ಖ್ಯಾತ ಚಿಂತಕ ಡಾ.ವಡ್ಡಗೆರೆ ನಾಗರಾಜಯ್ಯ ಅವರು ಬರೆದ ಒಂದು ಕವನ ಮನ ಮುಟ್ಟುವುದಷ್ಟೇ ಅಲ್ಲ, ಮನವನ್ನು ಬಡಿದ್ದೆಬ್ಬಿಸುತ್ತದೆ.’ಏನು ಸ್ವಾಮಿ ನಿಮ್ಮ ಒಳಗುದಿ?’, ತಪ್ಪದೆ ಓದಿ …
ಕಾಷಾಯವ ಹೊದ್ದು ನಾಯ ಚತ್ತವ ಹೊತ್ತು ಬಳಲುವವರೇ
ಏನು ಸ್ವಾಮಿ ನಿಮ್ಮ ಬೇಗುದಿ?
ಬನ್ನಿ ಗುರುವೇ...
ಬನ್ನಿ ಅಜ್ಜನವರೇ ಬನ್ನಿ…
ಬನ್ನಿ ಬುದ್ಧ್ಯೋರಾ ಬನ್ನಿ…
ಏನು ಸ್ವಾಮಿ ನಿಮ್ಮ ಒಳಗುದಿ?
ಹೇಳಿ ಐನೋರಾ ಹೇಳಿ ಅಪ್ಪೋರಾ ಹೇಳಿ…
ಹೇಳಿ ತಾತೋರಾ ಹೇಳಿ…
ಏನು ಸ್ವಾಮಿ ನಿಮ್ಮ ನೆನೆಗುದಿ?
ಕೂರ್ರಿ ಸ್ವಾಮ್ಗೊಳಾ… ಕೂರ್ರಿ ಅಪ್ಪಗೊಳಾ ಕೂರ್ರಿ...
ನುಲಿಕೆ ಮಂಚದ ಮೇಲೆ ಕುಂಡ್ರ ಬನ್ನಿ… ಒಪ್ಪಿಸಿಕೊಳ್ಳಿ ನಿಮ್ಮ ಹರಕೆಯ...
ಏನು ಪಾಲೈಸುವಿರಿ ಸ್ವಾಮೀಜಿ,
ಏನು ಲಾಲೈಸುವಿರಿ ಅಪ್ಪಾಜಿ,
ಚಿತ್ತೈಸಿ ಅಪ್ಪಣೆ ಕೊಡಿಸಿರಿ ಪ್ರಿಯ ಗುರೂಜಿ…
ತುಂಬಿಸಿಕೊಳ್ಳಿರಿ ನಿಮ್ಮ ಫೋನ್ ಪೇ… ಗೂಗಲ್ ಪೇ ಜೋಳಿಗೆಯ...
ಹರಿವಾಣದಲ್ಲಿ ಮಡಗಿರಿ ನಿಮ್ಮ ಶ್ರೀಪಾದ…
ನಮ್ಮ ನೆತ್ತಿ ಮೇಲೆ ಮಡಗಿರಿ ನಿಮ್ಮ ಗುರುಪಾದ…
ನಿಮ್ಮ ಪುಣ್ಯಪಾದ ಮಡಗಿರಿ ಸ್ವಾಮಿ ನಮ್ಮ ಎದೆ ಮೇಲೆ...
ಸಿರಿಪಾದ ತೊಳೆದೇವು ಗುರುಪಾದಕ್ಕೆ ಆಪಾದಮಸ್ತಕ ಪೊಡಮಟ್ಟೇವು,
ಪಾದೋದಕ ಪ್ರಸಾದ ಸವಿದೇವು…
ಧನಕನಕ ಕಾಣಿಕೆ ಸಲ್ಲಿಸೇವು,
ಒಪ್ಪಿಸಿಕೊಳ್ಳಿ ಬುದ್ಧಿ ನಮ್ಮ ಮಂಡೆಗಳಾ...
ನಮ್ಮ ಮಂಡೆಗಳ ಒಪ್ಪಿಸಿಕೊಳ್ಳಿ…. ನೊರೆವಾಲು,
ತುಪ್ಪದಲ್ಲಿ ಹುರಿದ ಖರ್ಜೂರ ಬಾದಾಮಿ
ಒಪ್ಪಿಸಿಕೊಳ್ಳಿ ಒಪ್ಪದಿಂದ
ಮುಪ್ಪಿರುವತನಕ ಉಪ್ಪು ಸಕ್ಕರೆಕಲ್ಲು ನೆಲ್ಲಕ್ಕಿಬಾನ ಬೆಲ್ಲ ಪಾನಕ ಕರಬೂಜ ಚಾಜ. ನೀರು ಮಜ್ಜಿಗೆ ತಾಂಬೂಲ ಉಂಟು ಸವಿಯಲು ಬೆಂಡು ಬತ್ತಾಸು ಸುಖಟೇಜ ಒಪ್ಪಿಸಿಕೊಳ್ಳಿ…
ಗುರುಮಠಕ್ಕೆ ಬರುತೀವಿ ಬುದ್ಧಿ
ಕುಂಬಳಕಾಯಿ ತರುತೀವಿ
ಕೊಬ್ಬರಿ ಟೆಂಗಿನಕಾಯಿ ಸೀಯಾಳ ಕೊಡುತೀವಿ
ಕೈಕಟ್ಟಿ ನಡುಬಗ್ಗಿ ನಿಲ್ಲುತೀವಿ ತಲೆಬಾಗಿ
ಒಪ್ಪಿಸಿಕೊಳ್ಳಿ ರಾಗಿ ಜ್ವಾಳ ಹಲಸಂದಿ ಹೆಸರು...,
ಆರು ಹೆಣ್ಣಿನ ಮೇಲೆ
ಒಂದು ಗಂಡು ಹೆತ್ತ ತಂದೆತಾಯಿ ನಾವು…
ನಿಮ್ಮ ಪಾದದ ಮೇಲೆ
ಹಣೆಮಣಿದು ಬಿದ್ದಿರುವ
ನಮ್ಮ ಹೆಂಗಳ ಸಲುವಿರಿ ಸ್ವಾಮಿ ನಿಮ್ಮ ಕಂಗಳ ಬೆಳಕಿನಂತೆ!
ಕಾಷಾಯವ ಹೊದ್ದು ನಾಯ ಚತ್ತವ ಹೊತ್ತು ಬಳಲುವವರೇ
ಏನು ಸ್ವಾಮಿ ನಿಮ್ಮ ಬೇಗುದಿ?
- ಡಾ.ವಡ್ಡಗೆರೆ ನಾಗರಾಜಯ್ಯ (ಸರ್ಕಾರಿ ಕಾಲೇಜಿನ ಇಂಗ್ಲಿಷ್ ಉಪನ್ಯಾಸಕರು,ಚಿಂತಕರು, ಲೇಖಕರು)
