‘ಹುಟ್ಟಬೇಕು ಕಟ್ಟಬೇಕು’ ಗಜಲ್

ಹೆಮ್ಮೆಯ ಗಜಲ್ ಕಾರ ಪೀರಸಾಬ ನದಾಫ ಅವರ ಜನ್ಮದಿನಕ್ಕೆ ಅವರ ರಚನೆಯ ಸುಂದರ ಗಜಲ್ ಆಕೃತಿಕನ್ನಡದಲ್ಲಿ ಪ್ರಕಟಿಸುವ ಮೂಲಕ ಅವರಿಗೆ ಹುಟ್ಟುಹಬ್ಬಕ್ಕೆ ಶುಭಾಶಯಗಳನ್ನು ಕೋರಲಾಗುತ್ತದೆ, ತಪ್ಪದೆ ಮುಂದೆ ಓದಿ…

ಹುಟ್ಟಬೇಕು ಹಟ್ಟಿಯೊಳಗಣ ಸಗಣಿ ತುಳಿದಂತೆ ಕವಿತೆ
ಕಟ್ಟಬೇಕು ನುಡಿ ಪಡಸಾಲೆಯ ಕಂಬದಸಾಲಂತೆ ಕವಿತೆ

ಒಂದೊಂದು ಪ್ರಾಸಕ್ಕೆ ಚಂದ ನಾಗೊಂದಿಯ ಗೊಂಬಿ
ಕಂಬ ಕಂಬವು ಕಥೆ ಹೇಳುವ‌ ಕಲೆಗಾರಿಕೆಯಂತೆ ಕವಿತೆ

ಅವ್ವ ರೊಟ್ಟಿ ಬಡಿಯುವ ಸದ್ದಿನಲಿ ಅನುರಾಗವರಳಿ
ಇರಬೇಕು ವಗ್ಗರಣಿ ಡಬ್ಬಿಯ ಸಾಮಗ್ರಿಗಳಂತೆ ಕವಿತೆ

ಮೂರು ತಲೆಮಾರುಗಳಿಂದ ಕಂಡುಂಡ ಬದುಕನು
ಸವಿಯುವ ಸಂತಸ ತುಂಬಿದ ಕೊಡಪಾನದಂತೆ ಕವಿತೆ

ಮೊಲ್ಲೆ ಮಗ್ಗು ಹಿಡಿಹಿಡಿ ಎಂದಾಗ ಕೈಕೊಡವಿ ಓಡಿದ ಹಾಗೆ
ನಾಚಿ ಬೆರಳಲಿ ನೆಲ ಕೆರೆದು ನಿಂತ ಹೆಂಡತಿಯಂತೆ ಕವಿತೆ

ಕಟುವಾಸ್ತವದ ಕಮಟು ವಾಸನೆ ಮೂಗಿಗೆ ಅಡರಿದರು
ಅದಕೆ ಜರಾ ಸಂಯಮದ ಶೃಂಗಾರ ಹಚ್ಚಿದಂತೆ ಕವಿತೆ

ದೇವರ ಜಗುಲಿಯ ಮುಂದೆ ನಂದಾ ದೀಪ‌ ಉರಿದಂತೆ
ಕಂಗಳ ಹೊಳಪು ಹೆಚ್ಚಿಸಿ ಜ್ಞಾನದ ಬೆಳಕನಿಯ್ದಂತೆ ಕವಿತೆ

ಬಸುರಿ ಬಯಕೆಯ ದೀನಿಸುಗಳ ಪೇಸರಿಸಿ ಇಟ್ಟಂತೆ
ಅವಳಿಗೆ ಸಲ್ಲಿಸಿ ನಿಂತ ಸಾರ್ಥಕ ಭಾವದಂತೆ ಕವಿತೆ

ಕನಸೇನೆ ಇರಲಿ ಸ್ನೇಹ ಪ್ರೀತಿಯಲಿ ಮನಸಿರಲಿ ಪೀರ
ದಿಲ್ ಬೆಸೆಯುವ ಒಲವ ಧಾರೆಯ ಓಘದಂತೆ ಕವಿತೆ


  • ಪೀರಸಾಬ ನದಾಫ 

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading