ಬರಗೂರು ರಾಮಚಂದ್ರಪ್ಪರ ನಿರ್ದೇಶನದ ಚಿತ್ರ ‘ಸ್ವಪ್ನ ಮಂಟಪ’ ಹಲವು ಕಾರಣಗಳಿಗೆ ಇಷ್ಟವಾಗುತ್ತದೆ. ಮೂಲತಃ ಕಲಾತ್ಮಕ ಮಾದರಿಯ ಚಿತ್ರವಾದರೂ ತಮ್ಮ ಬಿಗು ನಿರೂಪಣೆಯ ಮೂಲಕ ಪ್ರೇಕ್ಷಕರನ್ನು ಎಲ್ಲಿಯೂ ನಿರಾಸೆಗೊಳಿಸುವುದಿಲ್ಲ. ಸಿನಿಮಾ ಕುರಿತು ಲೇಖಕರಾದ ಮಾರುತಿ ಗೋಪಿಕುಂಟೆ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ …

ಚಾರಿತ್ರಿಕ ಕತೆಯೊಂದಿಗೆ ಸ್ಮಾರಕಗಳ ಉಳಿವಿಗೆ ಹೋರಾಡುವ ಕತೆಯ ನಾಯಕ ವಾಸ್ತವದಲ್ಲಿ ಆತನದ್ದೆ ಒಂದುಕತೆಯಾಗಿ ನಿಗೂಢವಾಗಿ ಒಂದು ತಾರ್ಕಿಕ ಅಂತ್ಯವಾಗುವುದರ ಮೂಲಕ ಹಲವು ಪ್ರಶ್ನೆಗಳಿಗೆ ಉತ್ತರವಾಗುತ್ತಾನೆ. ವಾಸ್ತವ ಮತ್ತು ಚರಿತ್ರೆಯ ಕತೆ ಜೊತೆಜೊತೆಯಲ್ಲಿ ಸಾಗುತ್ತ ಹಲವು ಸಂವೇದನೆಗಳ ಒಳಹುಗಳನ್ನು ಪ್ರೇಕ್ಷಕನಲ್ಲಿ ಮೂಡಿಸುತ್ತ ಸಾಗುವ ಕತೆಯಲ್ಲಿ ಹೆಣ್ಣಿನ ನೋವಿನ ಶೋಷಣೆಯ ಆಂತರ್ಯವಿದೆ. ಪುರುಷ ಸಮಾಜದ ಅಹಂಕಾರವಿದೆ, ಅಲ್ಲೊಂದು ನವಿರು ಪ್ರೇಮವಿದೆ, ವಯಸ್ಸಿನ ಅಂತರಕ್ಕೆ ಇನ್ನೊಂದು ಪ್ರೇಮಕ್ಕೆ ತುಡಿಯುವ ಮನಸ್ಸಿದೆ. ಹೆಣ್ಣು ಹೆಣ್ಣನ್ನೆ ದ್ವೇಷಿಸುವ ಲಾಲಸೆಯಿದೆ. ಇದೆಲ್ಲವನ್ನೂ ಮೀರಿ ಚರಿತ್ರೆ ಪರಂಪರೆಗಳು ಅಳಿಯದೆ ಉಳಿಯಲು ಸ್ಮಾರಕಗಳ ರಕ್ಷಣೆ ಅಗತ್ಯ ಅದು ಕೈಗೂಡುವಲ್ಲಿ ಇಡಿ ಊರೆ ಒಂದಾಗುವ ಬಂಡವಾಳ ಶಾಹಿಗಳನ್ನು ಹಿಮ್ಮೆಟ್ಟಿಸುವ ಮೂಲಕ ಬಂಡಾಯದ ಧ್ವನಿ ಗೆಲ್ಲುವ ಕಥಾ ಹಂದರದಲ್ಲಿ ಹಲವು ದಾರಿಗಳು ಹಲವು ಪಾತ್ರಗಳು ತಮ್ಮ ಒಳಮನಸ್ಸನ್ನು ತೆರೆದಿಟ್ಟಿವೆ.
ಸಮಾಜ ವಿಜ್ಞಾನದ ಶಿಕ್ಷಕಿಯಾಗಿ ಬರುವ ಮಂಜುಳ ಆದರ್ಶ ಶಿಕ್ಷಕಿಯಾಗಿ ವಿದ್ಯಾರ್ಥಿಗಳನ್ನೆ ಮಕ್ಕಳೆಂದು ಭಾವಿಸುವ ಅವಳು ಸ್ವಪ್ನಮಂಟಪವನ್ನು ಅವಿವಾಹಿತರು ಪ್ರವೇಶಿಸಬಾರದು ಎಂಬಲ್ಲಿ ಅವಳಿಗೆ ಯಾಕೆ ಪ್ರವೇಶಿಸಬಾರದು ಎಂದು ಶೋಧಿಸುತ್ತ ಹೋಗುವ ಅವಳು ಅದರ ಕತೆಯನ್ನು ಇತಿಹಾಸದಲ್ಲಿ ಸ್ನಾತಕೋತ್ತರ ಪದವಿ ಪಡೆದ ಊರಿನ ಸಾಹುಕಾರ ಸಿದ್ದಪ್ಪನ ಮಗ ಶಿವಕುಮಾರನಿಂದ ಕತೆ ಕೇಳುತ್ತಾ ಚರಿತ್ರೆಯ ಒಳಗನ್ನು ಪ್ರವೇಶಿಸುತ್ತಲೆ ಚಂಡೆರಾಯ ಯುದ್ಧದಲ್ಲಿ ಗೆದ್ದು ಕಿರಿಯ ವಯಸ್ಸಿನ ಮದನಿಕೆಯನ್ನು ಮದುವೆಯಾಗಿ ಭೋಗದವಸ್ತುವಿನಂತೆ ಪರಿಭಾವಿಸುವ ಆತನಿಗೆ ಮದನಿಕೆ ಪ್ರಶ್ನೆಯಾಗಿಯೂ ಉತ್ತರವಾಗಿಯೂ ಕಾಡುತ್ತಲೆ ಹೆಣ್ಣಿನ ಆಂತರ್ಯದ ನೋವನ್ನು ಇನ್ನೊಂದು ಹೆಣ್ಣು ಮದಲಾಸೆ ಅರ್ಥಮಾಡಿಕೊಳ್ಳುವ ಕಾಲದಲ್ಲಿಯೇ ಚಂಡೆರಾಯನ ಮೊದಲರಾಣಿ ನಾಗಲಾದೇವಿ ವಿರೋದಿಸುವ ಸಂಕಟವು ಹೆಣ್ಣಿನ ಬೇರೆ ಬೇರೆ ನೋವುಗಳು ಏಕಕಾಲದಲ್ಲಿ ಪ್ರೀತಿ ವೈರುದ್ದಗಳ ಇಕ್ಕಟ್ಟಿನಲ್ಲಿ ಸಿಲುಕಿ ಸ್ವತಂತ್ರವನ್ನು ಬಯಸಿ ಸ್ವಪ್ನಮಂಟಪಕ್ಕೆ ಬರುವ ಇಬ್ಬರಲ್ಲಿಯೂ ಸಾಮಾನ್ಯನೊಬ್ಬನ ಮೇಲೆ ಪ್ರೀತಿ ಅಂಕುರಿಸುವ ಕಾಲಘಟ್ಟದಲ್ಲಿಯೆ ಚಂಡೆರಾಯ ರಾಜಾಧಿಕಾರದ ಪರಿಧಿಯಲ್ಲಿ ಮದನಿಕೆಯನ್ನು ಸಾಯಿಸುವ ಮೂಲಕ ಗೆದ್ದು ಬೀಗುತ್ತಾನೆ. ತನ್ನ ಕುಡಿಯೆ ಆತನಿಗೆ ಒಲಿದ ಸನ್ನಿವೇಶದಲ್ಲಿ ರಾಜ ಮತ್ತು ಅಪ್ಪನ ಅಧಿಕಾರವೆರಡು ಸಾಮಾನ್ಯನನ್ನು ಬಲಿತೆಗೆದುಕೊಂಡು ಮಗಳನ್ನು ಸಾಯಿಸುವ ಮೂಲಕ ಸ್ವಪ್ನಮಂಟಪಕ್ಕೆ ಅವಿವಾಹಿತರು ಕಾಲಿಡಬಾರದು ಇಟ್ಟರೆ ಅವರಿಗೆ ಸಾವು ಖಚಿತ ಎಂಬಂತೆ ಮೂಢನಂಭಿಕೆಯೊಂದು ಬೆಳೆದು ಸ್ವಪ್ನಮಂಟಪ ಸ್ವಪ್ನವಾಗಿಯೆ ಉಳಿದು ಬಿಡುವ ಸನ್ನಿವೇಶವೊಂದು ಸೃಷ್ಟಿಯಾಗಿ ಭೂತವಾಗಿ ಕಾಡುವಾಗಲೆ ಪ್ರೇಮದ ಎಳೆಯೊಂದು ಮಂಜುಳ ಮತ್ತು ಶಿವಕುಮಾರನ ನಡುವೆ ಸುಳಿದು ಹೆಮ್ಮರವಾಗುವಾಗಲೆ ನಾಟಕದ ಕಲೆಯನ್ನೆ ಜೀವಾಳವಾಗಿಸಿಕೊಂಡ ಕಣ್ಣಪ್ಪ ಮಗಳ ಹುಚ್ಚುತನದ ಮಾತುಗಳು ಮಂಜುಳಾಳಿಗೆ ಪ್ರಶ್ನೆಯಾಗಿ ಕಾಡುತ್ತಲೆ ಶಿವಕುಮಾರ ಮತ್ತು ಕಣ್ಣಪ್ಪನ ಮಗಳ ಪ್ರೇಮಪ್ರಸಂಗ ಜಾತಿಯ ಕಾರಣಕ್ಕೆ ಬೇರೆ ತಿರುವನ್ನು ಪಡೆದು ಕಣ್ಣಪ್ಪ ಮಗಳ ಹುಚ್ಚುತನಕ್ಕೆ ಸಾಕ್ಷಿಯಾಗುತ್ತದೆ.
ಶಿವಕುಮಾರನ ಬದುಕಿನಲ್ಲಿ ನಡೆದ ಈ ಪ್ರಸಂಗ ಸ್ವಪ್ನಮಂಟಪದ ಸುತ್ತ ತಿರುಗತ್ತಲೆ ಇರುವಾಗ ವರ್ತಮಾನದಲ್ಲಿ ಬಂಡವಾಳ ಶಾಹಿಯ ವ್ಯಾಪಾರೀಕರಣ ಸ್ವಪ್ನಮಂಟಪವನ್ನೆ ದ್ವಂಸಮಾಡುವ ಸನ್ನಿವೇಶದಲ್ಲಿ ಇಡಿ ಊರನ್ನೆ ಸಂಘಟಿಸಿ ಸ್ವಪ್ನಮಂಟಪದಂತಹ ಚಾರಿತ್ರಿಕ ಸ್ಮಾರಕವನ್ನು ಉಳಿಸಲು ಶಿವಕುಮಾರ ಮತ್ತು ಮಂಜುಳ ಇಬ್ಬರೂ ಹೋರಾಟದ ಜೊತೆಜೊತೆಯಲ್ಲಿ ವಿವಾಹವಾಗುವ ಹೊಸ್ತಿಲಿಗೆ ಬಂದು ಮಂಜುಳ ಅವರ ತ್ಯಾಗದಿಂದ ಸಮಾಜವೆ ನಿರ್ಲಕ್ಷ್ಯ ಮಾಡಿದ ಪ್ರೇಮವೊಂದು ಸುಖಾಂತ್ಯವಾಗುವಲ್ಲಿ ಸ್ವಪ್ನಮಂಟಪವೂ ಉಳಿಯುತ್ತದೆ ಪ್ರೇಮವು ಗೆಲ್ಲುತ್ತದೆ ಎಂಬಲ್ಲಿ ಸುಖಾಂತ್ಯವಾಗುತ್ತದೆ.

ಇಡೀ ಚಿತ್ರದಲ್ಲಿ ಒಂದು ಆದರ್ಶದ ಬದುಕಿದೆ. ಹೆಣ್ಣಿನ ಆಂತರ್ಯವಿದೆ, ಪುರುಷಾಂಕಾರವಿದೆ, ಜಾತಿಯ ಸುಳಿವಿದೆ, ಚರಿತ್ರೆಯನ್ನು ಅಳಿಸುವ ಹುನ್ನಾರವಿದೆ, ಸ್ಮಾರಕವನ್ನು ಉಳಿಸುವ ಸಂಘಟಿತ ಹೋರಾಟವಿದೆ, ಪಲಿಸದ ಪ್ರೇಮವಿದೆ ಸಾಕಾರಗೊಂಡ ಒಲವಿದೆ ಆದರ್ಶ ಶಿಕ್ಷಕರ ಬದುಕಿದೆ ಎಲ್ಲಕ್ಕಿಂತ ಮುಖ್ಯವಾಗಿ ಎಂದೂ ಅಳಿಸದ ಕನ್ನಡವಿದೆ, ಹೃದಯ ಮುಟ್ಟುವ ಸಂಭಾಷಣೆ ಇದೆ, ಮನಸ್ಸನ್ನು ಕದಡುವ ಮಾತಿದೆ, ಚಿತ್ತಕ್ಕೆ ಸವಾಲೊಡ್ಡುವ ಹೆಣ್ಣಿನ ಧ್ವನಿಯಿದೆ, ಸಂಗೀತದ ಲಾಲಸ್ಯವಿದೆ ಕಣ್ಣಿಗೆ ಕಟ್ಟುವಂತೆ ದೃಶ್ಯದ ಚಿತ್ರಣವಿದೆ, ದೃಶ್ಯದ ಓಗಕ್ಕೆ ಭಂಗಬಾರದಂತೆ ನಿರೂಪಿಸಿದ ಬರಗೂರು ಮೇಷ್ಟ್ರು ನಿರ್ದೇಶನವಿದೆ.
ಪ್ರತಿಯೊಬ್ಬರು ಅವರವರ ಪಾತ್ರಗಳನ್ನು ಒಳಹೊಕ್ಕು ಅಭಿನಯಿಸಿದ್ದಾರೆ. ಚಂಡೆರಾಯನಾಗಿ ರಾಜಪ್ಪ ದಳವಾಯಿ ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ ಶಿವಕುಮಾರನಾಗಿ ವಿಜಯರಾಘವೇಂದ್ರ ಮಂಜುಳ ಪಾತ್ರದಲ್ಲಿ ರಂಜನಿ ರಾಘವನ್ ಅಭಿನಯ ಚೆನ್ನಾಗಿದೆ. ಕಣ್ಣಪ್ಪ ಮಗಳಾಗಿ ಅಭಿನಯಿಸಿರುವ ರಜನಿಯ ಪಾತ್ರ ಪ್ರೇಕ್ಷಕರ ಮನಸ್ಸಿನಲ್ಲಿ ಉಳಿಯುತ್ತದೆ. ಸಿದ್ದಪ್ಪನಾಗಿ ಸುಂದರ್ ರಾಜ್ ಲವಲವಿಕೆಯಿಂದ ಅಭಿನಯಿಸಿದ್ದಾರೆ. ಬಂಡವಾಳಶಾಹಿಯ ಪಾತ್ರಧಾರಿಯಾಗಿ ಬರುವ ಪಾತ್ರವೂ ಚೆನ್ನಾಗಿದೆ ಅಲ್ಲಲ್ಲಿ ಬರುವ ಹಾಸ್ಯದ ತುಣುಕುಗಳು ಪ್ರೇಕ್ಷಕರನ್ನು ನಗಿಸಿ ಸಾಗುತ್ತದೆ. ಇಡೀ ಚಿತ್ರದ ಹೈಲೆಟ್ ಗ್ರಾಮೀಣ ಸೊಗಡಿನ ಭಾಷೆ ಮತ್ತು ಅವು ಉಂಟುಮಾಡುವ ಪರಿಣಾಮ ಮನಸ್ಸನ್ನು ಚಿಂತಿಸುವಂತೆ ಮಾಡುತ್ತವೆ. ಕಲಾತ್ಮಕ ಚಿತ್ರವಾದರೂ ಎಲ್ಲಿಯೂ ದೃಶ್ಯಗಳನ್ನು ಎಳೆಯದೆ ಚಕಚಕನೆ ದೃಶ್ಯದಿಂದ ದೃಶ್ಯಕ್ಕೆ ಸಾಗುವ ಚಿತ್ರಕತೆ ವ್ಯಾಪಾರಿ ಚಿತ್ರಗಳನ್ನು ಮರೆಮಾಚುತ್ತದೆ.ಯಾವ ಅಬ್ಬರವಿಲ್ಲದೆ ಒಂದಿಡಿ ಕುಟುಂಬ ನೋಡುವ ಚಿತ್ರ ‘ಸ್ವಪ್ನಮಂಟಪ ‘ನೋಡಿದ ಮೇಲೂ ಅದು ಕಾಡುತ್ತದೆ ಪರಂಪರೆಯೊಂದಿಗೆ ವರ್ತಮಾನದಲ್ಲಿ ಅನುಸಂಧಾನ ನಡೆಸುವ ಇಂತಹ ಚಿತ್ರಗಳು ಮತ್ತಷ್ಟು ಬರಲಿ ಬರಗೂರು ಮೇಷ್ಟ್ರು ಇನ್ನಷ್ಟು ಚಿತ್ರಗಳನ್ನು ನಿರ್ದೇಶಿಸಲಿ ಅವು ಎಲ್ಲರ ಮನಸ್ಸುಗಳನ್ನು ಮುಟ್ಟಲಿ ಅವರ ಆಶಯಗಳು ಎದೆಯನ್ನು ತಟ್ಟಲಿ ಇಡೀ ಚಿತ್ರತಂಡಕ್ಕೆ ಶುಭವಾಗಲಿ.
- ಮಾರುತಿ ಗೋಪಿಕುಂಟೆ
