‘ಮಂದಾರ ಮಂದಾಕಿನಿ’ಕೃತಿ ಪರಿಚಯ

೭೮ ಕಾದಂಬರಿಗಳು ,೧೨ ಕಥಾ ಸಂಗ್ರಹಗಳು, ೧೧ ಸರಳ ರಗಳೆಯ ನಾಟಕಗಳು ೪ ಕವನ ಸಂಗ್ರಹ, ೮ ಮಕ್ಕಳ ಸಾಹಿತ್ಯ ಮತ್ತು ಒಂದು ಅನುವಾದ ಕೃತಿಯನ್ನು ರಚಿಸಿರುವ ಕೃಷ್ಣಮೂರ್ತಿ ಪುರಾಣಿಕರ ೧೫ ಕಾದಂಬರಿಗಳು ಕನ್ನಡ ಚಲನ ಚಿತ್ರಗಳಾಗಿವೆ. ಅವರ ಮಂದಾರ ಮಂದಾಕಿನಿ ಕಾದಂಬರಿಯ ಕುರಿತು ಲೇಖಕಿ ವಾಣಿಶ್ರೀ ಕೊಂಚಾಡಿ ತಮ್ಮ ಅಭಿಪ್ರಾಯವನ್ನು ಓದುಗರ ಮುಂದೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಪುಸ್ತಕದ ಹೆಸರು : ಮಂದಾರ ಮಂದಾಕಿನಿ
ಲೇಖಕರು : ಕೃಷ್ಣಮೂರ್ತಿ ಪುರಾಣಿಕ
ಮೊದಲ ಮುದ್ರಣ : ೧೯೬೨
ಪ್ರಕಾಶಕರು : ಸಾಹಿತ್ಯ ನಂದನ
ಬೆಲೆ : ೧೧೦ರೂ/

ಲೇಖಕರ ಪರಿಚಯ: ಪ್ರಗತಿ ಶೀಲ ಕಾಲ ಘಟ್ಟದ ಪ್ರಮುಖ ಲೇಖಕರಲ್ಲಿ ಒಬ್ಬರಾದ ಕೃಷ್ಣಮೂರ್ತಿ ಪುರಾಣಿಕರು ಜನಿಸಿದ್ದು ಸೆಪ್ಟೆಂಬರ್ ೫ ೧೯೧೧ ರಂದು. ಅವರು ಬದುಕಿದ ೭೪ ವರುಷಗಳ ಸಮಯದಲ್ಲಿ ೭೮ ಕಾದಂಬರಿಗಳು ,೧೨ ಕಥಾ ಸಂಗ್ರಹಗಳು, ೧೧ ಸರಳ ರಗಳೆಯ ನಾಟಕಗಳು ೪ ಕವನ ಸಂಗ್ರಹ, ೮ ಮಕ್ಕಳ ಸಾಹಿತ್ಯ ಮತ್ತು ಒಂದು ಅನುವಾದ ಕೃತಿಯನ್ನು ರಚಿಸಿದ್ದಾರೆ.

ಪುರಾಣಿಕರ ೧೫ ಕಾದಂಬರಿಗಳು ಕನ್ನಡ ಚಲನ ಚಿತ್ರಗಳಾಗಿವೆ. ಕಾದಂಬರಿ ಆಧಾರಿತ ಮೊದಲ ಕನ್ನಡ ಚಲನಚಿತ್ರವೇ ‘ಧರ್ಮದೇವತೆ ‘. ಅಷ್ಟೇ ಅಲ್ಲದೆ ಬೇರೆ ಯಾವ ಲೇಖಕರ ಕಾದಂಬರಿಗಳು ಇವರ ಕಾದಂಬರಿಗಳಷ್ಟು ತೆರೆಕಂಡಿಲ್ಲ ಎಂಬುದು ಸತ್ಯ ಸಂಗತಿ. ಕನ್ನಡದಲ್ಲಿ ಇವರ ಕಾದಂಬರಿ ತೆರೆ ಕಾಣುವ ಮೊದಲೇ ಅವರ ‘ಮುತ್ತೈದೆ’ ಕಾದಂಬರಿ, ತಮಿಳಿನಲ್ಲಿ ತೆರೆಕಂಡಿತ್ತು. ವೃತ್ತಿಯಲ್ಲಿ ಶಿಕ್ಷಕರಾದ ಇವರು ಪ್ರವೃತ್ತಿಯಲ್ಲಿ ಸಾಹಿತ್ಯಕ್ಕೆ ಕ್ಷೇತ್ರಕ್ಕೆ ತಮ್ಮ ಅಪಾರ ಕೊಡುಗೆ ಸಲ್ಲಿಸಿದರೂ ಅವರಿಗೆ ಸಿಗಬೇಕಾದ ಸ್ಥಾನ ಮಾನ ಪ್ರಶಸ್ತಿಗಳು ಸಿಗದ್ದು ವಿಷಾದನೀಯ. ಇವರ ಸಾಹಿತ್ಯದಲ್ಲಿ ಅವರ ಸಮಕಾಲೀನ ಜನಜೀವನದ ಚಿತ್ರಣವಿದೆ. ಆ ಕಾಲದ ಸಂಸ್ಕೃತಿ, ಮೂಢನಂಬಿಕೆಗಳು,ಅದರ ವಿರುದ್ಧ ಅವರು ತಾಳುವ ವೈಚಾರಿಕ ನಿಲುವು ಎಲ್ಲವನ್ನೂ ಪ್ರತಿಯೊಂದು ಪಾತ್ರದ ಮೂಲಕ ನಮಗೆ ತಿಳಿಸುತ್ತಾರೆ.

ಸಮಾಜ ಜೀವನದಲ್ಲಿರುವ ಅಂಕುಡೊಂಕುಗಳು, ಏರುಪೇರುಗಳು ಕಷ್ಟಕಾರ್ಪಣ್ಯಗಳೇ ಇವರ ಕಾದಂಬರಿಗಳ ವಸ್ತು.ಇವರ ‘ಕುಲವಧು’, ‘ಕರುಣೆಯೇ ಕುಟುಂಬದ ಕಣ್ಣು’, ‘ಸನಾದಿ ಅಪ್ಪಣ್ಣ,’ ‘ಹಾಲುಂಡ ತವರು’ ಮೊದಲಾದ ಉತ್ತಮ ಕಥೆಯುಳ್ಳ ಕಾದಂಬರಿಗಳು ಚಲನಚಿತ್ರಗಳಾಗಿ ಜನರ ಮನಸ್ಸನ್ನು ಗೆದ್ದಿವೆ.ಇವರ ಮೌಲ್ಯಾಧಾರಿತ ಜೀವನ ಇಂದಿಗೂ ಪ್ರಸ್ತುತ. ಮುಖ್ಯವಾಗಿ ಹೆಣ್ಣು ಮಕ್ಕಳಲ್ಲಿ ವೈಚಾರಿಕ ಪ್ರಜ್ಞೆ ಹಚ್ಚಿ ಓದಿನ ಅಭಿರುಚಿಯನ್ನು ಬೆಳೆಸಿದ ಸಾಹಿತಿಗಳಲ್ಲಿ ಇವರೇ ಅಗ್ರಗಣ್ಯರು. ತನ್ನ ಹೆಚ್ಚಿನ ಕಾದಂಬರಿಗಳಲ್ಲಿ ಮಹಿಳೆಯರ ಮನಸ್ಸಿನ ತೊಳಲಾಟ, ಸಿಟ್ಟು, ಸೇಡು, ಪ್ರೀತಿ ಎಲ್ಲವನ್ನೂ ಓದುಗರಿಗೆ ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದಾರೆ. ಸಮಾಜದಲ್ಲಿ ಹೆಣ್ಣಿಗೆ ವಿಶೇಷ ಸ್ಥಾನಮಾನ ವೇಶ್ಯಾವಾಟಿಕೆಯಂತಹ ಅನಿಷ್ಟ ಪದ್ದತಿಯ ನಿರ್ಮೂಲನೆ, ವಿಧವಾ ವಿವಾಹ ಮೊದಲಾದವುಗಳನ್ನು ಪ್ರೋತ್ಸಾಹಿಸಿ ಗೌರವಿಸಿ ವಿಶೇಷ ಸ್ಥಾನಮಾನ ಕಲ್ಪಿಸಬೇಕು.ಸಮಾಜ ಮತ್ತು ರಾಷ್ಟ್ರ ಸುಸ್ಥಿತಿಯಲ್ಲಿ ಇರಬೇಕಾದರೆ ಹೆಣ್ಣಿನ ಸ್ಥಾನಮಾನ ಮೊದಲು ಮನೆಯಲ್ಲಿ ಮತ್ತೆ ಸಮಾಜದಲ್ಲಿ ಗೌರವ ಯುತವಾಗಿರಬೇಕು ಆಗ ಮಾತ್ರ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯ ಎಂಬುದು ಇವರ ಪ್ರಬಲವಾದ ನಂಬಿಕೆ.

ಕಾದಂಬರಿಯ ಬಗ್ಗೆ:

‘ಮಂದಾರ ಮಂದಾಕಿನಿ’ ಹೆಸರೇ ಹೇಳುವಂತೆ ಸ್ವರ್ಗಲೋಕದ ಹೂ ಮಂದಾರ ಅದರ ಹತ್ತಿರ ಇರುವ ಸವಿ ನೀರು ಮಂದಾಕಿನಿ ಈ ನದಿಯ ದಂಡೆಯ ಮೇಲೆ ಬೆಳೆಯುವ ಮಂದಾರ ಪುಷ್ಪ ದೇವಲೋಕದ ಹೂವು. ಇಲ್ಲಿ ಬರುವ ಎರಡು ಪಾತ್ರಗಳಾದ ಪುಷ್ಪದಂತಹ ಬಂಗಾರಿ ಮತ್ತು ಮಂದಾಕಿನಿ. ಹೂವಿನಂತೆ, ಸವಿ ನೀರಿನಂತೆ ಜನರ ಬಾಳಿಗೆ ಏಳಿಗೆಯನ್ನು ತರುತ್ತಾರೆ. ಸುಮಾರು ಮೂವತ್ತು ವರ್ಷಗಳ ನಂತರ ತಮ್ಮ ಊರಿಗೆ ಮರಳಿ ಬರುವ ರಘುನಾಥ ಮಾಸ್ತರು ಬದಲಾದ ಊರಿನ ಬಗ್ಗೆ ಜನರ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸುತ್ತಾರೆ. ಊರು ಸುಧಾರಣೆಯಾಗದೆ ಅದೇ ತಿಪ್ಪೆಯ ಗುಂಡಿಗಳು ಹೊಲಸು ರಾಶಿಯಿಂದ ಕೂಡಿರುತ್ತದೆ. ಒಂದು ಕಾಲದಲ್ಲಿ ಶ್ರೀಮಂತ ಮನೆತನವಾಗಿ ಮೆರೆದ ದೇಶಪಾಂಡೆ ಮನೆತನ ಇಂದು ಅಧೋಗತಿಯನ್ನು ಕಂಡದ್ದು ನೋಡಿ ಕಳವಳವಾಗುತ್ತದೆ. ಸ್ನೇಹಿತ ಪಾಂಡುರಂಗ ದೇಶಪಾಂಡೆಯ ಮನೆತನದವರು ಆಗರ್ಭ ಶ್ರೀಮಂತರು. ಆದರೆ ಮೂರು ತಲೆಮಾರಿಗಾಗುವಷ್ಟು ಇದ್ದ ಆಸ್ತಿಯನ್ನು ಜೂಜು ಪರಸ್ತ್ರೀ ಸಂಗ, ಆಡಂಬರ, ಔದಾರ್ಯ, ಆಲಸ್ಯ ಕುಡಿತಗಳಿಂದ ಕಳೆದು ಮಕ್ಕಳಿಲ್ಲ ದೇಶಾಂತರ ಹೋಗುವ ಪರಿಸ್ಥಿತಿ ಬಂದಿರುತ್ತದೆ .ದೇಶಪಾಂಡೆ ಮನೆತನದ ‘ವಾಡೆ’ ಅಲ್ಲಲ್ಲಿ ಬಿದ್ದು ಹೋಗಿ ಮುಂದಿನ ಮಗ್ಗುಲಿನ ಪಡಸಾಲೆ ಈಗ ‘ಪಂಚ ಕಮಿಟಿ’ಯ ಕಚೇರಿಯಾಗಿರುತ್ತದೆ. ಅಲ್ಲಿನ ಒಂದು ಮುರುಗು ಕೋಣೆಯ ನಡುವೆ ಗೋಣಿ ತಟ್ಟಿನ ಪರದೆಯನ್ನು ಎಳೆದು ಎರಡು ಭಾಗ ಮಾಡಿರುತ್ತಾರೆ. ಒಳಗೆ ಪಾಂಡು ಅಡುಗೆ ಮಾಡಿ ಹೊರಗೆ ಮಲಗುವ ಅಭ್ಯಾಸ ಮಾಡಿರುತ್ತಾನೆ. ಅವನೀಗ ಅಲ್ಲಿನ ಕಾರ್ಯದರ್ಶಿಯು ಜವಾನನೂ ಆಗಿರುತ್ತಾನೆ. ಆ ಚಾವಡಿಯ ಕಂದೀಲದ ಗ್ಲಾಸ್ ಒರೆಸುವುದು, ಬಂದವರಿಗೆ ಚಹಾ ಸರಬರಾಜು ಮಾಡುವುದೇ ಅವನ ಕೆಲಸ. ಹಿರಿಯರ ಸರಿಯಾದ ಮಾರ್ಗದರ್ಶನವಿಲ್ಲದೆ ಬಾಲ್ಯದಲ್ಲಿ ಕೆಟ್ಟ ಚಟಗಳಿಗೆ ಬಲಿಯಾದ ಈತನ ದುರವಸ್ಥೆಯ ಚಿತ್ರಣ ಓದಿದಾಗ ಅಯ್ಯೋ ಅನ್ನಿಸುತ್ತದೆ.

ಊರಿನಲ್ಲಿ ರಾಯನಗೌಡ ಎಂಬ ಧೂರ್ತ, ಒಂದು ಕಾಲದಲ್ಲಿ ರಘುನಾಥ ಮಾಸ್ತರರ ಸ್ನೇಹಿತನಾಗಿದ್ದವನು ಇಂದು ಅವರಿವರ ಆಸ್ತಿಯನ್ನು ಕಬಳಿಸಿ, ದೊಡ್ಡ ಜಮೀನುದಾರನಾಗಿರುತ್ತಾನೆ. ಪಾಂಡುರಂಗ ದೇಶಪಾಂಡೆಯ ಹೆಂಡತಿಯ ಪಾಲಿಗೆ ಬಂದಿದ್ದ ಹೊಲವನ್ನು ಗೇಣಿ ಕೊಡುವ ಕರಾರಿನಲ್ಲಿ ಉಳಿಯುತ್ತಿರುತ್ತಾನೆ. ಆದರೆ ಇತ್ತೀಚಿನ ಐದು ವರ್ಷಗಳಿಂದ ಗೇಣಿಯನ್ನು ಕೊಡದೆ ಸತಾಯಿಸುತ್ತಿರುತ್ತಾನೆ, ಪಾಂಡುವಿನ ಹೆಂಡತಿ ಮಂದಾಕಿನಿ ಜಾಗೀದಾರರ ಮಗಳು. ಅವಳ ಮೂಲ ಹೆಸರು ಮಕರವ್ವ. ಗಂಡನ ಮನೆಯವರು ತಮ್ಮ ಅಂಟಿದ ಚಟಗಳಿಂದ ಎಲ್ಲಾ ಕಳೆದುಕೊಂಡು ಹೀಗೆ ದಿಕ್ಕು ಪಾಲಾದ ಮೇಲೆ ತನ್ನ ನಿರ್ಧಾರಗಳಿಗೆ ಗಂಡನ ಸಹಕಾರವೂ ದೊರೆಯದಾಗ ದಾರಿ ಕಾಣದೆ ತವರು ಮನೆಯನ್ನು ಸೇರುತ್ತಾಳೆ. ಆದರೆ ಅಲ್ಲಿನ ಸ್ಥಿತಿ ಹದಗೆಟ್ಟಾಗ ಪಕ್ಕದ ಹಳ್ಳಿಯಲ್ಲಿ ದನಗಳನ್ನು ಸಾಕಿ, ಹಾಲು ಮಾರಿ ಜೀವನ ನಡೆಸುತ್ತಿರುತ್ತಾಳೆ.

ರಾಘಣ್ಣ ಮಾಸ್ತರರು ತನ್ನ ಊರಿನಲ್ಲಿ ನೆಲಗೊಳ್ಳಬೇಕೆಂದು ಬಂದಾಗ ಮೊದಲು ಸ್ನೇಹಿತ ಪಾಂಡುರಂಗನ ಕಂಡು ಆತನ ಕಥೆ ಕೇಳಿ ನಂತರ ತನ್ನ ಹೊಲ ನೋಡಿಕೊಳ್ಳುತ್ತಿದ್ದ ಸಿದ್ದಪ್ಪನ ಮನೆಗೆ ಬರುತ್ತಾರೆ. ಸಿದ್ದಪ್ಪನ ಮನೆಯಲ್ಲಿ ಆತ ಮತ್ತೆ ಹೆಂಡತಿ ಬಂಗಾರಿ ಇಬ್ಬರೇ. ಬಂಗಾರಿ ವಿದ್ಯಾವಂತೆ ವಿನಯಶೀಲೆ ಮಾತ್ರವಲ್ಲದೆ ಮಹಾಪ್ರತಿವ್ರತೆ ,ಆ ಊರಿನ ಜೀವಸೆಲೆ. ಸಿದ್ದಪ್ಪ ಪ್ರಾಮಾಣಿಕ ಬಡವನಾದರೂ ಹೆಸರು ಕೆಡಿಸಿಕೊಳ್ಳದ ರೈತ ಸರಕಾರ ‘ಉಳುವವನದೇ ಹೊಲ’ಎಂದಾಗ ಸಿದ್ದಪ್ಪ ಬಂಗಾರಿ, ಭೂ ಮಾಲೀಕರ ಪರವಹಿಸಿರುತ್ತಾರೆ .ಒಮ್ಮೆ ಬಂಗಾರಿಯನ್ನು ಕೆಟ್ಟ ದೃಷ್ಟಿಯಿಂದ ನೋಡಿದ ರಾಯಣ್ಣ ಗೌಡನಿಗೆ ಆಕೆ ತನ್ನ ಎಕ್ಕಡದ ರುಚಿ ತೋರಿಸಿ ಅವಮಾನಿಸಿರುತ್ತಾಳೆ. ಪರಿಣಾಮವಾಗಿ ಆತನು ಅವಳ ಬಗ್ಗೆ ಎಲ್ಲರಲ್ಲೂ ಅಪಪ್ರಚಾರ ಮಾಡುತ್ತಿರುತ್ತಾನೆ.

ಮಾಸ್ಟರರು ಊರಿಗೆ ಬಂದಮೇಲೆ ಒಂದೆರಡು ತಿಂಗಳು ಆ ಊರಿನ ಬಗ್ಗೆ ಜನ ಸಮೂಹದ ಬಗ್ಗೆ ಅಧ್ಯಯನ ಮಾಡುತ್ತಾರೆ ಆಮೇಲೆ ಒಂದೊಂದಾಗಿ ಸುಧಾರಣೆಯ ಕೆಲಸ ಕೈಗೊತ್ತಿಕೊಂಡು ಜನರ ಪ್ರೀತಿ ಸಂಪಾದಿಸಲು ತೊಡಗುತ್ತಾರೆ. ಇವೆಲ್ಲಾ ಧೂರ್ತ ಗೌಡನ ಕಣ್ಣು ಕೆಂಪಾಗಲು ಕಾರಣವಾಗುತ್ತದೆ ತನ್ನ ಏಕ ಚಕ್ರಾಧಿಪತ್ಯಕ್ಕೆ ಈ ಮಾಸ್ತರ ಶತ್ರುವಾಗುತ್ತಾನೆ ಎಂದೇ ಭಾವಿಸತೊಡಗುತ್ತಾನೆ. ಒಂದು ಕಾಲದಲ್ಲಿ ರಘುನಾಥ ಮಾಸ್ತರು ಊರಿನಲ್ಲಿ ರಾಷ್ಟ್ರೀಯ ಮಹಾವಿದ್ಯಾಲಯ ಸ್ಥಾಪಿಸಿ ಅಲ್ಲಿ ರಾಷ್ಟ್ರ ಪೋಷಕ ಕಲೆ, ಸಾಹಿತ್ಯ ರಂಗಭೂಮಿಯ ಚಟುವಟಿಕೆಗಳನ್ನು ಮಾಡುತ್ತಿರುತ್ತಾರೆ. ಆದರೆ ಅದರಲ್ಲಿ ಅವರು ಸೋಲನ್ನು ಕಾಣಬೇಕಾಗುತ್ತದೆ. ಈಗ ಈ ಊರಿನ ಸ್ವಚ್ಛತೆ ನೀರಿನ ವ್ಯವಸ್ಥೆ ಬಡವರಿಗೆ ಸಹ ಶಿಕ್ಷಣದ ಮಹತ್ತ್ವ, ವೇಶ್ಯಾವಾಟಿಕೆ ನಿರ್ಮೂಲನೆ ,ಅವರಿಗೆ ಮದುವೆ ,ಒಳ್ಳೆಯ ಬದುಕು ಕೊಡುವುದು ಮೊದಲಾದ ರಚನಾತ್ಮಕ ಕಾರ್ಯಗಳನ್ನು ಯೋಜನೆಗೆ ತರಲು ತಮ್ಮನ್ನು ತೊಡಗಿಸಿ ಕೊಳ್ಳುತ್ತಾರೆ. ಇದಕ್ಕೆ ಸಿದ್ದಪ್ಪ ಸಹಕಾರ ಕೊಟ್ಟರೆ, ತನ್ನ ಬುದ್ಧಿ ಉಪಯೋಗಿಸಿ ಸಮಾಜ ಸುಧಾರಿಸಲು ಬೇಕಾದ ಬದಲಾವಣೆಗಳ ಒಟ್ಟು ಚಿತ್ರಣವನ್ನು ಸ್ಥೂಲವಾಗಿ ಹೇಳುವ ಬಂಗಾರಿಯ ವ್ಯಕ್ತಿತ್ತ್ವದ ಚಿತ್ರಣ ತುಂಬಾ ಚೆನ್ನಾಗಿದೆ ಪಾಂಡುವು ಇವರಿಂದ ಪ್ರೇರಿತನಾಗಿ ಕೈಲಾದ ಸಹಾಯವನ್ನು ಮಾಡುತ್ತಾನೆ. ಈ ನಡುವೆ ರಘುನಾಥ ಮಾಸ್ತರು ಪಾಂಡುವಿನ ಹೆಂಡತಿಯನ್ನು ಆಕೆಯ ಊರಿಗೆ ಹೋಗಿ ಭೇಟಿ ಮಾಡಿ ಮರಳಿ ಆಕೆ ತನ್ನೂರಿಗೆ ಬರಬೇಕೆಂಬ ಬೇಡಿಕೆಯನ್ನು ಇಟ್ಟಾಗ ಆಕೆಯೂ ಒಪ್ಪುತ್ತಾಳೆ.

ಕೆಲ ದಿನಗಳು ಕಳೆದ ಬಳಿಕ ಮರಳಿ ಬಂದ ಆಕೆ ತನ್ನ ಹೊಲ ತನಗೆ ಮರಳಿ ಕೊಡಬೇಕೆಂದು ಗೌಡನನ್ನು ಕೇಳಿದಾಗ ಆತ ಒಪ್ಪುವುದಿಲ್ಲ, ಬದಲಾಗಿ ಪಾಂಡುವಿನ ಕರೆದು ಮಂದಾಕಿನಿಗೂ ಅನೈತಿಕ ಸಂಬಂಧವಿದೆ ಎಂದು ಹೇಳಿ ತಲೆಕೆಡಿಸುತ್ತಾನೆ. ಆದರೆ ಆತನ ನೀಚತನದ ಬಗ್ಗೆ ಗೊತ್ತಿದ್ದ ಪಾಂಡು ಅದನ್ನು ನಂಬುವುದಿಲ್ಲ. ಈ ಎಲ್ಲಾ ಘಟನೆಗಳ ನಡುವೆ ಹೆಂಡ ಕುಡಿಯುವವರನ್ನು ಆ ಚಟದಿಂದ ಮಾಸ್ತರರು ಮುಕ್ತಗೊಳಿಸುತ್ತಾರೆ. ದೇವದಾಸಿ ಹುಡುಗಿ ದೇವರ ಸ್ವತ್ತಾಗುವುದನ್ನು ಬಿಡಿಸಿ ಆಕೆಯ ಮದುವೆಯನ್ನು ಮಾಡುತ್ತಾರೆ. ಇದರಿಂದ ರಾಯಣ್ಣ ಗೌಡ ಮತ್ತಷ್ಟು ಉರಿದು ಮಾಸ್ತರರ ಮನೆ ಸುಡುತ್ತಾನೆ. ಬಂಗಾರಿಯ ಎಮ್ಮೆಗಳ ಕಳವಾಗುತ್ತದೆ. ಇಷ್ಟೆಲ್ಲಾ ಆದರೂ ಮಾಸ್ತರರು ಹಿಂಜರಿಯುವುದಿಲ್ಲ. ಮಂದಾಕಿನಿ ಒಳ್ಳೆ ಮಾತಿನಿಂದ ಎಷ್ಟೇ ಕೇಳಿಕೊಂಡರು ರಾಯಣ್ಣ ಗೌಡ ಹೊಲ ಬಿಟ್ಟು ಕೊಡುವುದೇ ಇಲ್ಲ. ಗೌಡನ ಪತ್ನಿಯಾದ ವೆಂಕವ್ವ ಕೂಡ ಆತನಿಗೆ ಸಾಕಷ್ಟು ತಿಳಿ ಹೇಳಿದರೂ ಆತ ಒಪ್ಪುವುದೇ ಇಲ್ಲ.
ಪರಿಣಾಮವಾಗಿ ಗರ್ಭಿಣಿ ವೆಂಕವ್ವ ಗಂಡನಿಂದ ಒದೆ ತಿನ್ನಬೇಕಾಗುತ್ತದೆ . ನಂತರದ ಒಂದು ಮುಂಜಾನೆ ಬಂಗಾರಿ ಹಾಗೂ ಮಂದಾಕಿನಿ ಗೌಡನ ಮನೆಗೆ ಹೋಗಿ ಪುನ:ಕೇಳಿಕೊಳ್ಳುತ್ತಾರೆ.

ಒಳಗೆ ಕರೆಸಿಕೊಂಡ ವೆಂಕವ್ವ ಗಂಡನ ಪ್ರಾಣಭಿಕ್ಷೆ ಯಾಚಿಸುತ್ತಾಳೆ. ಇತ್ತ ಗೌಡನಿಂದ ಮಂದಾಕಿನಿಯ ಹೊಲ ಬಿಡಿಸಿಕೊಳ್ಳಲು ಬಂಗಾರಿ ಊರಿನ ಹೆಣ್ಣು ಮಕ್ಕಳನ್ನು ಒಗ್ಗೂಡಿಸಿ ಬೀಜ ಬಿತ್ತುವ ಕೆಲಸಕ್ಕೆ ಮುಂದಾಗುತ್ತಾಳೆ. ಅದಾಗಲೇ ಗೌಡನು ತನ್ನ ಸೇವಕರೊಡನೆ ಬೀಜ ಬಿತ್ತಲು ತಯಾರಾಗಿ ನಿಂತಿರುತ್ತಾನೆ. ಬಂಗಾರಿಯ ಕಡೆಯವರು ಮಣಿಯದೆ ತನ್ನ ಕೆಲಸ ಪ್ರಾರಂಭಿಸಲು ತೊಡಗುವಷ್ಟರಲ್ಲಿ ಗೌಡ ಬಂದು ಬಂದೂಕು ಕೈಗೆತ್ತಿಕೊಳ್ಳುತ್ತಾನೆ. ಆದರೆ ಧೈರ್ಯ ಬರುವುದಿಲ್ಲ. ಈ ಸಂದರ್ಭದಲ್ಲಿ ಬಂದ ಗೌಡನ ಆಳು ರಾಚೋಟ ಗೌಡತಿ ಹೆರಿಗೆ ಬೇನೆ ತಿನ್ನುತ್ತಿದ್ದಾಳೆ, ಮಗು ಅಡ್ಡ ಸಿಕ್ಕಿದೆ, ಹಾಗಾಗಿ ಸುಲಗಿತ್ತಿ ಒದ್ದಾಡುತ್ತಿದ್ದಾಳೆ, ಎಂಬ ವಿಷಯವನ್ನು ಮುಟ್ಟಿಸುತ್ತಾ ಮಾಸ್ತರರು ಹೆರಿಗೆ ನಿಪುಣೆಯಾದ ಮಂದಾಕಿನಿಯನ್ನು ಕರೆತರಲು ಹೇಳಿರುವರೆಂದು ತಿಳಿಸುತ್ತಾನೆ. ಅಷ್ಟರಲ್ಲಿ ಬಂಗಾರಿಯ ಕೈಯಲ್ಲಿದ್ದ ಕಾಳಿನ ಚೀಲವೂ ಗೌಡನ ಬಂದೂಕೂ ನೆಲಕಚ್ಚುತ್ತದೆ.

ಮಹಾತ್ಮ ಗಾಂಧಿ ಅವರಿಂದ ಪ್ರಭಾವಿತರಾದ ಲೇಖಕರು ತನ್ನ ಮನದ ಆಶೋತ್ತರಗಳನ್ನು, ಧ್ಯೇಯ ,ಕಂಡ ಕನಸು ಎಲ್ಲವನ್ನೂ ರಘುನಾಥ ಮಾಸ್ಟರ್ ಪಾತ್ರದ ಮೂಲಕ ವ್ಯಕ್ತಪಡಿಸಿದ್ದಾರೆ ಅನ್ನಿಸುತ್ತದೆ. ಒಂದು ಅಸ್ತವ್ಯಸ್ತಗೊಂಡ ಹಳ್ಳಿಯನ್ನು ಸರಿ ಮಾಡಲು ಅವರು ಪಡುವ ಪಾಡು, ವಿದ್ಯೆ ಇಲ್ಲದ ಜನರನ್ನು ಒಳ್ಳೆಯ ದಾರಿಗೆ ತರುವ ಕಾರ್ಯದಲ್ಲಿ ಎದುರಬಹುದಾದ ಸಮಸ್ಯೆಗಳು, ಎಲ್ಲವನ್ನು ಮನಸ್ಸಿಗೆ ನಾಟುವಂತೆ ಹೇಳಿದ್ದಾರೆ. ‘ಹಿಂಸೆಗೆ ಪ್ರತಿ ಹಿಂಸೆ ಸಲ್ಲದು ದ್ವೇಷಕ್ಕೆ ಪ್ರೀತಿಯೇ ಮದ್ದು ಹುಡುಗಿ ಹಾಕಿದರೆ ಪ್ರಜ್ವಲಿಸುತ್ತದೆ ಉರಿ ಎದ್ದರೆ ಯಾರಿಗೆ ಏನು ಸುಖ?’ ಎಂದು ಹೇಳುವ ಮಾಸ್ತರರ ಪ್ರಾಮಾಣಿಕತೆ ಆದರ್ಶ ,ಕಾದಂಬರಿಯುದ್ದಕ್ಕೂ ಬರುತ್ತದೆ ಈ ಎಲ್ಲಾ ತತ್ತ್ವಗಳನ್ನು ಒಳಗೊಂಡ ಮಾಸ್ತರರ ರಾಮ ರಾಜ್ಯದ ಕನಸು ನನಸಾಯಿತೇ? ಹಳ್ಳಿಯ ಉದ್ಧಾರವಾಯಿತೇ? ಧೂರ್ತರ ಮನ ಪರಿವರ್ತನೆ ಆಯಿತೇ ಎಂದು ತಿಳಿಯುವ ಕುತೂಹಲವಿದ್ದರೆ ಖಂಡಿತ ಓದಿ ‘ಮಂದಾರ ಮಂದಾಕಿನಿ’

ಧನ್ಯವಾದಗಳೊಂದಿಗೆ


  • ವಾಣಿಶ್ರೀ ಕೊಂಚಾಡಿ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW