ಸ್ವಂತ ತಾಯಿಯ ಬಹುಪತಿತ್ವ

‘ಸಾರ್‌, ಸಾರ್‌, ನೀವೇ ಹೇಳಿ ನಮ್ಮ ತಾಯಿ ನಂಜಮ್ಮನವರದು ಬಹುಪತಿತ್ವ ಎಂದು ಹೇಳಬೇಕೋ ಇಲ್ಲ ಧಣಿ ಪಂಚಲಿಂಗೇಗೌಡರದು ಬಹುಪತ್ನಿತ್ವ ಅನ್ನಬೇಕೋ, ಎರಡೂ ಬೇಡ ಎಂದರೆ ನಾನೂ ಸೇರಿದಂತೆ ನಾಲ್ಕು ಮಕ್ಕಳ ತಂದೆಯಾಗಿದ್ದ ನಮ್ಮಪ್ಪ ಗೋವಿಂದಯ್ಯನನ್ನು ನಪುಂಸಕ ಅನ್ನಬೇಕೋ? ನೀವು ಹೇಗೆ ಉತ್ತರ ಹೇಳಿಕೊಟ್ಟರೆ ನಾನು ಹಾಗೆಯೇ ಕರೆಯುತ್ತೇನೆ’. ಕೆ. ಸತ್ಯನಾರಾಯಣ ಅವರ ರಚನೆಯ ಸಣ್ಣಕತೆಯನ್ನು ತಪ್ಪದೆ ಮುಂದೆ ಓದಿ…

ನಾನು ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಗೆ ಓದುತ್ತಿದ್ದ ದಿನಗಳಲ್ಲಿ ಬಿಳಿಗಿರಿರಂಗನ ವನಪ್ರಾಂತ್ಯದ ಚಿಕ್ಕಮರಿ ನನ್ನ ಸಹಪಾಠಿಯಾಗಿದ್ದರು. ನಮ್ಮಲ್ಲಿ ಸಹಪಾಠಿಗಳ ಹೆಸರನ್ನು ತುಂಡು ಮಾಡಿ ಇಂಗ್ಲಿಷಿನವರ ಹೆಸರಿನಂತೆ ಪರಿವರ್ತಿಸಿಕೊಳ್ಳುವ ತುಂಟು ಅಭ್ಯಾಸಕ್ಕನುಗುಣವಾಗಿ ನಾವೆಲ್ಲ ಚಿಕ್ಕಮರಿಯನ್ನು ಮರಿಯನ್‌ ಎಂದೇ ಕರೆಯುತ್ತಿದ್ದೆವು. ಅನುಲೋಮ, ವಿಲೋಮ ವಿವಾಹ ಪದ್ಧತಿ, ಸಂಸ್ಕೃತೀಕರಣ, ಬಹುಪತ್ನಿತ್ವ, ಬಹುಪತಿತ್ವ—ಇದೆಲ್ಲದರ ಬಗ್ಗೆಯೆಲ್ಲಾ ನಿರಂತರ ಚರ್ಚೆ, ಸಂಕಿರಣ, ಪ್ರಬಂಧ ಮಂಡನೆ. ಯಾವುದೇ ಸಮಾರಂಭವಾಗಲೀ, ಯಾರದೇ ಉಪನ್ಯಾಸವಾಗಲೀ, ಉಪನ್ಯಾಸಕಾರರು ಮದ್ರಾಸ್‌, ಬರೋಡಾ, ಲಂಡನ್‌ ಎಲ್ಲಿಂದಲೇ ಬಂದಿರಲಿ, ಮರಿಯನ್‌ ಕೇವಲ ಒಂದೇ ಪ್ರಶ್ನೆಯನ್ನೇ ಯಾವಾಗಲೂ ಕೇಳುತ್ತಿದ್ದರು (ಮರಿಯನ್‌ ದಲಿತರು ಎಂಬುದನ್ನು ಮುಂದಿನ ಸಾಲುಗಳ ಅವಶ್ಯಕತೆಗಾಗಿ ಹೇಳಲೇಬೇಕಾಗಿದೆ).

“ಸಾರ್‌, ಸಾರ್‌, ನೀವೇ ಹೇಳಿ ನಮ್ಮ ತಾಯಿ ನಂಜಮ್ಮನವರದು ಬಹುಪತಿತ್ವ ಎಂದು ಹೇಳಬೇಕೋ ಇಲ್ಲ ಧಣಿ ಪಂಚಲಿಂಗೇಗೌಡರದು ಬಹುಪತ್ನಿತ್ವ ಅನ್ನಬೇಕೋ, ಎರಡೂ ಬೇಡ ಎಂದರೆ ನಾನೂ ಸೇರಿದಂತೆ ನಾಲ್ಕು ಮಕ್ಕಳ ತಂದೆಯಾಗಿದ್ದ ನಮ್ಮಪ್ಪ ಗೋವಿಂದಯ್ಯನನ್ನು ನಪುಂಸಕ ಅನ್ನಬೇಕೋ? ನೀವು ಹೇಗೆ ಉತ್ತರ ಹೇಳಿಕೊಟ್ಟರೆ ನಾನು ಹಾಗೆಯೇ ಕರೆಯುತ್ತೇನೆ.

“ಪಂಚಲಿಂಗೇಗೌಡರು ಪಂಚಾಯತಿ ಚೇರ್‌ಮನ್‌ ಆದರೂ ನಮ್ಮ ಕುಟುಂಬಕ್ಕೆ ಧಣಿ. ತಾತ-ಮುತ್ತಾತಂದಿರ ಕಾಲದಿಂದಲೂ ನಾವು ಅವರ ಮನೆತನಕ್ಕೆ ಜೀತದಾಳುಗಳಾಗಿದ್ದೆವು. ಪ್ರೈಮರಿ ಸ್ಕೂಲು ಓದುವಾಗ ಗೌಡರಿಗೂ ನಮ್ಮ ತಾಯಿ ನಂಜಮ್ಮನಿಗೂ ಸಂಬಂಧ-ವ್ಯವಹಾರ ಇದೆಯೆಂದು ಪಿಸು-ಪಿಸು ಮಾತಾಗಿ ನಮಗೆ ಕೇಳಿ ಬರುತ್ತಿತ್ತು. ಮಿಡಲ್‌ ಸ್ಕೂಲ್‌ ಓದುವ ಹೊತ್ತಿಗೆ ಗ್ಯಾರಂಟಿಯಾಗಿ ಗೊತ್ತಾಯಿತು. ಜೊತೆಯ ಹುಡುಗರೆಲ್ಲ ಮುಖಕ್ಕೆ ಹೊಡೆದ ಹಾಗ ನೇರವಾಗಿ ನಮಗೆ ಹೇಳೋರು. ಮಕ್ಕಳಾದ ನಮಗೆ ಗೊತ್ತಾಗಿದೆ ಎಂದು ಅಮ್ಮನಿಗೂ ಗೊತ್ತಾಯಿತು. ಅವಳು ಹೇಳುವ ಹಾಗಿಲ್ಲ, ನಾವು ಕೇಳುವ ಹಾಗೂ ಇಲ್ಲ. ಮಾತನಾಡದೇ ಸಂಕಟ ಅನುಭವಿಸುತ್ತಿದ್ದೆವು. ನನ್ನ ತಮ್ಮ ಮಲ್ಲೇಶಿ ಮಾತ್ರ ಅಮ್ಮನಿಗೆ ಒಂದು ಸಲ ಹಳೆ ಎಕ್ಕಡದಲ್ಲಿ ಹೊಡೆದ. ಅವಳ ಮುಖವನ್ನೆಲ್ಲಾ ಕಚ್ಚಿದ್ದ.

“ಅಪ್ಪನಿಗೂ ಇದು ಗೊತ್ತಿತ್ತು. ಆದರೆ ಸಂಸಾರ ನಡೆಯಬೇಕಲ್ಲ. ದಿನಕ್ಕ ಹನ್ನೆರಡು ಹದಿನೈದು ಘಂಟೆಗಳ ಕಾಲ ಗೌಡರ ಮನೆ, ತೋಟ, ಕೊಟ್ಟಿಗೆಯಲ್ಲೇ ಕಳೆಯುತ್ತಿತ್ತು. ದವಸ-ಧಾನ್ಯ, ಬಟ್ಟೆ-ಬರೆ, ಹಬ್ಬದ ಖರ್ಚಿಗೆ ಜಾಸ್ತಿ ದುಡ್ಡು ಬೇಕಾದಾಗ ಕೊಡುವುದನ್ನೆಲ್ಲ ಗೌಡರು ಎರಡೂ ಕೈ ಎತ್ತಿ ಕೊಡುತ್ತಿದ್ದರು. ಕೇವಲ ಮರ್ಯಾದೆಗೋಸ್ಕರ ಇದನ್ನೆಲ್ಲ ಒಂದೇ ಸಲ ಕಳೆದುಕೊಳ್ಳುವುದು ಜಾಣತನದ ಮಾತಾಗಿರಲಿಲ್ಲ. ಆದರೆ ಅಪ್ಪ-ಅಮ್ಮ ಜಗಳ ಕಾಯುತ್ತಿದ್ದರು. ಅಪ್ಪ ಕಳ್ಳು ಕುಡಿದುಕೊಂಡು ಬಂದು ಗಲಾಟೆ ಎಬ್ಬಿಸಿ ಹೊಡೆದಾಗ ಇಬ್ಬರೂ ಒಟ್ಟಿಗೇ ಮಲಗಿಕೊಳ್ಳುತ್ತಿದ್ದರು. ಒಂದು ನಾಲ್ಕು ದಿನ ಮನೆ ಪ್ರಶಾಂತವಾಗಿರೋದು. ಆಮೇಲೆ ಮತ್ತೆ ಜಗಳ. ಅಪ್ಪ ಕಳ್ಳು ಕುಡಿದುಕೊಂಡು ಗತಿಗೆಟ್ಟವನ ತರಹ ಮನೆಗೆ ಬರೋದು. ಅವ್ವನ ಮೈ ಮೇಲೆ ಬೀಳೋದು. ಅವಳನ್ನು ಕಾಡೋದು. ಇದೆಲ್ಲ ನಡೆಯುತ್ತಲೇ ಇತ್ತು. ಇದೆಲ್ಲ ಸೂರ್ಯ ಮರೆಯಾದ ನಂತರ. ನಮಗೆಲ್ಲ ಇದು ಅಭ್ಯಾಸವಾಗಿ, ಅವರು ಜಗಳ ಕಾದರೂ ನಮಗೆ ಅದು ಜಗಳ ಅಂತ ಅನಿಸುತ್ತಲೇ ಇರಲಿಲ್ಲ. ಹಗಲು ಹೊತ್ತು ಮಾತ್ರ ನಮ್ಮಪ್ಪ ನಪುಂಸಕನೇ. ಅವ್ವ ಹಾಕಿದ ಊಟ ಮಾಡಿಕೊಂಡು, ತಲೆ ಬಗ್ಗಿಸಿಕೊಂಡು ಪ್ರಶಾಂತವಾಗಿ ಕೈಲಿ ಕುಡಗೋಲನ್ನೋ ಗುದ್ದಲಿಯನ್ನೋ ಹಿಡಿದುಕೊಂಡು ಗೌಡರ ದೊಡ್ಡ ಮನೆ ಕಡೆ ಹೋಗುವನು. ನಮ್ಮ ತಾಯಿಯ ಬಹುಪತಿತ್ವ, ನಮ್ಮಪ್ಪನ ನಪುಂಸಕತ್ವ ಎರಡೂ ಒಟ್ಟಿಗೇ ನಮ್ಮೆದುರಿಗೇ ಒಂದು ಹದಿನೈದು ಇಪ್ಪತ್ತು ವರ್ಷ ನಡೀತು. ನಮಗೆ ತಾಯಿ ಇದ್ದರೂ ತಾಯಿಯಾಗಿರಲಿಲ್ಲ. ಅಪ್ಪ ಇದ್ದರೂ ಅಪ್ಪನಾಗಿರಲಿಲ್ಲ. ಇಲ್ಲ, ಇಲ್ಲ, ಇಬ್ಬರೂ ಅಷ್ಟು ಮಾತ್ರವೇ ಆಗಿರಲಿಲ್ಲ.”

ಫೋಟೋ ಕೃಪೆ : google

ಇಷ್ಟು ವಿವರಗಳನ್ನು ಚಿಕ್ಕಮರಿ ಅಲಿಯಾಸ್‌ ಮರಿಯನ್‌ ಯಾವುದೇ ಉದ್ವೇಗವಿಲ್ಲದೆ ಸಮಾಧಾನವಾಗಿ ಸ್ಪಷ್ಟವಾಗಿ ಹೇಳುತ್ತಿದ್ದರು. ಶುರುವಿಗೇ ಹೇಳಿದೆನೆಲ್ಲ, ಯಾವುದೇ ವಿದ್ಯಮಾನದ ಬಗ್ಗೆ ಚರ್ಚೆ-ವಿಚಾರ ಸಂಕಿರಣವಾದರೂ ಇಷ್ಟೇ ವಿವರ, ಒಂದೇ ಪ್ರಶ್ನೆ.

ಈಗ ನೀವೆಲ್ಲರೂ ಹೇಳಿ, ನಮ್ಮ ತಾಯಿಯದು ಬಹುಪತಿತ್ವವೋ ನಮ್ಮಪ್ಪನದು ನಪುಂಸಕತ್ವವೋ, ಇಲ್ಲ ಪಂಚಲಿಂಗೇಗೌಡರದು ಬಹುಪತ್ನಿತ್ವವೋ?

ಸಮಾಜಶಾಸ್ತ್ರ ವಿಭಾಗದ ನಮ್ಮ ಸಹಪಾಠಿಗಳಲ್ಲಿ, ಪ್ರಾಧ್ಯಾಪಕರುಗಳಲ್ಲಿ ಈ ಪ್ರಶ್ನೆ ಚೆನ್ನಾಗಿ ಬಾಯಿಪಾಠವಾಗಿ ಹೋಗಿತ್ತು. ಯಾರಾದರೂ ಸರಿಯೇ, ಏನೆಂದು ಉತ್ತರ ಹೇಳಿಯಾರು? ಎರಡು ವರ್ಷದ ಕೋರ್ಸ್‌ ಹಾಗೇ ಸುಮ್ಮನೆ ಮುಗಿದೇ ಹೋಯಿತು. ಆಮೇಲೆ ಎಲ್ಲವೂ ಮರೆತೂ ಹೋಯಿತು.

ಎರಡೂವರೆ ಮೂರು ದಶಕಗಳಾಯಿತು. ಈಚೆಗೆ ನಮ್ಮ ಇಲಾಖೆಯ ಮೇಲಧಿಕಾರಿಗಳು ದೆಲ್ಲಿಯಿಂದ ಬಂದಿದ್ದಾಗ ಮಾನ್ಯರ ಉತ್ತರ ಕರ್ನಾಟಕದ ಪ್ರವಾಸಕ್ಕೆ ನನ್ನನ್ನು ಸಂಪರ್ಕಾಧಿಕಾರಿಯಾಗಿ ನೇಮಿಸಿದ್ದರು. ಗೋಲ್‌ ಗುಂಬಜ್‌ ತೋರಿಸಿಕೊಂಡು ಬರುತ್ತಿರುವಾಗ ಹೊರ ಆವರಣದಲ್ಲಿ ಮರಿಯನ್‌ ಸಿಕ್ಕಿದರು. ಈಗವರು ವಿಜಯಪುರದಲ್ಲಿ ರಾಷ್ಟ್ರೀಕೃತ ಬ್ಯಾಂಕೊಂದರಲ್ಲಿ ಲೀಡ್‌ ಮ್ಯಾನೇಜರ್‌ ಆಗಿದ್ದರು. ಬಹಳ ವರ್ಷಗಳ ನಂತರದ ಭೇಟಿಯಾದ್ದರಿಂದ ಪರಸ್ಪರ ಯೋಗಕ್ಷೇಮ, ವೃತ್ತಿ ಪ್ರಗತಿ, ಕೌಟುಂಬಿಕ ವಿವರಗಳನ್ನೆಲ್ಲ ತಾಳೆ ಹಾಕಿ ನೋಡಿಕೊಂಡೆವು.

ಮಾತು ಮುಂದುವರೆದಂತೆ ನಾನು ಮರಿಯನ್‌ರನ್ನು ಈಗಲೂ ಊರ ಕಡೆ ಹೋಗುತ್ತಿದ್ದೀರಾ ಎಂದು ಪ್ರಾಸಂಗಿಕವಾಗಿ ಕೇಳಿದ್ದಕ್ಕೆ ಒಂದು ಕ್ಷಣದಲ್ಲೇ ಅವರು ತುಂಬಾ ಕೆರಳಿಬಿಟ್ಟರು.

ಇಲ್ಲ, ನಾನು ಹೋಗೋಲ್ಲ. ನಮ್ಮ ಅಣ್ಣ-ತಮ್ಮಂದಿರೂ ಹೋಗೋಲ್ಲ. ನಾವು ಎಂಎ ಓದುವಾಗ ಒಂದು ಪ್ರಶ್ನೆ ಕೇಳುತ್ತಿದ್ದೆನಲ್ಲ, ಪ್ರತಿ ವಾರ, ಪ್ರತಿ ಸಂಕಿರಣದಲ್ಲೂ—ಆ ಪ್ರಶ್ನೆಗೆ ಉತ್ತರ ಸಿಗುವ ತನಕ ನಾವು ಯಾರೂ ಊರ ಕಡೆ ಮುಖ ಹಾಕೋಲ್ಲ. ಈಗಲೂ ಪ್ರಶ್ನೆ ಹಾಗೇ ಇದೆ ಗೊತ್ತಾ?

ಹಾಗೆಂದವರೇ ಮುಖ ದಪ್ಪ ಮಾಡಿಕೊಂಡು, ಮುಷ್ಠಿ ಕಟ್ಟಿ, ನನ್ನ ಬಲಗೈ ಹಿಡಿದುಕೊಂಡು ದರದರನೆ ಗೊಮ್ಮಟದ ಮೇಲ್ಭಾಗಕ್ಕೆ ಕರೆದುಕೊಂಡು ಹೋದರು. ಮರಿಯನ್‌ ಏದುಸಿರು ಬಿಡುತ್ತಿದ್ದರು. ಹಾಗೆ ಏದುಸಿರು ಬಿಡುತ್ತಲೇ ಮೂರು ನಾಲ್ಕು ಮೆಟ್ಟಿಲು ಕೆಳಗೆ ಇಳಿದರು. ಮೂರು ದಶಕಗಳ ಹಿಂದೆ ತರಗತಿಗಳಲ್ಲಿ ಕೇಳುತ್ತಿದ್ದ ಪ್ರಶ್ನೆಯನ್ನೇ ಮತ್ತೆ ಮತ್ತೆ ಕೇಳಿದರು, ಕಿರುಚಾಡಿದರು, ಕೇಳುತ್ತಲೇ ಇದ್ದರು. ಗಂಟಲೇ ಕೊನೆಗೆ ಸೋತು ಹೋಯಿತು.

ನೋಡಿ, ಈಗಲೂ ಇಷ್ಟು ವರ್ಷಗಳಾದ ಮೇಲೂ ಈ ಪ್ರಶ್ನೆ ನನಗೇ ವಾಪಸ್‌ ಬರುತ್ತಿದೆಯೇ ಹೊರತು, ಪ್ರತಿಧ್ವನಿಯಾಗಿ, ಕರ್ಕಶ ಪ್ರತಿಧ್ವನಿಯಾಗಿ, ಉತ್ತರ ಮಾತ್ರ ಬರೋಲ್ಲ.


  •    ಕೆ. ಸತ್ಯನಾರಾಯಣ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading