ಮಾನಸ….ಇದು ಮನಸಿನ ಮಾತು (ಭಾಗ-೧೨)

ಪೋಲೀಸ್ ಸ್ಟೇಷನ್ ಹೋದ ದಂಪತಿಗಳಿಗೆ ಮಗನು ಸೆರೆಯಲ್ಲಿರುವುದನ್ನು ಕಂಡು ಗಾಬರಿ, ಭಯ ಅಳು ಬಂದಿತ್ತು. ಮುಂದೇನಾಯಿತು ಆಪ್ತ ಸಮಾಲೋಚಕಿ ಚಂಪಾ ಚಿನಿವಾರ್ ಅವರ ‘ಮಾನಸ….ಇದು ಮನಸಿನ ಮಾತು’ ಅಂಕಣದಲ್ಲಿ ಹದಿಹರೆಯದ ಸಮಸ್ಯೆ ಹಾಗು ಅವರ ಮನಸ್ಥಿತಿಯ ಒಂದು ಕುರಿತಾಗಿದ್ದು ತಪ್ಪದೆ ಮುಂದೆ ಓದಿ…

ಒಂದು ಕುಟುಂಬ, ಗಂಡ ಮತ್ತು ಹೆಂಡತಿ ಅವರಿಗೆ ಮಗ ಹಾಗೂ ಮಗಳು. ಗಂಡ ವ್ಯಾಪಾರಸ್ಥರು, ಹೆಂಡತಿ ಗೃಹಿಣಿ. ಮಕ್ಕಳಿಬ್ಬರೂ ಓದಿನಲ್ಲಿ ಮುಂದಿದ್ದರು, ಗಂಡ ಮನೆಯನ್ನು ಬೆಳಿಗ್ಗೆ 8ಕ್ಕೆ ಬಿಟ್ಟರೆ ರಾತ್ರಿ ಹನ್ನೆರಡಕ್ಕೆ ವಾಪಸ್ಸು ಮನೆಗೆ ಬರುತಿದ್ದದ್ದು ಹೆಂಡತಿ ಮನೆ ಮಕ್ಕಳ ಬಗ್ಗೆ ಗಮನ ಹರಿಸಿದ್ದರು. ಇವರ ಮಗ ಹತ್ತನೆ ತರಗತಿಯಲ್ಲಿ ಚೆನ್ನಾಗಿ ಓದಿ ಒಳ್ಳೆಯ ಅಂಕ ಗಳಿಸಿ ಕಾಲೇಜು ಸೇರಿದ. ಮೊದಲ ವರ್ಷದ ಪಿ ಯು ಸಿ ಚೆನ್ನಾಗಿಯೇ ಓದುತ್ತಿದ್ದ ಉತ್ತೀರ್ಣನಾಗಿ ದ್ವಿತೀಯ ಪಿ ಯು ಸಿ ಗೆ ಬಂದಾಗ ಶುರುವಾಯಿತು ಅವನಿಗೆ ದುಷ್ಟ ಗೆಳೆಯರ ಸಹವಾಸ.

ಪೂರ್ವ ಭಾಗದ ಪರೀಕ್ಷೆ ಮುಗಿಸಿ ಮನೆಗೆ ಬಂದು ಊಟ ಮಾಡಿ ಬಟ್ಟೆ ಬದಲಿಸಿ ಅವನ ಅಪ್ಪನ ಬಳಿ ಬಂದು ನೂರು ರೂಪಾಯಿ ಕೊಡು ಸಿನಿಮಾಗೆ ಹೋಗುತ್ತೇನೆ ಎಂದು ಕೇಳಿದಾಗ ಅವನ ಅಪ್ಪ ದುಡ್ಡು ಕೊಟ್ಟು ಬೇಗ ಮನೆಗೆ ಬಾ ಎಂದು ಹೇಳಿ ಕಳಿಸಿದರು. ಇತ್ತೀಚೆಗೆ ಅವನು ಮನೆಗೆ ಸರಿಯಾಗಿ ಬರದ ಕಾರಣ, ಹುಡುಗರೊಂದಿಗೆ ಸಿಗರೇಟ್ ಸೇದುವುದು ಹಾಗು ಮಧ್ಯಪಾನ ಮಾಡುತಿದ್ದು ಮನೆಗೆ ಬರಿತಿದ್ದದ್ದು ಎರಡು ಮೂರು ದಿನಗಳ ನಂತರವೆ. ಹಾಗಾಗಿ ಅವನ ತಂದೆ ಬೇಗ ಬರಲು ತಿಳಿಸಿದ್ದರು.

ಫೋಟೋ ಕೃಪೆ : google

ಒಂದು ವಾರ ಕಳೆದರೂ ಮಗನ ಸುಳಿವಿಲ್ಲ, ತಂದೆ ತಾಯಿ ಇಬ್ಬರೂ ಆತಂಕಗೊಂಡಿದ್ದರು. ಕರೆ ಮಾಡಿದರೂ ಪ್ರತಿಕ್ರಿಯೆ ಮಾಡದೆ ಇರುತ್ತಿದ್ದ. ಅವನ ಸ್ನೇಹಿತರನ್ನು ವಿಚಾರಿಸಿದರು, ಅವರೆಲ್ಲ ತಮಗೆ ತಿಳಿದಿಲ್ಲ ಎಂದು ಹೇಳಿದಾಗ ಮತ್ತಷ್ಟು ಗಾಬರಿಗೊಂಡರು. ಒಂದು ವಾರದ ನಂತರ ಒಂದು ಬೆಳಿಗ್ಗೆ ಇವರ ಮನೆಗೆ ಪೋಲೀಸ್ ಬಂದು ಇವರ ಮಗನ ಹೆಸರು ಹೇಳಿ, ನೀವು ತಕ್ಷಣ ಪೋಲೀಸ್ ಸ್ಟೇಷನ್ ಗೆ ಬರಬೇಕು ಎಂದು ಕರೆದೊಯ್ದರು. ಅಲ್ಲಿ ಇವರ ಮಗನ ಬಗ್ಗೆ ಕೇಳಿದಾಗ ಗಂಡ ಹೆಂಡತಿ ಸುಧಾರಿಸಿಕೊಳ್ಳಲು ಬಹಳ ಸಮಯ ಬೇಕಾಗಿತ್ತು.

ಪೋಲೀಸ್ ಸ್ಟೇಷನ್ ಹೋದ ದಂಪತಿಗಳಿಗೆ ಮಗನು ಸೆರೆಯಲ್ಲಿರುವುದನ್ನು ಕಂಡು ಗಾಬರಿ, ಭಯ ಅಳು ಬಂದಿತ್ತು. ಮಗ ಕೊಲೆ ಮಾಡಿ ಜೈಲು ಸೇರಿದ್ದ. ತಯಾರಿ ಪೂರ್ವ ಪರೀಕ್ಷೆ ಮುಗಿಸಿ ಮನೆಗೆ ಬಂದು ಅಪ್ಪನ ಬಳಿ ಸಿನಿಮಾಗೆ ಹೋಗಲು ದುಡ್ಡು ಕೇಳಿ ತೆಗೆದುಕೊಂಡು ಹೋದವನು ವಾರದವರೆಗೂ ಮನೆಗೆ ಬಂದಿರಲಿಲ್ಲ, ಸ್ನೇಹಿತ ಕರೆದ ಎಂದು ಹೋಗಿ, ಒಬ್ಬ ಹುಡುಗನ ಕೊಲೆಗೈದು ತಲೆಮರೆಸಿಕೊಂಡಿದ್ದ. ಕೊಲೆಗೀಡಾದ ಹುಡುಗ ಯಾರು ಏನು ಎಂದು ತಿಳಿಯದೆ ತನ್ನ ಸ್ನೇಹಿತ ಕರೆದನೆಂದು, ಸ್ನೇಹ ಈ ರೀತಿ ಅವನೊಂದಿಗೆ ಈ ಕೃತ್ಯ ಮಾಡಿಸಿತ್ತು.

ಹದಿನೆಂಟು ವರ್ಷದ ಒಳಗಿನ ಅಪರಾಧಿ ಮಕ್ಕಳನ್ನು ರಿಮ್ಯಾಂಡ್ ಹೋಮ್ ಗೆ ಕಳಿಸುತ್ತಾರೆ ಆದರೆ ಇಲ್ಲಿ ಈ ಹುಡುಗನಿಗೆ ಆಗಷ್ಟೇ ಹದಿನೆಂಟು ತುಂಬಿತ್ತು. ಹಾಗಾಗಿ ಜೈಲುವಾಸ ಅನುಭವಿಸುತ್ತಿದ್ದ. ಬೇಲ್ ಗೋಸ್ಕರ ತಂದೆ ಬಹಳ ಹೋರಾಡುತ್ತಿದ್ದರು. ಆಪ್ತಸಮಾಲೋಚಕರಲ್ಲಿ ಏಕೆ ಕರೆತಂದಿದ್ದರೆಂದರೆ, ಅವನು ಸಣ್ಣವನಿದ್ದಾಗ ಅಂದರೆ ನಾಲ್ಕು ಅಥವಾ ಐದನೇ ತರಗತಿಯಲ್ಲಿ ಇದ್ದಾಗ ಬಹಳ ತುಂಟನಾಗಿದ್ದು ತುಂಬಾ ಹೈಪರ್ ಆಕ್ಟೀವ್ ಹುಡುಗನಾಗಿದ್ದ.

ಅದಕ್ಕೆ ADHD ಎನ್ನುತ್ತಾರೆ. ಅಟೆನ್ಷನ್ ಡಿಫಿಸಿಟ್ ಹೈಪರ್ ಆಕ್ಟೀವ್ ಡಿಸಾರ್ಡರ್. ಇದು ಬಾಲ್ಯದಲ್ಲಿ ಅಲ್ಲದೆ ಯುವಕರಾದಾಗಿಯೂ ಮುಂದುವರಿಯುತ್ತದೆ. ಮಕ್ಕಳಿದ್ದಾಗ ಈ ನ್ಯೂನ್ಯತೆ ಮುಂದೆ ಬರುವ ದಿನಗಳಲ್ಲಿ ಬಹಳ ತೊಂದರೆ ಅನುಭವಿಸಬೇಕಾಗುತ್ತದೆ.( ತುಂಬಾ ಛೂಟಿ ಇರುವ ಎಲ್ಲಾ ಮಕ್ಕಳ ಬಗ್ಗೆ ಹೇಳುತ್ತಿಲ್ಲ, ಕೆಲವು ಮಕ್ಕಳು ಬೆಳೆಯುವ ವಾತಾವರಣ, ಸಹವಾಸ ಹೀಗೆ ಹಲವು ಕಾರಣಗಳಿಂದ ಮಕ್ಕಳು ಅಡ್ಡದಾರಿ ಹಿಡಿಯುವರ ಬಗ್ಗೆ ಮಾತ್ರ) ಈ ರೀತಿ ಮನೋಭಾವ ಹೊಂದಿದ್ದ ಈ ಹುಡುಗನಿಗೆ ಅವನ ಶಾಲೆಯಲ್ಲಿ ಕೌನ್ಸೆಲಿಂಗ್ ಮಾಡಿಸಿದಾಗ ತಿಳಿದು ಬಂದಿದ್ದು, ಅವನ ಪೋಷಕರನ್ನು ಕರೆದು ಈ ವಿಷಯ ತಿಳಿಸಿದ್ದರು. ಹಾಗಾಗಿ ಪೋಲಿಸ್ ಕಸ್ಟಡಿಯೊಂದಿಗೆ ಅವನ ತಂದೆ ಕೋರ್ಟ್ ಮೂಲಕ ಮನೋವೈದ್ಯರ ಬಳಿ ಸರ್ಟಿಫಿಕೆಟ್ ಗಾಗಿ ಕರೆ ತಂದಿದ್ದರು. ಕೈಕೋಳ ಹಾಕಿಸಿಕೊಂಡು ಕರೆತಂದಿದ್ದರು. ಅವನ ಮುಖದಲ್ಲಿ ಅಪರಾಧ ಭಾವನೆ ಬಹಳವಾಗಿ ಕಾಣುತಿತ್ತು.

ಫೋಟೋ ಕೃಪೆ : google

ಆ ಹುಡುಗ ಬಹಳ ಬುದ್ಧಿವಂತನಾಗಿದ್ದು ಪ್ರತೀ ತರಗತಿಯಲ್ಲಿ ಉತ್ತಮ ಅಂಕಗಳನ್ನು ಗಳಿಸಿದ್ದನು. ಜೊತೆಗೆ ಆಂಗ್ಲಭಾಷೆಯಲ್ಲಿ ಕವನಗಳನ್ನು ಬರೆದು ಹೆಸರಾಂತ ದಿನ ಪತ್ರಿಕೆಯಲ್ಲಿ ಪ್ರಕಟಗೊಳ್ಳುತಿತ್ತು. ಹೀಗಿದ್ದ ಹುಡುಗ ಈ ರೀತಿ ಬದಲಾವಣೆಯಾಗಿ ತನ್ನನ್ನು ತಾನು ವಂಚಿಸಿಕೊಂಡಿದ್ದ. ಸಣ್ಣವಯಸಿನಲ್ಲೇ ನುರಿತ ಮನೋ ವೈದ್ಯರ ಬಳಿ ಕರೆದುಕೊಂಡು ಹೋಗಿ ಅವರ ಸಲಹೆಯ ಮೇರೆಗೆ ಔಷಧೋಪಚಾರ ಮಾಡಿಸಿದ್ದರೆ ಈ ರೀತಿ ವಿಪರೀತಕ್ಕೆ ಹೋಗುತ್ತಿರಲಿಲ್ಲ ಎಂದು ಅನಿಸುತ್ತದೆ. ಸಾಮಾನ್ಯವಾಗಿ ಜನರು ಮನೋವೈದ್ಯರ ಬಳಿ ಆಪ್ತಸಲಹೆಗಾಗಿ ಹೋಗಬೇಕೆಂದಾಗ, ತಮಗೇನು ಹುಚ್ಚೇ? ಎಂದು ಹೋಗಲು ಹಿಂಜರಿದಾಗ ಬಹಳ ನಷ್ಟಗಳನ್ನು ಅನುಭವಿಸಬೇಕಾಗುತ್ತದೆ. ಮನೋವೈದ್ಯರು ಹಾಗು ಆಪ್ತಸಮಾಲೋಚಕರ ಬಳಿ ಹೋಗಲು ಯಾವುದೇ ರೀತಿಯ ಅನುಮಾನ, ಹಿಂಜರಿಕೆ ಬೇಡ. ಅವರು ವಿಷಯಗಳನ್ನು ಗೌಪ್ಯವಾಗಿಡುತ್ತಾರೆ ಹಾಗು ತೊಂದರೆಗಳನ್ನು ಬಗೆ ಹರಿಸಲು ಪ್ರಯತ್ನ ಪಡುತ್ತಾರೆ.

ಹೀಗೆ ಮಕ್ಕಳು ಎಲ್ಲಿ ಹಾದಿ ತಪ್ಪುತಿದ್ದಾರೆ ಎಂದು ತಿಳಿದು ಸರಿಯಾದ ಮಾರ್ಗದರ್ಶನ ಮಾಡಿ ಸತ್ಪ್ರಜೆಗಳನ್ನು ಮಾಡುವಲ್ಲಿ ಪೋಷಕರಿಗೆ ಹೆಚ್ಚಿನ ಜವಾಬ್ದಾರಿಯಾಗಿರುತ್ತದೆ.

ಮಾನಸ….ಇದು ಮನಸಿನ ಮಾತು ಅಂಕಣದ ಹಿಂದಿನ ಸಂಚಿಕೆಗಳು:


  • ಚಂಪಾ ಚಿನಿವಾರ್ – ಆಪ್ತಸಮಾಲೋಚಕಿ.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading