ರಷ್ಯನ್‌ ಹಾಗೂ ಭಾರತದ ಖ್ಯಾತ ವರ್ಣಚಿತ್ರಕಾರ- ಸ್ವೆಟೊಸ್ಲಾವ್ ರೋರಿಚ್

ಸ್ವೆಟೊಸ್ಲಾವ್ ರೋರಿಚ್ ರಷ್ಯಾದ ಖ್ಯಾತ ಚಿತ್ರಕಲಾವಿದ. ಮತ್ತು ಭಾರತೀಯ ಚಿತ್ರರಂಗದ ಪ್ರಪ್ರಥಮ ನಟಿ ದೇವಿಕಾ ರಾಣಿ ಅವರ ಪತಿ. ತಾತಗುಣಿ ಎಸ್ಟೇಟ್ ನ ಮಾಲೀಕ. ಸ್ವೆಟೊಸ್ಲಾವ್ ರೋರಿಚ್ ಬಗ್ಗೆ ಇನ್ನಷ್ಟು ಕುತೂಹಲಕಾರಿ ವಿಷಯಗಳನ್ನು ಮುಂದೆ ಓದಿ…

ರಷ್ಯಾ ದಲ್ಲಿ ೧೯೪೭ ರಲ್ಲಿ ಬೋಲ್ಷೆವಿಕ್ ಕ್ರಾಂತಿ ನಡೆದಾಗ, ರಷ್ಯಾ ಬಿಟ್ಟು ಭಾರತಕ್ಕೆ ಬಂದ ಪ್ರಸಿದ್ಧ ರಷ್ಯನ್‌ ಕಲಾವಿದ  ನಿಕೋಲಸ್ ರೋರಿಚ್‌ ತನ್ನ ಪ್ರಬುದ್ಧ ಮತ್ತು ಸುಂದರವಾದ ವರ್ಣಚಿತ್ರಗಳ ಮೂಲಕ ಪ್ರಖ್ಯಾತಿ ಪಡೆದಿದ್ದರು. ವರ್ಣಚಿತ್ರಕಾರ, ವಿಜ್ಞಾನಿ, ಪ್ರಯಾಣಿಕ, ಸಾರ್ವಜನಿಕ ವ್ಯಕ್ತಿ, ಬರಹಗಾರ, ಚಿಂತಕ – ಅವರ ಬಹುಮುಖ ಉಡುಗೊರೆಯನ್ನು ಬಹುಶಃ ನವೋದಯ ಯುಗದ ಟೈಟಾನ್‌ಗಳೊಂದಿಗೆ ಮಾತ್ರ ಹೋಲಿಸಬಹುದು.

ಫೋಟೋ ಕೃಪೆ : pinterest (ನಿಕೋಲಸ್ ರೋರಿಚ್ )

ನಿಕೋಲಸ್ ರೋರಿಚ್ ಅವರ ಸೃಜನಶೀಲ ಪರಂಪರೆ ಅಗಾಧವಾಗಿದೆ. ಹಿಮಾಚಲ ಪ್ರದೇಶದ ಕುಲ್ಲು ವಿನ ಬೆಟ್ಟಗುಡ್ಡ, ನದಿಗಳು ನಿಕೊಲಸ್ ಅವರನ್ನು ಆಕರ್ಷಿಸಿದ್ದ ಕಾರಣ, ಅವರು ಕುಟುಂಬ ಸಮೇತರಾಗಿ ಕುಲ್ಲುವಿನಲ್ಲಿ ನೆಲೆಸ ತೊಡಗಿದರು. ಅವರ ಕುಂಚದಲ್ಲಿ ರಷ್ಯಾದ ಸೌಂದರ್ಯವಷ್ಟೇಯಲ್ಲದೆ ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವ ಚಿತ್ರಣವನ್ನು ಕಾಣಬಹುದಾಗಿತ್ತು. ಭಾರತೀಯ ಸಂಸ್ಕೃತಿಯನ್ನು ದೇಶ ವಿದೇಶಗಳಲ್ಲಿ ನಿಕೋಲಸ್ ಪರಿಚಯಿಸಿದ್ದರು. ಮತ್ತು ಮೊದಲನೇಯ ಮಹಾ ಯುದ್ಧದ ಸಮಯದಲ್ಲಿ ಕಲೆ ಮತ್ತು ವಾಸ್ತುಶಿಲ್ಪವನ್ನು ಸಂರಕ್ಷಿಸುವ ಕಾರ್ಯಕರ್ತರು ಕೂಡ ಆಗಿದ್ದರು. ಅವರ ರೆಡ್ ಕ್ರಾಸ್ ಚಿನ್ಹೆ, ಶಾಂತಿ ಸಂಕೇತದ ಬ್ಯಾನರ್ ಚಿತ್ರ ಸಾಕಷ್ಟು ಪ್ರಸಿದ್ಧವಾಗಿತ್ತು. ಹಿಮಾಲಯ ಅಡೋಬ್ ಆಫ್ ಲೈಟ್,  ೧೯೨೯ರಲ್ಲಿ ರೋರಿಚ್ ಅವರನ್ನು ಪ್ಯಾರಿಸ್ ವಿಶ್ವವಿದ್ಯಾಲಯವು ಶಾಂತಿ ನೊಬೆಲ್ ಪ್ರಶಸ್ತಿಯನ್ನು ನೀಡಿತು. ನಿಕೋಲಸ್ ಅವರ ಏಳು ಸಾವಿರಕ್ಕೂ ಹೆಚ್ಚು ವರ್ಣಚಿತ್ರಗಳು, ಅಸಂಖ್ಯಾತ ಸಾಹಿತ್ಯ ಕೃತಿಗಳು – ಪುಸ್ತಕಗಳು, ಪ್ರಬಂಧಗಳು, ಲೇಖನಗಳು, ದಿನಚರಿಗಳು ಪ್ರಪಂಚಾದ್ಯಂತ ಹರಡಿವೆ.

ಫೋಟೋ ಕೃಪೆ : shapiroauctions ( ಸ್ವೆಟೊಸ್ಲಾವ್ ಅವರ ಕುಂಚದಲ್ಲಿ ಅರಳಿದ ದೇವಿಕಾ ರಾಣಿ )

ಫೋಟೋ ಕೃಪೆ : painting planet ( ಸ್ವೆಟೊಸ್ಲಾವ್ ಅವರ ಕುಂಚದಲ್ಲಿ ಅರಳಿದ ಜವಾಹರ ಲಾಲ್ ನೆಹರು)

ಆ ಮಹಾನ್ ಚಿತ್ರ ಕಲಾವಿದನ ಮಗನೆ ಸ್ವೆಟೊಸ್ಲಾವ್ ರೋರಿಚ್. ೧೯೪೭ರಲ್ಲಿ ನಿಕೋಲಸ್‌ನ ಮರಣದ ನಂತರ, ಅವರ ಮಗ ಸ್ವೆಟೊಸ್ಲಾವ್ ಬೆಂಗಳೂರಿನ ತಾತಗುಣಿ ಎಸ್ಟೇಟ್ ಗೆ ಬಂದು ನೆಲೆಸಿದರು. ತಂದೆಯಂತೆ ರೋರಿಚ್ ಕೂಡ ಖ್ಯಾತ ಕಲಾವಿದರಾಗಿದ್ದರು. ತಂದೆಯ ಗರಡಿಯಲ್ಲಿ ಪಳಗಿದ ರೋರಿಚ್ ಮುಖ್ಯವಾಗಿ ಭೂನಕ್ಷೆಗಳು ಮತ್ತು ಭಾವಚಿತ್ರಗಳನ್ನು ರಚಿಸುವಲ್ಲಿ ನಿಸ್ಸಿಮರಾಗಿದ್ದರು. ಅವರು ೧೯೧೯ ರಲ್ಲಿ ಇಂಗ್ಲೆಂಡ್‌ನಲ್ಲಿ ವಾಸ್ತುಶಿಲ್ಪವನ್ನು ಅಧ್ಯಯನ ಮಾಡಿದರು. ಮತ್ತು ಇನ್ನಷ್ಟು ವಾಸ್ತುಶಿಲ್ಪ ಅಧ್ಯಯನಕ್ಕಾಗಿ ೧೯೨೦ರಲ್ಲಿ ಕೊಲಂಬಿಯಾ ವಿಶ್ವವಿದ್ಯಾಲಯವನ್ನು ಪ್ರವೇಶಿಸಿದರು. ಅವರ ವರ್ಣಚಿತ್ರಗಳನ್ನು ಮೊದಲು ಭಾರತದಲ್ಲಿ ೧೯೩೬ -೧೯೩೭ ರಲ್ಲಿ ಪ್ರದರ್ಶಿಸಲಾಯಿತು. ನೆಹರು ಹಾಗು ಇಂದಿರಾ ಗಾಂಧಿಯವರ ಭಾವಚಿತ್ರಗಳು ಅವರ ಕುಂಚದಲ್ಲಿ ಅರಳಿವೆ. ಅವು ಇಂದಿಗೂ ದೆಹಲಿಯ ಪಾರ್ಲಿಮೆಂಟ್ ನ ಸಭಾಂಗಣದಲ್ಲಿ ಇರಿಸಲಾಗಿದೆ. ರೋರಿಚ್ ಅವರ ಚಿತ್ರಕಲೆಯಲ್ಲಿನ ಸಾಧನೆಗೆ ಪದ್ಮಭೂಷಣ ಪ್ರಶಸ್ತಿ ಮತ್ತು ಅಂತಾರಾಷ್ಟ್ರೀಯ ಪ್ರಶಸ್ತಿಯನ್ನು ಜವಾಹರಲಾಲ್ ನೆಹರು ಅವರು ನೀಡಿ ಗೌರವಿಸಿದ್ದರು.

ಫೋಟೋ ಕೃಪೆ : garga-archives

೧೯೪೫ ರಲ್ಲಿ ಭಾರತೀಯ ಚಿತ್ರರಂಗದ ಪ್ರಪ್ರಥಮ ನಟಿ ದೇವಿಕಾ ರಾಣಿಯವರನ್ನು ವರಿಸಿಕೊಂಡ ಮೇಲೆ ಬಹುಕಾಲ ತಾತಗುಣಿ ಎಸ್ಟೇಟ್ ನಲ್ಲಿ ಕಳೆದರು. ಮತ್ತು ಆರ್ಟ್ ಸ್ಕೂಲ್ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದರು. ಅವರ ಚಿತ್ರಗಳು ವೈಯಕ್ತಿಕ ಪ್ರದರ್ಶನಗಳನ್ನು ಕಂಡಿವೆ. ದೇವಿಕಾರಣಿಯವರ ಭಾವಚಿತ್ರವನ್ನು ತಮ್ಮ ಕುಂಚದಲ್ಲಿ ಸೆರೆ ಹಿಡಿದಿರುವ ಚಿತ್ರಗಳು ಚಿತ್ರ ರಸಿಕರ ಗಮನ ಸೆಳೆದಿವೆ. ಯು ಎಸ್ ಎಸ್ ಆರ್ ಚಿತ್ರಕಲಾ ಅಕಾಡೆಮಿಗೆ ಗೌರವ  ಸೂಚಕವಾಗಿ ಸ್ವೆಟೊಸ್ಲಾವ್  ಅವರ ಹೆಸರನ್ನಿಡಲಾಗಿದೆ. ಬಲ್ಗೇರಿಯನ್ ಅಕಾಡೆಮಿ ಆಫ್ ಆರ್ಟ್‌ನ ಗೌರವಾನ್ವಿತ ಸದಸ್ಯರಾಗಿದ್ದರು. ಬೆಂಗಳೂರಿನ ಚಿತ್ರಕಲಾ ಪರಿಷತ್ತಿನ ಟ್ರಸ್ಟಿಯೂ ಆಗಿದ್ದರು. ಮತ್ತು ಕಾಲೇಜು ಆರಂಭವಾಗುವ ಮುನ್ನ ಅವರ ಸಲಹೆಗಳನ್ನು ಸ್ವೀಕರಿಸಲಾಗಿತ್ತು. ಚಿತ್ರಕಲೆಯನ್ನು ಹೊರತು ಪಡಿಸಿ ಅವರಿಗೆ ಸಸ್ಯಶಾಸ್ತ್ರ, ರಾಸಾಯನಿಕ ಶಾಸ್ತ್ರ, ಜ್ಯೋತಿಷ್ಯಶಾಸ್ತ್ರ, ಸೇರಿದಂತೆ ವಿಜ್ಞಾನದಲ್ಲಿ ಆಸಕ್ತಿಯಿತ್ತು. ಜನವರಿ ೩೦, ೧೯೯೩ ರಲ್ಲಿ ಸ್ವೆಟೊಸ್ಲಾವ್ ನಿಧನರಾದರು.

ಭಾರತದ ಮನಾಲಿಯಲ್ಲಿರುವ ರೋರಿಚ್ ಕುಟುಂಬದ ನಿವಾಸವು, ಈಗ ವರ್ಣಚಿತ್ರಗಳ ಸೊಗಸಾದ ಗ್ಯಾಲರಿಗೆ ನೆಲೆಯಾಗಿದೆ. ಇದನ್ನು ಇಂಟರ್ನ್ಯಾಷನಲ್ ರೋರಿಚ್ ಟ್ರಸ್ಟ್ ಉಸ್ತುವಾರಿಯನ್ನು ವಹಿಸಿಕೊಂಡಿದೆ. ಮತ್ತು ಇದನ್ನು ‘ರೋರಿಚ್ ಹೆರಿಟೇಜ್ ಮ್ಯೂಸಿಯಂ’ ಎಂದು ಹೆಸರಿಸಲಾಗಿದೆ. ೧೯೬೨ ರಲ್ಲಿ  ಸ್ವೆಟೋಸ್ಲಾವ್ ರೋರಿಚ್ ಅವರು ಈ ಗ್ಯಾಲರಿಯನ್ನು ಸ್ಥಾಪಿಸಿದ್ದರು.

ತಾತಗುಣಿ ಎಸ್ಟೇಟ್ ವಿವಾದ : 

ಫೋಟೋ ಕೃಪೆ : Deccan herald

ತಾತಗುಣಿ ಎಸ್ಟೇಟ್ ಹೋರಾಟಕ್ಕೆ ದಶಕಗಳ ಇತಿಹಾಸವೇ ಇದೆ. ೧೯೭೫ ರೋರಿಚ್ ಮತ್ತು ದೇವಿಕಾ ರಾಣಿ ನಿಧನದ ನಂತರ ಈ ಹಲವು ರೀತಿಯ ಚಾರಿತ್ರಿಕ ಹೋರಾಟವನ್ನೇ ಕಂಡಿದೆ. ಆಗರ್ಭ ಶ್ರೀಮಂತೆ ಹಾಗೇ ಪ್ರಸಿದ್ಧ ಅಭಿನೇತ್ರಿಯಾಗಿದ್ದ ದೇವಿಕಾರಾಣಿಯವರು ರಷ್ಯಾದ ಪ್ರಸಿದ್ಧ ಚಿತ್ರ ಕಲಾವಿದ ರೋರಿಕ್​​ರನ್ನು ಮದುವೆಯಾದರು.ಅನಂತರ ಬಹುಕಾಲ ಇಬ್ಬರು ಇದೆ ಸ್ಥಳದಲ್ಲಿ ವಾಸವಾಗಿದ್ದರು. ೧೯೭೫ ರಲ್ಲಿ ಎಸ್ಟೇಟ್ ನೋಡಿಕೊಳ್ಳಲು ೧೨೫ ಕುಟುಂಬಗಳಿದ್ದರು.

ಎಸ್ಟೇಟ್ ನಲ್ಲಿ ಲಿಮೋನಿಯಾ ಎಂಬ ಗಿಡದ ಬೀಜಗಳಿಂದ ಸುಗಂಧಿ ಎಣ್ಣೆ ತಯಾರಿಸಿ ವಿವಿಧ ಕಂಪೆನಿಗಳಿಗೆ ಮಾರಲಾಗುತ್ತಿತ್ತು. ಈ ಕಾರ್ಖಾನೆಗಾಗಿ ೧೫೦ ಕಾರ್ಮಿಕರು ಹಗಲಿರುಳು ದುಡಿಯುತ್ತಿದ್ದರು. ತಿಂಗಳಿಗೆ ಇದರಿಂದ ರೋರಿಕ್ ದಂಪತಿಗಳಿಗೆ ೪೦ ‑೫೦ ಲಕ್ಷ ರೂ. ಬರುತ್ತಿತ್ತು. ದೇವಿಕಾರಾಣಿ ಹಾಗೂ ರೋರಿಕ್ ದಂಪತಿಗಳು ಇಲ್ಲಿನ ಕೆಲಸಗಾರರನ್ನು ಜೀತದಾಳಾಗಿ ದುಡಿಸಿಕೊಳ್ಳುತ್ತಿದ್ದರು ಎಂದು ದೊಡ್ಡ ಹೋರಾಟ ನಡೆದಿತ್ತು. ಆ ಬಳಿಕ ಇಲ್ಲಿ ತಾತ್ಕಾಲಿಕವಾಗಿ ಕೆಲಸ ನಿಲ್ಲಿಸಿ ಕೆಲಸಗಾರರನ್ನು ಎಸ್ಟೇಟ್​​ನಿಂದ ಹೊರಹಾಕಲಾಯಿತು.

ಫೋಟೋ ಕೃಪೆ : Deccan herald

ಈ ದಂಪತಿಗಳಿಗೆ ಮಕ್ಕಳಿಲ್ಲದ ಕಾರಣ ಆಸ್ತಿಗಾಗಿ ಕಂಡವರ ಕಣ್ಣಿಗೆ ಬಿದ್ದು ಕೋರ್ಟ್ ನಲ್ಲಿ ಮೊಕದ್ದಮೆ ಹೂಡಬೇಕಾಯಿತು. ಮತ್ತು ಎಸ್ಟೇಟ್ ನಿರ್ವಹಣೆಯಿಲ್ಲದೆ ಸಾಕಷ್ಟು ಹಾನಿಗೂ ಒಳಪಟ್ಟಿತು. ಹಿಂದೆ ಇಲ್ಲಿ ಸುಮಾರು ೮೦೦ ಎಕರೆಗೂ ಹೆಚ್ಚು ವಿಸ್ತಾರವಾದ ಸುಗಂಧ ಭರಿತ ಸಸ್ಯಗಳ ಪ್ರದೇಶವಿತ್ತು. ಆದರೆ ಭೂಮಾಫಿಯಾ ತಲೆ ಎತ್ತುತ್ತಿದ್ದಂತೆ ಬಹುತೇಕ ಸುತ್ತಲಿನ ಪ್ರದೇಶಗಳು ಅಕ್ರಮವಾಗಿ ಒತ್ತುವರಿಯಾದವು. ಸ್ವೆಟೋಸ್ಲಾವ್ ರೋರಿಚ್  ಅವರ ಎಷ್ಟೋ ಅಮೂಲ್ಯ ಚಿತ್ರಕಲೆಗಳು ಕಳುವಾದವು, ಈಗ ೪೬೮ – ಎಕರೆ ರೋರಿಚ್ ಮತ್ತು ದೇವಿಕಾರಣಿಯರ ಎಸ್ಟೇಟ್ ಸರ್ಕಾರದ ಸುಪರ್ದಿಯಲ್ಲಿದೆ.

ಸ್ವೆಟೋಸ್ಲಾವ್ ರೋರಿಚ್ ೩೦೦ ಕ್ಕೂ ಹೆಚ್ಚು ಚಿತ್ರಗಳನ್ನು ರಚಿಸಿದ್ದಾರೆ. ಅವುಗಳಲ್ಲಿ ೧೦೦ ಚಿತ್ರಕಲಾ ಪರಿಷತ್ ನಲ್ಲಿವೆ. ೨೪೮ ರಷ್ಟು ಚಿತ್ರಕಲೆಗಳು ೨೫ ವರ್ಷಗಳಿಂದ ವೆಂಕಟಪ್ಪ ಆರ್ಟ್ ಗ್ಯಾಲರಿಯಲ್ಲಿ ಪ್ರದರ್ಶನವಿಲ್ಲದೆ ಧೂಳು ಹಿಡಿದಿವೆ ಎನ್ನುವ ನೋವಿನ ಸಂಗತಿ ಒಂದೆಡೆಯಾದರೆ, ಇನ್ನೊಂದೆಡೆ ಅವರ ಎಸ್ಟೇಟ್ ನ್ನು ಚಿತ್ರನಗರಿಯನ್ನಾಗಿ ಮಾಡಲು ಸರ್ಕಾರ  ಮುಂದಾಗುತ್ತಿರುವುದು ಚಿತ್ರಕಲಾವಿದರ ಆಕ್ರೋಶಕ್ಕೆ ಗುರಿಯಾಗಿದೆ. ಸುಮಾರು ೨೫ ಕೋಟಿ ರೂ ವೆಚ್ಚದಲ್ಲಿ ಚಿತ್ರನಗರಿಯನ್ನು ನಿರ್ಮಿಸಲು ಸರ್ಕಾರ ತೀರ್ಮಾನಿಸಿತ್ತು. ಆದರೆ ತಾತಗುಣಿ ಎಸ್ಟೇಟ್ ನ್ನುಅಂತರಾಷ್ಟ್ರೀಯ ಗುಣಮಟ್ಟದಲ್ಲಿ  ಚಿತ್ರನಗರಿ ಮಾಡುವ ಸರ್ಕಾರದ ಎಲ್ಲ ಪ್ರಯತ್ನವನ್ನು ಕಲಾವಿದರು ವಿಫಲಗೊಳಿಸಿದ್ದಾರೆ. ಇಂದು ಎಸ್ಟೇಟ್ ನ್ನು ಸರಿಯಾಗಿ ನೋಡಿಕೊಳ್ಳುವವರು ಇಲ್ಲದ್ದರಿಂದ ಅತಂತ್ರವಾಗಿ ಹೋಗಿದೆ. ಮುಂದೆ ಈ ಎಸ್ಟೇಟ್ ಚಿತ್ರ ಕಲಾವಿದರ ಪ್ರೋತ್ಸಾಹಿಸುವ ಮ್ಯೂಸಿಯಂ ಆಗುವುದೋ ಅಥವಾ ಫಿಲಂಸಿಟಿ ಆಗಿ ತಲೆಯೆತ್ತುವುದೋ ಕಾದು ನೋಡಬೇಕಿದೆ.


  • ಶಾಲಿನಿ ಹೂಲಿ ಪ್ರದೀಪ್

0 0 votes
Article Rating

Leave a Reply

0 Comments
Inline Feedbacks
View all comments
Home
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW