ಮಾನಸ….ಇದು ಮನಸಿನ ಮಾತು (ಭಾಗ-೧೪)

ಹುಚ್ಚರು ಅವರಲ್ಲ, ಜನರ ಮಧ್ಯೆ ಇದ್ದು ಹುಚ್ಚುತನವಾಗಿ ಆಡುವ ಹುಚ್ಚು ಜನಗಳ ಕುರಿತು. ತಮಗೆ ಬೇಕಾದಾಗ ನಮ್ಮ ಬಳಿ ಮಾತನಾಡುವ ಜನ, ಹೊತ್ತು ಕಳೆಯಲಿಕ್ಕೋ, ಸಮಯಕ್ಕಾಗಿಯೋ ಸ್ನೇಹವನ್ನು ಉಪಯೋಗಿಸಿಕೊಳ್ಳುವ ಜನರು ಹುಚ್ಚರು. ಆಪ್ತ ಸಮಾಲೋಚಕಿ ಚಂಪಾ ಚಿನಿವಾರ್ ಅವರ ‘ಮಾನಸ….ಇದು ಮನಸಿನ ಮಾತು’ ಅಂಕಣದಲ್ಲಿ ‘ಹುಚ್ಚರ ಸಂತೆ’ ಕುರಿತಾಗಿದ್ದು ತಪ್ಪದೆ ಮುಂದೆ ಓದಿ…

ಈ ಒಂದು ಘಟನೆ ನಡೆದು ಸುಮಾರು ದಿನಗಳೇ ಆದರೂ ನನ್ನ ಮನಸಿನಲ್ಲಿ ಅಚ್ಚು ಒತ್ತಿದೆ. ಹೀಗೆ ಒಂದು ಭಾನುವಾರ ಊರು ಸುತ್ತೋಣ ಅಂತ ನನ್ನ ಪತಿ ಜೊತೆ ಹೊರಟೆ, ಮೈಸೂರು ರಸ್ತೆ ತಲುಪಿದೆವು. ನನಗೆ ರಸ್ತೆ ಬದಿಯಲ್ಲಿ ಆಗು ಹೋಗುಗಳ ಬಗ್ಗೆ ಗಮನ ಜಾಸ್ತಿ, ಅಂಗಡಿಯ ಬೋರ್ಡ್ ನೋಡುವುದು, ಜನರ ಹಾವಾ ಭಾವ ಹೀಗೆ…..

ಸಿಗ್ನಲ್ ನಲ್ಲಿ ನಿಲ್ಲಬೇಕಾಯಿತು, ಹಾಗೆ ನನ್ನ ದೃಷ್ಟಿ ಇಬ್ಬರು ಹುಚ್ಚರ ಮೇಲೆ ಬಿದ್ದಿತು, ನೋಡಿದ ಕೂಡಲೇ ಹುಚ್ಚರು ಎಂದು ನಾಮಪಟ್ಟಿ ಹಚ್ಚಬಾರದು ನಿಜ. ಆದರೆ ಅವರ ವರ್ತನೆ ನನಗೆ ಹಾಗೆನಿಸಿತು. ಒಬ್ಬ ಹಿಮ್ಮುಖವಾಗಿ ನಡೆಯುತ್ತಾ ಅಂಗೈಯಲ್ಲಿ ದುಡ್ಡಿನ ಕಂತೆ ಇದ್ದ ಹಾಗೆ ಅವನು ಅದನ್ನು ಬಲಗೈಯಿಂದ ಉದುರಿಸುವ ರೀತಿಯಲ್ಲಿ ಕೈ ಆಡಿಸುತಿದ್ದ. ಮತ್ತೊಬ್ಬ ಅವನ ಮುಂದೆ ಮುಂದೆ ತನ್ನ ಬಲಗೈಯನ್ನು ಬಲ ಭುಜದ ಹೆಗಲ ಮೇಲೆ ಗದೆಯೋ ಕತ್ತಿಯೋ ಇಟ್ಟುಕೊಂಡಿರುವ ರೀತಿ ತಾನೊಬ್ಬ ರಾಜನಂತೆ ಟಿವಿಯಿಂದ ನಡೆಯುತಿದ್ದ.

ಫೋಟೋ ಕೃಪೆ :  google (ಸಾಂದರ್ಭಿಕ ಚಿತ್ರ)

ಇಬ್ಬರದೂ ಮಾಸಿದ ಬಟ್ಟೆ ಕೆದರಿದ ಕೂದಲು, ಎಷ್ಟೋ ದಿನಗಳಿಂದ ಉಜ್ಜದೆ ಹಳದಿಗಟ್ಟಿದ ಹಲ್ಲುಗಳು ನೋಡಿ ಅವರನ್ನು ಖಂಡಿತಾ ಬುದ್ಧಿ ಭ್ರಮೆಯಾಗಿದೆ ಎಂದು ಹೇಳಬಹುದಿತ್ತು. ಆದರೆ ವಿಷಯ ಅದಲ್ಲ ಅವರಿಬ್ಬರೂ ಜಗದ ಪರಿವೇ ಇಲ್ಲದಂತೆ ಅವರ ಲೋಕದಲ್ಲೇ ವಿಹರಿಸುತ್ತಿದ್ದರು. ಅಲ್ಲಿ ನಿಂತಿದ್ದ ಜನ ಅವರನ್ನು ನೋಡುತ್ತಾ ನಗುತ್ತಿದ್ದರು. ಹುಚ್ಚರು ಅವರಿಬ್ಬರಲ್ಲ, ಅವರಿಬ್ಬರನ್ನು ನೋಡಿ ನಗುತ್ತಿದ್ದ ಜನರು ಹುಚ್ಚರು ಅನಿಸಿತು.

ಮತ್ತೆ ಮುಂದೆ ಒಂದು ಹಳ್ಳಿಯತ್ತ ಪಯಣ ಸಾಗಿದಾಗ ಅಲ್ಲಿ ಒಂದು ದೇವಸ್ಥಾನದ ಮುಂದೆ ಮದುವೆ ದಿಬ್ಬಣ ಹೋಗುತಿತ್ತು. ಓಲಗ, ತಬಲ ಜೋರಾಗಿ ಮೊಳಗುತ್ತಿದ್ದವು, ಅಲ್ಲಿ ಚಿಂದಿ ಬಟ್ಟೆ, ಕೆದರಿದ ತಲೆಯ ಒಬ್ಬ ಒಂದು ಚಿಕ್ಕ ಕೋಲನ್ನು ತೆಗೆದುಕೊಂಡು ಕೊಳಲಿನಂತೆ ಊದುತ್ತಾ ನಿಂತಿದ್ದ ಅವನ ಸುತ್ತಾ ಜನರು ಸುತ್ತುಗಟ್ಟಿ ಕುಣಿಯುತಿದ್ದರು, ಕೆಲವರು ಅವನ ನೋಡಿ ನಗುತ್ತಿದ್ದರು. ಅವನೂ ಹುಚ್ಚನೆನಿಸಲಿಲ್ಲ. ಅವನನ್ನು ನೋಡಿ ನಗುತಿದ್ದ ಜನರು ಹುಚ್ಚರೆನಿಸಿದರು.

ನನಗೆ ಈ ಎರಡು ಪ್ರಕರಣದಲ್ಲಿ ಅನಿಸಿದ್ದು, ಹುಚ್ಚರು ಅವರಲ್ಲ, ಜನರ ಮಧ್ಯೆ ಇದ್ದು ಹುಚ್ಚುತನವಾಗಿ ಆಡುವ ಹುಚ್ಚು ಜನಗಳ ಕುರಿತು. ತಮಗೆ ಬೇಕಾದಾಗ ನಮ್ಮ ಬಳಿ ಮಾತನಾಡುವ ಜನ, ಹೊತ್ತು ಕಳೆಯಲಿಕ್ಕೋ, ಸಮಯಕ್ಕಾಗಿಯೋ ಸ್ನೇಹವನ್ನು ಉಪಯೋಗಿಸಿಕೊಳ್ಳುವ ಜನರು ಹುಚ್ಚರು.

ಶ್ರೀಮಂತಿಕೆಯ ಹುಚ್ಚು, ಅಹಂಕಾರದ ಹುಚ್ಚು, ಪದವೀಧರನೆಂಬ ಹುಚ್ಚು, ತಾನೊಬ್ಬನೇ ಬಲ್ಲವ ಮಿಕ್ಕವರೆಲ್ಲ ದಡ್ಡರೆಂದು ತಿಳಿಯುವ ಹುಚ್ಚು, ಹೀಗೆ ಈ ಹುಚ್ಚರ ಸಂತೆಯಲ್ಲಿ ಒಂದು ಮುಗ್ಧ ಮಗು ಹಾಗು ಮತಿಗೆಟ್ಟವನೊಬ್ಬನೇ ನಿಜವಾದ ಮನಜ ಅನಿಸಿತು. ಮತಿ ಭ್ರಮಣೆಯಾದರಿಗೆ ಪ್ರಪಂಚದ ಯಾವ ಪರಿವೇ ಇಲ್ಲದೆ ತಮ್ಮ ರೀತಿ ನಡೆದುಕೊಳ್ಳುವ ನಿಜವಾದ ಮನುಜರು. ಬುದ್ಧಿ ಇದ್ದರೂ ಹುಚ್ಚನಂತಾಡುವ ಮನುಜನು ಹುಚ್ಚನು. ನಾಗರೀಕನಾಗಿದ್ದರೂ ಅನಾಗರೀಕನಾಗಿ ವರ್ತಿಸುವ ನಾಗರಿಕನು ಹುಚ್ಚನು.

ತಮಗೆ ಅರಿವಿಲ್ಲದೇ, ತಮಗೆ ತಾವು ಯಾರೆಂದು ತಿಳಿಯದ ಜನರ ನಡುವೆ, ಅರಿವಿದ್ದು, ತಾವು ಯಾರೆಂದು ತಿಳಿದಿದ್ದರೂ ಮತಿ ಭ್ರಮಣೆ ಆದವರಂತೆ ವರ್ತಿಸುವ ಜನರು ಹುಚ್ಚರು. ಹಣ, ಅಧಿಕಾರ, ಜ್ಞಾನ ಎಲ್ಲರನ್ನೂ ಹುಚ್ಚರನ್ನಾಗಿಸಿಬಿಡುತ್ತದೆ. ಮಾನವೀಯತೆಯ ಮರೆತು ಹುಚ್ಚು ಪ್ರಪಂಚದಲ್ಲಿ ಬದುಕಿರುತ್ತಾರೆ. ವಿದ್ಯೆಗೆ ವಿನಯವೇ ಭೂಷಣ, ತುಂಬಿದ ಕೊಡ ತುಳುಕುವುದಿಲ್ಲ, ದುಡ್ಡೇ ದೊಡ್ಡಪ್ಪ ವಿದ್ಯೆ ಅದರಪ್ಪ ಎನ್ನುವ ನುಡಿಮುತ್ತುಗಳು ಬರೀ ಬರೆಯುವುದಕ್ಕಾಗಿ ಅಥವಾ ಓದುವುದಕ್ಕೆ ಸೀಮಿತವಾಗಿಬಿಟ್ಟಿದೆ.

ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಅಂಶಗಳನ್ನು ಮರೆಯುತ್ತಾ ಬರುತಿದ್ದಾರೆ. ಅವರದೇ ರೀತಿ ರಿವಾಜಿನಲ್ಲಿ ಬದುಕುತಿದ್ದಾರೆ. ಹುಚ್ಚುತನವೋ ಹುಂಬತನವೋ ಕೆಲವರ ನಡಾವಳಿಕೆ ನಾಚಿಕೆಗೀಡುಮಾಡಿಕೊಡುತ್ತದೆ.

ಅರಿತು ಬಾಳಬೇಕು ಬೇರೆಯವರ ಭಾವನೆಗೆ ಬೆಲೆ ಕೊಡದಿದ್ದರೂ ಸರಿ ಹುಚ್ಚು ಮನಸು ಇರಬಾರದು.

ಮಾನಸ….ಇದು ಮನಸಿನ ಮಾತು ಅಂಕಣದ ಹಿಂದಿನ ಸಂಚಿಕೆಗಳು:


  • ಚಂಪಾ ಚಿನಿವಾರ್ – ಆಪ್ತಸಮಾಲೋಚಕಿ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading