ಲೇಖಕರ ಮನದಾಳದ ಮಾತು : ಎಸ್.ವಿ. ಪ್ರಭಾವತಿ

ಲೇಖಕಿ ಆಗಬೇಕು ಎನ್ನುವ ಆಸೆ ಕನಸಿನಲ್ಲೂ ಇರಲಿಲ್ಲ. ಯಾವುದಾದರೂ ಕಾದಂಬರಿ ಹಿಡಿದು ಮಹಡಿ ಏರಿ ಕುಳಿತು ಓದಲು ಆರಂಭಿಸಿದರೆ ಹೊತ್ತು ಹೋಗಿದ್ದೆ ತಿಳಿಯುತ್ತಿರಲಿಲ್ಲ. ಓದುವುದರ ಜೊತೆಗೆ ಬರವಣಿಗೆ ಹಾಗೆ ಶುರುವಾಯಿತು ಎಂದು ಹಿರಿಯ ಲೇಖಕಿ ಎಸ್.ವಿ. ಪ್ರಭಾವತಿ ಅವರು ತಮ್ಮ ಮನದಾಳದ ಮಾತನ್ನು ವಸಂತ ಗಣೇಶ್ ಅವರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

1. ನಿಮ್ಮ ಬಾಲ್ಯ ಹಾಗೂ ತಂದೆ-ತಾಯಿ, ಹುಟ್ಟಿದ ಊರು ವಿದ್ಯಾಭ್ಯಾಸದ ಬಗ್ಗೆ ಹೇಳಿ?

ನಾನು ಹುಟ್ಟಿದ್ದು ಮಂಡ್ಯ ಜಿಲ್ಲೆ ಕೃಷ್ಣರಾಜಪೇಟೆ ತಾಲ್ಲೂಕು ಹೊಸಹೊಳಲು ಎನ್ನುವ ಪುಟ್ಟ ಗ್ರಾಮದಲ್ಲಿ. ನನ್ನ ಪ್ರೈಮರಿ ಸ್ಕೂಲ್ ಮೈಸೂರಿನ ಲಕ್ಷ್ಮಿಪುರಂನ ಸರ್ಕಾರಿ ಶಾಲೆಯಲ್ಲಿ ನಡೆಯಿತು, ನಂತರ ಹೊಸಹೊಳಲಿನಲ್ಲಿ ನಾನು ಮಿಡಲ್ ಸ್ಕೂಲ್ ಓದಿದೆ. ನನ್ನ ತಂಗಿ ಆಗ ಪ್ರೈಮರಿ ಶಾಲೆಗೆ ಸೇರಿದ್ದಳು.

ನನ್ನ ತಂದೆಯ ಹೆಸರು ವೆಂಕಟಸುಬ್ಬಯ್ಯ, ಅವರು ಪೋಸ್ಟ್ ಮಾಸ್ಟರ್ ಆಗಿದ್ದರು. ತಾಯಿ ರತ್ನಮ್ಮ ಗೃಹಿಣಿ. ತಂದೆ ಕೃಷ್ಣರಾಜಪೇಟೆ ತಾಲ್ಲೂಕಿನಲ್ಲಿ ಪೋಸ್ಟ್ ಮಾಸ್ಟರ್ ಆಗಿದ್ದಾಗ ನಾವು ಹೊಸಹೊಳಲಿನಲ್ಲಿಯೆ ವಾಸ ಇದ್ದೆವು. ನಮ್ಮದು ಸುಮಾರು 50 ಜನರಿದ್ದ ದೊಡ್ಡ ಕುಟುಂಬ. ಬಹಳ ದೊಡ್ಡ ನಿವೇಶನದಲ್ಲಿ ಇದ್ದ ಮನೆ ನಮ್ಮದು.

ಬಾಲ್ಯದ ನೆನಪುಗಳು ಎಷ್ಟು ಹೇಳಿದರೂ ಮುಗಿಯುವುದಿಲ್ಲ. ನನ್ನ ಐದನೇ ತರಗತಿಗೆ ಊರಿಗೆ ಹೋದ ನೆನಪು, ನಾವು ಮೈಸೂರಿನಲ್ಲಿ ಇದ್ದಾಗಲೂ ಆಗಾಗ ಹೊಸಹೊಳಲಿಗೆ ಹೋಗುತ್ತಿದ್ದುದರಿಂದ ಊರಿನ ನೆನಪೇ ಬಹಳ. ನಂತರ ತಂದೆಗೆ ಮಂಡ್ಯಕ್ಕೆ ವರ್ಗ ಆದಾಗ L.S. ಪಾಸ್ ಮಾಡಿದ್ದೆ. ಆದರೆ ನಮಗೆ ಯಾವುದೇ ಭಾಷೆಯನ್ನು ಕ್ರಮಬದ್ಧವಾಗಿ ಕಲಿಸಿದ್ದ ನೆನಪಿಲ್ಲ. ಆಮೇಲೆ ಮಂಡ್ಯಕ್ಕೆ ಬಂದ ಮೇಲೆ ಸೇಂಟ್ ಜೋಸೆಫ್ ಕಾನ್ವೆಂಟ್ ಗೆ ನನ್ನನ್ನು ಇಂಗ್ಲೀಷ್ ಮೀಡಿಯಂ ಗೆ ಸೇರಿಸಿದ್ದರು ತಂದೆ. ಅವರಿಗೆ ಮಕ್ಕಳು ವಿದ್ಯಾವಂತರಾಗಿ ಬುಧ್ಧಿವಂತರಾಗಿ ಕೆಲಸಕ್ಕೆ ಸೇರಿ ಸಂಪಾದಿಸಲಿ ಎನ್ನುವ ಆಸೆ ಇತ್ತು. ಮುಂದೆ 9 ಮತ್ತು 10 ನೇ ತರಗತಿ ಓದುವಾಗ ನನಗೆ ಗಣಿತ ಕಬ್ಬಿಣದ ಕಡಲೆ ಆಗಿತ್ತು. ಒಂದೆರಡು ತಿಂಗಳುಗಳ ಕಾಲ ಯಾವುದೋ ಕಾರಣಕ್ಕೆ ಶಾಲೆಗೆ ಹೋಗಲು ಆಗದೇ ಇದ್ದಾಗ ಗೆಳತಿ ಅವಳ ನೋಟ್ಸ್ ಕೊಡುತ್ತಿದ್ದಳು. ನಮ್ಮ ವಿದ್ಯಾಭ್ಯಾಸಕ್ಕೆ ಸರಿಯಾದ ಬುನಾದಿ ಇಲ್ಲದ ಕಾರಣ ಹೆಚ್ಚಿನ ಪಾಲು ಪಾಠಗಳನ್ನು ಬಾಯಿಪಾಠ ಮಾಡುತ್ತಿದ್ದೆವು. ಗಣಿತವನ್ನು ಮನೆಯ ರೆಡ್ ಆಕ್ಸೈಡ್ ನೆಲದ ಮೇಲೆ ಬರೆದು ಕಲಿಯುತ್ತಿದ್ದೆ. ಎಸೆಸೆಲ್ಸಿ ಪರೀಕ್ಷೆಯಲ್ಲಿ ತೇರ್ಗಡೆ ಆದಾಗ ತಂದೆಯವರು ಹೋಗಿ ರಿಸಲ್ಟ್ ನೋಡಿಕೊಂಡು ಬಂದಿದ್ದರು.

ತಾಯಿ ರತ್ನಮ್ಮ ಅವರು ಮೂರನೇ ತರಗತಿಯವರೆಗೆ ಮಾತ್ರ ಓದಿದ್ದು. ತಾಯಿಗೂ ತಂದೆಗೂ ಸುಮಾರು 16 ವರ್ಷಗಳ ಅಂತರ ಇತ್ತು. ನಮ್ಮ ಅಮ್ಮ ಮತ್ತೆ ನನ್ನ ಅಜ್ಜಿ (ತಂದೆಯ ತಾಯಿ) ಮತ್ತೆ ನನ್ನ ಅತ್ತೆ (ಗಂಡನ ತಾಯಿ) ಮೂವರೂ ಬಹಳ ಬುದ್ಧಿವಂತರು. ಆ ಮೂವರಿಗೂ ವಿದ್ಯಾಭ್ಯಾಸ ಅಭಿವ್ಯಕ್ತಿ ಸ್ವಾತಂತ್ರ್ಯ, ಸಿಕ್ಕಿದ್ದಿದ್ದರೆ ಅವರು ದೇಶವನ್ನೇ ಆಳುವಷ್ಟು ಬುದ್ಧಿವಂತರು. ವಿದ್ಯಾವಂತರಾದ ನಾವುಗಳೇ ಒಮ್ಮೊಮ್ಮೆ ವಿವಾದಕ್ಕೆ ಎಡೆ ಕೊಡುವುದು ಬೇಡವೆಂದು ಯೋಚಿಸಿ, ಎದುರು ಮಾತನಾಡದೇ ಇರುವುದಿದೆ. ಆದರೆ ಈ ಮೂವರೂ ಹೆದರುತ್ತಾ ಇರಲಿಲ್ಲ. ನಮ್ಮ ಬಾಲ್ಯ ಒಂದು ಸುಂದರವಾದ ಹೂವಿನ ತೋಟ, ಅದರ ಎಲ್ಲ ಸುಗಂಧವನ್ನು ಹೀರಿ ಬೆಳೆದ ಖುಷಿ ನನಗಿದೆ.

(ಇದೆಲ್ಲವನ್ನೂ ಹೇಳುವಾಗ ಅವರ ಧ್ವನಿಯಲ್ಲಿ ಇದ್ದ ಸಂಭ್ರಮ, ಕಣ್ಣಿನಲ್ಲಿ ಕಾಣುತ್ತಿದ್ದ ಖುಷಿ, ಅವರು ಮತ್ತೊಮ್ಮೆ ಬಾಲ್ಯಕ್ಕೆ ಹಿಂದಿರುಗಿ ಅದನ್ನು ಅನುಭವಿಸಿದ್ದು ಕಾಣುತ್ತಿತ್ತು.)

2. ಸಾಹಿತ್ಯದಲ್ಲಿ ಕ್ಷೇತ್ರದಲ್ಲಿ ನಿಮಗೆ ಆಸಕ್ತಿ ಹುಟ್ಟಿದ್ದು ಯಾವಾಗ ಮತ್ತು ಹೇಗೆ? ಲೇಖಕಿಯಾಗಬೇಕೆನಿಸಿದ್ದು ಯಾವಾಗ? ಕಾರಣ ಏನು?

ಲೇಖಕಿ ಆಗಬೇಕು ಎನ್ನುವ ಆಸೆ ಕನಸಿನಲ್ಲೂ ಇರಲಿಲ್ಲ. ನಾವು ಹೊಸಹೊಳಲಿನಲ್ಲಿ ಇದ್ದಾಗ ಚಿಕ್ಕಪ್ಪನವರು ಮಂಡ್ಯ ಮೈಸೂರಿಗೆ ಹೋದಾಗ, ಸೋಹನ್ ಪಪ್ಪಡಿ, ಖಾರದ ಗೋಡಂಬಿ, ಮಲ್ಲಿಗೆ ಹೂವಿನ ಜೊತೆಗೆ ಅ.ನ.ಕೃ, ತ.ರಾ.ಸು ನಿರಂಜನ ಮತ್ತೆ ಉಷಾದೇವಿ ಅವರ ಪುಸ್ತಕಗಳನ್ನು ತರುತ್ತಿದ್ದರು. ಆಗಲೇ ನಾನು ಓದಲು ಆರಂಭಿಸಿದ್ದು. ಮೊದಲೇ ಹೇಳಿದ ಹಾಗೆ ಯಾವುದೇ ಭಾಷೆಯನ್ನೂ ಕ್ರಮಬದ್ಧವಾಗಿ ಕಲಿಸದ ಕಾರಣ ನನಗೆ ಗಣಿತದ ಪಾಠ ಎಂದರೆ ತಲೆ ನೋವು ಬರುತ್ತಿತ್ತು. ಆಗೆಲ್ಲ ಮನೆಗೆ ಬಂದು ಅಮೃತಾಂಜನ ಹಚ್ಚಿಕೊಂಡು ಯಾವುದಾದರೂ ಕಾದಂಬರಿ ಹಿಡಿದು ಮಹಡಿ ಏರಿ ಕುಳಿತು ಓದಲು ಆರಂಭಿಸಿದರೆ ಹೊತ್ತು ಹೋಗಿದ್ದೆ ತಿಳಿಯುತ್ತಿರಲಿಲ್ಲ. ಸಂಜೆ ಆದ ಮೇಲೆ ದೀಪ ಹಚ್ಚಿಯಾದರೂ ಕಾದಂಬರಿಗಳನ್ನು ಓದುತ್ತಿದ್ದೆ. ದಿನಕ್ಕೆ ನಾಲ್ಕೈದು ಕಾದಂಬರಿಗಳನ್ನು ಓದುತ್ತಿದ್ದೆ. ಆಮೇಲೆ ಪತ್ತೇದಾರಿ ಕಾದಂಬರಿಗಳನ್ನ ಓದುತ್ತಿದ್ದೆ. ಆಗಿನಿಂದಲೇ ಓದುವ ಹವ್ಯಾಸ (ಎನ್ನುವುದಕ್ಕಿಂತ ಹೆಚ್ಚಾಗಿ ಹುಚ್ಚು ಎಂದರೆ ಸರಿಯೇನೋ) ಆರಂಭ ಆಗಿತ್ತು.

ಹೈಸ್ಕೂಲ್ ಓದುವಾಗ ಗೀತಪ್ರಿಯ ಅವರ ಒಂದು ಕಥೆಯನ್ನು ಓದಿ ಅದರಂತೆಯೇ ನಾನು “ಜಂಬದ ಫಲ” ಎನ್ನುವ ಒಂದು ಕಥೆ ಬರೆದದ್ದು ನೆನಪಿದೆ. ಅದೇ ನನ್ನ ಮೊದಲ ಕಥೆ. ಅದನ್ನು ಓದಿದ ನನ್ನ ತಂಗಿ ಗೀತಪ್ರಿಯ ಅವರ ಕಥೆಯಂತೆ ಇದೆ ಎಂದಾಗ ಅದನ್ನು ಹರಿದು ಹಾಕಿದ್ದೆ. ನನ್ನ ಸಾಹಿತ್ಯ ಯಾತ್ರೆ ಶುರುವಾಗಿದ್ದು 2 ನೆಯ MA ಯಲ್ಲಿ ಇದ್ದಾಗ. ಆಗ ಕವಿತೆಗಳನ್ನು ಬರೆಯಲು ಆರಂಭಿಸಿದ್ದೆ. ಆಧುನಿಕ ಕವಯತ್ರಿಯರು ಇನ್ನೂ ಬರೆಯಲು ಆರಂಭಿಸದೆ ಇದ್ದ ಕಾಲ ಅದು.

ಸಿಪಿಕೆ ಅವರು ಮಹಾ ಕಾವ್ಯ ಎನ್ನುವ ಪಾಠ ಮಾಡುತ್ತಿದ್ದರು. ಕವಿಗಳು (ಗಂಡಸರು) ಹೆಣ್ಣನ್ನು ವರ್ಣಿಸಿ ಬರೆಯುವುದನ್ನು ಓದಿದ್ದೆ, ಆದರೆ ಹೆಣ್ಣು ಗಂಡನ್ನು ವರ್ಣಿಸಿ ಬರೆದ ಕವಿತೆಗಳು ಹೆಚ್ಚು ಇರಲಿಲ್ಲ. ಆಗ ನಾನು ಸಿಪಿಕೆ ಅವರನ್ನೇ ಕುರಿತು ಬರೆದ ಒಂದು ಕವಿತೆ ಹೀಗೆ ಶುರು ಆಗಿತ್ತು.

“ಹೆಣ್ಣನ್ನು ಬಿಡಿ ಬಿಡಿಸಿ ವರ್ಣಿಸಬಹುದಂತೆ ಪ್ರಾಚೀನದಿಂದ ಅರ್ವಾಚೀನರ ವರೆಗೆ ಕವಿಗಳು. ಹೆಣ್ಣೊಂದೇಕೆ ನಿನ್ನನ್ನು ವರ್ಣಿಸಬಾರದು, ಬಿಡಿ ಬಿಡಿಸಿ ಅಲ್ಲದಿದ್ದರೂ ಕಂಡಂತೆ ಕಾಣಿಸಿಕೊಂಡಂತೆ. ಎಂದು ಆರಂಭಿಸಿದೆ ಕವಿತೆ ಒಂದನ್ನು. ಅದು ಹಾಗೆಯೇ ಮುಂದುವರೆದು ಸುರುಳಿಗೂದಲಲ್ಲಿ ಎಣ್ಣೆಯಿಲ್ಲದೊಂದು ಕಣ್ಗಳಿಗೆ ಬಲೆ, ಕೇವಲ ಪ್ರಾಸ ಅಷ್ಟೇ…. ಹೀಗೆ ಸಾಗಿತ್ತು. ಅದಕ್ಕೆ “ನಿನ್ನನ್ನೇ ಕುರಿತು” ಎಂದು ಶೀರ್ಷಿಕೆ ಕೊಟ್ಟಿದ್ದೆ.

ಅಕ್ಕ ಪಕ್ಕದಲ್ಲಿ ಕುಳಿತವರಿಗೆ ಗೊತ್ತಿತ್ತು ಇದು ಸಿಪಿಕೆ ಅವರನ್ನೇ ಕುರಿತು ಬರೆದದ್ದು ಎಂದು. ಅದನ್ನು ಅವರು ಎಲ್ಲರಲ್ಲೂ ಹೇಳಿಯೂ ಇದ್ದರು. ಅದನ್ನು ನಾನು ಯಾವಾಗ ಕನ್ನಡ ಪ್ರಭ ಪತ್ರಿಕೆಗೆ ಕಳುಹಿಸಿದ್ದೆನೋ ನನಗೇ ನೆನಪಿಲ್ಲ. ಮತ್ತೆ ಅದನ್ನು ಮರೆತೂ ಬಿಟ್ಟಿದ್ದೆ. ಆಗೆಲ್ಲ ಈಗಿನಷ್ಟು ಧೈರ್ಯ ಖಚಿತತೆ ಎರಡೂ ಇಲ್ಲದೆ ಹರಿದೂ ಹಾಕಿದ್ದೆ. ನಂತರ MA ಮುಗಿದು ರಿಸಲ್ಟ್ ಬಂದ ನಂತರ ಪತ್ರಿಕೆಯಲ್ಲಿ ಬಂದರೂ ಅದನ್ನು ಯಾರೂ ಗುರುತಿಸಲಿಲ್ಲ.

ನಂತರ ಅದನ್ನು ನಾನು ಹೈಲೈಟ್ ಮಾಡಿದ್ದೆ. ಮುಂದೆ ಸಿಪಿಕೆ ಅವರು ಅವರ ಪರ್ಯಾಯ ಎನ್ನುವ ಪುಸ್ತಕದಲ್ಲಿ , ” ಒಂದು ಕವಿತೆಯ ಮೇಲೆ” ಎನ್ನುವ ಶೀರ್ಷಿಕೆಯ ಅಡಿಯಲ್ಲಿ ಕವಯತ್ರಿ ಒಬ್ಬಳು ಕಾಲು ಶತಮಾನದ ಹಿಂದೆ ನನ್ನನ್ನು ಕುರಿತು ಬರೆದ ಕವಿತೆ ಇದೀಗ ನನ್ನ ಗಮನಕ್ಕೆ ಬಂದಿದೆ. ಕೆಂಡದಂತಲ್ಲ ಮಾಣಿಕ್ಯದಂತೆ ಎಂದು ಮತ್ತೊಂದು ದೊಡ್ಡ ಪದ್ಯ ಬರೆದಿದ್ದರು.( ನನ್ನ ಆತ್ಮ ಕಥೆಯಲ್ಲಿ ಇದರ ಕುರಿತು ವಿಸ್ತಾರವಾಗಿ ಬರೆದಿದ್ದೇನೆ)

ನಂತರ ಮದುವೆ ಆದ ಮೇಲೆ 1974 ರಲ್ಲಿ “ಸಂಕ್ರಮಣ”ಕ್ಕೆ ಒಂದು ಕವಿತೆ ಬರೆದು ಕಳುಹಿಸಿದ್ದೆ. ಅದು ನವ್ಯದ ಕಾಲ, ಆಗ “ನನ್ನೊಡನಿದ್ದೂ ನನ್ನಂತಾಗದೆ” ಎಂದು ನಿಸಾರ್ ಅಹಮದ್ ಅವರ ಕವಿತೆಯಂತೆ ಬರೆದಿದ್ದೆ. “ಅನಿಸಿಕೆ” ಎನ್ನುವ ಕವನ 1975 ನಲ್ಲಿ “ಪ್ರಶ್ನೆಗಳು” ಎನ್ನುವ ಕವಿತೆ 1976 ರಲ್ಲಿ. 1977 ರಲ್ಲಿ ಮಗಳು ಹುಟ್ಟಿದ ಮೇಲೆ ಬರೆಯುವುದು ಸ್ವಲ್ಪ ಕಡಿಮೆ ಆಗಿತ್ತು. ಆಮೇಲೆ ಸುಮಾರು ಹತ್ತು ವರ್ಷಗಳ ನಂತರ 1986 ರಲ್ಲಿ “ಕವನ ಹುಟ್ಟುವ ಹೊತ್ತು” ಎನ್ನುವ ಕವನ ಬರೆದಿದ್ದೆ. ಅದರಲ್ಲಿ ಬದುಕೆಲ್ಲ ಬಡಿದಾಟ, ಗಂಡ ಮಕ್ಕಳ ಕಾಟ, ಅದೇ ಅಡಿಗೆ ಬಡಿಸಿ, ಬೇಯಿಸಿ ಗುಡಿಸಿ ಸಾರಿಸಿ….. ಕವನ ಹುಟ್ಟುವ ಹೊತ್ತು ಯಾವುದು ಗೊತ್ತೇ? ಕಲ್ಪನಾ ವಿಲಾಸ ಭೃಂಗದ ಬೆನ್ನೇರ ಬೇಕಿಲ್ಲ… ಹೀಗೆ ಸಾಗಿತ್ತು. ಇದನ್ನು ನಮ್ಮ ಭಾರತೀಯ ವಿದ್ಯಾಪೀಠ ಸಂಸ್ಕೃತ ಕಾಲೇಜಿನ ಪ್ರಾಂಶುಪಾಲರು ಮತ್ತು ನನ್ನ ಜೊತೆಯಲ್ಲಿ ಕೆಲಸ ಮಾಡುವವರಿಗೆ ತೋರಿಸಿದಾಗ ಇದೇನು ಹೀಗೆಲ್ಲ ಬರೆದಿದ್ದೀರಿ ಗಂಡ ಮಕ್ಕಳ ಕಾಟ ಎಂದೆಲ್ಲ ಅಂದಿದ್ದರು. ಅದು ಶೂದ್ರ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಅಲ್ಲಿಂದ ನನ್ನ ಕವನ ಯಾತ್ರೆ ಆರಂಭ ಆಗಿತ್ತು.

ಸಾಹಿತ್ಯ ಕ್ಷೇತ್ರ ಇನ್ನೂ ಬಹಳ ದೂರದಲ್ಲಿಯೇ ಇತ್ತು . ಪಿಎಚ್ ಡಿ ಥೀಸಿಸ್ ಬರೆಯಲು “ಕನ್ನಡ ಸಾಹಿತ್ಯದಲ್ಲಿ ದ್ರೌಪದಿ” ಈ ವಿಷಯದ ಮೇಲೆ 1976ರಲ್ಲಿಯೆ ರಿಜಿಸ್ಟರ್ ಆಗಿದ್ದರೂ ಡಿಗ್ರಿ ಬಂದಿದ್ದು 1987 ರಲ್ಲಿ. ಮುಂದೆ ಅದು ಮುದ್ರಣವಾಗಿ ಹೊರಬಂದಿದ್ದು 1992 ರಲ್ಲಿ. ಅದೊಂದು ದೀರ್ಘ ಆಯಾಸ ಯಾತ್ರೆ.

ನನಗೆ ಅದು ಪರಿಪೂರ್ಣ ಅನ್ನಿಸಲಿಲ್ಲ, ಆಗೆಲ್ಲ ಹೆಣ್ಣು ಮಕ್ಕಳಿಗೆ ಹೆಚ್ಚು ತೆರೆದು ಕೊಳ್ಳುವ ಅವಕಾಶ ಇರಲಿಲ್ಲ. ನನಗೆ ನನ್ನ ಸಾಂಪ್ರದಾಯಿಕ ಬರವಣಿಗೆಯ ಮೇಲೆ ಬೇಸರ ಹುಟ್ಟುವಂತೆ ಆದ ಮೇಲೆ ಚಂದ್ರಶೇಖರ ಪಾಟೀಲರ “ಸಂಕ್ರಮಣ” ಪತ್ರಿಕೆಯಲ್ಲಿ ವಿಮರ್ಶೆ ಬರೆಯಲು ಅವಕಾಶ ಕೊಟ್ಟರು. ನಂತರದ ದಿನಗಳಲ್ಲಿ ಮಳೆ ನಿಂತ ಮೇಲಿನ ಮರ ಎನ್ನುವ ಕವನ ಸಂಕಲನ ಪ್ರಕಟವಾಯಿತು. ಆ ವೇಳೆಗೆ ಸಾಹಿತ್ಯ ಕ್ಷೇತ್ರದ ಕುರಿತಾಗಿ ನನಗೊಂದು ಅರಿವು ಮೂಡಿತ್ತು. ಆಗ ನಾನು ಸಾಹಿತ್ಯ ಪರಿಷತ್ತು ಪ್ರಕಟಿಸಿದ ಪುಸ್ತಕವನ್ನು ಮತ್ತೆ ಬರೆಯಲು ಆರಂಭಿಸಿದೆ ಮತ್ತು ಅದನ್ನು ನಾನೇ ಪ್ರಕಟಿಸಿದೆ. ಇದರ ಜೊತೆಗೆ 1996 ನನ್ನ ದ್ರೌಪದಿ ಕಾದಂಬರಿ ಕೂಡ ಪ್ರಕಟವಾಯಿತು. ಹೀಗೆ ಆದಾಗಿಯೇ ಆಯಿತೇ ಹೊರತು ಲೇಖಕಿ ಆಗಲು ಹೊರಟವಳು ನಾನಲ್ಲ.

92 ರಿಂದ 96 ಮಧ್ಯೆ ರನ್ನನ ಸಹಸ್ರಮಾನೋತ್ಸವದ ಸಮಾರಂಭ ಒಂದಕ್ಕೆ ಮುದೋಳಕ್ಕೆ ಕಾರ್ಯಕ್ರಮ ನಿರ್ವಹಣೆಗೆ ಹೋದಾಗ ಲೇಖಕಿ ಶ್ರೀಮತಿ ವೈ.ಕೆ. ಸಂಧ್ಯಾಶರ್ಮ ಅವರ ಭೇಟಿ ಆಯಿತು. ಅವರು “ರಾಗಸಂಗಮ” ಪುಸ್ತಕದ ಬಗ್ಗೆ ತಿಳಿಸಿ ಸಂಪಾದಕರಾದ “ಸುಂದರ ರಾಜನ್” ಅವರನ್ನು ಸಂಪರ್ಕಿಸಲು ಹೇಳಿದರು. ಅಲ್ಲಿಯವರೆಗೆ ಮುಂಬೈನ “ಕರ್ನಾಟಕ ಮಲ್ಲ” ಎನ್ನುವ ಪತ್ರಿಕೆಯಲ್ಲಿ ನಾನು ದ್ರೌಪದಿಯನ್ನು ಕುರಿತು ಬರೆದ ಮೂರ್ನಾಲ್ಕು ಕಥೆಗಳು ಪ್ರಕಟವಾಗಿತ್ತು.

ನಂತರ “ಸುಂದರ ರಾಜನ್” ಅವರನ್ನು ಸಂಪರ್ಕಿಸಿ ಸುಮಾರು 60 ಪುಟಗಳಷ್ಟು (ಕೈ ಬರವಣಿಗೆ) ಕಥೆಯನ್ನು ತೋರಿಸಿದೆ. ಚೆನ್ನಾಗಿದೆ, ಪ್ರಕಟಿಸುತ್ತೇವೆ. ಆದರೆ ಇನ್ನೂ 3 ಕಥೆಗಳು ಬೇಕು ನಮಗೆ ಅದನ್ನೂ ಬರೆದು ಕೊಟ್ಟರೆ ಪ್ರಕಟಿಸುತ್ತೇವೆ ಎಂದರು. ಆಗ ನನ್ನ ವೈಯಕ್ತಿಕ ಹಾಗೂ ಹೊಸ ಹೊಳಲಿನ ಕಥೆಗಳನ್ನೂ ಬರೆದೆ. ಅದು ಹೊಸಹೊಳಲಿನ ಜನರಲ್ಲಿ ಸಂಚಲನ ಮೂಡಿಸಿತು. ಹೊಸಹೊಳಲಿನ ಎಲ್ಲರೂ ಇದರ ಕುರಿತೇ ಮಾತನಾಡುವಂತೆ ಆಯಿತು. ಆಗಿನಿಂದ ನಾನು ಸಾಮಾಜಿಕ ಕಾದಂಬರಿ ಬರೆಯುವುದನ್ನೇ ಬಿಟ್ಟು ಬಿಟ್ಟೆ. ಅಷ್ಟು ಹೊತ್ತಿಗೆ ನನ್ನ ದ್ರೌಪದಿ ಒಂದು ಅಧ್ಯಯನ 2ನೆಯ ಮುದ್ರಣ ಕಂಡಿತ್ತು. ಅಲ್ಲಿಂದ ನನ್ನ ಸಾಹಿತ್ಯ ಕ್ಷೇತ್ರದ ಪಯಣ ಆರಂಭ ಎನ್ನಬಹುದು. ಇದು ನಡೆದದ್ದು 1996 ರಲ್ಲಿ.

(ಅಂದು ಶ್ರೀಮತಿ ವೈ.ಕೆ.ಸಂಧ್ಯಾಶರ್ಮ ಅವರು ಬರವಣಿಗೆಯ ಬಗ್ಗೆ ಕೊಟ್ಟ ಸಲಹೆ ಸೂಚನೆಗಳನ್ನು ಇಂದಿಗೂ ನೆನಪಿಸಿಕೊಂಡರು)

3. ನಿಮ್ಮ ಮೊದಲ ಬರಹ ಯಾವುದು? ಬರೆದದ್ದು ಯಾವಾಗ?

ಪ್ರಕಟಿತ ಮೊದಲ ಬರಹ ಎನ್ನುವುದಾದರೆ “ಕನ್ನಡ ಸಾಹಿತ್ಯದಲ್ಲಿ ದ್ರೌಪದಿ”.

4. ಒಟ್ಟು ನೀವು ಬರೆದಿರುವ ಕೃತಿಗಳು ಎಷ್ಟು? ಕಾದಂಬರಿ, ಕವಿತೆ, ಲೇಖನಗಳು, ಎಷ್ಟೆಲ್ಲ ಬರೆದಿರುವ ನಿಮಗೆ ಇಷ್ಟವಾಗುವ ಸಾಹಿತ್ಯದ ಪ್ರಕಾರ ಯಾವುದು?

ಒಟ್ಟು ಎಂಟು ಕಾದಂಬರಿಗಳು, ಎರಡು ಸಂಶೋಧನಾ ಪ್ರಬಂಧಗಳು, ಮೂರು ಪ್ರಬಂಧ ಸಂಕಲನಗಳು, ಏಳು ವಿಮರ್ಶಾ ಗ್ರಂಥಗಳು, ನಾಲ್ಕು ಕವನ ಸಂಕಲನಗಳು ( ನಾಲ್ಕೂ ಸೇರಿ “ನದಿ ಹರಿಯುತಿರಲಿ” ಎನ್ನುವ ಹೆಸರಿನಲ್ಲಿ ಸಮಗ್ರ ಕಾವ್ಯ ಸಂಪುಟವಾಗಿದೆ) ಒಂದು ನಾಟಕ, ಮೂರು ಸಂಪಾದನಾ ಗ್ರಂಥಗಳು, ಹಾಗೂ “ಎನ್ನ ಪಾಡೆನಗಿರಲಿ” ಆತ್ಮ ಕಥನ ಪ್ರಕಟವಾಗಿವೆ.

5. ಒಟ್ಟು ನೀವು ರಚಿಸಿರುವ ಕಾದಂಬರಿಗಳು ಎಷ್ಟು?

ಒಟ್ಟು ಎಂಟು ಕಾದಂಬರಿಗಳು. ದ್ರೌಪದಿ, ಕುಂತಿ, ಅಹಲ್ಯಾ, ಯಶೋಧರಾ, ಸೀತಾ, ಶಕುಂತಲಾ, ಗಾರ್ಗಿ, ದೇವಕಿ.

6. ನೀವು ಬರೆದಿರುವ ಪ್ರತೀ ಕಾದಂಬರಿಗಳಿಗೆ, ಕಥೆಗಳಿಗೆ ವೈವಿಧ್ಯಮಯ ವಸ್ತು, ವಿಷಯಗಳನ್ನು ಎಲ್ಲಿಂದ ಸಂಗ್ರಹಿಸುತ್ತಿದ್ದಿರಿ?

ದ್ರೌಪದಿ ಕುರಿತು ನಾನು ಬರೆದದ್ದನ್ನು ಮೌಲ್ಯ ಮಾಪನ ಕೇಂದ್ರದಲ್ಲಿ, ಬಸವರಾಜ ಒಕ್ಕುಂದ ಅವರು ನೋಡಿ, ನೀವು ಕಾದಂಬರಿಯನ್ನೇ ಬರೆಯಬಹುದು ಎಂದರು. ಅದೇ ಸಮಯಕ್ಕೆ ನವ ಕರ್ನಾಟಕಕ್ಕೇ ಹೋದಾಗ ರಾಗಸಂಗಮದ 4 ಕಾದಂಬರಿಗಳನ್ನು ಕೊಟ್ಟೆ. ದ್ರೌಪದಿಯನ್ನು ಓದಿದ ಅವರು ಮತ್ತಷ್ಟು ವಿಷಯಗಳನ್ನು ಸೇರಿಸಿ ಕಥೆಯನ್ನು ದೊಡ್ಡದು ಮಾಡಿ ಕೊಡಲು ಹೇಳಿದರು. ಅಂತೆಯೇ ಬರೆದ “ದ್ರೌಪದಿ” 1996 ರಲ್ಲಿ ಪ್ರಕಟವಾಯಿತು. ಅದಕ್ಕೆ ಸು.ರಂಗಸ್ವಾಮಿ ಅವರ ಅತ್ತಿಮಬ್ಬೆ ಟ್ರಸ್ಟಿನ ಪ್ರಶಸ್ತಿ ಬಂದಿತ್ತು. ಈಗ ಆ ಪುಸ್ತಕ ಗುಲ್ಬರ್ಗ ಮತ್ತು ಬಿಜಾಪುರ ವಿಶ್ವವಿದ್ಯಾನಿಲಯಕ್ಕೆ ಪಠ್ಯವಾಗಿದೆ.

ಒಂದೊಂದು ಪುಸ್ತಕಕ್ಕೂ ಸಾಕಷ್ಟು ಸಂಶೋಧನೆ ಮಾಡಿ ಜೊತೆಗೆ ನನ್ನ ಕಲ್ಪನೆಯನ್ನು ಸೇರಿಸಿ ಸ್ತ್ರೀ ವಾದಿ ಹಿನ್ನೆಲೆಯಲ್ಲಿ ಬರೆಯುತ್ತಿದ್ದೆ. ಮೀರಾ ಚಕ್ರವರ್ತಿ ನಿಮ್ಮ ಕಾದಂಬರಿಗಳು ಏಕ ವ್ಯಕ್ತಿ ಕೇಂದ್ರಿತ ಆಗಿರುತ್ತೆ. ಆ ಯುಗದ ಕಲ್ಪನೆ ಕೂಡ ಮಾಡಿಕೊಳ್ಳಿ ಎಂದಿದ್ದರು. ಹಾಗಾಗಿ ಯಶೋಧರ ಕಾದಂಬರಿಯಲ್ಲಿ ಬೌದ್ದ ಧರ್ಮದ ಹುಟ್ಟಿನ ಕುರಿತು ಬರೆದೆ.

ಯಶೋಧರೆಯ ಅಳಲು ಮೈಥಿಲಿ ಶರಣ ಗುಪ್ತ ಅವರ ಒಂದು ಕಾವ್ಯ ಹಾಗೂ ಮಾಸ್ತಿ ಅವರ ಯಶೋಧರ ನಾಟಕ ಹೊರತಾಗಿ ಇಡೀ ಜಗತ್ತಿನಲ್ಲಿ ಎಲ್ಲಿಯೂ ಚಿತ್ರಿತವಾಗಿಲ್ಲ. ಇದಕ್ಕೆ ಕರ್ನಾಟಕ ಲೇಖಕಿಯರ ಸಂಘದ “ಗೀತಾ ದೇಸಾಯಿ” ದತ್ತಿ ಪ್ರಶಸ್ತಿ ಬಂದಿತು. ಇದು ಪ್ರಕಟ ಆಗಿದ್ದು 2000 ದಲ್ಲಿ.

7. ನಿಮಗೆ ಸಿಕ್ಕ ಪ್ರಶಸ್ತಿ ಪುರಸ್ಕಾರಗಳ ಬಗ್ಗೆ ಹೇಳಿ?

  • ಅನುಪಮಾ ನಿರಂಜನ ಪ್ರಶಸ್ತಿ
  • ಕಾಕೋಳು‌ಸರೋಜಾರಾವ್ ಪ್ರಶಸ್ತಿ
  • ಕಾವ್ಯಾನಂದ ಪ್ರಶಸ್ತಿ
  • ಮುದ್ದಣ ಪ್ರಶಸ್ತಿ
  • ಗೋಕಾಕ್ ಪ್ರಶಸ್ತಿ
  • ಸಾವಿತ್ರಮ್ಮ ದತ್ತಿನಿಧಿ ಪ್ರಶಸ್ತಿ
  • ಗೀತಾ ದೇಸಾಯಿ ದತ್ತಿ ಪ್ರಶಸ್ತಿ
  • ಅತ್ತಿಮಬ್ಬೆ ಪ್ರತಿಷ್ಠಾನದ ಪ್ರಶಸ್ತಿ
  • ಸ್ನೇಹ ಸೇತು ಪ್ರಶಸ್ತಿಗಳು ಬಂದಿವೆ.

8.ನೀವು ನಿಮ್ಮ ವೃತ್ತಿ ಜೀವನ, ಗೃಹಿಣಿಯ ಜವಾಬ್ದಾರಿಗಳ ನಡುವೆ ಬರವಣಿಗೆಗೆ ಹೇಗೆ ಸಮಯ ಹೊಂದಿಸಿಕೊಳ್ಳುತ್ತಿದ್ದಿರಿ.

ವೃತ್ತಿ ಜೀವನ, ಗೃಹಿಣಿಯ ಜವಾಬ್ದಾರಿಯ ನಡುವೆ ಬರವಣಿಗೆಗೆ ಸಮಯ ಹೊಂದಿಸಿಕೊಳ್ಳುವುದು ಸ್ವಲ್ಪ ಕಷ್ಟವೆ ನಿಜ. ನನಗೆ ಮನೆಯಲ್ಲಿ ಅಡಿಗೆ ತಿಂಡಿ ಇಂತಹ ಕೆಲಸಗಳು ಎಂದಿಗೂ ಹೆಚ್ಚು ಕಾಡಿಲ್ಲ. ಅಮ್ಮನಾದರೂ ಮದುವೆಗೆ ಮೊದಲು ಸಣ್ಣ ಪುಟ್ಟ ಕೆಲಸಗಳನ್ನು ಹೇಳುತ್ತಿದ್ದರು. ಅತ್ತೆಯ ಮನೆಯಲ್ಲಿ ಅದೂ ಇರಲಿಲ್ಲ. ಹಾಗಾಗಿ ಓದಲು ಬರೆಯಲು ನನಗೆ ತೊಂದರೆ ಇರಲಿಲ್ಲ. ಬರೆಯುವ ಲಹರಿ ಇದ್ದಾಗ ಕೆಲವೊಮ್ಮೆ ಲೈಬ್ರರಿಯಲ್ಲಿ ಕುಳಿತು ಬರೆಯುತ್ತಿದ್ದೆ. ಕೆಲವೊಮ್ಮೆ ಹೋಟೆಲ್ ನ ಟೇಬಲ್ ಮೇಲೆ ಕುಳಿತು ಬರೆದದ್ದೂ ಇದೆ.

9 ಜನಪ್ರಿಯ ಸಾಹಿತ್ಯ, ವಿಮರ್ಶಕರಿಂದ ಕಡೆಗಣಿಸಲ್ಪಟ್ಟಿದೆ ಎನ್ನುವ ಮಾತು ಸಾಹಿತ್ಯ ವಲಯದಲ್ಲಿ ಇದೆ. ಒಬ್ಬ ಬರಹಗಾರ್ತಿಯಾಗಿ ಈ ಕುರಿತು ನೀವು ಏನು ಹೇಳುತ್ತೀರಿ?

ಜನಪ್ರಿಯ ಸಾಹಿತ್ಯ ವಿಮರ್ಶಕರಿಂದ ಕಡೆಗಣಿಸಲ್ಪತ್ತಿದೆ ಎನ್ನುವುದು ನಿಜ. ಇದರ ಬಿಸಿ ಕೆಲವೊಮ್ಮೆ ದೊಡ್ಡ ದೊಡ್ಡ ಸಾಹಿತಿಗಳಿಗೂ ತಟ್ಟಿದೆ. ಎಂ.ಕೆ ಇಂದಿರಾ ತ್ರಿವೇಣಿ ಅಂತಹ ಲೇಖಕಿಯರ ಹೆಸರುಗಳನ್ನೂ ಸಹ ವೇದಿಕೆಗಳಲ್ಲಿ ಹೆಸರಿಸುವುದೇ ಇಲ್ಲ. ಕಾರಣ ಕೇಳಿದರೆ ಸಾಹಿತ್ಯದ ಮುಖ್ಯ ವಾಹಿನಿಗೆ ಅವರ ಕೊಡುಗೆ ಏನು ಎಂದು ಕೇಳುತ್ತಾರೆ. ಇದು ಲೇಖಕಿಯರಿಗೆ ಸ್ವಲ್ಪ ಕಷ್ಟವೆ ಆಯಿತು. ಹಾಗಾಗಿಯೇ ಲೇಖಕಿಯರು ಬೇರೆಯದೇ ಗುಂಪು, ಬೇರೆಯದೇ ಸಮ್ಮೇಳನ, ಕವಿ ಗೋಷ್ಠಿ ಮಾಡಿಕೊಳ್ಳುವ ಅನಿವಾರ್ಯತೆ ಸೃಷ್ಟಿಯಾಯಿತು.

10.ಪ್ರಸ್ತುತ ದಿನಗಳಲ್ಲಿ ನಮ್ಮ ಮಕ್ಕಳಲ್ಲಿ ಓದುವ ಅಭಿರುಚಿ ಬೆಳೆಸಲು ಏನು ಮಾಡಬಹುದು? ಈ ವಿಷಯದಲ್ಲಿ ನಿಮ್ಮ ಸಲಹೆ ಏನು?

ಈಗಿನ ಮಕ್ಕಳಲ್ಲಿ ಓದುವ ಅಭಿರುಚಿ ಬೆಳೆಸುವುದು ಕಷ್ಟ. ಇತ್ತೀಚಿನ ತಂತ್ರಜ್ಞಾನ ಬಂದ ಮೇಲೆ ಓದುವ ಅಭಿರುಚಿ ಹೊರಟೇ ಹೋಗಿದೆ ಎನ್ನಬಹುದು. ಕನ್ನಡ ಕಾದಂಬರಿ ಓದುಗರನ್ನು ಹುಟ್ಟು ಹಾಕಲು ಅ.ನ.ಕೃ ಅವರು ಮಾಡಿದ್ದು ದೊಡ್ಡ ಸಾಹಸ. ಈಗ ಬಹಳ ಶಾಲೆಗಳಲ್ಲಿ ಕನ್ನಡ ಕಲಿಸುತ್ತಿಲ್ಲ. ನಾವು ಪಾಠ ಕಲಿಸುವಾಗ ಕನ್ನಡವನ್ನು ಮೂರನೇ ಭಾಷೆಯಾಗಿ ತೆಗೆದುಕೊಂಡು ಓದಿ puc ಗೆ ಬಂದ ಮಕ್ಕಳು, ಒಂದು ಪದ್ಯವೂ ಅರ್ಥ ಆಗದೆ ಕಣ್ಣು ಕಣ್ಣು ಬಿಡುತ್ತಿದ್ದರು. ನಾವುಗಳೆಲ್ಲ ಅವರಿಗೆ ಅ ಆ ಇ ಈ, ಕಾಗುಣಿತದಿಂದ ಹೇಳಿಕೊಟ್ಟು, ಕನ್ನಡ ಕಲಿಸಿದ್ದು ಇದೆ. ಈಗಲೂ ಇದು ಮುಂದುವರೆದಿದೆ.

ಈಗೆಲ್ಲ ಹೇಗಾಗಿದೆ ಎಂದರೆ ಅವರಿಗೆ ಕಥೆ ಅರ್ಥ ಆಗಿದ್ದರೆ ಸಾಕು, ಪ್ರಶ್ನೆಗೆ ಉತ್ತರ ಇದ್ದರೆ ಸರಿ, ಒತ್ತು ಕೊಂಬು ದೀರ್ಘ ಇದನ್ನೆಲ್ಲ ನೋಡುವುದು ಬೇಡ, ಪಾಸು ಮಾಡಿಬಿಡಿ ಎನ್ನುವಂತೆ ಆಗಿದೆ. ಹೀಗಾದರೆ ಕನ್ನಡವೂ ಒಂದು ದಿನ ಸಂಸ್ಕೃತದ ದಾರಿ ಹಿಡಿಯುತ್ತದೆ. ಲಂಕೇಶ್ ಅವರು ಬಹಳ ವರ್ಷಗಳ ಹಿಂದೆಯೇ ಹೀಗೆ ಹೇಳಿದ್ದರು. “ಸಂಸ್ಕೃತ ಒಂದು ದಿನ ಹೇಗೆ ಬೇಡವಾಯಿತೋ, ಹಾಗೆಯೇ ಒಂದು ದಿನ ಕನ್ನಡವೂ ಬೇಡವಾಗುತ್ತದೆ” ಎಂದಿದ್ದರು. ಅದು ಈಗ ನಿಜವಾಗುತ್ತಿದೆ. ಹೀಗೆಯೇ ಮುಂದುವರೆದರೆ ಕನ್ನಡ ಆಡು ನುಡಿ ಆಗಿ ಉಳಿಯುವುದಿಲ್ಲ, ಬರೀ ಸಾಹಿತ್ಯ ಉಳಿಯುತ್ತದೆ. ಸಾಹಿತ್ಯ ಹೆಚ್ಚು ಜನರಿಗೆ ಬೇಕಾಗಿಲ್ಲ. ಈ ಎಲ್ಲ ಅಪಾಯ ಕನ್ನಡಕ್ಕೆ ಕಾದಿದೆ.

ಆದರೂ ತುಂಬಾ ಸಂಘ ಸಂಸ್ಥೆಗಳು, ಬಹಳಷ್ಟು ತಂದೆ ತಾಯಿಗಳು ಕನ್ನಡದ ಕುರಿತು ಕಾಳಜಿ ಹೊಂದಿದ್ದಾರೆ. ಹೀಗಾಗಿ ಹೆಚ್ಚು ನಿರಾಶರಾಗುವುದು ಬೇಡ, ಕನ್ನಡದ ಉಳಿವಿಗಾಗಿ ನಮ್ಮ ಕೈಲಾದಷ್ಟು ಮಾಡೋಣ.

11. ನಿಮ್ಮ ಇಷ್ಟದ ಲೇಖಕರು ಯಾರು, ನೀವು ಮತ್ತೆ ಮತ್ತೆ ಓದಲು ಇಷ್ಟಪಡುವ ಕೃತಿಗಳ ಬಗ್ಗೆ ಹೇಳಿ. ಹಾಗೆ ನೀವು ಆಸೆಪಟ್ಟು ನಿಮ್ಮ ಇಷ್ಟದ ಲೇಖಕ/ಲೇಖಕಯರನ್ನು ಭೇಟಿಯಾಗಿ ಮಾತನಾಡಿಸಿದ ಕ್ಷಣದ ನೆನಪುಗಳನ್ನು ಹಂಚಿಕೊಳ್ಳಿ.

ಇಷ್ಟದ ಲೇಖಕರು ಎಂದು ಒಬ್ಬರನ್ನೇ ಹೆಸರಿಸುವುದು ಕಷ್ಟ. ನನಗೆ ಲಂಕೇಶ್ ಪತ್ರಿಕೆ ಇಷ್ಟ, ರವಿ ಬೆಳಗೆರೆ ಇಷ್ಟ, ಅನಂತ ಮೂರ್ತಿ ಅವರ ಕಥೆಗಳು ಇಷ್ಟ, ಅಡಿಗರ ಪದ್ಯಗಳು ಇಷ್ಟ, ಜಿ.ಎಸ್.ಶಿವರುದ್ರಪ್ಪ ನವರ ಸುಗಮ ಸಂಗೀತಕ್ಕೆ ಅಳವಡಿಸಿರುವ ಕವನಗಳು ಇಷ್ಟ. ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ.

ಹಾಗೆ ಬೈರಪ್ಪನವರ ಸಾಹಿತ್ಯದ ಬಗ್ಗೆ ತುಂಬಾ ಕೆಲಸ ಮಾಡಿದ್ದೇನೆ. ನಾನು ಅವರ ಕುರಿತು ಬರೆದಿರುವ ಚಿತ್ತ ಭಿತ್ತಿ ಎನ್ನುವ ಪುಸ್ತಕದ ಹೆಸರು ಹಾಗೂ ನನ್ನ ಹೆಸರು ಎರಡನ್ನೂ ಅವರ ಎಲ್ಲ ಪುಸ್ತಕಗಳ ಕೊನೆಯಲ್ಲಿ ಹಾಕಿಸಿದ್ದಾರೆ. ಅದು ನನಗೊಂದು ಹೆಮ್ಮೆ. ನಾನು ಅವರ ಪರ್ವ, ಉತ್ತರಕಾಂಡ ಮತ್ತೆ ಅವರ ಎಲ್ಲ ಕಾದಂಬರಿಗಳ ಬಗ್ಗೆ ಬರೆಯುವಾಗ ಬಹಳಷ್ಟು ಬಾರಿ ಭೇಟಿ ಆಗುತ್ತಿದ್ದೆ.

ಬಹಳಷ್ಟು ಜನ ಬೈರಪ್ಪ ನವರ ಬಗ್ಗೆ ಅವರು ಯಾರೊಂದಿಗೂ ಮಾತಾಡುವುದಿಲ್ಲ, ನಗುವುದಿಲ್ಲ, ಚರ್ಚಿಸುವುದು ಇಲ್ಲ ಎಂದೆಲ್ಲ ತಿಳಿದಿರುವುದು ದೊಡ್ಡ ತಪ್ಪು. ಅವರು ನಮ್ಮ ನಿಮ್ಮಂತೆ ಚೆನ್ನಾಗಿಯೇ ಮಾತನಾಡುತ್ತಾರೆ. ಅವರೂ ಸಾಮಾನ್ಯ ಮನುಷ್ಯರು. ಅವರು ನನಗೆ ತುಂಬಾ ಸಲಹೆ ಕೊಟ್ಟರು. ಹಾಗೆಯೇ ನಾವು ಅವರನ್ನು ಟೀಕಿಸಿದರೂ ಬೇಸರಿಸಿಕೊಳ್ಳುವುದಿಲ್ಲ.

ಅವರಿಗೆ 90 ವರ್ಷ ತುಂಬಿದಾಗ ನಾನು ಮೈಸೂರಿಗೆ ಹೋಗಿ ಅವರಿಗೆ ಹಣ್ಣು ಕೊಟ್ಟು, ಕಾಲಿಗೆ ನಮಸ್ಕರಿಸಿ ಬಂದಿದ್ದೆ. ಅವರ ಎಲ್ಲ ಕಾದಂಬರಿಗಳನ್ನು ನಾನು ಬಹಳಷ್ಟು ಬಾರಿ ಓದಿದ್ದೇನೆ.

12. ಹೊಸ ಲೇಖಕರಿಗೆ ನಿಮ್ಮ ಸಂದೇಶವೇನು?

ಹೊಸ ಲೇಖಕರಿಗೆ ಸಂದೇಶ ಎಂದರೆ, ಬೇರೆಯವರನ್ನು ಅನುಕರಣೆ ಮಾಡಿ ಬರೆಯುವವರಿಗೆ ಹೇಳಬೇಕಾಗುತ್ತದೆ. ಕೆಲವರು ಹಾಗೆ ಮಾಡುತ್ತಾರೆ. ಲೇಖಕಿ ಶ್ರೀಮತಿ ಸಂಧ್ಯಾ ಶರ್ಮಾ ಅವರು ಹೇಳಿದ ಹಾಗೆ ಒಳಗಿನಿಂದ ಒತ್ತರಿಸಿಕೊಂಡು ಬರುವವರೆಗೂ ಏನನ್ನೂ ಬರೆಯಬೇಡಿ ಎಂದು. ಮತ್ತೆ ಕೆಲವರಿಗೆ ಕನ್ನಡವನ್ನು ಸರಿಯಾಗಿ ಬರೆಯಿರಿ, ಓದಿರಿ ಎಂದು ಹೇಳಬೇಕಾಗುತ್ತದೆ. ಇದೆಲ್ಲ ಒಂದು ವರ್ಗದವರಿಗೆ ಮಾತ್ರ.

ಮತ್ತೊಂದು ವರ್ಗದವರು ತುಂಬಾ ಚೆನ್ನಾಗಿ ಬರೆಯುತ್ತಿದ್ದಾರೆ. ಇವರಿಗೆ ನಮ್ಮ ಸಲಹೆ ಸಂದೇಶದ ಆವಶ್ಯಕತೆಯಿಲ್ಲ, ಇವರುಗಳಿಗೆ ಬದಲಾದ ಕಾಲದ ಅರಿವಿದೆ, ಬದಲಾದ ತಂತ್ರಜ್ಞಾನದ ಅರಿವಿದೆ, ಬದಲಾಗಿರುವ ಅಭಿರುಚಿಯ ಅರಿವಿದೆ, ಬದಲಾದ ಓದುಗ ಸಮೂಹದ ಅರಿವಿದೆ. ಇವರುಗಳು ನವೋದಯ ಸಾಹಿತ್ಯ , ನವ್ಯ ಸಾಹಿತ್ಯ, ಪ್ರಗತಿಶೀಲ ಸಾಹಿತ್ಯ, ದಲಿತ ಬಂಡಾಯ ಸಾಹಿತ್ಯ ,ಸ್ತ್ರೀವಾದಿ ಸಾಹಿತ್ಯ, ನವ್ಯೋತ್ತರ ಸಾಹಿತ್ಯವನ್ನೂ ದಾಟಿ ಮುಂದೆ ಬಂದಿದ್ದಾರೆ . ನಮ್ಮಂತಹ ಕೆಲವರು ಒಂದು ಕಾಲಘಟ್ಟದಲ್ಲಿ ಉಳಿದು ಬಿಟ್ಟಿದ್ದೇವೇನೋ ಅನಿಸುತ್ತದೆ.

ಎಚ್.ಎಲ್. ಪುಷ್ಟ ಹೇಳುವಂತೆ ಸಾಹಿತ್ಯದ ಪರಿಧಿಯಲ್ಲಿ ಇರುವವರಿಗೆ ಏನೂ ಭಯ ಇಲ್ಲ, ಈಗಲೂ ಸಾಹಿತ್ಯ ಚೆನ್ನಾಗಿಯೆ ಬರುತ್ತಿದೆ. ಸಾಹಿತ್ಯದ ಪರಿಧಿಯಿಂದ ಹೊರಗೆ ಇರುವವರಿಗೆ ಇದರ ಕುರಿತು ಭಯವಿದೆ, ಏನೂ ಸಾಹಿತ್ಯ ಬರುತ್ತಿಲ್ಲ ಎಂದು. ಹಾಗಾಗಿ ಇದರ ಕುರಿತು ಹೆಚ್ಚು ಯೋಚಿಸುವ ಅಗತ್ಯವಿಲ್ಲ ಎನಿಸುತ್ತಿದೆ. ಹಿಂದಿನಂತೆಯೇ ಈಗಲೂ ಒಳ್ಳೆಯ ಸಾಹಿತ್ಯದ ಸೃಷ್ಟಿ ಆಗುತ್ತಿದೆ.

13. ನೀವು ನಮ್ಮ ಪುಸ್ತಕ ಅವಲೋಕನ ಬಳಗದ ಸದಸ್ಯರೂ ಆಗಿದ್ದೀರಿ. ನಮ್ಮ ಬಳಗದ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ.

ಪುಸ್ತಕ ಅವಲೋಕನ ಬಳಗದ ಬಗ್ಗೆ ನನಗೆ ಉತ್ತಮ ಅಭಿಪ್ರಾಯ ಇದೆ. ಈ ಬಳಗ ಆರಂಭ ಆದಾಗ ಪುಸ್ತಕ ವಿಮರ್ಶೆ ಬರೆಯಬಹುದು ಎಂದಿದ್ದರು. ನನ್ನ ಪುಸ್ತಕದ ಕೆಲವು ಸಾಲುಗಳನ್ನು ಬರೆದಿದ್ದೆ. ಉತ್ತಮ ಪ್ರತಿಕ್ರಿಯೆ ಬಂದಿತ್ತು.

ಶ್ರೀಮತಿ ವೀಣಾ ನಾಯಕ್ ಒಬ್ಬರೇ ತುಂಬಾ ಪುಸ್ತಕಗಳನ್ನು ಕುರಿತು ಬರೆಯುತ್ತಿದ್ದರು. ನಾನು ಸಣ್ಣ ಸಣ್ಣ ಲೇಖನಗಳನ್ನು ಬರೆಯುವಾಗ ಇನ್ನೂ ಹೆಚ್ಚು ಬರೆಯಿರಿ ಎಂದು ವೀಣಾ ನಾಯಕ್ ಪ್ರೋತ್ಸಾಹ ನೀಡಿದ್ದರು. ನಾನು ಬದುಕಿನಲ್ಲಿ ತಿಂದ ಪೆಟ್ಟುಗಳಿಂದ ನಿರಾಶಾವಾದದ ಮಾತನಾಡುವಾಗ , ಅಷ್ಟೊಂದು ನಿರಾಶರಾಗುವ ಆವಶ್ಯಕತೆ ಇಲ್ಲ, ಬದುಕು ತುಂಬಾ ದೊಡ್ಡದು ಎಂದೆಲ್ಲ ಹೇಳಿದ್ದರು. ನಂತರ ಶಶಿಕಲಾ ವೀರಸ್ವಾಮಿ ಅವರ ಆತ್ಮಕಥೆಗೆ ದೀರ್ಘ ವಿಮರ್ಶೆ ಬರೆದಿದ್ದೆ. ನನಗೆ ಇಲ್ಲಿನ ಅಭಿಯಾನದಲ್ಲಿ ಭಾಗವಹಿಸುವುದು ತುಂಬಾ ಇಷ್ಟದ ಹವ್ಯಾಸ. ಈ ವೇದಿಕೆಯಲ್ಲಿ ಬರುವ ಕೆಲವು ಲೇಖನಗಳನ್ನು ಆಧರಿಸಿ, ನನ್ನ ಓದಿನ ನೆನಪನ್ನು ಸೇರಿಸಿ ನನ್ನ ಅನುಭವದ ಆಧಾರದಿಂದ ಮತ್ತಷ್ಟು ವಿಷಯ ಸೇರಿಸಿ ಅನೇಕ ಐಎಎಸ್ ವಿದ್ಯಾರ್ಥಿಗಳಿಗೆ ಪಾಠ ಮಾಡಿದ್ದೇನೆ. ಇನ್ನೂ ಕೆಲವೊಂದು ಪಾಠ ಮಾಡುವುದಿದೆ. ಈ ಬಳಗಕ್ಕೆ ನಾನು ಈ ಸಮಯದಲ್ಲಿ ಕೃತಜ್ಞತೆ ಸಲ್ಲಿಸಲು ಬಯಸುತ್ತೇನೆ.

ಇಷ್ಟು ಹೊತ್ತು ನಮ್ಮೊಂದಿಗೆ ನಿಮ್ಮ ಸಮಯ ವಿನಿಯೋಗಿಸಿ ನಿಮ್ಮ ಬದುಕು ಬರಹಗಳ ಕುರಿತು ನಮ್ಮೊಂದಿಗೆ ಹಂಚಿಕೊಂಡಿದ್ದಕ್ಕಾಗಿ, ನಮ್ಮ ಬಳಗದ ಬಗ್ಗೆ ಅತ್ಯುತ್ತಮ ನುಡಿಗಳನ್ನು ಆಡಿರುವ ನಿಮಗೆ ಹೃತ್ಪೂರ್ವಕ ಧನ್ಯವಾದಗಳು ಮೇಡಂ.

ನಿಮ್ಮಿಂದ ಇನ್ನಷ್ಟು ಕೃತಿಗಳು ರಚನೆಯಾಗಲಿ, ಇನ್ನಷ್ಟು ಮತ್ತಷ್ಟು ಪ್ರಶಸ್ತಿ ಪುರಸ್ಕಾರಗಳು ನಿಮ್ಮ ಮುಡಿಗೇರಲಿ ಎಂದು ಬಳಗದ ಪರವಾಗಿ ಆಶಿಸುತ್ತೇವೆ. ನಿಮ್ಮಂತಹ ದೊಡ್ಡ ಲೇಖಕಿ ನಮ್ಮೊಂದಿಗೆ ಇದ್ದಾರೆ ಎನ್ನುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ. ಶುಭವಾಗಲಿ ಮೇಡಂ.

  • ಕೃಪೆ : ಪುಸ್ತಕ ಅವಲೋಕನ

ಹಿಂದಿನ ಸಂಚಿಕೆ :


  • ವಸಂತ ಗಣೇಶ್

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW