ಲೇಖಕರಾದ ಮಾಲಾ ಕುಮಾರ್ ಅವರ The Missing Rock of Hampi ಹಂಪಿಯನ್ನು ಅನುವಾದ ಮತ್ತು ಸಂಪಾದನೆಯನ್ನು ಶ್ರೀಗೌರಿ ಎಸ್ ಜೋಶಿ ಅವರು ಮಾಡಿದ್ದು “ಕಾಣೆಯಾದ ಹಂಪಿಯ ಶಿಲೆ” ಹೆಸರಿನಲ್ಲಿ ಕನ್ನಡದಲ್ಲಿ ಲಭ್ಯವಾಗಿದೆ. ಈ ಕೃತಿಯ ಕುರಿತು ವಾಣಿ ಭಟ್ ಅವರು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ. ತಪ್ಪದೆ ಮುಂದೆ ಓದಿ…
ಮೂಲಕೃತಿ : The Missing Rock of Hampi
ಲೇಖಕಿ : ಮಾಲಾ ಕುಮಾರ್
ಅನುವಾದ ಮತ್ತು ಸಂಪಾದನೆ : ಶ್ರೀಗೌರಿ ಎಸ್ ಜೋಶಿ (NAAV AI)
ಚಿತ್ರಗಳು : ಮೇಘಾ ವಿಶ್ವನಾಥ್
ಮುದ್ರಣ : ೨೦೨೫
ಪುಟಗಳು : ₹೧೫೦/-
ಬೆಲೆ : ₹೨೯೯/-
ಲಭ್ಯತೆ : ೭ ಭಾಷೆಗಳಲ್ಲಿ
(key editions ಇಂಗ್ಲಿಷ್, ಕನ್ನಡ, ಮಲೆಯಾಳಿ, ತೆಲುಗು)
ಬೆಲೆ:
ಪ್ರಕಾಶಕರು : ಬ್ಲೂ ಒನ್ ಇಂಕ್ ಪ್ರೈವೆಟ್ ಲಿಮಿಟೆಡ್

“ಕಾಣೆಯಾದ ಹಂಪಿಯ ಶಿಲೆ” ಇದೊಂದು ಮಕ್ಕಳ ಪತ್ತೇದಾರಿ ಕಾದಂಬರಿ. ಭಾರತದ ಇತಿಹಾಸ ಮತ್ತು ಸಂಸ್ಕೃತಿಗೆ ಸಂಬಂಧಿಸಿದ ಕೃತಿಗಳನ್ನು ಪ್ರಕಟಿಸುವ FIHCR yuva ಸರಣಿಯ ಭಾಗವಾಗಿ ಈ ಪುಸ್ತಕ ಪ್ರಕಟಗೊಂಡಿದೆ. ಮುಖ್ಯವಾಗಿ, ವಿಜಯನಗರ ಕಾಲದ ಜಲಸಂಪನ್ಮೂಲ ನಿರ್ವಹಣೆ ಹಾಗೂ ಅಣೆಕಟ್ಟುಗಳ ನಿರ್ಮಾಣ ಕೌಶಲದ ಬಗ್ಗೆ ಮಕ್ಕಳಿಗೆ ಕುತೂಹಲ ಹುಟ್ಟಿಸುವ ಪ್ರಯತ್ನದೊಂದಿಗೆ, ಇಂದಿನ ನೀರಿನ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಪ್ರಯತ್ನವನ್ನು ಈ ಕೃತಿ ಮಾಡುತ್ತದೆ.
ಇತಿಹಾಸದ ಓದು ಬೇಸರ ಅನ್ನುವ ಹಲವರಿರುತ್ತಾರೆ. ಅದೇ ಇತಿಹಾಸವನ್ನು ಆಕರ್ಷಕ ಕಥೆಯಾಗಿ ಹೇಳಿದರೆ ಐತಿಹಾಸಿಕ ಮಾಹಿತಿಗಳು ಕುತೂಹಲ ಹುಟ್ಟಿಸುವುದರ ಜೊತೆಗೆ, ಸುಲಭವಾಗಿ ನೆನಪಿನಲ್ಲುಳಿಯುತ್ತವೆ. ಆ ಮೂಲಕ ಇತಿಹಾಸದಲ್ಲಿ ದಾಖಲಾದ ನಮ್ಮ ಪೂರ್ವಜರ ಜ್ಞಾನ, ಕಲೆ, ಸಾಧನೆ ಮತ್ತು ಕೌಶಲಗಳನ್ನು ನಾವೂ ತಿಳಿಯಲು ಸಾಧ್ಯವಾಗುತ್ತದೆ. ಅದೇ ಕಾರಣಕ್ಕೆ ಈ ಪುಸ್ತಕವನ್ನು FIHCR ಸರಣಿಯ ಪ್ರಕಟಣೆಗೆ ಆಯ್ಕೆ ಮಾಡಿಕೊಂಡದ್ದಾಗಿ ಹೆಸರಾಂತ ಇತಿಹಾಸ ತಜ್ಞರು ಹಾಗೂ FIHCR ಸಂಸ್ಥಾಪಕರೂ ಆದ ಡಾ ವಿಕ್ರಮ್ ಸಂಪತ್ ಹೇಳುತ್ತಾರೆ.
ಈ ಪುಸ್ತಕ ನನ್ನ ಗಮನ ಸೆಳೆಯಲು ಎರಡು ಪ್ರಮುಖ ಕಾರಣಗಳೆಂದರೆ;
೧. ಇದು ಹಂಪಿಯ ಐತಿಹಾಸಿಕ ವಿಷಯವನ್ನೊಳಗೊಂಡ ಮಕ್ಕಳ ಪತ್ತೇದಾರಿ ಕಾದಂಬರಿ!
೨. ಇದು NAAV AI ಸಹಾಯದಿಂದ ಅನುವಾದಿಸಲ್ಪಟ್ಟಿದೆ (Ai ಅನುವಾದ ಹೇಗಿರಬಹುದು? ಎಂಬ ಕುತೂಹಲ)

ಪುಸ್ತಕದ ಕುರಿತು:
ವಿಜಯನಗರ ತುಂಬಾ ಶ್ರೀಮಂತ ಸಾಮ್ರಾಜ್ಯವಾಗಿತ್ತು ಎಂಬ ಮಾತು ಕೇಳಿದ್ದೇವಾಗಲೀ, ಆ ಸಂಪತ್ತಿಗೆ ಕಾರಣವೇನಿರಬಹುದು? ಎಂಬುದನ್ನು ಅರಿಯುವ ಪ್ರಯತ್ನ ನಾವು ಮಾಡುವುದಿಲ್ಲ. ಅಲ್ಲಿನ ಸಂಪತ್ತಿಗೆ ಮುಖ್ಯ ಕಾರಣ ಪ್ರಾಕೃತಿಕ ಸಂಪತ್ತಿನ ಸರಿಯಾದ ನಿರ್ವಹಣೆ. ಫಲವತ್ತಾದ ಭೂಮಿಯಿಂದ ಒಳ್ಳೆ ಫಸಲನ್ನು ಪಡೆಯಲು, ಯೋಗ್ಯ ರೀತಿಯಲ್ಲಿ ನೀರು ಸರಬರಾಜು ಮಾಡುವ ವ್ಯವಸ್ಥೆಯನ್ನು ಅವರು ನಿರ್ಮಿಸಿದ್ದರು. ಆ ನಿರ್ಮಾಣಗಳ ಹಿಂದಿನ ಯೋಜನೆಗೆ, ಯೋಜನೆಯ ಅನುಷ್ಠಾನಕ್ಕೆ ಬಹಳ ಪ್ರಾಶಸ್ತ್ಯ ನೀಡಲಾಗುತ್ತಿತ್ತು. ಅರಸರ ಕಾಲದ ನೀರು ಸರಬರಾಜು ವ್ಯವಸ್ಥೆಯಲ್ಲಿ ಕೆಲವು ಇಂದಿಗೂ ಸುಸ್ಥಿತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ತಿಳಿದು, ಅಚ್ಚರಿಯ ಜೊತೆಗೆ ಹೆಮ್ಮೆಯೂ ಆಯ್ತು. ಆ ಕಥೆಯನ್ನು ಕುತೂಹಲ ಮೂಡುವಂತೆ ನಿರೂಪಿಸಲು ಇಲ್ಲಿ ಪತ್ತೇದಾರಿ ಶೈಲಿಯಲ್ಲಿ ಬಳಸಿಕೊಳ್ಳಲಾಗಿದೆ. ಕಾದಂಬರಿಯಲ್ಲಿ ಎರಡು ಕಥೆಗಳು ಸಮಾನಾಂತರವಾಗಿ ನಡೆಯುತ್ತವೆ. ಒಂದು ಕಥೆ ವರ್ತಮಾನದಲ್ಲಿ ಜರುಗಿದರೆ, ಇನ್ನೊಂದು ಕಥೆ ಕ್ರಿ.ಶ. ೧೩೩೫ ರ ಕಾಲಘಟ್ಟದಲ್ಲಿ ಆಣೆಕಟ್ಟುಗಳ ನಿರ್ಮಾಣಕ್ಕೆ ಸ್ಥಳದ ಆಯ್ಕೆ, ನಿರ್ಮಾಣದ ಯೋಜನೆ, ಕಾಲುವೆಗಳ ರಚನೆಯ ಚರ್ಚೆ, ಅದನ್ನು ಹಾಳುಗೆಡಹಲು ಯತ್ನಿಸುವ ಕೆಲವರ ಕುತಂತ್ರ ಇತ್ಯಾದಿ ವಿವರಗಳೊಂದಿಗೆ ಹೆಣೆದುಕೊಂಡಿದೆ.
ಡಾ. ಬೃಂದಾ ರತ್ನಾಗರ್ ಜಲಸಂಪನ್ಮೂಲ ತಜ್ಞೆ. ಅವರ ಪತಿ ಪ್ರೊ. ಶ್ಯಾಮ್ ಖೇರ್ ಭೂಗರ್ಭ ಶಾಸ್ತ್ರಜ್ಞರು. ದೇವಯಾನಿ ಹಾಗೂ ಸಾರಂಗ್ ಇವರ ಮಕ್ಕಳು. ನಕುಲ್ ಶ್ಯಾಮ್ ಖೇರ್ ಅವರ ಸಹೋದರಿಯ ಮಗ, ಅಪಘಾತದಲ್ಲಿ ತನ್ನ ತಂದೆ ತಾಯಿಯನ್ನು ಕಳೆದುಕೊಂಡ ನಂತರ ಇವರೊಡನೆ ವಾಸಿಸುತ್ತಿದ್ದ. ದೇವಯಾನಿ ಮತ್ತು ಸಾರಂಗರ ಶಾಲೆ ತಾತ್ಕಾಲಿಕವಾಗಿ ಮುಚ್ಚಿತ್ತು. ಏಕೆಂದರೆ, ಆ ಶಾಲೆ ಹಿಂದೊಮ್ಮೆ ಕೆರೆಯಾಗಿದ್ದ ಜಾಗದಲ್ಲಿ ನಿರ್ಮಿಸಲ್ಪಟ್ಟಿತ್ತು! ಅಕಾಲಿಕ ಭಾರೀ ಮಳೆಯಿಂದ ಶಾಲೆ ಮುಳುಗಿ, ಕಟ್ಟಡ ಶಿಥಿಲಗೊಂಡಿತ್ತು. ಕೆಲಕಾಲ ಶಾಲೆಯನ್ನು ಬೇರೊಂದು ಕಟ್ಟಡಕ್ಕೆ ಸ್ಥಳಾಂತರ ಮಾಡಲಾಗಿತ್ತು. ಆದರೆ ಮಕ್ಕಳಿಗೆ ಹಳೆಯ ಕಟ್ಟಡದ ಶಾಲೆಯಷ್ಟು ಈ ಶಾಲೆ ಆಪ್ತವಾಗಲಿಲ್ಲ. ಕೆರೆಯ ಜಾಗದಲ್ಲಿದ್ದ ಶಾಲೆ, ಕಟ್ಟಡಗಳ ಅವಸ್ಥೆ ಹಾಗೂ ಜಲನಿರ್ವಹಣೆಯ ಸಮಸ್ಯೆಯ ಕುರಿತು ಟಿ.ವಿ. ಯಲ್ಲಿ ಚರ್ಚೆ ನಡೆಯುತ್ತಿತ್ತು. ಆ ಚರ್ಚೆ ನೋಡಿ ಜಲಸಂಪನ್ಮೂಲ ತಜ್ಞೆಯಾದ ಡಾ. ಬೃಂದಾ ತಮ್ಮ ಅನುಭವ ಹಾಗೂ ಮಾಹಿತಿ ಹಂಚಿಕೊಳ್ಳುತ್ತಾರೆ. ೫೦೦-೭೦೦ ವರ್ಷಗಳ ಹಿಂದೆ ವಿಜಯನಗರದವರು ಎಷ್ಟು ಚೆನ್ನಾಗಿ ನಿರ್ಮಿಸಿದ್ದರು ಎಂಬುದನ್ನೂ ವಿವರಿಸುತ್ತಾರೆ.
ಆಗ ಭೂಗರ್ಭ ಶಾಸ್ತ್ರಜ್ಞರಾದ ಶ್ಯಾಮ್ ಕೂಡ ತಮಗೆ ತಿಳಿದ ಭೂ ವೈಶಿಷ್ಟ್ಯ ಹೇಳುವ ಜೊತೆಗೆ, ತಮ್ಮ ಸ್ನೇಹಿತ ಕೊಟ್ಟ ಹಂಪಿಯ ಶಿಲೆಯನ್ನು ಹುಡುಕತೊಡಗುತ್ತಾರೆ. ಆಗ ದೇವಯಾನಿಗೆ ತಾನು ಮಾಡಿದ ಯಡವಟ್ಟು ಗೊತ್ತಾಗುತ್ತದೆ. ಆ ಕಲ್ಲನ್ನು ಅವಳು ಶಾಲೆಗೆ ಒಯ್ದಿದ್ದಳು! ಅದೀಗ ಮುಚ್ಚಿದ್ದ ಶಾಲೆಯ ಕಟ್ಟಡದಲ್ಲೇ ಉಳಿದಿತ್ತು. ತನ್ನ ಅಪ್ಪ ಅದರ ಮಹತ್ವ ವಿವರಿಸಿದಾಗ, ಅದರ ಪ್ರಾಮುಖ್ಯತೆ ಅವಳಿಗೆ ಅರ್ಥವಾಗಿತ್ತು. ಅದನ್ನು ಪುನಃ ತರುವುದು ಹೇಗೆ? (ಅದೇ #ಕಾಣೆಯಾದ_ಹಂಪಿಯ_ಶಿಲೆ ಆದರೆ ಆ ಶೀರ್ಷಿಕೆ ಇದಕ್ಕಿಂತ ಹೆಚ್ಚು ಹೇಳುತ್ತದೆ) ಅವಳ ಸಮಸ್ಯೆ ಅರಿತ ಅವಳ ಸಹೋದರರು ವಿವಿಧ ಉಪಾಯ ಹೇಳುತ್ತಾರೆ, ಅವಳ ಕಾಲೆಳೆಯುತ್ತಾರೆ. ಆ ಕ್ಷಣ ವಿಷಯ ಬದಲಾಯಿಸಿ, ಅಪ್ಪನ ಗಮನ ಬೇರೆಡೆ ಹರಿವಂತೆ ಮಾಡುವಲ್ಲಿ ದೇವಯಾನಿ ಯಶಸ್ವಿಯಾಗುತ್ತಾಳೆ.

ನಂತರ ಪಾಲಕರಿಬ್ಬರಿಗೂ ಕೆಲಸದ ಮೇಲೆ ಹೊರಗಡೆ ಹೋಗುವವರಿದ್ದಾಗ, ಶಾಲೆಗೂ ರಜೆಯಿರುವಾಗ ಮಕ್ಕಳು ಏನು ಮಾಡಬೇಕು? ಎಲ್ಲಿರಬೇಕು? ಎಂಬ ಸಮಸ್ಯೆ ಎದುರಾಗುತ್ತದೆ. ಆಗ ಬೃಂದಾ ಅವರ ಸಲಹೆಯಂತೆ ಮಕ್ಕಳು ಅವರೊಂದಿಗೆ ಹಂಪೆಗೆ ಹೊರಡುತ್ತಾರೆ. ಹಂಪಿಯಲ್ಲಿ ಸರ್ಕಾರದ ಯೋಜನೆಯೊಂದರೆ ರೂಪುರೇಷೆ ಹಾಗೂ ಸಾಧ್ಯಾಸಾಧ್ಯತೆಗಳ ಅಧ್ಯಯನ ಮಾಡುವ ಕೆಲಸ ಬೃಂದಾ ಅವರಿಗೆ ಇರುತ್ತದೆ. ಅವರೊಂದಿಗೆ ಸಮಯ ಕಳೆಯಲು ಹೋದ ಮಕ್ಕಳಿಗೆ ಬೃಂದಾ ಅವರ ಸಹೋದ್ಯೋಗಿಗಳ ನಡತೆಯಲ್ಲಿ ಶಂಕೆ ಮೂಡುತ್ತದೆ. ಬೃಂದಾ ತಯಾರಿಸಲಿರುವ ರಿಪೋರ್ಟ್ ಹಾಗೂ ಸ್ಥಳೀಯರ ಅಭಿಪ್ರಾಯ ಸಂಗ್ರಹದಲ್ಲಿ ಯಾರೋ ಹಸ್ತಕ್ಷೇಪ ಮಾಡಲು ಹೊರಟದ್ದು ಗೊತ್ತಾಗುತ್ತದೆ.
ಅದರಲ್ಲೂ ಭೂಪತಿ ಎಂಬ ಸಹೋದ್ಯೋಗಿ, “ಮುಂದೆ ಸೇತುವೆಯಲ್ಲಿ ಟ್ರಾಫಿಕ್ ಆಗಿದೆ. ಹೀಗಾಗಿ ನೀವು ತೆಪ್ಪದಲ್ಲಿ ಹೋಗಿ” ಎಂದು ಸಲಹೆ ಕೊಡುತ್ತಾನೆ. ನಕುಲ್ ಟ್ರಾಫಿಕ್ ಅಪ್ಲಿಕೇಶನ್ ನಲ್ಲಿ ನೋಡಿದಾಗ ಅಲ್ಯಾವುದೇ ಟ್ರಾಫಿಕ್ ಇರುವುದಿಲ್ಲ! ಇದರ ಹಿಂದೆ ಏನೋ ಮೋಸವಿದೆ ಎಂದು ದೇವಯಾನಿ ಶಂಕಿಸುತ್ತಾಳೆ. ಮಕ್ಕಳು ಪ್ರವಾಸೀ ಸ್ಥಳಕ್ಕೆ ಹೋದಾಗ ಬೃಂದಾ ಅವರಿಗೆ ಕರೆ ಮಾಡಿದರೆ ಸಂಪರ್ಕ ಸಾಧ್ಯವಾಗುವುದಿಲ್ಲ. ಅವರು ಮೊಬೈಲ್ ಕಳೆದುಕೊಂಡಿದ್ದಾರಾ? ಅಥವಾ ಅವರ ಕಿಡ್ನಾಪ್ ಆಗಿದೆಯಾ? ಈ ಎಲ್ಲದರ ಹಿಂದಿರುವವರು ಯಾರು? ಎಂಬುದನ್ನು ಮಕ್ಕಳು ತಮ್ಮದೇ ರೀತಿಯಲ್ಲಿ ಕಂಡು ಹಿಡಿಯುವ ಪ್ರಯತ್ನ ಮಾಡುವುದು, ಆ ಸಮಯದಲ್ಲಿ ಅವರಿಗೆ ಬರುವ ಅನುಮಾನಗಳು, ಅವರ ಚರ್ಚೆಗಳು ಕಾದಂಬರಿಗೆ ರಂಜನೆ ಒದಗಿಸುತ್ತವೆ. ಅವರು ಭೇಟಿ ನೀಡುವ ಸ್ಥಳದ ಮಾಹಿತಿ ಇತಿಹಾಸದ ಪರಿಚಯ ಮಾಡಿಕೊಡುತ್ತದೆ.
ಇದರೊಂದಿಗೆ ಸಮಾನಾಂತರವಾಗಿ ಐತಿಹಾಸಿಕ ಕಾಲಘಟ್ಟದ ಕಥೆಯೊಂದು ಸಾಗುತ್ತದೆ. ವಿಜಯನಗರದ ನಿರ್ಮಾಣ ಕಾರ್ಯಗಳಲ್ಲಿ ದೇವರಾಯನ ಬಲಗೈ ಅನ್ನಿಸಿಕೊಂಡ ಮುಖ್ಯ ಅಭಿಯಂತರರಲ್ಲಿ ಒಬ್ಬರಾದ ವಿಜಯೇಂದ್ರರ ಮೊಮ್ಮಗಳು ಶುಭಾ. ಅವಳಿಗೂ ತಾತನಂತೆ ನಿರ್ಮಾಣ ಯೋಜನೆಗಳ ಚಿತ್ರ ರಚನೆಯಲ್ಲಿ ಆಸಕ್ತಿ. ಹೀಗಿರುವಾಗ, ಯಾರೋ ಜಲಾಶಯದ ಕಲ್ಲುಗಳನ್ನು ಕಿತ್ತು ನಿರ್ಮಾಣ ಕಾರ್ಯ ಹಾಳುಗೆಡಹುವ ಯತ್ನ ಮಾಡುತ್ತಿರುವುದು ಅವಳಿಗೆ ಗೊತ್ತಾಗುತ್ತದೆ. ಅಂತಹ ಅನುಮಾನಾಸ್ಪದ ವ್ಯಕ್ತಿಗಳ ಪಟ್ಟಿ ಮಾಡಿರುತ್ತಾಳೆ. ಅದನ್ನು ರಾಜರಿಗೆ ತಲುಪಿಸಲುವ ಸಾಹಸ, ಅದು ಮಂತ್ರಿಗಳ ಹೆಂಡತಿಗೆ ಸಿಕ್ಕಿದಾಗ ಏನಾಗುತ್ತದೆ? ಏಕೆಂದರೆ ಅವರ ಆಪ್ತನ ಹೆಸರೂ ಆ ಪಟ್ಟಿಯಲ್ಲಿತ್ತು. ಅವರೇಕೆ ಶುಭಾಳನ್ನು ತಮ್ಮ ಆವಾಸಕ್ಕೆ ಕರೆಸಿಕೊಂಡರು? ಜಲಾಶಯ ಸಂರಕ್ಷಣೆ ಶುಭಾಳಿಂದ ಸಾಧ್ಯವಾಯ್ತೆ? ಎಂಬುದು ಇನ್ನೊಂದು ಕಥೆ.
ಎರಡೂ ಕಥೆಗಳು ಆಸಕ್ತಿಕರವಾಗಿವೆ. ಒಂದಕ್ಕೊಂದು ಸಂಬಂಧವಿಲ್ಲದಂತೆ ಕಂಡರೂ ಕೊನೆಗೆ ಎಲ್ಲವೂ ಕೂಡಿಕೊಳ್ಳುವ ರೀತಿ ಚೆನ್ನಾಗಿದೆ. ಮಕ್ಕಳ ವಯಸ್ಸಿಗೆ ಮೀರಿದ ಆಲೋಚನೆ, ಸಾಹಸ ಇಲ್ಲಿಲ್ಲ. ಬದಲಾಗಿ, ಮಕ್ಕಳ ಕುತೂಹಲ, ಪಾಲಕರಿಂದ ಅವರು ಗುಟ್ಟು ಕಾಪಾಡಿಕೊಳ್ಳಯವ ರೀತಿ, ಮಕ್ಕಳ ಅನುಮಾನ ಪ್ರವೃತ್ತಿಯಿಂದ ಬೃಂದಾರಿಗೆ ಅನುಕೂಲವಾದ ಬಗೆ, ಮಕ್ಕಳು ಅವರಿಗೆ ಮಾಡಿದ ಸಹಾಯ ಮುಂತಾದ ವಿಷಯಗಳು ಆಕರ್ಷಕವಾಗಿ ವಿವರಿಸಲ್ಪಟ್ಟಿವೆ. ಮುಂದೇನಾಯ್ತು? ಎಂಬ ಕುತೂಹಲ ಹುಟ್ಟಿಸುತ್ತವೆ.
ಇದೊಂದು ಅನುವಾದಿತ ಕೃತಿ. ಅದರಲ್ಲೂ AI ಮೂಲಕ ಅನುವಾದಗೊಂಡ ಕಾರಣ, ಆರಂಭದಲ್ಲಿ ಭಾವರಹಿತ ಯಾಂತ್ರಿಕ ಭಾಷೆಯಂತೆ ಅನಿಸಿದ್ದು ನಿಜ. ಉದಾಹರಣೆಗೆ; “ಈಗ, ಆ ನೋಟ ಏನು ಹೇಳುತ್ತಿದೆ?” (now, What that look means?), “ಅವನು ಅತಿಶಯೋಕ್ತಿ ಮಾತಾಡುತ್ತಿದ್ದಾನೆ ಎಂದು ನನಗೆ ತಿಳಿದಿತ್ತು” (I know, he was exaggerating!) ಎಂಬಂತಹ ಹಲವು ಸಾಲುಗಳನ್ನು ಓದುವಾಗ ಮನುಷ್ಯನೇ ಅನುವಾದಿಸಿದ್ದರೆ ಇದು ಬೇರೆ ರೀತಿ ಇರುತ್ತಿತ್ತು ಅನ್ನಿಸದಿರಲಿಲ್ಲ. ಏಕೆಂದರೆ ಪ್ರತೀ ಭಾಷೆಗೂ ಅದರದ್ದೇ ಸೊಗಡು ಇರುತ್ತದೆ. ಆಯಾ ಭಾಷೆಯ ರಚನೆಯನ್ನು ಅದೇ ಭಾಷೆಯಲ್ಲಿ ಓದುವ ಆನಂದವೇ ಬೇರೆ. ಮೇಲೆ ಉಲ್ಲೇಖಿಸಿದ ಸಾಲುಗಳನ್ನೇ ನೋಡಿ, ಕನ್ನಡ ಓದುವಾಗ ಹಾಗೂ ಇಂಗ್ಲಿಷ್ ಓದುವಾಗ ಹುಟ್ಟುವ ಭಾವಗಳಲ್ಲಿ ವ್ಯತ್ಯಾಸ ಇದೆಯಲ್ಲವೇ? ಅದನ್ನೇ ನಾನು ಹೇಳಿದ್ದು. ಭಾಷಾಂತರ ಮಾಡುವಾಗ, ಶಬ್ದಶಃ ಅನುವಾದ ಮಾಡದೇ ಮೂಲಕೃತಿಯ ರಸವನ್ನು ತರಬಲ್ಲ ಪದ ಬಳಸಿ ವಾಕ್ಯರಚನೆ ಮಾಡಬೇಕಾಗುತ್ತದೆ. ಸದ್ಯಕ್ಕೆ AI ಶಬ್ದಶಃ ಅನುವಾದ ಮಾಡಿದೆ (ಮುಂದೆ ಖಂಡಿತಾ ಮತ್ತಷ್ಟು ಉತ್ತಮವಾಗುತ್ತದೆ). ಆದರೆ, ಈ ತೊಡಕು ಓದಿನ ಆರಂಭದಲ್ಲಿ ಮಾತ್ರ. ಒಮ್ಮೆ ಕಥೆಯೊಳಗೆ ಪ್ರವೇಶಿಸಿದ ಮೇಲೆ ಇದೆಲ್ಲಾ ನಗಣ್ಯವಾಗಿ ಕಾದಂಬರಿ ಕುತೂಹಲದಿಂದ ಓದಿಸಿಕೊಂಡಿತು.
ಹತ್ತರಿಂದ ಹದಿನಾರು ವರ್ಷದೊಳಗಿನ ಮಕ್ಕಳು ಮಾಡಬಹುದಾದ ಪತ್ತೇದಾರಿಯೇ ಇದರಲ್ಲಿ ಇರುವುದರಿಂದ, ತೀರಾ ಅವಾಸ್ತವಿಕ ಅನ್ನಿಸಲಿಲ್ಲ. ಇತಿಹಾಸ ಹಾಗೂ ವರ್ತಮಾನದ ಹದವಾದ ಮಿಳಿತದೊಂದಿಗೆ ವಿಜಯನಗರದ ನಿರ್ಮಾಣ ಕೌಶಲ, ಜಲನಿರ್ವಹಣೆಗಳ ಬಗ್ಗೆ ಸಂಕ್ಷಿಪ್ತ ಮಾಹಿತಿ ಕೊಡುತ್ತದೆ. ಮಕ್ಕಳಿಗೆ ಆ ಐತಿಹಾಸಿಕ ಸ್ಥಳಕ್ಕೆ ಭೇಟಿ ನೀಡುವ ಆಸಕ್ತಿ ಹುಟ್ಟುವಂತೆ ಮಾಡುತ್ತದೆ. ಸುಂದರ ಚಿತ್ರಗಳು ಪುಸ್ತಕದ ಅಂದ ಹೆಚ್ಚಿಸಿರುವ ಜೊತೆಗೆ ಓದುಗನ ಕಲ್ಪನೆಗೂ ರೂಪ ಕೊಡುತ್ತವೆ. ನಾನು ಹಂಪಿಗೆ ಹೋಗಿದ್ದರೂ ಯುದ್ಧಗಳ ಕಥೆಗಳನ್ನಷ್ಟೇ ಕೇಳಿ ತಿಳಿದಿದ್ದೆ. ಹಾಳಾದ ಶಿಲ್ಪಕಲೆಗಳ ನೋಡಿ ಮರುಗಿದ್ದೆ. ವರ್ತಮಾನಕ್ಕೂ ಸಹಾಯವಾಗಬಲ್ಲ ಜಲನಿರ್ವಹಣಾ ವ್ಯವಸ್ಥೆಯ ಬಗ್ಗೆ ನನಗೆ ಹೆಚ್ಚಿನ ಮಾಹಿತಿ ಇರಲಿಲ್ಲ. ಈ ಪುಸ್ತಕದ ಓದಿನಿಂದ, ಮುಂದೆ ಮತ್ತೊಮ್ಮೆ ಹೋದರೆ ವಿಜಯನಗರ ಕಾಲದ ಜಲಾಶಯಗಳು, ಕಾಲುವೆ ಹಾಗೂ ಆಣೆಕಟ್ಟಿನ ಅವಶೇಷಗಳನ್ನೂ ಮತ್ತೊಮ್ಮೆ ನೋಡಿ ಬರುವ ಮನಸ್ಸಾಗುತ್ತಿದೆ. ಮೂಲಕೃತಿಯನ್ನೂ ಓದುವ ಮನಸ್ಸಾಗಿದೆ. ಆ ಮಟ್ಟಿಗೆ ಪುಸ್ತಕ ಗೆದ್ದಿದೆ.
ಕೊನೆಯ ಮಾತು:
AI ಮೂಲಕ ಸುಲಭವಾಗಿ ಅನುವಾದಗಳು ಲಭ್ಯವಾದರೆ ಜಗತ್ತಿನ ಶ್ರೇಷ್ಠ ಸಾಹಿತ್ಯಗಳನ್ನು ನಾವು ನಮ್ಮ ಭಾಷೆಯಲ್ಲೇ (ಅಥವಾ ನಮಗರ್ಥವಾಗುವ ಭಾಷೆಯಲ್ಲಿ) ಓದಬಹುದು. ಅಷ್ಟೇ ಅಲ್ಲ, ಕನ್ನಡದ ಒಳ್ಳೆಯ ಕೃತಿಗಳೂ ಸಹ ಜಗತ್ತಿನ ಬೇರೆ ಭಾಗದ ಸಾಹಿತ್ಯಾಸಕ್ತರನ್ನು ಸುಲಭವಾಗಿ ತಲುಪಬಹುದು! ಅಪಾಯಗಳ ಬದಲು ಸಾಧ್ಯತೆಗಳ ಕಡೆ ಗಮನಹರಿಸಿದರೆ, ಹಲವು ಅವಕಾಶಗಳು ತೆರೆದುಕೊಳ್ಳಬಹುದು ಎಂದೆನಿಸಿತು.
- ವಾಣಿ ಭಟ್
