ಕವಿತೆಯಂತಹ ಕಥೆಗಳ ನೆಪದಲ್ಲಿ – ಕೇಶವ ಮಲಗಿ

ಮಲಯಾಳಂನ ಶಿಹಾಬುದ್ದಿನ್‌ ಪೊಯ್ತುಂಕಡವು ಅವರ ʻತಾಜ್‌ಮಹಲಿನ ಖೈದಿಗಳುʼ ಕತೆಗಳನ್ನ ಸರಿಯಾದ ಪದ, ವಾಕ್ಯಗಳನ್ನು ಬಳಸಿ ಕನ್ನಡಕ್ಕೆ ಅನುವಾದಿಸಿದ್ದಾರೆ ಸುನೈಫ್‌ ಅವರು. ತಾಯಿ – ಮಗಳು – ತಂದೆ – ಮಗಳು, ಪ್ರೇಮಿ-ಪ್ರೇಯಸಿ ಹೀಗೆ ಗಂಡು ಹೆಣ್ಣಿನ ಬಿಡದ ಅಂಟುನಂಟಿನ ಒಳವನ್ನು ಶೋಧಿಸುವುದೇ ಇಲ್ಲಿನ ಕೆಲವು ಮುಖ್ಯ ಕಥೆಗಳ ಗುರಿಯಾಗಿದೆ. ಖ್ಯಾತ ಅನುವಾದಕರು ಕೇಶವ ಮಲಗಿ ಅವರು ಈ ಪುಸ್ತಕದ ಕುರಿತು ಓದುಗರ ಮುಂದೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಪುಸ್ತಕ : ತಾಜ್‌ಮಹಲಿನ ಖೈದಿಗಳು
ಮೂಲ ಕಥೆಗಾರರು : ಶಿಹಾಬುದ್ದಿನ್‌ ಪೊಯ್ತುಂಕಡವು
ಕನ್ನಡಕ್ಕೆ ಅನುವಾದ : ಸುನೈಫ್‌ ವಿಟ್ಲ
ಪ್ರಕಾಶನ : ಸ೦ಕಥನ ಪ್ರಕಾಶನ

ಕನ್ನಡ ಮತ್ತು ಮಲಯಾಳಂ ಈ ಎರಡೂ ದ್ರಾವಿಡ ಭಾಷೆಗಳ ಸಂಬಂಧ ಎರಡೂ ರಾಜ್ಯಗಳ ಕರಾವಳಿ ದಂಡೆಗಳ ಮೂಲಕ ನೂರಾರು ವರ್ಷಗಳಿಂದ ಹರಿಯುತ್ತ ಬಂದಿದೆ. ಅದು ʻಮಲೆಗಳಲ್ಲಿ ಮದುಮಗಳುʼ ಕಾದಂಬರಿಯಲ್ಲಿ ಬರುವ ಪಾತ್ರವೊಂದರ ಮೂಲಕ ಪಶ್ಚಿಮಘಟ್ಟಗಳ ಮಲೆನಾಡನ್ನೂ ಆವರಿಸಿದೆ. ನಾನು ಅತಿ ಚಿಕ್ಕವನಿದ್ದಾಗ ಕೇಳಿದ ʻಸೊಂಟಿ ಕಾಪಿʼ, ʻಹರೇರʼ ಎಂಬುವೇ ಮೊದಲ ಮಲಯಾಳಿ ಪದಗಳಿರಬೇಕು. ಸಣ್ಣ ಇದ್ದಿಲು ಒಲೆಯಲ್ಲಿ ಒಳಗೆ ಕೂತು ಹೊಗೆಯೆಬ್ಬಿಸುವ ಕೆಂಡದ ಮೇಲೆ ಕುಳಿತ ಸಿಲವಾರದ, ಚಿಕ್ಕ ಕೊಳಾಯಿರುವ ಪಾತ್ರೆಯಿಂದ ಈ ಹರೇರವನ್ನು ಅತಿಚಿಕ್ಕ ಗ್ಲಾಸಿನಲ್ಲಿ ಹಾಕಿಕೊಡುತ್ತಿದ್ದುದು ಮಲಯಾಳಿ ʼಕಾಕಾʼಗಳು. ನಸುಕಿನಲ್ಲಿಯೇ ಇವರ ʻಹರೇರʼ ಎಂಬ ವಿಚಿತ್ರ ಧ್ವನಿಯ ಕೂಗು ನನ್ನನ್ನು ದಶಕಗಳ ಕಾಲ ಕಾಡಿದೆ. ನಾವು ಕರ್ಮಠರಾದುದರಿಂದ ಹರೇರ ಮತ್ತು ಸೊಂಟಿಕಾಪಿಗಳ ರುಚಿಯನ್ನು ನಾನೆಂದೂ ಸವಿಯಲಾಗಲೇ ಇಲ್ಲ.

ಅದಿರಲಿ, ಆಮೇಲೆ ಮಲಯಾಳದ ಮಾಂತ್ರಿಕತೆಯು ವೈಕಂ, ತಕಳಿ, ಎಂ.ಟಿ.ವಿ, ಮಾಧವಿ ಕುಟ್ಟಿ, ಓ.ವಿ.ವಿಜಯನ್‌, ಸಚ್ಚಿದಾನಂದ ಅವರ ಗದ್ಯ, ಕಾವ್ಯದ ಮೂಲಕ ನನ್ನ ಭಾವಲೋಕವನ್ನು ವಿಸ್ತರಿಸಿದವು. ಜಾನ್‌ ಅಬ್ರಹಾಂ, ಅರವಿಂದನ್‌, ಭರತನ್‌ ನನ್ನ ಚಲನಚಿತ್ರ ಆಸಕ್ತಿಯನ್ನು ಬೆಳೆಸಿದರು. ಮಲಯಾಳದ ಗದ್ಯ ಮತ್ತು ಕಾವ್ಯವನ್ನು ಬಹುಪಾಲು ಓದಿದ್ದು ಕನ್ನಡದಲ್ಲಿಯೇ. ಅಂದರೆ, ಮಲಯಾಳಂನಿಂದ ಕನ್ನಡಕ್ಕೆ ಅನುವಾದಿಸುವ ಒಂದು ಪರಂಪರೆ ಕನ್ನಡದಲ್ಲಿ ಸದಾ ಕಾರ್ಯನಿರತವಾಗಿದೆ.

ಇಂದು ಬೆಂಗಳೂರಿನ ಗಾಂಧಿಭವನದಲ್ಲಿ ಆ ಕೊಂಡಿಗೊಂದು ಹೊಸ ಗಾಲಿಯನು ಸೇರಿಸಿದವರು ಸುನೈಫ್‌. ಮಲಯಾಳದ ಅತ್ಯಂತ ವಿಶಿಷ್ಟ ಸಂವೇದನೆಯ ಕಥೆಗಾರ ಶಿಹಾಬುದ್ದಿನ್‌ ಪೊಯ್ತುಂಕಡವು ಅವರ ಪ್ರಾತಿನಿಧಿಕ ಕಥೆಗಳ ಸಂಕಲನ ʻತಾಜ್‌ಮಹಲಿನ ಖೈದಿಗಳುʼ ಅವರು ಕನ್ನಡಕ್ಕೆ ತಂದಿರುವ ಅಪರೂಪದ ಕೃತಿ. ಈ ಸಂಕಲನದಲ್ಲಿ, ಶಿಹಾಬುದ್ದೀನ್‌ ಬರೆದ ಮೂವತ್ತೈದು, ಮೂವತ್ತಾರು ವರ್ಷಗಳ ಕಥೆಗಳಿವೆ.

ಶಿಹಾಬುದ್ದೀನ್‌ ಮೂಲತಃ ಭಾಷಾವಿನ್ಯಾಸ ಮತ್ತು ತಾವು ಸೃಷ್ಟಿಸುವ ರೂಪಕಶಕ್ತಿಯ ಪ್ರತಿಭೆಯಿಂದಾಗಿ ನನಗೆ ಬಹಳ ಇಷ್ಟವಾದರು. ಈ ವಾರ, ಹತ್ತುದಿನಗಳಿಂದ ಅವರ ಹದಿನೇಳು ಕಥೆಗಳನ್ನು ಓದಿರುವೆ. ಕಾವ್ಯಕ್ಕೆ ಹತ್ತಿರವಾದ ಅವರ ರೂಪಕ ಭಾಷೆ, ಸಾಂದ್ರತೆ, ಚಿಕ್ಕಚಿಕ್ಕ ವಾಕ್ಯಗಳ ಸಂಭಾಷಣೆ ಶೈಲಿ ಆಕರ್ಷಕ. ಓದುಗನಲ್ಲಿ ತಳಮಳ, ದಿಗಿಲು, ವಿನೋದ, ಅಚ್ಚರಿ, ಕರುಣೆ ಮತ್ತು ತೀವ್ರ ವಿಷಾದಗಳನ್ನು ಈ ಕಥೆಗಳು ನೀಡುತ್ತವೆ. ಈ ಕಥೆಗಳ ಬಹುಮುಖ್ಯ ಕಾಳಜಿ: ಬದುಕಿನಲ್ಲಿ ಸುಖವೆಂದರೇನು? ಮನುಷ್ಯರ ಅಪನಂಬಿಕೆ, ಅಭದ್ರತೆ, ಅಸೂಯಾಪರತೆಗೆ ಕಾರಣವೇನಿರಬಹುದು? ಎಂದು ಶೋಧಿಸುವುದಾಗಿದೆ.

ಗಂಡುಹೆಣ್ಣುಗಳ ಸಿಕ್ಕುಸಿಕ್ಕಾದ ಸಂಬಂಧಗಳು (ಅದನ್ನು ದಾಂಪತ್ಯವೆಂದು ಬೇಕಾದರೆ ಕರೆಯಿರಿ) ಅವು ಪಡೆಯುವ ತಿರುವುಗಳು ಕೂಡ ಕಥೆಗಳ ಇನ್ನೊಂದು ಮುಖ್ಯ ಕಾಳಜಿ. ತಾಯಿ-ಮಗಳು-ತಂದೆ-ಮಗಳು, ಪ್ರೇಮಿ-ಪ್ರೇಯಸಿ ಹೀಗೆ ಗಂಡುಹೆಣ್ಣಿನ ಬಿಡದ ಅಂಟುನಂಟಿನ ಒಳವನ್ನು ಶೋಧಿಸುವುದೇ ಇಲ್ಲಿನ ಕೆಲವು ಮುಖ್ಯ ಕಥೆಗಳ ಗುರಿ.

ಇಲ್ಲಿನ ಕಥೆಗಳು ಹೇಗೆ ಕಾವ್ಯಮಯವೋ ಹಾಗೆಯೇ, ನಿಗೂಢವಾದ ಅಮೂರ್ತತೆ ಮತ್ತು ಅಸಂಗತ ಗುಣವನ್ನೂ ಹೊಂದಿವೆ.


*
ಸುನೈಫ್‌ ವಿಟ್ಲ ಅವರ ಅನುವಾದದಲ್ಲಿ ಅಪಾರವಾದ ಶ್ರದ್ಧೆ, ತಲ್ಲೀನತೆ ಸರಿಯಾದ ಪದ, ವಾಕ್ಯಗಳಿಗಾಗಿ ಅವರು ನಡೆಸಿದ ಪ್ರಯತ್ನಗಳು ಈ ಕಥೆಗಳನ್ನು ಓದಿದಾಗ ಅರಿವಿಗೆ ಬರುತ್ತದೆ. ಹೊಸ ತಲೆಮಾರಿಗೆ ಅವರೊಬ್ಬ ಸ್ಫೂರ್ತಿದಾಯಕ ಅನುವಾದಕರು ಮಾತ್ರವಲ್ಲ, ಅನುವಾದದ ತಾದ್ಯಾತ್ಮತೆ ಹೇಗಿರಬೇಕು ಎಂಬುದನ್ನು ಮಾದರಿಯೂ ಆಗಿದ್ದಾರೆ.

ಇನ್ನೂ, ಕಾರ್ಯಕ್ರಮದ ಸಭಾಂಗಣ ತುಳುಕುತ್ತಿದ್ದುದಕ್ಕೆ ನಾನು ಕಾರಣವೆಂಬ ಭ್ರಮೆಯೇನೂ ನನಗಿರಲಿಲ್ಲ. ಅದಕ್ಕೆ ಸುನೈಫ್‌ರ ಗೆಳೆಯರ ಬಳಗ ದೊಡ್ಡದು ಮತ್ತು ಸಾಕಿಯ ಮಧುಶಾಲೆಯ ಭಕ್ತರು ಸಭಾಂಗಣಕ್ಕೆ ಮುಗಿಬಿದ್ದುದು ನಿಜವಾದ ಕಾರಣ. ಯಾವುದೋ ತುರ್ತು ಕೆಲಸವೆಂದು ಅರ್ಧದಲ್ಲಿಯೇ ಹೋದ ಸಾಕಿಯವರನ್ನು ಹುಡುಕಿದ ಮಧುಶಾಲೆಯ ಪ್ರೇಮಿ: “ಸರ್‌, ಅವರನ್ನು ನೀವು ನೋಡಿಲ್ಲವೆ? ನಿಮಗೆ ಪರಿಚಯವಿಲ್ಲವೆ?” ಎಂದು ದುಃಖಾರ್ತರಾಗಿ ಕೇಳಿದರು. ನಾನು ಅವರ ಕೈಯಲ್ಲಿ ತಾಜ್‌ಮಹಲಿನ ಖೈದಿಗಳು ಪುಸ್ತಕವನ್ನು ಗಮನಿಸಿ, “ಇಲ್ಲ, ಅಷ್ಟರಲ್ಲಿಯೇ ಹೊರಟುಹೋಗಿದ್ದರು. ಇನ್ನೊಮ್ಮೆ ಸಿಗುತ್ತಾರೆ, ಸಮಾಧಾನ ಮಾಡಿಕೊಳ್ಳಿ” ಎಂದು ಮುಖ್ಯದ್ವಾರದವರೆಗೆ ಕೈಹಿಡಿದು ನಡೆಸಿಕೊಂಡು ಹೋಗಿ, ಮಧುಶಾಲೆಗೆ ಬಿಟ್ಟು ಅಲ್ಲಿಂದ ನನ್ನ ಮನೆಯ ಹಾದಿ ಹಿಡಿದೆ.

ಪಾಪ, ಈ ಘಟನೆ ಕೇಳಿದರೆ, ಸಾಕಿ ಎಷ್ಟು ನೊಂದುಕೊಳ್ಳುವರೋ. ಇರಲಿ, ಬಿಡಿ. ಮಧುಶಾಲೆಗಳು ಮುಚ್ಚದಿರುವವರೆಗೆ ಮಧುಮೋಹಿಗಳು ಮತ್ತೆ ಬಂದೆ ಬರುವ ಭರವಸೆ ಇರುತ್ತದೆ.

ಅದೆಲ್ಲ ಇರಲಿ. ಶಿಹಾಬುದ್ದೀನ್‌ ಅವರ ಕಥೆಗಳು ಒಂದು ಉತ್ಕಟ ಓದಿನ ಅನುಭವವನ್ನು ನೀಡುತ್ತದೆ. ಈ ಪುಸ್ತಕ ನೀವು ಓದದಿದ್ದರೆ, ಒಬ್ಬ ಸಮರ್ಥ ಕಥೆಗಾರನ ಕಥನಕುಶಲತೆ, ಅಷ್ಟೇ ಒಳ್ಳೆಯ ಅನುವಾದಕನ ಭಾಷಾ ಚತುರತೆ ಏನೆಂದು ತಿಳಿಯುವ ಅವಕಾಶವನ್ನು ಕಳೆದುಕೊಳ್ಳುತ್ತೀರಿ. ಅದಕ್ಕೆ ಅವಕಾಶ ಮಾಡಿಕೊಡುವುದಿಲ್ಲವೆಂದು ನನಗೆ ಗೊತ್ತು. ಹತ್ತಿರದ ಪುಸ್ತಕ ಮಳಿಗೆಗಳಲ್ಲಿ ಈ ಪುಸ್ತಕವನ್ನು ಕೇಳಿ, ಕೊಂಡು, ಓದಿ.


  • ಕೇಶವ ಮಲಗಿ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW