‘ಚೌಚೌ ಬಾತ್’ ಅಂಕಣ (ಭಾಗ – ೪೪)

ಪ್ರತಿಯೊಂದು ಅನ್ನದ ಅಗುಳಿನ ಮೇಲೂ ತಿನ್ನೋರ ಹೆಸರು ಬರೆದಿರುತ್ತದೆ ಎನ್ನುವ ಮಾತಿದೆ. ನಿಜ ಅನ್ನದ ಋಣ ಎಲ್ಲೆಲ್ಲಿ ಯಾವಾಗ ಯಾರ ಮನೆಯಲ್ಲಿ ಇರುತ್ತದೆಯೋ ಹೇಳಲಿಕ್ಕಾಗುವುದಿಲ್ಲ. ಒಂದು ಹೊತ್ತಿನ ಹಸಿವನ್ನು ನೀಗಿಸುವ ಅನ್ನವು ಮಹಾ ಪ್ರಸಾದವಿದ್ದಂತೆ. ಸರ್ವಮಂಗಳ ಜಯರಾಮ್ ಅವರ ‘ಚೌಚೌ ಬಾತ್’ ಅಂಕಣದಲ್ಲಿ ‘ಅನ್ನದ ಋಣ’ ತಪ್ಪದೆ ಮುಂದೆ ಓದಿ…

ಮೊನ್ನೆ ಅಪರೂಪಕ್ಕೆ ನನ್ನ ಬಾಲ್ಯದ ಗೆಳತಿ ಒಬ್ಬಳು ಮನೆಗೆ ಬಂದಿದ್ದಳು. ಒಂದೇ ಊರಿನಲ್ಲಿ ಇದ್ದರೂ ಭೇಟಿಯಾಗಿ ಐದಾರು ವರ್ಷಗಳೇ ಕಳೆದಿದ್ದವು. ಇದ್ದಕ್ಕಿದ್ದಂತೆ ನನಗೆ ಸರ್ಪ್ರೈಸ್ ಎಂಬಂತೆ ಮನೆಗೆ ಬಂದಿದ್ದಳು. ನನಗಂತೂ ತುಂಬಾ ಖುಷಿಯಾಯಿತು. ಬಾಲ್ಯದ ದಿನಗಳು, ಕಾಲೇಜಿನ ಘಟನೆಗಳು ಅದು ಇದು ಮಾತನಾಡುತ್ತಾ ಸಮಯ ಕಳೆದೆವು. ಅವಳಿಗೆ ತಿನ್ನಲು ಹಣ್ಣುಗಳನ್ನು ಹಚ್ಚಿಕೊಟ್ಟೆ. ಬೇಕರಿ ತಿಂಡಿ ತಿನಿಸುಗಳನ್ನು ಬೇಡವೆಂದು ನಿರಾಕರಿಸಿದಳು. ಸರಿ ಅಪರೂಪಕ್ಕೆ ಬಂದಿದ್ದೀಯಾ, ಅಡುಗೆ ಮಾಡುತ್ತೇನೆ ಊಟ ಮಾಡಿಕೊಂಡು ಹೋಗು ಎಂದೆ. ಅಯ್ಯೋ ಊಟ ಎಲ್ಲ ಏನೂ ಬೇಡ ಕಣೆ, ಹಣ್ಣು ತಿಂದಿದ್ದೇನೆ ಸಾಕು, ತುಂಬಾ ದಿನ ಆಯ್ತು ನಿನ್ನ ಜೊತೆ ಮಾತನಾಡಿ ಅದಕ್ಕೆ ಬಂದೆ ಎಂದಳು. ಆದರೂ ತುಂಬಾ ದಿನಗಳ ನಂತರ ಮನೆಗೆ ಬಂದ ಗೆಳತಿಗೆ ಊಟ ಬಡಿಸದೆ ಹಾಗೆಯೇ ಕಳಿಸುವುದು ಮನಸ್ಸಿಗೆ ಒಪ್ಪಲಿಲ್ಲ. ಹಾಗೇ ಅವಳೊಂದಿಗೆ ಮಾತನಾಡುತ್ತಲೇ ಅಡುಗೆ ಮಾಡತೊಡಗಿದೆ. ಅವಳಂತೂ ಊಟ ಬೇಡವೇ ಬೇಡ ಎಂದು ಹಠ ಮಾಡತೊಡಗಿದಳು. ಹಣ್ಣು ತಿಂದದ್ದಕ್ಕೆ ಹೊಟ್ಟೆ ತುಂಬಿದ ಹಾಗಾಗಿದೆ ಇನ್ನು ಊಟ ಮಾಡುವುದು ಹೇಗೆ ಎಂದು ಕೇಳಿದಳು.

ಆಗ ತೀರಾ ಮಧ್ಯಾನ್ಹದ ಊಟದ ಸಮಯವಾಗಿತ್ತು. ನಮಗಾದರೂ ಊಟಕ್ಕೆ ಅಡುಗೆ ಮಾಡಲೇಬೇಕಲ್ಲವೇ, ಊಟ ಮಾಡು ಅಂದಾಗ ಮಾಡಿಬಿಡಬೇಕು. ಏಕೆಂದರೆ ಅನ್ನದ ಮಹತ್ವ ಅಷ್ಟಿಷ್ಟಲ್ಲ. ಪ್ರತಿಯೊಂದು ಅನ್ನದ ಅಗುಳಿನ ಮೇಲೂ ತಿನ್ನೋರ ಹೆಸರು ಬರೆದಿರುತ್ತದೆ ಎನ್ನುವ ಮಾತಿದೆ. ಅಲ್ಲದೆ ಒದಗಿ ಬಂದ ಅನ್ನವನ್ನು ಒದೆಯಬಾರದು, ಅನ್ನಪೂರ್ಣೇಶ್ವರಿಗೆ ಅವಮಾನ ಮಾಡಿದಂತೆ ಆಗುತ್ತದೆ ಎಂದೆ. ಸರಿ ಆಯ್ತಮ್ಮ ಅಡುಗೆ ಮಾಡು, ಬೇಡ ಅಂದ್ರೆ ನೀನು ಬಿಡಬೇಕಲ್ಲ ಎಂದು ನಕ್ಕಳು.

ಹಾಗೇ ಊಟ ಮಾಡುತ್ತಾ… ಸರು ಈ ಅನ್ನದ ಋಣ ಎಂದೆಯಲ್ಲ ನಿಜಕ್ಕೂ ಸತ್ಯ ಕಣೇ.. ಅನ್ನದ ಋಣ ಎಲ್ಲಿ ಯಾವಾಗ ಯಾರ ಮನೆಯಲ್ಲಿ ಇರುತ್ತೋ ಹೇಳೋಕಾಗಲ್ಲ. ಮನೆಯಲ್ಲಿ ಇರುವಾಗ ಚೆನ್ನಾಗಿ ತಿಂದು ಉಣ್ಣುವ ನಾವು ಹೊರಗಡೆ ಹೋದಾಗ, ಹಸಿವಾದಾಗ ಅನ್ನದ ಮಹತ್ವ ಗೊತ್ತಾಗುತ್ತದೆ.

ಫೋಟೋ ಕೃಪೆ : google

ಒಮ್ಮೆ ನಾನು ಮೊದಲ ಮಗುವಿಗೆ ಗರ್ಭಿಣಿಯಾಗಿದ್ದಾಗ ಹಳ್ಳಿಯಲ್ಲಿ ಸೆನ್ಸಸ್ ಗೆ ಹೋಗಿದ್ದೆ. ಅದು ಫೆಬ್ರವರಿ ತಿಂಗಳಿನಲ್ಲಿರಬೇಕು. ವಿಪರೀತ ಬಿಸಿಲು, ಸೆಖೆ, ನನಗಂತೂ
ಸಾಕಾಗಿ ಹೋಗಿತ್ತು. ನನಗೆ ಮಾರ್ಚ್ ನಲ್ಲಿ ಡೆಲಿವರಿ ಡೇಟ್ ಕೊಟ್ಟಿದ್ದರು. ಬೆಳಗ್ಗೆ ಹತ್ತು ಗಂಟೆಯಿಂದ ಮಧ್ಯಾಹ್ನ ಎರಡು ಗಂಟೆಯವರೆಗೂ ಆ ಹಳ್ಳಿಯಲ್ಲಿ ಮನೆಮನೆಗೂ ಹೋಗಿ ಮಕ್ಕಳ ಗಣತಿ ಮಾಡಿದ್ದೆ. ಇನ್ನೂ ಏಳೆಂಟು ಮನೆಗಳು ಬಾಕಿ ಉಳಿದಿದ್ದವು. ಅವುಗಳನ್ನೂ ಪೂರೈಸಿಕೊಂಡು ಒಂದೇ ಸಲ ಊಟಕ್ಕೆ ಮನೆಗೆ ಹೋಗೋಣ ಎಂದುಕೊಂಡಿದ್ದೆ. ಸುಮಾರು ಎರಡೂವರೆ ಆಗಿಹೋಯಿತು. ಹೊಟ್ಟೆ ಹಸಿವು ತಡೆಯಲಾಗುತ್ತಿಲ್ಲ. ಆಗ ಒಬ್ಬರ ಮನೆಗೆ ಭೇಟಿ ನೀಡಿದೆ. ಮಧ್ಯಾನ್ಹದ ಉರಿ ಬಿಸಿಲಿನಲ್ಲಿ ತುಂಬು ಗರ್ಭಿಣಿಯಾದ ನನ್ನನ್ನು ನೋಡಿ ಆ ಮನೆಯವರು ಕುಳಿತುಕೊಳ್ಳಲು ಚೇರ್ ಹಾಕಿದರು. ಕುಡಿಯಲು ನೀರು ಕೊಟ್ಟರು. ಕಾಫಿ ಟೀ ಏನಾದರೂ ಕುಡಿತಿಯ ಮೇಡಮ್ಮ, ಇಲ್ಲ ಅಂದ್ರೆ ನಿಂಬೆಹಣ್ಣಿನ ಜ್ಯೂಸ್ ಮಾಡಿಕೊಡಲಾ. ಕಡಲೆ ಕಾಯಿ ಹುರಿದು ಕೊಡಲಾ ಎಂದು ಮನೆಯಾಕೆ ಕೇಳಿದಳು. ಆಗ ನಾನು “ನನಗೊಂದಿಷ್ಟು ಊಟ ಇಟ್ಟು ಕೊಡಮ್ಮ, ತುಂಬಾ ಹಸಿವಾಗ್ತಿದೆ ” ಎಂದೆ.

ಆಗ ಆಕೆಯ ಮುಖ ಇಷ್ಟಗಲ ಅರಳಿತು. “ಅಯ್ಯೋ ಮೇಡಮ್ಮ ಊಟ ಕೇಳ್ತಾ ಇದೀಯ…. ಇರು ಮೇಡಮ್ಮ ಹತ್ತೇ ಹತ್ತು ನಿಮಿಷ ಅನ್ನ ಮಾಡಿ ಬಿಡ್ತೀನಿ, ಇರು ಸ್ವಲ್ಪ ಹೊತ್ತು ಈಗ ಬಂದೆ ” ಎಂದು ಹೇಳಿ ಒಳ ಹೋದವಳೇ ಪಟಪಟನೆ ಸೌದೆ ಮುರಿದು ಒಲೆ ಹೊತ್ತಿಸಿ ಅನ್ನ, ಟೊಮೆಟೊ ಗೊಜ್ಜು ಮಾಡಿ ತಟ್ಟೆಯಲ್ಲಿ ಹಾಕಿಕೊಂಡು ಬಂದು ಕೊಟ್ಟಳು.

ಫೋಟೋ ಕೃಪೆ : google

ತುಂಬಾ ಹಸಿದಿದ್ದ ನಾನು ಹೊಟ್ಟೆ ತುಂಬಾ ಊಟ ಮಾಡಿದೆ. ಅವರ ಹೊಟ್ಟೆ ತಣ್ಣಗಿರಲಿ ಎಂದು ಸಂತೃಪ್ತಿಯಿಂದ ಹರಸಿದ್ದೆ. ಎಷ್ಟು ಹಣ ಕೊಟ್ಟರೆ ತಾನೇ ಅವರ ಅನ್ನದ ಋಣ ತೀರಿಸಲಾಗುತ್ತದೆ ಹೇಳು” ಎಂದು ಇಪ್ಪತ್ತು ವರ್ಷಗಳ ಹಿಂದಿನ ಅವಳ ಅನುಭವದ ಮಾತನ್ನು ಮೆಲುಕು ಹಾಕಿದಳು. ಅವಳು ಕೂಡ ನನ್ನಂತೆ ಸರ್ಕಾರಿ ಶಾಲೆಯ ಶಿಕ್ಷಕಿ.

ನಿಜ ಅನ್ನದ ಋಣ ಎಲ್ಲೆಲ್ಲಿ ಯಾವಾಗ ಯಾರ ಮನೆಯಲ್ಲಿ ಇರುತ್ತದೆಯೋ ಹೇಳಲಿಕ್ಕಾಗುವುದಿಲ್ಲ. ಒಂದು ಹೊತ್ತಿನ ಹಸಿವನ್ನು ನೀಗಿಸುವ ಅನ್ನವು ಮಹಾ ಪ್ರಸಾದವಿದ್ದಂತೆ. ಒಮ್ಮೆ ನಾನು ಚುನಾವಣೆಯಲ್ಲಿ ಪಿ. ಆರ್. ಓ. ಆಗಿ ಕಾರ್ಯನಿರ್ವಹಿಸಲು ಒಂದು ಪುಟ್ಟ ಹಳ್ಳಿಗೆ ಹೋಗಿದ್ದೆ. ಅಲ್ಲಿನ ಸರ್ಕಾರಿ ಶಾಲೆಯ ಅಡುಗೆಯವಳ ಆತಿಥ್ಯಕ್ಕೆ ಮಾರುಹೋದೆ. ನಾವು ನಾಲ್ಕೈದು ಜನರಿದ್ದೆವು. ಎಲ್ಲರಿಗೂ ಮೂರು ಹೊತ್ತು ಒಳ್ಳೆಯ ರುಚಿಕಟ್ಟಾದ ಊಟ ತಿಂಡಿ ಮಾಡಿಕೊಟ್ಟಳು. ಮತದಾನದ ಮಧ್ಯಾನ್ಹವಂತೂ ಹಬ್ಬದ ಅಡುಗೆಯನ್ನೇ ಮಾಡಿ ಬಡಿಸಿದಳು. ಆತ್ಮೀಯವಾಗಿ ನೋಡಿಕೊಂಡಳು.ಅಂದು ಅವರು ಇಟ್ಟ ಅನ್ನದ ಋಣ ಮರೆಯಲಾದೀತೆ… ಹೀಗೆ ಅನ್ನದ ಋಣ ಎಲ್ಲಿರುತ್ತದೆಯೋ ಅಲ್ಲೆಲ್ಲ ನಮ್ಮನ್ನು ಕರೆದೊಯ್ಯುತ್ತದೆ.

ಅಂಕಣದ ಹಿಂದಿನ ಸಂಚಿಕೆಗಳು :


  • ಸರ್ವ ಮಂಗಳ ಜಯರಾಂ – ಶಿಕ್ಷಕಿ ಮತ್ತು ಲೇಖಕಿ ಗೌರಿಬಿದನೂರು.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading