‘ಸಲೀಂ ಅಲಿಯವರು ದಶಕಗಳ ಕಾಲ ನಡೆಸಿದ ಪಕ್ಷಿವೀಕ್ಷಣೆ, ಅಧ್ಯಯನ, ಅವರ ಒಳನೋಟ ಎಲ್ಲವೂ ಮುಪ್ಪುರಿಗೊಂಡು, ಬಾನಲ್ಲಿ ಹಾರುವ ಖಗಗಳನ್ನು ಅವರು ಪರಿಚಯಿಸಿರುವ ಪರಿಯಲ್ಲಿ ರಸಪಾಕ ತುಂಬಿದಂತೆ ಅನಿಸುತ್ತದೆ. ಅವರು ನೀಡಿದ ಪಕ್ಷಿಗಳ ವಿವರಣೆಯಂತೂ ಪರಿಪೂರ್ಣ. ಸರಳ ಮತ್ತು ಆಕರ್ಷಕ ಇಂಗ್ಲಿಷ್‍ನಲ್ಲಿ ಸಲೀಂ ಅಲಿಯವರು ಬರೆದಿರುವ ಪಕ್ಷಿಗಳ ವಿವರವನ್ನು ಓದುವುದೇ ಒಂದು ವಿಶೇಷ ಆಪ್ತ ಅನುಭವ’ – ಪೂರ್ಣಚಂದ್ರ ತೇಜಸ್ವಿ
ಪಕ್ಷಿ ವೀಕ್ಷಣೆಯ ನನ್ನ ಹವ್ಯಾಸವನ್ನು ಮೊತ್ತ ಮೊದಲಿಗೆ ಟೀಕಿಸಿದವರು ನಮ್ಮಪ್ಪ. `ಹಕ್ಕಿಗಳನ್ನು ನೋಡುವುದೂ ಒಂದು ಹವ್ಯಾಸವೆ? ಅದು ನಮ್ಮಂತಹವರಿಗೆ ಆಗುವಂತಹದಲ್ಲ. ಅದು ಶ್ರೀಮಂತರ ಹವ್ಯಾಸ ಕಣೋ’ ಎಂದು ತುಸು ಎಚ್ಚರಿಕೆಯ ಧ್ವನಿಯಲ್ಲಿ ಹೇಳಿದ್ದರು. ಅವರ ಎಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸುವ ವಯಸ್ಸಾಗಿರಲಿಲ್ಲ, ಅದು. ಆಗ ತಾನೆ ಕಾಲೇಜಿಗೆ ಸೇರಿದ್ದೆ. ಹಳ್ಳಿಯನ್ನು ತೊರೆದು, ತಾಲೂಕು ಕೇಂದ್ರದಲ್ಲಿ ವಾಸ. ನನ್ನ ರೀತಿಯೇ ಹಳ್ಳಿಯಿಂದ ಪಟ್ಟಣಕ್ಕೆ ಬಂದಿದ್ದ ನಾವು ನಾಲ್ವರು ಸೇರಿ ರೂಮು ಮಾಡಿದ್ದೆವು. ಮನೆಯ ಶಿಸ್ತಿನ ಬೇಲಿ ಇಲ್ಲದ ಜೀವನವನ್ನು ಮೊದಲ ಬಾರಿ ಅನುಭವಿಸುತ್ತಿದ್ದೆವು. ಅಂಕೆಯಿಲ್ಲದೆ ದಿನಚರಿಯನ್ನು ರೂಢಿಸಿಕೊಳ್ಳುವ ಅವಕಾಶ. ಅಂತಹ ಸ್ವಾತಂತ್ರ್ಯವೇ ಹಲವು ಯುವಜೀವಿಗಳ ನಿರ್ಣಾಯಕ ಘಟ್ಟ. ಹಳ್ಳಿಯಿಂದ ಪಟ್ಟಣಕ್ಕೆ ಬಂದು, ಅಲ್ಲಿನ ಬೆರಗುಗಳನ್ನು ಮೊದಲ ಬಾರಿ ಕಂಡಾಗ ಸುಲಭವಾಗಿ ದಾರಿ ತಪ್ಪುವ ಅವಕಾಶ. ಆದರೆ ನಮ್ಮ ರೂಮಿನ ನಾವು ನಾಲ್ವರು ಒಂದು ಮಿತಿ ಹಾಕಿಕೊಂಡು, ಒಮ್ಮೆಗೇ ದೊರೆತಿದ್ದ ಸ್ವಾತಂತ್ರ್ಯವನ್ನು ಇಷ್ಟಿಷ್ಟೇ ಉಪಯೋಗಿಸುವಷ್ಟು ವಿವೇಕ ರೂಢಿಸಿಕೊಂಡೆವು. ಪಕ್ಕಾ ಗ್ರಾಮೀಣ ಹಿನ್ನೆಲೆಯಿಂದ ಬಂದಿದ್ದ ನಮಗೆ ವಿವಿಧ ರೀತಿಯ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ಆರ್ಥಿಕ ಸ್ವಾತಂತ್ರ್ಯವೂ ಇರಲಿಲ್ಲವೆನ್ನಿ.

ಫೋಟೋ ಕೃಪೆ : stellabooks
ನಮ್ಮ ತಾಲೂಕು ಕೇಂದ್ರದಲ್ಲಿ ಎಡ್ವರ್ಡ್ ಮೆಮೋರಿಯಲ್ ಲೈಬ್ರರಿ ಎಂದು ಫಲಕ ತಗುಲಿಸಿಕೊಂಡಿದ್ದ ಒಳ್ಳೆಯ ಒಂದು ಗ್ರಂಥಾಲಯವಿತ್ತು. ಅದು ಸರಕಾರ ನಡೆಸುತ್ತಿದ್ದ ಉಚಿತ ವಾಚನಾಲಯ. ಸ್ವಾತಂತ್ರ್ಯ ದೊರೆತು ಮೂರು ದಶಕಗಳು ಕಳೆದಿದ್ದರೂ, ಇಂಗ್ಲೆಂಡಿನ ದೊರೆಯ ಹೆಸರನ್ನು ಇನ್ನೂ ಹೊತ್ತಿದ್ದ ಆ ಹಳೆಯ ಕಟ್ಟಡದಲ್ಲಿ, ಕನ್ನಡ, ಇಂಗ್ಲಿಷ್ ಪುಸ್ತಕಗಳ ದೊಡ್ಡದಾದ ಸಂಗ್ರಹವಿತ್ತು. ಅಲ್ಲಿ ನನ್ನ ಕಣ್ಣಿಗೆ ಬಿದ್ದದ್ದು ಸಲೀಂ ಅಲಿಯವರು ರಚಿಸಿದ್ದ `ಬುಕ್ ಆಫ್ ಇಂಡಿಯನ್ ಬರ್ಡ್ಸ್’. ಆ ಇಂಗ್ಲಿಷ್ ಪುಸ್ತಕವನ್ನು ಕೈಲಿ ಹಿಡಿದು, ಅಲ್ಲಿನ ವರ್ಣ ಚಿತ್ರಗಳ ಸೊಗಸನ್ನು ಕಂಡ ತಡ, ನನ್ನ ಮನ ಹಕ್ಕಿಗಳಿಗೆ ಮಾರುಹೋಯಿತು. ನಮ್ಮ ದೇಶದಲ್ಲಿ ಸಾಮಾನ್ಯವಾಗಿ ಕಂಡುಬರುವ ಸುಮಾರು ೧೫೦ ಹಕ್ಕಿಗಳ ಪರಿಚಯವನ್ನು ಅದರಲ್ಲಿ ನೀಡಿದ ಪರಿ ಅನನ್ಯ, ವಿಶಿಷ್ಟ. ೧೯೪೧ ರಲ್ಲಿ ಮೊದಲ ಬಾರಿ ಮುದ್ರಣಗೊಂಡು, ಇಂದಿಗೂ ಮರುಮುದ್ರಣಗೊಳ್ಳುತ್ತಿರುವ ಈ ಪುಸ್ತಕದಲ್ಲಿ ನೀಡಿರುವ ಹಕ್ಕಿಗಳ ವಿವರಣೆ, ಪ್ರತಿ ನಾಲ್ಕು ಪುಟಗಳ ಮುದ್ರಿತ ಮಾಹಿತಿಯಾದ ಕೂಡಲೆ, ಎರಡು ಪುಟಗಳ ವರ್ಣ ಚಿತ್ರಗಳಲ್ಲಿ ಹಕ್ಕಿಗಳ ಚಿತ್ರಣ ಇವೆಲ್ಲವೂ ಮನೆಸೆಳೆಯುವ ರೀತಿಯಲ್ಲಿವೆ. ಪಕ್ಷಿವೀಕ್ಷಣೆಯನ್ನು ಹೊಸದಾಗಿ ಆರಂಭಿಸಿರುವವರಿಗೆ ಇದು ಪರಿಪೂರ್ಣ ಮಾರ್ಗದರ್ಶಿ ಎನಿಸಿದರೆ, ಅನುಭವಿ ಪಕ್ಷಿ ವೀಕ್ಷಕರಿಗೆ ಇಲ್ಲಿನ ವಿವರಗಳು ಸದಾ ಹಸಿರು. ಸಲೀಂ ಅಲಿಯವರು ದಶಕಗಳ ಕಾಲ ನಡೆಸಿದ ಪಕ್ಷಿವೀಕ್ಷಣೆ, ಅಧ್ಯಯನ, ಅವರ ಒಳನೋಟ ಎಲ್ಲವೂ ಮುಪ್ಪುರಿಗೊಂಡು, ಬಾನಲ್ಲಿ ಹಾರುವ ಖಗಗಳನ್ನು ಅವರು ಪರಿಚಯಿಸಿರುವ ಪರಿಯಲ್ಲಿ ರಸಪಾಕ ತುಂಬಿದಂತೆ ಅನಿಸುತ್ತದೆ. ಅವರು ನೀಡಿದ ಪಕ್ಷಿಗಳ ವಿವರಣೆಯಂತೂ ಪರಿಪೂರ್ಣ. ಸರಳ ಮತ್ತು ಆಕರ್ಷಕ ಇಂಗ್ಲಿಷ್‍ನಲ್ಲಿ ಸಲೀಂ ಅಲಿಯವರು ಬರೆದಿರುವ ಪಕ್ಷಿಗಳ ವಿವರವನ್ನು ಓದುವುದೇ ಒಂದು ವಿಶೇಷ ಆಪ್ತ ಅನುಭವ.

ಪಕ್ಷಿವೀಕ್ಷಣೆಯು ಶ್ರೀಮಂತರ ಹವ್ಯಾಸ ಎಂದು ನಮ್ಮಪ್ಪ ನನ್ನನ್ನು ಎಚ್ಚರಿಸಿದ್ದರಲ್ಲಿ ತುಸು ಅರ್ಥವೂ ಇದೆ. ಮಾಡುವ ಕೆಲಸವನ್ನು ಬಿಟ್ಟು, ಕುತ್ತಿಗೆಗೊಂದು ಬೈನಾಕ್ಯುಲರ್ ಸಿಕ್ಕಿಸಿಕೊಂಡು, ಕಾಡು ಗುಡ್ಡಗಳಲ್ಲೋ, ನದಿ ಕಿನಾರೆಯಲ್ಲೋ, ಉದ್ಯಾನವನದಲ್ಲೋ ಸುತ್ತುತ್ತಾ, ಅಲ್ಲಿ ಕಾಣಿಸುವ ಹಕ್ಕಿಗಳನ್ನು ನೋಡುತ್ತಾ ಕೂರುವುದು, ಅವುಗಳ ಬಣ್ಣ, ಆಕಾರ, ಕೊಕ್ಕಿನ ಗಾತ್ರ, ಅವು ಕೂಗುವ ರೀತಿಯನ್ನು ಗಮನಿಸಿ, ನೋಟ್‍ಬುಕ್‍ನಲ್ಲಿ ಗುರುತು ಹಾಕಿಕೊಳ್ಳುವುದು ಎಲ್ಲವೂ ಶ್ರೀಮಂತ ಮಕ್ಕಳಿಗೆ ಮಾತ್ರ ಸಾಧ್ಯ ಎಂಬ ಅರ್ಥ ನಮ್ಮಪ್ಪನ ಅಭಿಪ್ರಾಯದ ಹಿಂದೆ ಇತ್ತು. ಒಂದು ಮಟ್ಟಕ್ಕೆ ಅದು ನಿಜವೂ ಹೌದು. ಪ್ರತಿದಿನ ಕೆಲಸ ಮಾಡುವವರಿಗೆ, ಆಯಾ ದಿನದ ಗಳಿಕೆಯಿಂದಲೇ ಕುಟುಂಬ ನಿರ್ವಹಣೆ ಮಾಡಬೇಕಾದ ಅನಿವಾರ್ಯತೆ ಇರುವವರಿಗೆ, ಹಕ್ಕಿಗಳ ಬಣ್ಣ ನೋಡುತ್ತಾ ಕೂರಲು ಸಾಧ್ಯವೆ? ಒಂದು ಹಂತದ ಆಶ್ರಯ, ಜೀವನ ಭದ್ರತೆ ದೊರೆತವರಿಗೆ ಮಾತ್ರ ಪಕ್ಷಿವೀಕ್ಷಣೆ ಸಾಧ್ಯ ಎಂಬುದು ಹಿಂದಿನ ತಲೆಮಾರಿನವರ ಅನಿಸಿಕೆ. ಇದನ್ನು ಪೂರ್ತಿ ತಳ್ಳಿ ಹಾಕುವಂತೆಯೂ ಇಲ್ಲ.

ಫೋಟೋ ಕೃಪೆ : exoticindiaart
ಇದಕ್ಕೆ ಸಲೀಂ ಅಲಿಯವರು ಸಾಂದರ್ಭಿಕವಾಗಿ ಉತ್ತರಿಸಿದ್ದಾರೆ. ಬೇರೆ ಬೇರೆ ರೀತಿಯಲ್ಲಿ ಸಮಯ ಹಾಳುಮಾಡುವ ಹವ್ಯಾಸಗಳಲ್ಲಿ ಸಿಲುಕುವ ಬದಲು, ಆರೋಗ್ಯ ಹಾಳುಗೆಡಹುವ ಚಟಗಳಲ್ಲಿ ಸಿಕ್ಕಿಬೀಳುವ ಬದಲು, ಪಕ್ಷಿವೀಕ್ಷಣೆಯಂತಹ ಪರಿಸರ ಸಂಬಂಧಿ ಹವ್ಯಾಸ ಬೆಳೆಸಿಕೊಳ್ಳಿ, ಅದರಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ಉತ್ತಮಗೊಳ್ಳುತ್ತದೆ, ಪರಿಸರದ ಕುರಿತು ಆಸಕ್ತಿಯೂ ಬೆಳೆಯುತ್ತದೆ ಎಂದು ಅವರು ಹೇಳಿದ್ದರು. ಪಕ್ಷಿವೀಕ್ಷಣೆಯನ್ನು ಅವರು ಕೈಗೆತ್ತಿಕೊಂಡ ಹಿನ್ನೆಲೆಯೂ ಸ್ವಾರಸ್ಯಕರ. ಅಂದಿನ ದಿನಗಳಲ್ಲಿ ಅವರದು ಸಾಕಷ್ಟು ಸ್ಥಿತಿವಂತ ಕುಟುಂಬ. ಮೋಜಿಗಾಗಿ ಏರ್‍ಗನ್ ಬಳಸಿ ಹಕ್ಕಿಗಳನ್ನು ಬೇಟೆಯಾಡುವ ಹವ್ಯಾಸವು ಆ ಕುಟುಂಬದ ಮಕ್ಕಳ ಪಾಸ್‍ಟೈಮ್. ಆ ರೀತಿ ಸಾಯಿಸಿದ ಹಕ್ಕಿ ಯಾವುದು ಎಂದು ಗುರುತಿಸಲು ಬಾಲಕ ಸಲೀಂ ನಡೆಸಿದ ಪ್ರಯತ್ನವೇ ಅವರನ್ನು ಮುಂದೊಂದು ದಿನ ಭಾರತದ ಮಹಾನ್ ಪಕ್ಷಿಶಾಸ್ತ್ರಜ್ಞರನ್ನಾಗಿ ರೂಪಿಸಿತು. ಏರ್‍ಗನ್ ಬಳಸಿ ಸಾಯಿಸಿದ ಗುಬ್ಬಿಯನ್ನು ಮುಂಬಯಿಯ `ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿ’ಗೆ ಕೊಂಡೊಯ್ದಾಗ, ಆ ಗುಬ್ಬಿಯ ವಿವರ ತಿಳಿಯುವುದರ ಜತೆ, ಪಕ್ಷಿವೀಕ್ಷಣೆಯ ಹುಚ್ಚು ಸಹ ಸಲೀಂ ಆಲಿಯವರಿಗೆ ಅಂಟಿಕೊಂಡಿತು. ಮೋಟರ್ ಬೈಕ್‍ನಲ್ಲಿ ಖಂಡಾಂತರ ಸುತ್ತುವ ಹವ್ಯಾಸ ಹೊಂದಿದ್ದ ಯುವಕ ಸಲೀಂ ಅಲಿ, ಆ ನಿಟ್ಟಿನಲ್ಲಿ ಒಂದು ರೀತಿಯ ಶೋಕಿಲಾಲ. ಆದರೆ, ಆ ಹುಚ್ಚು ಸಾಹಸವನ್ನೇ ಬಂಡವಾಳ ಮಾಡಿಕೊಂಡು, ಭಾರತದೆಲ್ಲೆಡೆ ಹಕ್ಕಿಗಳನ್ನು ಗುರುತಿಸಿ ದಾಖಲಿಸುವ ಕೆಲಸವನ್ನೂ ಸಲೀಂ ಅಲಿ ಕೈಗೊಂಡರು. ಒಂದರ ಹಿಂದೆ ಒಂದು ಪುಸ್ತಕ ಬರೆಯುವ ಮೂಲಕ ನಮ್ಮ ದೇಶದ ಹಕ್ಕಿಗಳ ಜ್ಞಾನಕೋಶಗಳನ್ನೇ ರಚಿಸಿದ ಹಿರಿಮೆ ಅವರದು. ಸಂಬಳ ತರುವ ಉದ್ಯೋಗಕ್ಕೆ ಸೇರಿಕೊಳ್ಳದೇ ಇದ್ದ ಅವರು, ಸ್ವತಂತ್ರ ಪೂರ್ವ ಭಾರತದ ವಿವಿಧ ರಾಜರುಗಳನ್ನು ಸಂಪರ್ಕಿಸಿ, ಅವರ ಪ್ರಾಯೋಜಕತ್ವದಲ್ಲಿ ಆಯಾ ಪ್ರದೇಶಗಳ ಹಕ್ಕಿಗಳ ಸಮಗ್ರ ಅಧ್ಯಯನ ನಡೆಸಿದರು. ಅವರು ರಚಿಸಿದ ಬರ್ಡ್ಸ್ ಆಫ್ ಸಿಕ್ಕಿಂ, ಬರ್ಡ್ಸ್ ಆಫ್ ಟ್ರಾವಾಂಕೋರ್ ಅಂಡ್ ಕೊಚಿನ್ ಮೊದಲಾದ ಪುಸ್ತಕಗಳ ರಚನೆಗೆ, ಮಾರಾಟಕ್ಕೆ ಆಯಾ ರಾಜ್ಯಗಳು ಮುಕ್ತವಾಗಿ ಸಹಾಯ ಮಾಡಿದವು.

ಫೋಟೋ ಕೃಪೆ : goodreads
ಕರ್ನಾಟಕದಲ್ಲಿ ಪಕ್ಷಿವೀಕ್ಷಣೆಗೆ ದೊಡ್ಡ ಮಟ್ಟದ ಉತ್ತೇಜನ ನೀಡುವಂತಹ ಕೆಲಸ ಮಾಡಿದವರಲ್ಲಿ ಪೂರ್ಣಚಂದ್ರ ತೇಜಸ್ವಿಯವರದು ಪ್ರಮುಖ ಹೆಸರು. ಆ ಮುಂಚೆ ಪಕ್ಷಿ ಪುಸ್ತಕಗಳ ಕನ್ನಡ ಅನುವಾದಗಳು ಅಲ್ಲಲ್ಲಿ ಪ್ರಕಟಗೊಂಡದ್ದುಂಟು. ಆದರೆ ಅವು ಜನಸಾಮಾನ್ಯರ ಮನ ತಟ್ಟುವಲ್ಲಿ ಯಶಸ್ವಿಯಾಗಲಿಲ್ಲ, ಅವು ಪಠ್ಯಪುಸ್ತಕದ ಶುಷ್ಕ ಭಾಷೆಯಲ್ಲಿ ಹೊರಬಂದಿದ್ದವು. ಮೈಸೂರು ವಿಶ್ವವಿದ್ಯಾಲಯ ಪ್ರಕಟಿಸಿದ, ಎಚ್. ಆರ್. ಕೃಷ್ಣಮೂರ್ತಿಯವರ `ನಮ್ಮ ಹಕ್ಕಿಗಳು’ ಪುಸ್ತಕವು ಸುಲಲಿತವಾಗಿ ಹಕ್ಕಿಗಳ ಪರಿಚಯ, ಪಕ್ಷಿವೀಕ್ಷಣೆಯ ಪರಿಚಯವನ್ನು ಮಾಡಿಕೊಡುವಲ್ಲಿ ತುಸು ಸಫಲವಾಯಿತೆಂದೇ ಹೇಳಬಹುದು. ಆದರೆ, ತೇಜಸ್ವಿಯವರು ಕೈಗೊಂಡ ಪಕ್ಷಿವೀಕ್ಷಣೆಯ ವ್ಯಾಪ್ತಿ, ವಿಸ್ತಾರ, ಆಳ, ಹರವು ಬೇರೆಯೇ ಮಹಲಿನದು. ಮೈಸೂರಿನ ಜನಾರಣ್ಯವನ್ನು ತೊರೆದು, ಮೂಡಿಗೆರೆಯ ಗೊಂಡಾರಣ್ಯದ ಅಂಚಿನಲ್ಲಿ ಅವರು ವಾಸಿಸಲು ಆರಂಭಿಸಿದ್ದು ಎಷ್ಟು ಕ್ರಾಂತಿಕಾರಕ ಹೆಜ್ಜೆಯೋ, ಅವರು ಪಕ್ಷಿವೀಕ್ಷಣೆಯಲ್ಲಿ ತೊಡಗಿಕೊಂಡದ್ದು, ಪಕ್ಷಿಗಳ ಕುರಿತು ಹಲವು ಪುಸ್ತಕಗಳನ್ನು ರಚಿಸಿದ್ದೂ ಅಷ್ಟೇ ಕ್ರಾಂತಿಕಾರಕ. ಏಕೆಂದರೆ, ಅದಾಗಲೇ ಅವರು ಕನ್ನಡದ ಪ್ರಮುಖ ಕಥೆಗಾರರಾಗಿ, ಕಾದಂಬರಿಕಾರರಾಗಿ ಯಶಸ್ವಿಯಾಗಿದ್ದರು. ಅದನ್ನೇ ಮುಂದುವರಿಸಿ, ಅವರು ಇನ್ನಷ್ಟು ಕಥೆ, ಕಾದಂಬರಿಗಳನ್ನು ಬರೆಯಬಹುದಿತ್ತು. ಆದರೆ ಅದರ ಜಾಗದಲ್ಲಿ ಅವರು ಬರೆದದ್ದು ಅದ್ಭುತ ಜಗತ್ತು ಸರಣಿ, ಮಿಲೆನಿಯಂ ಸರಣಿ, ಹಾರುವ ತಟ್ಟೆಗಳ ಸರಣಿ, ಪರಿಸರದ ಕುರಿತು ಮತ್ತು ಹಕ್ಕಿಗಳ ಕುರಿತು ಪುಸ್ತಕಗಳು. ಎಲ್ಲಾ ದಿಕ್ಕಿನಿಂದಲೂ ಜ್ಞಾನವು ಹರಿದು ಬಂದು, ಕನ್ನಡ ಓದುಗರಿಗೆ, ಮಕ್ಕಳಿಗೆ ದಕ್ಕಲಿ ಎಂಬ ಅವರ ಆಶಯ ಅದೆಷ್ಟು ಅರ್ಥಪೂರ್ಣ!
ಮೂಡಿಗೆರೆ ಸರಹದ್ದಿನ ಕಾಡಿನಲ್ಲಿ ಪಕ್ಷಿಗಳನ್ನು ನೋಡುತ್ತಾ ಗಂಟೆಗಟ್ಟಲೆ ಸೊಳ್ಳೆ ಕಚ್ಚಿಸಿಕೊಂಡು ಕುಳಿತಿರುತ್ತಿದ್ದೆ ಎಂದು ಅವರೇ ಅಲ್ಲಲ್ಲಿ ಬರೆದುಕೊಂಡಿದ್ದಾರೆ. ಅಂತಹ ದಿನಗಳಲ್ಲಿ ಅವರು ತುಷಾರ ಪತ್ರಿಕೆಯಲ್ಲಿ ಬರೆದ `ಒಂದು ಮುದಿ ರೆಂಬೆಯ ಕೊನೆಯ ಗಾನ’ ಚಿತ್ರಲೇಖನ ಇಂದಿಗೂ ಕಣ್ಣಿಕಟ್ಟಿದಂತಿದೆ. ಕಾಡಿನ ನಡುವೆ ದನಗಳು ಸಾಗುವ ದಾರಿಗಡ್ಡಲಾಗಿ ಒಂದು ಮುದಿ ರೆಂಬೆ ಬಿದ್ದಿತ್ತು. ಅದರ ಮೇಲೆ ಕಾಡಿನ ಅದ್ಯಾವುದೋ ಹಕ್ಕಿಗಳು ಬಂದು ಕುಳಿತು, ತುಸು ಹೊತ್ತು ಚಿಲಿಪಿಲಿಗುಟ್ಟಿ, ಅತ್ತಿತ್ತ ಕತ್ತು ತಿರುಗಿಸಿ, ತಮ್ಮಷ್ಟಕ್ಕೆ ಮಾತನಾಡಿ, ನಂತರ ಹಾರಿ ಹೋಗುತ್ತಿದ್ದವು. ಕಾಡಿನ ನಡುವೆ ಬಿದ್ದಿದ್ದ ಆ ಮುದಿ ರೆಂಬೆಯ ಹತ್ತಿರ ಮರೆಯೊಂದರಲ್ಲಿ ಕುಳಿತು, ಆ ರೆಂಬೆಯ ಮೇಲೆ ಕೂರುವ ಹಕ್ಕಿಗಳನ್ನು ಗುರುತಿಸಿ, ಅವುಗಳ ಫೆÇೀಟೋ ತೆಗೆದು ಬರೆದ ಆ ನುಡಿಚಿತ್ರ ಬಹು ಆತ್ಮೀಯ ರಚನೆ. ಸಂಜೆಯ ಹೊತ್ತಿನಲ್ಲಿ ಬಂದ ತುಡುಗು ದನವೊಂದು ಆ ಮುದಿರೆಂಬೆಯನ್ನು ದೂಡಿ ಕೆಡವುದರೊಂದಿಗೆ, ಮುದಿ ರೆಂಬೆಯ ಕೊನೆಯ ಗಾನ ಮುಕ್ತಾಯಗೊಂಡು, ತೇಜಸ್ವಿಯವರ ಅಂದಿನ ಪಕ್ಷಿವೀಕ್ಷಣೆಗೆ ಆರಾಮ ಬೀಳುತ್ತದೆ.
ಪಕ್ಷಿ ವೀಕ್ಷಣೆ ಎಂದರೆ ಹಾಗೇನೆ – ಗಂಟೆಗಟ್ಟಲೆ ಒಂದೇ ಜಾಗದಲ್ಲಿ ಕುಳಿತು ಹಕ್ಕಿಗಳನ್ನು ಗುರುತಿಸಬೇಕು, ಅವುಗಳ ಹಾವ ಭಾವವನ್ನು ಗಮನಿಸಬೇಕು, ಸಾಧ್ಯವಾದರೆ ಬರೆದುಕೊಳ್ಳಬೇಕು. ನಂತರ ಪುಸ್ತಕದ ಸಹಾಯದಿಂದಲೋ, ಜಾಲತಾಣದ ಸಹಾಯದಿಂದಲೋ ಹಕ್ಕಿಯ ವಿವರ ಮನನ ಮಾಡಿಕೊಳ್ಳಬೇಕು. ಸನಿಹದಲ್ಲಿ ಹಕ್ಕಿಗೂಡು ಕಂಡರೆ, ಹಕ್ಕಿಯ ಮೊಟ್ಟೆ ಮತ್ತು ಮರಿಗಳಿಗೆ ತೊಂದರೆಯಾಗದ ರೀತಿಯಲ್ಲಿ ಅವುಗಳ ಅಧ್ಯಯನ ಮಾಡಬೇಕು. ತೇಜಸ್ವಿಯವರು ಸಹ್ಯಾದ್ರಿಯ ಕಾಡುಗಳಲ್ಲಿರುವ ನೀಲ ಸಾಮ್ರಾಟ ಹಕ್ಕಿಯ ಗೂಡನ್ನು ಗುರುತಿಸಿದ್ದು ಇದೇ ರೀತಿ. ಬ್ಲಾಕ್ ನೇಪ್ಡ್ ಬ್ಲೂ ಮೊನಾರ್ಚ್ ಫ್ಲೈ ಕ್ಯಾಚರ್ ಎಂಬ ಹೆಸರಿಗೆ ಸುಂದರ ಕನ್ನಡ ಹೆಸರನ್ನೂ ಟಂಕಿಸಿ, ಆ ಪುಟಾಣಿ ಹಕ್ಕಿಯ ಗೂಡಿನ ಹತ್ತರ ಮರೆಯಲ್ಲಿ ಕುಳಿತು, ಪ್ರತಿದಿನ ಅದರ ಚಟುವಟಿಕೆಗಳನ್ನು ಕಂಡು, ವರ್ಣ ಛಾಯಾಚಿತ್ರ ತೆಗೆದು ಆ ಬಗ್ಗೆ ಲೇಖನವನ್ನೂ ಬರೆದರು. ಕನ್ನಡದಲ್ಲಿ ಆ ಅಪರೂಪದ ಹಕ್ಕಿಯ ಕುರಿತು ಯಾರಾದರೂ ಬರೆದಿದ್ದರೆ ಅದು ತೇಜಸ್ವಿ ಮಾತ್ರ. ಸಲೀಂ ಅಲಿಯವರ ಬರೆಹಗಳನ್ನು ಅವರು ಆಳವಾಗಿ ಅಧ್ಯಯನ ಮಾಡಿದ್ದು, ಅಲಿಯವರಿಗಿಂತ ಪರಿಪೂರ್ಣವಾಗಿ ಹಕ್ಕಿಗಳನ್ನು ವಿವರಿಸುವುದು ಬೇರಾರಿಂದಲೂ ಅಸಾಧ್ಯ ಎಂದೇ ಹೇಳಿದ್ದಾರೆ. ಹಕ್ಕಿಗಳ ಕುರಿತು ಬರೆಯುವುದೆಂದರೆ ಅವರಿಗೆ ಅತೀವ ಉತ್ಸಾಹ. ನಮ್ಮ ನಾಡಿನ ಹಕ್ಕಿಗಳ ಕುರಿತು ಅವರು ಬರೆದಿರುವ ನಾಲ್ಕಾರು ಪುಸ್ತಕಗಳನ್ನು ಕಂಡರೆ ಖುಷಿ ಅನಿಸುತ್ತದೆ. ಅವರ ಪುಸ್ತಕಗಳಾದ ಕನ್ನಡ ನಾಡಿನ ಹಕ್ಕಿಗಳು, ಹೆಜ್ಜೆ ಮೂಡದ ಹಾದಿ ಥಟ್ಟನೆ ನೆನಪಿಗೆ ಬರುತ್ತದೆ. ಎಲ್ಲಾ ಪುಟಗಳನ್ನೂ ವರ್ಣದಲ್ಲಿ ಮುದ್ರಿಸಿರುವ ಅವರ `ಹಕ್ಕಿಪುಕ್ಕ’ ಪುಸ್ತಕವಂತೂ, ಕನ್ನಡ ಪುಸ್ತಕಸಾಹಸಗಳಲ್ಲಿ ಒಂದು. ನೂರಾರು ಹಕ್ಕಿಗಳ ವರ್ಣ ಚಿತ್ರ, ಅವು ವಾಸಿಸುವ ಸ್ಥಳದ ವ್ಯಾಪ್ತಿ ತೋರಿಸುವ ಭೂಪಟದ ಸ್ಕೆಚ್, ಕನ್ನಡದಲ್ಲಿ ಆ ಹಕ್ಕಿಗಳ ವೈವಿಧ್ಯಮಯ ಹೆಸರು, ತಮ್ಮ ಅನುಭವದಲ್ಲಿ ಕಂಡ ಅವುಗಳ ಜೀವನ ಶೈಲಿ ಎಲ್ಲವನ್ನೂ ಸುಂದರ ಮುದ್ರಣದಲ್ಲಿ ಆ ಪುಸ್ತಕ ಒದಗಿಸಿದೆ. ನಂತರದ ಮುದ್ರಣದಲ್ಲಿ ಅದು ಬೌಂಡ್ ರೂಪದಲ್ಲಿ ಹೊರಬಂದು, ಪುಸ್ತಕ ಸಂಗ್ರಾಹಕರ ಕಣ್ಮಣಿ ಎನಿಸಿದೆ. ತೇಜಸ್ವಿಯವರಲ್ಲಿದ್ದ ನಮ್ಮ ಪರಿಸರದ ಕುರಿತು ಕಾಳಜಿ, ಸುತ್ತಲಿನ ವನ್ಯ ಜೀವಿಗಳ ಕುರಿತು ಕುತೂಹಲ, ತಾವು ಗಮನಿಸಿದ್ದನ್ನು ಓದುಗರಿಗೆ ತಲುಪಿಸಬೇಕೆಂಬ ಅಭೀಪ್ಸೆ ಇವುಗಳೇ ಅವರಿಗೆ ಹಕ್ಕಿಗಳ ಪುಸ್ತಕ ರಚಿಸಲು ಪ್ರೇರಕ ಶಕ್ತಿ. ತೇಜಸ್ವಿಯವರಂತಹ ಕನ್ನಡದ ಪ್ರಮುಖ ಸಾಹಿತಿಯೊಬ್ಬರು ಹಕ್ಕಿಗಳ ಕುರಿತು ಹಲವು ಪುಸ್ತಕಗಳನ್ನು ಬರೆದಿದ್ದಾರೆಂಬ ವಿಚಾರವೇ ವಿಸ್ಮಯ ಹುಟ್ಟಿಸುವಂತಹದ್ದು.

ಫೋಟೋ ಕೃಪೆ : goodreads
ಅವರಿಗಿಂತಲೂ ಮುಂಚೆ, ಹಿರಿಯ ಲೇಖಕರಾದ ಶಿವರಾಮ ಕಾರಂತರು ಹಕ್ಕಿಗಳ ಕುರಿತು ಕೆಲವು ಪುಸ್ತಕಗಳನ್ನು ಬರೆದಿದ್ದರು. ಕಾರಂತರು ತಮ್ಮ 92ನೆಯ ವಯಸ್ಸಿನಲ್ಲಿ, ನಿಧನಕ್ಕೆ ಕೆಲವೇ ತಿಂಗಳುಗಳ ಮುಂಚೆ, ಹಕ್ಕಿಗಳ ಕುರಿತು `ಹಿರಿಯ ಕಿರಿಯ ಹಕ್ಕಿಗಳು’ ಎಂಬ ಪುಸ್ತಕ ರಚಿಸಿ, ಪರಿಸರ ಪ್ರೇಮದ ಉತ್ತುಂಗವನ್ನು ಮೆರೆದಿದ್ದರು.
ನಿಜ, ಪಕ್ಷಿವೀಕ್ಷಣೆ ಎಂಬ ಹವ್ಯಾಸಕ್ಕೆ ತುಸು ಕಾಲಾವಕಾಶ, ಸೌಕರ್ಯ, ಮಾರ್ಗದರ್ಶನ ಎಲ್ಲವೂ ಬೇಕು. ಅಂತಹ ಕಾಲಾವಕಶ ಇರುವವರು, ಸಮಯ ಹಾಳುಮಾಡುವ ಇತರ ಹವ್ಯಾಸಗಳಿಗೆ ಸಿಕ್ಕಿಕೊಳ್ಳುವ ಬದಲು, ಪಕ್ಷಿವೀಕ್ಷಣೆ ಮಾಡಬಹುದು. ಆ ಮೂಲಕ ನಭದ ಆ ವಿಶಿಷ್ಟ ಜೀವಿಗಳ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಲು ಸಾಧ್ಯ. ಇಂದು ಅಂತರ್ಜಾಲದಲ್ಲಿ ದೊರೆಯುವ ಪಕ್ಷಿಗಳ ಕುರಿತಾದ ಮಾಹಿತಿ, ವಿಡಿಯೋ, ಅವುಗಳು ಕೂಗುವ ರೀತಿ, ವಾಸಸ್ಥಾನದ ವಿವರ ಎಲ್ಲವೂ ಪಕ್ಷಿವೀಕ್ಷಣೆಯ ಹವ್ಯಾಸಕ್ಕೆ ಅರ್ಥಪೂರ್ಣವಾಗಿ ಪೂರಕ ಎನಿಸಿದೆ. ದಿನೇ ದಿನೇ ಪರಿಸರ ನಾಶವಾಗುತ್ತಿದೆ ಎಂಬ ಇಂದಿನ ಕಳವಳ ಸಕಾರಣ; ಪರಿಸರದ ಕುರಿತು ಹೆಚ್ಚು ತಿಳಿವಳಿಕೆ ಬೆಳೆಸಿಕೊಳ್ಳಲು, ಆ ಮೂಲಕ ಪರೋಕ್ಷವಾಗಿ ಪರಿಸರ ರಕ್ಷಿಸಲು, ಪಕ್ಷಿವೀಕ್ಷಣೆಯಂತಹ ಹವ್ಯಾಸಗಳಿಂದ ಸಾಧ್ಯ. ಪಕ್ಷಿಗಳ ದಿನಚರಿಯನ್ನು ಗುರುತಿಸುವಾಗ ಮನ ಮುದಗೊಳ್ಳುತ್ತದೆ, ಕುತೂಹಲ ವೃದ್ಧಿಸುತ್ತದೆ, ಸಂತಸ ಮೂಡುತ್ತದೆ. ಅದರಿಂದ ಬದುಕು ನೆಮ್ಮದಿಯನ್ನು ಕಂಡುಕೊಳ್ಳಬಲ್ಲದು.
- ಶಶಿಧರ ಹಾಲಾಡಿ
