‘ಸುಚೇಷ್ಟೆ’ ಕೃತಿ ಪರಿಚಯ – ರಶ್ಮಿ ಉಳಿಯಾರು

ಬಳ್ಳಾರಿಯಲ್ಲಿ ಇಂಗ್ಲೀಷ್ ಪ್ರೊಫೆಸರ್ ಆಗಿರುವ ಬಹುಭಾಷಾ ವಲ್ಲಭೆ ಡಾ. ಸುಚೇತಾ ಪೈ ಅವರ ಸ್ವಾನುಭವಗಳ ಕಚಗುಳಿ ಇಡುವ ಬರಹಗಳ ಗುಚ್ಛವಿದು. ಇದರಲ್ಲಿ ಒಟ್ಟು ಹದಿಮೂರು ಲೇಖನಗಳಿವೆ. ಕೊನೆಯ ಅಧ್ಯಾಯದಲ್ಲಿ ಅವರು ಕೊರೊನಾ ಬಗ್ಗೆ ಬರೆದ ನಗೆಬರಹಗಳಿವೆ. ‘ಸುಚೇಷ್ಟೆ’ ಕೃತಿಯ ಕುರಿತು ರಶ್ಮಿ ಉಳಿಯಾರು ಅವರು ತಮ್ಮ ಅಭಿಪ್ರಾಯವನ್ನು ಓದುಗರ ಮುಂದೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಪುಸ್ತಕ: ಸುಚೇಷ್ಟೆ (ಸ್ವಾನುಭವ ಸಂಕಟ ಸಂಕಥನ)
ಲೇಖಕರು : ಡಾ. ಸುಚೇತಾ ಪೈ Suchetha Pai
ಪ್ರಕಾಶನ : ಕಂದೀಲು ಪ್ರಕಾಶನ (ಮೊ: ೬೩೬೨೩೭೪೨೪೫)
ಬೆಲೆ : ₹೧೨೦/-
ಪುಟಗಳು : ೧೬೬+ ೧೪ 
ಖರೀದಿಗಾಗಿ : ಲೇಖಕಿಯವರು: ೮೧೪೭೮೧೭೫೬೦)
೨೦೨೨ ಮೊದಲ ಮುದ್ರಣ

ಲೇಖಕಿ ತನ್ನದೇ ಬದುಕಿನ ಘಟನೆಗಳನ್ನು ಒಂದಿಷ್ಟು ಓರೆನೋಟದಿಂದ ಕಂಡಾಗ ಹುಟ್ಟಿದ ಲೇಖನಗಳ ಸಂಕಲನವಿದು. ಹಾಗಿದ್ದರೂ ತನ್ನ ಜೀವನ ಚರಿತ್ರೆ ಮಾತ್ರಾ ಅಲ್ಲ ಎನ್ನುವುದು ಅವರ ಮಾತು. ಸಾಕ್ಷಿ ಎಂಬಂತೆ ಮುಖಪುಟದಲ್ಲಿ ಅವರ ತುಂಟ ನಗುಭರಿತ ಫೋಟೋ, ಸುಚೇಷ್ಟೆ ಎಂಬ ತನ್ನದೇ ಹೆಸರನ್ನು ತಿರುವಿದಂತೆ ಕಾಣುವ ಶೀರ್ಷಿಕೆ, ಅದೂ ಸಾಲದ್ದಕ್ಕೆ ತಮ್ಮ ಹೆಸರನ್ನೇ ಓರೆಯಾಗಿಸಿ ಮುದ್ರಿಸಿದ್ದು ನೋಡಿದಾಗ ಒಳಗೆ ನಗುವಿನ ಪರಮಾನ್ನ ಕಾದಿದೆ ಎಂದು ಅನ್ನಿಸುತ್ತದೆ. ಅವರು ಬರೆದ ರೀತಿಯಿಂದಾಗಿ ಅಲ್ಲಲ್ಲಿ ಓದುವಾಗ ನಗು ಬರುವುದು ಹೌದು. ಆದರೂ ಅವರು ತಾವು ಎದುರಿಸಿದ ನೋವಿನ ಘಳಿಗೆಗಳನ್ನು ಸಹ ಅಸಾಧಾರಣ ಹಾಸ್ಯ ಪ್ರಜ್ಞೆಯ ಮೂಲಕ ಗೆದ್ದಿರುವುದನ್ನು ಕಾಣುತ್ತೇವೆ. ಪುಸ್ತಕಕ್ಕೆ ಡಾ.ಶಾಂತಾ ನಾಗರಾಜ್ ಅವರ ಸುಂದರ ಮುನ್ನುಡಿ ಇದೆ. ಈ ಪುಸ್ತಕವನ್ನು ಲೇಖಕಿ “ತಮ್ಮ ಹಾಸ್ಯಪ್ರಜ್ಞೆಯಿಂದ ಜೀವನವನ್ನು ಸಹ್ಯ ಮಾಡುವ ಎಲ್ಲಾ ತುಂಟ ಮನಸ್ಸುಗಳಿಗೆ” ಅರ್ಪಿಸಿದ್ದಾರೆ.

ಪುಸ್ತಕದಲ್ಲಿ ನನಗೆ ಕಂಡಿದ್ದು ಲೇಖಕಿಯವರಿಗೆ ಏನನ್ನಾದರೂ ಕಲಿಯಲು ಇರುವ ಅದಮ್ಯ ಆಸಕ್ತಿ. ಚಿತ್ತಕಲಾ ನಿಪುಣೆಯಾದ ಅವರು ಇಂಗ್ಲಿಷ್, ಹಿಂದಿ, ತೆಲುಗು, ಮಾತೃಭಾಷೆ ಕೊಂಕಣಿ, ಕನ್ನಡ, ಬೆಂಗಾಲಿ… ಹೀಗೆ ಹಲವು ಭಾಷೆಗಳನ್ನು ಕಲಿತ ಅವರು ಓದಿನಲ್ಲಿಯೂ ಮುಂದು. ಆಯುರ್ವೇದ ವೈದ್ಯರಾಗಬೇಕಿದ್ದಾಕೆ ಮೂರನೇ ವರ್ಷದಲ್ಲಿ ಅದನ್ನು ತೊರೆದು ಸ್ನಾತಕೋತ್ತರ ಪದವಿಯ ನಂತರ ಪಿಎಚ್ಡಿ ಅಧ್ಯಯನ ಮಾಡಿದಾಕೆ. ಎರಡು ಮೂರು ವರ್ಷಗಳಿಗೆ ವರ್ಗಾವಣೆ ಆಗುತ್ತಿದ್ದ ಬ್ಯಾಂಕ್ ಅಧಿಕಾರಿಯಾದ ಅಪ್ಪನ ಪ್ರೀತಿಯ ಮಗಳು “ಅದೃಷ್ಟ ಲಕ್ಷ್ಮಿ”. ಹಾಗಾಗಿ ಅವರಲ್ಲಿ ಹಲವಾರು ಪ್ರದೇಶಗಳ ಜೀವಾನುಭವ ಸಮೃದ್ಧವಾಗಿದೆ ಎನ್ನಿಸುತ್ತದೆ.

ಅವರ ತಾಯಿಗೆ ಮಾತ್ರ ಅವರು ಕೊಡುತ್ತಿದ್ದ ‘ಕಾಟ’ ತಡೆಯುವುದು ಅಸಾಧ್ಯ ಎನ್ನಿಸುತ್ತಿತ್ತು. ಅದಕ್ಕೆ ತಾಯಿ ‘ಗಂಡನ ಮನೆಯಲ್ಲಿ ಎರಡೂ ಕೈಗಳಿಂದಲೂ ತಿನ್ನುತ್ತೀ’ ಎಂಬುದಾಗಿ ಕೊಂಕಣಿಯಲ್ಲಿ ಬೈಯ್ತಾ ಇದ್ದರಂತೆ. ಹಾಗೆಂದರೇನು ಅಂತ ಅವರಿಗೆ ಅರ್ಥ ಆಗಲಿಲ್ಲ!! ಒಬ್ಬ ಮುದ್ದಿನ ತಮ್ಮ ಮತ್ತು ತಂಗಿ ಅವರ ಕುಟುಂಬ.

ಲೇಖಕಿಯವರಿಗೆ ಎಡಪಾದದಲ್ಲಿ ಆರು ಬೆರಳುಗಳು. ಅದೂ ಕೊನೆಯ ಮತ್ತು ನಾಲ್ಕನೇ ಬೆರಳಿನ ನಡುವೆ ಎದ್ದು ಇಣುಕುವ ಬೆರಳು. ಆರು ಬೆರಳಿರುವವರು ಅದೃಷ್ಟವಂತರಂತೆ. ಆದರೆ ಅವರು ಚಪ್ಪಲಿಗಾಗಿ ಪಟ್ಟ ಬವಣೆ ಓದಿದರೆ ಪಾಪ ಎನ್ನಿಸುತ್ತದೆ. ಆದರೆ ಅದನ್ನು ವರ್ಣಿಸಿ ಬರೆದ ರೀತಿ ಇದೆಯಲ್ಲಾ, ನಗು ಉಕ್ಕಿಸುತ್ತದೆ. ಒಂದು ಚಿಕ್ಕ ಅಳತೆ ಮತ್ತು ಇನ್ನೊಂದು ದೊಡ್ಡ ಅಳತೆಯ ಆರಾಮದಾಯಕ ಚಪ್ಪಲಿಗಳಿಗಾಗಿ ಹುಡುಕಾಡಿ ಕೊನೆಗೆ ಬಹಳ ಜತೆಗಳನ್ನು ಕೊಂಡು ಮನೆಯನ್ನು ಚಪ್ಪಲಿ ಅಂಗಡಿ ಮಾಡಿಕೊಂಡ ಘಟನೆಗಳನ್ನು ಮೊದಲ ಅಧ್ಯಾಯದಲ್ಲಿ ವಿಸ್ತಾರವಾಗಿ ಬರೆದಿದ್ದಾರೆ.

ಐದು ವರ್ಷಗಳ ಚಿಕ್ಕ ವಯಸ್ಸಿನಲ್ಲೇ ಮುಂಬಯಿನಂತಹ ಮಹಾ ಶಹರದಲ್ಲಿ ಕಳೆದು ಹೋಗಿದ್ದರೂ ನಿರಾತಂಕವಾಗಿ ಯಾರನ್ನೋ ಹಿಡಿದುಕೊಂಡು ಮನೆಯ ವಿಳಾಸ ಹೇಳಿ ತನ್ನನ್ನು ಮುಟ್ಟಿಸಲು ಮಾಡಿದ ಅವರ ಧೈರ್ಯ ಕಂಡು ಬೆರಗಾದೆ ನಾನು. ಇದಲ್ಲದೆ ಅವರು ಮತ್ತೂ ಎರಡು ಸಲ ತಮ್ಮನೊಂದಿಗೆ ಕಳೆದು ಹೋಗಿದ್ದರು. ಪೋಲಿಸ್ ಕಂಪ್ಲೆಂಟ್ ಕೂಡ ಆಗಿತ್ತು. ಬಾಲ್ಯದ ಈ ಕುತೂಹಲವನ್ನು ವಿವರಿಸಿ ಬರೆದ ಶೈಲಿ ಚೆನ್ನಾಗಿದೆ.

ಇನ್ನೊಂದು ಅಧ್ಯಾಯದಲ್ಲಿ ನೀಳವೇಣಿಯಾಗಿದ್ದ ತಮ್ಮ ತಲೆಗೂದಲಿನ ಮಹಾತ್ಮ್ಯೆಯ ಬಗ್ಗೆ ವಿವರಿಸುತ್ತಾರೆ. ಅದನ್ನು ಓದುವಾಗಲಂತೂ ನಾನು ಪದೇ ಪದೇ ಪುಸ್ತಕ ಮುಚ್ಚಿ ಮುಖಪುಟದ ಅವರ ಚಿತ್ರದತ್ತ ಕಣ್ಣು ಹಾಯಿಸುತ್ತಿದ್ದೆ. ದೇಹದಲ್ಲಿ ಸಣ್ಣ ಇದ್ದ ಅವರು ತಿಂದದ್ದೆಲ್ಲಾ ಸೊಂಪಾದ ಕೂದಲಿಗೇ ಹೋಗುತ್ತಿತ್ತೇನೋ ಎನ್ನಿಸುವಷ್ಟು ದಟ್ಟ ಕೇಶ ರಾಶಿ. ಇನ್ನು ಅದನ್ನು ತಮಗಾದ ಅನೇಕ ಅಪಘಾತಗಳ ಮತ್ತು ಕಾಯಿಲೆ ಬಿದ್ದ ಹಾಗೂ ಕೊರೊನಾ ಬಂದ ಸಮಯದಲ್ಲಿ ಶುಚಿಯಾಗಿ ಇರಿಸಲು ಮತ್ತು ಕಾಪಾಡಲು ಆಗದೇ ಕತ್ತರಿಸಿದ್ದರಂತೆ. ಇದನ್ನು ಕೇಶಪಾಶ ಎಂಬ ಆರನೇ ಅಧ್ಯಾಯದಲ್ಲಿ ಬರೆದಿದ್ದಾರೆ. ತಾವು ಜ್ಞಾನ ಭಾರತಿಯಲ್ಲಿ ಇಂಗ್ಲಿಷ್ ಎಂ.ಎ. ಮಾಡಲು ಹೋದದನ್ನು ಎಮ್ಮೆ ಕಟ್ಟಲು ಹೋಗಿದ್ದು, ತಮ್ಮ ಪಿಎಚ್ಡಿ ಸಂಬಂಧಿಸಿದವರ ಬೇಜವಾಬ್ದಾರಿಯಿಂದ ಹತ್ತು ವರ್ಷಗಳು ತೆಗೆದುಕೊಂಡದ್ದು ಇವುಗಳನ್ನೆಲ್ಲಾ ಸ್ವಾರಸ್ಯವಾದ ಬಗೆಯಲ್ಲಿ ಚಿತ್ರಿಸಿದ್ದಾರೆ. ಇನ್ನು ಐದಡಿ ಮೀರದ ಅವರಿಗೆ ಇದ್ದ ಅಡ್ಡ ಹೆಸರುಗಳು ಅನೇಕ.

ಏನೇನೂ ಅಡುಗೆ ಬಾರದ ತನ್ನನ್ನು ಸಹೃದಯರಾದ ಪತಿಯವರು ಹೇಗೆ ಸಹನೆಯಿಂದ ಸಹಿಸಿಕೊಂಡರು, ಆದರೆ ತಾಯಿ ಹೇಗೆ ವ್ಯಂಗ್ಯೋಕ್ತಿ ಎಸೆಯುತ್ತಾ ಮೂದಲಿಸುತ್ತಿದ್ದರು ಎಂಬುದನ್ನು ಪಾಕ ಪ್ರವೀಣೆ ಅಧ್ಯಾಯ ವಿವರಿಸುತ್ತದೆ. ತಮಗೊದಗಿದ ಅನಾರೋಗ್ಯ, ಆಕಸ್ಮಿಕ ಅಪಘಾತಗಳು, ಆ ಸಮಯದಲ್ಲಿ ದಿಢೀರ್ ಎಂದು ಹೊರ ಹೊಮ್ಮಿದ ತಮಗರಿಯದ ಪ್ರತಿಭೆಗಳು… ಆ ಸಮಯವನ್ನು ಸಹ ವ್ಯರ್ಥ ಮಾಡದೇ ಉಪಯುಕ್ತವಾಗಿ ಬಳಸಿದ ಅವರ ಜಾಣ್ಮೆ, ಸದಾ ಕ್ರಿಯಾಶೀಲ ಮನಸ್ಸು… ಇವನ್ನೆಲ್ಲಾ ಓದಿದಾಗ ಮೇಡಂ ಬಗ್ಗೆ ಅಚ್ಚರಿ ಮತ್ತು ಅಭಿಮಾನ ಎರಡೂ ಮೂಡುತ್ತದೆ. ಪುಸ್ತಕದ ತಿಳಿಯಾದ ಹಾಸ್ಯ ಮನೋಲ್ಲಾಸ ನೀಡುತ್ತದೆ. ಓದಿ ಮುಗಿಸಿದಂತೆ ಸುಚೇತಾ ಮೇಡಂ ಒಬ್ಬ ವಿಶಿಷ್ಟ ವ್ಯಕ್ತಿ ಎನ್ನಿಸಿದರು. ತನ್ನನ್ನು ತಾನೇ ಅವಲೋಕನಕ್ಕೊಳಪಡಿಸಿ, ತನ್ನ ಬದುಕಿನ ಘಟನೆಗಳನ್ನು ಹಾಸ್ಯದ ಕನ್ನಡಕದ ಮೂಲಕ ನೋಡಿಕೊಂಡು, ಒಂದಿಷ್ಟು ಗೇಲಿಯೊಂದಿಗೆ ಬರೆದ ಈ ಬರಹಗಳು ಖುಷಿ ಕೊಡುತ್ತವೆ. ನೀವೂ ಓದಿ ನೋಡಿ.
ಧನ್ಯವಾದಗಳು


  • ರಶ್ಮಿ ಉಳಿಯಾರು

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW