ಮಕ್ಕಳಿಗೆ ಎಷ್ಟು ಸ್ವಾತಂತ್ರ ಕೊಡಬೇಕು



ಮಕ್ಕಳಿಗೆ ಎಷ್ಟು ಸ್ವಾತಂತ್ರ ಕೊಡಬೇಕು? …ಇಂತಾದ್ದೊಂದು ಪ್ರಶ್ನೆ ಈ ಕಾಲದಲ್ಲಿ ಕೆಲವೊಮ್ಮೆ ತಲೆಯಲ್ಲಿ ಹುಟ್ಟುವುದು ಸಹಜ. ಆದರೆ ಇದಕ್ಕೆ ಉತ್ತರ ಮಾತ್ರ ಪ್ರಶ್ನೆ ಹುಟ್ಟಿದಷ್ಟು ಸಹಜವಾಗಿ, ಸುಲಭವಾಗಿ ದೊರೆಯದು ಅನ್ನುವುದೂ ಅಷ್ಟೇ ಸತ್ಯ. ಒಂದು ಚಿಂತನ ಲೇಖನ ನಿಮ್ಮ ಮುಂದಿದೆ. ನಿಮ್ಮ ಅಭಿಪ್ರಾಯಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಬಹುದು.

ಹಗ್ಗದ ಮೇಲಿನ ನಡಿಗೆ ಎಷ್ಟು ಕಷ್ಟವೋ ಈ ಪ್ರಶ್ನೆಗೆ ಉತ್ತರ ಅಷ್ಟೆ ಕಷ್ಟ. ಕೊಟ್ಟ ಸ್ವಾತಂತ್ರ ಸ್ವಲ್ಪ ಹೆಚ್ಚಾದರೆ ಅರಿಯದ ಪ್ರಾಯದ ಮಕ್ಕಳು ತೀರಾ ಪ್ರಪಾತಕ್ಕೆ ಬೀಳುವ ಸಂಭವ ಹೆಚ್ಚು ಅಥವಾ ಬೀಳಿಸಲು ಕಾಯುತ್ತಿದ್ದವರಿಗೆ ಸುಲಭ. ತೀರಾ ಕಡಿಮೆ ಸ್ವಾತಂತ್ರ ಕೊಟ್ಟರೆ ಮಕ್ಕಳ ಭವಿಷ್ಯ/ಮನಸ್ಸಿನ ಮೇಲೆ ಅದರಿಂದ ಉಂಟಾಗುವ ಪ್ರಮಾದದ ಪ್ರಮಾಣ ಅಪಾರ, ಜೊತೆಗೆ ಪೋಷಕರು ಮಕ್ಕಳ ಕಣ್ಣಿಗೆ ಖಳ ನಾಯಕರಾಗುವ ಸಾಧ್ಯತೆಯೂ ಇಲ್ಲದಿಲ್ಲ. ಇದರ ಪರಿಣಾಮ ಮುಂದೆ ಪೋಷಕರೇ ಅನುಭವಿಸುವ ಹಾಗೆ ಆದರೂ ಆಶ್ಚರ್ಯವಿಲ್ಲ.

ಫೋಟೋ ಕೃಪೆ : insider

ಅತಿಯಾಗಿ ಕೊಟ್ಟ ಸ್ವಾತಂತ್ರ ಮಕ್ಕಳಲ್ಲಿ ಎನು ಮಾಡಿದರೂ ಕೇಳುವುದಿಲ್ಲ ಎನ್ನಿಸಿಬಿಟ್ಟರೆ, ಈಗಿನ ಜಗತ್ತಿನಲ್ಲಿ ದಾರಿ ತಪ್ಪಿಸಲು ಹಲವಾರು ವಿಷಯಗಳಿವೆ. ಬೇಕಾಗಿದ್ದು ಬೇಡವಾದದ್ದು ಎಲ್ಲವೂ ಅಂದರೆ ಎಲ್ಲವೂ ಸುಲಭವಾಗಿ tv, ಸಮಾಜಿಕ ಜಾಲತಾಣಗಳಲ್ಲಿ ಕಾಣಸಿಗುತ್ತದೆ . ಕಣ್ಣಿಗೆ ಕಂಡದ್ದನ್ನು ಒಮ್ಮೆ ಅನುಭವಿಸಿ ಬಿಡುವ ಅನ್ನಿಸುವುದು ಸಹಜವೇ.(ಯಾವುದೇ ಇರಬಹುದು, ಜಾಹೀರಾತಿನಲ್ಲಿ ಬರುವ ಚಾಕೊಲೇಟ್ ನಿಂದಾ ಹಿಡಿದು, ಹುಡುಗ ಹುಡುಗಿಯರ ನಡುವಿನ ಪ್ರೀತಿ ಪ್ರೇಮ ಪ್ರಣಯದವರೆಗೆ, ಸಣ್ಣ ಪುಟ್ಟ ಕಳ್ಳತನದಿಂದ ಹಿಡಿದು ಕುಡಿತ, ಕೊಲೆಯ ವರೆಗೂ)

ಬಹಳ ಕಡಿಮೆ ಸ್ವತಂತ್ರ ಕೊಟ್ಟು, ಎಲ್ಲದಕ್ಕೂ ಅದು ಬೇಡ ಇದು ಬೇಡ, ಹಾಗೆ ಮಾಡಬಾರದು, ಇದು ತಪ್ಪು ಎಂದು ರಿಸ್ಟ್ರಿಕ್ಷನ್ಸ್ ಜಾಸ್ತಿ ಮಾಡಿದರೆ ಚಿಕ್ಕ ಮಕ್ಕಳಲ್ಲಿ ಹಠ ಹೆಚ್ಚಾಗಬಹುದು, ಹೇಳಿದ್ದನ್ನೆಲ್ಲ ವಿರೋಧಿಸುವ ಗುಣ ಬೆಳೆಸಿಕೊಳ್ಳಬಹುದು ಇಲ್ಲ ಖಿನ್ನತೆಗೆ ಒಳಗಾದರೂ ಹೆಚ್ಚಲ್ಲ. ಇಲ್ಲವೇ ಅದನ್ನೆಲ್ಲ ಮನಸ್ಸಿನಲ್ಲಿ ಇಟ್ಟುಕೊಂಡು ಮುಂದೆ ಬೆಳೆದು ದೊಡ್ಡವರಾದ ಮೇಲೆ ಅದೇ ಸಿಟ್ಟಾಗಿ ಪರಿವರ್ತನೆ ಹೊಂದಿ ಹಿಂದೆ ನೀವು ಹೀಗೆಲ್ಲ ಮಾಡಿದ್ದಿರಲ್ವಾ, ಈಗ ನೀವೂ ಅದನ್ನೇ ಆನುಭವಿಸಿ, ನಾನು ಹೇಳಿದ ಹಾಗೇ ಕೇಳಬೇಕು ಅನ್ನಬಹುದು, ನಾನು ನಿಮ್ಮ ಜೊತೆ ಇರುವುದಿಲ್ಲ, ನನ್ನಷ್ಟಕ್ಕೆ ಇರುವೆ ಎನ್ನಬಹುದು, ಅಥವಾ ವೃದ್ಧಾಶ್ರಮಕ್ಕೆ ಸೇರಿಸುವೆ ನಿಮ್ಮ ಜೊತೆ ಇರಲಾರೆ ಎನ್ನುವವರೆಗೂ ಹೋಗಬಹುದು.

ಫೋಟೋ ಕೃಪೆ :The indian express

ಚಿಕ್ಕ ವಯಸ್ಸಿನಲ್ಲಿ ಮಕ್ಕಳಿಗೆ ಬೈದು ಅಥವಾ ಹೊಡೆದು ಬುದ್ಧಿ ಹೇಳಿದರೆ ಅದು ಮಕ್ಕಳ ಮನಸ್ಸಿನ ಮೇಲೆ ಬೀರುವ ಪರಿಣಾಮ ಒಳ್ಳೆಯದಕ್ಕಿಂತ ಕೆಟ್ಟದ್ದೇ ಹೆಚ್ಚು. ಹೀಗಿರುವಾಗ ಮಕ್ಕಳನ್ನು ಪ್ರೀತಿಯಿಂದ ಕೂರಿಸಿಕೊಂಡು ತಿಳಿ ಹೇಳುವುದು ಒಂದೇ ದಾರಿ. ಮಕ್ಕಳು ಶಾಲೆಯಿಂದ ಬಂದ ಮೇಲೆ ಅಥವಾ ಹೊರಗೆ ಆಟಕ್ಕೆಂದು ಹೋಗಿ ಬಂದ ಮೇಲೆ ಕೂರಿಸಿಕೊಂಡು ಅಂದು ಏನೇನು ನಡೆಯಿತು ಎನ್ನುವುದನ್ನು ಕೇಳಬೇಕು, ಹಾಗೆ ಕೇಳುವಾಗ ಅವರಿಗೆ ನಮ್ಮನ್ನು ಅಪ್ಪ ಅಮ್ಮ ಪ್ರಶ್ನೆ ಮಾಡುತ್ತಿದ್ದಾರೆ ಅನ್ನಿಸದ ಹಾಗೆ ಪ್ರೀತಿಯಿಂದ ಕೇಳಿ ಅಲ್ಲಿ ಏನಾದರೂ ಅಸಹಜ ಎನ್ನಿಸಿದರೆ ಅದನ್ನು ಅಂದಂದೇ ತಿದ್ದುವ ಪ್ರಯತ್ನ ಮಾಡುವುದು ಉತ್ತಮ. ಹೀಗೆ ದಿನವೂ ಪೋಷಕರು ಮತ್ತು ಮಕ್ಕಳ ನಡುವೆ ಪ್ರೀತಿಯ ಪ್ರಶ್ನೋತ್ತರ ನಡೆಯುತ್ತಿದ್ದರೆ ಮಕ್ಕಳು ಎಲ್ಲಿಯಾದರೂ ತಪ್ಪಿ ನಡೆದರೆ ತಿಳಿಯಲು ಅನುಕೂಲ ಆಗಬಹುದು. ಇದೇ ಅಭ್ಯಾಸ ಆದರೆ ತಂದೆ ತಾಯಿಯರಿಂದ ಏನನ್ನೂ ಮುಚ್ಚಿಡುವ ಪ್ರಯತ್ನ ಮಕ್ಕಳು ಮಾಡಲಾರರು.

ಮಕ್ಕಳು ಚಿಕ್ಕವರು ಇದ್ದಾಗ ಹೇಳಿದರೆ ಅರ್ಥ ಆಗುವ ಸಾಧ್ಯತೆ ಕಡಿಮೆಯೇ. ಹಾಗಂತ ಇದನ್ನೆಲ್ಲ ಬುದ್ದಿ ತಿಳಿದ ಮೇಲೆ ಮಕ್ಕಳಿಗೆ ಕುಳ್ಳಿರಿಸಿ ಹೇಳಿ ಅರ್ಥ ಮಾಡಿಸಿ ಸರಿ ಮಾಡಿಬಿಡುತ್ತವೆ ಅಂದರೆ ಅದೂ ಸ್ವಲ್ಪ ಕಷ್ಟವೆ, ಏಕೆಂದರೆ ಅಷ್ಟು ವರ್ಷದಿಂದ ಅದ ಅಭ್ಯಾಸಗಳನ್ನು ಇದ್ದಕ್ಕಿದಂತೆ ಬದಲಾವಣೆ ಮಾಡುವುದು ಸುಲಭವೇನಲ್ಲ.

ಫೋಟೋ ಕೃಪೆ : istock

ಹೆಣ್ಣು ಮಕ್ಕಳಿಗೆ ಕಟ್ಟುಪಾಡುಗಳು ಮೊದಲೆಲ್ಲ ಸ್ವಲ್ಪ ಹೆಚ್ಚೇ ಇತ್ತು. ಈಗ ಅ ಮಟ್ಟಿಗೆ ಇಲ್ಲದೆ ಹೋದರೂ ತಂದೆ ತಾಯಿಯರ ಎಚ್ಚರಿಕೆಯ ಮಾತು ಹಾಗೂ ಅವರ ನಡೆ ನುಡಿಗಳ ಮೇಲೆ ಒಂದು ಕಣ್ಣು ಇದ್ದೇ ಇರುತ್ತದೆ.(ಸಾಮಾನ್ಯ ಜನರ/ಮಧ್ಯಮ ವರ್ಗದ ಅಥವಾ ಹಿಂದಿನ ಕಟ್ಟುಪಾಡುಗಳ ಕಾರಣ ಅರಿತವರಿಗೆ). ಗಂಡು ಮಕ್ಕಳಿಗೆ ಅಷ್ಟೇನೂ ಕಟ್ಟು ಪಾಡುಗಳಿಲ್ಲದೆ ಹೋದರೂ ಇಲ್ಲವೇ ಇಲ್ಲ ಎಂದಲ್ಲ. ನೈಸರ್ಗಿಕವಾಗಿ ಅವರ ತಪ್ಪು ಬೆಳಕಿಗೆ ಬಾರದೇ ಹೋದರೂ ಮನೆತನದ ಮಾನ ಮರ್ಯಾದೆ ಎನ್ನುವುದನ್ನು ಪಾಲಿಸಲೇ ಬೇಕು. ಅಷ್ಟೇ ಅಲ್ಲ” ಸಂಗದಿಂದ ಸನ್ಯಾಸಿ ಕೆಟ್ಟ”ಅನ್ನೋ ಹಾಗೆ ಆಗದಂತೆ ಎಚ್ಚರಿಕೆ ವಹಿಸುವ ಅಗತ್ಯ ಇದ್ದೇ ಇದೆ.




ಒಟ್ಟಿನಲ್ಲಿ ಮಕ್ಕಳು ಗಂಡಾಗಲಿ ಹೆಣ್ಣಾಗಲಿ ಒಂದು ವಯಸ್ಸಿಗೆ ಬಂದು ಅವರಿಗೆ ಸರಿ ತಪ್ಪು ಅರ್ಥವಾಗಿ, ಅವರಿಂದ ಸಮಾಜಕ್ಕೆ ತೊಂದರೆ ಆಗದು, ಹಾಗೆ ಸಮಾಜದಿಂದ ಆಗಬಹುದಾದ ತೊಂದರೆಗಳನ್ನು ಮಕ್ಕಳು ಎದುರಿಸಲು ಸಮರ್ಥರು ಆಗುವವರೆಗೂ ಮಕ್ಕಳ ಪ್ರತಿಯೊಂದು ಚಲನವಲನಗಳ ಮೇಲೆ ಸೂಕ್ಷ್ಮವಾಗಿ ಒಂದು ಕಣ್ಣು ಇಡಬೇಕಾದ ಅವಶ್ಯಕತೆ ತುಂಬಾ ಇದೆ.

ಗಾಳಿಪಟವನ್ನು ಹಾರಲು ಬಿಟ್ಟು, ಸೂತ್ರವನ್ನು ನಮ್ಮ ಕೈಯಲ್ಲಿ ಹಿಡಿದಿರುವಂತೆ ಮಕ್ಕಳ ವಿಷಯದಲ್ಲೂ ಒಂದು ಸೂಕ್ಷ್ಮವಾದ ಅಂದರೆ ಅತಿ ಬಿಗಿಯೂ ಅಲ್ಲದ ತೀರಾ ಸಡಿಲವೂ ಅಲ್ಲದ ಹಿಡಿತದ ಅವಶ್ಯಕತೆ ಖಂಡಿತಾ ಇದ್ದೇ ಇರುತ್ತದೆ.


  • ವಸಂತ ಗಣೇಶ್ (ಲೇಖಕಿ, ಸಾಹಿತಿಗಳು)

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW