ವಿದ್ಯಾ ಅರಮನೆ ಅವರ “ಚಿಟ್ಟೆ ಗೊಂಬೆ” ಲೋಕಾರ್ಪಣೆಗೊಂಡಿದೆ. ಮಕ್ಕಳಿಗಾಗಿ ರಚಿಸಿದ ಚಂದದ ಒಂದು ಕವನ ಸಂಕಲನ. ಪುಸ್ತಕಕ್ಕೆ ಮುನ್ನುಡಿಯನ್ನು ಹಿರಿಯ ಸಾಹಿತಿ ಡಾ.ಲಕ್ಷ್ಮಣ ಕೌಂಟೆ ಅವರು ಬರೆದಿದ್ದು, ಪುಸ್ತಕದ ಕುರಿತು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ….
ಪುಸ್ತಕ : ಚಿಟ್ಟೆಗೊಂಬೆ
ಕವಿಯತ್ರಿ : ವಿದ್ಯಾ ಅರಮನೆ
ಬೆಲೆ : ೧೫೦.೦೦
ಪ್ರಕಾರ : ಮಕ್ಕಳ ಕವನಗಳು
ಹೆಸರೇ ಹೇಳುವಂತೆ ‘ಚಿಟ್ಟೆಗೊಂಬೆ’ ಇದೊಂದು ಮಕ್ಕಳ ಕುರಿತ ಕವನ ಸಂಕಲನ. ಇದನ್ನು ರಚಿಸಿದವರು ಕವಯತ್ರಿ ಶ್ರೀಮತಿ ವಿದ್ಯಾ ಅರಮನೆಯವರು. ವೃತ್ತಿಯಲ್ಲಿ ಶಿಕ್ಷಕಿ. ಮಕ್ಕಳು ಮೊದಲು ಕಲಿಕೆಯನ್ನು ಆರಂಭಿಸುವುದೇ ತಾಯಿಯ ಮೂಲಕ. ಆ ಮೇಲೆ ಮನೆಯವರು, ನೆಂಟರಿಷ್ಟರು, ಸಮಾಜ ಮೊದಲಾದವರಿಂದ. ಶಾಲೆಯ ಮೆಟ್ಟಿಲು ಹತ್ತಿದ ಮೇಲೆ ಶೈಕ್ಷಣಿಕ ಶಿಸ್ತಿನಲ್ಲಿ ಕಲಿಕೆ ಆರಂಭ. ಮಕ್ಕಳ ಶರೀರ ಹೇಗೆ ಕೋಮಲವೋ, ಅವರ ಮನಸ್ಸೂ ಹಾಗೆಯೇ ಕೋಮಲ. ಕಲಿಯುವ ಆಸಕ್ತಿ ಬಹಳ. ಕಣ್ಣಿಗೆ ಕಾಣುವುದೆಲ್ಲವನ್ನು ಅರಿತುಕೊಳ್ಳಬೇಕು ಎನ್ನುವ ಆಸಕ್ತಿ. ಪ್ರತಿಯೊಂದರಲ್ಲೂ ಕುತೂಹಲ. ಅದರಲ್ಲೂ ಚಿಕ್ಕಪುಟ್ಟ ಹಕ್ಕಿಗಳು, ಚಿಟ್ಟೆಗಳು, ಕೋಳಿ-ಮರಿಗಳು, ಬೆಕ್ಕು, ಬೆಕ್ಕಿನ ಮರಿ, ನಾಯಿ-ಮರಿ, ಇತರ ಶಿಶುಗಳು, ಬಣ್ಣ ಬಣ್ಣದ ಹೂಗಳು ಮೊದಲಾದವುಗಳು. ಶಾಲೆಗೆ ಬಂದ ಮೇಲೆ ಕಲಿಕಾ ಪುಸ್ತಕದಲ್ಲಿ ಮುದ್ರಿತವಾದ ಬಣ್ಣ ಬಣ್ಣದ ಚಿತ್ರಗಳು ಆಯಸ್ಕಾಂತದಂತೆ ಮಕ್ಕಳನ್ನು ಸೆಳೆದೇ ಬಿಡುತ್ತವೆ. ಶಿಕ್ಷಕ/ಶಿಕ್ಷಕಿ ಕಲಿಸುವ ಚಿಕ್ಕಪುಟ್ಟ ಹಾಡುಗಳಂತೂ ಸ್ಮರಣೆಯಲ್ಲಿ ಇರಿಸಿಕೊಂಡು ಹೆತ್ತವರ ಮುಂದೆ ಹೇಳುವಲ್ಲಿ ಎಲ್ಲಿಲ್ಲದ ಉತ್ಸಾಹ. ಇಂತಹ ಮಕ್ಕಳನ್ನು ಗಮನದಲ್ಲಿ ಇರಿಸಿಕೊಂಡು ಬರೆಯುವ ಕವಿತೆಗಳಾದರೂ ಹೇಗಿರಬೇಕು? ಈ ಪ್ರಶ್ನೆಯನ್ನು ಮನದಲ್ಲಿ ಇರಿಸಿಕೊಂಡು ವಿದ್ಯಾ ಅರಮನೆಯವರು ‘ಚಿಟ್ಟೆಗೊಂಬೆ’ ಕವನ ಸಂಕಲವನ್ನು ರಚಿಸಿದಂತಿದೆ.

ಇಲ್ಲಿಯ ಕವಿತೆಗಳು ಆಸಕ್ತಿಯಿಂದ ಕೇಳಲು ಕುಳಿತ ಮಕ್ಕಳ ಮುಂದೆ ತಾಯಿ ಹೇಳಿದಂತೆಯೇ ಆಕರ್ಷಕವಾಗಿವೆ. ತಾಯಿಯನ್ನು ಭೂದೇವಿಗೆ ಹೋಲಿಸಿದಂತೆ, ವಿದ್ಯಾದೇವಿಯನ್ನು ಸರಸ್ವತಿಗೆ ಹೋಲಿಸಲಾಗಿದೆ. ಹೀಗೆ ದೇವತೆಗಳಲ್ಲಿ ಸ್ತ್ರೀಗೆ ಮಹತ್ವವಿದೆ. ಅವಳು ನುಡಿ ನಡೆ ಸಂಸ್ಕಾರವನ್ನು, ಈಗಂತೂ ಶಿಕ್ಷಣವನ್ನೂ ಶಿಕ್ಷಕಿಯಾಗಿ ಅವಳೇ ಕಲಿಸುತ್ತಿರುವುದು. ಅಂಗನವಾಡಿ, ಕಿರಿಯ ಶಾಲೆಗಳಲ್ಲಿ, ಖಾಸಗಿ ಶಾಲೆಗಳಲ್ಲಿ ಪುರುಷರಿಗಿಂತ ಮಹಿಳೆಯರಿಗೆ ಹೆಚ್ಚು ಪ್ರಾಶಸ್ತ್ಯ. ಹೀಗಾಗಿ ಕಲಿಯುವ ಮಕ್ಕಳಿಗೆ ಆರಂಭದಲ್ಲಿ ಎಂತಹವುಗಳನ್ನು ಕಲಿಸಬೇಕು ಎನ್ನುವುದಕ್ಕೆ ಉತ್ತರ ರೂಪದಲ್ಲಿ ಈ ಕವನ ಸಂಕಲನವಿದೆ ಎಂದು ಹೇಳಿದರೆ ಅತಿಶಯೋಕ್ತಿ ಏನಲ್ಲ ಅಂತ ನಾನು ಭಾವಿಸಿರುವೆ.
ಚಿಕ್ಕ ಚಿಕ್ಕ ಪದಗಳುಳ್ಳ ಸುಲಲಿತ ಭಾಷೆ ಮಕ್ಕಳಿಗೆ ಸುಲಭವಾಗಿ ಒಗ್ಗುತ್ತದೆ. ಅಂತಹ ಪದಗಳಿಂದ ಕೂಡಿದ ಅರ್ಥಪೂರ್ಣ ಕವಿತೆಗಳು ಮಕ್ಕಳ ಮನಸನ್ನು ಆಕರ್ಷಿಸುತ್ತವೆ. ಮಕ್ಕಳ ಉದರಕ್ಕೆ ಹೇಗೆ ಮೃದು ಆಹಾರ ಶ್ರೇಷ್ಠವೋ, ಹಾಗೆಯೇ ಕೋಮಲ ಪದಗಳುಳ್ಳ ಸರಳ ಅರ್ಥದ ಕವಿತೆಗಳು ಅವರ ಮನಸ್ಸಿಗೆ ನಾಟಿ ಸ್ಮೃತಿಯಲ್ಲಿ ಉಳಿದುಕೊಳ್ಳುತ್ತವೆ.
‘ಚಿಟ್ಟೆಗೊಂಬೆ’ ಮಕ್ಕಳ ಕವನ ಸಂಕಲನದಲ್ಲಿ ಕೋಮಲ ಭಾವದ ಕವಿತೆಗಳೇ ಹೆಚ್ಚು ಸಂಖ್ಯೆಯಲ್ಲಿ ಇವೆ. ಹಾಗೆ ನೋಡಿದರೆ ಇಲ್ಲಿನ ಯಾವ ಕವಿತೆಗಳೂ ಕಠಿಣ ಸ್ವರೂಪದವುಗಳಲ್ಲ. ಅವುಗಳ ಶೀರ್ಷಿಕೆಗಳೂ ಹಾಗೆಯೇ. ಇಲ್ಲಿನ ಎಂಭತ್ತು ಕವಿತೆಗಳ ಶೀರ್ಷಿಕೆಗಳಲ್ಲಿ ಮಾದರಿಯಾಗಿ ಕೆಲವನ್ನು ಗಮನಿಸಬಹುದು :
ಪ್ರಾರ್ಥನೆ, ಕನ್ನಡ, ಹನುಮ, ಮಗಳು, ಒಗಟು, ಅಮ್ಮ, ಅಪ್ಪ, ಅರಿಕೆ, ಕಲಿಕೆ, ಮಳೆ ಹೇಳುವ ಮಾತು, ತಾಯಿನೆಲ, ಮತ್ತೆ ಹಾರಿದ ಗುಬ್ಬಿ, ಹಂಚಿ ತಿನ್ನೋಣ, ಅಪ್ಪನ ಅಂಗಿ, ಚಿಟ್ಟೆಗೊಂಬೆ, ಬನ್ನಿ ಶಾಲೆಗೆ, ಮಕ್ಕಳ ಸಂತೆ…
ಹೀಗೆಯೇ ಎಲ್ಲವೂ. ಹಾಗೆಯೇ ಈ ಎಲ್ಲ ಕವಿತೆಗಳಲ್ಲಿ ಸಕಾರಾತ್ಮಕ ಅಂಶಗಳೇ ಇದ್ದು ಮಕ್ಕಳಿಗೆ ಸರಿಯಾದ ಮಾರ್ಗದಲ್ಲಿ ಕ್ರಮಿಸುವುದನ್ನೇ ಹೇಳುತ್ತವೆ. ಪ್ರೀತಿ, ಕರುಣೆ, ಸ್ನೇಹಭಾವ, ಕೂಡಿ ಆಡುವುದು, ಹಂಚಿ ತಿನ್ನುವುದು, ಪಶು ಪಕ್ಷಿ ಚಿಟ್ಟೆಯಾದಿಗಳನ್ನು, ಮರ ಲತೆ ಹೂ ಮೊದಲಾದವುಗಳನ್ನು ಪ್ರೀತಿಸುವುದು ಮೊದಲಾದ ಮಾನವೀಯ ಅಂಶಗಳನ್ನೇ ಮಕ್ಕಳ ಮನದಲ್ಲಿ ಬಿತ್ತುತ್ತವೆ.
ಕೆಲವು ಕವಿತೆಗಳನ್ನು ಇಲ್ಲಿ ಗಮನಿಸಬಹುದು. ಕವನ ಸಂಕಲನದ ಶೀರ್ಷಿಕೆಯ ಕವಿತೆ ‘ಚಿಟ್ಟೆಬೊಂಬೆ’ಯ ಕೆಲವು ಸಾಲುಗಳು ಹೀಗಿವೆ :
‘ಗಗನದಲ್ಲಿ ಉದಯರವಿಯ
ಅರ್ವಿ ಕಂಡಳು
ಬೆಳಕು ಸುರಿದ ಹಾದಿಯಲ್ಲಿ
ಮೆಲ್ಲಗೆ ನಡೆದಳು
ಅರಳಿ ನಿಂತ ಹೂವ ಚೆಲುವು
ಅವಳ ಸೆಳೆಯಿತು
ದುಂಬಿ ಹಿಂಡ ಕಂಡ ಮೇಲೆ
ಬೆಳಗು ಮೂಡಿತು’
ಆಕಾಶ ಮತ್ತು ಭುವಿಯ ವಿಸ್ಮಯಗಳನ್ನು ಈ ಕವಿತೆಯಲ್ಲಿ ಹೇಳಲಾಗಿದೆ. ಜಗಕ್ಕೆ ಬೆಳಕು ಕೊಡುವ ಸೂರ್ಯ ವಿಸ್ಮಯಕಾರಿಯೇ. ಸೂರ್ಯ ಕಿರಣಗಳ ಮೂಲಕವೇ ಪೃಥ್ವಿಯ ವ್ಯವಹಾರಗಳು ನಡೆಯುತ್ತವೆ. ಗಿಡ ಮರ ಬಳ್ಳಿಯಾದಿಗಳು ಬೆಳೆಯುವುದು ಅದೇ ಬೆಳಕಿನಿಂದಲೇ. ಆ ಬೆಳಕಿನಲ್ಲಿಯೇ ನಡೆದ ಬಾಲಕಿಯೋರ್ವಳು ಬಳ್ಳಿಯಲ್ಲಿ ಅರಳಿ ನಿಂತ ಹೂ, ಅವುಗಳ ಸುತ್ತ ಪರಿಭ್ರಮಿಸುತ್ತಿರುವ ಮೋಹಕ ದುಂಬಿಗಳನ್ನು ನೋಡಿ ಸಂಭ್ರಮಿಸುತ್ತಾಳೆ. ಇದೊಂದು ಚಿತ್ರ ಕವಿತೆ. ಸಾಲುಗಳನ್ನು ಓದುತ್ತಿದ್ದ ಹಾಗೆಯೇ ಅವುಗಳು ಕಣ್ಣೆದುರು ಬರುತ್ತವೆ.
ಇನ್ನೊಂದು ಕವಿತೆ ಮಗಳು :
‘ನನ್ನ ಮಗಳು ನನ್ನ ಮನೆಗೆ
ಪುಟ್ಟ ಚಂದಿರ
ತಟ್ಟಿ ಕರೆಯುತ್ತಾಳೆ ಇವಳು
ತುಂಬು ತಿಂಗಳ
ಎರಡು ತಾರೆ ಕೂಡಿಕೊಂಡ
ಜೋಡಿ ಕಂಗಳು
ಒಂದು ಸಣ್ಣ ಬೆರಗು ಕಂಡು
ಅರಳಿಕೊಳುವಳು’
‘ಮಗಳು ಮನೆಗೆ ಶೀತಲ ಬೆಳಕು ಹರಡಿ ಮನವನ್ನು ಅರಳಿಸುವ ಪುಟ್ಟ ಚಂದಿರೆಯೇ. ಮುದ್ದು ಕುವರಿಯನ್ನು ಮೆಚ್ಚದ ಹೆತ್ತವರಿರುವುದು ಉಂಟೆ? ಆ ಮಗು ಆಗಸದಲ್ಲಿ ಮೂಡಿದ ಹಾಲು ಬಣ್ಣದ ಚಂದಿರನನ್ನು ಕೈ ಮಾಡಿ ಕರೆಯುತ್ತಾಳೆ. ಅಲ್ಲಿ ಕಾಣುವ ಜೋಡಿ ನಕ್ಷತ್ರಗಳನ್ನು ಕಣ್ಣುಗಳನ್ನಾಗಿ ಕಲ್ಪಿಸಿಕೊಂಡು ಹಿಗ್ಗುತ್ತಾಳೆ. ಆ ಮಗುವಿನ ಮುಖದಲ್ಲಿರುವ ಸಂಭ್ರಮ ಹೆತ್ತವರ ಮುಖದಲ್ಲಿ ಕಾಂತಿಯನ್ನು ತುಂಬುತ್ತದೆ.

ಇನ್ನೊಂದು ಕವಿತೆ ‘ಮರಳ ರಾಶಿ’ :
‘ರಾಶಿ ಮರಳನು ನೋಡಿದ ಕೂಡಲೆ
ಆಡುವ ಆಸೆಯು ಆಗುವುದು
ಗೆಳೆಯರ ಜೊತೆಯಲಿ ಕುಣಿಯಲು ಥೈತಕ
ನಿಲ್ಲದೆ ಮರಳಿಗೆ ಓಡುವೆನು’
ಇದೆಲ್ಲ ಬಾಲ್ಯದಲ್ಲಿ ಸಹಜವಾಗಿ ಮರಳು ಕಂಡರೆ ಮಕ್ಕಳು ಮನೆ ಕಟ್ಟಿ ಆಡುವವರೇ. ಎಲ್ಲರ ಬಾಲ್ಯದಲ್ಲೂ ಈ ತರಹದ ಆಟಗಳು ಸಹಜವೇ.
ಮತ್ತೊಂದು ಕವಿತೆ ‘ಕನ್ನಡ’ :
‘ಕನ್ನಡ ಭಾಷೆ ಮಳೆ ಹನಿ ಹಾಗೆ
ಎದೆಯಲ್ಲಿ ಬಿದ್ದ ನೆಲ ಹಸಿರು
ಕನ್ನಡ ಕೋಟಿ ನದಿಗಳ ಹಾಗೆ
ಸೇತುವೆ ಇಲ್ಲಿ ಎದೆಯುಸಿರು
ಬೇಲಿಯೇ ಇರದ ಕನ್ನಡ ನುಡಿಯು
ಸುಂದರವಾದ ಹೂದೋಟ
ನಿಲ್ಲದ ಜೀವ ದೇಹದಿ ಇರಿಸಿ
ಉಸಿರು ನೀಡೋ ಪರಿಪಾಠ
ಕನ್ನಡ ಭಾಷೆ ಸುಲಿದ ಬಾಳೆ ಹಣ್ಣಿನಂದದಿ ಎನ್ನುವುದು ಕವಿವಾಣಿ. ಕನ್ನಡ ಎಂದರೆ ಕುಣಿದಾಡುವುದು ಎನ್ನ ಮನ ಎಂದಂತೆ ಆ ಭಾವ ‘ಕನ್ನಡ’ ಕವಿತೆಯಲ್ಲಿ ವ್ಯಕ್ತವಾಗಿದೆ. ಇದೇ ಸಂಕಲನದ ಇನ್ನೊಂದು ಕವಿತೆ ‘ಯಶಸ್ಸಿನ ಗುಟ್ಟು’ ಕಲಿಕೆಯ ಮಹತಿಯನ್ನು ಹೇಳುತ್ತದೆ, ಕಲಿಯಲು ಇಚ್ಛಾಶಕ್ತಿಯನ್ನು ಪ್ರೇರೇಪಿಸುತ್ತದೆ :
‘ಬಿಲ್ಲು ವಿದ್ಯೆಯ ಕಲಿಯಲೆಂದು
ಏಕಲವ್ಯನು
ದ್ರೋಣರನು ಹುಡುಕಿಕೊಂಡು
ಹೊರಟುಬಿಟ್ಟನು’
ಇದು ‘ಮಹಾಭಾರತ’ ಮಹಾಕಾವ್ಯದಲ್ಲಿ ಬರುವ ವಿದ್ಯಾಸಕ್ತ ಏಕಲವ್ಯನ ಕುರಿತ ಒಂದು ಪ್ರಸಂಗ. ಗುರುದ್ರೋಣರು ವಿದ್ಯೆಯನ್ನು ಕಲಿಸಲು ಅನಿವಾರ್ಯ ಕಾರಣಗಳಿಂದ ನಿರಾಕರಿಸುತ್ತಾರೆ. ಆದರೆ ಛಲ ಬಿಡದ ಏಕಲವ್ಯ ಸ್ವಪ್ರಯತ್ನದಿಂದಲೇ ಅರ್ಜುನನನ್ನು ಮೀರಿಸುವ ಹಾಗೆ ಧನುರ್ವಿದ್ಯೆಯಲ್ಲಿ ಪಾರಂಗತನಾಗುತ್ತಾನೆ. ಅದನ್ನು ಈ ಕವಿತೆಯಲ್ಲಿ ಸೂಚ್ಯವಾಗಿ ಹೇಳಲಾಗಿದೆ, ಕಲಿಸುವವರಿಗಿಂತ ಕಲಿಯುವವರಲ್ಲಿ ಆಸಕ್ತಿ ಮುಖ್ಯ ಎನ್ನುವ ಹಾಗೆ :
‘ಗುರುವು ಇರದೆ ವಿದ್ಯೆ ಕಲಿವ
ಪಣವ ತೊಟ್ಟನು
ಶ್ರದ್ಧೆಯಿಂದ ವಿದ್ಯೆ ಕಲಿತು
ಸಫಲನಾದನು’
ಮಕ್ಕಳ ಮಟ್ಟಕ್ಕೆ ಇಳಿದು ಯೋಚಿಸಿ ಕವಯತ್ರಿ ರಚಿಸಿದ ಈ ಸಂಕಲನದ ಕವಿತೆಗಳಲ್ಲಿ ತಾಯ್ತನದ ತುಡಿತವಿದೆ ಎನ್ನುವುದು ಸಹಜವಾಗಿ ಓದುಗರ ಅರಿವಿಗೆ ದಕ್ಕುತ್ತದೆ. ಈ ಕವಿತೆಗಳ ರಚನೆಯಲ್ಲಿ ಸಾರ್ಥಕ್ಯ ಇದೆ ಎಂದು ಹೇಳಿದರೆ ಅದು ಅತಿಶಯೋಕ್ತಿ ಹೇಳಿಕೆಯೇನಲ್ಲ.
ಇಂತಹ ಕವನ ಸಂಕಲನಕ್ಕೆ ನನ್ನಿಂದ ನಾಲ್ಕು ನುಡಿಗಳನ್ನು ಬರೆಯಿಸಿದ ಶ್ರೀಮತಿ ವಿದ್ಯಾ ಅರಮನೆಯವರಿಗೆ ನಾನು ಕೃತಜ್ಞನಾಗಿದ್ದೇನೆ.
- ಡಾ. ಲಕ್ಷ್ಮಣ ಕೌಂಟೆ – ಹಿರಿಯ ಸಾಹಿತಿಗಳು, ಕಲಬುರಗಿ
