“ನಾಲಿಗೆ ಕ್ಯಾನ್ಸರ್” – ಡಾ. ಪ್ರಕಾಶ ಬಾರ್ಕಿ



ತಂಬಾಕು, ಜರ್ದಾ ಅಗಿದು ಉಗಿಯುವ ಮೊದಲು ಈ ಲೇಖನವನೊಮ್ಮೆ ಓದಿ. ನಾಲಿಗೆ ಕ್ಯಾನ್ಸರ್ ಬಗ್ಗೆ ಡಾ.ಪ್ರಕಾಶ ಬಾರ್ಕಿ ಅವರು ಬರೆದ ಈ ಲೇಖನ ನೂರಾರು ಬದುಕನ್ನು ಉಳಿಸಬಹುದು. ತಪ್ಪದೆ ಓದಿ…

ಹೀಗೊಂದು ಅನಿರೀಕ್ಷಿತ ಘಟನೆ…

‘ಕ್ಲಿನಿಕ್’ನಲ್ಲಿದ್ದ ಅಷ್ಟೂ ಜನರ ತಪಾಸಣೆ ಮಾಡಿ, ಕೋಪ ಮಡಚಿಟ್ಟು ಸಮಾಧಾನದಿಂದ ಮಾತನಾಡಿ ಔಷಧಿ ಬರೆದು ಕೊಟ್ಟು ಕಳುಹಿಸಿವ ಹೊತ್ತಿಗೆ ಮಧ್ಯಾಹ್ನವಾಗಿತ್ತು. ಒಂಚೂರು #ಮೊಬೈಲ್ ಪರದೆ ಮುಟ್ಟಿದೆ. Watsapp ಲ್ಲಿ ನನ್ನಿಂದ ಓದಿಸಿಕೊಳ್ಳದ ಸುಮಾರು ಮೆಸೇಜ್’ಗಳು ಕಾಯುತ್ತಿದ್ದವು. ಅವುಗಳನ್ನು ನೋಡುತ್ತಲೆ “ಮನೆಗೆ ಹೊರಡೋಣಾ” ಅಂತಾ ಕುರ್ಚಿ ಬಿಟ್ಟು ಏಳುವಷ್ಟರಲ್ಲೇ.. “ಖಾಸಿಂ”(ಹೆಸರು ಬದಲಿಸಿದೆ) ಅವಸರದಿಂದ ಒಳಬಂದ.

“ಸರ್ ನಮಸ್ಕಾರ್” ಅಂತ ದುಗುಡದಿಂದಲೆ ಹತ್ತಿರವಾದ. ಮುಖದ ತುಂಬಾ ನಿರಾಸೆ, ದುಗುಡದ ಅಡ್ಡುದ್ದ ರೇಖೆಗಳು.

ಮೊಬೈಲ್ ಟೆಬಲ್ಲಿಗಂಟಿಸಿ ಗಟ್ಟಿಯಾಗಿ ಕೂತೆ.

ಆತನ ತೊಂದರೆಯನ್ನ ಕೂಲಂಕುಷವಾಗಿ ಕೇಳಿ, ಪರೀಕ್ಷಿಸಿದ ನಂತರ ನನ್ನಲ್ಲಿಯೇ ಡವಗುಟ್ಟುವ ದುಗುಡ ಶುರುವಾಯಿತು.

ಫೋಟೋ ಕೃಪೆ :economictimes.indiatimes

ವೃತ್ತಾಂತ ಇಷ್ಟೇ….

“ಖಾಸಿಂ” ತರಕಾರಿ ವ್ಯಾಪಾರಿ ಜೊತೆಗೆ “ವಿಳ್ಯೆದೆಲೆ” ಮಾರುವವ. ಊರಿಂದ ಊರಿಗೆ ಸಂತೆಯಲ್ಲಿ ವ್ಯಾಪಾರ ಮಾಡಿ ಜೀವನ ನೂಕುವ ಬಡ- ಮಧ್ಯಮ ವರ್ಗದ ನಡುವಿನವ.

ಈತನ ಒಳ ಅಂಗಿಗೆ ದೊಡ್ಡದಾದ ಜೇಬಿದೆ ಅದು ಎಲೆ-ಅಡಕಿ-ತಂಬಾಕು-ಸುಣ್ಣದ ಉಗ್ರಾಣ. ದಿನವಿಡಿ ಬಾಯಿ ತುಂಬಾ ಎಲೆಯಡಕಿ ತಂಬಾಕು ಜಗಿಯುತ್ತಲೆ ಇರುತ್ತಾನೆ. ಮಾತನಾಡುವಾಗ ಒಮ್ಮೊಮ್ಮೆ ಜೊಲ್ಲು ಅಂಗಿಯ ಮೇಲೆ ಬಿದ್ದು ಕೆಂಪಗೆ ಕಲೆಗಳಾಗಿವೆ. ಆ ಕಲೆಗಳನ್ನು ನೋಡಿದರೆ ತಿಳಿಯುತ್ತೆ… Chain smoker ತರ ಇತನೂ chain tobacco chewer. ಈ ಹಿಂದೆ ಇದಕ್ಕಾಗಿಯೇ ನನ್ನಿಂದ ಬೈಸಿಕೊಂಡಿದ್ದ‌.

ತಿಂಗಳು ಹಿಂದೆಯೇ ನಾಲಿಗೆ ಮೇಲೆ ಚಿಕ್ಕದಾಗಿ ಚರ್ಮ ಕಿತ್ತು ಹೋಗಿ ಉರಿ ಶುರುವಾಗಿದೆ. ಊರಿನ ಮತ್ತು ಅಕ್ಕಪಕ್ಕದೂರಿನ ಕೆಲ ವೈದ್ಯರ ಭೇಟಿಯಾಗಿದೆ. ಸೊಪ್ಪು ಸೊದೆ ಅಂತ ತಿಕ್ಕಿ ತಿಂದದ್ದಾಗಿದೆ. ಎಲ್ಲರೂ “Heat ಆಗಿ, ಬಾಯಿ ಹುಣ್ಣು (Stomatitis) ಆಗಿದೆ. ಎಲೆಯಡಕೆಯಲ್ಲಿನ ಸುಣ್ಣ ಜಾಸ್ತಿ ತಾಗಿ ಗಾಯ ಆಗಿದೆ” ಅಂತ ಕೆಲವು ನೋವು ನಿವಾರಕ ಮತ್ತು ಗಾಯದ ಔಷಧಿ ಕೊಟ್ಟು ಕಳಿಸಿದ್ದಾರೆ.
ಆದರೆ “ಖಾಸಿಂ”ನಿಗೆ ಚೂರು ಗುಣ ಕಂಡಂತಾಗಿ ಮತ್ತೇ ಮತ್ತೇ ಅದೇ ನೋವು, ಉರಿ ಹೆಚ್ಚಾಗಿದೆ. ಮೆಚ್ಚಿ ತಿನ್ನುವ ಎಲೆಯಡಿಕೆಯೂ ಅಗಿಯಲಾಗದೇ ಚಡಪಡಿಸಿ ಹೋಗಿದ್ದ.

  • ಊಟ ಅಗಿಯುವಾಗ ನಾಲಿಗೆಯ ನೋವು.
  • ನುಂಗುವಾಗ ಗಂಟಲಲ್ಲಿ ನೋವು.
  • ಕಿವಿ ತಳದಲ್ಲಿ ತೀವ್ರ ಎಳೆದ ಅನುಭವ ಮತ್ತು ನೋವು.
  • ವಾಸಿಯಾಗದೇ ಹೆಚ್ಚಾಗುತ್ತಿರುವ ನಾಲಿಗೆಯಂಚಿನ ಹುಣ್ಣು.

ಇವುಗಳಿಂದ ಬಳಲುತ್ತಾ.. “ನನ್ನಿಂದ ಬೈಸಿಕೊಂಡು ಭೇಟಿಯಾಗದೇ ಇದ್ದವ” ಕೊನೆಗೂ ದಾರಿ ಕಾಣದೆ ಕ್ಲಿನಿಕ್’ಗೆ ಪಾದ ಬೆಳೆಸಿದ್ದ.

ಆತನ ತೊಂದರೆಯನ್ನು ಗಮನವಿಟ್ಟು ಕಣ್ಣು ಕಿರಿದಾಗಿಸಿಕೊಂಡು ಕೇಳಿದೆ. ಕೊನೆಗೆ ಬಾಯಿ ತೆರೆಯಿಸಿ “Torch” ಬೆಳಕು ಹರಿಸಿ ಪರೀಕ್ಷಿಸತೊಡಗಿದೆ.

ಹಲ್ಲುಗಳು ಕೆಂಪು, ಕಪ್ಪದಾಗಿ ಕರಿಗಟ್ಟಿವೆ. ಒಳ ಗಲ್ಲ ಬೆಳ್ಳಗೆ ಪಾಚಿಗಟ್ಟಿದಂತಿದೆ. ಸಂಪೂರ್ಣ ಬಾಯಿ ತೆರೆಯಲು ಅವಕಾಶ ನೀಡದೆ ಬಿಗಿದುಕೊಂಡಿದೆ. (Oral submucous Fibrosis). ನಾಲಿಗೆ ಮೇಲ್ಮೈಯಲ್ಲಂತೂ ಗುಟ್ಕಾದ ಬಿಳಿ ನಸುಗೆಂಪಿನ ಕೆನೆ ಪಾಚಿಯಂತೆ ಮೆತ್ತಿಕೊಂಡಿದೆ. ಜಾರುಬಂಡೆಗೆ ಅಂಟಿದ ಕೆಸರಿನಂತೆ.

ನಾಲಿಗೆಯ ಬಲ ಅಂಚಿಗೆ ಚಿಕ್ಕ ಗಾಯ ಕಾಣಿಸಿದಂತಾಗಿ, ನಾಲಿಗೆ ಹೊರಳಿಸಿ ನೋಡಿದೆ.

ಅಂಚಿನಲ್ಲಿ ಆಳವಾದ ಕೆಂಪು ಮತ್ತು ಬಿಳಿ ಚುಕ್ಕೆಯ ಗಾಯ ಎದ್ದು ಕಾಣುತ್ತಿದೆ. ಸುಮಾರು ಕಾಲು ಇಂಚು ಉದ್ದ ಇದೆ. ಅದರ ಸುತ್ತಾ ಊದಿಕೊಂಡ ಬಿಳಿಯ ಅಂಚಿನ ಉಬ್ಬು ಸ್ಪಷ್ಟವಾಗಿದೆ.
ಗದ್ದದಡಿಗೆ ಬೆರಳಿನಿಂದ ಒತ್ತಿ ಪರೀಕ್ಷಿಸಿದೆ. ಮೂರ್ನಾಲ್ಕು Lymph nodes (ದುಗ್ಧರಸ ಗ್ರಂಥಿ)ಗಳು ಊದಿಕೊಂಡಿವೆ. ಅಲ್ಲಿಂದ ಕಿವಿಯ ತಳದವರಗೆ ತೀವ್ರ ನೋವು. “ಶ್..ಸ್‌‌..ಹ್ಹಾ..!! ” ಎಂದು ಮುಖ ಕಿವುಚಿದ.

ಇಂಚಿಂಚು ಪರೀಕ್ಷಿಸುತ್ತಿದ್ದ ನನಗೆ ದುಗುಡ, ಸಂಶಯ ಹೆಚ್ಚಾಗಿ ಎದೆ ನಿಧಾನ ಡವಗುಟ್ಟಲು ಶುರುವಾಯಿತು. ಇದಂತೂ ಸಾಧಾರಣ ಹುಣ್ಣಲ್ಲ. “#ನಾಲಿಗೆ_ಕ್ಯಾನ್ಸರ್” (#Tongue_cancer) ಇರಬಹುದು ಎನಿಸತೊಡಗಿತು.

“ಖಾಸಿಂ. ಇದು heat ಹೆಚ್ಚಾಗಿ ಆದ ಗಾಯವಂತೂ ಅಲ್ಲ. ಬೇರೆ ಏನೋ ತೊಂದರೆಯಿದೆ. ಹುಬ್ಬಳ್ಳಿಗೆ ಹೋಗಿ ಬಾ” ಅಂತ ಸಂಶಯ ತೋರ್ಪಡಿಸದೆ ಹೇಳಿದೆ. ಆತನ ಎದೆಯ ಢವ.. ಢವ.. ಹೆಚ್ಚಾಗಿ, ಬಾಯಿ ಒಣಗಿಸಿಕೊಂಡು… ಕಣ್ಣಲ್ಲಿ ನೀರು ತುಂಬಿಕೊಂಡವ “ಸರ್ ಇದು ಕೆಟ್ಟಹುಣ್ಣ?” ಅಂತ ಪ್ರಶ್ನೆ ಅನಾಮತ್ತಾಗಿ ಎಸೆದ.

(ಆತನ ಭಾಷೆಯಲ್ಲಿನ “ಕೆಟ್ಟ ಹುಣ್ಣು” ಅಂದರೆ ಕ್ಯಾನ್ಸರ್)

ಆತನ ಹೆಗಲ ಮೇಲೆ ಕೈಯಿಟ್ಟು “ಇದು ತೊಂದರೆಯಿದೆ ಅನ್ಸುತ್ತೆ…ಅದೇನಂತ ಗೊತ್ತಾಗಲಿ. ಆದರೆ ಎಲ್ಲದಕ್ಕೂ ಔಷಧಿಯಿದೆ ಹೋಗಿ ಬಾ. ನನಗೆ ಪರಿಚಯದ ಡಾಕ್ಟರಿದ್ಧಾರೆ. ಏನಿದ್ದರೂ ನನ್ನದೇ ಜವಾಬ್ದಾರಿ ಹೋಗು” ಎಂದು. Refferal letter ಬರೆದು, ಕ್ಯಾನ್ಸರ್ ತಜ್ಞರಿಗೆ ಫೋನಾಯಿಸಿ ಹೇಳಿದೆ. “ಖಾಸಿಂ”ನಿಗೆ ಆದಷ್ಟೂ ಹೆಚ್ಚು ಧೈರ್ಯ ತುಂಬಿ ಕಳುಹಿಸಿಕೊಟ್ಟೆ.
ಹುಬ್ಬಳ್ಳಿ..

ತಲುಪಿಕೊಂಡ “ಖಾಸಿಂ”ನನ್ನ ಪರೀಕ್ಷಿಸಿದ “ಕ್ಯಾನ್ಸರ್ ತಜ್ಞ ವೈದ್ಯರು, ನಾಲಿಗೆ ಹುಣ್ಣಿನ ಚೂರು ಭಾಗವನ್ನು ಕತ್ತರಿಸಿ ಪರೀಕ್ಷೆಗೆ (Tissue Biopsy) ಕಳಿಸಿದ್ದಾರೆ. #ಸಿ_ಟಿ_ಸ್ಕ್ಯಾನ್ ಮಾಡಿಸಿದ್ದಾರೆ. ಕೊನೆಗೆ report ಕಾಯುತ್ತಾ ಕುತುಕೊಂಡೆ.

ನಾಲ್ಕು ದಿನಗಳ ನಂತರ “Biopsy Report” ನನ್ನ watsapp inboxಗೆ ಬಂದು ಬಿತ್ತು. ಹೌದು ನಾನಂದುಕೊಂಡಂತೆ ಅದು ನಾಲಿಗೆ ಕ್ಯಾನ್ಸರ್.

Biopsy report ಪ್ರಕಾರ ನಾಲಿಗೆಯ “ಸ್ಕ್ವ್ಯಾಮಸ್ ಜೀವಕೋಶ”ಗಳಿಗೆ ಕ್ಯಾನ್ಸರ್ ತಗುಲಿದೆ. ನಾಲಿಗೆ ಕ್ಯಾನ್ಸರ್ confirm ಆಯ್ತು.

ತುರಂತ… ಕ್ಯಾನ್ಸರ್ ತಜ್ಞ ವೈದ್ಯರಿಗೆ ಫೋನಾಯಿಸಿ ಕೇಳಿದೆ. “ಕ್ಯಾನ್ಸರ್ ಮೊದಲ ಹಂತದಲ್ಲಿದೆ (First stage)., ಬೇಗನೆ ಪತ್ತೆಯಾಯಿತು. ಅದು ಗದ್ದದಡಿಯ ಎರಡು Lymph nodes ಗೆ ಹಬ್ಬಿದೆ. ಎಲ್ಲವನ್ನೂ ಕತ್ತರಿಸಿ ತೆಗೆದರೆ ಸಾಕು.

#ಕಿಮೋಥೆರಪಿ, ರೇಡಿಯೋ ಥೆರಪಿ ಬೇಕಾಗಿಲ್ಲ” ಅಂದರು. ಚಿಕಿತ್ಸೆಯ ಖರ್ಚು ವೆಚ್ಚದ ಬಗ್ಗೆ ಮಾತನಾಡಿದೆ. 50 ರಿಂದ 60 ಸಾವಿರದೊಳಗೆ ಮಾಡುವೆ ಎಂದರು.



ಸರ್.. ಆತ ಬಡವ.. ನನ್ನ ಖಾಯಂ ಪೇಷೆಂಟ್. ಆಪರೇಷನ್ ದಿನ ನಾನು ಬರ್ತಿನಿ. ಇನ್ನಷ್ಟೂ ಕಡಿಮೆ ತಗೊಳ್ಳಿ ಅಂತ ಬೇತಾಳನಂತೆ ಬೆನ್ನಿಗೆ ಬಿದ್ದೆ. ಅವರು ಆಗಲಿ ಎಂದರು.

ಇನ್ನು “ಖಾಸಿಂ”ನಿಗೆ ಕರೆದು… ಅಳತೆ ಮೀರಿದ ತಂಬಾಕು ಸೇವನೆಯಿಂದ ಕ್ಯಾನ್ಸರ್ ಆಗಿದೆ. ಆದರೆ ಅದಿನ್ನೂ ಇವಾಗ ಆಗಿದ್ದು ಮೊದಲ ಹಂತದಲ್ಲಿದೆ.. ಸಂಪೂರ್ಣ ಹೋಗುತ್ತೆ. ಜೀವಕ್ಕೆ ನೂರಕ್ಕೆ.. ನೂರರಷ್ಟು ಅಪಾಯವಿಲ್ಲ” ಅಂತ ಒಪ್ಪಿಸಿದೆ. ಅವನ ಅಣ್ಣ, ಹೆಂಡತಿಗೂ ವಿಚಾರ ತಿಳಿಸಿ. ಎಲ್ಲ ಜವಾಬ್ದಾರಿ ಹೊತ್ತು. ಆಪರೇಷನ್’ಗೆ ಒಪ್ಪಿಸಿದೆ. ನನ್ನ ಮೇಲೆ ಎಲ್ಲರೂ ಭಾರ ಹಾಕಿ… ಆಗಲಿ ಅಂದದ್ದಾಯಿತು.

ಏನೂ ಅರಿಯದ “ಖಾಸಿಂ”ನ ಚಿಕ್ಕ ಮಕ್ಕಳು ಹೊರಗೆ ಕೇ ಕೇ ಹಾಕಿ ಆಟ ಆಡುತ್ತಿದ್ದವು.

ಇನ್ನೂ.. “ಖಾಸಿಂ” ಕಮಕ್ಕಿಮಕ್ಕ ಎನ್ನದೆ ನನ್ಮುಂದೆ “ಆಪರೇಷನ್”ಗೆ ತಯಾರಾದ. ಆದರೂ ಅವರೆಲ್ಲರೂ ಮನೆಯಲ್ಲಿ ಜಮೆಯಾಗಿ ಮಾತಾಡಿಕೊಂಡು.. ಒಪ್ಪಿ “#ಆಪರೇಷನ್” ಮಾಡಿಸಲಿ. “ಖಾಸಿಂ” ಬೇಗ ಗುಣ ಆಗಲಿ.

ಮತ್ತಾವುದೋ.. ಊರಲ್ಲಿ ಔಷಧಿ ಕೊಡ್ತಾರೆ ಅಂತಾನೂ.. “ನಾನೇ ಸರಿ ಮಾಡ್ತಿನಿ ಬಿಡೋ” ಎನ್ನುವ ಪ್ರಚಂಡ ವೈದ್ಯ ವೇಷಧಾರಿಗೂ… ನೋನಿ ಸಂಜೀವಿನಿ… ಅಂತ ತಿರುಗುವ ಚೈನ್ ಲಿಂಕ್ ವ್ಯಾಪಾರಿಗಳಿಗೂ “ಖಾಸಿಂ” ಬಲಿಯಾಗದೆ ಇರಲಿ ಅಂತ ಮನದಲ್ಲಿಯೇ “ಶಿವ”ನಿಗೆ ಪ್ರಾರ್ಥಿಸುತ್ತಿರುವೆ.

ಫೋಟೋ ಕೃಪೆ : economictimes

ಎಗ್ಗಿಲ್ಲದೆ #ತಂಬಾಕು, ಜರ್ದಾ ಅಗಿದು ಉಗಿಯುವವರೂ , ತುಟಿ ಕೆಳಗೆ ತಂಬಾಕು ಸುಣ್ಣ ತಿಕ್ಕಿ ಅದುಮಿಟ್ಟಕೊಳ್ಳುವ ವ್ಯಸನಿಗರೂ.. ಒಮ್ಮೆ ಓದಿ ಬಿಡಿ.

(ಗ್ರಾಮೀಣ ಭಾಗಗಳಲ್ಲಿ ವೈದ್ಯ ಸೇವೆ ಸಲ್ಲಿಸುತ್ತಿರುವ ಬಹು ವೈದ್ಯರು ಇಂತಹುದೇ ಹಲವು ಸನ್ನಿವೇಶಗಳನ್ನು ಎದುರಿಸುತ್ತಾರೆ. ಕೆಲವರು ಹೇಳಿಕೊಳ್ಳಲ್ಲ ಇನ್ನೂ ಕೆಲವೇ ಕೆಲವರು ನನ್ನ ಹಾಗೇ ಅನುಭವ ಹಂಚಿಕೊಳ್ಳುತ್ತಾರೆ. ಎಲ್ಲರೂ ಹಂಚಿಕೊಳ್ಳಲಿ ಎಂಬುದು ನನ್ನಾಸೆ. ಜನ ಜಾಗೃತಿಯಾಗಲಿ ಎಂಬ ಆಶಯ)


  • ಡಾ. ಪ್ರಕಾಶ ಬಾರ್ಕಿ  (ವೈದಕೀಯ ಬರಹಗಾರರು, ಆಯುರ್ವೇದ ವೈದ್ಯರು) , ಕಾಗಿನೆಲೆ.

0 0 votes
Article Rating

Leave a Reply

1 Comment
Inline Feedbacks
View all comments

[…] ಟೈಮಲ್ಲಿ ನೋವು ಕೊಟ್ಟು ಸಹಕರಿಸದೇ #ಸಿಜೇರಿಯನ್ ಆಪರೇಷನ್ ಗೆ ಹಣ ಕಳೆದಳು. ಆಸ್ಪತ್ರೆಯ ಖರ್ಚು […]

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

1
0
Would love your thoughts, please comment.x
()
x
Aakruti Kannada

FREE
VIEW