ದೇವೇಂದ್ರ ಕೀರ್ತಿ ಲಾಗಾಯ್ತಿನಿಂದಲೂ ಅಕ್ಕಿ ವ್ಯಾಪಾರಸ್ಥರು. ದೇವೇಂದ್ರ ಕೀರ್ತಿ ಕೊಟ್ಟ ಅಕ್ಕಿಯ ಪ್ಯಾಕೇಟನ್ನು ಹಿಡಿದು ನಾನು ಕೂಡ ಇದನ್ನೇ ಯೋಚಿಸಸುತ್ತಾ ಹೊರಟೆ ನಾಗೇಂದ್ರ ಸಾಗರ್ ಅವರ ಈ ಲೇಖನವನ್ನು ತಪ್ಪದೆ ಮುಂದೆ ಓದಿ…
ಮೊನ್ನೆ ಜೇನೂ ಸೇರಿದಂತೆ ಒಂದು ಹಂತದ ಎಲ್ಲಾ ಕೆಲಸಗಳನ್ನೂ ಮುಗಿಸಿ ಬೆಳಿಗ್ಗೆ ಒಂಬತ್ತರ ಹೊತ್ತಿಗೇ ದೇವೇಂದ್ರ ಕೀರ್ತಿಯವರ ಬರುವಿಗಾಗಿ ತೀರ್ಥಹಳ್ಳಿಯ ಕುರುವಳ್ಳಿಯ ವಿನಾಯಕ ರೈಸ್ ಮಿಲ್ಲಿನ ಎದುರಿನಲ್ಲಿದ್ದೆ.. ದೇವೇಂದ್ರ ಕೀರ್ತಿಯವರು ನನಗೆ ಸರಿಸುಮಾರು ಹದಿನೈದು ವರ್ಷಗಳ ಹಿಂದಿನಿಂದಲೂ ಪರಿಚಿತರು.. ನಾವು ಪಶು ಆಹಾರ ಘಟಕವನ್ನು ಆರಂಭಿಸಿದ ಬಳಿಕ ಅದಕ್ಕೆ ಬೇಕಾದ ಪಾಲೀಶ್ ತೌಡು ವಗೈರೆಗಳನ್ನು ಇವರು ಒದಗಿಸುತ್ತಾರೆ.. ಇಂದೂ ಅದೇ ಸಂಬಂಧಿತ ವ್ಯವಹಾರವಿತ್ತು.. ನಾನಾದರೂ ಇವರಲ್ಲಿ ಕೆಲಸ ಮುಗಿಸಿ ಹನ್ನೊಂದರೊಳಗೆ ಊರು ಸೇರುವ ಧಾವಂತದಲ್ಲಿದ್ದೆ..
ಕೊಂಚ ಅವಸರದಲ್ಲಿದ್ದೇನೆ ಎಂದು ಎರಡನೇ ಬಾರಿಗೆ ಫೋನಾಯಿಸಿ, ಹೊಸ ವಿದ್ಯಮಾನಗಳು ಏನಿರಬಹುದು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಕಣ್ಣಾಡಿಸಿದೆ.. ಭಾರತದ ಉದ್ಯಮದ ರತ್ನಪ್ರಾಯರಂತಿದ್ದ ರತನ್ ಟಾಟಾ ವಿಧಿವಶರಾದ ಸುದ್ದಿ ಸಿಕ್ಕಿತು… ನವ ಭಾರತ ನಿರ್ಮಾಣದಲ್ಲಿ ಅವರದೇ ನೆಲೆಯಲ್ಲಿ ಅಭೂತಪೂರ್ವ ಕೊಡುಗೆ ನೀಡಿದ ರತನ್ ಟಾಟಾ ಅವರು ಹೇಗೆ ಆದರ್ಶ ಪ್ರಾಯರಾಗಿದ್ದರು ಎಂಬ ಚಿಂತನೆಯಲ್ಲಿ ಇದ್ದಾಗಲೇ ದೇವೇಂದ್ರ ಕೀರ್ತಿಯವರ ಆಗಮನವಾಯಿತು.. ಅವರ ದಿನಚರಿಯ ಆರಂಭ ಹೇಗಿದ್ದೀತು ನೋಡೋಣ ಎಂಬ ಕುತೂಹಲದಿಂದ ವಾಹನ ಇಳಿಯದೇ ನೋಡ ತೊಡಗಿದೆ…

ತನ್ನ ಮೂವರು ಮರಿಗಳೊಂದಿಗೆ ತಾಯಿ ನಾಯಿಯೊಂದು ಮಕ್ಕಳಂತೆಯೇ ಕೀರ್ತಿಯವರನ್ನು ಬರಮಾಡಿಕೊಂಡು ತನ್ನ ಸಂತಸವನ್ನು ವ್ಯಕ್ತ ಪಡಿಸಿತು.. ಬರುತ್ತೇನೆ ತಾಳು ಎಂದು ಅವನ್ನು ಸಂಭಾಳಿಸಿ ಮಿಲ್ಲಿನ ದ್ವಾರಕ್ಕೆ ಕೈ ಮುಗಿದು ಒಳಗೆ ಅವರ ಪ್ರವೇಶವಾಯಿತು.. ಅವರು ಬಂದಿದ್ದು ಗೊತ್ತಾಗಿದ್ದೇ ಅದೆಲ್ಲಿದ್ದವೋ ಒಂದೊಂದಾಗಿ ನಾಲ್ಕೈದು ದನಗಳು ಮಿಲ್ಲಿನೆದುರು ಜಮಾಯಿಸಿದವು.. ಎಲ್ಲವಕ್ಕೂ ಒಂದಷ್ಟು ತೌಡು ಹಾಕಿ ಪ್ರೀತಿ ತೋರುವುದರೊಂದಿಗೆ ಅವರು ಮಿಕ್ಕ ಕೆಲಸಕ್ಕೆ ಅಡಿಯಿಟ್ಟರು..
ದೇವೇಂದ್ರ ಕೀರ್ತಿ ಲಾಗಾಯ್ತಿನಿಂದಲೂ ಅಕ್ಕಿ ವ್ಯಾಪಾರಸ್ಥರು.. ಸದರಿ ಮಿಲ್ಲು ಅವರ ಕೇರಾಫ್ ಅಡ್ರೆಸ್ ಆಗಿದೆ.. ನಮ್ಮ ವ್ಯಾವಹಾರಿಕ ಸ್ನೇಹದ ಈ ಹದಿನೈದು ವರ್ಷಗಳಲ್ಲಿ ಅವರ ನಡೆನುಡಿ ಕೊಂಚವೂ ಬದಲಾಗಿಲ್ಲ.. ಎಂದಿಗೂ ಸಫಾರಿ ಡ್ರೆಸ್ ಪ್ರಿಯರು.. ತುಂಬಾ ಮೆಲುವಾದ ಮಾತು.. ಹಾಗಂತ ವ್ಯವಹಾರದಲ್ಲಿ ಕಟ್ಟುನಿಟ್ಟಿದೆ.. ಈ ಹದಿನೈದು ವರ್ಷಗಳ ನಮ್ಮ ವ್ಯವಹಾರದಲ್ಲಿ ಎಂದಿಗೂ ಏರುಪೇರಾಗಿಲ್ಲ…

ಅವರಲ್ಲಿ ತೀರ್ಥಹಳ್ಳಿ ಕಡೆಯ ಅಪರೂಪದ ಕೆಲವು ಸ್ಥಳೀಯ ತಳಿಯ ಅಕ್ಕಿಯೂ ಸಿಗುತ್ತದೆ.. ಜೋಳುಗ, ಸಣ್ಣ ವಾಳ್ಯ ತಳಿ ಅಕ್ಕಿಯನ್ನು ತರುತ್ತೇನೆ.. ನಮ್ಮ ಮಲೆನಾಡು ಗಿಡ್ಡ ಕಚೇರಿಯಲ್ಲಿ ಅದನ್ನು ಇಡುತ್ತೇನೆ.. ಈಗಂತೂ ಕಡಿ ರಹಿತವಾಗಿ ಅಕ್ಕಿ ಸಿಗುತ್ತಿರುವುದರಿಂದ ಕೊಂಚ ದುಬಾರಿ ಆದರೂ ಅದನ್ನೇ ಇಷ್ಟಪಟ್ಟು ಒಯ್ಯುವ ಜನರಿದ್ದಾರೆ..
ನನಗೆ ತಕ್ಷಣ ಮೂರು ದಿನದ ಹಿಂದೆ ದಿನಸಿ ಅಂಗಡಿಯಲ್ಲಿ ನಡೆದ ಘಟನೆ ನೆನಪಾಯಿತು.. ಸಾಗರದ ದಿನಸಿ ಅಂಗಡಿಯಲ್ಲಿ ಅಗತ್ಯದ ಸಾಮಾನು ಪಟ್ಟಿ ಕೊಟ್ಟು ಕಾಯುತ್ತಿದ್ದೆ.. ನನ್ನಂತೆಯೇ ದಿನಸಿ ಒಯ್ಯಲು ಬಂದಿದ್ದ ಒಂದು ಸಾಮಾನ್ಯ ಮಧ್ಯಮ ವರ್ಗದ ಮಹಿಳೆಯೊಬ್ಬಳು ಬಿಲ್ಲು ಪಾವತಿಸುವ ಮುನ್ನ ಸಾಮಾನುಗಳನ್ನು ಪರಿಶೀಲಿಸುತ್ತಾ ಉಪ್ಪಿನ ಪ್ಯಾಕೇಟು ಎತ್ತಿಟ್ಟು ತನಗೆ ಟಾಟಾ ಹರಳುಪ್ಪೇ ಬೇಕು ಎಂದರು.. ಇದೂ ಕೂಡ ಅದರಂತದೇ ಎರಡು ರೂಪಾಯಿ ಕಡಿಮೆ ಕೂಡ ಎಂದು ಅಂಗಡಿಯವರು ಒತ್ತಾಯಿಸಿದರೂ ಒಪ್ಪದೇ ಪಟ್ಟು ಹಿಡಿದು ಟಾಟಾ ಕಂಪನಿ ಉಪ್ಪನ್ನೇ ಒಯ್ದಿದ್ದರು.. ನಮ್ಮ ದೇಶದ ಮಟ್ಟಿಗೆ ಟಾಟಾ ಕಂಪೆನಿಯ ಯಾವುದೇ ಉತ್ಪನ್ನಗಳನ್ನು ತೆಗೆದು ಕೊಳ್ಳಿ ಇದೇ ನಂಬಿಕೆ, ಇದೇ ವಿಶ್ವಾಸ..

ದೇವೇಂದ್ರ ಕೀರ್ತಿ ಕೊಟ್ಟ ಅಕ್ಕಿಯ ಪ್ಯಾಕೇಟನ್ನು ಹಿಡಿದು ನಾನು ಕೂಡ ಇದನ್ನೇ ಯೋಚಿಸಿದೆ.. ಒಂದು ಸಾವಿರ ರೈತರನ್ನು ಒಳಗೊಂಡು ನಡೆಸುತ್ತಿರುವ ನಮ್ಮ ಮಲೆನಾಡು ಗಿಡ್ಡ ರೈತ ಉತ್ಪಾದಕ ಕಂಪನಿ ಕೂಡ ಇದೇ ನಂಬಿಕೆ, ವಿಶ್ವಾಸಗಳೆಂಬ ಹಳಿಯ ಮೇಲೆಯೇ ನಡೆಸಿಕೊಂಡು ಹೋದರೆ ಯಶಸ್ವಿ ಆಗುವುದರಲ್ಲಿ ಸಂಶಯವಿಲ್ಲ ಎಂದುಕೊಂಡೆ.. ಮರಳಿ ಹೋಗುವ ದಾರಿಯುದ್ದಕ್ಕೂ ಇದೇ ವಿಷಯ ಗುಂಗಿ ಹುಳವಾಗಿ ಜೊತೆಯಾಗಿತ್ತು….
- ನಾಗೇಂದ್ರ ಸಾಗರ್
