ಲೋಕದಲ್ಲಿ ದುಃಖವೇ, ವ್ಯಸನವೇ ಅಧಿಕ ! ಇದನ್ನು, ‘ಕಣ್ಣೀರಿನ ಕಣಿವೆ’ ಎಂದೇ ಕರೆಯುತ್ತಾರೆ. ಅದರಲ್ಲೂ ಸಾರವನ್ನು ಹುಡುಕುವಂತಹ ಕೆಲಸ ಸಾಗಬೇಕಾದರೆ ಸಂತೋಷ ಕೊಡುವ ಸಂಗತಿಗಳನ್ನು ಮನದಾಳಕ್ಕೆ ಇಳಿಸಿಕೊಂಡು ಅದರಲ್ಲಿ ತಾದಾತ್ಮ್ಯ ಹೊಂದಬೇಕು. ನಿವೃತ್ತ ಶಿಕ್ಷಕರಾದ ಶಿವದೇವಿ ಅವನೀಶಚಂದ್ರ ‘ಕಪ್ಪೆ ಗೂಡಿನಲ್ಲಿ ಬಚ್ಚಿಟ್ಟ ನೆನಪುಗಳು’ ಅಂಕಣವನ್ನು ತಪ್ಪದೆ ಮುಂದೆ ಓದಿ…
ಅಂಗಳದಲ್ಲಿ ತುಳಸಿಯ ಮುಂದೆ ರಂಗೋಲಿ ಹಾಕುತ್ತಿದ್ದೆ. ಬಣ್ಣ ಬಣ್ಣದ ಹೂಗಳಿದ್ದವು ಬುಟ್ಟಿಯಲ್ಲಿ. ಒಂದೊಂದನ್ನೇ ವರ್ಣ ಸಂಯೋಜನೆಗಾಗಿ ಅಲ್ಲಲ್ಲಿ ಜೋಡಿಸುತ್ತಿದ್ದೆ. ಮೇಲಿಂದ ಬಳುಕುತ್ತಾ ಹಲವಾರು ಎಲೆಗಳು ಅಂಗಳಕ್ಕೆ ಬಿದ್ದುವು. ಎಲ್ಲವೂ…ಸ್ವರ್ಣ ಕಾಂತಿಯವೇ…ಏಕೋ ಇವುಗಳಿಗಿಂತ ಅವುಗಳಿಗೇ ಹೆಚ್ಚು ಆಕರ್ಷಣೆಯಿರುವಂತೆ ಅನಿಸಿತು. ಬಿಳಿ ಮಲ್ಲಿಗೆ, ಗುಲಾಬಿ, ಗೊರಟೆ, ಕೆಂಪುಕಾಸರ್ಕ, ದಾಸವಾಳ, ತುಂಬೆ, ಡೇಲಿಯಾಗಳ ನಡುವೆ ಈ ಎಲೆಗಳನ್ನು ಅಲ್ಲಲ್ಲಿ ಅಲಂಕರಿಸಿದೆ. ಕಣ್ಣಿಗೆ ಹಬ್ಬವೆನಿಸಿತು. ಎಷ್ಟು ಮೋಹಕವಾಗಿ ಕಾಣುತ್ತಿದೆ ಈ ರಂಗವಲ್ಲಿ..!
ಕಣ್ಣುಗಳೇಕೋ ತುಂಬಿ ಬಂದುವು…ಬಾಳಿಗೆ ಸ್ವರ್ಣಕಾಂತಿ ನೀಡುತ್ತಿದ್ದ ಹಿರಿಯ ಚೇತನಗಳನ್ನು ನೆನೆದು.ಅರಿಯದಂತೆ ಹಸ್ತಗಳು ಅಂಜಲಿಬದ್ಧವಾದುವು…
*
‘ಪಟೇಲ್ ಪುಟ್ಟಪ್ಪನವರ ಅಣ್ಣಾ ತೀರ್ಕೊಂಡ್ರಂತೆ’ ಮತ್ತೆಮತ್ತೆ ಜನಮಾತಾಡ್ಕೊಳ್ತಾ ಇದ್ರು…’ಅಯ್ಯೋ ಹೌದಾ…ಏನಾಗಿತ್ತಂತೆ..? ನಿನ್ನೆ ತಾನೇ ಮಾತನಾಡಿಸಿದ್ದರು ನನ್ನನ್ನು, ಎಷ್ಟು ಒಳ್ಳೇ ಮನುಷ್ಯ…! ಇಷ್ಟ್ಬೇಗ ಅವರು ಹೋಗ್ಬಾರ್ದಾಗಿತ್ತು…ಎಲ್ಲರಿಗಾಗಿ ದುಡಿದು ತಮ್ಮ ಪಾಲಿನ ಸುಖ ಕಾಣ್ತಿದೀನಿ ಅನ್ನೋ ಅಷ್ಟರಲ್ಲಿ ಹೀಗಾಗೋದಾ…! ಹೋಗಿ ಮುಖದರ್ಶನನಾದ್ರೂ ಮಾಡ್ಕೊಂಡು ಬರಬೇಕು’.
ಅದೇ ಆಚೆ ಬೀದೀಲಿ ದೇವಪ್ಪ ಸತ್ತಾಗ…’ನೆಗೆದುಬಿದ್ದ..ಬೇವಾರ್ಸಿ.. ಇನ್ನು ಮ್ಯಾಕ್ಹೋಗಿ ಯಾರ್ಗೆ ಹಿಂಸೆ ಕೊಡ್ತಾನಂತೆ..ಹೆಂಡ್ತಿ ಮಕ್ಳು ಹೋದಾರ..ಆವಯ್ಯನ್ ಬೆನ್ ಹಿಂದೆ..ಜೀತ ಮಾಡ್ಕೊಡಾಕೆ. ತನ್ನ ಅಪ್ಪ ಅಮ್ಮನ್ನೂ ನೆಟ್ಟಗೆ ಬಾಳೋಕ್ ಬಿಡಲಿಲ್ಲ..ಕಟ್ಕೊಂಡ ಹೆಂಡ್ತೀಗೂ ಸುಖ ಕೊಡ್ಲಿಲ್ಲ. ಪ್ರತಿದಿನ ಕುಡ್ದು ಬರೋದು. ಜಗಳ ಆಡೋದು.ಹೆಂಡ್ತಿ ಮಕ್ಕಳನ್ನು ದನ ಬಡಿದ್ಹಂಗೆ ಬಡಿಯೋದು.ಒಂದಿನ ಹೊಲದ ಕಡೆ ಮುಖಾ ಹಾಕ್ಲಿಲ್ಲ. ಯಾರ್ಗೂ ನೆಮ್ಮದೀನೇ ಕೊಡ್ಲಿಲ್ಲ..ಒಳ್ಳೆ ಬೀದಿ ಬಸವನ್ಹಂಗೆ …ಕಡ್ದ್ ರೆ ನಾಕಾಳಾಗೋ ಹಂಗಿದ್ದ…ಕೊನೆಗೆ ಆ ಬೀದೀಲಿ ವಾಸ ಮಾಡೋರ್ಗೂ…ಒಂದ್ ದಿನಾನೂ ನೆಮ್ಮದಿ ಕೊಡ್ಲಿಲ್ಲ.ಅವ್ನು ಹೋದ್ಮ್ಯಾಲಾದ್ರೂ.. ನೆಮ್ಮ್ ದಿಯಿಂದ ಊಟ ಮಾಡ್ತಾರೇನೋ..ನೋಡಾನಾ..
‘ಇನ್ನೂ ಪ್ರಪಂಚಾನೇ ಕಣ್ಬಿಟ್ಟ್ ನೋಡಿರ್ಲಿಲ್ಲ ಇಂಥಾ ಮಗೀಗೆ ಇಂಥಾ ಸಾವಾ…ಶಿವ್ನೇ…ಹೆಂಗಾದ್ರೂ ಹೆತ್ತವ್ರು ಈ ದು:ಖಾನಾ ಅರಗಿಸ್ಕೊಂಡಾರೋ…. ಹೊಟ್ಟೇಗೆ ಬೆಂಕಿ ಬಿದ್ಹಂಗಾಯ್ತದಲ್ಲಪ್ಪೋ…’
*
ವಿವಿಧ ಪ್ರಕರಣಗಳಲ್ಲಿ ಜನರ ಉದ್ಗಾರ..ಸತ್ತವರ ಬದುಕಿನ ಸಾರ್ಥಕತೆಗೆ ಕನ್ನಡಿ ಹಿಡಿದಂತಿತ್ತು.’ ಶಿವ್ನ ಪಾದ ಸೇರ್ಕೊಳ್ಳೋದು.’ ‘ನೆಗ್ದು ಬೀಳೋದು’ ಏನೂ ಅರಿಯದ ಮುಗ್ಧರನ್ನ ‘ದೇವ್ರು ಕಿತ್ಕೊಳ್ಳೋದು’ … ಇತ್ಯಾದಿ ಉದ್ಗಾರಗಳಿಗೆ ಅದರದೇ ಆದ ಧ್ವನಿವಿಶೇಷವಿದೆ… ತಲ್ಲಣವಿದೆ, ಹತಾಶೆಯಿದೆ. ಒಳ್ಳೆಯ ಚೇತನವನ್ನು ಬಾಳಬಿಡದ ಆ ವಿಧಿಯ ಕ್ರೌರ್ಯದ ಮೇಲೆ ಆಕ್ರೋಶವಿದೆ…ಇಂತಹ ‘ಅಭಿವ್ಯಕ್ತಿಯ’ ಪದ ಪ್ರಯೋಗಗಳು ಆ ವ್ಯಕ್ತಿಯ ಬದುಕಿನ ರೀತಿಗೆ ಸಾಕ್ಷೀ ಭೂತವಾಗಿ ನಿಲ್ಲುತ್ತವೆ…ಅಂದರೆ ವ್ಯಕ್ತಿಯ ಸಾವು ಜನರನ್ನು ಕಾಡುವ ರೀತಿಯೇ ಅವರ ಬದುಕಿಗೊಂದು ನಿಕಷ ! ನಮ್ಮ ಹಿರಿಯರು,’ಶರಣರ ಬಾಳನ್ನು ಮರಣದಲ್ಲಿ ನೋಡು’..
‘ಮರಣವೇ ಮಹಾನವಮಿ’ ಎಂದೆಲ್ಲಾ ಉದ್ಗರಿಸಿದ್ದರ ಹಿಂದೆ.. ಆಯಾ ವ್ಯಕ್ತಿಯ ಬದುಕಿನ ಚಿತ್ರ ಯಥಾವತ್ತಾಗಿ ಮೂಡುತ್ತದೆ.
*
ಹಾಗಿದ್ರೆ, ‘ಜಾತಸ್ಯ ಮರಣಂ ಧ್ರುವಂ’ , ಎಂಬಂತೆ ಹುಟ್ಟಿದವನಿಗೆ ಮರಣ ಅನಿವಾರ್ಯ’ ಎಂಬ ಕಟು ಸತ್ಯದ ಅರಿವಿದ್ದರೂ ಮನುಷ್ಯ, ಬದುಕಿನುದ್ದಕ್ಕೂ ಹಿಂಬಾಲಿಸುವ ಈ ಸಾವಿನ ನೆರಳನ್ನು ಏಕೆ ಗಂಭೀರವಾಗಿ ಪರಿಗಣಿಸುವುದಿಲ್ಲ..? ತನಗರಿಯದಂತೆಯೇ ಈ ಜಗತ್ತಿನಲ್ಲಿ ಆತನೊಬ್ಬ ‘ಮೇಲಿರುವ’ ಸೂತ್ರಧಾರಿಯ ಕೈಯಲ್ಲಿರುವ ಪಾತ್ರಧಾರಿ ಅಷ್ಟೇನಾ…! ಹಾಗಾದರೆ ಅವನಲ್ಲಿ ನಿರಂತರವಾಗಿರುವ ಜಾಗೃತ ಪ್ರಜ್ಞೆ, ಅವನನ್ನು, ‘ತನಗೆ ಬೇಕಾದಂತೆ ಬದುಕಬಲ್ಲ , ಆದರ್ಶಕ್ಕೆ ತಕ್ಕಂತೆ ಕ್ರಮಿಸಬಲ್ಲ ತುಡಿತಕ್ಕೆ ಸಹಕರಿಸುವುದೆ ಇಲ್ಲವೇ…. ಸಾಕ್ಷೀಪ್ರಜ್ಞೆ,ನೀರಮೇಲಿನ ಗುಳ್ಳೆಯಂತೆ ಕ್ಷಣಭಂಗುರ ಬದುಕು..ತನಗಿರುವ ಈ ಅಮೂಲ್ಯ ಜನ್ಮವನ್ನು..ಶಾಶ್ವತ ಮೌಲ್ಯವಾಗಿಸುವತ್ತ ಏಕೆ ತುಡಿಯುತ್ತಿಲ್ಲ..?
ಫೋಟೋ ಕೃಪೆ : google
ಕವಿ ಸೂರದಾಸರ ಜೀವನ ಚರಿತ್ರೆಯನ್ನು ಓದುತ್ತಿದ್ದೆ. ಅವರು ಹುಟ್ಟಿನಿಂದಲೇ ಅಂಧನೆಂದುಕೊಂಡಿದ್ದೆ.ಆದರೆ ಅತ್ಯಂತ ಸ್ಫುರದ್ರೂಪಿಯಾಗಿದ್ದ ಆ ಸಂತನ ಕುರುಡುತನಕ್ಕೆ ಕಾರಣ ತಿಳಿದಾಗ ಎದೆ ‘ಝಲ್’ ಎಂದಿತು. ಕೃಷ್ಣ ಭಕ್ತಿಯ ಸುಧೆಯನ್ನು ಹರಿಸಿದ, ‘ಭಕ್ತಿ ಆಂದೋಲನ’ ದ ಈ ದಿವ್ಯ ಸಂತನ ನಿಷ್ಠುರ ತೀರ್ಮಾನದ ಹಿಂದಿರುವ ಕಾರಣ ತಿಳಿದಾಗ, ಅವಾಕ್ಕಾದೆ…
‘”ದೇವಿ, ತಡಮಾಡದಿರು. ಈ ನನ್ನ ಪಾಪಕಲುಷಿತ ಕಣ್ಣುಗಳನ್ನು ಇನ್ನು ಇರಿದು ಬಿಡು”.
“ಇಲ್ಲ ಗುರುವೆ,ಒಬ್ಬ ಸಾಧುವಿನ ಕಣ್ಣು ಕುಕ್ಕಿ ನಾನು ಯಾವ ನರಕಕ್ಕೆ ಹೋಗಲಿ?”
“ನರಕವಲ್ಲ. ಪುಣ್ಯ ಕಟ್ಟಿಕೋ ತಾಯಿ, ಇದರಿಂದ ನನ್ನ ಮನಸ್ಸಿಗೆ ಶಾಂತಿ, ಇದೇ ನನ್ನ ಭಿಕ್ಷೆ. ಇಲ್ಲವೆನ್ನದಿರು ,ತಡಮಾಡದಿರು, ಬೇಗ ಬೇಗ ಇಗೋ ಅಂಗಲಾಚಿ ಬೇಡುತ್ತೇನೆ”.
ಸಾಧುವಿನ ಒತ್ತಾಯಕ್ಕೆ ಆ ಯುವತಿ ಆತನ ಕೋರಿಕೆಯನ್ನು ದು:ಖದಿಂದ ಈಡೇರಿಸಿದಳು. ಆಕೆಯ ದಬ್ಬಳದ ಸ್ಪರ್ಶದಿಂದ ಯಮುನಾ ತೀರದಲ್ಲಿ ಸದಾ ಧ್ಯಾನಲೀನನಾಗಿರುತ್ತಿದ್ದ ಆ ತೇಜಸ್ವಿ ಯುವಕ , ಆ ಅಪ್ರತಿಮ ಸುಂದರಿ ಭಕ್ತೆಯಲ್ಲಿ ಕ್ಷಣಕಾಲ ಸಮ್ಮೋಹಿತನಾದ ತನ್ನ ದೌರ್ಬಲ್ಯಕ್ಕೆ ತನ್ನ ದೃಷ್ಟಿಯನ್ನೇ ಎರವಾಗಿಸಿಕೊಂಡಿದ್ದ. ಈ ಕೃತ್ಯಕ್ಕೆ ಅವನ ಸಮರ್ಥನೆ ಏನಿತ್ತು ಎಂದು ನೋಡೋಣ..”
‘ರವಿ ಅಸ್ತಾಚಲದ ಮಸ್ತಕವೇರಿದ್ದ ಆ ಅಪೂರ್ವ ಸಂದರ್ಭದಲ್ಲಿ ತನಗರಿಯದಂತೆ ಮನೋಚಾಂಚಲ್ಯಕ್ಕೆ ಒಳಗಾಗಿದ್ದ ಆತ ಅವಳ ಗುಡಿಸಲವರೆಗೂ ಹಿಂಬಾಲಿಸಿ ಪಡೆದ ಅತ್ಯಮೂಲ್ಯ ಭಿಕ್ಷೆ ಇದು.
ಪ್ರಾಯಶ್ಚಿತ್ತ…! ತಾನು ಯಾವ ದಿವ್ಯ ಸೌಂದರ್ಯಕ್ಕೆ ವಶನಾಗಿದ್ದನೋ ಅದನ್ನೇ ತನ್ನ ಪ್ರಭು ಶ್ರೀಕೃಷ್ಣನ ಸ್ವರೂಪವಾಗಿ ಕಂಡು ಅದನ್ನೇ ಅಂತಿಮವಾಗಿ ಮನೋಪೀಠದಲ್ಲಿ ಪ್ರತಿಷ್ಠಾಪಿಸಿದ ಅಪೂರ್ವ ಕೃಷ್ಣ ಸಾಹಿತ್ಯದ ಸೃಷ್ಟಿಕರ್ತ, ಅಪ್ರತಿಮ ಗಾಯಕ ! ‘ಭಾರತೀಯ ಪ್ರೇಮಾರಾಧನೆ’ ‘ತತ್ವಚಿಂತನೆ’ಮತ್ತು ‘ಸೌಂದರ್ಯ ಪ್ರಜ್ಞೆ’ಯ ತ್ರಿವೇಣಿಯಾದ ಶ್ರೀ ಕೃಷ್ಣನ ಪರಮ ಭಕ್ತ ಸಂಗೀತ ಪಾರಂಗತ, ಜಗಮರೆಯದ ವಿಸ್ಮಯಕಾರಿ ಸಂತನೊಬ್ಬ ಜಗತ್ತಿಗೆ ದೊರಕಿದ ಅದ್ಭುತ ಕತೆ ಇದು. ಇದನ್ನು ನಾನು ಇಲ್ಲಿ ಪ್ರಸ್ತಾಪಿಸಲು ಕಾರಣವಿದೆ. ಸಾವಿನ ಹೆಡೆನೆರಳಲ್ಲಿದ್ದರೂ, ಸಮ್ಮೋಹನಕ್ಕೆ ಒಳಗಾಗಿ ವಿಸ್ಮೃತಿಯಲ್ಲಿದ್ದರೂ ಅಂತಹ ದುರ್ಬಲ ಕ್ಷಣಗಳೂ ಬದುಕಿಗೆ ಎಂತಹ ಅನಂತತೆಯ ಸ್ಪರ್ಶವನ್ನು ನೀಡಬಲ್ಲವು.. ಕಾಲ ಪ್ರವಾಹದಲ್ಲಿ ಕೊಚ್ಚದಂತೆ ಬದುಕನ್ನು ಉದ್ಧರಿಸಬಲ್ಲವು. ಎಂಬುದಕ್ಕೆ ನಿದರ್ಶನವಷ್ಟೆ. ಅಳಿಯುವ ಕಾಯವೂ ಕೀರ್ತಿಶೇಷವಾಗಬಲ್ಲ ವಿಶಿಷ್ಟ ಸಂದರ್ಭಗಳಿವು.ಇಲ್ಲಿ ಮುಖ್ಯವಾಗಿ ಬೇಕಾದುದು ತಾನು ಸಾಗುವ ಹಾದಿಯ ನಿಖರತೆ.ಗುರಿಯಲ್ಲಿ ಬದ್ಧತೆ…!
*
ಜನುಮದ ಎಲ್ಲ ಕಾರ್ಯಗಳನ್ನು ಸಾರ್ಥಕವಾಗಿ ಮುಗಿಸಿದ ನಂತರ ಬರುವ ಸಾವಿದೆಯಲ್ಲ
ಅದರ ತೃಪ್ತಿಯೇ ಬೇರೆ.
ಕಡೆಂಗೋಡ್ಲು ಶಂಕರಭಟ್ಟರು ಹೇಳುವ ಮಾತನ್ನು ಕೇಳಿ..
“ಒಡಲು ಸಾವಿನ ಹೊಲವಾದರೇನಣ್ಣ?
ತೊಡಿಸುವೆನು ವನದೇವಿ ಕೊಡುವ ಕಾಣಿಕೆಗಳನು
ಬಂದು ಮೇಯುವ ಮೃತ್ಯು
ಆನಂದದಲ್ಲಿ ಬಂದು ತಿಂದು ತೇಗಿ ಧನ್ಯವೆನಿಸಲದರಾಯುಷ್ಯ”
“ಅಲ್ಲಿ ಮಲಗಿಹರವರ ಹೆಸರೆತ್ತಿ ಕರೆಯದಿರು
ಸೊಲ್ಲನಾಲಿಸದವರ ಬರಿದೆ ಹಂಬಲಿಸದಿರು
ಸಾರ್ಥಕ ಜೀವನ ಕರ್ಮ ಸಮರ ದುಂದುಭಿ ಮೊಳಗಿ
ಬಳಲಿಕೆಯನಾರಿಸಲು ದೀರ್ಘ ನಿದ್ರೆಯೊಳಿಹರು..” (ಕವಿತೆ: ಮಸಣ)
*
ತನಗಾಗ ಐದಾರು ವರ್ಷಗಳಿರಬಹುದು. ಸಾವಿಗೂ ನಿದ್ರೆಗೂ ವ್ಯತ್ಯಾಸವೇ ತಿಳಿಯದ ವಯಸ್ಸು. ಅಪ್ಪ ಅಮ್ಮ ಅಂತಹ ಕಡೆ ನನ್ನನ್ನು ಹೋಗಗೊಡುತ್ತಿರಲಿಲ್ಲ. ಆದರೆ ನನ್ನ ಕಣ್ಣ ಮುಂದೆಯೇ ನಡೆಯುವ ವಿದ್ಯಮಾನಗಳನ್ನು ನೋಡದಿರಲೂ ನನಗೆ ಸಾಧ್ಯವಾಗುತ್ತಿರಲಿಲ್ಲ. ಹೇಗೋ ಕಣ್ತಪ್ಪಿಸಿ ಆ ಜನಸಂದಣಿಯಲ್ಲಿ ಸೇರಿಕೊಂಡೆ. ಬಯಲು ಸೀಮೆಯ ಹಳ್ಳಿ. ಹೆಂಗಸರೆಲ್ಲ ಬಾಯಿಬಾಯಿ ಬಡಿದುಕೊಂಡು ಶೋಕಾಚರಣೆ ಮಾಡುತ್ತಿದ್ದರು. ನೋವು ಪ್ರವಾಹದಂತೆ ಹರಿಯುತ್ತಿತ್ತು. ನನಗಾಗ ಏನೂ ಅರ್ಥವಾಗಲಿಲ್ಲ. ಅವರ ಬಾಯಿಗೇಕೆ ಬಟ್ಟೆ ಕಟ್ಟಿದ್ದಾರೆ. ಊಟ ಮಾಡುವುದು ಹೇಗೆ..? ಮೂಗಿಗೆ ಹತ್ತಿ ತುಂಬಿದರೆ ಅವರಿಗೆ ಉಸಿರಾಡಲು ಹೇಗೆ ಸಾಧ್ಯ.
ಫೋಟೋ ಕೃಪೆ : google
ಎಲ್ಲ ಪ್ರಶ್ನೆಗಳು.. ಅಲ್ಲಿ ಯಾರನ್ನೂ ಕೇಳುವಂತಿಲ್ಲ. ಮನೆಯಲ್ಲಿ ಕೇಳಿದರೆ, ‘ಅವರು ವಾಪಸ್ಸು ಬರುವುದಿಲ್ಲ. ಇನ್ನು ಅವರನ್ನು ಮಣ್ಣಿನೊಳಗೆ ಹೂತು ಬಿಡುತ್ತಾರೆ. ಅವರ ದೇಹ ಇಲ್ಲಿಯೇ ಇರುತ್ತದೆ. ಆತ್ಮ ಪರಮಾತ್ಮನ ಬಳಿಗೆ ಹೋಗುತ್ತದೆ. ನೀನು ದೊಡ್ಡವಳಾದ ಮೇಲೆ ಅರ್ಥವಾಗುತ್ತದೆ. ಈಗ ಸುಮ್ಮನಿರು,’ ಎಂದರು.
ಸುಮ್ಮನಾರಲಾಗಲಿಲ್ಲ. ಇಂದಿಗೂ ಈ ಪ್ರಶ್ನೆ ಅದೇ ದೃಶ್ಯದೊಂದಿಗೆ ಜೀವಂತವಾಗಿ ಕಾಡುತ್ತಿದೆ. ಆದರೆ ಮನುಷ್ಯ ಇತರರು ಸತ್ತಾಗ ನಿರ್ಲಿಪ್ತನಾಗಿರಲು ಏಕೆ ಸಾಧ್ಯವಿಲ್ಲ ಎಂಬ ವಿಚಾರ ನಿಧಾನವಾಗಿ ಅರ್ಥವಾಗುತ್ತಿದೆ. ಮೋಹಪಾಶ ! ಇದು ತನ್ನದು ತನ್ನದಾಗಿಯೇ ಇರಬೇಕು ಎಂಬ ಮೋಹ..ತಾನು ಮಾತ್ರ ಸದಾ ಸುಸಂಬದ್ಧತೆಯಿಂದಿರಬೇಕು ಎಂಬ ಸ್ವಾರ್ಥ. ಆಧಾರವಾಗಿದ್ದ ಅವರು ತಮ್ಮನ್ನು ನಡುನೀರಿನಲ್ಲಿ ಕೈಬಿಟ್ಟರಲ್ಲ ಎಂಬ ಹತಾಶೆ…ತಾನು ಮಾಡಿದ ಕೆಲಸಗಳಿಗಿಂತ ಮಾಡದೆಯೇ ಬಿಟ್ಟವುಗಳೇ ಹೆಚ್ಙಿವೆಯಲ್ಲ ಎಂಬ..ಅಶಾಂತಿ!
ಇನ್ನೂ ಬದುಕಿನಲ್ಲಿ ಏನನ್ನೂ ಅನುಭವಿಸಲಿಲ್ಲ ಎಂಬ ಅತೃಪ್ತಿ! ಹೀಗೇ ಹತ್ತು ಹಲವು…
ಪುರಂದರದಾಸರು ಹೇಳುವಂತೆ
”ಅಟ್ಟಡಿಗೆ ಉಣಲಿಲ್ಲ,
ಇಷ್ಟದರುಶನವಿಲ್ಲ/
ಕೊಟ್ಟ ಸಾಲವನು ಕೇಳಲಿಲ್ಲ/
ಕಟ್ಲೆ ತುಂಬಿದ ಮೇಲೆ ಕ್ಷಣಮಾತ್ರ ಬಿಡಲಿಲ್ಲ/
ಅಷ್ಟರೊಳು ಪುರಂದರ ವಿಠ್ಠಲೆನ್ನೊ ಮನವೆ…/”
ಅಂತಾ…!
ಇಲ್ಲಿ ಎಲ್ಲವನ್ನೂ ಮಹತ್ವದ್ದೆಂದು ಪರಿಗಣಿಸುವ ನಾವು,ಪುರಂದರ ವಿಠ್ಠಲನ ನೆನೆಯುವ ಸುಖವನ್ನು ಮಾತ್ರ ಕಡೆಗಣಿಸಿರುತ್ತೇವೆ. ‘ಸಂಕಟ ಬಂದಾಗ ಮಾತ್ರ ವೆಂಟರಮಣ’ ಎಂಬ ಜಾಯಮಾನದವರು ನಾವು..! ಡಿ.ವಿ.ಜಿಯವರ ಕಗ್ಗದ ಈ ಸಾಲುಗಳನ್ನು ನೋಡಿ,
“ತಡಕಾಟ ಬದುಕೆಲ್ಲವೇಕಾಕಿ ಜೀವ ತ|
ನ್ನೊಡನಾಡಿ ಜೀವಿಗಳ ತಡಕಿ ಕೈಚಾಚಿ||
ಪಿಡಿಯಲಲೆದಾಡುಗುಂ,ಪ್ರೀತಿ ಋಣಿ ಮಮತೆಗಳ|
ಮಡುವೊಳೋಲಾಡುತ್ತೆ _ಮಂಕುತಿಮ್ಮ||
ಮನುಷ್ಯನಲ್ಲಿರುವ ಶಕ್ತಿ ಅಪಾರ ! ಅದರೆ ಅದರ ಅರಿವು ಮಾತ್ರ ಅವನಿಗಿಲ್ಲದಿರುವುದೊಂದು ದುರಂತ. ಅರಿತರೆ ಅವನು ಎಂತಹ ಅಸಾಧ್ಯ ಕ್ಷಣಗಳನ್ನೂ ತನ್ನ ಸಾಮರ್ಥ್ಯದ ಮುಷ್ಠಿಯಲ್ಲಿ ಅಮೂಲ್ಯವಾದ ರತ್ನಗಳಾಗಿ ಪರಿವರ್ತಿಸಬಲ್ಲ.
“ಕಲ್ಲಾಗಿ ನಿಲ್ಲುವವನು ಬಳ್ಳಿವೊಲು ಬಳುಕುವನು|
ಮುಳ್ಳಾಗಿ ಚುಚ್ಚುವುದು ಫುಲ್ಲಸುಮವಹನು|
ಕಲ್ಲೋಲವಾರಿಧಿಯವೊಲು
ರವಣಿಸಿ ಮೊರೆಯುವನು|
ಕ್ಷುಲ್ಲಮಾನಿಸನಿವನು ಮಂಕುತಿಮ್ಮ||
ಹಾಗಿದ್ದರೆ ನಮ್ಮ ಜೀವರ ನಿಲುವು ಹೇಗಿದ್ದರೆ ಚೆನ್ನ..?ಡಿ.ವಿ.ಜಿಯವರನ್ನೇ ಕೇಳೋಣ…
ಅಸಮದಲಿ ಸಮತೆಯನು ವಿಷಮದಲಿ ಮೈತ್ರಿಯನು|
ಅಸಮಂಜಸದಿ ಸಮನ್ವಯ ಸೂತ್ರನಯವ||
ವೆಸನಮಯ ಸಂಸಾರದಲಿ ವಿನೋದವ ಕಾಣ್ಬ|
ರಸಿಕತೆಯೆ ಯೋಗವೆಲೊ – ಮಂಕುತಿಮ್ಮ||
*
ಲೋಕದಲ್ಲಿ ದು:ಖವೇ, ವ್ಯಸನವೇ ಅಧಿಕ ! ಇದನ್ನು, ‘ಕಣ್ಣೀರಿನ ಕಣಿವೆ’ ಎಂದೇ ಕರೆಯುತ್ತಾರೆ. ಅದರಲ್ಲೂ ಸಾರವನ್ನು ಹುಡುಕುವಂತಹ ಕೆಲಸ ಸಾಗಬೇಕಾದರೆ ಸಂತೋಷ ಕೊಡುವ ಸಂಗತಿಗಳನ್ನು ಮನದಾಳಕ್ಕೆ ಇಳಿಸಿಕೊಂಡು ಅದರಲ್ಲಿ ತಾದಾತ್ಮ್ಯ ಹೊಂದಬೇಕು. ಲೋಕ ಸ್ವಾರಸ್ಯದಲ್ಲಿ ಮನಸ್ಸನ್ನು ತೊಡಗಿಸಿದಾಗ ತಾದಾತ್ಮ್ಯವುಂಟಾಗುತ್ತದೆ. ಇಂತಹ ಯೋಗವು ಈ ಜೀವನ ಸಾಗರವನ್ನು ಪಾರುಗಾಣಿಸುವುದಕ್ಕೆ ಒಂದು ವಾಹಕವಾಗಿ ಕೆಲಸ ಮಾಡುತ್ತದೆ. ಒಳಿತಿನಲ್ಲಿ ಮನಸ್ಸನ್ನು ವಿರಮಿಸುತ್ತಾ ರಮಿಸುವುದರಿಂದ ಬಾಳ ಪಯಣದಲ್ಲಿ ಎದುರಾಗುವ ಕ್ಲಿಷ್ಟತೆಗಳಿಂದ ಪಾರಾಗಬಹುದು.
ಬದುಕಿನಲ್ಲಿ ಬಸವಳಿದು ಹೋದವರಿಗೆ ಇದರಿಂದ ಮುಕ್ತವಾಗಿರುವ ಮಾರ್ಗವನ್ನು ಕಂಡುಕೊಳ್ಳಲು ಮನಸ್ಸು ತುಡಿಯುತ್ತಿರುತ್ತದೆ. ಜೀವನ್ಮುಕ್ತನಾದಾಗ..ತಾನು ಸೇರಬೇಕಾದ ಅಂತಿಮ ಗುರಿ ಮೋಕ್ಷ ಎಂಬ ಹಂಬಲದಲ್ಲಿಯೆ ಮನ ಮಗ್ನವಾಗಿರುವತ್ತಾರೆ.
‘ಅನಾಯಾಸೇನ ಮರಣಂ ವಿನಾ..ದೈನ್ಯೇಷು ಜೀವಿತಂ..’ ಇದು ಎಲ್ಲ ಜೀವಿಗಳ ಅಂತಿಮ ಆಸೆಯೂ ಹೌದು. ಅಂತಹ ಮೋಕ್ಷಸ್ಥಾನಗಳೆಂದು ಭಾರತೀಯ ಪರಂಪರೆಯಲ್ಲಿ ಕಾಶಿ ಉಜ್ಜಯಿನಿಗಳೂ ತಲೆತಲಾಂತರಗಳಿಂದ ಪರಿಗಣಿಸಲ್ಪಟ್ಟಿವೆ.
ಫೋಟೋ ಕೃಪೆ : google
‘ಕಾಶಿ’ಯನ್ನು ಬಿಟ್ಟರೆ ಅತ್ಯಂತ ಪುರಾಣ ಪ್ರಸಿದ್ಧ ಐತಿಹಾಸಿಕ , ಸಾಂಸ್ಕೃತಿಕ ನಗರವಾಗಿ ವಿಶ್ವಪ್ರಸಿದ್ಧವಾಗಿರುವ ಮಧ್ಯಪ್ರದೇಶದ ಉಜ್ಜಯಿನಿ ನಗರವು ಹೇಗೆ ಬದುಕನ್ನು ಪವಿತ್ರಗೊಳಿಸುವ ತೀರ್ಥಕ್ಷೇತ್ರವೋ ಹಾಗೆಯೇ ಸಾವಿಗೂ ಪವಿತ್ರ ನಗರಿ.’ಚಕ್ರತೀರ್ಥ’ ಎಂಬ ಹೆಸರುಳ್ಳ ಈ ನಗರಿ ಜೀವಕ್ಕೆ ಮುಕ್ತಿಯನ್ನು ತೋರಿಸುವ ಮೋಕ್ಷನಗರಿ..ಉಜ್ಜಯಿನಿಯ ಸ್ಮಶಾನವೂ ಕೂಡ ಪವಿತ್ರವೇ ಎಂದು ಪರಿಗಣಿಸಲಾಗಿದೆ.
ಇಂತಹ ಮುಕ್ತಿಯ ಹಂಬಲವೂ ಮನುಷ್ಯನನ್ನು ಸಾವಿನ ಭೀತಿಯಿಂದ ಹೊರತಾಗಿರಿಸ ಬಲ್ಲುದು.’ಮಹಾಕಾಲ’ನ ಸನ್ನಿಧಿಯಲ್ಲೇ ಪ್ರಾರ್ಥನೆ ಆರಾಧನೆ.. ಜೀವನ್ಮುಕ್ತಿಯ ಹಂಬಲ. ಹೀಗೆ ಪಕ್ವಗೊಂಡ ಮನಸ್ಸು ಸಹ ಒಂದು ಮಾಗಿದ ಫಲದಂತೆ. ಮರುಹುಟ್ಟಿಗೆ ತನ್ನ ಒಡಲೊಳಗೆ ಬೀಜರೂಪದಲ್ಲಿರುವ ಚೈತನ್ಯವನ್ನು ಒಳಗೊಂಡೇ ಸಾಯುತ್ತದೆ. “ಮೃತ್ಯುವೆನ್ನುವುದೊಂದು ತೆರೆಯಿಳಿತ ತೆರೆಯೇರು. ಮತ್ತೆ ತೋರ್ಪುದು ನಾಳೆ ಮಂಕುತಿಮ್ಮ||
ಈ ಸತ್ಯ ದಾರ್ಶನಿಕರು ಸಾಧಕರ ಕೈಗೆ ನಿಲುಕಿರಬಹುದು. ಆದರೆ ನಮ್ಮ ಅಲ್ಪತೆಯ ಅರಿವು ನಮಗಿದ್ದೇ ಇದೆ. ಮಾನವ ಜನ್ಮ ಅತ್ಯಂತ ಶ್ರೇಷ್ಠ ! ಇದಕ್ಕೆ ಬೆಲೆ ಕಟ್ಟಲಾಗದ ಘನತೆಯಿದೆ. ನಾವು ವಿಶ್ವತೋಮುಖಿಗಳಾಗಿ ಬಾಳಿದರೆ ಆ ಧನ್ಯತೆಯೇ ಮುಕ್ತಿ ಎಂದುಕೊಳ್ಳೋಣ. ನಮ್ಮ ಗಮ್ಯ ಮೊದಲು ಜೀವನ್ಮುಖಿಯಾಗಿರಲಿ. ಮತ್ತೆ ಪ್ರಕೃತಿದತ್ತವಾದುದೆಲ್ಲ..ನಾವು ಕ್ರಮಿಸುವ ಹಾದಿಯ ಆನಂದಕ್ಕಿರಲಿ…ಮುಪ್ಪು ಅಥವಾ ಮರಣದ ಕಲ್ಪನೆಯೇ ಮೂಡದಂತೆ ಸಾಧನೆಯ ಹಾದಿಯಲ್ಲಿ ಮುನ್ನುಗ್ಗುತ್ತಿರುವುದೇ ನಿಜವಾದ ಧನ್ಯತೆ ಹಾಗೂ ಸಾರ್ಥಕ್ಯ ಅಲ್ಲವೇ…
ಬದುಕನ್ನು ಎಲ್ಲ ವಯೋಮಾನದವರ ಸಹಯೋಗದಲ್ಲಿ ಅಂಗಳದ ಸುಂದರ ರಂಗೋಲಿಯಾಗಿ ಚಿತ್ರಿಸಿ ಆನಂದಿಸೋಣ ಅಲ್ಲವೇ…?
‘ಕಪ್ಪೆ ಗೂಡಿನಲ್ಲಿ ಬಚ್ಚಿಟ್ಟ ನೆನಪುಗಳು’ ಅಂಕಣ ಹಿಂದಿನ ಸಂಚಿಕೆಗಳು :
- ಕಪ್ಪೆ ಗೂಡಿನ ಮಧುರ ನೆನಪು! – (ಭಾಗ ೧)
- ಜೀವನ ಪ್ರೀತಿಗುಂಟೆ ಅಸ್ಪ್ರಶ್ಯತೆ? – (ಭಾಗ ೨)
- ಅದೊಂದು ಸರಕಾರೀ ಶಾಲೆ ! – (ಭಾಗ ೩)
- ಏನೆನ್ನಬೇಕೋ ಈ ಮೌಢ್ಯಕೆ? – (ಭಾಗ ೪)
- ಆರಾಧಿಸು ಕಣ್ಣಿಗೆ ಕಾಣುವ ದೇವರ – (ಭಾಗ ೫)
- ಒಳಗೊಳ್ಳದಿರಲೆಂತು ಬದುಕ – (ಭಾಗ೬)
- ಶಿವದೇವಿ ಅವನೀಶಚಂದ್ರ – ನಿವೃತ್ತ ಶಿಕ್ಷಕರು, ಕೊಡಗು.