ಗಂಡಿಗಿಲ್ಲದ ಈ ಬಗೆಯ ಶೀಲದ ಹೊರೆ ಹೆಣ್ಣಿಗೇಕೆ ಬರಬೇಕು?

ಭೌತಿಕ ಶುದ್ಧತೆಗೂ ಮಿಗಿಲಾಗಿ ಮಾನಸಿಕ ಶುದ್ಧತೆಯನ್ನಾಧರಿಸಿ ವ್ಯಾಖ್ಯಾನಿಸಿದರೆ ಬಹುಶಃ ಯಾವ ಗಂಡೂ ಮದುವೆಗೆ ಮುನ್ನ ತನ್ನ ಶೀಲವನ್ನು ಉಳಿಸಿಕೊಂಡಿರಲು ಸಾಧ್ಯವಿಲ್ಲವೇನೋ! ಕಾರಣ ಆತ ಅದಿನ್ನೆಂತಹ ಕಲ್ಪನಾ ಲೋಕಗಳಲ್ಲಿ ಮಿಂದೆದ್ದು ತೇಲಿ ಅದೆಷ್ಟು ಭಾರಿ ಶೀಲವಧೆ ಮಾಡಿಕೊಳ್ಳುವನೋ! ಪ್ರಶಾಂತ ಸಾಗರ ಅವರ ಈ ಲೇಖನವನ್ನು ತಪ್ಪದೆ ಮುಂದೆ ಓದಿ…

ಈ ಬಾರಿ ಫಿಲಂ ಫೆಸ್ಟಿವಲ್’ನಲ್ಲಿ “The Third Wife” ಅನ್ನೋ ವಿಯೆಟ್ನಾಮ್ ದೇಶಭಾಷೆಯ ಸಿನಿಮಾ ನೋಡಿದ್ದೆ. ೧೯ನೇ ಶತಮಾನದ ಪುರುಷ ಪ್ರಧಾನ ಸಮಾಜದಲ್ಲಿ ಸಿಕ್ಕಿ ನರಳುವ ೧೪ ವರ್ಷದ ಹುಡುಗಿಯ ತುಮುಲಗಳ ಕಥಾಹಂದರವುಳ್ಳದ್ದು. ಅದರಲ್ಲಿ ಒಂದು ದೃಶ್ಯ ಈಗಲೂ ಗಾಢವಾಗಿ ಕಾಡುವಂತದ್ದು. ಮದುವೆ ಮೊದಲ ರಾತ್ರಿಯ ಮರುದಿನ ಬೆಳಿಗ್ಗೆ ಅವರ ಸಂಪ್ರದಾಯದಂತೆ ಹಿರಿಯರ ಸಮ್ಮುಖದಲ್ಲಿ ತನ್ನ ಒಳಉಡುಪಿನ ಮೇಲಿನ ರಕ್ತದ ಕಲೆಯನ್ನು ಪ್ರದರ್ಶಿಸಿ ತಾನಿನ್ನೂ ಕನ್ಯೆಯಾಗಿದ್ದೆ ಎಂಬುದನ್ನು ಮದುಮಗಳು ಖಾತ್ರಿ ಪಡಿಸಬೇಕಿತ್ತು. ಆ ದೃಶ್ಯ ನೋಡುತ್ತಿದ್ದಂತೆ ನನಗೆ ಕೆ.ಎನ್. ಗಣೇಶಯ್ಯನವರು ತಮ್ಮ ‘ವಿಚಾರಣ’ ಪುಸ್ತಕದಲ್ಲಿ ಬರೆದಿದ್ದ ಒಂದು ವೈಚಾರಿಕ ಲೇಖನ ನೆನಪಾಯ್ತು. “‘ವಿವಾಹ ದೇವತೆ’ಯ ಅರ್ಧಸತ್ಯ ಮತ್ತು ‘ಶೀಲ’ ನಿರೀಕ್ಷೆಯ ದುರಂತ” ಎನ್ನುವ ಶೀರ್ಷಿಕೆಯುಳ್ಳ ಲೇಖನ.

“ಹೆಣ್ಣು ತನ್ನ ಕನ್ಯತ್ವವನ್ನು ಕಳೆದುಕೊಂಡರೆ ಅದನ್ನು ಪರೀಕ್ಷಿಸಿ ಹೇಳಲು ಸಾಧ್ಯವಿದೆ- ಆಕೆಯಲ್ಲಿ ವಿಕಾಸಗೊಂಡಿರುವ ಒಂದು ವಿಶಿಷ್ಟ ಪದರಿನಿಂದಾಗಿ. ಆದರೆ ಗಂಡು ಹುಡುಗರು ಶೀಲ ಕಳೆದುಕೊಂಡಿದ್ದರೆ ಅದನ್ನು ತಿಳಿಯಲು ಸಾಧ್ಯವಿಲ್ಲ. ವಿಕಾಸದ ಹಾದಿಯಲ್ಲೇಕೆ ಈ ತಾರತಮ್ಯ ಹುಟ್ಟಿಕೊಂಡಿದೆ? ಇದು ವಿಕಾಸದುದ್ದಕ್ಕೂ ಹೆಣ್ಣಿನ ಮೇಲೆ, ಗಂಡು ಹೇರುತ್ತಲೆ ಬಂದಿರುವ ನಿಗ್ರಹಗಳ ಸಂಕೇತವೆ? ಅಥವಾ ಗಂಡಿನ ಅಧಿಪತ್ಯದ ಪರಿಣಾಮವಾಗಿ ವಿಕಾಸಗೊಂಡಿರುವ ಗುಣವೆ?” ಎಂದು ಇಬ್ಬರು ಹೆಣ್ಣುಮಕ್ಕಳು ಕೇಳಿದ ಪ್ರಶ್ನೆಗಳಿಗೆ ಗಣೇಶಯ್ಯನವರು ಬರೆದ ವಿಸ್ಮೃತ ಲೇಖನ ಅದು.

ಅದರಲ್ಲಿನ ಕೆಲವು ಮುಖ್ಯ ಸಾಲುಗಳಿವು –

“ಪ್ರಪಂಚದ ಬಹುಪಾಲು ಎಲ್ಲ ಧರ್ಮ ಮತ್ತು ಸಂಸ್ಕೃತಿಗಳಲ್ಲೂ, ಮದುವೆಯಾಗಲಿರುವ ವಧು ಇನ್ನೂ ಕನ್ಯೆಯಾಗಿರಬೇಕು, ತನ್ನ ಶೀಲವನ್ನು ಕಳೆದುಕೊಂಡಿರಬಾರದು ಎಂಬ ಅಲಿಖಿತವಾದ (ಕೆಲ ಧರ್ಮಗಳಲ್ಲಿ ಲಿಖಿತವೂ ಆಗಿರಲು ಸಾಧ್ಯ) ಆದರೆ ಗಂಭೀರವಾದ ಕಟ್ಟುಪಾಡು ಅಥವಾ ಸಾಮಾಜಿಕ ನಿರೀಕ್ಷೆ ಶತಮಾನಗಳಿಂದ ಬೇರೂರಿದೆ. ಕೆಲವು ಸಮಾಜಗಳಲ್ಲಿ ಈ ನಿರೀಕ್ಷೆ ಎಷ್ಟು ಗಾಢವಾಗಿದೆ ಎಂದರೆ, ವರನು ವಿವಾಹದ ನಂತರದ ಮೊದಲರಾತ್ರಿ, ತನ್ನ ವಧು ಅದುವರೆಗೂ ಕನ್ಯೆಯಾಗಿಯೇ ಉಳಿದಿದ್ದಳು ಎಂದು ಇಡೀ ಸಮಾಜಕ್ಕೆ ಧೃಡಪಡಿಸಿಕೊಡುವುದರ ಜೊತೆಗೆ ಆಕೆಯ ಕನ್ಯತ್ವವನ್ನು ತಾನೇ ಮುರಿದೆ ಎಂದು ತನ್ನ ಗಂಡಸುತನವನ್ನು ಘಂಟಾಘೋಷದಿಂದ ಸಾರುವುದಕ್ಕೆ ಪುರಾವೆಯನ್ನೂ ಒದಗಿಸಬೇಕಾಗುತ್ತದೆ- ಮರುದಿನ ಮುಂಜಾನೆ ರಕ್ತಸಿಕ್ತ ಬಟ್ಟೆಯನ್ನು ಈ ಪುರಾವೆಗಾಗಿ ಕಾದು ಕುಳಿತ ಸಂಬಂಧೀಕರತ್ತ ಎಸೆಯುವ ಮೂಲಕ! ಎಲ್ಲ ಸಮುದಾಯಗಳಲ್ಲೂ ಇಂತಹ ಘೋರ, ಅಭಾಸವಾದ ಅಭ್ಯಾಸ ರೂಡಿಯಲ್ಲಿಲ್ಲದಿರಬಹುದು; ಆದರೆ ಮದುವೆಯಾಗುವವರೆಗೆ ವಧು ಕನ್ಯೆಯಾಗಿರಬೇಕೆಂಬ ನಿರೀಕ್ಷೆಯಂತೂ ಬಹುಪಾಲು ಎಲ್ಲ ಮಾನವ ಸಮಾಜಗಳಲ್ಲು ಆಳವಾಗಿ ಬೇರೂರಿದೆ. ಕನ್ಯತ್ವವನ್ನು ಕಾಪಾಡಿಕೊಳ್ಳಬೇಕೆಂಬ ಕಟ್ಟುಪಾಡು ಹೆಣ್ಣಿಗೆ ಮಾತ್ರ ಸೀಮಿತವಾಗಿದ್ದು, ಈ ಅಸಮಾನತೆ ಶತಮಾನಗಳಿಂದ ಆಕೆಗೆ ಮಹಾಶಾಪವಾಗಿಯೇ ಪರಿಣಮಿಸಿದೆ.

ಕನ್ಯತ್ವ ಪರೀಕ್ಷೆ ಸಾಧ್ಯ ಎನ್ನುವ ಕುರುಡು ನಂಬಿಕೆಗೆ ಕಾರಣ ಕನ್ಯೆಯರ ಯೋನಿಯ ಮೇಲಿರುವ ಒಂದು ತೆಳುವಾದ ಪದರು. ಹೈಮೆನ್, ಅಂದರೆ ಗ್ರೀಕ್’ನ ‘ವಿವಾಹ ದೇವತೆ’ಯ ಹೆಸರಿನಿಂದ ಕರೆಯಲ್ಪಡುವ ಈ ಪದರು ಹುಟ್ಟಿನಿಂದಲೇ ಬಂದಿದ್ದು, ಅದು ಛಿದ್ರವಾಗದೆ ಸಂಪೂರ್ಣವಾದ ಪತ್ರದಂತೆ ಯೋನಿಯನ್ನು ಮುಚ್ಚಿಕೊಂಡಿರುತ್ತದೆ ಎಂದೂ, ಮೊಟ್ಟ ಮೊದಲ ಸಂಭೋಗದಲ್ಲಿ, ಅದು ಹರಿದು ರಕ್ತಸ್ರಾವವಾಗುತ್ತದೆ ಎಂದೂ ನಂಬಲಾಗಿದೆ. ಅದನ್ನು ಇನ್ನೂ ಸಂಪೂರ್ಣವಾಗಿಯೇ ಉಳಿಸಿಕೊಂಡಿರುವ ಹೆಣ್ಣುಮಗು ಕನ್ಯೆಯಾಗಿಯೇ ಉಳಿದಿರುವಳೆಂದೂ, ಬದಲಿಗೆ ಅದು ಹರಿದು ಹೋಗಿದ್ದರೆ ಆಕೆ ತನ್ನ ಶೀಲವನ್ನು ಕಳೆದುಕೊಂಡ ಕಲುಷಿತಳೆಂದೂ ಪರಿಗಣಿಸಬೇಕು ಎನ್ನುವುದು ಈ ಪರೀಕ್ಷೆಯ ಮೂಲ ಸಿದ್ಧಾಂತ.

ಅದರಂತೆ ಈ ಪದರಿನ ಸ್ಥಿತಿಯಿಂದಲೇ ಹೆಣ್ಣಿನ ಕನ್ಯತ್ವವನ್ನು ಪರೀಕ್ಷಿಸುವ ಪದ್ಧತಿಗಳು ಅಧಿಕೃತವಾಗಿ ಅಥವಾ ಅನಧಿಕೃತವಾಗಿ ರೂಢಿಗೆ ಬಂದಿವೆ ಹಾಗೂ ಅನೇಕರು ಇದನ್ನು ವೈಜ್ಞಾನಿಕ ಸತ್ಯವೆಂದೇ ನಂಬಿದ್ದಾರೆ. ಆದರೆ ಇದು ಕೇವಲ ಅರ್ಧ ಸತ್ಯ; ಸಂಪೂರ್ಣ ಸತ್ಯವಲ್ಲ. ಮೊದಲನೆಯದಾಗಿ ಈ ಹೈಮೆನ್ ಪೊರೆ ಯೋನಿಯನ್ನು ಸಂಪೂರ್ಣವಾಗಿ ಮುಚ್ಚಿಕೊಂಡಿರುವುದಿಲ್ಲ. ಒಮ್ಮೆ ಯೋಚಿಸಿ, ಹಾಗೆ ಅದು ಸಂಪೂರ್ಣವಾಗಿ ಮುಚ್ಚಿಕೊಂಡಿದ್ದರೆ, ತಿಂಗಳ ಮುಟ್ಟಿನ ಸಮಯದಲ್ಲಿ ಗರ್ಭಕೋಶದಿಂದ ಉಸುರುವ ರಕ್ತ ಮತ್ತು ಅಂಡ ಹೇಗೆ ಹೊರಗೆ ಹರಿದು ಬರಲು ಸಾಧ್ಯ? ವಿಸ್ತೃತವಾದ ಅಧ್ಯಯನದಲ್ಲಿ ತಿಳಿದುಬರುವ ವಿಚಾರವೆಂದರೆ ಅದು ಸಂಪೂರ್ಣವಾದ ಪರದೆಯಲ್ಲ, ಬದಲಿಗೆ ವಡೆಯ ಆಕಾರದ ಅಂಗಾಂಶ ಎಂದು; ಅದರ ಮಧ್ಯದ ರಂಧ್ರ ಅತ್ಯಂತ ಸೂಕ್ಷ್ಮವಾಗಿರುವುದರಿಂದ ಅದು ಸಂಪೂರ್ಣವಾಗಿ ಮುಚ್ಚಿದಂತೆ ಕಾಣುತ್ತದೆ ಅಷ್ಟೆ. ಎರಡನೆಯದಾಗಿ, ಹೈಮೆನ್ ಮೊದಲ ಸಂಭೋಗದವರೆಗೆ ಛಿದ್ರವಾಗದೆ ಸಂಪೂರ್ಣ ಸ್ಥಿತಿಯಲ್ಲಿಯೇ ಇರುತ್ತದೆ, ಸಂಭೋಗದಿಂದ ಮಾತ್ರವೆ ಹರಿದುಹೋಗುತ್ತದೆ ಎನ್ನುವುದೂ ಸತ್ಯವಲ್ಲ. ಆಟವಾಡುವಾಗ, ಕುದುರೆ ಮತ್ತು ಸೈಕಲ್ ಸವಾರಿ ಮಾಡುವಾಗ, ಕೆಲವೊಮ್ಮೆ ಓಡುವಾಗಲೂ ಸಹ ಹೈಮನ್ ಹರಿದು ರಕ್ತಸ್ರಾವವಾಗುವ ಸಾಧ್ಯತೆಗಳಿವೆ ಎಂದೂ ಅಧ್ಯಯನಗಳು ಸ್ಪಷ್ಟಪಡಿಸಿವೆ. ಅಂದರೆ ಹೈಮೆನ್ ಸಂಪೂರ್ಣವಾಗಿದ್ದರೆ ಮಾತ್ರ ಹೆಣ್ಣು ಕನ್ಯೆಯಾಗಿಯೇ ಉಳಿದಿರುತ್ತಾಳೆ ಎನ್ನುವುದು ಕೇವಲ ಅರ್ಧ ಸತ್ಯವಷ್ಟೆ. ಆದ್ದರಿಂದ ಯಾವ ಹೆಣ್ಣೂ ಈ ಕನ್ಯತ್ವದ ಪರೀಕ್ಷೆಯ ಬಗ್ಗೆ ಆತಂಕ ಪಡಬೇಕಿಲ್ಲ.

ಹೈಮೆನ್ ಪೊರೆಯು ಹೆಣ್ಣಿನಲ್ಲಿ ಕನ್ಯತ್ವವನ್ನು ನಿರೀಕ್ಷಿಸುವ ಮಾನವ ಪ್ರಭೇದಕ್ಕೆ ಮಾತ್ರವೇ ಮೀಸಲಾಗಿಲ್ಲ. ಅದು ಆನೆಗಳಲ್ಲಿ, ವೇಲ್’ಗಳಲ್ಲಿ, ಕಾಡುನಾಯಿ ಮತ್ತು ಕುದುರೆಗಳಲ್ಲೂ, ಚಿಂಪಾಂಜಿಗಳಲ್ಲೂ ಇದೆ! ಅಂದರೆ ತಾನು ಕನ್ಯೆ ಎಂದು ಹೆಣ್ಣು ತೋರಿಸಿಕೊಡುವುದಕ್ಕಿಂತಲೂ ಮಿಗಿಲಾದ ಔಚಿತ್ಯ, ಉದ್ದೇಶ, ಈ ಪೊರೆಯ ವಿಕಾಸದ ಹಿಂದೆ ಅಡಗಿದೆ ಎನ್ನಬಹುದು. ಕೆಲವು ಪಂಡಿತರು, ಪ್ರಭೇದದ ಪುನರಾಭಿವೃದ್ಧಿಗೆ ಅತ್ಯಂತ ಪ್ರಾಮುಖ್ಯವಾಗಿರುವ ಗರ್ಭಕೋಶವನ್ನು ಹೊರಗಿನ ಹಾನಿಕಾರಕ ಸೂಕ್ಷ್ಮಜೀವಿಗಳಿಂದ ರಕ್ಷಿಸಲೆಂದೆ ಈ ಹೈಮೆನ್ ವಿಕಾಸಗೊಂಡಿದೆ ಎಂದು ವಾದಿಸಿದ್ದಾರೆ. ಇದಕ್ಕೆ ಪೂರಕವೆನ್ನುವಂತೆ ಕ್ಲಾಮಿಡಿಯ ಎಂಬ ಸೂಕ್ಷ್ಮ ಜೀವಿಯು ಗರ್ಭಕೋಶ ಹೊಕ್ಕರೆ ಹೆಣ್ಣು ಬಂಜೆಯಾಗುವ ಸಾಧ್ಯತೆಯೂ ಇದೆ ಎಂದು ತಿಳಿಯಲಾಗಿದೆ. ಎರಡನೆಯದಾಗಿ, ಹೆಣ್ಣಿನಲ್ಲಿ ಕನ್ಯತ್ವವನ್ನು ನಿರೀಕ್ಷಿಸುವ ಗುಣ ಮಾನವನ ಸಾಂಸ್ಕೃತಿಕ ವಿಕಾಸದ ಪರಿಣಾಮ. ಅಂತಹ ಸಾಂಸ್ಕೃತಿಕ ವಿಕಾಸದ ಪರಿಣಾಮವಾಗಿ ಹೈಮೆನ್’ನಂತಹ ಅಂಗವೇ ವಿಕಾಸವಾಗುವ ಸಾಧ್ಯತೆ ಕಡಿಮೆ. ಮಾನವನನ್ನು ಕೇವಲ ಕೂದಲಿಲ್ಲದ ನಗ್ನ ಮಂಗ (Naked Ape) ಎಂಬ ದೃಷ್ಟಿಕೋನದಿಂದ ಅವಲೋಕಿಸಿದ ಡೆಸ್ಮಂಡ್ ಮಾರಿಸ್ ಅಂತಹ ಸಾಧ್ಯತೆಯ ಬಗ್ಗೆ ಸೂಚಿಸಿದ್ದಾನೆಯಾದರೂ ಅದಕ್ಕೆ ದಟ್ಟ ಪುರಾವೆಯಿಲ್ಲ.”

ಮೇಲಿನ ಗಣೇಶಯ್ಯನವರ ಲೇಖನದಲ್ಲಿರುವಂತೆ, ಆ Third wife ಸಿನಿಮಾ ದೃಶ್ಯದಲ್ಲಿರುವಂತೆ ಕನ್ಯತ್ವ ಪರೀಕ್ಷೆಯದ್ದು ಒಂದು ಕತೆಯಾದರೆ, ಆಫ್ರಿಕಾ ಖಂಡದ ಸೋಮಾಲಿಯಾ ದೇಶದ ಮುಸ್ಲಿಂ ಬುಡಕಟ್ಟು ಜನಾಂಗದವರದ್ದೇ ಇನ್ನೊಂದು ಘೋರ ಕತೆ. ೧೯೯೮ರಲ್ಲಿ ಸೋಮಾಲಿಯಾ ಮೂಲದ ಖ್ಯಾತ ಅಮೇರಿಕನ್ ರೂಪದರ್ಶಿ ವಾರಿಸ್ ಡೀರೀ ತಮ್ಮ ಸಂದರ್ಶನದಲ್ಲಿ, ಅವರ ದೇಶದ ಬುಡಕಟ್ಟು ಸಂಪ್ರದಾಯದಂತೆ ಹೆಣ್ಣುಮಕ್ಕಳಿಗೆ ಬಾಲ್ಯದಲ್ಲಿಯೇ ಯೋನಿ ಛೇದನ ಮಾಡುವಂತಹ ಅಮಾನವೀಯ ಪದ್ಧತಿಯ ಬಗ್ಗೆ ತಿಳಿಸಿ ಇಡೀ ಜಗತ್ತನ್ನೇ ಬೆಚ್ಚಿ ಬೀಳಿಸುತ್ತಾರೆ. ಯೋನಿಯ ಹೊರಭಾಗವನ್ನು ಕತ್ತರಿಸಿ ಕೇವಲ ಮೂತ್ರ ವಿಸರ್ಜಿಸಲು ಚೂರು ಜಾಗ ಬಿಟ್ಟು ಮಿಕ್ಕಿದೆಲ್ಲವನ್ನು ಹೊಲಿದು ಬಿಡುವ ಕ್ರೂರ ಪದ್ಧತಿ FGM (Female Genital Mutilation). ಹೆಣ್ಣುಮಕ್ಕಳು ಮದುವೆಯಾಗುವವರೆಗೂ ಕನ್ಯೆಯಾಗಿರಬೇಕು, ಮದುವೆಯಾಗಬೇಕೆಂದರೆ ಕಡ್ಡಾಯವಾಗಿ ಈ ಯೋನಿ ಛೇದನ ಪದ್ದತಿಯನ್ನು ಅಳವಡಿಸಿಕೊಂಡಿರಲೇಬೇಕು ಎಂದು ಅಲ್ಲಿನ ಪುರುಷ ಪ್ರಧಾನ ಸಮಾಜ ಸಹಸ್ರಾರು ವರ್ಷಗಳಿಂದ ಹೆಣ್ಣಿನ ಮೇಲೆ ಬಲವಂತದಿಂದ ಹೇರಿರುವ ಅನಿಷ್ಟ ಪದ್ದತಿ ಇದು. ಅದುವರೆಗೂ ಹೊರ ಜಗತ್ತಿಗೆ ತಿಳಿಯದಂತಿದ್ದ ಈ ಸಂಗತಿ ಸ್ವತಃ ಆ ಪದ್ಧತಿಗೆ ಬಲಿಯಾಗಿದ್ದ ವಾರೀಸ್ ಡೀರೀ ಅವರ ಸಂದರ್ಶನದಿಂದ, ಅವರ ‘Desert Flower’ ಆತ್ಮಕತೆಯಿಂದ ಬೆಳಕಿಗೆ ಬಂದು ವಿಶ್ವಸಂಸ್ಥೆ ಆಫ್ರಿಕಾದಲ್ಲಿ ಹೆಣ್ಣುಮಕ್ಕಳ ಮೇಲೆ ನಡೆಯುತ್ತಿದ್ದ ಬರ್ಬರ ಯೋನಿ ಛೇದನ ಕ್ರಿಯೆ ಕುರಿತು ಅರಿವು ಮೂಡಿಸಲು ಹಮ್ಮಿಕೊಂಡ ಜಾಗೃತಿ ಆಂದೋಲನಕ್ಕೆ ಮುಂದೆ ಇವರನ್ನೇ ರಾಯಭಾರಿಯಾಗಿಸುತ್ತಾರೆ. ಅವರ Desert Flower ಆತ್ಮಕತೆಯನ್ನು ಆಧರಿಸಿ ಅದೇ ಹೆಸರಿನ ಸಿನಿಮಾ ಕೂಡ ಬಂದಿದೆ. ಕನ್ನಡದಲ್ಲಿ ‘ಮರುಭೂಮಿಯ ಹೂ’ ಎಂಬ ಹೆಸರಿನಲ್ಲಿ ಜಗದೀಶ್ ಕೊಪ್ಪ ಅವರಿಂದ ಈ ಕೃತಿ ಅನುವಾದಗೊಂಡಿದೆ.

ನಮ್ಮ ಕನ್ನಡದಲ್ಲಿ ಲೇಖಕಿ ನೇಮಿಚಂದ್ರ ಅವರು ಮೂವತ್ತು ವರ್ಷಗಳ ಹಿಂದೆಯೇ, ೧೯೮೫ರಲ್ಲಿ ಬರೆದ “ನನ್ನದಲ್ಲದ ಬದುಕಿಗಾಗಿ” ಎನ್ನುವ ಕತೆ ಇದೇ ಕನ್ಯತ್ವದ ಕಥಾವಸ್ತುವಿನಿಂದಾಗಿ ವಿಶೇಷವಾದುದು.

ಮದುವೆಯಾಗಿ ಎರಡೇ ತಿಂಗಳಿಗೆ ಗಂಡನನ್ನು ಕಳೆದುಕೊಂಡ ಸರೂವಿಗೆ ಸಾಕಷ್ಟು ಪ್ರಯತ್ನದ ನಂತರ ಹೆರಿಗೆಯಲ್ಲಿ ತಾಯಿ ಮಗು ಇಬ್ಬರೂ ತೀರಿಹೋದ ಮತ್ತೊಬ್ಬ ಇಂಜಿನಿಯರ್ ಗಂಡು ಮರುಮದುವೆಯಾಗಲು ಮುಂದೆ ಬರುತ್ತಾನೆ. ಮದುವೆಯಾಗಿದ್ದರೂ ಸಹ ಸರೂವಿಗೆ ಅವಳ ಗಂಡನೊಂದಿಗೆ ಪ್ರಸ್ತದ ಶಾಸ್ತ್ರವಾಗದೆ ಅವಳಿನ್ನೂ ಕನ್ಯೆಯಾಗಿಯೇ ಉಳಿದಿರುವಳೆಂಬ ಕಾರಣಕ್ಕೆ ನಾವೀ ಮರುಮದುವೆಗೆ ದೊಡ್ಡ ಮನಸ್ಸು ಮಾಡಿ ಒಪ್ಪಿದೆವೆಂದು ವರನ ಮನೆಯವರು ತಿಳಿಸುತ್ತಾರೆ. ಹೇಗೋ ಸರೂವಿಗೆ ಮತ್ತೊಂದು ಹೊಸ ಜೀವನ ಸಿಗುವುದಲ್ಲ ಎಂದು ಅವಳ ಮನೆಯವರು ಸಂತೋಷ ಪಡುತ್ತಾರೆ. ಆದರೆ ಸರೂ ಮಾತ್ರ ಪ್ರಸ್ತದ ಶಾಸ್ತ್ರವಾಗುವ ಮುಂಚೆಯೇ ಗಂಡನೊಂದಿಗೆ ಏಕಾಂತದಲ್ಲಿದ್ದಾಗ ಆತ ದುಡುಕಿ ಸೇರಿದ ಪರಿಣಾಮ ಈಗಾಗಲೇ ಕಳೆದುಕೊಂಡ ತನ್ನ ಕನ್ಯತ್ವದ ವಿಚಾರ ಮರುಮದುವೆಯಾದ ಮೇಲೆ ಆ ಸಂಪ್ರದಾಯಸ್ಥರಿಗೆಲ್ಲಾ ತಿಳಿದರೆ ಏನು ಮಾಡುವುದೆಂದು ಕಳವಳಗೊಳ್ಳುತ್ತಾಳೆ. ಮರುಮದುವೆಯಾಗಲು ಒಪ್ಪಿಕೊಂಡ ಗಂಡು ಕೂಡ ಒಮ್ಮೆ ವಿವಾಹವಾದವನಾದ್ದರಿಂದ ಆತನಿಗೆ ಹೆಣ್ಣು ಕನ್ಯತ್ವ ಕಳೆದುಕೊಳ್ಳುವಾಗಿನ ಅನುಭವ ಗೊತ್ತಿದ್ದೇ ಇರುತ್ತದೆಂದು ತನ್ನ ಅಳಲನ್ನು ಬ್ಯಾಂಕ್ ಸಹೋದ್ಯೋಗಿ ಗೆಳತಿಯಲ್ಲಿ ತೋಡಿಕೊಂಡಾಗ, ಈ ಮರುಮದುವೆಯಿಂದ ನಿನ್ನ ಬದುಕು ಸುಖವಾಗುತ್ತೆ ಅನ್ನೋ ಭರವಸೆ ನಿನಗಿದ್ರೆ ಇದಕ್ಕೊಂದು ದಾರಿಯಿದೆಯೆಂದು ಸೂಚಿಸುತ್ತಾಳೆ. ಇಂಥ ಕೇಸ್’ಗಳಿಗೆಲ್ಲ ಈಗ ಪರಿಹಾರ ಇದೆ. ಹರಿದು ಹೋದ ಕನ್ಯಾಪೊರೆಯನ್ನು ಮತ್ತೆ ಮೊದಲಿನ ಹಾಗೆ ಸರಿಪಡಿಸಬಹುದು. ಇದಕ್ಕೆ ಹೈಮನೋಪ್ಲಾಸ್ಟಿ (Hymenoplasty) ಅಂತಾರೆ. ಮುಂಬೈನಲ್ಲಿ ಈ ಸರ್ಜರಿ ಮಾಡುವ ಡಾಕ್ಟರೊಬ್ಬರಿದ್ದಾರೆ; ಅವರ ಬಳಿ ಹೋಗಿ ಮೊದಲಿನ ಹಾಗೆ ಕನ್ಯಾಪೊರೆ ಸರಿಪಡಿಸಿಕೊಂಡು ಬರೋಣವೆಂದು ಪರಿಹಾರ ಸೂಚಿಸುತ್ತಾಳೆ. ಸರೂ ಮೊದಲಿಗೆ ಅಳುಕಿದಾಗ, ‘ಇದು ಮೂವತ್ತು ವರ್ಷದ ಹಿಂದೆಯೇ ಜಪಾನಿನಲ್ಲಿ ಜಾರಿಗೆ ಬಂತು. ಎರಡನೆ ಮಹಾಯುದ್ಧದಲ್ಲಿ ಎಳೆ ಹುಡುಗಿಯರ ಮೇಲೆ ಅತ್ಯಾಚಾರವಾಗಿ ಅವರ ಭವಿಷ್ಯವೆಲ್ಲ ಬರಿದಾಗೋ ಸ್ಥಿತಿಯಲ್ಲಿ ಜಾರಿಗೆ ಬಂದ ಜಾಣ ಚಿಕಿತ್ಸೆ ಇದು’ ಎಂದು ಹೇಳಿ ಗೆಳತಿ ಧೈರ್ಯ ತುಂಬುತ್ತಾಳೆ.

ಸರಿಯೆಂದು ಇಬ್ಬರೂ ಮುಂಬೈಗೆ ತೆರಳಿ ಡಾಕ್ಟರನ್ನು ಭೇಟಿಯಾಗುತ್ತಾರೆ. ಸರೂವಿನ ಪ್ರವರವೆಲ್ಲಾ ಕೇಳಿ ತಿಳಿದ ನಂತರ ಡಾಕ್ಟರ್ “ಬೇರೆ ಯಾವುದೇ ಆಪರೇಶನ್’ಗೆ ನಾನು ಎರಡು ಬಾರಿ ಯೋಚಿಸದೆ ಸರಿ ಅಂತ ಮುಗಿಸ್ತಾ ಇದ್ದೆ. ಇದು ಹಾಗಲ್ಲ. ತೀರ ಸೂಕ್ಷ್ಮವಾದದ್ದು ಹಾಗೂ ಒಂದು ರೀತಿ ವ್ಯರ್ಥಶ್ರಮದ ಆಪರೇಶನ್. ನನ್ನ ದೃಷ್ಟಿಯಲ್ಲಿ ಈ ಕನ್ಯತ್ವಾನ ಮತ್ತೊಮ್ಮೆ ಹೊಲಿದು ಪ್ರತಿಷ್ಠಾಪಿಸೋ ಈ ಆಪರೇಶನ್ ತೀರ ಅಸಹ್ಯ ಅಷ್ಟೇ ಅಲ್ಲ, ಅನಾವಶ್ಯಕ ಕೂಡ. ಒಂದು ತೆಳು ಪರದೆಯ ಮೇಲೆ ನಮ್ಮ ಇಂದಿನ ವಿವಾಹಗಳು ನಿಂತಿವೆಯಲ್ಲ, ನಗು ಬರುತ್ತೆ. ಆಟ, ಓಟ ಅಂತ ಲವಲವಿಕೆಯಿಂದಿರೋ ಇಂದಿನ ಜನಾಂಗದಲ್ಲಿ ಕನ್ಯತ್ವ ಯಾವುದೇ ಕಾರಣಕ್ಕೂ ಕಳಚಿ ಹೋಗಬಹುದು. ಇದನ್ನೇ ಮುಖ್ಯ ಮಾಡೋ ನಮ್ಮ ಯೋಚನೆಗಳು, ಮೌಲ್ಯಗಳು ಬದಲಾಗಬೇಕಲ್ಲವೆ? ಗಂಡಿಗಿಲ್ಲದ ಈ ಬಗೆಯ ಶೀಲದ ಹೊರೆ ಹೆಣ್ಣಿಗೇಕೆ ಬರಬೇಕು? ನಾನು ಹೆಚ್ಚು ಈ ಮಿಡಲ್-ಈಸ್ಟ್ ದೇಶಗಳಿಂದ ಬಂದ ಹುಡುಗಿಯರಿಗೆ ಆಪರೇಶನ್ ಮಾಡ್ತೇನೆ. ಅವರ ತಂದೆ ತಾಯಿಗಳೇ ಕರೆ ತರ್ತಾರೆ. ಅವರಲ್ಲಿ ಕನ್ಯತ್ವ ಎಷ್ಟು ಮುಖ್ಯವಾಗಿದೆ ಅಂದರೆ ಕನ್ಯೆಯಿಲ್ಲದ ಹೆಣ್ಣನ್ನು ಕೊಲ್ಲಲೂ ಹಿಂಜರಿಯೋಲ್ಲ. ಅಂತ ಪರಿಸ್ಥಿತಿಲೀ, ಹಾಳಾಗಲಿ ಹುಡುಗಿ ಬದುಕಲಿ ಅಂತ ಮಾಡಿ ಕಳಿಸ್ತೇನೆ. ಆದರೆ ನಿಮ್ಮಂತೆ ಓದಿದೋರಿಗೆ, ಕೆಲಸದಲ್ಲಿದ್ದು ಆರ್ಥಿಕವಾಗಿ ಸಬಲರಾಗಿರೋರಿಗೆ, ಮದುವೆಯಾಗಿ ಮದುವೆಯ ಪವಿತ್ರ ಬಂಧನದಲ್ಲೇ ತನ್ನ ಕನ್ಯತ್ವವನ್ನು ಅರ್ಪಿಸಿಕೊಂಡಿರೋರಿಗೆ ಈ ಕ್ಷುಲ್ಲಕ ಚಿಕಿತ್ಸೆ ಹೇಳೋಕ್ಕೆ ಇಷ್ಟಪಡೋಲ್ಲ. ಯಾರಾದ್ರೂ ಮುಖ ಸುಟ್ಟುಕೊಂಡು ಬಂದಿದ್ದರೆ, ನಾನು ಖುಷಿಯಿಂದ ಪ್ಲಾಸ್ಟಿಕ್ ಸರ್ಜರಿ ಮಾಡ್ತಾ ಇದ್ದೆ. ಪ್ರಕೃತಿಯ ವಕ್ರತೇನ ತಿದ್ದಿ ನುಣುಪಾಗಿಸಿ ಸೌಂದರ್ಯದ ಜೊತೆಗೆ ಆತ್ಮವಿಶ್ವಾಸ ತುಂಬಿದ ಖುಷಿ ಸಿಗುತ್ತೆ. ಆದ್ರೆ ಈ ಸ್ಟುಪಿಡ್ ಆಪರೇಶನ್ ನೋಡಿ. ಏತಕ್ಕೆ? ಅಲ್ಲ ಗಂಡನ್ನ ಖುಷಿ ಇಡಲು ಇಷ್ಟೆಲ್ಲಾ ತಾಪತ್ರಯಗಳ ಹೊರ್ತೀರಲ್ಲ! ಇಂದು ನಾನು ತೇಪೆ ಹಾಕುವುದು ನಾಳೆ ಮತ್ತೆ ಹರಿಯುವುದಕ್ಕೆ. ಇಂಥವುಗಳಿಂದ ನಿಮ್ಮನ್ನು ನೀವೇ ಗಂಡಿನ ತಾಳಕ್ಕೆ ಕುಣಿವ ಗೊಂಬೆ ಮಾಡಿಕೊಳ್ತಾ ಇದ್ದೀರ. ನಿಮ್ಮನ್ನು ನೀವು ಮೋಸಪಡಿಸಿಕೊಳ್ಳೋದಲ್ದೆ ಒಬ್ಬ ಗಂಡಿಗೂ ಮೋಸ ಮಾಡ್ತಾ ಇದ್ದೀರ. ಬರೀ ಗಂಡಿನ ನಿರೀಕ್ಷೆಗೆ, ತೃಪ್ತಿಗೆ ಹೆಣ್ಣೇಕೆ ಇಷ್ಟು ಅಡಿಯಾಳಾಗ್ತಾ ಇದ್ದಾಳೆ ಅಂತ ದುಃಖವಾಗುತ್ತೆ. ನೀವು ಓದಿರೋರು, ಯೋಚಿಸಬಲ್ಲಂಥವರು. ವಿಷಯ ಹೀಗೆ ಎಂದು ಧೈರ್ಯವಾಗಿ ಎದುರಿಸಬಹುದು. ಗಂಡಿಗೊಂದು, ಹೆಣ್ಣಿಗೊಂದು ಮಾಡಿರುವ ಈ ದ್ವಂದ್ವ ನ್ಯಾಯಾನ ಪ್ರಶ್ನಿಸಬೇಕು. ಅಂಥಾ ಮುಠ್ಠಾಳನಾದ್ರೆ ಬೇಡ ಅಂತಾನೆ. ಆದ್ರೂ ಈ ಮದುವೆಯಲ್ಲೆ ಬದುಕಿನ ಸರ್ವ ಸುಖವೂ ಇದೇ ಅಂತ ನೀವು ತಿಳಿಯೋದೇಕೆ?”ಎಂದು ವಿವರವಾಗಿ ಬುದ್ಧಿ ಹೇಳುತ್ತಾರೆ. ಆದರೆ ಸರೂ, ‘ಈ ಮದುವೆ ತೀರಾ ಅಗತ್ಯವಿದೆ ನನಗೆ, ನನ್ನ ಮನಸ್ಸು ಬದಲಿಸಲು ಪ್ರಯತ್ನಿಸಬೇಡಿ. ದಯವಿಟ್ಟು ಮಾಡಿ.” ಎಂದು ಬೇಡಿಕೊಂಡಾಗ ಡಾಕ್ಟರ್ ನಿರ್ವಾಹವಿಲ್ಲದೆ ಸರ್ಜರಿಗೆ ನಾಳೆ ಬರಲು ಹೇಳಿ ಕಳಿಸುತ್ತಾರೆ.

ಸಂಜೆ ಇಬ್ಬರೂ ಸಮುದ್ರದ ದಂಡೆಯಲ್ಲಿ ಕುಳಿತಾಗ ಡಾಕ್ಟರ್ ಹೇಳಿದ ಮಾತುಗಳನ್ನೆಲ್ಲಾ ಸರೂ ಇನ್ನೊಮ್ಮೆ ಮನನ ಮಾಡಿಕೊಳ್ಳುತ್ತಾಳೆ. ‘ನನಗೆ ಎಂದೂ ‘ನನ್ನ ಇಷ್ಟ’ ಅನ್ನುವುದಕ್ಕೆ ಅವಕಾಶವೇ ಇರಲಿಲ್ಲವಲ್ಲ. ಅಮ್ಮ ಅಪ್ಪನ ಖುಷಿಗೆ ಆಟದಲ್ಲಿದ್ದ ಅಗಾಧ ಆಸಕ್ತಿಗೆ ತಿಲಾಂಜಲಿ ಇಟ್ಟೆ. ಜೊತೆಯವರು ಸ್ಕರ್ಟ್ ತೊಟ್ಟು ಇನ್ನು ಬಾಲ್ಯದಲ್ಲಿರುವಾಗಲೇ ನಾನು ಸೀರೆ ಹೊದ್ದು ಪ್ರಬುದ್ಧಳಾದೆ. ಅಪ್ಪ ಒಪ್ಪಿದ ಗಂಡಿನೊಂದಿಗೆ ಎರಡು ಮಾತಿಲ್ಲದೆ ತಾಳಿ ಬಿಗಿಸಿಕೊಂಡೆ. ಕಟ್ಟಿಕೊಂಡ ಗಂಡ ಸಿಕ್ಕ ಮೊದಲ ಅವಕಾಶದಲ್ಲೇ, ಕೈ ಹಾಕಿದಾಗ ಪ್ರತಿಭಟಿಸದೇ ನನಗೆ ನೋವೋ-ನಲಿವೋ ಒಪ್ಪಿಸಿಕೊಂಡೆ. ಈಗ ಮತ್ತೊಬ್ಬ ಗಂಡ, ಮತ್ತೊಂದು ಮನೆ, ಜನ…ಅವರೆಲ್ಲರ ‘ಸರಿ’ಗಳಿಗೆ ಬೇಸರವಾಗದೆ ಬೆಸೆಯಲು ಇಂಥ ನಾಚಿಕೆಗೇಡಿನ ಆಪರೇಶನ್’ಗೂ ಸಿದ್ಧಳಾಗಿ ನಿಂತಿದ್ದೇನೆ. ನಾನೆಂದೂ ನಾನಾಗಿ, ನನಗಾಗಿ ಬದುಕಲೇ ಇಲ್ಲ. ಇತರರ ಖುಷಿಯ ಉಬ್ಬರಗಳನ್ನು ದೂರದಿಂದ ಕಂಡು ತೃಪ್ತಿಗೊಂಡೆ. ನನ್ನ ಖುಷಿ ಅವರದಾಗಿರದಿದ್ದರೂ, ಅವರ ಖುಷಿ ನನ್ನದೆಂದು ನಂಬಿ ಮೋಸಗೊಂಡೆ” ಎಂದು ಯೋಚಿಸುತ್ತಾಳೆ. ತನ್ನ ರೂಪ ಗುಣ ವಿದ್ಯೆ ಉದ್ಯೋಗ ಕಸೂತಿ..ಒಳಹೊರಗಿನ ಪ್ರತಿಭೆಗಿಂತಲೂ ಕೇವಲ ತಾನು ಕನ್ಯೆ ಎನ್ನುವ ಕಾರಣಕ್ಕೆ ಮದುವೆಯಾಗಲು ಒಪ್ಪಿಕೊಂಡವರ ಮೇಲೆ ಜಿಗುಪ್ಸೆ ಮೂಡುತ್ತದೆ. ತನ್ನ ಆತ್ಮಸಾಕ್ಷಿಗೆ ವಿರುದ್ಧವಾಗಿ ಈ ಸರ್ಜರಿ ಮಾಡಿಸಿಕೊಳ್ಳುವುದು ಬೇಡವೆಂದು ಧೃಡ ನಿರ್ಧಾರ ಮಾಡಿ
ಗೆಳತಿಗೆ ‘ನಾಳೆನೇ ಬೆಂಗಳೂರಿಗೆ ಹೋಗಿ ಬಿಡೋಣ’ವೆಂದು ಹೇಳುವಲ್ಲಿಗೆ ಕತೆ ಮುಕ್ತಾಯವಾಗುತ್ತದೆ.

ವಾಸ್ತವದಲ್ಲಿ ಏನೇ ಆಗಿದ್ದರೂ, ಕನಿಷ್ಠ ಈ ಕತೆಯಲ್ಲಾದರೂ ನಾಯಕಿ ಕನ್ಯತ್ವವನ್ನು ಧಿಕ್ಕರಿಸಿ ಸ್ವಾವಲಂಬಿಯಾಗಿ ಬದುಕಲು ಹೊರಡುವ ಅವಳ ಆತ್ಮವಿಶ್ವಾಸವನ್ನು ಶ್ಲಾಘಿಸಲೇಬೇಕೆಂದೆನಿಸುತ್ತದೆ.

ಎಸ್.ಎಲ್. ಭೈರಪ್ಪನವರ ‘ಗ್ರಹಣ’ ಕಾದಂಬರಿಯಲ್ಲಿ ಸ್ವಾಮಿ ಮತ್ತು ಸರೋಜ ಒಂದಾಗುವ ದೃಶ್ಯದಲ್ಲಿ ಪ್ರಥಮ ಸಮಾಗಮದ ನೋವಿನ ಕಾರಣ ಮನಸ್ಸಿಗೆ ಹೊಳೆದಾಗ ಸರೋಜ ತನ್ನ ಸ್ವಗತದಲ್ಲಿ “ಇದುವರೆಗೆ ಮುಚ್ಚಿದ್ದ ಪೊರೆ ಹರಿದಿದೆ; ರಕ್ತಸ್ರಾವವಾಗಿರಬಹುದು. ಆದರೆ ಅದರಿಂದ ಯಾವ ತೊಂದರೆಯೂ ಇಲ್ಲ. ಪೊರೆ ಹರಿಯದೆ ಪೂರ್ಣ ಏಕತೆ, ಸ್ಪಷ್ಟ ಅರಿವು ಹೇಗೆ ಹುಟ್ಟೀತು?” ಎಂದು ಯೋಚಿಸುತ್ತಾಳೆ. ಈ ಕೊನೆ ಸಾಲಿನ ಅರ್ಥದಂತೆ ನಾವು ನಂಬಿಕೊಂಡು ಬಂದ ನಮ್ಮ ಪೂರ್ವಾಗ್ರಹದ ಪೊರೆಗಳಿಂದ ಕಳಚಿಕೊಳ್ಳದೆ ಯಾವುದೇ ವಿಷಯದಲ್ಲಿ ಪೂರ್ಣ ಏಕತೆ, ಸ್ಪಷ್ಟ ಅರಿವು ದಕ್ಕುವುದಿಲ್ಲ ಎನ್ನುವುದಂತೂ ಸತ್ಯ.

“ಭೌತಿಕ ಶುದ್ಧತೆಗೂ ಮಿಗಿಲಾಗಿ ಮಾನಸಿಕ ಶುದ್ಧತೆಯನ್ನಾಧರಿಸಿ ವ್ಯಾಖ್ಯಾನಿಸಿದರೆ ಬಹುಶಃ ಯಾವ ಗಂಡೂ ಮದುವೆಗೆ ಮುನ್ನ ತನ್ನ ಶೀಲವನ್ನು ಉಳಿಸಿಕೊಂಡಿರಲು ಸಾಧ್ಯವಿಲ್ಲವೇನೋ! ಕಾರಣ ಆತ ಅದಿನ್ನೆಂತಹ ಕಲ್ಪನಾ ಲೋಕಗಳಲ್ಲಿ ಮಿಂದೆದ್ದು ತೇಲಿ ಅದೆಷ್ಟು ಭಾರಿ ಶೀಲವಧೆ ಮಾಡಿಕೊಳ್ಳುವನೋ! ಅವನ ಕಾಲ್ಪನಿಕ ಕಾಮಲೋಕಕ್ಕೊಂದು ಕಿಟಕಿ ಇದ್ದರೆ, ಅವನ (ಅ) ಪಾವಿತ್ರತೆ ಅದೆಷ್ಟು ಹೊಲಸು ಎಂಬ ಸತ್ಯ ಹೊರಬಿದ್ದೀತು.” ಎಂದು ಕೊನೆಗೆ ಗಣೇಶಯ್ಯನವರು ತಮ್ಮ ಲೇಖನವನ್ನು ಮುಗಿಸುತ್ತಾರೆ. ಮೀಸೆ ಹೊತ್ತ ಪ್ರತಿ ಗಂಡಸೂ ತನ್ನ ಮನಸ್ಸನ್ನು ಕೇಳಿಕೊಳ್ಳಬೇಕಾದ ಪ್ರಶ್ನೆಯಿದು. ಕಾಲ ಬದಲಾಗಿದೆ; ಬದಲಾಗುತ್ತಿದೆ. ಇನ್ನು ಮುಂದಾದರೂ ಹೆಣ್ಣು ತನ್ನ ಕನ್ಯಾಪೊರೆ ಯಾವಾಗ ಯಾರಿಂದ ಕಳೆದುಕೊಳ್ಳಬೇಕೆಂಬ ಅವಳ ವೈಯಕ್ತಿಕ ಸ್ವಾತಂತ್ರ್ಯ ಅವಳಿಗೆ ದಕ್ಕಬೇಕಿದೆ.


  • ಪ್ರಶಾಂತ ಸಾಗರ

1 1 vote
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW