‘ಲೀಕ್ ಔಟ್’ ಪುಸ್ತಕ ಪರಿಚಯ – ಶಾಲಿನಿ ಹೂಲಿ ಪ್ರದೀಪ್

ಕನ್ನಡ ರಂಗಭೂಮಿ, ಚಲನಚಿತ್ರರಂಗದ ಹೊಸ ಸಂಚಲನ ನಟಿ ಅಕ್ಷತಾ ಪಾಂಡವಪುರ ಅವರ ‘ಲೀಕ್ ಔಟ್’ ಪುಸ್ತಕದ ಕುರಿತು ನಾನು ಬರೆದ ಒಂದು ಕಿರು ಪರಿಚಯ, ತಪ್ಪದೆ ಓದಿ…

ಪುಸ್ತಕ : ಲೀಕ್ ಔಟ್
ಲೇಖಕಿ : ಅಕ್ಷತಾ ಪಾಂಡವಪುರ
ಪ್ರಕಾಶನ : ಚಾರುಮತಿ ಪ್ರಕಾಶನ
ಬೆಲೆ : ೧೫೦ /
ಪುಟಗಳು: ೧೧೨

ಅಕ್ಷತಾ ಪಾಂಡವಪುರ ಕನ್ನಡದ ಖ್ಯಾತ ನಟಿ ಎನ್ನುವುದು ಎಲ್ಲರಿಗೂ ತಿಳಿದ ವಿಚಾರ. ನೀನಾಸಂನಲ್ಲಿ ರಂಗ ಶಿಕ್ಷಣ, ದೆಹಲಿಯಲ್ಲಿ ರಾಷ್ಟ್ರೀಯ ನಾಟಕ ಶಾಲೆಯಲ್ಲಿ ರಂಗ ತರಬೇತಿ ಪಡೆದು ಪರಿಪೂರ್ಣ ನಟಿಯಾದವರು. ಅವರಿಗೆ ಹೆಸರು ತಂದುಕೊಟ್ಟ ‘ಒಬ್ಬಳು’ ಏಕವ್ಯಕ್ತಿ ಸಿನಿಮಾ ಮತ್ತು ‘ಪಿಂಕಿ ಎಲ್ಲಿ’ ಸಿನಿಮಾಕ್ಕಾಗಿ ಅಂತಾರಾಷ್ಟ್ರೀಯ ಪ್ರಶಸ್ತಿ ಅವರ ಅಭಿನಯಕ್ಕೆ ಸಿಕ್ಕ ಪ್ರತಿಫಲಗಳು. ಅಕ್ಷತಾ ಅಭಿನೇತ್ರಿಯಾಗಿ ಎಲ್ಲರ ಮನ ಗೆದ್ದವರು. ಆದರೆ ಸಾಹಿತ್ಯ, ಬರವಣಿಗೆ ಎಂದಾಗ ಅವರಿಂದ ಇನ್ನಷ್ಟು ನಿರೀಕ್ಷೆ ಮೂಡುವುದು ಸಹಜ. ನಾನು ಅಕ್ಷತಾ ಅವರಿಗೆ ಪುಸ್ತಕ ಕಳುಹಿಸಿ ಕೊಡಿ ಎಂದು ಕೇಳಿದಾಗ ಸಂತೋಷದಿಂದ ಕಳಿಸಿಕೊಟ್ಟರು. ಅವರ ಚೊಚ್ಚಲ ಕಥಾಸಂಕಲನ ‘ಲಾಕ್ ಔಟ್’ ನನ್ನ ಕೈ ಸೇರಿದಾಗ ಮುಖಪುಟ ತುಂಬಾನೇ ಇಷ್ಟಾಯಿತು. ಪುಸ್ತಕ ತೆರೆದಾಗ ಪುಸ್ತಕದಲ್ಲಿ 11 ಕತೆಗಳಿದ್ದವು.  ಒಂದೊಂದು ಕತೆ ಓದುತ್ತಾ ಹೋದಾಗ ಮನಸ್ಸನ್ನು ಗೆಲ್ಲುತ್ತಾ ಹೋಯಿತು.

ಅದರಲ್ಲಿ ಆಯ್ದ ನಾಲ್ಕು ಕತೆಗಳನ್ನು ಮಾತ್ರ ನಿಮ್ಮ ಮುಂದೆ ಹಂಚಿಕೊಳ್ಳುತ್ತಿದ್ದೇನೆ.

  • ಪುಸ್ತಕದಲ್ಲಿ ಬರುವ ಮೊದಲನೆಯ ಕತೆ ‘ಟ್ರೊಲ್ ಕನ್ನಡತಿ ‘ಟ್ರೊಲ್  ‘

ಈ ಕತೆಯಲ್ಲಿ ಬರುವ ನವ್ಯಾ ಎನ್ನುವ ಪಾತ್ರಧಾರಿಣಿ , ಒಬ್ಬ ಸಿನಿಮಾ ನಟಿ. ಕಷ್ಟಪಟ್ಟು ಬದುಕನ್ನು ಕಟ್ಟಿಕೊಂಡವಳು. ಆದರೆ ಸಿನಿಮಾದಲ್ಲಿನ ಒಂದು ಹಾಡು ಅವಳ ಜೀವನವನ್ನೇ ಬದಲಾಯಿಸಿ ಬಿಡುತ್ತದೆ. ನಿರ್ದೇಶಕ ಹಾಗು ನಿರ್ಮಾಪಕರ ಕೈಚಳಕದಿಂದ ಅವಳ ಪಾತ್ರ ತೆರೆಯ ಮೇಲೆ ಬೋಲ್ಡ್ ಆಗಿ ಕಾಣಿಸಿದಾಗ ಟ್ರೋಲಿಗರ ಬಾಯಿಗೆ ಆಹಾರವಾಗಿ ಹೋಗುತ್ತಾಳೆ. ಅದೇ ಸಿನಿಮಾದಲ್ಲಿ ಅವಳ ಜೊತೆ ನಟಿಸಿದ ನಾಯಕ ಮಾತ್ರ ಎಲ್ಲರ ಕಣ್ಣಿಗೂ ಸೂಪರ್ ಹೀರೊ ಆಗಿ ಹೋಗುತ್ತಾನೆ. ಆದರೆ  ಆ ಸಿನಿಮಾದಿಂದಾಗಿ ಅವಳ ಕೈಯಲ್ಲಿದ್ದ ಹಲವಾರು ಪ್ರಾಜೆಕ್ಟ್ ಗಳು ಜಾರಿ ಹೋಗುತ್ತವೆ. ಆಗ ನವ್ಯಾ ಹಾಗೂ ಅವರ ಕುಟುಂಬದವರು ಪಡುವ ಮಾನಸಿಕ ವೇದನೆಯನ್ನು ಅಕ್ಷತಾ ಸುಂದರವಾಗಿ ಕತೆಯ ರೂಪಕೊಟ್ಟು ಒಂದು ಟ್ರೋಲ್ ಮನುಷ್ಯನ ಬದುಕಿನಲ್ಲಿ ಎಷ್ಟೆಲ್ಲ ಆಟಾಡುತ್ತದೆ ಎನ್ನುವುದನ್ನು ಈ ಕತೆಯ ಮೂಲಕ ಹೇಳಿದ್ದಾರೆ .

  • RIP

ಫೇಸ್ಬುಕ್ ಲ್ಲಿ  ಆಕೆಯ ಬೋಲ್ಡ್ ಮಾತುಗಳು, ಆಕೆಯ ನಿರಂತರ UPDATES ನ್ನು ಫಾಲೋ ಮಾಡುತ್ತಿದ್ದ ದರ್ಶನಗೆ ಒಂದು ದಿನ ದೊಡ್ಡ ಶಾಕಿಂಗ್ ನ್ಯೂಸ್ ಕಾಯ್ದಿತ್ತು. RIP, Chandana chandu ….ಎಂದು ಫೇಸ್ಬುಕ್ ಲ್ಲಿ ಓದುತ್ತಾನೆ. ಅರೇ ….ಚಂದನ ಅಂದರೆ ಅವಳೇ ಅದೇ ಬೋಲ್ಡ್ ಹುಡುಗಿ. ಅವಳಿಗೆ ಏನಾಯಿತು? ಅವಳ ಸಾವಿಗೆ ಕಾರಣವೇನೆಂದು ಹುಡುಕುತ್ತಾ ಪೆಚ್ಚಾಡುತ್ತಾನೆ. ಸೂಸೈಡ ಮಾಡಿಕೊಂಡಳೆಂದಾಗ ನೋವು ಅನುಭವಿಸುತ್ತಾನೆ. ಅವಳ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಪರಿಚಯವೇ ಇಲ್ಲದ ಅವಳ ಊರಿಗೆ ಹುಡುಕಿಕೊಂಡು ಹೋಗುತ್ತಾನೆ. ರಕ್ತ ಸಂಬಂಧವೇ ಇಲ್ಲದ, ಮುಖಾಮುಖಿ ಭೇಟಿಯೇ ಆಗಿರದ ಎಲ್ಲೋ ದೂರದಲ್ಲಿದ್ದಂತಹ ಆಕೆ ದರ್ಶನ ಮನಸ್ಸನ್ನು ಆವರಿಸಿರುತ್ತಾಳೆ. ಆಕೆಯ ಸಾವು ದರ್ಶನ್ ನಿಗೆ ನಿದ್ದೆಗೆಡಿಸಿ ಬಿಡುತ್ತದೆ. ಎಷ್ಟೋ ಸಂಬಂಧಗಳು ನಮಗೆ ಅರಿವಿಲ್ಲದೆ ಮನಸ್ಸಿಗೆ ಹತ್ತಿರವಾಗುತ್ತದೆ. ಆ ಸಂಬಂಧದಲ್ಲಿ ಎಲ್ಲೋ ಒಂದು ಸಂತೋಷ ಕಾಣುತ್ತಿರುತ್ತೇವೆ. ಅದು ದೂರವಾದಾಗ ಮನಸ್ಸು ನಮಗೆ ಅರಿವಿಲ್ಲದೆ ಕುಗ್ಗುತ್ತದೆ. ಆ ಕಣ್ಣಿಗೆ ಕಾಣದ ಮನಸ್ಸಿಗೆ ಮುದ ನೀಡುವ ಆ ಸಂಬಂಧವನ್ನು ಈ ಕತೆಯಲ್ಲಿ ಕಾಣಬಹುದು.

  • ಲೀಕ್ ಔಟ್

ರಾಶಿ ಮತ್ತು ರಮೇಶ್ ಲಿವಿಂಗ್ ಟುಗೆದರ್ ರಿಲೇಷನ್ ಶಿಪ್ ಲ್ಲಿ ಇದ್ದವರು. ಮೂರೂ ವರ್ಷದ ಹಿಂದೆ ಇಬ್ಬರ ನಡುವೆ ಮನಸ್ತಾಪವಾಗಿ ದೂರವಾಗಿದ್ದಾರೆ. ಆದರೆ ಆ ಒಂದು ದಿನ ಒಬ್ಬರಿಗೊಬ್ಬರು ಭೇಟಿ ಆಗುವ ಸಮಯ ಕೂಡಿ ಬಂದಿದೆ. ರಾಶಿ, ರಮೇಶನನ್ನು ನೋಡಲು ತುಂಬಾ ಕಾತುರದಿಂದ ಕಾಯುತ್ತಿದ್ದಾಳೆ. ಅದೊಂದು ರಮೇಶನ ಪುಸ್ತಕ ಬಿಡುಗಡೆಯ ದೊಡ್ಡ ಸಮಾರಂಭ . ಆ ಶುಭಗಳಿಗೆಗಾಗಿ ರಮೇಶ ಕನಸ್ಸು ಕಾಣುತ್ತಿದ್ದ. ಆ ದಿನ ಅಂದು ನನಸ್ಸಾಗಲಿದೆ. ರಾಶಿ ತುಂಬಾನೇ ಖುಷಿಯಾಗಿದ್ದಾಳೆ. ಅವನ ಸಂತೋಷದಲ್ಲಿ ಪಾಲ್ಗೊಳ್ಳಲು ಸಮಾರಂಭಕ್ಕೆ ಹೋಗಿದ್ದಾಳೆ. ರಾಶಿಗೆ ರಮೇಶ ಮೇಲಿದ್ದ ಪ್ರೀತಿ ಸ್ವಲ್ಪವೂ ಕಮ್ಮಿ ಆಗಿಲ್ಲ. ಅದೇ ಹಳೆಯ ಪ್ರೀತಿ, ಅದೇ ಕಾಳಜಿ ಇದೆ. ಇವತ್ತು ಅವನಿಗೆ ತನ್ನ ಭಾವನೆಯನ್ನು ಮತ್ತೆ ವ್ಯಕ್ತ ಪಡಿಸಬೇಕು ಅನ್ನುವಷ್ಟರಲ್ಲಿ ಅವಳಿಗೆ ದೊಡ್ಡ ಸರ್ಪ್ರೈಸ್ ರಮೇಶ ಕೊಡುತ್ತಾನೆ, ಆ ಸರ್ಪ್ರೈಸ್ ಏನು ಅಂತ ಪುಸ್ತಕ ಓದಿ…

  • ಸವತಿ ಅಲ್ಲ ಸ್ನೇಹಿತೆ

ಇಬ್ಬರಿಗೂ ಅವನೇ ಬೇಕು. ಒಬ್ಬಳು ಸುಹಾನಾ, ಇನ್ನೊಬ್ಬಳು ಸ್ನೇಹಿತೆ ಅಲ್ಲ ಸವತಿ. ಸುಹಾನಾ ಖ್ಯಾತ ಬರಹಗಾರ್ತಿ. ಕಾಲೇಜಿನಲ್ಲಿ ಓದುವಾಗ ಅವನೊಂದಿಗೆ ಪ್ರೀತಿ ಹುಟ್ಟಿ, ಮೊಳೆತು ಅವನೊಂದಿಗೆ ಲಿವಿಂಗ್ ಟುಗೆದರ್ ಸಂಬಂಧ ಇಟ್ಟುಕೊಂಡು, ಅವನು ಒಂದು ದಿನ ವಿದೇಶಕ್ಕೆಹಾರಿ ಹೋದ. ಅವನು ಬಂದೇ ಬರುತ್ತಾನೆ ಎಂದು ಕಾದು ಕೂತ ಸುಹಾನಳಿಗೆ ಬಂದಿದ್ದು ಒಂದು ಹೆಸರಿಲ್ಲದ ಕಾಗದದ ಪತ್ರ. ಅದೇ ಸ್ನೇಹಿತೆಯಲ್ಲ ಸವತಿಯ ಪತ್ರ. ಆಕೆ ಸುಹಾನಳಿಗೆ ತನ್ನ ಗಂಡನನ್ನು ಬಿಟ್ಟು ಬಿಡು, ನೀನು ಮಾಡುತ್ತಿರುವುದು ಹಾದರತನ ಎಂದೆಲ್ಲ ಅವಳಿಗೆ ಬೈದಿರುತ್ತಾಳೆ. ಅದಕ್ಕೆ ಪ್ರತಿಯಾಗಿ ಸುಹಾನಾ ಒಂದು ಪತ್ರ ಬರೆಯುತ್ತಾಳೆ. ಆ ಪತ್ರದಲ್ಲಿ ನಿಜವಾದ ಸವತಿ ಯಾರು ? ಎಂದು ವಿವರಿಸುತ್ತಾಳೆ. ಗಾಢವಾಗಿ ಪ್ರೀತಿಸುವ ಪ್ರಿಯತಮೆಯನ್ನು ಬಿಟ್ಟಿ ಬೇರೊಬ್ಬಳನ್ನು ಮದುವೆ ಆದ ಅವಳು ಸವತಿಯೋ …ನಾನೋ??? ಎಂದು ಪ್ರಶ್ನೆ ಹಾಕುವುದರ ಮೂಲಕ ‘ಲೀಕ್ ಔಟ್’ ಪುಸ್ತಕದ ಕೊನೆಯ ಕತೆ ಇಲ್ಲಿಗೆ  ಮುಗಿಯುತ್ತದೆ…

ಈ ಪುಸ್ತಕದಲ್ಲಿ ಇನ್ನು ಸಾಕಷ್ಟು ಕತೆಗಳನ್ನ ಕಾಣಬಹುದು. ಪುಸ್ತಕವನ್ನು ಕೊಂಡು ಓದುವ ಕುತೂಹಲವನ್ನು ಓದುಗರಿಗೆ ಬಿಟ್ಟಿದ್ದೇನೆ. ಪುಸ್ತಕದಲ್ಲಿ ಎಡಿಟಿಂಗ್ ನಲ್ಲಿ ಸ್ವಲ್ಪ ಎಡವಿದಂತಿದ್ದರೂ, ಕತೆಯ ನಿರೂಪಣಾ ಶೈಲಿ ಎಲ್ಲವನ್ನು ಮರೆಮಾಚುತ್ತದೆ.

ಅಂದ ಹಾಗೆ ‘ಲಿಂಕ್ ಔಟ್’ ಇಲ್ಲಿಗೆ ನಿಂತಿಲ್ಲ, ಮುಂದೊರೆಯುತ್ತದೆ …ಎನ್ನುವ ಸಣ್ಣ ಸುಳಿವನ್ನು ಅಕ್ಷತಾ ಕೊಟ್ಟಿದ್ದಾರೆ. ಅದೊಂದು ಸಂತೋಷದ ವಿಷಯ. ಅಕ್ಷತಾ ಅವರ ಲೀಕ್ ಔಟ್ ಕೃತಿ ಚೊಚ್ಚಲ ಕೃತಿಯಾದರೂ ಅವರು ಆಯ್ಕೆ ಮಾಡಿಕೊಂಡ ಕಥಾವಸ್ತುಗಳು ಆಧುನಿಕ ಸಮಸ್ಯೆಗಳನ್ನು ಎತ್ತಿ ಹಿಡಿದಿವೆ. ಅಕ್ಷತಾ ಒಬ್ಬ ನಟಿಯಷ್ಟೇ ಅಲ್ಲ , ಒಬ್ಬ ಸಾಮಾಜಿಕ ಕಾಳಜಿಯಿರುವಂತಹ ಲೇಖಕಿ ಎಂದು ಈ ಪುಸ್ತಕದ ಮೂಲಕ ತೋರಿಸಿಕೊಟ್ಟಿದ್ದಾರೆ. ಚಾರುಮತಿ ಪ್ರಕಾಶನದಲ್ಲಿ ಪ್ರಕಟಕೊಂಡ ಈ ಪುಸ್ತಕ ಓದುಗರ ಗಮನ ಸೆಳೆಯುತ್ತದೆ. ಅಕ್ಷತಾ ನಟನೆಯ ಜೊತೆಗೆ ಸಾಹಿತ್ಯಲೋಕದಲ್ಲಿ ಇನ್ನಷ್ಟು ಅನಾವರಣಗೊಳ್ಳಲಿ ಎಂದು ಆಕೃತಿ ಕನ್ನಡ ಶುಭಕೋರುತ್ತದೆ.


  • ಶಾಲಿನಿ ಹೂಲಿ ಪ್ರದೀಪ್ (ಆಕೃತಿಕನ್ನಡ ಮ್ಯಾಗಝಿನ್ ಸಂಪಾದಕಿ)

5 1 vote
Article Rating

Leave a Reply

0 Comments
Inline Feedbacks
View all comments
Home
Search
All Articles
Buy
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW