ ಅನುಸರಿಸುವ ರೀತಿಯಲ್ಲಿ ಪ್ರೋತ್ಸಾಹಿಸಿದ್ದೇನೆ ನನಗೆ ಆ ಕುರಿತು ಖಂಡಿತ ಹೆಮ್ಮೆ ಇದೆ. ಯಾವುದೇ ಕಾರಣಕ್ಕೂ ಕಾಪಿ ಮಾಡದಂತೆಯೇ ಪರೀಕ್ಷೆ ಬರೆಯುವಂತೆ ಅವರಲ್ಲೊಂದು ಪ್ರಾಮಾಣಿಕತೆಯನ್ನು ತುಂಬಿದ್ದೇನೆ ನನಗೆ ಸಂತೋಷವಿದೆ. ನನಗೆ ತಿಳಿದದ್ದೆಲ್ಲವನ್ನು ಕಲಿಸಿದ್ದೇನೆ, ತಿಳಿಯಲಾರದ್ದನ್ನು ಸುಳ್ಳು ಹೇಳದೇ ತಿಳಿದುಕೊಂಡು ಬಂದು ಹೇಳಿದ್ದೇನೆ ಅಥವಾ ಗೊತ್ತಿಲ್ಲ ಎಂದೇ ಹೇಳಿದ್ದೇನೆ.

ಸುದೀರ್ಘ ವೃತ್ತಿ ಜೀವನದಲ್ಲಿ ಅನೇಕ ಏರಿಳಿತಗಳನ್ನು ಕಂಡಿದ್ದೇನೆ, ಕಷ್ಟಗಳು, ಸಮಸ್ಯೆಗಳು, ತೊಂದರೆಗಳ ಬೆಟ್ಟಗಳನ್ನೂ ಏರಿದ್ದೇನೆ, ಪ್ರಪಾತಗಳನ್ನೂ ಕಂಡಿದ್ದೇನೆ ಆದರೆ ಆತ್ಮಸ್ಥೈರ್ಯವನ್ನು ಮಾತ್ರ ಕಳೆದುಕೊಳ್ಳದೇ ಮಕ್ಕಳಿಗೆ ನ್ಯಾಯ ಒದಗಿಸಿದ್ದೇನೆ. ನನ್ನ ವೈಯಕ್ತಿಕ ಸಮಸ್ಯೆಗಳನ್ನೆಂದೂ ತರಗತಿಯಲ್ಲಿ ತೆಗೆದುಕೊಂಡುಹೋಗಿಲ್ಲ. ಆ ಕುರಿತು ನಾನು ಪ್ರಾಮಾಣಿಕವಾಗಿ ಹೇಳಬಲ್ಲೆ ಹಾಗೂ ಹೆಮ್ಮೆಯಿಂದಲೂ ಹೇಳಬಲ್ಲೆ. ತರಗತಿಗೆ ಹೋದರೆ ಎಲ್ಲವನ್ನೂ ಮರೆತು ಕೇವಲ ಕಲಿಸುವುದೊಂದೇ ನನ್ನ ಗುರಿ ಎಂಬುದನ್ನು ನಾನು ಅರಿತಿದ್ದೇನೆ. ನಮ್ಮ ಸಮಸ್ಯೆಗಳು ನಮ್ಮ ಸಮಸ್ಯೆಗಳೇ ಆಗಿರಬೇಕು, ವಿದ್ಯಾರ್ಥಿಗಳಿಗಲ್ಲ. ಹೀಗಾಗಿ ಎಲ್ಲ ಸಮಸ್ಯೆಗಳನ್ನೂ ಬಾಗಿಲ ಹೊರಗೇ ಇಟ್ಟು ತರಗತಿಗೆ ಹೋಗಿದ್ದೇನೆ. ಮಕ್ಕಳಿಗೆ ಕಲಿಸುವಿಕೆಯಲ್ಲಿ ನನ್ನನೇ ನಾನು ಮರೆತಿದ್ದೇನೆ.

ಪ್ರತಿ ವರ್ಷವೂ ಒಬ್ಬರಲ್ಲ ಒಬ್ಬರು ವಿದ್ಯಾರ್ಥಿಗಳು 95ಕ್ಕಿಂತಲೂ ಹೆಚ್ಚು ಅಂಕಗಳನ್ನು ಪಡೆದಿದ್ದಾರೆ. ಆ ಕುರಿತು ಸಂತೋಷವಿದೆ. ಸರಾಸರಿ ಅಂಕಗಳನ್ನು ಪಡೆದವರೂ ಇದ್ದಾರೆ, ಅನುತ್ತೀರ್ಣರಾದವರೂ ಇದ್ದಾರೆ ಆ ಕುರಿತು ನನಗೆ ವಿಶಾದವಿದೆ. ತರಗತಿಯ ಎಲ್ಲ ವಿದ್ಯಾರ್ಥಿಗಳೂ ಉತ್ತೀರ್ಣರಾದಾಗ ಕುಣಿದಾಡಿದ್ದೇನೆ. ಆದರೆ ಒಂದು ವರ್ಷ ಮಾತ್ರ ನಾನಂದುಕೊಂಡಕ್ಕಿಂತಲೂ ನನ್ನ ವೃತ್ತಿ ಜೀವನದಲ್ಲಿಯೇ ಅತ್ಯಂತ ಕಡಿಮೆ ವಿದ್ಯಾರ್ಥಿಗಳು ಉತ್ತೀರ್ಣರಾಬಿಟ್ಟರು. ಆ ವರ್ಷ ನಾನು ತುಂಬಾ ದು:ಖಿತನಾದೆ. ಎಲ್ಲಿ ಎಡವಿದೆ ಅಂತ ಆತ್ಮಾವಲೋಕನ ಮಾಡಿಕೊಂಡು ತಿದ್ದಿಕೊಳ್ಳಲು ಯತ್ನಿಸಿದೆ. ಮತ್ತೆ ಪ್ರಯತ್ನಿಸಿದೆ. ಹೊಸ ಹೊಸ ಪ್ರಯೋಗಗಳನ್ನು ಮಾಡಿದೆ. ವಿದ್ಯಾರ್ಥಿಗಳ ಕಲಿಕೆಯ ಗುಣಮಟ್ಟ ಸುಧಾರಿಸಿತು.

ಒಮ್ಮೆ ಹೀಗೂ ಪ್ರಯತ್ನ ಮಾಡಿದೆ. ವಿದ್ಯಾರ್ಥಿಗಳಿಗೆ ಹೊಸ ಬಗೆಯ ಬರವಣಿಗೆ ಹೇಳಿದ್ದೆ. ಏನೆಂದರೆ ನಾನು ಅವರಿಗೆ ಕಲಿಸುವ ವಿಧಾನ ಹೇಗಿದೆ ? ಸರಿ ಇದೆಯಾ ತಪ್ಪಿದೆಯಾ, ಚೆನ್ನಾಗಿದ್ದರೆ ಯಾಕೆ ಚೆನ್ನಾಗಿದೆ, ಚೆನ್ನಾಗಿಲ್ಲವೆಂದಾದರೆ ಯಾಕೆ ಚೆನ್ನಾಗಿಲ್ಲ. ಇನ್ನೂ ಹೇಗೆ ಹೇಳಿದರೆ ಅರ್ಥವಾಗುತ್ತದೆ ? ಇದನ್ನು ಪ್ರಾಮಾಣಿಕವಾಗಿ ನಿರ್ಭಯದಿಂದ ಬರೆಯಿರಿ ಅಂತ ಹೇಳಿದ್ದೆ. ನನ್ನನ್ನು ಖಂಡಿತ ಹೊಗಳಿ ಬರೆಯಬೇಡಿ ಎಂದೂ ಅವರಲ್ಲಿ ಆತ್ಮವಿಶ್ವಾಸ ತುಂಬಿದ್ದೆ. ಆಶ್ಚರ್ಯಕರವೆನ್ನುವಂತೆ ಎಲ್ಲ ವಿದ್ಯಾರ್ಥಿಗಳೂ ತಮ್ಮ ಅನಿಸಿಕೆಗಳನ್ನು ಬರೆದಿದ್ದರಲ್ಲದೇ ನನ್ನ ಕಲಿಸುವ ವಿಧಾನಗಳಲ್ಲಿಯ ಕೆಲವು ಲೋಪದೋಷಗಳನ್ನೂ ಹೇಳಿದ್ದರು. ವಿದ್ಯಾರ್ಥಿಗಳಿಗೇ ನನ್ನ ಕಲಿಕಾ ವಿಧಾನವನ್ನು ಕುರಿತು ವಿಮರ್ಶಿಸಲು ಹೇಳಿದ್ದೆನಾದ್ದರಿಂದ ಅವರು ಬರೆದ ವಿಷಯಗಳನ್ನು ಓದಿ ತಿದ್ದಿಕೊಂಡೆ. ನಮ್ಮ ನಿಜವಾದ ವಿಮರ್ಶಕರೆಂದರೆ ವಿದ್ಯಾರ್ಥಿಗಳು. ಎಲ್ಲರೆದುರು ನಾವೆಲ್ಲ ಹೇಳಿಕೊಳ್ಳಬಹುದು ನಾನು ಹಾಗೆ ಕಲಿಸಿದೆ ಹೀಗೆ ಕಲಿಸಿದೆ ಅಂತ. ಹೇಗೆ ಕಲಿಸಿದೆ ಅಂತ ನಿಜವಾಗಿಯೂ ಗುರುತಿಸುವವರೇ ವಿದ್ಯಾರ್ಥಿಗಳು.

ಅದು ಹೇಗೆ 33 ವರ್ಷಗಳು ಕಳೆದವೋ, ನಾನು ಸವೆಸಿದ ಸುದೀರ್ಘ ದಾರಿಯನ್ನು ಹೊರಳಿ ನೋಡಿದರೆ ನಿಜ ಅಲ್ಲಿ ನನ್ನ ಹೇಳಿಕೊಳ್ಳುವಂಥ ಸಾಧನೆಯೇನಿಲ್ಲವಾದರೂ, ನನ್ನೆಲ್ಲ ಜ್ಞಾನವನ್ನು ಪ್ರಾಮಾಣಿಕವಾಗಿ ಧಾರೆಯೆರೆದು, ಉತ್ತಮ ನಾಗರಿಕರನ್ನು ಸಮಾಜಕ್ಕೆ ಕೊಡಲು ಪ್ರೇರಕನಾಗಿದ್ದೇನೆ ಎಂಬ ಆತ್ಮತೃಪ್ತಿ ಖಂಡಿತ ಇದೆ. ಅಂಕಗಳ ಜೊತೆ ಜೊತೆಗೇ ನಾಗರಿಕ ಸಮಾಜದ ಬಗ್ಗೆ ಅರಿವು ಮೂಡಿಸಿದ್ದೇನೆ, ಜಾಗೃತಿಯನ್ನೂ ಮೂಡಿಸಿದ್ದೇನೆ ಎಂಬ ಸಮಾಧಾನ ನನಗಿದೆ.

ಒಂದು ಗಿಡ ಹೂಗಳರನ್ನಳಿಸಬಲ್ಲುದು ಆದರೆ ತಾನೇ ಹೂವಾಗಲಾರದು. ನನ್ನಲ್ಲಿ ಅಂಥ ಸಾರ್ಥಕ್ಯವಿದೆ.


  • ಸಿದ್ಧರಾಮ ಕೂಡ್ಲಿಗಿ

5 1 vote
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW