ಆಕಾಶವಾಣಿಯಲ್ಲಿ ಅಧಿಕಾರಿಯಾಗಿರುವ ಲೇಖಕಿ ನೂತನ ದೋಶೆಟ್ಟಿ ಅವರು ಹೃಷಿಕೇಶದಿಂದ ಪ್ರಾರಂಭವಾದ ಅವರ ಈ ಕಥನದ ಕುರಿತು ಲೇಖಕರಾದ ರಘುನಾಥ್ ಕೃಷ್ಣಮಾಚಾರ್ ಅವರು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ. ತಪ್ಪದೆ ಮುಂದೆ ಓದಿ…
ಕೃತಿ :ಸ್ವರ್ಗದೊಂದಿಗೆ ಅನುಸಂಧಾನ
ಲೇಖಕಿ : ನೂತನ ದೋಶೆಟ್ಟಿ
ಬಸವ ಭಕ್ತೆ, ಶಿವ ಶರಣೆಯೆಂದು ತನ್ನನ್ನು ಗುರುತಿಸಿಕೊಳ್ಳಲು ಇಷ್ಟ ಪಡುವ ಲೇಖಕಿ, ಬಸವಣ್ಣನವರ ” ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ” ಎಂಬುದನ್ನು ನೆಚ್ಚಿಕೊಂಡು, ನಿರಂತರ ಪಯಣ ಕೈಗೊಳ್ಳಲು ಹಾತೊರೆಯುವವರು.ಅದರ ಪರಿಣಾಮವಾಗಿ ಮೂರು ವರ್ಷಗಳ ಹಿಂದೆ, ಅವರು ಏಕಾಂಗಿಯಾಗಿ ಮಾಡಿದ ಚಾರದಾಮ್ ಯಾತ್ರೆಯ ಪ್ರವಾಸದ ಫಲವೇ ಈ ಕೃತಿ.ನಾವು ಕೂಡ ಅವರು ಹೋದ ಮರುವರ್ಷವೇ ಅಲ್ಲಿ ಪ್ರವಾಸ ಮಾಡಿ ಬಂದಿದ್ದರಿಂದ, ಅವರ ಈ ಕಥನದ ಅನುಭವದೊಂದಿಗೆ ನಮ್ಮ ಅನುಭವಗಳ ಸಾಮ್ಯತೆಯನ್ನು ಕಂಡುಕೊಳ್ಳಲು ಸಾಧ್ಯವಾಯಿತು.
ಆಕಾಶವಾಣಿಯಲ್ಲಿ ಅಧಿಕಾರಿಯಾಗಿರುವ ಈ ಲೇಖಕಿ ಅದರ ಬಲದಿಂದ ಸಂಪರ್ಕ ಸಾಧಿಸಿ , ಒಳ್ಳೆಯ ಚಾಲಕನನ್ನು ಒದಗಿಸಿಕೊಳ್ಳಲು ಸಾಧ್ಯವಾಯಿತು. ಕೃತಿಯ ಕೊನೆಯಲ್ಲಿ ಅವರ ಫೋಟೋ ಕೂಡ ಹಾಕಿ ಕೃತಜ್ಞತೆಗಳನ್ನು ಸಲ್ಲಿಸಿರುವುದು ಲೇಖಕಿಯ ಅಂತ:ಕರಣಕ್ಕೆ ಸಾಕ್ಷಿ.
ಹೃಷಿಕೇಶದಿಂದ ಪ್ರಾರಂಭವಾದ ಅವರ ಈ ಕಥನ ಅದರಿಂದ ಕೊನೆಗಾಣುವುದು ಇದರ ಆವರ್ತನ ವಿನ್ಯಾಸಕ್ಕೆ ಸಾಕ್ಷಿ. ಪ್ರತಿ ಸ್ಥಳದ ಇತಿಹಾಸದ ಜೊತೆಗೆ ,ಅದರ ಹಿಂದಿನ ಐತಿಹ್ಯ ಮತ್ತು ಪುರಾಣಗಳನ್ನು ಜೋಡಿಸಿರುವುದು ಲೇಖಕಿಯ ಮಾಹಿತಿಯನ್ನು ಪೂರಕವಾಗಿ ಬಳಸಿಕೊಳ್ಳುವುದಕ್ಕೆ ನಿದರ್ಶನ .ಉದಾಹರಣೆಗೆ ಶಂಕರಾಚಾರ್ಯರು ಅಲ್ಲಿ ಸ್ಥಾಪಿಸಿದ ಮಠ, ಅದಕ್ಕೆ ಅಲ್ಲಿ ನೆಲೆಸಿದ್ದ ಬೌದ್ಧರನ್ನು ಓಡಿಸಿದ್ದನ್ನು ,ಇಲ್ಲಿ ಕಾಣಿಸಿರುವುದು ಅವರ ಐತಿಹಾಸಿಕ ವಸ್ತುನಿಷ್ಠೆಯ ಫಲ.ಅಲ್ಲಿ ಅವರು ಇದ್ದುದು ೮೧೨-೮೧೪ ಎಂದು, ೧೫೦೦ ವರ್ಷಗಳ ಹಿಂದೆ ಎನ್ನುವುದು ಲೇಖಕಿಯ ತಪ್ಪಿದ ಲೆಕ್ಕಾಚಾರಕ್ಕೆ ನಿದರ್ಶನ.

ಈ ಸ್ವರ್ಗದ ಅನುಸಂಧಾನಕ್ಕೆ ಎರಡು ಆಯಾಮಗಳು ಇವೆ.ಒಂದು ಅಗಾಧ ಪ್ರಕೃತಿಯ ಮಡಿಲಲ್ಲಿ ಅವರು ಅನುಭವಿಸುವ ಸೌಂದರ್ಯ ಮತ್ತು ಶಾಂತಿ ಅನುಭಾವದ ಮಟ್ಟಕ್ಕೆ ಏರಿ, ಅದನ್ನು ಅಭಿವ್ಯಕ್ತಿಸಲು ಅವರು ಕಾವ್ಯಮಯ ಭಾಷೆಯ ಮೊರೆಹೋಗುತ್ತಾರೆ. ಎರಡು ಅದರ ರುದ್ರ ರಮಣೀಯತೆ ಇವರನ್ನು ಭಯಭೀತರನ್ನಾಗಿಸುತ್ತದೆ.ಅದಕ್ಕೆ ಕಾರಣ ಆಕಸ್ಮಿಕವಾಗಿ ಅಲ್ಲಿ ಉಂಟಾಗುವ ಭೂಕುಸಿತ. ಅದನ್ನು ಇವರು ಭೂಸ್ಖಲನ ಎಂದು ವರ್ಣಿಸಿದ್ದಾರೆ . ಪ್ರತಿ ಕ್ಷಣ ಸಾವಿನ ದವಡೆಗೆ ಸಿಕ್ಕು ಪಾರಾಗಬೇಕಾದ ಪರಿಸ್ಥಿತಿ.ಅಲ್ಲಿ ಅದಕ್ಕೆ ಪರ್ಯಾಯವೆ ಇಲ್ಲ.ಏಕೆಂದರೆ ಒಂದು ಕಡೆ ಬೆಟ್ಟ ಇನ್ನೊಂದು ಕಡೆ ಆಳವಾದ ಕಣಿವೆ. ಆದರೆ ಇದೆ ಶಾಂತಿಯನ್ನು ಅವರು ಕೇದಾರನಾಥ ದೇವಾಲಯದಲ್ಲಿ ಅನುಭವಿಸಲು ಸಾಧ್ಯವಾಗುವುದಿಲ್ಲ.ಅದಕ್ಕೆ ಕಾರಣ ಅಭಿವೃದ್ಧಿಯ ಹೆಸರಿನಲ್ಲಿ ಅಲ್ಲಿ ಆಗಿರುವ ವಾಣಿಜ್ಯೀಕರಣ.ಅದರ ಹಿಂದೆ ಅವರ ಪರಿಸರದ ಕುರಿತ ಕಾಳಜಿಯು ಅಡಗಿದೆ.
ಅವರ ದೈಹಿಕ ಸವಾಲುಗಳು, ಕನಸಿನಲ್ಲಿ ಕೂಡ ಅವರನ್ನು ಕಾಡುವುದಲ್ಲದೆ, ನನಸಿನಲ್ಲಿ ಕೂಡ ಧುತ್ತೆಂದು ಪ್ರತ್ಯಕ್ಷವಾಗಿ ಅವರನ್ನು ಕಂಗೆಡಿಸುತ್ತದೆ. ಇಷ್ಟಾದರೂ ತಾನು ಅನುಭವಿಸಿದ ಸ್ವರ್ಗ ಸದೃಶ ಅನುಭವವನ್ನು, ಇಡಿಯಾಗಿ ಹಿಡಿಯಲಾಗದ ಕೊರತೆಯನ್ನು,’ ಹೇಳದೆ ಉಳಿದಿದ್ದು ಎಷ್ಟೋ’ ಎನ್ನುವಲ್ಲಿ ವ್ಯಕ್ತವಾಗುತ್ತದೆ.
ಅವರು ಬಳಸುವ ಅಕ್ಕೋರು ಉತ್ತರ ಕನ್ನಡದ ಶಿಕ್ಷಕಿಯರಿಗೆ ಬಳಸುವ ಶಬ್ದ, ಅದನ್ನು ಇಲ್ಲಿ ಪ್ರಕೃತಿಯ ಜೊತೆಗೆ ಸಮೀಕರಿಸಿ , ಅಗಾಧವಾದ ಪ್ರಕೃತಿಯ ಎದುರು ಮನುಷ್ಯ ತೆಪ್ಪಗೆ ಇರುವುದು ಅಗತ್ಯ ಎಂಬ ಪಾಠವನ್ನು ಹೇಳಿಕೊಡಲು ಬಳಸಲಾಗಿದೆ. ಯಮುನೆ ಗಂಗೆ ಅಲಕಾನಂದ ಸರಸ್ವತಿ ಇವುಗಳ ಕುರಿತು ಬರೆಯುವಾಗ, ಅವುಗಳ ಶುದ್ಧತೆಯ ಪರಿವೆಯಿಲ್ಲದೆ,ಭಕ್ತರು ಅವುಗಳನ್ನು ಕಲುಷಿತ ಗೊಳಿಸಿರುವ ಕುರಿತ , ಸ್ನಾನಕ್ಕೆ ಅಯೋಗ್ಯವನ್ನಾಗಿಸಿರುವುದಕ್ಕೆ, ಸಾತ್ವಿಕ ಸಿಟ್ಟನ್ನು ಪ್ರಕಟಿಸುವುದು ಸರಿಯಾಗಿದೆಯೇ ಇದೆ.ಅದರಂತೆ ಜನರ ಮುಗ್ನ ಭಕ್ತಿಯನ್ನು ದುರುಪಯೋಗ ಪಡಿಸಿಕೊಂಡ ಸಂನ್ಯಾಸಿಗಳ ಕುರಿತು ಇದೆ ಬಗೆಯ ಟೀಕೆಯನ್ನು ಮಾಡಿದ್ದಾರೆ. ಅವರು ಹಣ ಬಿಚ್ಚದೆ ತೆಗೆದುಕೊಂಡು ಹೋದ ಅಕ್ಕಿಯನ್ನು ,ಗೌರಿ ಕುಂಡದ ಬಿಸಿ ನೀರಿನಲ್ಲಿ ಹಾಕಿ ಅನ್ನ ಮಾಡುವುದಿಲ್ಲ ಎಂದು ದೂರಿದರೂ ,ಲೇಖಕಿ ಕೂಡ ಅದಕ್ಕೆ ಬಲಿಯಾಗುವುದು ವಿಷಾದನೀಯ. ಆದರೆ ಗೌರಿಯ ಜೊತೆಗೆ ಹೆಣ್ಣು ಮಕ್ಕಳ ನಂಟನ್ನು ನೆನಪು ಮಾಡಿ ಕೊಳ್ಳುವುದು ಸ್ವಾರಸ್ಯಕರವಾಗಿ ಮೂಡಿಬಂದಿದೆ.

ಲೇಖಕಿಯ ಭಾರತದ ಕೊನೆಯ ಹಳ್ಳಿ, ಮಾನಾ ವ್ಯಾಸನಿಗೆ ವಿನಾಯಕ ಭಾರತವನ್ನು ಹೇಳಿದ ಗುಹೆಯ ಭೇಟಿ, ನಾವು ಅಲ್ಲಿಗೆ ಹೋದ ನೆನಪು ಮರುಕಳಿಸುವಂತೆ ಮಾಡಿತು.
ಲೇಖಕಿ ಈ ಪ್ರವಾಸವನ್ನು ಸ್ವರ್ಗ ಎಂದು ಕರೆದಿರುವುದು ಸರಿಯಾಗಿಯೇ ಇದೆ.ಏಕೆಂದರೆ ಅದು ನಮ್ಮ ಅನುಭವ ಕೂಡ. ಇದನ್ನು ಓದಿದಾಗ ಅದು ಮರುಕಳಿಸಿತು .ತಮ್ಮ ವ್ಯಕ್ತಿತ್ವದ ಒಂದು ಭಾಗವನ್ನು ಆ ಹಿಮಾಲಯದ ಮಡಿಲಲ್ಲಿ ಬಿಟ್ಟು ಬಂದಿರುವುದಾಗಿ ಹೇಳಿಕೊಂಡಿದ್ದಾರೆ.
ನಡೆಯುವವರಿಗೆ ನಡತೆದಾರರು ಎನ್ನುವ ವಿಚಿತ್ರ ಪದಪ್ರಯೋಗ ಮತ್ತು ಕೆಲವು ಲಿಪಿ ಸ್ಖಾಲಿತ್ಯಗಳನ್ನು ಹೊರತುಪಡಿಸಿದರೆ, ಮತ್ತು ಕ್ವಚಿತ್ತಾಗಿ ಬರುವ ಅನ್ಯ ಭಾಷೆಗಳ ಬಳಕೆಅದು ಬಾರದವರಿಗೆ ಸಂವಹನಕ್ಕೆ ತೊಡಕನ್ನು ಉಂಟು ಮಾಡುತ್ತದೆ . ಲೇಖಕಿ ನೋಡಿದ ಸ್ಥಳಗಳ ಭಾವಚಿತ್ರಗಳನ್ನು ಒಳಗೊಂಡು ಈ ಕೃತಿ ಅನನ್ಯವಾಗಿ ಮೂಡಿಬಂದಿದೆ. ನನ್ನ ಮೇಷ್ಟ್ರು ಜಿ.ಎಸ್.ಎಸ್.ಅವರ’ ಗಂಗೆಯ ಶಿಖರಗಳಲ್ಲಿ ‘ಓದಿದ ನಂತರ, ಚಾರ್ ದಾಮಗಳ ಪ್ರವಾಸ ಕುರಿತು ನಾನು ಓದಿದ ಎರಡನೇ ಕೃತಿ ಇದು.ಇದನ್ನು ಓದುವಾಗ ಮತ್ತೆ ಮತ್ತೆ ಅದರ ನೆನಪು ಮರುಕಳಿಸಿತು. ಲೇಖಕಿಯರ ಸಮ್ಮೇಳನದಲ್ಲಿ ನನ್ನ ಸಂಗಾತಿಯ ಜೊತೆಗೆ ಭಾಗವಹಿಸಿದಾಗ ,ಈ ಪುಸ್ತಕವನ್ನು ಕೊಟ್ಟು ಓದಲು ಅವಕಾಶ ಕಲ್ಪಿಸಿದ ಅವರಿಗೆ ಕೃತಜ್ಞತೆಗಳು.
ಸಿದ್ದಯ್ಯ ಪುರಾಣಿಕರ ” ಪ್ರಕೃತಿಯೇ ಗುರು, ಗಗನವೇ ಲಿಂಗವು, ಜಗವಿದೆಲ್ಲೆವು ಜಂಗಮ ,ಕುಡಿವ ನೀರೇ ತೀರ್ಥ , ತಿನ್ನುವ ರೊಟ್ಟಿ ಶಿವನ ಹಸಾದ” ಎನ್ನುವುದರ ಸಾಕ್ಷಾತ್ಕಾರ ಆಗಬೇಕಾದರೆ ಈ ಕೃತಿಯನ್ನು ಓದಬೇಕು.
- ರಘುನಾಥ್ ಕೃಷ್ಣಮಾಚಾರ್ – ಲೇಖಕರು, ರಾಮನಿರಂಜನ್ ಝುನ್ಝುನ್ವಾಲ ಕಾಲೇಜು ಉಪನ್ಯಾಸಕರು
