ಮಾನಸ….ಇದು ಮನಸಿನ ಮಾತು (ಭಾಗ-೨೦)

ನಮಗೆ ಕೆಲವೊಮ್ಮೆ ಎಲ್ಲಾ ಇದ್ದು ಏನೋ ಕೊರತೆ ಇರುವಂತೆ ಉದಾಸೀನತೆ ಮೂಡುತ್ತದೆ ಏಕೆ ಹೀಗೆ? ನಮಗೆ ಮಾತ್ರ ಹಾಗನಿಸುತ್ತದಾ? ಎಲ್ಲರಿಗೂ ಹೀಗೆನಾ? ಏತಕ್ಕೆ ಈ ಉದಾಸ ಭಾವ? ಎಂದೆಲ್ಲ ಅನಿಸದೆ ಇರದು. ಆಪ್ತ ಸಮಾಲೋಚಕಿ ಚಂಪಾ ಚಿನಿವಾರ್ ಅವರ ‘ಮಾನಸ….ಇದು ಮನಸಿನ ಮಾತು’ ಅಂಕಣದಲ್ಲಿ ‘ಕಾಡುವ ಕೊರತೆ ’ ತಪ್ಪದೆ ಮುಂದೆ ಓದಿ…

ಇದು ಯಾವುದೇ ವಯಸ್ಸಿನಲ್ಲಿ ಲಿಂಗ ಭೇದವಿಲ್ಲದೆ ಆಗುವ ಒಂದು ಸಹಜ ಕ್ರಿಯೆ. ಏನಿದ್ದರೂ ಏನೂ ಇಲ್ಲದಂತೆ, ಏನಿಲ್ಲದಿದ್ದರೂ ಒಂದು ಚಿಂತೆ. ಮುಂಜಾವಿನಿಂದ ರಾತ್ರಿ ಮಲಗುವವರೆಗು ಈ ಕೊರತೆ ಬಿಡದು. ಆನೆಗೆ ಅದರದೇ ಚಿಂತೆ, ಇರುವೆಗೆ ಅದರದೇ ಚಿಂತೆ. ಈ ಚಿಂತೆ, ಕೊರತೆ ಮನುಷ್ಯನನ್ನು ಹೈರಾಣ ಮಾಡದೆ ಬಿಡದು. ದೈಹಿಕವಾಗಿ ಆರೋಗ್ಯವಾಗಿದ್ದರೂ ಮಾನಸಿಕವಾಗಿ ಕೊರತೆ ಇರುತ್ತದೆ.

ಇದಕ್ಕೆ ಕಾರಣಗಳು ಹಲವಾರು ಆದರೆ ನಮಗೆ ಕಾರಣ ಹುಡುಕುವ, ಪರಿಹರಿಸುವ ಮಾರ್ಗ ತಿಳಿಯದೆ ಒದ್ದಾಡುತಿರುತ್ತೇವೆ. ಬೆಳಿಗ್ಗೆ ಎದ್ದಾಗಿನಿಂದ ಕಾಫಿ, ತಿಂಡಿ, ಊಟ ಹೀಗೆ ನಮ್ಮ ದೈನಂದಿನ ಕಾರ್ಯಕ್ರಮಗಳು ಎಂದಿನಂತೆ ನಡೆದುಕೊಂಡು ಹೋಗುತ್ತಿರುತ್ತದೆ. ಅದೇ ಕೆಲಸ ಅದೇ ದಿನಚರಿ. ದೇವರ ಮನೆಯಲ್ಲಿ ಕೂತರೂ ಮನಸಿಗೆ ಸಂತೋಷವಿರುವುದಿಲ್ಲ. ಯಾವುದರಲ್ಲೂ ಆಸಕ್ತಿ ಇಲ್ಲದಿರುವುದು. ಕೆಲವೊಮ್ಮೆ ಸುಮ್ಮನೆ ಕುಳಿತುಕೊಳ್ಳಬೇಕು ಎಂದು ಅನಿಸುತ್ತದೆ. ಸುಮ್ಮನೆ ಕುಳಿತರೂ ತಪ್ಪಿಲ್ಲ. ಮನಸ್ಥಿತಿ ಸರಿಹೋದಮೇಲೆ ಮತ್ತೆ ಕೆಲಸ ಕಾರ್ಯಗಳಲ್ಲಿ ಆಸಕ್ತಿ ಮೂಡುತ್ತದೆ.

ಮೊದಲಿಗೆ ಹೇಳುವುದಾದರೆ ಬಲವಂತವಾಗಿ ಯಾವುದೇ ಕೆಲಸ ಮಾಡಿದರೂ ಮನಸಿಗೆ ಸಂತೋಷ ಕೊಡುವುದಿಲ್ಲ. ಅಂಥಾ ಸಮಯದಲ್ಲಿ ನಮಗೆ ಸ್ವಲ್ಪ ಸಮಯ ವಿಶ್ರಾಂತಿ ಬೇಕಾಗುತ್ತದೆ. ಇದು ಯಾವ ವಯಸ್ಸಿನವರಿಗಾದರೂ ಆಗಬಹುದಾದ ಭಾವ. ಹಾಗಾಗಿ ಬೇಸರವೆನ್ನಿಸಿದ ಸಮಯದಲ್ಲಿ ನಮಗೆ ಇಷ್ಟವಾದ ಹವ್ಯಾಸ ಏನಿರುತ್ತದೋ ಅದನ್ನು ಮಾಡಿದಾಗ ಮನಸಿಗೆ ಸ್ವಲ್ಪ ಹಿತ ಎನಿಸುತ್ತದೆ.

ಬೇಸರವಾದಾಗ ಯಾವುದೇ ಬೇಸರದ ಸಂಗತಿಗಳು ನೋಡಿದಾಗ, ಓದಿದಾಗ, ಕೇಳಿದಾಗ ಮತ್ತು ಬೇಸರವಾಗುತ್ತದೆ. ಯಾರಿಗಾದರೂ ಕರೆ ಮಾಡಿ ಮಾತನಾಡಬೇಕೆನಿಸಿದಾಗ ಸಂತೋಷವಾಗುವ ಮಾತಾಗಿರಬೇಕು. ಬೇರೆಯವರ ಬಗ್ಗೆ ಅಹಿತವಾದ ಮಾತು, ದುಃಖ ತರುವ ಮಾತು ಮಾತಾಗಿರಬಾರದು. ಅಂತಹ ಮಾತಿದ್ದರೆ ಮುಂದುವರಿಸದಿರುವುದೇ ಉತ್ತಮ.

ಇದೆಲ್ಲ ನೋಡಿದಾಗ ನಮ್ಮ ದುಃಖ, ಬೇಸರ ಸದಾ ಇರುತ್ತದೆ ಎಂದು ಹೇಳಕ್ಕಾಗುವುದಿಲ್ಲ. ಹಂಚಿಕೊಳ್ಳಬಾರದು ಎಂದೂ ಅಲ್ಲ. ಅದಕ್ಕೆ ಪರಿಹಾರ ಸಿಕ್ಕರೆ ನಮ್ಮ ಮನಸಿನ ಭಾವನೆಗಳನ್ನು ಹಂಚಿಕೊಳ್ಳಬಹುದು ಆದರೆ ಅದರ ಬದಲಾಗಿ ಮತ್ತೆ ಬೇಸರದ ಸಂಗತಿಗಳು ಎದುರಾದರೆ ಮತ್ತೆ ಮನಸು ಕೆಡುತ್ತದೆ.

ಫೋಟೋ ಕೃಪೆ : google

ಮನಸಿನ ಕೊರತೆ ಹೊಂದಲು ವಿವಿಧ ಕಾರಣಗಳಿರಬಹುದು. ಕೆಲವು ಸಾಮಾನ್ಯ ಕಾರಣಗಳು ಹೀಗಿವೆ :

ಕೆಲಸದ ಒತ್ತಡ, ಆರ್ಥಿಕ ಮುಗ್ಗಟ್ಟುಗಳು, ನೌಕರಿಯ ಅನಿಶ್ಚಿತತೆ ಇವು ಮನಸಿನ ಒತ್ತಡವನ್ನು ಉಂಟುಮಾಡಬಹುದು. ಈ ನಿಟ್ಟಿನಲ್ಲಿ ಕೊರತೆ ಕಾಡುತ್ತದೆ.

ದೈಹಿಕ ಆರೋಗ್ಯ ಸಮಸ್ಯೆಗಳು, ಋತುಗಳ ಬದಲಾವಣೆಯಿಂದ ಆಗುವ ಅನಾರೋಗ್ಯ, ಅಥವಾ ಬಹಳ ವರ್ಷಗಳಿಂದ ಕಾಡುತ್ತಿರುವ ಕಾಯಿಲೆಗಳು ಮನಸಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಸಂಬಂಧದ ಒಡಕುಗಳು, ವಿವಾಹದ ಸಮಸ್ಯೆಗಳು, ಪ್ರಿಯ ಜನರ ನಿಧನ ಅಥವಾ ವಿಚ್ಛೇದನ ಇವು ಮನಸ್ಸಿನ ಮೇಲೆ ಗಂಭೀರ ಪ್ರಭಾವ ಬೀರುತ್ತವೆ.

ಮದ್ಯಪಾನ, ಧೂಮಪಾನ ಅಥವಾ ಇತರ ಮಾದಕ ವಸ್ತುಗಳ ಅತಿಯಾಗಿ ಬಳಕೆ ಮನಸ್ಸಿನ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಈ ರೀತಿಯ ಕಾರಣಗಳು ಕೊರತೆಗೆ ಕಾರಣವಾಗುತ್ತದೆ.

ವೃಥಾ ಮತ್ತೊಬ್ಬರ ಮೇಲೆ ಶಂಕೆ, ಆತ್ಮವಿಶ್ವಾಸದ ಕೊರತೆ, ಅಥವಾ ವೈಯಕ್ತಿಕ ವೈಫಲ್ಯಗಳು ಮನಸ್ಸಿಗೆ ಒತ್ತಡ ಹಾಗು ಕೊರತೆ ನೀಡಬಹುದು. ಉದ್ಯೋಗ ಬದಲಾವಣೆ, ಮನೆ ಬದಲಾವಣೆ, ಅಥವಾ ಹೊಸ ಪರಿಸರಕ್ಕೆ ಹೊಂದಿಕೊಳ್ಳಲು ಸಮಸ್ಯೆಗಳು ಮನಸ್ಸಿಗೆ ತೊಂದರೆ ಕೊಡಬಹುದು. ಸ್ನೇಹಿತರೊಂದಿಗೆ ಅಥವಾ ಕುಟುಂಬದೊಂದಿಗೆ ಸಂಬಂಧಗಳನ್ನು ಬಿಗಿಯಾಗಿ ಹೊಂದಲು ಸಾಧ್ಯವಿಲ್ಲವಾದರೆ, ಇದರಿಂದ ಮನಸ್ಸು ಅಸಮಾಧಾನಕ್ಕೆ ಒಳಗಾಗಿ ಕೊರತೆ ಕಾಡುತ್ತದೆ.

ಈ ಎಲ್ಲಾ ಸಮಸ್ಯೆಗಳಿಂದ ಹೊರಬರಲು ನಮ್ಮನ್ನು ನಾವು ನಮಗೆ ಸಂತೋಷಕೊಡುವ ಹವ್ಯಾಸಗಳನ್ನು ರೂಢಿಮಾಡಿಕೊಳ್ಳಬೇಕು. ಶಿಸ್ತುಬದ್ಧ, ನಿಯಮಗಳನ್ನು ಪಾಲಿಸಬೇಕು.

ಬೆಳಿಗ್ಗೆ ಎದ್ದ ಮೇಲೆ ನಾವು ಆ ದಿನದ ಪಟ್ಟಿಯ ಪ್ರಕಾರ ಕೆಲಸಗಳನ್ನು ಮಾಡಿಕೊಂಡು ಹೋದಲ್ಲಿ ಮನಸಿಗೆ ಹಿತ ಹಾಗು ಸಂತೋಷ ಭಾವ ಮೂಡುತ್ತದೆ. ನಾವು ಹಾಕಿಕೊಳ್ಳುವ ಉಡುಪೂ ಸಹ ನಮ್ಮ ಮನಸಿನ ಮೇಲೆ ಪರಿಣಾಮ ಬೀರುತ್ತದೆ. ಸ್ನಾನವಾದ ನಂತರ ಶುಭ್ರವಾದ ಬಟ್ಟೆಗಳನ್ನು ಧರಿಸಿದರೆ ಮನಸು ಹುರುಪಿನಿಂದ ಇರುತ್ತದೆ. ನೈಟಿ ಅಥವಾ ರಾತ್ರಿ ಮಲಗಲು ಬಳಸುವ ಉಡುಪುಗಳನ್ನು ಹಾಕಿಕೊಂಡಾಗ ಆಲಸಿಕೆ, ತೂಕಡಿಕೆ ಖಂಡಿತ ಬರುತ್ತದೆ. ಬದಲಾಗಿ ಹೊರಗಡೆ ಹೋಗದಿದ್ದರೂ, ಹೊರಗೆ ಹೋಗುವಂತೆ ತಯಾರಿ ಮಾಡಿಕೊಳ್ಳಬೇಕು.

ಜೀವನಲ್ಲೊಂದು ಗುರಿ ಇರಬೇಕು. ಯಾವುದೇ ಮನುಷ್ಯನು ಉಡಾಫೆ ಜೀವನ ನಡೆಸುತ್ತಿದ್ದರೆ ಅವನು ಗುರಿ ತಲುಪುವುದೇ ಇಲ್ಲ. ಜೀವನ ಪರ್ಯಂತ ಎಲ್ಲದರಲ್ಲೂ ಕೊರತೆ ಹುಡುಕುತ್ತಿರುತ್ತಾನೆ. ‌ಕೆಲಸ ಯಾವುದಾದರಾಗಲಿ ಅದರಲ್ಲಿ ಸಂತೋಷ ಕಾಣಬೇಕು. ಬೇರೆಯವರ ಜೀವನ ಹೋಲಿಸಿಕೊಂಡು ತನ್ನ ಜೀವನದಲ್ಲಿ ಕೊರತೆ ಎಂದುಕೊಂಡು ಕೂತರೆ ಅವನು ಅಲ್ಲೇ ಕುಳಿತಿರಬೇಕು.

ಸದಾ ಸಂತೋಷದಿಂದ ಇರಲು ಪ್ರಯತ್ನ ಪಡಬೇಕು. ದುಃಖ ಹಾಗು ಕಷ್ಟಗಳನ್ನು ಎದುರಿಸುವ ಸಾಮರ್ಥ್ಯವಿರಬೇಕು. ನಮ್ಮ ಸಂತೋಷಕ್ಕೆ ನಾವೇ ಕಾರಣವಾಗಿರಬೇಕು ಆ ಕಾರಣ ನಮ್ಮಲ್ಲಿ ಸದಾ ಇರಬೇಕು. ಕೊರತೆ ನೀಗಿಸುವ ದಾರಿ ನಮ್ಮದಾಗಬೇಕು.

ಮಾನಸ….ಇದು  ಮನಸಿನ ಮಾತು ಅಂಕಣದ ಹಿಂದಿನ ಸಂಚಿಕೆಗಳು :


  • ಚಂಪಾ ಚಿನಿವಾರ್ – ಆಪ್ತಸಮಾಲೋಚಕಿ.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading