ಅಪ್ಪನ ಬಗ್ಗೆ ನನ್ನಲ್ಲಿ ಅನೇಕ ಮಧುರ ನೆನಪುಗಳಿವೆ

ನಾನು ನಾಲ್ಕೊ ಅಥವಾ ಐದನೆ ಕ್ಲಾಸ್ ಇರಬಹುದು. ಬೆಳಗ್ಗೆ ಆರು ಗಂಟೆಗೆ ನನ್ನನ್ನು ನಿದ್ರೆಯಿಂದ ಎಬ್ಬಿಸಿದ ಅಪ್ಪ, ನಾನು ಎಡಗಡೆಯಿಂದ ಎದ್ದಿದ್ದನ್ನು ನೋಡಿ ” ಎಡಗಡೆಯಿಂದ ಏಳಬಾರದು, ಮತ್ತೆ ಮಲಗಿ ಬಲಗಡೆಯಿಂದ ಏಳು” ಎಂದರು. ಲೇಖಕರಾದ ನಟರಾಜು ಮೈದುನಹಳ್ಳಿ ಅವರ ತಂದೆಯವರ ಮಧುರ ನೆನಪುಗಳನ್ನು ಓದುಗರ ಮುಂದೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ನಾನು 1ನೇ ಕ್ಲಾಸ್ ಗೆ ಸೇರುವ ಮುಂಚೆಯೇ ಮನೆಯಲ್ಲಿಯೇ ಕನ್ನಡ ಅಕ್ಷರಗಳನ್ನು, ಕಾಗುಣಿತಗಳನ್ನು ಕಲಿಸಿ ಕನ್ನಡ ಓದುವುದನ್ನು ಕಲಿಸಿದ್ದರು ನನ್ನ ಅಪ್ಪ. ಅಪ್ಪನೇ ನನ್ನ ಮೊದಲ ಮೇಷ್ಟ್ರು. ಬಾಲ್ಯದಲ್ಲೇ ಕೂಡುವುದು, ಕಳೆಯುವುದು, ಗುಣಿಸುವುದು, ಭಾಗಿಸುವುದು ಲೆಕ್ಕಗಳನ್ನು ಕಲಿಸಿದ್ದರು.

ನಾನು 5, 6, 7 (1979 ರಿಂದ 1982) ನೇ ಕ್ಲಾಸ್ ಓದುವಾಗ ಪ್ರತಿದಿನ ರಾತ್ರಿ ರೇಡಿಯೋದಲ್ಲಿ ವಾರ್ತೆಗಳನ್ನು ಕೇಳಿ ನನ್ನ ಹತ್ತಿರ ಬರೆಯಿಸಿ ಮಾರನೇ ದಿನ ಶಾಲೆಯಲ್ಲಿ ಪ್ರಾರ್ಥನೆಯ ಸಮಯದಲ್ಲಿ ವಾರ್ತೆಗಳನ್ನು ಓದಲು ರೆಡಿ ಮಾಡಿ ಕೊಡುತ್ತಿದ್ದರು. ಆಗ ದಿನಪತ್ರಿಕೆ ನಮ್ಮ ಹಳ್ಳಿಯಲ್ಲಿ ಯಾರೂ ತರಿಸುತ್ತಿರಲಿಲ್ಲ. ಟೀಚರ್ಸ್ ಸಹ ನಾನು ಓದುವ ವಾರ್ತೆಗಳನ್ನು ಕೇಳಲು ಕಾಯುತ್ತಿದ್ದರು.

ಬಾಲ್ಯದಲ್ಲಿ ನನಗೆ ಸೈಕಲ್ ಹಾಗೂ ಈಜು ಕಲಿಸಿದ್ದು ನನ್ನ ಅಪ್ಪ.

ನನ್ನ ಬಾಲ್ಯದಲ್ಲಿ, ಅಪ್ಪ ಊಟ ಮಾಡುವಾಗ ಅನ್ನ ಮಜ್ಜಿಗೆ ಅಥವಾ ಮುದ್ದೆ ಮಜ್ಜಿಗೆ ಕಲಸಿ ಅವರು ಅರ್ಧ ತಿಂದು ಉಳಿದರ್ಧ ನನಗಾಗಿ ಬಿಡುತ್ತಿದ್ದರು. ನನ್ನದು ಊಟವಾಗಿದ್ದರೂ ನಾನು ಅದನ್ನು ತಿನ್ನಲು ಕಾಯುತ್ತಾ ಇರುತ್ತಿದ್ದೆ. ಏಕೆಂದರೆ ಅದು ಅಷ್ಟೊಂದು ರುಚಿಯಾಗಿರುತ್ತಿತ್ತು. ಅದೇಕೋ ಏನೋ ನಾನು ಅನ್ನ ಮಜ್ಜಿಗೆ ಕಲಸಿಕೊಂಡು ತಿಂದರೆ ಆ ರುಚಿ ಬರ್ತಾನೇ ಇರಲಿಲ್ಲ.

ನನಗೆ ಆಗಾಗ ಕಡಲೇಬೀಜ, ಬೆಲ್ಲ ಅಥವಾ ಕಡಲೇಬೀಜ, ಉಪ್ಪು, ಮೆಣಸಿನಕಾಯಿ ಹಾಕಿ ಅಡಕೆಲೆ ಕುಟ್ಟುವ ಕುಟ್ಟಣಿಯಲ್ಲಿ ಕುಟ್ಟಿ ಕೊಡುತ್ತಿದ್ದರು. ಅದು ಅಮೃತದಷ್ಟೇ ರುಚಿಯಾಗಿರುತ್ತಿತ್ತು.

ನಮ್ಮ ಊರು ಮೈದನಹಳ್ಳಿಗೆ 5 ಕಿ.ಮೀ. ದೂರವಿರುವ ಕೊಡಿಗೇನಹಳ್ಳಿಯ ಟೆಂಟ್ ನಲ್ಲಿ NTR, ನಾಗೇಶ್ವರ ರಾವ್, ಕೃಷ್ಣ, ಶೋಬನ್ ಬಾಬು ಇಂಥವರ ಒಳ್ಳೆಯ ಸಿನಿಮಾಗಳು ಬಂದರೆ ರಾತ್ರಿ 10 ಗಂಟೆಯ ಸೆಕೆಂಡ್ ಷೋಗೆ ಕೆಲಸದ ಆಳಿನ ಹತ್ತಿರ ಎತ್ತಿನ ಗಾಡಿ ಕಟ್ಟಿಸುತ್ತಿದ್ದರು. ಗಾಡಿಯ ಒಳಗೆ ನೆಲ್ಲುಹುಲ್ಲು ಹಾಕಿ ಅದರ ಮೇಲೆ ಚಾಪೆ ಹಾಸಿ ಕುಳಿತುಕೊಳ್ಳುತ್ತಿದ್ದೆವು. ದಾರಿ ಕಾಣಲು ಎತ್ತಿನ ಗಾಡಿಗೆ ಲಾಟೀನು ಕಟ್ಟುತ್ತಿದ್ದರು. ನಮ್ಮ ಮನೆಯ ಅಕ್ಕ ಪಕ್ಕದ ಮನೆಯವರು ನಮ್ಮ ಅಪ್ಪ ಗಾಡಿ ಕಟ್ಟಿಸುವುದನ್ನೇ ಕಾಯುತ್ತಿದ್ದು ಅವರೂ ಸಹ ಗಾಡಿಯಲ್ಲಿ ನಮ್ಮ ಜೊತೆ ಸಿನಿಮಾಗೆ ಬರುತ್ತಿದ್ದರು. ಎಲ್ಲರೂ ಹರಟುತ್ತ ಎತ್ತಿನ ಗಾಡಿಯಲ್ಲಿ ಸಿನಿಮಾಗೆ ಹೋಗಿ, ಟೆಂಟ್ ನಲ್ಲಿ ನೆಲದ ಮರಳಿನ ಮೇಲೆ ಚಾಪೆ ಹಾಸಿ ಕುಳಿತು, ಅಲ್ಲಿ ಮಾರುವ ರುಚಿಯಾದ ಪಕೋಡಾಗಳನ್ನು ಅಪ್ಪನ ಹತ್ತಿರ ಕೊಡಿಸಿಕೊಂಡು ತಿನ್ನುತ್ತ ಸಿನಿಮಾ ನೋಡಿ ಬರುವುದೇ ಆನಂದ. ಆ ಆನಂದ ಈಗಿನ ಮಲ್ಟಿಪ್ಲೆಕ್ಸ್ ಗಳಲ್ಲಿ ಸಿನಿಮಾ ನೋಡಿದರೂ ಸಿಗುವುದಿಲ್ಲ.

ನಾನು ಚಿಕ್ಕವನಾಗಿದ್ದಾಗ ಪ್ರತಿದಿನ ರಾತ್ರಿ ಊಟ ಆದ ಮೇಲೆ ಮನೆಯ ಮಾಳಿಗೆ ಮೇಲೆ ಹಾಸಿಗೆ ಹಾಸಿ ಅಪ್ಪನಿಗೆ ಗಂಟೆಗಟ್ಟಲೆ ನಾನು ಮತ್ತು ನನ್ನ ಅಕ್ಕ ಕಾಲು ಒತ್ತುತ್ತಿದ್ದೆವು. ಆಗ ಅವರು ರಾಮಾಯಣ, ಮಹಾಭಾರತದ ಕತೆಗಳನ್ನು , ಇತರೆ ಕತೆಗಳನ್ನು ಹೇಳುತ್ತಿದ್ದರು. ಕಾಲನ್ನು ಒತ್ತುತ್ತ ಕತೆಗಳನ್ನು ಕೇಳುವುದೇ ಆನಂದ. ಡಿಗ್ರಿ ಓದುವಾಗಲೂ ತುಮಕೂರಿನಿಂದ ಊರಿಗೆ ಹೋದಾಗ ಅಪ್ಪನಿಗೆ ಕಾಲು ಒತ್ತುತ್ತಿದ್ದೆ. 6 ವರ್ಷಗಳ ಹಿಂದೆ ಅವರು ಕಾಯಿಲೆ ಬಿದ್ದು ದೈವಾಧೀನರಾಗುವ ಕೆಲವು ದಿನಗಳ ಹಿಂದೆಯೂ ನನ್ನ ಹತ್ತಿರ ಕಾಲು ಒತ್ತಿಸಿಕೊಂಡು ” ನೀನು ಕಾಲು ಒತ್ತಿದರೆ ನನಗೆ ಸಮಾಧಾನ” ಎನ್ನುತ್ತಿದ್ದರು.

ಬಾಲ್ಯದಲ್ಲಿ ನಾನು ತಪ್ಪು ಮಾಡಿದಾಗ, ಅಪ್ಪನಿಗೆ ಕೋಪ ಬಂದು ಆಗಾಗ ನನಗೆ ಏಟು ಬೀಳುತ್ತಿತ್ತು. ಒಂದು ಸಾರಿ ತೊಡೆಯ ಮೇಲೆ ಅವರ ಕೈನ ಮೂರು ಬೆರಳು ಮೂಡುವಷ್ಟು ಜೋರಾದ ಏಟು ತಿಂದಿದ್ದು ಈಗಲೂ ನೆನಪಿದೆ. ನಾನು ನಾಲ್ಕೊ ಅಥವಾ ಐದನೆ ಕ್ಲಾಸ್ ಇರಬಹುದು. ಬೆಳಗ್ಗೆ ಆರು ಗಂಟೆಗೆ ನನ್ನನ್ನು ನಿದ್ರೆಯಿಂದ ಎಬ್ಬಿಸಿದ ಅಪ್ಪ, ನಾನು ಎಡಗಡೆಯಿಂದ ಎದ್ದಿದ್ದನ್ನು ನೋಡಿ ” ಎಡಗಡೆಯಿಂದ ಏಳಬಾರದು, ಮತ್ತೆ ಮಲಗಿ ಬಲಗಡೆಯಿಂದ ಏಳು” ಎಂದರು. ನಾನು “ಎಡಗಡೆಯಿಂದ ಎದ್ದರೆ ಏನಾಗುತ್ತದೆ” ಅಂದೆ. ಅದಕ್ಕೆ ಅವರು “ಕೆಟ್ಟದಾಗುತ್ತದೆ” ಎಂದರು. ನಾನು ” ಇವತ್ತು ಎಡಗಡೆಯಿಂದನೇ ಎದ್ದೇಳುತ್ತೇನೆ. ಇವತ್ತು ಏನು ಕೆಟ್ಟದಾಗುತ್ತೋ ನೋಡೋಣ, ಏನಾದರೂ ಕೆಟ್ಟದ್ದಾದರೆ ನಾಳೆಯಿಂದ ಬಲಗಡೆ ಏಳುತ್ತೇನೆ” ಎಂದೆ. ಅಪ್ಪನಿಗೆ ಕೆಂಡದಂಥ ಕೋಪ ಬಂತು. “ಹೇಳಿದ್ದಕ್ಕೆ ಎದುರು ವಾದಿಸ್ತೀಯಾ!” ಅಂಥ ನನ್ನ ಬಲ ತೊಡೆಗೆ ಛಟೀರ್ ಎಂದು ಕೈನಿಂದ ಬಾರಿಸಿದರು. ನನ್ನ ತೊಡೆಯ ಮೇಲೆ ಕೆಂಪಗೆ ಅವರ ಕೈನ ಮೂರು ಬೆರಳ ಗುರುತು ಮೂಡಿತ್ತು!

ಇನ್ನೂ ಇಂತಹ ನೂರಾರು ನೆನಪುಗಳನ್ನು ಬಿಟ್ಟು ಹೋಗಿರುವ ಅಪ್ಪನನ್ನು ಕಳೆದುಕೊಂಡು ಇಂದಿಗೆ ಆರು ವರುಷ. ಅಂದ ಹಾಗೆ ಅಪ್ಪನನ್ನು ಅಣ್ಣ ಅಂಥ ಕರೆಯುತ್ತಿದ್ದೆ.


  • ನಟರಾಜು ಮೈದುನಹಳ್ಳಿ

0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW