ಇಂದಿನ ಮದುವೆಗಳು ಹಣ ಮತ್ತು ಅಂತಸ್ತುಗಳ ನಡುವೆ ಸಂಬಂಧಗಳು ಮುರುಟಿ ಹೋಗುತ್ತಿದೆ. ಭಾವನೆಗಳಿಗೆ ಯಾವುದೇ ಆಸ್ಪದವಿಲ್ಲ. ಸಂಬಂಧದ ಮೌಲ್ಯಗಳು ಕತ್ತರಿಸಿ ಬೀಳುತ್ತ ಸಾಗಿದೆ. ಹಣದ ಹರಿವು ಹೆಚ್ಚಾದಂತೆ, ನೆಮ್ಮದಿ ಕರಗುತ್ತಾ ಸಾಗಿದೆ. ರತ್ನಾಕರ ಗಡಿಗೇಶ್ವರ ಅವರ ಕಳೆದು ಹೋದ ನೆಮ್ಮದಿಯ ಹುಡುಕುವ ಭಾವನಾತ್ಮಕ ಬರಹವನ್ನು ತಪ್ಪದೆ ಓದಿ…
ದೊಡ್ಡಮ್ಮನ ಮಗಳ ಮದುವೆ. ನಾನು ಆಗಿನ್ನೂ ಬದುಕಿಗೆ ಕಣ್ಣು ಬಿಡುವ ಸಮಯ, ಮದುವೆ ಹಿರಿಯರು ನಿಶ್ಚಯ ಮಾಡಿ ಆಗಿತ್ತು. ಮದುವೆ ದಿನಕ್ಕೆ ಇನ್ನೇನು ಹದಿನೈದು ದಿನ ಇರುವಾಗಲೇ ಹಬ್ಬದ ವಾತಾವರಣ, ಅಕ್ಕ ಪಕ್ಕದ ಮನೆಯವರು, ನೆಂಟರಿಷ್ಟರು ಎಲ್ಲರಿಗೂ ಕೈ ತುಂಬಾ ಕೆಲಸ. ಮನೆಗೆ ಸುಣ್ಣ ಬಣ್ಣ ಮಾಡುವುದು, ಮನೆಯ ಸುತ್ತ ಸ್ವಚ್ಛ ಮಾಡುವುದು ಪುರುಷರ ಕೆಲಸವಾದರೆ, ಅಕ್ಕಿ ಒನೆಯುವುದು, ಉಪ್ಪಿನ ಕಾಯಿ ಹಾಕುವುದು, ಮನೆಯೊಳಗೆ ವಸ್ತುಗಳ ಜೋಡಿಸುವುದು ಮಹಿಳೆಯರ ಕೆಲಸ . ಅಡಿಗೆ ಮನೆಯಲ್ಲಿ ಯಾವಾಗಲೂ ಚಹಾ, ಕಾಫಿಯ ಘಮ ಘಮ, ಬಂದವರಿಗೆಲ್ಲ ಪಾನೀಯ ವ್ಯವಸ್ಥೆ. ಕೆಲಸ ಮಾಡುವವರಿಗೆ ಬೇಕಾದಾಗಲೆಲ್ಲ ಪಾನೀಯ, ಕಷ್ಟ ಸುಖ ದುಃಖ ದುಮ್ಮಾನ ಎಲ್ಲವೂ ಅಲ್ಲಿ ಚರ್ಚಿತ ವಿಷಯ,ಯಾರ ಕೈಯಲ್ಲಿ ಮೊಬೈಲ್ ಇಲ್ಲಾ, ಎದುರು ಬದುರಾದ ಮಾತುಗಳೇ ಸಂವಹನ ಮಾದ್ಯಮ,ಪ್ರೀತಿ ಹುಟ್ಟುವ, ಸಂಬಂಧ ಕುದುರುವ ವಾಸಸ್ಥಳ. ಅಲ್ಲಿ ಮನಸ್ಸಿನ ಮಾತಿಗೆ ಮಾತ್ರ ಮೌಲ್ಯ. ಅವರವರ ವಯೋಮಾನಕ್ಕೆ ತಕ್ಕಂತೆ ಕೆಲಸಗಳು. ಎಲ್ಲೋ ಮೂಲೆಯ ಬಾವಿ ನೀರು ಸೇದಿ ತರುವುದು. ಅದನ್ನು ಪಕ್ಕದ ಮನೆಯಿಂದ ತಂದ ಹಂಡೆ ಹರಿವೆಗಳಿಗೆ ತುಂಬಿಸಿ ಇಡುವುದು. ಊರಿನ ಮನೆ ಮನೆಗಳಲ್ಲಿ ಬೆಳೆದ ತರಕಾರಿಗಳು ಅಲ್ಲಿ ಒಟ್ಟಾಗಿ ಅನುಸಂಧಾನ ನೆಡೆಸುವ ಸುಂದರ ಸ್ಥಳ. ಮನುಷ್ಯ ಮನುಷ್ಯರ ನಡುವೆ ಮಾತ್ರವಲ್ಲ, ವಸ್ತು ವಸ್ತುಗಳ ನಡುವೆ ಜೀವಂತಿಕೆ ನಡೆಸುವ ಸುಂದರ ಸ್ಥಳಗಳು.
ಮದುವೆ ಹುಡುಗ ಹುಡುಗಿಯ ತಯಾರಿ, ಅವರಿಗೆ ಬೇಕಾದ ವಸ್ತುಗಳ ಜೋಡಣೆ. ಅಲ್ಲೊಂದು ತಗಡಿನ ಟ್ರಂಕ್ ಅದರೊಳಗೆ ಮಗಳಿಗೆ ಕೊಟ್ಟು ಕಳಿಸಬಹುದಾದ ವಸ್ತುಗಳ ಸೇರ್ಪಡೆ. ಅದರಲ್ಲಿ ಒಂದು ಅಪ್ಯಾಯ ಮಾನ್ಯತೆ,. ಮದುವೆ ದಿನ ಹತ್ತಿರ ಹತ್ತಿರ ಬಂದಂತೆ,ತಯಾರಾಗುವ ಮದುವೆ ಚಪ್ಪರ ಅದರ ತಯಾರಿ,ಅದನ್ನು ದುಡ್ಡು ಇಲ್ಲದೆ ಸುಂದರಗೊಳಿಸುವ ಊರವರ ಕುಶಲತೆ, ಎಲ್ಲವೂ ನೈಸರ್ಗಿಕ ಎಲ್ಲೂ ಕೃತಕತೆ ಇಲ್ಲಾ. ಪ್ರತಿಯೊಂದು ಕಂಬದಲ್ಲಿ ಕೂಡ ಜೀವಂತಿಕೆ , ಭಾವ ಸಮ್ಮಿಲನ. ಚಪ್ಪರದ ನಡುವೆ ತೂಗುವ ವಿವಿಧ ತರಕಾರಿಗಳು,ಹಣ್ಣುಗಳು, ಕಾಡು ಹೂವುಗಳು ನೋಡುವುದರಲ್ಲಿ ರಮಣೀಯತೆ ಇತ್ತು.

ಮದುವೆಯೂ ಅಷ್ಟೇ ಶಾಸ್ತ್ರ ಸಂಪ್ರದಾಯ ಬದ್ಧವಾಗಿ ನಡೆಯುತಿತ್ತು. ಹೆಣ್ಣು ಮಗಳೊಬ್ಬಳು ಪ್ರತಿ ಶಾಸ್ತ್ರದಲ್ಲೂ ಕಣ್ಣೀರು ಕರೆಯದೆ ಬರುವ ಅತಿಥಿ. ಪದೇ ಪದೆ ತೇವವಾಗುವ ಅಪ್ಪನ ಕಣ್ಣುಗಳು, ಸೆರಗಿನ ತುದಿಗೆ ಕಣ್ಣೀರು ತಾಗಿಸಿಕೊಳ್ಳುವ ಅಮ್ಮನ ಸೀರೆ. ಹಲ್ಲು ಗಟ್ಟಿಮಾಡಿ ದುಃಖ ತಡೆದುಕೊಳ್ಳುವ ಅಣ್ಣಾ ತಮ್ಮಂದಿರು. ಹುಡುಗಿಯೊಂದಿಗೆ ಕಣ್ಣೀರಾಗುವ ಅಕ್ಕ ತಂಗಿಯರು, ಮದುವೆ ಹಿಂದಿನ ದಿನ ಬರುವ ದಿಬ್ಬಣ ಬಡಿಯುವವರು, ಅವರ ಬಡಿತಕ್ಕೆ ಹೆಜ್ಜೆ ಹಾಕುವ ಹುಡುಗರು, ಹೊಸ ಬಟ್ಟೆಯೇ ಬೇಕೆಂದು ಇಲ್ಲದೆ, ಇರುವುದರಲ್ಲಿ ಒಳ್ಳೆಯದನ್ನು ಹಾಕಿ ಸಂಭ್ರಮಿಸುವ ಮನಸ್ಸುಗಳು.ಬಡತನದ ನಡುವೆ ಗಟ್ಟಿ ಕಾಣಿಸಲು ಪ್ರಯತ್ನಿಸುವ ಜೀವಗಳು, ಹಿರಿಯರ ಬೀಡಿ ಹೊಗೆ. ಸದಾ ತುಂಬಿರುವ ವೀಳ್ಯದ ಬಟ್ಟಲು. ಎಲ್ಲವೂ ನಗುವಿನ ಸಂಕೇತಗಳು. ಕಷ್ಟವಿತ್ತು ಕಾರ್ಪಣ್ಯವಿತ್ತು.ಆದರೆ ಅಲ್ಲಿ ನಮ್ಮವರು ಎಲ್ಲಾ ಸೇರಿ ಒಂದು ಗೂಡುವ ಮೌಲ್ಯವಿತ್ತು.
ಆದರೆ ಈಗ, ಕಾಲ ದುಡ್ಡಿನ ಕಾರಳತೆಗೆ ಮುಖ ಮಾಡುತ್ತಾ ಸಾಗಿತು. ದೊಡ್ಡ ದೊಡ್ಡ ಮದುವೆ ಸಭಾಂಗಣ ಬಂದವು, ಶಾಮಿಯಾನ ಅಂಗಡಿ ದಾಂಗುಡಿ ಇಟ್ಟವು, ಎಲ್ಲವೂ ಇವೆಂಟ್ ಮ್ಯಾನೇಜ್ ಮೆಂಟ ಎಂಬ ದೂರ್ತನ ಕಪಿಮುಷ್ಟಿಯಲ್ಲಿ ಸಿಲುಕುತ್ತ ಸಾಗಿತು. ನಿಧಾನಕ್ಕೆ “ನೆಮ್ಮದಿ” ಕರಗುತ್ತಾ ಹೋಯಿತು. ಸಂಬಂಧ ಬಂಧುತ್ವ ಎಲ್ಲವೂ ಕೃತಕತೆ ಕಡೆ ಹೆಜ್ಜೆ ಹಾಕುತ್ತಾ ಹೋಯಿತು.
ಮದುವೆ ಮುಗಿದ ಕೂಡಲೇ ಶಾಮಿಯಾನ ಇಳಿಸುವ ಹುಡುಗರು, ಪಾತ್ರೆ ತುಂಬುವ ಹುಡುಗರು. ಅಲ್ಲಿ ಚೊಕ್ಕ ಮದುವೆ ನಡೆದ ಯಾವ ಕುರುಹುಗಳೂ ಇಲ್ಲಾ. ಹಿಂದಿನಗಿಂತ ಇಂದು ಅದ್ದೂರಿ ಮದುವೆ ನಡೆಯುತ್ತಿದೆ. ಆದರೆ ಅಂದಿನಂತೆ ಖುಷಿ ಕೊಡುವ ಮದುವೆಗಳು ನಡೆಯುತ್ತಿಲ್ಲ.
ಹಣ ಮತ್ತು ಅಂತಸ್ತುಗಳ ನಡುವೆ ಸಂಬಂಧಗಳು ಮುರುಟಿ ಹೋಗುತ್ತಿದೆ. ಭಾವನೆಗಳಿಗೆ ಇಲ್ಲಿ ಯಾವ ಮನ್ನಣೆಯೂ ಇಲ್ಲಾ. ಒಲವು ಗರ್ಭ ಕಟ್ಟುವ ಯಾವ ಸನ್ನಿವೇಶವು ಇಲ್ಲಾ. ದುಡ್ಡಿಗಾಗಿ ಊಟಾ ಬಡಿಸುವ ಕ್ಯಾಟರಿಂಗ್ ರವರ ಕಣ್ಣಲ್ಲಿ ಮನದಲ್ಲಿ ಇನ್ಯಾವ ಸಂಬಂಧದ ಆದ್ರತೆ ಹುಟ್ಟಬಲ್ಲದು. ನಾಲ್ಕು ಜನರಿಗೆ ಹೊಸ ಹೊಸ ಉದ್ಯೋಗ ಸಿಕ್ಕಿರಬಹುದು,ಅವರ ಉದ್ಯೋಗದ ಬಗ್ಗೆ ನನ್ನದೇನೂ ತಕರಾರು ಇಲ್ಲ. ಆದರೆ ದುಡ್ಡಿಲ್ಲದ ಕಾಲದಲ್ಲಿ ನೆಮ್ಮದಿಯ ಕುಸುಮಗಳು ಹುಟ್ಟುತ್ತಿದ್ದ ಅವಕಾಶ ನಾವೇ ಕತ್ತರಿಸಿ ಹಾಕಿ ಬಿಟ್ಟೆವಲ್ಲ ಅದರ ಬಗ್ಗೆ ಮರುಕ ಅಷ್ಟೇ.
ಇವೆಂಟ್ ಮ್ಯಾನೇಜ್ಮೆಂಟ್ ಕಾಲಿಡುತ್ತಲೇ, ಸಂಬಂಧದ ಮೌಲ್ಯಗಳು ಕತ್ತರಿಸಿ ಬೀಳುತ್ತ ಸಾಗಿದೆ. ನಿಜಕ್ಕೂ ಇದರಲ್ಲಿ ಸುಖ ಕಾಣುವ ಭಾರತ ನನ್ನದಲ್ಲ ಎನ್ನುವ ಆತಂಕ ಕೂಡ ಕಾಡುತಿದೆ. ಹಣದ ಹರಿವು ಹೆಚ್ಚಾದಂತೆ, ನೆಮ್ಮದಿ ಕರಗುತ್ತಾ ಸಾಗಿದೆ. ನೆಮ್ಮದಿ ಇಲ್ಲದ ಜೀವನಕ್ಕೆ ಮೋಕ್ಷವು ಇಲ್ಲವೇನೋ…
ಬರೆಯಬೇಕು ಅನ್ನಿಸಿತು .
- ರತ್ನಾಕರ ಗಡಿಗೇಶ್ವರ
