ತಪ್ಪು ತಪ್ಪೇ…ನ್ಯಾಯ ಒಂದೇ – ಪ್ರೊ. ರೂಪೇಶ್



ಟ್ರಾಫಿಕ್ ಪೊಲೀಸ್ ಬೈಕ್ ತಡೆದು ಫೈನ್ ಹಾಕಲು ಮುಂದಾದಾಗ, ಬೈಕ್ ಸವಾರ ಹಾಕಿದ ಪ್ರಶ್ನೆಗೆ ತಂಡು ಹೊಡೆದ ಟ್ರಾಫಿಕ್ ಪೊಲೀಸ್. ತಪ್ಪು ತಪ್ಪೇ…ಅದು ವಾಹನ ಸವಾರರೇ ಆಗಿರಲಿ…ಅಥವಾ ಟ್ರಾಫಿಕ್ ಪೊಲೀಸ್ ರೇ ಆಗಿರಲಿ. ನ್ಯಾಯ ಎಲ್ಲರಿಗೂ ಒಂದೇ ಅಲ್ಲವೇ? ಮುಂದೆ ಓದಿ…

೨೦೧೦ ಡಿಸೆಂಬರ್ ೧೬ …

ಮನೆಯ ಗೃಹಪ್ರವೇಶ ಮುಗಿದು, ಹಳೇ ಮನೆಯಲ್ಲಿ ಮರೆತು ಬಿಟ್ಟಿದ್ದು ಏನೋ ತರಬೇಕೆಂದು ಹೋಗುತ್ತಿದ್ದೆವು….

ನನ್ನ ಬೈಕಿನಲ್ಲಿ ನಾನೂ- SP (ನನ್ನಾಕೆ) ಹಾಗೂ ಅವಳ ತಮ್ಮನ ಬೈಕಿನಲ್ಲಿ ಅವನೊಬ್ಬನೇ ನಮ್ಮನ್ನು ಹಿಂಬಾಲಿಸುತ್ತಿದ್ದ. ನನ್ನ ವೇಗ ಸುಮಾರು ೩೦ಕಿ.ಮೀ, ಅವನೂ ಅಷ್ಟೇ ವೇಗದಲ್ಲಿ ನನ್ನ ಹಿಂಬಾಲಿಸುತ್ತಿದ್ದ. ದಾರಿ ಮಧ್ಯೆ ಸಂಚಾರಿ ಪೋಲೀಸು ಅವನ ತಡೆದರು. ತೂಸು ದೂರ ಹೋಗಿ ನಾನು ಮರಳಿ ಅವನ ಹುಡುಕಿ ಬಂದೆ.

ಗಾಡಿಯ ಎಲ್ಲಾ ದಾಖಲೆಗಳೂ ಅವನು ತೋರಿದ, ಎರಡು ತಿಂಗಳ ಹೊಸಾ ಯಮಹಾ ಬೈಕು, ಟ್ರಾಫಿಕ್ ಪೋಲೀಸು ಅವನ ಗಾಡಿಯ ಬೀಗದಕೈ ವಶಪಡಿಸಿ ಫೈನು ಕೇಳಿ ನಿರ್ಬಂಧಿಸುತ್ತಿದ್ದರು. ನಾನು ಅದರ ಮಧ್ಯೆ ಪ್ರವೇಶಿಸಿದೆ.

ಫೋಟೋ ಕೃಪೆ : times of india  (ಸಾಂದರ್ಭಿಕ ಚಿತ್ರ)

“ಯಾರಪ್ಪಾ ನೀನು? ಹೋಗಯ್ಯ ” ಅಂದರು ಪೋಲೀಸರು ನನಗೆ.

ನಾನು ಹೇಳಿದೆ…

” ಇವನು ನನ್ನ ತಮ್ಮ, ಇದು ಅವನ ಹೊಸಾ ಗಾಡಿ, ಎಲ್ಲಾ ದಾಖಲೆಗಳು ಸರಿ ಇವೆ ಅಲ್ಲವೇ? ಮತ್ಯಾಕೆ ಬಿಡುತ್ತಿಲ್ಲಾ?” ಎಂದೆ.

” ಅವನು ಅತಿ ವೇಗವಾಗಿ ಓಡಿಸುತ್ತಿದ್ದ” ಎಂದ ಆ ಶ್ವೇತ ಸಮವಸ್ತ್ರದ , ನಮ್ಮ‌ ತೆರಿಗೆಯಿಂದ ನಮಗಾಗಿ ಸೇವೆ ಮಾಡುತ್ತಿದ್ದಾನೆಂದು ಅರಿಯದ ಅಮೂಲ್ಯ ಮಾನವ.

” ಎಷ್ಟು ಅತಿವೇಗವಾಗಿತ್ತು?”

” ಅದೆಲ್ಲಾ ಹೇಳಕ್ಕಾಗಲ್ಲ”

“ಯಾಕೆ?”

“ಜಾಸ್ತಿ ಮಾತನಾಡಿದರೆ ಪೋಲೀಸರನ್ನು ಕರೆದು ನಿನ್ನ ಒಳಗೆ ಹಾಕಬೇಕಾಗುತ್ತದೆ” ಎಂದ.

” ಸರಿ, ಚೀಟಿ ಕೊಡಿ ಕೋರ್ಟಿನಲ್ಲಿ ಕಟ್ಟುತ್ತೇವೆ”

“ಇಲ್ಲೇ ನಮಗೆ ಕೊಡಿ” ಎಂದು ಹಠ ಹಿಡಿದ …

ತುಂಬಾ ಹೊತ್ತು ಮಾತನಾಡಿ ಕೊನೆಗೆ ಚೀಟಿ ಕೊಡುವುದೆಂದು ಒಪ್ಪಿದ. ಅಂದು ನನ್ನಲ್ಲಿದ್ದ ನೋಕಿಯಾ ಫೋನಿನಿಂದ ಸುಮ್ಮನೆ ಅವನ ವಿಡಿಯೋ ತೆಗೆಯತೊಡಗಿದೆ.

ಚೀಟಿ ನನ್ನ ಕೈ ಸೇರುವವರೆಗೂ ವಿಡಿಯೋ ತೆಗೆದೆ.

ನಂತರ ” ಕೋರ್ಟಿನಲ್ಲಿ ಈ ರಶೀಧಿ ಕೊಡುವ ಮೊದಲು, ನಿಮ್ಮನ್ನು ಅಲ್ಲಿಗೆ ಕರೆಯುತ್ತೇನೆ”
ಅಂದೆ



“ಯಾಕೆ ಮೈ ಸರಿ ಇಲ್ವಾ!!??” ಅಂದ.
“ಹಂಗೇನಿಲ್ಲಾ ಸ್ವಾಮೀ, ನಿಮ್ಮ ಮುಂದೆ ಜಡ್ಜ್ ಸಾಹೇಬರಲ್ಲಿ ಒಂದು ಪ್ರಶ್ನೆ ಕೇಳುತ್ತೇನೆ – ಯುವರ್ ಆನರ್ …. ಕೋರ್ಟಿನಲ್ಲಿ ವಾದ ಮಾಡುವ ವಕೀಲ ಸಂಪೂರ್ಣ ಸಮವಸ್ತ್ರ ಧರಿಸದೆ ವಾದ ಮಂಡನೆ ಮಾಡಿದರೆ ಅದು valid/ಮಾನ್ಯ ವಾಗುತ್ತದೋ?” ಎಂದು.
“ಏನಪ್ಪಾ ಅದು ಜಡ್ಜ್ ಹತ್ರ ನನ್ನ ಕರ್ಕೊಂಡು ಹೋಗಿ ಯಾಕೆ ಕೇಳ್ತಿಯಾ? ಜಡ್ಜ್ ಯಾಕೆ, ನಾನೇ ಇಲ್ಲೇ ಹೇಳ್ತೀನಿ. ಆ ವಕೀಲ ಅರ್ಧಂಬರ್ಧ ಯುನಿಫಾರ್ಮ್ ಹಾಕಿ ವಾದ ಮಾಡುವಂತಿಲ್ಲ…. ಅರ್ಥವಾಯ್ತಾ?. ಈಗ ಹೋಗಪ್ಪ ಫೈನು ಕಟ್ಟು ಹೋಗು…” ಅಂತ ದೂರ ನಿಂತು ಇನ್ನೊಂದು ಗಾಡಿಯ ಮೇಲೆ ಚಿರತೆಯಂತೆ ಬೀಳಲು ಹೋದ, ಆ ಗಾಡಿಯವ ತಪ್ಪಿಸಿ ಹೋದ.
ಫೋಟೋ ಕೃಪೆ :  bengaluru.citizenmatters (ಸಾಂದರ್ಭಿಕ ಚಿತ್ರ)

“ಸ್ವಾಮೀ…ಒಂದ್ನಿಮಿಷ….ನೀವು ಈ ಚೀಟಿ ಬರೆಯುವಾಗ ಆಗಲೀ , ನನಗೆ ಕೊಡುವಾಗವಾಗಲೀ ಟೋಪಿ ಧರಿಸಿರಲಿಲ್ಲ. ಅದರ ವಿಡಿಯೋ ಜಡ್ಜ್ ಗೆ ತೋರಬಹುದಲ್ಲವೇ? ಇದರಲ್ಲಿ ಎಷ್ಟು ವೇಗವೆಂದೂ ನಮೂದಿಸಿಲ್ಲ. Over speed ಅಂತ ಬರೆದಿದ್ದೀರಿ…ಸಂಪೂರ್ಣ ಸಮವಸ್ತ್ರ ಧರಿಸದೆ ನೀವು ಕೊಟ್ಟ ಈ ರಶೀದಿ ಮಾನ್ಯವಾಗಿದ್ದರೆ ನಾನು ಈ ಫೈನು ಕಟ್ಟುತ್ತೇನೆ ಎನ್ನಬಹುದಲ್ಲವೇ?.” ಎಂದು ಹೇಳುತ್ತಿದ್ದಂತೆ ಓಡಿ ಬಂದು ನನ್ನ ಕೈಯಲ್ಲಿದ್ದ ಚೀಟಿ ಎಳೆದು ಹರಿದು ಹಾಕಿ

“ಸಾಹೇಬ್ರೆ… ನೀವು ಲಾಯರಾ? …

ಬಿಡಿ ಹೋಗಿ, ಏನೂ ಆಗಿಲ್ಲ, ಫೈನೂ ಇಲ್ಲ…ಏನೂ ಇಲ್ಲ…. ನಾವು ನೀವು ಭೇಟಿ ಆಗೇ ಇಲ್ಲ, ನಿಮ್ಮ ಗಾಡಿ ಇಲ್ಲಿ ಹೋಗೇ ಇಲ್ಲ….” ಅಂತ ಹೇಳ್ತಾ ಹೋಗೇ ಬಿಟ್ಟ…..

ಅಂದು ನಾನಂತೂ LLB ಮಾಡಿದವನಾಗಿರಲಿಲ್ಲ. ನಾನು ಅವನಿಗೆ ಕೇಳಿದೆ ಪ್ರಶ್ನೆ ಸೂಕ್ತವೋ – ಸಮಂಜಸವೋ- ಕಾನೂನು ಬಾಹಿರವೋ?- ನ್ಯಾಯಯುತವೋ? ಎಂದು ನನಗೇ ಗೊತ್ತಿರಲಿಲ್ಲ.
ಇದೆಲ್ಲಾ ಆಗಿ ಹಳೇ ಮನೆ ಸೇರಿ, ನಂತರ ಫೋನು ನೋಡಿದರೆ ಆ ವಿಡಿಯೋ save ಮಾಡಿರಲಿಲ್ಲ. ಅಳಿಸಿ ಹೋಗಿತ್ತು.
ಬದುಕಿತು ಬಡ ಜೀವ ಎಂದು ಒಂದು ನಿಟ್ಟುಸಿರು ಬಿಟ್ಟೆ.

ನಿಮ್ಮವ ನಲ್ಲ

ರೂಪು


  • ಪ್ರೊ. ರೂಪೇಶ್ (ರಾಸಾಯನ ಶಾಸ್ತ್ರ ವಿಭಾಗ, ಉಪನ್ಯಾಸಕರು, ಬೆಂಗಳೂರು)

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading