ತ್ಯಾಗ ಎಂದರೆ ತೊರೆಯುವುದು, ತ್ಯಜಿಸುವುದು, ಬಿಡುವುದು, ದಾನ, ಉದಾರಮನೋಭಾವ ಇಷ್ಟೊಂದು ಅರ್ಥಗಳಿವೆ. ತ್ಯಾಗಕ್ಕೆ ಎಷ್ಟು ಬೆಲೆ ಕಟ್ಟಿದರು ತ್ಯಾಗದ ಮುಂದೆ ಕಡಿಮೆ ಅನಿಸುತ್ತದೆ.ಬೆಲೆ ಕಟ್ಟಲು ಸಾಧ್ಯವಿಲ್ಲ. ತ್ಯಾಗದ ಕುರಿತು ಬಿ.ಆರ್.ಯಶಸ್ವಿನಿಯವರು ಬರೆದ ಅರ್ಥಪೂರ್ಣ ಲೇಖನವನ್ನು ತಪ್ಪದೆ ಮುಂದೆ ಓದಿ…
ಆಕಸ್ಮಾತಾಗಿ ಬೆಲೆ ಕಟ್ಟಿ ತ್ಯಾಗವನ್ನು ಅಳೆದರೆ ತ್ಯಾಗಕ್ಕೆ ಅವಮಾನ ಮಾಡಿದ ಹಾಗೆ ಆಗುತ್ತದೆ. ದುಡ್ಡಿನಲ್ಲಿ ಅಳೆದು ತೂಗಿದಾಗ ತ್ಯಾಗ ಮಾಡಿದವರ ಮನಸಿಗೆ ತುಂಬಾ ನೋವು ತರಿಸುತ್ತದೆ. ತ್ಯಾಗದ ಋಣ ತೀರುಸುವುದೆ ಪುಣ್ಯದ ಕೆಲಸ. ತ್ಯಾಗ ಅಂದರೆ ಮೊದಲಿನಿಂದ ಹೆಣ್ಣಿಗೆ ಒಲಿದು ಬಂದ ವರ.ತ್ಯಾಗ ಮಾಡಬೇಕು ಅಂದರೆ ಸಹನೆ,ತಾಳ್ಮೆ ಮುಖ್ಯ.
ಪ್ರಕೃತಿಮಾತೆ ಮಾನವರಿಗೊಸ್ಕರ ಏನೆಲ್ಲಾ ತ್ಯಾಗ ಮಾಡುತ್ತಾಳೆ. ಆಹಾರ, ಗಾಳಿ, ನೀರು ಎಲ್ಲದನ್ನೂ ನೀಡುತ್ತಾಳೆ. ಆಕೆಯ ತ್ಯಾಗಕ್ಕೆ ತಾಳ್ಮೆಗೆ ಪೆಟ್ಟು ಬಿದ್ದಾಗ ರೌದ್ರಾವತಾರ ತಾಳುತ್ತಾಳೆ. ಆಗಿರಬೇಕಾದರೆ ನಾವು ಮಾನವರು ನಮ್ಮ ತ್ಯಾಗ ಯಾರಿಗೆ ಎಷ್ಟು ಮಾಡಬೇಕು ಅಷ್ಟಿದ್ದರೆ ಒಳ್ಳೆಯದು.ಹಾಗಂತ ಎಲ್ಲ ಸನ್ನಿವೇಶಗಳು ಒಂದೆ ತರ ಇರುವುದಿಲ್ಲ. ಸಂದರ್ಭಗಳ ಅನುಸಾರವಾಗಿ ತ್ಯಾಗ ಮಾಡುವುದು ಒಳಿತು.
ಹಿಂದೆಲ್ಲಾ ಹೆಣ್ಣು ಅಂದರೆ ಏನೊ ಒಂಥರಾ ತಾತ್ಸಾರ ಮನೋಭಾವವುಳ್ಳವಾರಾಗಿದ್ದರು. ಅಗಿನ ದಿನಗಳಲ್ಲಿ ಗಂಡು ಮಕ್ಕಳನ್ನು ಪ್ರೀತಿಯಿಂದ ನೋಡಿಕೊಂಡಾಗ ಹೆಣ್ಣುಮಕ್ಕಳಿಗೆ ಸಂಕಟವಾದರು ಅದನ್ನ ಮನಸಿನಲ್ಲೆ ಬಚ್ಚಿಡುವ ಗುಣ ಇದ್ದಿದ್ದರಿಂದ ಸಂಕಟವನ್ನು ತ್ಯಾಗ ಮಾಡಿ ಮುಖದ ಮೇಲೆ ಒತ್ತಾಯಪೂರ್ವಕವಾಗಿ ಸಂತಸ ವ್ಯಕ್ತಪಡಿಸುತ್ತಿದ್ದಳು.
ನಂತರದ ದಿನಗಳಲ್ಲಿ ಶಾಲೆಗೆ ಸೇರಿಸುವ ವಿಷಯದಲ್ಲೂ ತಾರತಮ್ಯ ಮಾಡಿದರು ಸಹ ಏನು ಮಾತಾನಾಡದೇ ಸುಮ್ಮನಾಗುತ್ತಿದ್ದಳು. ನನಗಿಂತ ಸಹೋದರರು ಚೆನ್ನಾಗಿ ಇರಲಿ ಎಂಬ ಆಸೆಯಿಂದ ಅವಳ ಆಸೆಗಳನ್ನು ತ್ಯಾಗ ಮಾಡುತ್ತಿದ್ದಳು.

ಫೋಟೋ ಕೃಪೆ : ಅಂತರ್ಜಾಲ
ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ ಅನ್ನುತ್ತಿದ್ದ ಆ ದಿನಗಳು:
ಹೆಣ್ಣು ಚಿಕ್ಕವಳಾಗಿದ್ದಾಗಿಂದಲೂ ಬೆಳೆದು ಮದುವೆ ವಯಸ್ಸಿಗೆ ಬಂದಾಗ ತನಗೆ ಇಂತಹ ವರ ಬೇಕು, ವರ ಉದ್ಯೋಗದಲ್ಲಿ ಇರಬೇಕು ಅನ್ನುವ ಚಿಕ್ಕಪುಟ್ಟ ಆಸೆಗಳಿದ್ದರು. ಹಿರಿಯರ ಮುಂದೆ ತಲೆಬಗ್ಗಿಸೊ ಗುಣ ಇದ್ದಿದ್ದರಿಂದ ಏನನ್ನು ಮಾತಾನಾಡದೆ ಮೌನಿಯಾಗಿ ತನ್ನ ಆಸೆ ಅಕಾಂಕ್ಷೆಗಳನ್ನು ತ್ಯಾಗ ಮಾಡುತ್ತಿದ್ದಳು.
ತವರಿನ ಪ್ರೀತಿಯನ್ನು ತ್ಯಾಗ ಮಾಡಿ ಬಂದ ಹೆಣ್ಣು ಗಂಡನ ಮನೆಯಲ್ಲಿ ಎಷ್ಟೆ ಕಷ್ಟ ನೋವು ಸಂಕಟ ಕಿರುಕುಳ ಕೊಟ್ಟರು ತವರಿಗೆ ಏನು ಸುಳಿವು ಕೊಡದಂತೆ ಮರೆಮಾಚಿ ತನಗೆ ಆಗುತ್ತಿದ್ದ ನೋವುಗಳನ್ನು ನಂಗುವ ತಾಳ್ಮೆ ಅವಳಲ್ಲಿ ಇದ್ದಿದ್ದರಿಂದ ನೋವನ್ನ ತ್ಯಾಗ ಮಾಡಿ ನಾನು ಇಲ್ಲಿ ಸಂತೋಷವಾಗಿದ್ದಿನಿ ಎಂದು ವ್ಯಕ್ತಪಡಿಸುತ್ತಿದ್ದಳು.
ಇಷ್ಟೆಲ್ಲಾ ತ್ಯಾಗ ಮಾಡಿದವಳ ಒಡನಾಟದಿಂದ ಆಕೆಯ ತಾಳ್ಮೆಯ ಗುಣದಿಂದ ಕುಟುಂಬದವರು ಕಾಲಕ್ರಮೇಣ ಬದಲಾಗುತ್ತಿದ್ದರೇನೊ.ಅದಕ್ಕೆ ಸಾಕ್ಷಿ ಅನ್ನುವಂತೆ ನಮ್ಮ ಹಿಂದಿನ ತಲೆಮಾರಿನವರು ಸಾಯುವ ತನಕ ಒಗ್ಗಟ್ಟಿನಿಂದ ಬಾಳ್ವೆ ಮಾಡುತ್ತಿದ್ದರು. ಮಗಳಾಗಿ, ಸಹೋದರಿಯಾಗಿ, ಮಡದಿಯಾಗಿ, ಸೊಸೆಯಾಗಿ, ಅತ್ತೆಯಾಗಿ ಆಕೆಯ ಕರ್ತವ್ಯವನ್ನು ಮಾಡುವವಳು ಕುಟುಂಬದವರಿಗೊಸ್ಕರ ತನ್ನೆಲ್ಲಾ ಆಸೆ ಆಕಾಂಕ್ಷೆಗಳನ್ನು ತ್ಯಾಗ ಮಾಡಿ ಕುಟುಂಬದವರ ಖುಷಿಯನ್ನೆ ತನ್ನ ಖುಷಿಯೆಂದು ಭಾವಿಸುತ್ತಾಳೆ.
ಇಷ್ಟೆಲ್ಲಾ ತ್ಯಾಗ ಮಾಡುವ ಹೆಣ್ಣಿಗೆ ಗಂಡನ ಮನೆಯಲ್ಲಿ ಕಿರುಕುಳ ಜಾಸ್ತಿಯಾದಾಗ ಆಕೆಯ ತ್ಯಾಗಕ್ಕೆ ಬೆಲೆ ಸಿಗದಿದ್ದಾಗ ಮಾತ್ರ ತ್ಯಾಗ ಇತಿಮಿತಿಯಲ್ಲಿರಬೇಕು.ಅವಳ ಪ್ರಾಣರಕ್ಷಣೆ ನೆಮ್ಮದಿಗೊಸ್ಕರ ಹೋರಾಡಬೇಕು.ಇಂತಹ ಸಂದರ್ಭದಲ್ಲಿ ತ್ಯಾಗ,ಸಹನೆಯಿಂದ ವರ್ತಿಸಿದಾಗ ಅಕೆಗೆ ಅನ್ಯಾಯವಾಗುವುದು. ಅದು ಎದುರಿನಲ್ಲಿ ಇರುವ ವ್ಯಕ್ತಿಯ ಉಪಟಳ ಜಾಸ್ತಿಯಾದಾಗ ಇಂದುಮುಂದು ಯೋಚಿಸದೆ ತ್ಯಾಗವನ್ನೆ ತ್ಯಜಿಸಿ ದೈರ್ಯವಾಗಿ ಮುನ್ನಡೆಯಬೇಕಾಗುತ್ತದೆ.
ಇತ್ತೀಚಿನ ದಿನಗಳಲ್ಲಿ ಹೆಣ್ಣಿಗೆ ಇದ್ದಂತಹ ಗುಣಗಳು ಮರೆಯಾಗಿವೆ.ನಾನೇಕೆ ಅಷ್ಟೊಂದು ತ್ಯಾಗ ಮಾಡಬೇಕು ಅನ್ನುವ ಸ್ವಾರ್ಥದಿಂದಾಗಿ ಮನೆಯಲ್ಲಿ ದಿನ ಜಗಳವಾಡುತ್ತಾರೆ. ಕುಟುಂಬಗಳಲ್ಲಿ ನೆಮ್ಮದಿ ಕಾಣಿಸುತ್ತಿಲ್ಲ. ವಿಚ್ಛೇದನ ಪ್ರಕರಣಗಳು ಜಾಸ್ತಿಯಾಗಿವೆ. ಇದರಿಂದಾಗಿ ಮಕ್ಕಳಿಗೆ ಕುಟುಂಬದವರ ಒಡನಾಟ ಕಡಿಮೆಯಾಗಿ ಅವರು ಸಹ ಸ್ವಾರ್ಥಿಗಳಾಗಿ ಬದಲಾಗುತ್ತಿದ್ದಾರೆ.
ತ್ಯಾಗ ಇದು ಹೆಣ್ಣಿಗೆ ಅಷ್ಟೆ ಸೀಮಿತವಾಗಿರಬಾರದು.ಕುಟುಂಬದ ಎಲ್ಲರಿಗೂ ಸೀಮಿತವಾಗಿರಬೇಕು.ಒಬ್ಬರಿಗೊಬ್ಬರಿಗೂ ಹೊಂದಾಣಿಕೆಯಿಂದ ಒಗ್ಗಟ್ಟಾಗಿರಬೇಕು. ಅಂದರೆ ಕೆಲವೊಂದು ಗುಣ ಸ್ವಭಾವಗಳನ್ನು ತ್ಯಾಗ ಮಾಡಬೇಕು. ಆಗ ಮಾತ್ರ ಕುಟುಂಬದಲ್ಲಿ ಸುಖ ಶಾಂತಿ ನೆಮ್ಮದಿ ಅಂತ ನೆಲೆಸುವುದಕ್ಕೆ ಸಾಧ್ಯ. ಕುಟುಂಬದಲ್ಲಿ ನಾನೇಕೆ ಅಷ್ಟೊಂದು ತ್ಯಾಗ ಮಾಡೋಣ ಇತಿಮಿತಿಯಾಗಿರೋಣ ಅಂದಾಗ ಒಬ್ಬರಿಗೊಬ್ಬರು ಹೊಂದಾಣಿಕೆಯಾಗದೆ ಕುಟುಂಬವು ಛಿದ್ರವಾಗುತ್ತವೆ.ಕುಟುಂಬ ಅಂತ ಬಂದಾಗ ತ್ಯಾಗ ಮಾಡುವುದು ಮುಖ್ಯವಾಗಿರುತ್ತದೆ.
ತಂದೆತಾಯಿ ಮಕ್ಕಳಿಗೊಸ್ಕರ ಏನೆಲ್ಲಾ ತ್ಯಾಗ ಮಾಡಿರುತ್ತಾರೆ. ಇತ್ತೀಚಿನ ದಿನಗಳಲ್ಲಿ ಮಕ್ಕಳು ಆ ತ್ಯಾಗ ಗುಣಗಳನ್ನು ನೆನೆಯದೆ ತಂದೆತಾಯಿಯರನ್ನು ಆಚೆಗೆ ನೂಕುತ್ತಾರೆ.
ತಂದೆತಾಯಿಯರ ತ್ಯಾಗಕ್ಕೆ ಗೌರವ ಸಿಗದೇ ಜೀವನಪೂರ್ತಿ ಕಣ್ಣೀರು ಹರಿಸುವಾಗೆ ಮಾಡುತ್ತಾರೆ.
ತಂದೆತಾಯಿಯರು ನಮ್ಮ ತ್ಯಾಗಕ್ಕೆ ಎಂದಿದ್ದರು ಬೆಲೆ ಸಿಗುವುದಿಲ್ಲ ಅಂತ ತಿಳಿದು ತ್ಯಾಗ ಇತಿಮಿತಿಯಲ್ಲಿದ್ದರೆ ಒಳ್ಳೆಯದು ಅಂತ ಭಾವಿಸಿ ತ್ಯಾಗ ಮಾಡದಿದ್ದರೆ ಇವತ್ತು ಮಕ್ಕಳು ಅವರಿಗಿಂತ ಉನ್ನತವಾದ ಸ್ಥಿತಿಯಲ್ಲಿ ಇರುವುದಕ್ಕೆ ಆಗುತ್ತಿರಲಿಲ್ಲ.
ಹಾಗೇಯೇ ಗಂಡನು ಹೆಂಡತಿಗೊಸ್ಕರ ಕೆಲವೊಂದನ್ನ ತ್ಯಾಗ ಮಾಡುತ್ತಾರೆ.ಹೀಗೆ ತ್ಯಾಗ ಮಾಡಿದಾಗ ಹೆಣ್ಣಾದವಳು ಗಂಡ ಮತ್ತು ಮನೆಯವರ ಜೊತೆ ಹೊಂದಿಕೊಂಡಾಗ ಗಂಡನ ತ್ಯಾಗಕ್ಕೂ ಬೆಲೆ ಸಿಗುತ್ತದೆ. ತ್ಯಾಗ ಅನ್ನುವುದು ಕುಟುಂಬಕ್ಕೆ ಮಾತ್ರ ಸೀಮಿತವಾಗಿಲ್ಲ.
ಒಬ್ಬ ರೈತ ಹಗಲಿರುಳು ಅನ್ನದೆ ಬೆವರಿಳಿಸಿ ಶ್ರಮಪಟ್ಟು ಕಾಯಕ ಮಾಡದಿದ್ದರೆ ಅವರಿಗೊಸ್ಕರ ಮಾತ್ರ ಅಹಾರಧಾನ್ಯಗಳನ್ನು ಬೆಳೆದಿದ್ದರೆ ಇಂದು ನಾವುಗಳು ಹಸಿವಿನಿಂದ ನರಳಾಡುತ್ತಿದ್ದೆವು.ರೈತರು ನಿದ್ದೆ,ಹಸಿವು,ಸುಸ್ತು ಹೀಗೆ ಅನೇಕ ರೀತಿ ತ್ಯಾಗ ಮಾಡಿ ಬೆಳೆ ಬೆಳೆದು ಮಾರಲಿಲ್ಲ ಅಂದರೆ ಆನ್ನದ ಕೊರೆತೆ ಆಗುತ್ತಿತ್ತು.ಈ ಅನ್ನದಾತನ ತ್ಯಾಗಕ್ಕೆ ಋಣ ತೀರಿಸೋಕೆ ಆಗದಷ್ಟು ಭಾರ ನಮ್ಮ ಮೇಲಿದೆ ಅಲ್ಲವೇ?

ಫೋಟೋ ಕೃಪೆ : ಅಂತರ್ಜಾಲ
ಗುರುಗಳು ತನ್ನಲ್ಲಿರುವ ವಿದ್ಯೆಗಳನ್ನು ತ್ಯಾಗಮಾಡಿ ಶಿಷ್ಯವೃಂದದವರಿಗೆ ಹೇಳಿಕೊಡುತ್ತಾರೆ.ಅವರ ಈ ತ್ಯಾಗದಿಂದ ಇವತ್ತಿನ ದಿನಗಳಲ್ಲಿ ಎಲ್ಲಾರೂ ವಿದ್ಯಾವಂತರಾಗಿದ್ದಾರೆ.ಗುರುಗಳಲ್ಲಿ ನಾನೇಕೆ ನನ್ನ ಎಲ್ಲ ವಿದ್ಯೆಗಳನ್ನು ತ್ಯಾಗ ಮಾಡಬೇಕು ಅನ್ನುವ ಸ್ವಾರ್ಥ ಅವರಲ್ಲಿ ಇದ್ದಾಗ ಅವರು ಸ್ವಲ್ಪ ಮಟ್ಟಿಗೆ ವಿದ್ಯೆ ಹೇಳಿಕೊಟ್ಟಿದಿದ್ದರೆ ಇಂದು ಯಾರು ಕೂಡ ಎಲ್ಲ ಕ್ಷೇತ್ರಗಳಲ್ಲಿ ದುಡಿಯುತ್ತಿರಲಿಲ್ಲ.
ಪೋಲಿಸರು,ಸೈನಿಕರಾಗಲಿ ತಮ್ಮ ಪ್ರಾಣಗಳನ್ನು ಲೆಕ್ಕಿಸದೇ ಹಗಲಿರುಳು ನಮಗೋಸ್ಕರ, ದೇಶಕ್ಕೋಸ್ಕರ ಶ್ರಮಪಡುತ್ತಿದ್ದಾರೆ.ಅವರುಗಳ ಈ ಪ್ರಾಣ ಅನ್ನೋ ತ್ಯಾಗದಿಂದ ನಾವು ನೆಮ್ಮದಿಯಾಗಿ ಮನೆಯಲ್ಲಿ ಸುರಕ್ಷಿತವಾಗಿದ್ದೇವೆ.ಅವರುಗಳು ಕೂಡ ನಾವೇಕೆ ನಮ್ಮ ಪ್ರಾಣಪಣಕಿಟ್ಟು ಅಷ್ಟೊಂದು ಕರ್ತವ್ಯ ಮಾಡಬೇಕು ಅಂತ ಭಾವಿಸಿದಿದ್ದರೆ ನಾವಿಂದು ಭಯದ ವಾತವರಣದಲ್ಲಿ ಬದುಕಬೇಕಿತ್ತು.
ನ್ಯಾಯಧೀಶರು,ವಕೀಲರಿಗೆ ವಾದ ಪ್ರತಿವಾದಕ್ಕೆ ತೀರ್ಪು ಕೊಡಬೇಕೆಂದರೆ ಭಯ ಆತಂಕ ಎಲ್ಲ ಇರುತ್ತದೆ. ಕೆಲವೊಮ್ಮೆ ಪ್ರಾಣಕ್ಕೂ ಕಂಟಕ ಬರಬಹುದು. ಅದರೆ ಅವರುಗಳು ಭಯನ ತ್ಯಾಗ ಮಾಡಿ ತೀರ್ಪು ಕೊಡುವುದರಿಂದ ನ್ಯಾಯಕ್ಕೆ ಗೆಲುವು ಸಿಗುತ್ತದೆ.ಅವರು ಸಹ ತ್ಯಾಗ ಇತಿಮಿತಿಯಲ್ಲಿರಬೇಕು ಎಂದಿದ್ದರೆ ಅನ್ಯಾಯಕ್ಕೆ ಗೆಲುವು ಸಿಕ್ಕಿ ನ್ಯಾಯಕ್ಕೆ ಸೋಲು ಸಿಗುತ್ತಿತ್ತು. ನ್ಯಾಯಾಲಯಕ್ಕೆ ಬೆಲೆ ಇಲ್ಲದಂತಾಗುತಿತ್ತು. ನಾವೀಗ ಕರೋನ ಕಾಯಿಲೆಯಿಂದ ಬಾಚಾವಾಗಿ ಬಂದಿದ್ದೇವೆ. ಈ ಕಾಯಿಲೆಯಿಂದ ಎಷ್ಟೊಂದು ಮಂದಿ ಜೀವ ಕಳೆದುಕೊಂಡಿದ್ದಾರೆ.
ಇಷ್ಟೊಂದು ಪ್ರಾಣ ಹಾನಿಯಾದರು ತಮ್ಮ ಪ್ರಾಣಗಳನ್ನು ಲೆಕ್ಕಿಸದೆ ವೈದ್ಯರು, ನರ್ಸ್ ಗಳು, ಅಂಬುಲೆನ್ಸ್ ಕಾರ್ಯಕರ್ತರು, ಆಶಾ, ಅಂಗನವಾಡಿ ಕಾರ್ಯಕರ್ತೆಯರು ನಿರಂತರ ಕೆಲಸ ನಿರ್ವಹಿಸಿದ್ದಾರೆ.ಇವರುಗಳ ತ್ಯಾಗಕ್ಕೆ ಎಷ್ಟು ಋಣಿಯಾಗಿದ್ದರು ಸಾಲದು.
ಇವರುಗಳೆಲ್ಲಾ ನಾವು ಕ್ಷೇಮವಾಗಿದ್ದರೆ ಸಾಕು ಅಂತ ಯೋಚಿಸಿ ನಮ್ಮ ಕುಟುಂಬ ನಮ್ಮ ಪ್ರಾಣ ಮುಖ್ಯ ಅಂದುಕೊಂಡು ತ್ಯಾಗ ಮಾಡದಿದ್ದರೆ ಇನ್ನು ಎಷ್ಟೊಂದು ಮನುಷ್ಯರ ಉಸಿರು ನಿಂತು ಹೋಗುತಿತ್ತು.
ನಮಗೆ ಸ್ವಾತಂತ್ರ್ಯ ತಂದುಕೊಡಲು ಎಷ್ಟೊಂದು ಮಂದಿ ಪ್ರಾಣ ತ್ಯಾಗ ಮಾಡಿದ್ದಾರೆ.ಅವರುಗಳೆಲ್ಲಾ ಜೀವದ ಹಂಗು ತೊರೆದು ಹೋರಾಡಲಿಲ್ಲ ಅಂದರೆ ನಾವಿನ್ನು ಪರಕೀಯರ ಮುಷ್ಟಿಯಲ್ಲಿ ಒದ್ದಾಡಬೇಕಿತ್ತು.ಈಗ ಬೇರೆ ದೇಶಗಳಲ್ಲಿ ಅಗುತ್ತಿರುವ ಘಟನೆಗಳನ್ನು ನೋಡಿದಾಗ ಎಷ್ಟೊಂದು ಭಯವಾಗುತ್ತದೆ.ಸ್ವಾತಂತ್ರ್ಯ ಹೋರಾಟಗಾರರು ತ್ಯಾಗ ಮಾಡಿಲ್ಲ ಅಂದರೆ ನಾವೀಗ ಭಯದಲ್ಲೆ ಬದುಕುತ್ತಿರಬೇಕಿತ್ತು.
ಇದೆಲ್ಲಾ ವೃತ್ತಿಜೀವನಕ್ಕೆ ಸಂಬಂಧ ಪಟ್ಟಿರುವುದು ಇಲ್ಲಿ ತ್ಯಾಗ ಮುಖ್ಯವಾಗಿರುತ್ತದೆ.ಅದರೆ ಇಂದು ದುಡ್ಡು ಅಧಿಕಾರದ ವ್ಯಾಮೋಹಕ್ಕೆ ಬಲಿಯಾಗುತ್ತಿರುವುದರಿಂದ ಯಾವುದಕ್ಕೂ ನಂಬಿಕೆ ಇಲ್ಲದಂತಾಗಿದೆ. ಕೆಲವೊಬ್ಬರು ಯಾವುದೆ ಪ್ರತಿಫಲದ ನಿರೀಕ್ಷೆಗಳಿಲ್ಲದೆ ರಕ್ತದಾನ,ನೇತ್ರದಾನ,ದೇಹದಾನ ಮಾಡಿರುತ್ತಾರೆ.ಇಂತವರ ತ್ಯಾಗದಿಂದ ಒಳ್ಳೆಯದು ಅಗಿರುತ್ತದೆ.
ಕೆಲವೊಮ್ಮೆ ಅವರುಗಳ ಪರಿಸ್ಥಿತಿ ಒತ್ತಡದಿಂದಾಗಿ ಹಣದ ಅವಶ್ಯಕತೆಗೆ ಮಾರಿಕೊಂಡಿರುತ್ತಾರೆ.ಅದಕ್ಕೆ ಪ್ರತಿಯಾಗಿ ಅವರಿಗೆ ಬೇಕಾಗಿರುವುದನ್ನ ಕೂಡ ಪಡೆದುಕೊಂಡಿರುತ್ತಾರೆ.
ಅದಕ್ಕೆ ಪ್ರತಿಯಾಗಿ ಅವರುಗಳು ಎನನ್ನು ತೆಗೆದುಕೊಳ್ಳದೆ ಸಹಾಯ ಮಾಡಿದ್ದಿನಿ ಅಂತ ಬೇರೆಯವರ ಹತ್ತಿರ ಪದೆಪದೇ ಹೇಳುವುದು.ಧನದಾಹಿಗಳಾಗಿ ಪೀಡಿಸುವಾಗ ದಾನ ಪಡೆದವರ ತಾಳ್ಮೆಯ ತ್ಯಾಗಕ್ಕೆ ಅವಮಾನಿಸಿದಾಗೆ ಆಗುತ್ತದೆ. ಇಂತಹ ಸಂದರ್ಭದಲ್ಲಿ ತ್ಯಾಗ ಇತಿಮಿತಿಯಲ್ಲಿದ್ದರೆ ಒಳ್ಳೆಯದು.ಅವರಿಂದಾಗಿ ಆಗುವ ಅವಮಾನಕ್ಕೆ ಅವರನ್ನು ದೂರವಿಡುವ ತ್ಯಾಗ ಮಾಡಲೇಬೇಕು.
ಹಿಂದೆಲ್ಲಾ ಶಿಕ್ಷಣ ಕಲಿಯಲು ಹತ್ತಿರದಲ್ಲಿ ಶಾಲೆಗಳು ಇರುತ್ತಿರಲಿಲ್ಲ. ದೂರದ ಊರಿಗೆ ಹೋಗಬೇಕಾಗಿತ್ತು. ಬಸ್ ಗಳ ವ್ಯವಸ್ಥೆಯು ಇರುತ್ತಿರಲಿಲ್ಲ. ಇದರ ಪರಿಣಾಮವಾಗಿ ಆ ಊರುಗಳಲ್ಲಿ ಇದ್ದಂತಹ ಸಂಬಂಧಿಕರು ಅಥವಾ ಸ್ನೇಹಿತರ ಮನೆಯಲ್ಲಿ ಮಕ್ಕಳನ್ನು ಬಿಡುತ್ತಿದ್ದರು.
ಶಿಕ್ಷಕರು ಸಹ ಅಲ್ಲೆ ಉಳಿದುಕೊಳ್ಳುವ ಪರಿಸ್ಥಿತಿ ಇತ್ತು. ಕಡಿಮೆ ಸಂಬಳವಿದ್ದ ಕಾರಣ ಮನೆಯವರು ಎನನ್ನು ನಿರೀಕ್ಷಿಸುತ್ತಿರಲಿಲ್ಲ. ತಮ್ಮ ಮಕ್ಕಳು ಗುರುಗಳಿಂದ ವಿದ್ಯಾಬ್ಯಾಸ ಕಲಿತರೆ ಸಾಕು ಅಂತ ಪ್ರೀತಿಯಿಂದ ನೋಡಿಕೊಳ್ಳುವಷ್ಟು ಉದಾರಿಗಳಾಗಿದ್ದರು.
ಆ ಮನೆಯವರು ಮಕ್ಕಳ ಮನೆಯವರ ಕಡೆಯಿಂದ ಕೂಡ ಯಾವುದೆ ಪ್ರತಿಫಲವನ್ನು ನಿರೀಕ್ಷಿಸದೆ ತಮ್ಮ ಮನೆಯ ಮಕ್ಕಳಂತೆ ಕಾಣುತ್ತಿದ್ದರು.ಅವರುಗಳು ಸಂಬಂಧಗಳಿಗೋಸ್ಕರ ಮಿಡಿಯುವ ತ್ಯಾಗ ಮನೋಭಾವದವರಾಗಿದ್ದರು.
ಇಂತವರ ಮನೆಯಲ್ಲಿ ಇದ್ದು ಶಿಕ್ಷಣ ಕಲಿತು ನೌಕರಿ ಪಡೆದಿರುವ ಮಕ್ಕಳಿಗೆ ಯಾವಾಗಾದರು ಆ ಮನೆಯ ವ್ಯಕ್ತಿಗಳು ಸಿಕ್ಕಾಗ ನಮ್ಮವರಂತೆ ನೋಡಿಕೊಂಡಿದ್ದಿರಾ ಅನ್ನುವ ಅಭಿಮಾನಕ್ಕೆ ಮನೆಯವರಿಗೆ ಪ್ರೀತಿಯಿಂದ ಕೃತಜ್ಞತೆ ತೋರಿಸುತ್ತಾರೆ. ಈ ಕೃತಜ್ಞತೆ ತ್ಯಾಗಕ್ಕೆ ಸಿಕ್ಕ ಉಡುಗೊರೆಯಾಗಿರುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಮಕ್ಕಳನ್ನು ಓದುವುದಕ್ಕೆ ಸಂಬಂಧಿಕರ ಮನೆಯಲ್ಲಿ ಬಿಡುವುದೆ ಕಷ್ಟವಾಗಿದೆ. ನಮ್ಮವರು ಅಂತ ಮಿಡಿಯುವ ತ್ಯಾಗ ಅವರಲಿಲ್ಲ. ಕೆಲವರಂತೂ ಧನದಾಹಿಗಳಾಗಿದ್ದಾರೆ.ಇದರ ಪರಿಣಾಮವಾಗಿ ಪಿಜಿ ಹಾಸ್ಟೆಲ್ ಜಾಸ್ತಿಯಾಗಿವೆ.ಕೆಲವೊಮ್ಮೆ ಹೆಣ್ಣು ಮಕ್ಕಳಿಗೆ ಸುರಕ್ಷತೆ ಇಲ್ಲದಂತಾಗುತ್ತಿದೆ.
ತ್ಯಾಗ ಅಂದರೆ ಥಟ್ಟನೆ ನೆನಪಾಗುವುದು ತಾಯಿ.ತಾಯಿಯ ಎದೆಹಾಲು ಮಕ್ಕಳಿಗೆ ಅಮೃತಕ್ಕೆ ಸಮ. ನಂತರದ ಸ್ಥಾನ ಕಾಮಧೇನು ಗೋಮಾತೆಯದು.ತನ್ನ ಕರುವಿಗೆ ಸೀಮಿತವಾಗಿರುವ ಹಾಲನ್ನು ತನ್ನನ್ನು ಸಾಕುತ್ತಿರುವ ಮನೆಯವರಿಗೋಸ್ಕರ ತ್ಯಾಗಿಯಾಗಿ ಕ್ಷೀರವನ್ನು ಧಾರೆಯರೆಯುತ್ತದೆ. ಇಂತ ಗೋಮಾತೆ ಇತ್ತೀಚಿನ ದಿನಗಳಲ್ಲಿ ಕಟುಕರ ಪಾಲಾಗುತ್ತಿರುವುದು ದುಃಖಕರವಾದ ಸಂಗತಿ.ಒಮ್ಮೆಯಾದರೂ ಗೋಮಾತೆ ನಾನೇಕೆ ತ್ಯಾಗ ಮಾಡೋಣ ಅನ್ನುವ ಮನಸ್ಥಿತಿಯನ್ನು ದೇವರು ಅವುಗಳಲ್ಲಿ ಮೂಡಿಸಿದ್ದರೆ ಇಂದು ಅನೇಕ ಎಳೆಯ ಕಂದಮ್ಮಗಳಿಗೆ ತಾಯಿಯ ಹಾಲು ಸಿಗದೆ ಇದ್ದಾಗ ಮಕ್ಕಳು ಸಾಯುತ್ತಿದ್ದರು.
ಹಿಂದೆಲ್ಲಾ ಒಂದು ಹೆಣ್ಣು ಹೆರಿಗೆಯಾದ ನಂತರವೆ ಸಾಯುತ್ತಿದ್ದಳು.ಇಷ್ಟೊಂದು ಆಧುನಿಕತೆ ಅವಾಗ ಇರಲಿಲ್ಲ.ಇಂತಹ ಸನ್ನಿವೇಶಗಳಲ್ಲಿ ಹುಟ್ಟಿದ ಮಕ್ಕಳಿಗೆ ತಾಯಿಯ ಹಾಲು ಇಲ್ಲದೆ ಹಸುವಿನ ಹಾಲು ಕುಡಿಸುತ್ತಿದ್ದರು.ಈಗಿನ ಕಾಲದಂತೆ ಮಕ್ಕಳಿಗೆ ಸಿಗುವಂತಹ ಬೇಬಿ ಫುಡ್ ಗಳು ಇರಲಿಲ್ಲ.ಇದ್ದರೂ ಕೊಳ್ಳುವಷ್ಟು ದುಡ್ಡು ಅವರ ಹತ್ತಿರ ಇರುತ್ತಿರಲಿಲ್ಲ.ಇಂತಹ ಸಮಯದಲ್ಲಿ ಕಾಪಾಡಿದ್ದು ತ್ಯಾಗಮಯಿ ಕಾಮಧೇನು ಅಲ್ಲವೇ?
ಒಬ್ಬ ವ್ಯಕ್ತಿಗೆ ನಾವು ಮಾಡುವ ತ್ಯಾಗಕ್ಕೆ ಅರ್ಹನಾಗಿದ್ದಾಗ ಮಾತ್ರ ಪೂರ್ಣಪ್ರಮಾಣದ ತ್ಯಾಗಮಾಡುವುದು ಒಳ್ಳೆಯದು.
ವ್ಯಕ್ತಿಯೊಬ್ಬರು ನಾವು ಮಾಡುವ ತ್ಯಾಗಕ್ಕೆ ಅರ್ಹನಾಗಿಲ್ಲದ್ದಿದ್ದಾಗ ನಮ್ಮ ತ್ಯಾಗ ಹೊಳೆ ನೀರಿನಲ್ಲಿ ಹುಣಸೆಹಣ್ಣು ಕಿವಿಚಿದಂತೆ ಆಗುತ್ತದೆ. ಇಂತಹ ವ್ಯಕ್ತಿಗಳಿಗೆ ನಾವು ಎಷ್ಟೆ ತ್ಯಾಗ ಮಾಡಿದರು ವ್ಯರ್ಥ. ಇಂತವರಿಗೆ ನಾವು ತ್ಯಾಗ ಮಾಡಬೇಕೆಂದರೆ ಇತಿಮಿತಿಯಲ್ಲಿದ್ದರೆ ಒಳ್ಳೆಯದು. ಇಂದಿನ ದಿನಗಳಲ್ಲಿ ಸ್ವಾರ್ಥದ ಬಲೆಗೆ ಬಿದ್ದು ತ್ಯಾಗ ಅನ್ನುವುದು ಮರೀಚಿಕೆಯಾಗಿದೆ.
ನಮ್ಮವರಿಗಾಗಿ ನಮಗೋಸ್ಕರ ಒದ್ದಾಡುತ್ತಿರುವರಿಗೆ ತ್ಯಾಗ ಮಾಡುವುದು ಒಳಿತು. ನಾವಷ್ಟೆ ಚೆನ್ನಾಗಿರಬೇಕು ಅಂತ ಬಯಸುವರಿಗೆ ತ್ಯಾಗ ಇತಿಮಿತಿಯಲ್ಲಿರಬೇಕು. ಇಂತಹವರಿಗೆ ತ್ಯಾಗ ಮಾಡಿದರು ಕೂಡ ಅದು ವ್ಯರ್ಥವಾಗುತ್ತೆ. ಕೆಲವೊಂದು ವಿಷಯದಲ್ಲಿ ತ್ಯಾಗ ಇತಿಮಿತಿಯಲ್ಲಿದ್ದರೆ ಒಳ್ಳೆಯದು. ಅದು ವ್ಯಕ್ತಿ, ಸಂದರ್ಭಗಳ ಅನುಗುಣವಾಗಿ ಇರಬೇಕಾಗಿರುತ್ತದೆ.
ಕುಟುಂಬ ಅಂತ ಬಂದಾಗ ಮಾತ್ರ ಕುಟುಂಬದ ಪ್ರತಿಯೊಬ್ಬರೂ ಕೂಡ ಏನನ್ನೂ ನಿರೀಕ್ಷಿಸದೆ ಸ್ವಾರ್ಥದಿಂದ ಯೋಚಿಸದೆ ಹೊಂದಾಣಿಕೆಯಿಂದ ಇರುವುದಕ್ಕಾಗಿ ಕೆಲವೊಂದು ಗುಣ,ಸ್ವಭಾವಗಳನ್ನೆಲ್ಲ ತ್ಯಾಗ ಮಾಡುವುದು ಮುಖ್ಯವಾಗಿರುತ್ತದೆ. ಆಗ ಮಾತ್ರ ಕುಟುಂಬದಲ್ಲಿ ನೆಮ್ಮದಿ ಇರುವುದು.
ತ್ಯಾಗ ಮನುಷ್ಯರಲ್ಲಿ ಇರುವ ಮಾನವೀಯತೆಯ ಗುಣಗಳಲ್ಲಿ ಒಂದು. ಯಾವುದೇ ಪ್ರತಿಫಲದ ನೀರಿಕ್ಷೆಯಿಲ್ಲದೇ ಸಹಾಯ ಮಾಡುವ ಗುಣಕ್ಕೆ ತ್ಯಾಗ ಅನ್ನದೆ ಬೇರೆ ಏನು ಅನ್ನುವುದಕ್ಕೆ ಆಗುತ್ತೆ. ನಾವು ನಮ್ಮವರಿಗೊಸ್ಕರ ಮರುಗಿ ತ್ಯಾಗ ಮಾಡಿದರೆ ಇಂದಲ್ಲಾ ನಾಳೆಯ ದಿನಗಳಲ್ಲಿ ನಮ್ಮ ಮಕ್ಕಳಿಗೆ ಒಳ್ಳೆಯದಾಗುತ್ತದೆಂದು ನನ್ನ ಅಭಿಪ್ರಾಯ. ಪರಿಸ್ಥಿತಿಯ ಅನುಗುಣವಾಗಿ ತ್ಯಾಗ ಇತಿಮಿತಿಯಲ್ಲಿದ್ದರೆ ಒಳ್ಳೆಯದು.
- ಬಿ.ಆರ್.ಯಶಸ್ವಿನಿ
