ನನ್ನ ಮೆಚ್ಚಿನ ಶಿಕ್ಷಕಿಯರು : ಸುಜಾತಾ ರವೀಶ್

ನಮಗೆಲ್ಲ ಟೀಚರ್ ಎನ್ನುವುದಕ್ಕಿಂತ ಹಿರಿಯಕ್ಕ ಅಥವಾ ಹಿರಿಯ ಸ್ನೇಹಿತೆ ಆಗಿದ್ದರು. ತಿಳಿಯದ ಆ ವಯಸ್ಸಲ್ಲಿ ಪ್ರೀತಿಗೆ ಬಿದ್ದವರಿಗೆ ಬುದ್ಧಿ ಹೇಳಿ ತಿದ್ದುತ್ತಿದ್ದರು. ಬಹಳ ಒಳ್ಳೆಯವರು ನಮ್ಮ ಮಿಸ್… ಎನ್ನ ಹೇಳಿದ್ರು ಎಸ್ ಎಸ್ಸು ಎಸ್ಸು … ನಗುತ ನಗುತ ಮಾತಾಡ್ತಾರೆ…ಸ್ಕ್ಹೂಲಿಗೆಲ್ಲ ಫೇಮಸ್!… ಲೇಖಕಿ ಸುಜಾತಾ ರವೀಶ್ ಅವರ ವಿಶೇಷ ಲೇಖನವನ್ನು ತಪ್ಪದೆ ಮುಂದೆ ಓದಿ…

ನಮ್ಮ ಕಾಲದಲ್ಲಿ ನರ್ಸರಿ ಇಲ್ಲದಿದ್ದುದರಿಂದ ಒಂದನೇ ಕ್ಲಾಸಿನಿಂದ ಹಿಡಿದು ಡಿಗ್ರಿ ತನಕ ಎಲ್ಲಾ ಶಿಕ್ಷಕರು ನಮ್ಮ ಮೇಲೆ ಒಂದು ಇಲ್ಲ ಒಂದು ರೀತಿ ಪ್ರಭಾವ ಬೀರಿಯೇ ಇದ್ದಾರೆ ಅವರೆಲ್ಲರ ಮಾರ್ಗದರ್ಶನದಿಂದಲೇ ನಾವು ಇಂದು ಈ ಸ್ಥಿತಿಯಲ್ಲಿ ಇರುವುದು ಅಂತಹ ಎಲ್ಲ ಶಿಕ್ಷಕರಿಗೂ ಶಿಕ್ಷಕ ದಿನಾಚರಣೆಯ ಶುಭಾಶಯಗಳು ಅಂದಿಗೆ ನನ್ನ ಗೌರವ ಪೂರ್ವಾಕ ನಮನಗಳು ಹಾಗೂ ಇಂದಿನ ನನ್ನ ಶಿಕ್ಷಕರ ನೆನಪುಗಳ ವಿಶೇಷ.

ಒಂದು ಮತ್ತು ಎರಡನೆಯ ಕ್ಲಾಸು ನಾನು ಓದಿದ್ದು ಚಾಮುಂಡಿಪುರಂನ ರಾಜರಾಜೇಶ್ವರಿ ಶಾಲೆಯಲ್ಲಿ. ಅಲ್ಲಿ ರುಕ್ಮಿಣಿ ಲೀಲಾವತಿ ಹಾಗೂ ಜಯ ಮಿಸ್ ಗಳು ನೆನಪಿನಲ್ಲಿ ಉಳಿದಿದ್ದಾರೆ. ಹೆಡ್ ಮೇಡಂ ಆಗಿದ್ದ ಶಾಲೆಯ ಸಂಸ್ಥಾಪಕತಿಯ ಆದ ಒಬ್ಬರು ಕೊಡವತಿ ಮೇಡಂ ಇದ್ದರು ಅವರ ಹೆಸರು ನೆನಪಿಲ್ಲ. ಮೂರನೆಯ ಕ್ಲಾಸಿಗೆ ಸೆಂಟ್ ಥಾಮಸ್ ಶಾಲೆ ಸೇರಿದೆ ಆನಂತರವು ಚಾಮುಂಡಿಪುರಂ ಗೆ ಹೋದಾಗ ಎಲ್ಲಾ ಆ ಮಿಸ್ಗಳು ಮಾತನಾಡಿಸುತ್ತಿದ್ದು ಈಗಲೂ ಖುಷಿ ಸಂಗತಿ. ಸೇಂಟ್ ಥಾಮಸ್ ಶಾಲೆಯಲ್ಲಿ ನರ ನೆಚ್ಚಿನ ಶಿಕ್ಷಕಿ ವಿಜಯ ಮಿಸ್ ಭಾಗ್ಯಲಕ್ಷ್ಮಿ ಶಾಂತ ವೀಣಾ ಹಾಗೂ ಚಿಕ್ಕಂದಿನಲ್ಲೇ ಕಾಲವಾದ ರಾಜಮಣಿ ಮಿಸ್ ಇವರೆಲ್ಲ ತುಂಬಾ ಪ್ರೀತಿ ಪಾತ್ರರು. ಹೈಸ್ಕೂಲಿನಲ್ಲಿ ನಮ್ಮ ಕ್ಲಾಸ್ ಟೀಚರ್ ಆಗಿದ್ದ ಗೀತಾ ಮಿಸ್ ಅವರೊಂದಿಗೆ ಮಧುರ ವಿಮಲಾ ಜಯಲಕ್ಷ್ಮಿ ಕನ್ನಡದ ಟೀಚರ್ ಪುಷ್ಪ ಸಂಸ್ಕೃತ ಟೀಚರ್ ಶಿವಗಾಮಿ ಇವರೆಲ್ಲ ನನ್ನ ನೆನಪಿನ ಭಿತ್ತಿಯ ಅಮೂಲ್ಯ ಚಿತ್ರಗಳು.

ಕಾಲೇಜಿನ ಪ್ರಾಧ್ಯಾಪಕರೊಂದಿಗೆ ಅಷ್ಟೊಂದು ಆತ್ಮೀಯತೆ ಇರಲಿಲ್ಲವಾದರೂ, ಶಾರದಾ ವಿಲಾಸಿನಲ್ಲಿ ಪಿಯುಸಿ ಓದುವಾಗ ಕಾಮರ್ಸ್ ವಿಭಾಗದ ಚಂದ್ರಮೋಹನ್ ಸರ್, ಭೂಗೋಳ ಕಲಿಸಿಕೊಟ್ಟ ಹಕ್ ಸರ್ ಹಾಗೂ ಸಂಸ್ಕೃತದ ಸಿ ಎಚ್ ಶ್ರೀನಿವಾಸಮೂರ್ತಿ ಸರ್ ಇವರುಗಳು ಪ್ರಾತಃಸ್ಮರಣೀಯರು. ಪದವಿ ತರಗತಿಯಲ್ಲಿ ವಿಶ್ವನಾಥ್ ಸರ್ ನಮ್ಮ ತಂದೆಯ ದೇಹದ ಹೆಸರಿನ ನರಹರಿ ಸರ್ ಮತ್ತು ಪ್ರಿನ್ಸಿಪಲ್ ಸುಜನ ಸರ್ ಸದಾ ನೆನಪಿನಲ್ಲಿ ಇರುತ್ತಾರೆ ನಮಗೆ ಇಂಗ್ಲಿಷ್ ಬೋಧಿಸುತ್ತಿದ್ದ ಅನುರಾಧ ಪೋಲಂಕಿ ಮೇಡಂ ಅವರ ಪಾಠಕ್ಕಿಂತಲೂ ಅವರ ಸೀರೆಯ ಅಂದ ಚಂದವನ್ನೇ ಹೆಚ್ಚು ಗಮನಿಸುತ್ತಿದ್ದೆವು ಎಂದರೆ ನಮ್ಮ ಕೋತಿ ಬುದ್ದಿ ಅರ್ಥವಾಗುತ್ತದೆ.

ಇವರೆಲ್ಲರ ನಡುವೆ ನನ್ನ ವ್ಯಕ್ತಿತ್ವ ರೂಪಿಸಲು ಕಾರಣವಾದ ಪ್ರೈಮರಿ ಶಾಲೆಯ ವಿಜಯ ಮಿಸ್ ಹಾಗೂ ಪ್ರೌಢಶಾಲೆಯ ಗೀತಾ ಮಿಸ್ ಅವರ ಬಗ್ಗೆ ಸ್ವಲ್ಪ ವಿಶೇಷವಾಗಿ ಹೇಳಲೇಬೇಕು.

ಶಿಕ್ಷಕ ಟೀಚರ್ ಎಂದೊಡನೆ ನನಗೆ ನೆನಪಾಗುವುದು ವಿಜಯ ಮಿಸ್. ಸೆಂಟ್ ಥಾಮಸ್ ಶಾಲೆಯಲ್ಲಿ ನನಗೆ ಮೂರನೆಯ ತರಗತಿಯಲ್ಲಿ ಕ್ಲಾಸ್ ಟೀಚರ್ ಆಗಿದ್ದವರು. ಒಂದು ಮತ್ತು ಎರಡನೆಯ ತರಗತಿ ಸರ್ಕಾರಿ ಶಾಲೆಯಲ್ಲಿ ಓದಿದ್ದ ನನಗೆ ಇಂಗ್ಲಿಷ್ ಎಬಿಸಿಡಿ ಬರೆಯಲು ಮಾತ್ರ ಗೊತ್ತಿತ್ತು ಹಿಂದಿ ಅಂದರೇನು ಎಂದೇ ತಿಳಿದಿರಲಿಲ್ಲ. ಚಾಮುಂಡಿಪುರಂನಿಂದ ವಿಶ್ವೇಶ್ವರ ನಗರಕ್ಕೆ ಮನೆ ಬದಲಾಯಿಸಿದ ಕಾರಣಕ್ಕೆ ಶಾಲೆಯೂ ಬದಲಾಯಿತು .. ಕನ್ನಡ ಮೀಡಿಯಂ ಆದರೂ ಕಾನ್ವೆಂಟ್ನವರದೇ ಇಂಗ್ಲಿಷ್ ಮತ್ತು ಹಿಂದಿ ಪಠ್ಯ ಪುಸ್ತಕಗಳು. “ಜಾಣ ಹುಡುಗಿ ಚುರುಕು” ಎಂದೆಲ್ಲ ಹೆಸರು ತಗೊಂಡಿದ್ದೆ. ಇಲ್ಲಿ ಕಣ್ಣು ಕಟ್ಟಿ ಕಾಡಿಗೆ ಬಿಟ್ಟ ಅನುಭವ ಸ್ವಭಾವತಃ ಮಖೇಡಿ ಬೇರೆ .ಮನೆಯಲ್ಲಿ ಅಣ್ಣ (ನಮ್ಮ ತಂದೆ) ನನಗೆ ತುಂಬಾನೇ ಸಹಕಾರ ಕೊಟ್ಟು ಹೇಳಿಕೊಟ್ಟಿದ್ದರೂ ಶಾಲೆಯಲ್ಲಿ ಒಂಥರಾ ಮುಜುಗರ . ಅಪ್ಪನ ಗೆಳೆಯರ ಮಗಳು ನಮಗೆ ದೂರದ ಸಂಬಂಧಿಯೂ ಆಗಿದ್ದ ವಿಜಯಾ ಮಿಸ್ ನಗುಮುಖ ಸ್ವಲ್ಪ ಅಪರಿಚಿತತೆ ಯನ್ನು ಹೋಗಲಾಡಿಸಿತ್ತು. ಮೊದಲ ಟೆಸ್ಟ್ ನಲ್ಲಿ ಹಿಂದಿ ಇಂಗ್ಲಿಷ್ ಜಸ್ಟ್ ಪಾಸ್. ಬೇರೆಯದರಲ್ಲೆಲ್ಲಾ ಹೆಚ್ಚು ಅಂಕ ಬಂದಿದ್ದನ್ನು ಕಂಡು ಹುರಿದುಂಬಿಸಿ ನಂತರ ಹಿಂದಿರುಗಿ ನೋಡಲೇ ಇಲ್ಲ. ನನಗೊಬ್ಬಳಿಗೇ ಅಲ್ಲ ನಮ್ಮ ಕ್ಲಾಸಿನ ಎಲ್ಲರಿಗೂ ವಿಜಯ ಮಿಸ್ ಅಂದರೆ ಪ್ರೀತಿ.

ಇಂದು ನಾನೇನಾದರೂ ಅಲ್ಪ ಸ್ವಲ್ಪ ಬರೆಯುತ್ತೇನೆಂದರೆ ಅದಕ್ಕೆ ಕಾರಣರಾದವರಲ್ಲಿ ಇವರೂ ಒಬ್ಬರು. ಶಾಲೆಯಲ್ಲಿ ಅಂದು ಕೃಷ್ಣರಾಜ ಸಾಗರದ ಬಗ್ಗೆ ಪ್ರಬಂಧ ಬರೆಯಲು ಹೇಳಿದಾಗ ಅಲ್ಲೇ ಕುಳಿತು ಬರೆದ ಪ್ರಬಂಧವನ್ನು ಮೆಚ್ಚಿ ಶಾಲೆಯ ನೋಟಿಸ್ ಬೋರ್ಡಿಗೆ ಹಾಕಿಸಿದಾಗ ನಾನು ಸೆಲೆಬ್ರಿಟಿ ಆಗಿಬಿಟ್ಟಿದ್ದೆ. ಚೆನ್ನಾಗಿ ಕಥೆ ಹೇಳುತ್ತಿದ್ದ ನನ್ನನ್ನು ಹಿರಿಯ ತರಗತಿಗಳಿಗೂ ಎರಡು ಮೂರು ತರಗತಿಗಳನ್ನು ಸೇರಿಸಿಯೂ ಕಥೆ ಹೇಳಲು ಪ್ರೋತ್ಸಾಹಿಸಿದರು. ಚರ್ಚಾಸ್ಪರ್ಧೆ ಆಶುಭಾಷಣ ಸ್ಪರ್ಧೆಗಳಿಗೆ ಪ್ರೈಮರಿ ಕ್ಲಾಸ್ ಆದರೂ ಚೆನ್ನಾಗಿ ಮಾತನಾಡುತ್ತೇನೆಂದು ಕಳುಹಿಸುತ್ತಿದ್ದರು ಈಗ ಸಭಾ ಕಂಪನವಿರದೆ ಮಾತನಾಡಲು ಅಂದಿನ ದಿನಗಳ ಅವರ ತರಬೇತಿಯೇ ಬುನಾದಿ.

ಮತ್ತೊಮ್ಮೆ ಅನಿವಾರ್ಯವಾಗಿ ಅಮ್ಮಾ ಅಣ್ಣ ಊರಿಗೆ ಹೋಗಬೇಕಿತ್ತು. ಅರ್ಧವಾರ್ಷಿಕ ಪರೀಕ್ಷೆ ತಪ್ಪಿಸಬಾರದು ಎಂದು ಮೂರು ದಿನ ತಮ್ಮ ಮನೆಯಲ್ಲೇ ಇಟ್ಟುಕೊಂಡು ಸಲುಹಿದರು. ಅದೇ ಸಮಯ ನನ್ನ ಟಾನ್ಸಿಲ್ಸ್ ವಿಕೋಪಕ್ಕೆ ತಿರುಗಿದ್ದಾಗ ಡಾಕ್ಟರ ಬಳಿ ಕರೆದೊಯ್ದದ್ದು ಮಿಸ್ ನ ತಂಗಿ ಗೌರಿ .ಅಮ್ಮ ಊರಿಂದ ಹಿಂದಿರುಗಿದ ತಕ್ಷಣ ಟಾನ್ಸಿಲ್ಸ್ ಶಸ್ತ್ರಚಿಕಿತ್ಸೆ ನಡೆದಿತ್ತು. ಅಮ್ಮನಿಗೆ ಆಸ್ಪತ್ರೆ ಓಡಾಟಕ್ಕೆ ಸಹಕಾರವಿತ್ತಿಧ್ಧರು ಮಿಸ್.

ಇದೆಲ್ಲದರ ಮಹತ್ವ ಪೂರ್ತಿ ಅರ್ಥವಾಗುವ ವಯಸ್ಸಲ್ಲ ಅದು. ಈಗ ಯೋಚಿಸಿದಾಗ ಅನ್ನಿಸುತ್ತದೆ ಹೊಸ ಪರಿಸರ ಕಷ್ಟದ ವಿಷಯಗಳು ಏಕೋ ಸ್ವಲ್ಪ ಕುಗ್ಗಿಸಿದ್ದವು. ಪ್ರಬಂಧಕ್ಕೆ ಸಿಕ್ಕ ಪ್ರೋತ್ಸಾಹ ಉಳಿದೆಲ್ಲಕೆ ಆ ಮಟ್ಟದ ಬೆಂಬಲ ವಿಜಯ ಮಿಸ್ ನೀಡದೆ ಇದ್ದಿದ್ದರೆ ಬಹುಶಃ ಕೀಳರಿಮೆಯಿಂದ ಪೂರಾ ಕುಗ್ಗಿ ಹೋಗುತ್ತಿದ್ದೆನೇನೋ. ಅದಕ್ಕಾಗಿ ನಾನು ನಿಮಗೆ ತುಂಬಾ ತುಂಬಾ ಋಣಿ ಮಿಸ್.

ನಾಲ್ಕನೆಯ ತರಗತಿಗೆ ಬರುವ ವೇಳೆಗೆ ಅವರು ಮದುವೆಯಾಗಿ ಶಾಲೆ ಬಿಟ್ಟ ಮೇಲೆ ಅವರ ಪೋಷಕರು ಮೈಸೂರು ಬಿಟ್ಟಿದ್ದು ಅವರ ಸಂಪರ್ಕವೇ ಇರಲಿಲ್ಲ. ಈಗ ಒಂದು ತಿಂಗಳ ಹಿಂದೆ ಮುಖಪುಸ್ತಕದಲ್ಲಿ ಅವರಿಂದಲೇ ಸ್ನೇಹ ಕೋರಿಕೆ ಬಂದಾಗ ನನ್ನ ಖುಷಿ ಹೇಳತೀರದು . ಅಲ್ಲಿಯೇ ಫೋನ್ ನಂಬರ್ ಸಹ ಸಿಕ್ಕಿ ಈಗ ನಾವು ನಿರಂತರ ಸಂಪರ್ಕದಲ್ಲಿದ್ದೇವೆ. ಧನ್ಯವಾದಗಳು ಧನ್ಯವಾದಗಳು ಧನ್ಯವಾದಗಳು ವಿಜಯಾ ಮಿಸ್.

ಜೀವನವೆಂಬ ಪಯಣದಲ್ಲಿ ಎಷ್ಟೋ ವ್ಯಕ್ತಿಗಳ ಪರಿಚಯ ಆಗುತ್ತಿರುತ್ತದೆ .ಕೆಲವರು ತುಂಬಾ ಪ್ರಭಾವ ಬೀರುತ್ತಾರೆ. ಸದಾ ನೆನಪಿನಲ್ಲಿ ಉಳಿಯುತ್ತಾರೆ .ಅವರ ನೆನಪಾದಾಗಲೆಲ್ಲ ಒಂದು ಸುಂದರ ಅನುಭೂತಿ ಮೂಡುತ್ತಿರುತ್ತದೆ. ಅಂತಹವರಲ್ಲಿ ಒಬ್ಬರು ನನ್ನ ಪ್ರೌಢ ಶಾಲೆಯ ಅಧ್ಯಾಪಕಿ ಗೀತಾ ಪ್ರಭು ಮೇಡಂ .ಎಂಎಸ್ಸಿ ಎಂಎಡ್ ಮಾಡಿ ಕಾಲೇಜ್ ಲೆಕ್ಚರರ್ ಆಗಬಹುದಿತ್ತಾದರೂ “ಹದಿಹರೆಯದ ಮಕ್ಕಳ ಒಡನಾಟ ನನಗೆ ಪ್ರಿಯ ಎಂದು ಪ್ರೌಢಶಾಲಾ ಅಧ್ಯಾಪಕಿ೮ಲಯಾಗಿ ಬಂದಿರುವುದು” ಎಂದು ಅವರೇ ಒಮ್ಮೆ ಹೇಳಿದ್ದು .ನಮ್ಮ ಅದೃಷ್ಟಕ್ಕೆ ಅವರೇ ನಮ್ಮ ಕ್ಲಾಸ್ ಟೀಚರ್. ಮೊದಲನೆಯ ವರ್ಷ ಯಾರು ಕ್ಲಾಸ್ ಟೀಚರ್ ಆಗುತ್ತಾರೆ ಉಳಿದೆರಡು ವರ್ಷಕ್ಕೂ ಅವರೇ ಮುಂದುವರಿಯುತ್ತಾರೆ .ಹಾಗಾಗಿ ಮೂರು ವರ್ಷಕ್ಕೂ ಅವರ ಒಡನಾಟದ ಸೌಭಾಗ್ಯ ನಮಗೆ. ಕ್ಲಾಸ್ ಲೀಡರ್ ಆಗಿದ್ದ ನನಗೆ ಇನ್ನೂ ಸ್ವಲ್ಪ ಜಾಸ್ತಿಯೇ.

ಕನ್ನಡ ಮೀಡಿಯಂನಿಂದ ಆಗತಾನೆ ಇಂಗ್ಲಿಷ್ ಮೀಡಿಯಂಗೆ ಹೈಸ್ಕೂಲಿನಲ್ಲಿ ಸೇರಿದ್ದ ನಮಗೆ ಎಲ್ಲವನ್ನು ಇಂಗ್ಲಿಷಿನಲ್ಲಿ ಹೇಳಿದರೆ ಅರ್ಥವಾಗುವುದು ಕಷ್ಟವಾಗುವುದೆಂದು ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಮೊದಲ ಕೆಲವು ತಿಂಗಳು ಪಾಠ ಮಾಡಿದರು ಅದು ಎಲ್ಲರಿಗೂ ಜೀವ ಬಂದಂತೆ ಆಗಿತ್ತು. ವಿಜ್ಞಾನದ ಟೀಚರ್ ಆಗಿದ್ದ ಅವರು ವಿಜ್ಞಾನದೊಂದಿಗೆ ಇಂಗ್ಲಿಷನ್ನು ಕಲಿಸಿ ಕನ್ನಡ ಮೀಡಿಯಂನಿಂದ ಬಂದಿದ್ದವರಿಗೆಲ್ಲ ಆತ್ಮವಿಶ್ವಾಸ ತುಂಬಿದವರು.

ಶಾಲೆಯಲ್ಲಿ ಗ್ರಂಥಾಲಯ ಚಟುವಟಿಕೆಗಳು ಎಲ್ಲರಿಗೂ ಆಪ್ತವೆನಿಸುವಂತೆ ಮಾಡಿ ಯಾವ ಯಾವ ಪುಸ್ತಕ ಓದಬೇಕು ಎಂಬ ತಿಳಿವು ಮೂಡಿಸಿದವರು ಅವರು . ಇಂಗ್ಲಿಷ್ ಪುಸ್ತಕಗಳನ್ನು ಅದುವರೆಗೂ ಓದಿಯೇ ಇರದಿದ್ದ ನಾನು ಅವರ ಸಲಹೆಯಂತೆ ಎಷ್ಟೋ ಇಂಗ್ಲೀಷ್ ಪುಸ್ತಕಗಳನ್ನು ಓದಿದ ನೆನಪು.

ವಿಜ್ಞಾನ ಕ್ಲಬ್ ಸಾಂಸ್ಕೃತಿಕ ಕ್ಲಬ್ ಇವೆಲ್ಲದರಲ್ಲೂ ಸಕ್ರಿಯ ಪಾತ್ರ ವಹಿಸಿ ನಮ್ಮನ್ನು ಆ ನಿಟ್ಟಿನಲ್ಲಿ ಮುನ್ನಡೆಸಿದವರು. ಶಾಲೆಯ ವಿಜ್ಞಾನ ಕ್ಲಬ್ ಗೆ ಪ್ರೆಸಿಡೆಂಟ್ ಮಾಡಿ 3ವರ್ಷವೂ ವಿಜ್ಞಾನ ವಸ್ತು ಪ್ರದರ್ಶನ ಮಾಡಿಸಿ ನಮ್ಮ ಕೈಯಲ್ಲಿ ಹಲವಾರು ಪ್ರಾಜೆಕ್ಟ್ ಗಳನ್ನು ಮಾಡಿಸಿ ಅಲ್ಲಿ ಪ್ರದರ್ಶನಕ್ಕೆ ಇಡಿಸಿದರು. ಅಂದಿನ ಕಾಲಕ್ಕೆ ಅದು ಹೊಸ ಟ್ರೆಂಡ್ ಆಗಿತ್ತು . ಹೀಗೆ ನಮ್ಮ ಶಾಲೆ ಹಲವಾರು ವಿಧದಲ್ಲಿ ಗುರುತಿಸಿಕೊಳ್ಳಲು ಸಹ ಅದು ನೆರವಾಯಿತು ಎಂದರೆ ಅತಿಶಯೋಕ್ತಿಯಲ್ಲ.

ಇನ್ನೂ ಅದೇ ಸಮಯದಲ್ಲಿ ಅಂತಾರಾಷ್ಟ್ರೀಯ ಮಕ್ಕಳ ವರ್ಷವೂ ಬಂದದ್ದರಿಂದ ಹಾಗೂ ಶಾರದಾ ವಿಲಾಸ್ ಸಂಸ್ಥೆಗಳ ಸುವರ್ಣಮಹೋತ್ಸವವು ಬಂದಿದ್ದರಿಂದ ಆ ಸಮಯದ ಎಲ್ಲಾ ಸಾಂಸ್ಕೃತಿಕ ಚಟುವಟಿಕೆಗಳಿಗೆ ಮೂಲ ಸ್ಫೂರ್ತಿ ಅವರೇ. ಅವರ ಪ್ರೋತ್ಸಾಹದಿಂದಲೇ ಜೀವನದಲ್ಲಿ ಮೊಟ್ಟಮೊದಲ ಬಾರಿಗೆ (ಸದ್ಯಕ್ಕೆ ಕಟ್ಟಕಡೆಯದೂ ಅದೇ) ಪದ್ಮಿನಿ ನಾಟಕದಲ್ಲಿ ಅಲ್ಲಾವುದ್ದೀನ್ ಪಾತ್ರ ವಹಿಸಿದ್ದು ಮನಸ್ಸಿನಲ್ಲಿ ಇನ್ನೂ ಮಾಸದ ನೆನಪು.

ಎಲ್ಲಕ್ಕಿಂತ ಮುಖ್ಯವಾಗಿ ಹದಿವಯಸ್ಸಿನ ಹೆಣ್ಣು ಮಕ್ಕಳಿಗೆ ಕೌನ್ಸೆಲಿಂಗ್ ಮಾಡಿ ಆ ವಯಸ್ಸಿನಲ್ಲಾಗುವ ಬದಲಾವಣೆಗಳ ಬಗ್ಗೆ ಧೈರ್ಯ ತುಂಬುತ್ತಿದ್ದರು. ಬಿಡುವಿರುವ ಪಿರಿಯಡ್ ಗಳಲ್ಲಿ ಒಳ್ಳೆಯ ಪುಸ್ತಕಗಳು ಸಿನಿಮಾಗಳ ಕಥೆ ಹೇಳುತ್ತಿದ್ದರು. ಅವರು ಹೇಳಿದ ಸೌಂಡ್ ಆಫ್ ಮ್ಯೂಸಿಕ್ ಚಿತ್ರದ ಕಥೆ ಮನಸ್ಸಿನಲ್ಲಿ ಗಾಢವಾಗಿ ಅಚ್ಚಳಿಯದ ಪ್ರಭಾವ ಮೂಡಿಸಿದೆ. ಡ್ರೆಸ್ ಬಗ್ಗೆ ಟಿಪ್ಸ್ ಬ್ಯೂಟಿ ಟಿಪ್ಸ್ ಕೊಡುತ್ತಿದ್ದರು. ಒಟ್ಟಿನಲ್ಲಿ all in all.

ಎಲ್ಲ ವಿದ್ಯಾರ್ಥಿಗಳಿಗೂ ಮೆಚ್ಚಿನ ನನ್ನ ಗೀತಾ ಮಿಸ್ ಇದ್ದಿದ್ದು ಎಲ್ಲಿ ಅಂತೀರಾ ?ಮೈಸೂರಿನ ಶಾರದಾ ವಿಲಾಸ್ ಬಾಲಿಕಾ ಪ್ರೌಢ ಶಾಲೆಯಲ್ಲಿ. ನಮಗೆಲ್ಲ ಅವರು ಟೀಚರ್ ಎನ್ನುವುದಕ್ಕಿಂತ ಹಿರಿಯಕ್ಕ ಅಥವಾ ಹಿರಿಯ ಸ್ನೇಹಿತೆ ಆಗಿದ್ದರು. ತಿಳಿಯದ ಆ ವಯಸ್ಸಲ್ಲಿ ಪ್ರೀತಿಗೆ ಬಿದ್ದವರಿಗೆ ಬುದ್ಧಿ ಹೇಳಿ ತಿದ್ದಿದ್ದರು ಎಂಬುದು ಆಮೇಲೆ ತಿಳಿದ ಮಾತು.

ಈಗಲೂ ಅವರೊಂದಿಗೆ ನನ್ನ ಸಂಪರ್ಕ ಇದೆ. ಆಗಿನಂತೆ ಅದೇ ಪ್ರೀತಿಯಿಂದ ಸುಜಾ ಎಂದು ಚಿಕ್ಕಮಗುವಿನಂತೆ ನನ್ನನ್ನು ಮಾತನಾಡಿಸುವ ನಮ್ಮ ಮಿಸ್ ಮಗನ ಮದುವೆಗೆ ಇತ್ತೀಚೆಗೆ ನಾನೂ ಹೋಗಿದ್ದೆ ಎಂಬ ಖುಷಿ ನನಗೆ.

ಇಂತಾ ನಮ್ಮ ಗೀತಾ ಮಿಸ್ಗೆ ಚೆನ್ನಾಗಿ ಒಪ್ಪುವ ಹಾಡು ಇದು.

ಬಾಳ ಒಳ್ಳೇವ್ರು ನಮ್ಮಿಸ್ಸು
ಏನ್ ಕೇಳಿದ್ರೂ ಎಸ್ಸೆಸ್ಸು.

ಕಾಲ ನದಿಯ ಪ್ರವಾಹ ಎಷ್ಟೇ ಹರಿದರೂ ಕೆಲವು ನೆನಪುಗಳು ಸವೆಯುವುದಿಲ್ಲ . ಪ್ರವಾಹದ ಹರಿವಿನೊಂದಿಗೆ ಮತ್ತಷ್ಟು ಹೊಸ ಹೊಸ ಮೆಲುಕಿನ ಮಡಿಕೆಗಳನ್ನು ಮೂಡಿಸಿರುತ್ತದೆ. ಅಂತಹವುಗಳಲ್ಲಿ ಒಂದು ಈ ನಮ್ಮ ಗೀತಾ ಮಿಸ್ ನೆನಪು .


  • ಸುಜಾತಾ ರವೀಶ್ – ಮೈಸೂರು

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW