ಮೈಸೂರ ನಟರಾಜ ಕೃತಿ ಪರಿಚಯ

ಮೈಸೂರ ನಟರಾಜ ಅವರ  The Void and The womb ಕೃತಿ ಕುರಿತು ಲೇಖಕರಾದ ರಘುನಾಥ್ ಕೃಷ್ಣಮಾಚಾರ್ ಅವರು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ… 

ಕುಸುಮಾಕರ ದೇವರ ಗೆಣ್ಣೂರ ಅವರ ‘ಬಯಲು ಬಸಿರು’ ಕಾದಂಬರಿಯನ್ನು ಅಮೆರಿಕದಲ್ಲಿ ನೆಲಸಿರುವ ಲೇಖಕರು, ಮೇಲಿನ ಶೀರ್ಷಿಕೆಯಲ್ಲಿ ಇಂಗ್ಲಿಷ್ ನಲ್ಲಿ ಅನುವಾದ ಮಾಡುವ ಮೂಲಕ ಅದನ್ನು ಲೋಕಮುಖಿಯಾಗಿಸಿದ್ದಾರೆ. ಕನ್ನಡದ ಅತ್ಯಂತ ವಿಶಿಷ್ಠವಾದ ಲೇಖಕರಲ್ಲಿ ಒಬ್ಬರು ಕುಸುಮಾಕರರು. ಅವರ ಕಾದಂಬರಿಗಳು ಇಲ್ಲಿಯವರೆಗಿನ ಕನ್ನಡ ಕಾದಂಬರಿ ಪರಂಪರೆಗಿಂತ ಭಿನ್ನವಾಗಿವೆ. ಅದಕ್ಕೆ ಬಹುಶಃ ಅವರು ಕರ್ನಾಟಕದ ಹೊರಗೆ ನೆಲೆನಿಂತದ್ದೆ ಕಾರಣ ಇರಬಹುದು. ಹಾಗೆ ನೋಡಿದರೆ ಅವರ ಸಮಕಾಲೀನರಾದ ಶಾಂತಿನಾಥ ದೇಸಾಯಿಯವರು, ಯಶವಂತ ಚಿತ್ತಾಲರು ಕೂಡ ಕರ್ನಾಟಕದ ಹೊರಗೆ ನಿಂತು ಬರೆದವರು. ಆದರೆ ಅವರು ಕನ್ನಡದ ನವ್ಯ ಸಾಹಿತ್ಯ ಚಳವಳಿಯೊಂದಿಗೆ ಗಾಢವಾದ ಸಂಪರ್ಕ ಇರಿಸಿಕೊಂಡವರು. ಆದರೆ ಕುಸುಮಾಕರರು ತಮ್ಮನ್ನು ಯಾವುದೇ ಚಳವಳಿಯೊಂದಿಗೆ ಗುರುತಿಸಿಕೊಳ್ಳಲಿಲ್ಲ. ಸ್ವತಃ ಕನ್ನಡ ಪ್ರಾಧ್ಯಾಪಕರಾಗಿದ್ದರು ಕೂಡ. ಅವರು ಬಹುತೇಕ ಸಾಹಿತ್ಯಕ್ಕಿಂತ ಹೆಚ್ಚು ಮನಃಶಾಸ್ತ್ರ ಹಾಗೂ ತತ್ವ ಮೀಮಾಂಸೆಯಿಂದ ಪ್ರಭಾವಿತರಾದವರು. ಆದ್ದರಿಂದಲೆ ಅವರ ಕಾದಂಬರಿಗಳನ್ನು ಗ್ರಹಿಸಲು ಮೇಲಿನ ಶಿಸ್ತುಗಳ ಗ್ರಹಿಕೆ ಅನಿವಾರ್ಯ. ಅದರಲ್ಲೂ ಅಬ್ರಹಾಂ ಮಾಸ್ಲೋನ ಆತ್ಮಸಾಕ್ಷಾತ್ಕಾರ ಸಿದ್ಧಾಂತದ ಅರಿವು ಅಗತ್ಯ. ಇದರ ಜತೆಗೆ ಸಮಕಾಲೀನ ವಿಶ್ವದ ಜಾಗತಿಕ ಪಲ್ಲಟಗಳ ಅರಿವು ಕೂಡ.

ಅವನ ಹುಡುಕಾಟದಲ್ಲಿ ಒಂದು ಆಶ್ರಮ ತಲುಪುತ್ತಾನೆ. ಅದು ಬಾಗಿಲು ಮುಚ್ಚಿರುತ್ತದೆ. ಅವನು ಹಸಿವು ಬಾಯಾರಿಕೆಗಳೊಂದಿಗೆ ಬಸವಳಿದು ಬಿದ್ದು ಬೆಳಿಗ್ಗೆ ಎದ್ದಾಗ ಆಶ್ರಮದ ಬಾಗಿಲು ತೆರೆಯುತ್ತದೆ. ಅಲ್ಲಿನ ಶಿಷ್ಯರು ಅವನನ್ನು ಕರೆದುಕೊಂಡು ಹೋಗಿ ಅವನಿಗೆ ಹಸಿವು ಬಾಯಾರಿಕೆಗಳನ್ನು ನೀಗಿಸುತ್ತಾರೆ. ( ಮೂಲಭೂತ ಅಗತ್ಯಗಳ ಪೂರೈಕೆ) ನಂತರ ಒಂದು ಚೀಟಿಯನ್ನು ಅವನಿಗೆ ಕೊಡುತ್ತಾರೆ. ಅದರಲ್ಲಿ ಇದ್ದ “ನಿನ್ನ ಜೀವನದ ಉದ್ದೇಶ ಏನು” ಎಂಬ ಪ್ರಶ್ನೆಗೆ ಅವನಿಂದ ಉತ್ತರ ನಿರೀಕ್ಷೆ ಮಾಡುತ್ತಾರೆ. ಮೂರು ನಾಲ್ಕು ದಿನಗಳ ನಂತರ ಅವನಿಗೆ “ನಾನೊಂದು ಮಗು ನನಗೆ ಏನೂ ತಿಳಿಯದು. ನೀವು ಕೈಹಿಡಿದು ನಡೆಸಬೇಕು” ಎಂದು ಉತ್ತರ ಕೊಡಲು ಸಾಧ್ಯವಾಗುತ್ತದೆ. ಅವನಿಗೆ ಗುರುಗಳ ಭೇಟಿಯ ಅವಕಾಶ ದೊರೆಯುತ್ತದೆ. ಅವರು ಅವನನ್ನು ಕತ್ತಲಕೋಣೆಯಲ್ಲಿ ನೆಲಮಾಳಿಗೆಯಲ್ಲಿ ಇರಲು ಸೂಚಿಸುತ್ತಾರೆ. ಹೊರಗೆ ಬಯಲಿಗೆ ಹೆದರಿದ ಅವನು ಈ ಕತ್ತಲಿನ ಏಕಾಂಗಿತನಕ್ಕೆ ವಿಹ್ವಲನಾಗುತ್ತಾನೆ. ತನ್ನ ಇಡೀ ಜೀವನ ತನ್ನ ಕಣ್ಣಮುಂದೆ ಹಾಯುತ್ತದೆ. ಅಮೆರಿಕಾವನ್ನು ಬಿಟ್ಟು ಬಂದ ಅವನಿಗೆ ತಾನು ಬುದ್ಧ ಎಂಬ ಭಾವನೆ ಮೂಡುತ್ತದೆ. (ಆತ್ಮ ಸಾಕ್ಷಾತ್ಕಾರ) ಏಳು ದಿನಗಳ ನಂತರ ಹೊರಗೆ ಬಂದು ಆಶ್ರಮದಿಂದ ಹೊರಬಂದು ತನ್ನದೆ ಆಶ್ರಮ ಸ್ಥಾಪಿಸಿ ಅನಿಕೇತನಾನಂದನಾಗುತ್ತಾನೆ.

ಅಲ್ಲಿಗೆ ಬಂದ ವಿಜಯಾನಂದ ಎಂಬುವನು ತನ್ನ ಚಾಕಚಾಕ್ಯತೆಯಿಂದ ಗುರುವಿನ ಹೆಸರನ್ನು ಬಳಸಿಕೊಂಡು ಆಶ್ರಮವನ್ನು ಬೆಳೆಸುತ್ತಾನೆ. ಅವನ ಬೆಳವಣಿಗೆ ಅನಿಕೇತಾನಂದ (ನಾರ್ಮನ್) ಗೆ ಹೆದರಿಕೆ ಉಂಟುಮಾಡುತ್ತದೆ. ತನಗೂ ಆಶ್ರಮಕ್ಕೂ ಯಾವ ಸಂಬಂಧವೂ ಇಲ್ಲವೆಂದು ಹೇಳಿದರೂ, ಅದರಿಂದ ಅವನಿಗೆ ಕಳಚಿಕೊಳ್ಳಲು ಸಾಧ್ಯವಾಗುವುದಿಲ್ಲ. ಯುದ್ಧದ ಅಪಾಯದಿಂದ ಜಗತ್ತನ್ನು ಸಂರಕ್ಷಿಸಲು ವಿಜಯಾನಂದನ ಮೂಲಕ ಬಂದ ವಿಜ್ಞಾನಿಗಳು ಹೊಸ ಬಾಂಬ್ ನ್ನು ಕಂಡು ಹಿಡಿಯುತ್ತಾರೆ. ಅದು ಮನುಷ್ಯರನ್ನು ಯಂತ್ರಗಳನ್ನಾಗಿ ಪರಿಲವರ್ತಿಸುವ, ತಾನು ಹೇಳಿದಂತೆ ಕೇಳುವ ಸಾಧನವನ್ನಾಗಿ ಮಾಡಬಲ್ಲೆ ಎನ್ನುತ್ತಾರೆ. ಆಗ ಅನಿಕೇತಾನಂದ ತೊಟ್ಟಿಲು ಸುರಕ್ಷಿತ ಆದರೆ ಅದರೊಳಗೆ ಇರುವ ಮಗು ( ಮುಗ್ಧತೆ) ಎಂದು ಪ್ರಶ್ನಿಸುತ್ತಾರೆ. ಅದಕ್ಕೆ ಅವರ ಬಳಿ ಉತ್ತರವಿರುವುದಿಲ್ಲ. ಇಲ್ಲಿ ಮಗು ಮುಗ್ಧತೆಯ ಸಂಕೇತ ಮಾತ್ರವಲ್ಲ ಬಸಿರಿನ ಸಂಕೇತ ಕೂಡ ಹೌದು. ಇದನ್ನು ಹೃದಯದ ಭಾಷೆಯಲ್ಲಿ ” ಸರ್ಪದ ಬಾಯೊಳಗಣ ಕಪ್ಪೆಯ ಪ್ರತಿಮೆ”ಯ (ಬಸವಣ್ಣನ ವಚನ) ( ಕನಸು) ಬಯಲು ಬಸಿರುಗಳ ನಡುವೆ ಆಧುನಿಕ ಮನುಷ್ಯ ಸಿಕ್ಕಿ ತೊಳಲಾಡುತ್ತಿರುವ, ವರ್ತಮಾನ ಯುಗದ ತಲ್ಲಣಗಳನ್ನು ಸೆರೆಹಿಡಿದ, ಹೊಸ ಪರಿಭಾಷೆಯಲ್ಲಿ ಮಂಡಿಸಿದ ಮೊದಲ ಕಾದಂಬರಿ. ಬಹುಶಃ ಬುದ್ಧನ ಮಾರ್ಗ ಮಾತ್ರ ಈ ಯುದ್ದೋನ್ಮತ್ತ ಜಗತ್ತನ್ನು ಕಾಪಾಡಬಲ್ಲದು ಎಂಬ ಆಶಾವಾದ ಲೇಖಕರಿಗೆ ಇರುವಂತೆ ಇದೆ. ಇಂತಹ ಮಹತ್ವದ ಕಾದಂಬರಿಯನ್ನು ಇಂಗ್ಲಿಷ್ ನಲ್ಲಿ ಅನುವಾದ ಮಾಡಿದ ಮತ್ತು ಭಾರತೀಯ ಪರಿಕಲ್ಪನೆಗಳನ್ನು ಗ್ರಹಿಸಲು ಅನುಕೂಲವಾಗುವಂತೆ ಅನುಬಂಧದಲ್ಲಿ ಟಿಪ್ಪಣಿಗಳನ್ನು ಒದಗಿಸಿದ ಲೇಖಕ ಮೈಸೂರು ನಟರಾಜ ಅವರಿಗೆ, ಅದನ್ನು ಒದಗಿಸಿಕೊಟ್ಟ ಪ್ರಹ್ಲಾದ ದಿವಾಣಜಿಯವರಿಗೆ ವಂದನೆ ಅಭಿನಂದನ.


  • ರಘುನಾಥ್ ಕೃಷ್ಣಮಾಚಾರ್

5 1 vote
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW