ಲೇಖಕರಾದ ನೆಲ್ಲೀಕೆರೆ ವಿಜಯಕುಮಾರ್ ಅವರ ‘ಸುಮ್ಮನಿರಬಾರದೇ? ಪ್ರಯಾಸಕರ ಬದುಕಿಗೊಂದು ಗುಡ್ ಬೈ’ ಕೃತಿಯಲ್ಲಿರುವ ಪ್ರತಿಯೊಂದು ಲೇಖನಗಳಲ್ಲಿನ ಮೂಲ ಮಂತ್ರವೇ ,’ಸುಮ್ಮನಿರುವುದು’ ಸುಮ್ಮನಿರುವ ಸಂಗಾತಿಗೆ ಸೋಲೇ ಇಲ್ಲ, ಎನ್ನುವ ಅವರು ಜಗತ್ತೇ ಬದಲಾಗುವುದು ‘ನಾನು’ ಬದಲಾದಾಗ. ಲೇಖಕಿ ವಾಣಿಶ್ರೀ ಕೊಂಚಾಡಿ ಅವರು ಕೃತಿಯ ಕುರಿತು ತಮ್ಮ ಅಭಿಪ್ರಾಯವನ್ನು ಓದುಗರ ಮುಂದೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಪುಸ್ತಕದ ಹೆಸರು: ಸುಮ್ಮನಿರಬಾರದೇ? ಪ್ರಯಾಸಕರ ಬದುಕಿಗೊಂದು ಗುಡ್ ಬೈ
ಲೇಖಕರು : ನೆಲ್ಲೀಕೆರೆ ವಿಜಯಕುಮಾರ್ (ಸುಮ್ ಸುಮ್ನೆ ವಿಜಯಕುಮಾರ್)
ಪ್ರಕಾಶಕರು: ಸುಮ್ ಸುಮ್ನೆ ಪ್ರಕಾಶನ
ಬೆಲೆ : ೧೩೦ರೂ/
ಲೇಖಕರಾದ ನೆಲ್ಲಿಕೆರೆ ವಿಜಯಕುಮಾರ್ ಅವರು ಗುರೂಜಿ ಶ್ರೀ ಋಷಿ ಪ್ರಭಾಕರ್ ಅವರ ಮೂಲ ಜ್ಞಾನವನ್ನು “ಸುಮ್ಮನಿರಬಾರದೇ …? ಶೀರ್ಷಿಕೆಯ ಮೂಲಕ ಸಂಗ್ರಹಿಸಿ ರಚಿಸಿದ ಕೃತಿ ಇದಾಗಿದೆ. ಇದಲ್ಲದೇ ‘ನಿರ್ಧರಿಸು ನಿಲ್ಲು ಮನವೇ..”ಅಶಿಸ್ತಿನಿಂದ ಬದುಕಿರಿ ಆರೋಗ್ಯವಾಗಿರಿ’ ‘ಅರ್ಥ×ಪಾದ×ಎತ್ತರ’ ಮೊದಲಾದ ಕೃತಿಗಳನ್ನು ಇವರು ಬರೆದಿದ್ದಾರೆ.
ನಾವು ಬದುಕಿನಲ್ಲಿ ಎದುರಾಗುವ ಅನೇಕ ಅನಿರೀಕ್ಷಿತ ಘಟನೆಗಳಿಂದ ವಿಚಲಿತರಾಗಬಾರದು. ಮನುಷ್ಯನ ಹಿಡಿತವಿಲ್ಲದ, ಪ್ರಯತ್ನಕ್ಕೆ ಮೀರಿದ ಘಟನೆಗಳಿಗೆ ತಲೆ ಕೆಡಿಸಿಕೊಳ್ಳದೆ, ಸಂಭವಿಸಬಹುದಾದನ್ನು ಹಾಗೆಯೇ ಸಂಭವಿಸಲು ಬಿಡಬೇಕು,ಎಂದು ಹೇಳುವ ಕೃತಿ ಇದಾಗಿದೆ. ಲೇಖಕರಾದ ವಿಜಯಕುಮಾರ್ ಮೂವತ್ತ ಮೂರರರ ಹರೆಯದಲ್ಲಿ ತಲೆಸುತ್ತು ಬಂದು ಬಿದ್ದಾಗ ಎಚ್ಚರಿಕೆ ನೀಡಿದವಡಾಕ್ಟರ್ ಹೇಳಿದ್ದಿಷ್ಟು.

“ಇಷ್ಟೊಂದು ರಕ್ತದೊತ್ತಡ ಒಳ್ಳೆಯದಲ್ಲ. ಕುಡಿಯುವುದನ್ನು ನಿಲ್ಲಿಸಬೇಕು. ಈಗಾಗಲೇ ಹಾರ್ಟ್ ಅಟ್ಯಾಕ್, ಸ್ಟ್ರೋಕ್, ಮಧುಮೇಹ ಮೊದಲಾದ ಕಾಯಿಲೆಗಳ ದೊಡ್ಡ ಗೂಡೊಂದರ ಬಾಗಿಲ ಬಳಿ ನಿಂತಿರುವೆ. ಒಳಗೆ ಹೋಗಬಹುದು, ವಾಪಾಸು ಬರಲೂ ಬಹುದು. ಆಯ್ಕೆಗಳು ನಿನ್ನ ಮುಂದಿದೆ. ನೆನಪಿರಲಿ, ಒಮ್ಮೆ ಹೊಸ್ತಿಲು ದಾಟಿ ಒಳಗೆ ಅಡಿ ಇಟ್ಟವರು ಹೊರಗೆ ಬರುವುದು ತುಂಬಾ ಕಷ್ಟ” . ಹೀಗೆ ಎಚ್ಚರಿಕೆ ನೀಡಿದ ವೈದ್ಯರ ಮಾತುಗಳನ್ನು ಕೇಳಿದ ಲೇಖಕರು ಭಯ ಬೀಳದಿದ್ದರೂ ಅವರ ಪತ್ನಿ ಆತಂಕಗೊಂಡು ಪತಿಯ ಕುಡಿತವನ್ನು ಬಿಡಿಸಲು ಶತ ಪ್ರಯತ್ನ ಮಾಡಿದಳು.
ಆಸ್ಪತ್ರೆಯಿಂದ ಮನೆಗೆ ಬಂದವಳು ಸಿದ್ದ ಸಮಾಧಿ ಯೋಗ ಶಿಬಿರಕ್ಕೆ ಕರೆದೊಯ್ದ ಕಾರಣ ಮುಂದೆ ಲೇಖಕರ ಜೀವನದಲ್ಲಿ ದೊಡ್ಡ ಪವಾಡವೇ ನಡೆಯಿತು. ಅಲ್ಲಿನ ಗುರುಗಳು “ಕುಡಿಯುವುದನ್ನು ಯಾಕೆ ಬಿಡುತ್ತೀಯ? ಕುಡಿದುಕೊಂಡು ಖುಷಿಯಿಂದಲೇ ಬರಬೇಕೆಂದರು.ಅದೇ ಕೊನೆ , ಅರಿವಿಲ್ಲದೆ ಲೇಖಕರಲ್ಲಿ ಅಗಾಧವಾದ ಬದಲಾವಣೆಗಳು ಆರಂಭವಾಗಿತ್ತು. ‘ಕುಡಿದೆ ಬಾ ಪರವಾಗಿಲ್ಲ’, ಎಂಬ ಗುರುಗಳ ಮಾತು ವಿಚಿತ್ರವಾದರೂ ಲೇಖಕರೆದೆಗೆ ತುಂಬಾ ನಾಟಿ ತನ್ನನ್ನು ಅನುಮೋದಿಸುವವರು ಸಿಕ್ಕಿದ್ದಾರೆಂಬ ಖುಷಿ ಬದುಕಿಗೊಂದು ಕುತೂಹಲ ತಿರುವನ್ನು ನೀಡಿತು. ಸಾವಿನ ಹಾದಿಯಲ್ಲಿ ಹೋಗಬೇಕಿದ್ದ ಲೇಖಕರು ಸಾಧಕನಾಗಿ ಪರಿವರ್ತನಾದರು.
ಗುರುಗಳು ಕತ್ತಲಿನಲ್ಲಿದ್ದವರ ಬದುಕಿಗೆ ಹಣತೆ ಇಟ್ಟು ನೂತನ ಜಗದ ಬಾಗಿಲನ್ನೇ ತೆರೆದರು. ತಾನು ಪಡೆದ ಜ್ಞಾನ ಇತರಿಗೂ ಸಿಗುವಂತಾಗಬೇಕೆಂಬ ಒತ್ತಾಸೆಯೊಂದು ಲೇಖಕರಲ್ಲಿ ಮೂಡಿತು. ಹಾಗಾಗಿ ಈ ‘ಸುಮ್ಮನಿದ್ದು ಬಿಡುವ ಕಲೆ’ಯ ಸೂತ್ರದ ಎಳೆಯನ್ನೇ ಹಿಡಿದುಕೊಂಡು ಜೀವಿಸಲು ಹೊರಟ ಲೇಖಕರಿಗೆ ಗೋಚರಿಸಿದ ನೂರಾರು ಸತ್ಯ ಸಂಗತಿಗಳನ್ನು ಅವರಿಗೆ ತಿಳಿದಂತೆ ಬರೆದರು.ಅದು ಪತ್ರಿಕೆಯಲ್ಲೂ ಪ್ರಕಟವಾಗಿ ಅನೇಕರ ಕುತೂಹಲಕ್ಕೆ ಕಾರಣವಾಯಿತು. ಪ್ರಸ್ತುತ ಈ ಕಿರು ಹೊತ್ತಗೆಯಲ್ಲಿ ನಾವು ಓದುವುದು ಅದೇ ಕೆಲವು ಲೇಖನಗಳು. ಲೇಖಕರು ಮುಖಪುಟದಲ್ಲಿ ಮೂಲ ಜ್ಞಾನ ಗುರೂಜಿ ಶ್ರೀ ಋಷಿಪ್ರಭಾಕರ್ ಎಂದು ಬರೆದಿದ್ದಾರೆ.ಇವರು ‘ಸಿದ್ಧ ಸಮಾಧಿ ಯೋಗ’ದ ಪಿತಾಮಹರು.
ಈ ಪುಸ್ತಕದಲ್ಲಿ ಒಟ್ಟು ೨೮ ಲೇಖನಗಳಿವೆ.
ಚಟ ಬಿಡಬೇಕೆ ? ಸುಮ್ಮನಿದ್ದರೆ ಸಾಕು.
ಯಾವುದೇ ನಿರ್ಧಾರವನ್ನು ತನ್ನ ಮೇಲೆ ಬಲವಂತವಾಗಿ ಹೇರಬಾರದು, ಅದರತ್ತ ದಿವ್ಯ ನಿರ್ಲಕ್ಷ ತೋರಬೇಕು. ಯಾಕೆಂದರೆ ಅಂತಹ ನಿರ್ಧಾರಕ್ಕೆ ತದ್ವಿರುದ್ಧವಾಗಿ ವರ್ತಿಸುವುದು ಮಾನವನ ಮನಸ್ಸಿಗೆ ಒಂದು ವಿಶಿಷ್ಟ ಗುಣ. ಯಾವುದೇ ಚಟವಿದ್ದರೆ ಉದಾಹರಣೆಗೆ ಕುಡಿತವನ್ನು ಬಿಡಬೇಕೆಂದು ಅಂದುಕೊಂಡಿದ್ದರೆ, ‘ಏನಾದರೂ ಸರಿ,ಮದ್ಯವನ್ನು ತ್ಯಜಿಸಲೇಬೇಕು ಎಂಬ ಉಗ್ರ ಭಾವ ಇರಬಾರದು , ಯಾಕೆಂದರೆ ಈ ಭಾವನೆಯೇ ವ್ಯಸನದಿಂದ ಮುಕ್ತರಾಗ ಬಯಸುವವರ ಪ್ರಥಮ ಶತ್ರು. ‘ಮಾಡಿಯೇ ತೀರಬೇಕು ‘ ಎಂದು ಪದೇಪದೇ ನಮ್ಮನ್ನು ನಾವೇ ಅನಗತ್ಯ ಒತ್ತಡದಲ್ಲಿ ಸಿಕ್ಕಿಸಿಕೊಂಡರೆ, ದುಶ್ಚಟವೊಂದರನ್ನು ಬಿಡಲಾರದೆ, ಅದರ ಮೇಲೆ ಸವಾರಿ ಮಾಡಲೇಬೇಕೆಂಬ ಪಣತೊಡುತ್ತೇವೆ. ಹಾಗಾಗಿ ಮುಟ್ಟಲೇಬೇಕಾದ ಊರಿಗೆ ಬದ್ಧರಾಗಬಾರದು. ಬದ್ಧನಾಗದಿರಲು ಏನನ್ನು ಮಾಡದೆ ಸುಮ್ಮನಿರಬೇಕು. ಈ ಸುಮ್ಮನಿರುವ ನಿರ್ಲಿಪ್ತತೆಯನ್ನು ಸಾಧಿಸಿದರೆ ಕರಗತವಾದರೆ, ಸಂಗತಿಗಳೆಲ್ಲಾ ನಿಮ್ಮ ಅಣತಿಯಂತೆ ಜರುಗಿ ಎಲ್ಲಾ ವ್ಯಸನಗಳು ನಿಮ್ಮಿಂದ ದೂರವಾಗುತ್ತದೆ. ಈ ನಿರ್ಲಿಪ್ತ ಸ್ಥಿತಿಯೇ ಯೋಗಿಗಳು ಹೇಳುವ ಸಮಸ್ಥಿತಿ ಅಥವಾ ಸಮಾಜ ಸ್ಥಿತಿ. ಲೇಖಕರು ಕುಡಿತದಿಂದ ಮುಕ್ತರಾಗಲು ಅವರ ಪತ್ನಿ ಏನೆಲ್ಲಾ ಪ್ರಯತ್ನ ಪಟ್ಟರೂ ಆಗದಿದ್ದಾಗ ಕೊನೆಗೂ ಆಕೆ ಸುಮ್ಮನಿರಬೇಕಾಯ್ತು, ಆದರೆ ಆಶ್ಚರ್ಯವೆಂಬಂತೆ ಲೇಖಕರು ಕುಡಿತವನ್ನು ಬಿಟ್ಟರು. ಅದರಕ್ಕೆ ಲೇಖಕರು ಹೇಳುತ್ತಾರೆ “ಪತ್ನಿ ಏನೂ ಮಾಡದೆ ಸುಮ್ಮನಾದಾಗ ದಿಕ್ಕೇ ತೋಚದೆ ಕುಡಿತಕ್ಕೆ ವಿರೋಧವೇ ಇಲ್ಲದಂತಾಗಿ ಕುಡಿತ ಬಿಟ್ಟು ಸುಮ್ಮನಾದೆ” ಹೋಂವರ್ಕ್ ಸಮಸ್ಯೆಯ ಮೂಲ ಯಾವುದು? ನಾವು ಮಕ್ಕಳ ಮೇಲೆ ಒತ್ತಡ ಹಾಕಿ ಹೋಂವರ್ಕ್ ಮಾಡಿಸಬಾರದು. ಹಾಗೆ ಮಾಡಿದಲ್ಲಿ ಮಗು ಹೋಂ ವರ್ಕ್ ಮಾಡುವುದನ್ನೇ ನಿಲ್ಲಿಸಬಹುದು.ಆದೇಶಿಸಿ ಬಾರದು ನೆನಪಿಸಬೇಕು.ಇಲ್ಲಿಯೂ ಪೋಷಕರು ಸುಮ್ಮನಿರುವ ಕಲೆಯನ್ನು ನಾಜೂಕಾಗಿ ಮಕ್ಕಳ ಮೇಲೆ ಪ್ರಯೋಗಿಸಬೇಕು.
ಸಂಯಮದಿಂದ ವರ್ತಿಸಿ ನಿಶ್ಶಬ್ದ ವಾತಾವರಣವನ್ನು ಕಲ್ಪಿಸಬೇಕು. ಮಕ್ಕಳಿಗೆ ಕಷ್ಟಪಟ್ಟು ಓದು ಎಂದು ಹೇಳದೇ, ಇಷ್ಟ ಪಟ್ಟು ಓದು ಎನ್ನಬೇಕು. ಮಗುವಿನೆದುರು ನಾವೂ ಪುಸ್ತಕ ಹಿಡಿದು ಓದಿದರೆ ತಮ್ಮನ್ನೇ ಆದು ಅನುಕರಿಸುತ್ತದೆ ಎನ್ನುತ್ತಾರೆ.

ಅಶಿಸ್ತಿನಲ್ಲಿದೆ ನಿಮ್ಮ ಆರೋಗ್ಯ:
ಈ ಲೇಖನದಲ್ಲಿ ಲೇಖಕರು ಹೇಗಿದ್ದರೂ ಸರಿ ಎಂದಾಗ ಬದುಕು ಸುಂದರವಾಗುತ್ತದೆ. ಶಿಸ್ತನ್ನು ಇಷ್ಟಪಟ್ಟು ಅದರ ಪ್ರಕಾರ ಬದುಕುವುದು ತಪ್ಪಲ್ಲ, ಆದರೆ ಅದೇ ಅದೇ ಶಿಸ್ತನ್ನು ಬೇರೆಯವರಿಂದ ನಿರೀಕ್ಷಿಸುವುದು ತಪ್ಪು.
ಪ್ರತಿಯೊಬ್ಬರ ಆಲೋಚನಾ ವಿಧಾನ ಭಿನ್ನವಾಗಿರುತ್ತದೆ.ಅದನ್ನು ಪರೀಕ್ಷಿಸದೇ , ಪ್ರಶ್ನಿಸದೇ, ಸುಮ್ಮನಿರಬೇಕು. ವ್ಯವಸ್ಥಿತ ಬದುಕನ್ನು ಬಯಸಬಾರದು. ಯಾಕೆಂದರೆ ಜೀವನವೇ ಅವ್ಯವಸ್ಥೆಯ ಮೂಟೆ, ಅನ್ಯರ ಅಶಿಸ್ತನ್ನು ಸಹಿಸಿಕೊಳ್ಳುವುದನ್ನು ಕಲಿಯಬೇಕು .ಆಗ ನಮ್ಮ ಆರೋಗ್ಯ ಚೆನ್ನಾಗಿರುತ್ತದೆ ಎನ್ನುತ್ತಾರೆ.
ಮುಂದಿನ ಲೇಖನವಾದ #ಗುರಿ_ಮುಟ್ಟಲು_ಬದ್ಧರಾಗಬೇಡಿ__ಬುದ್ದನಂತೆ_ಸುಮ್ಮನಿದ್ದು_ಬಿಡಿ” ಎಂಬುದರಲ್ಲಿ ಯಾವುದೇ ಆತಂಕ ಹಾಗೂ ಒತ್ತಡಕ್ಕೆ ಒಳಗಾಗದೇ ಪಾಸಾದರೂ ಸರಿ ಫೇಲಾದರೂ ಸರಿ ಎಂದು ಪರೀಕ್ಷೆಗೆ ಸುಮ್ಮನೇ ಓದಲು ಪ್ರಾರಂಭಿಸಬೇಕು. ಆಗ ಆ ಅಂಶವೇ ಓದನ್ನು ಗ್ರಹಿಸುವ ಶಕ್ತಿ ವೃದ್ಧಿಯಾಗಲು ಕಾರಣವಾಗುತ್ತದೆ. ಕಮಿಟ್ಮೆಂಟ್ ಗೆ ಒಳಗಾದ ವಿದ್ಯಾರ್ಥಿಯಲ್ಲಿ ಮಾನಸಿಕ ಅಸಮತೋಲನ ಉಂಟಾಗಿ ಸೋಲುಂಟಾಗುತ್ತದೆ. ಮೊದಲು ನಾವು ಕಲಿಯಬೇಕಾದದ್ದು ‘ಸುಮ್ಮನಿರುವ ವಿದ್ಯೆಯನ್ನು’ ಆಗ ಎಲ್ಲಾ ವಿದ್ಯೆಯೂ ಸಹಜವಾಗಿ ಸಿದ್ಧಿಸುತ್ತದೆ. ಬಯಸಿದ್ದೆಲ್ಲಾ ಬಾಳಲ್ಲಿ ಸಿಗದುದಕ್ಕೆ ಕೊರಗದೆ ಮುಕ್ತ ಮನಸ್ಸಿನಿಂದ ಮುನ್ನಡೆಯಬೇಕು.ಆಗ ನಮಗೆ ಬೇಕಾದ ಬದುಕು ಸಾಕಾರಗೊಳ್ಳುತ್ತದೆ ಎನ್ನುತ್ತಾರೆ.
ಇಲ್ಲಿರುವ ಪ್ರತಿಯೊಂದು ಲೇಖನಗಳಲ್ಲಿನ ಮೂಲ ಮಂತ್ರವೇ ,’ಸುಮ್ಮನಿರುವುದು’ ಸುಮ್ಮನಿರುವ ಸಂಗಾತಿಗೆ ಸೋಲೇ ಇಲ್ಲ, ಎನ್ನುವ ಅವರು ಜಗತ್ತೇ ಬದಲಾಗುವುದು ‘ನಾನು’ ಬದಲಾದಾಗ. ನಮಗೆ ಸಿಕ್ಕ ಸಂಗಾತಿಯ ಗುಣಗಳನ್ನು ತಿದ್ದಲು ಹೋಗದೆ, ದೂರದೇ ನಾವು ನಮ್ಮಲ್ಲಿರುವ ದೋಷಗಳನ್ನು ತಿದ್ದಿ ಬದಲಾದರೆ, ನಮ್ಮನ್ನು ನೋಡಿ ಸಂಗಾತಿಯೂ ಬದಲಾಗುತ್ತಾರೆ. ನಾವು ನಿರೀಕ್ಷಿಸುತ್ತಿದ್ದ ಬದಲಾವಣೆ ತನ್ನಿಂದ ತಾನೇ ಆಗುತ್ತದೆ. ನಮ್ಮನ್ನು ನಾವು ಸರಿಪಡಿಸಿಕೊಳ್ಳುತ್ತಾ ಹೋದಂತೆ ನಡೆಯುವುದೆಲ್ಲವೂ ಪವಾಡಗಳು.ಇಡೀ ಬದುಕೇ ಸುಮ್ಮನಿದ್ದು ಬಿಡುವ ಮಹಾ ಧ್ಯಾನವಾಗಬೇಕು ಎನ್ನುವ ಮಾತು ಹೌದೆನಿಸಿತು.
ಮುಂದಿನ ಪುಟಗಳಲ್ಲಿ…
ಮೌನವೆನ್ನುವುದು ಜಗತ್ತಿನ ಅತ್ಯಂತ ಸಮೃದ್ಧ ಭಾಷೆ .ಶಕ್ತಿಶಾಲಿ ಅಸ್ತ್ರ .ಮಹಾನ್ ವ್ಯಕ್ತಿಗಳ ಯಶಸ್ಸಿನ ರಹಸ್ಯ . ಹಾಗಾಗಿ ವಾರಕ್ಕೊಮ್ಮೆ ನಮ್ಮ ಬಾಯಿಗೆ ಬೀಗ ಹಾಕಬೇಕು. ಸುಮ್ಮನಿದ್ದು ಸಾಧಿಸಿದ ಮಹಾನ್ ಸಾಧಕ ಗಾಂಧೀಜಿಯಂತೆ ಇರಬೇಕು. ಅವರ ಆಂತರಿಕ ಮೌನವು ಬಹಿರಂಗವಾಗಿ ಉಂಟು ಮಾಡುತ್ತಿದ್ದ ಘೋರ ಪರಿಣಾಮವನ್ನು ನೆನೆದು ಬ್ರಿಟಿಷರೇ ನಡುಗುತ್ತಿದ್ದರೆಂದರೆ ಅದರ ಶಕ್ತಿಯನ್ನು ಊಹಿಸಿ. ಈ ಮೌನದ ಶಕ್ತಿಯು ಅರಿಯಬೇಕಾದರೆ ಸ್ವತಃ ಮೌನಕ್ಕಿಳಿದು ಅನುಭವಿಸಬೇಕು, ಎನ್ನುತ್ತಾರೆ.
ಈ ಪುಸ್ತಕದಲ್ಲಿರುವುದು ಇಷ್ಟೇ ಅಲ್ಲ. ಇನ್ನು ಅನೇಕ ವಿಷಯಗಳು ಅಡಗಿವೆ. ಪ್ರತಿಯೊಂದು ಲೇಖನದ ಕೊನೆಯಲ್ಲಿ ಬರುವ ನೈಷ್ಕರ್ಮೋಪನಿಷತ್ ನ ಪ್ರಸಿದ್ಧ ವಾಣಿಗಳು ಲೇಖನಗಳಿಗೆ ಮತ್ತಷ್ಟು ಪುಷ್ಟಿ ನೀಡುತ್ತದೆ. ಅಲ್ಲದೆ ಪ್ರತಿಪುಟದ ಅಂತ್ಯದಲ್ಲಿ ಆಯಾಯಾ ಲೇಖನಗಳಿಗೆ ಸಂಬಂಧ ಪಟ್ಟಂತಹ
ಸುಮ್ಮನಿದ್ದವರು ಜಗತ್ತನ್ನೇ ಜಯಿಸಬಲ್ಲರು.
ಎಲ್ಲಾ ಸರಿ ಎಂದಾಗ ಶತ್ರು ಎಲ್ಲಿ?
ನಾನು ಎಂಬುದರಿಂದ ಮುಕ್ತನಾಗುವುದೇ ವಿಮೋಚನೆ.
ಸಮಾಧಿ ಅಭ್ಯಾಸ ಸುಮ್ಮನಿರುವ ಪ್ರಜ್ಞೆಗೆ ದಾರಿ
ಏನೂ ಮಾಡದಿರುವ ಕಲೆಯೇ ಧ್ಯಾನ
ಇಂತಹ ನುಡಿಮುತ್ತುಗಳು ಅರ್ಥಗರ್ಭಿತವಾಗಿದ್ದು ಚಿಂತನೆಗೆ ಹಚ್ಚುತ್ತವೆ. ಇದು ಪುಸ್ತಕದ ಪರಿಚಯವಷ್ಟೇ . ಕೇವಲ ಸಾರಾಂಶವನ್ನಷ್ಟೇ ಬರೆದಿರುವೆ . ಇಲ್ಲಿರುವ ಇತರ ಲೇಖನಗಳಾದ “ಬಾಳು ಬೆಳಗಿತು”, “ಏನು ನಿಮ್ಮ ಪ್ರಾಬ್ಲಮ್ ?ಯಾರು ನಿಮ್ಮ ಪ್ರಾಬ್ಲಮ್?” “ಹಾಗೇ ಸುಮ್ಮನೆ ನಡೆದು ಹೋಗಬಾರದೇ ಒಮ್ಮೆ?” ಮೊದಲಾದವುಗಳಲ್ಲಿಯೂ ಸಾಕಷ್ಟು ವಿಚಾರಧಾರೆಗಳಿದ್ದು ನಮ್ಮ ವ್ಯಕ್ತಿತ್ತ್ವದ ವಿಕಸನಕ್ಕೆ ದಾರಿ ದೀಪವಾಗಿದೆ.
ಧನ್ಯವಾದಗಳೊಂದಿಗೆ
- ವಾಣಿಶ್ರೀ ಕೊಂಚಾಡಿ
