ಪೌಂರ್ಡ್ರಿಕ ಕರುಷ ರಾಜ್ಯದ ರಾಜ. ನೋಡಲು ಕೃಷ್ಣನ ತದ್ರೂಪಿ. ಅವನ ತಂದೆಯ ಹೆಸರು ಕೂಡ ವಾಸುದೇವ. ದೇಹದಲ್ಲಿ ಬಲಿಷ್ಠ ಆದರೆ ಬುದ್ದಿಯಲ್ಲಿ ಶೂನ್ಯನಾಗಿದ್ದ. ಪೌಂರ್ಡ್ರಿಕನ ಬಗ್ಗೆ ಇನ್ನಷ್ಟು ಸ್ವಾರಸ್ಯಕರ ವಿಷಯಗಳನ್ನು ಲೇಖಕ ರಾಘವೇಂದ್ರ ಇನಾಮದಾರ ಅವರು ಈ ಲೇಖನದಲ್ಲಿ ಹಂಚಿಕೊಂಡಿದ್ದಾರೆ. ಮುಂದೆ ಓದಿ…
ಮಹಾಭಾರತದ ಕಾಲದಲ್ಲಿ ಕರುಷ ರಾಜ್ಯ ಆಳುತ್ತಿದ್ದ ರಾಜನ ಹೆಸರು ಪೌಂರ್ಡ್ರಿಕ. ಇದ್ರೆಲ್ಲೇನೂ ವಿಶೇಷ ಅಂತೀರಾ…? ವಿಶೇಷ ಇದೆ ರೀ… ಇವನು ನೋಡೋಕೆ ಕೃಷ್ಣನಂತೆ ಇದ್ದ. ಕೃಷ್ಣನ ತದ್ರೂಪಿ ಅಂದ್ರು ಅಡ್ಡಿಯಿಲ್ಲ. ಇಲ್ಲಿ ಇನ್ನೊಂದು ವಿಚಿತ್ರ ಅಂದ್ರೆ ಅವನ ತಂದೆಯ ಹೆಸರು ಕೂಡ ವಾಸುದೇವ. ಪೌಂರ್ಡ್ರಿಕ ದೇಹದಿಂದ ಬಲಿಷ್ಠನಾಗಿದ್ದ ಆದರೆ ಬುದ್ಧಿಶಕ್ತಿ ಮಾತ್ರ ಶೂನ್ಯ. ಸದಾ ಮೂರ್ಖನಂತೆ ವರ್ತಿಸುತ್ತಿದ್ದ. ನಾನೇ ನಿಜವಾದ ಭಗವಂತ ಆ ಕೃಷ್ಣ ಕೇವಲ ದನಕಾಯುವವನು ಎನ್ನುತ್ತಾ ತನ್ನನ್ನೇ ತಾನೇ ಬಣ್ಣಿಸಿಕೊಳ್ಳುತ್ತಾ ತಿರುಗುತ್ತಿದ್ದ. ಅಷ್ಟೇ ಅಲ್ಲದೇ ಅವನು ಕೃಷ್ಣನಂತೆ, ಶಂಖ, ಕೌಸ್ತುಭ ಹಾರ, ನವಿಲುಗರಿ ಧರಿಸಿಕೊಳ್ಳುತ್ತಿದ್ದ. ಆದರೆ ಅವೆಲ್ಲಾ ನಕಲಿಯಾಗಿದ್ದವು.
ವಿಷ್ಣು ಪುರಾಣದ ಪ್ರಕಾರ, ಒಂದು ದಿನ ಪೌಂರ್ಡ್ರಿಕ ತನ್ನ ಧೂತನನ್ನು ದ್ವಾರಕದಲ್ಲಿರುವ ಕೃಷ್ಣನ ಬಳಿಗೆ ಸಂದೇಶ ಕೊಟ್ಟು ಕಳುಹಿಸುತ್ತಾನೆ. ಆ ಧೂತನನ್ನು ದ್ವಾರಿಕೆಯಲ್ಲಿ ಗೌರವದೊಂದಿಗೆ ಬರಮಾಡಿಕೊಳ್ಳಲಾಗುತ್ತೆ. ಮಾರನೆಯ ದಿನ ಬೆಳಿಗ್ಗೆ ಆ ಧೂತನನ್ನು ಸಭೆಗೆ ಕರೆಸಿ ಅವನು ತಂದ ಸಂದೇಶವನ್ನು ಪ್ರಸ್ತಾಪಿಸುವ ಅವಕಾಶ ನೀಡಲಾಗುತ್ತೆ. ಆಗ ಧೂತ ಕೃಷ್ಣನ ಅಪ್ಪಣೆ ಪಡೆದು ತನ್ನ ಮಾತು ಮುಂದುವರೆಸುತ್ತಾನೆ.

ಕೃಷ್ಣ, ಪೌಂರ್ಡ್ರಿಕನ ಸಂದೇಶದಿಂದ ಕೋಪಗೊಂಡು, ಯುದ್ಧಕ್ಕೆ ತಾನು ಸಿದ್ಧನಾಗಿರುವುದಾಗಿ ಹೇಳಿ ಕಳುಹಿಸುವನು. ಒಂದು ದಿನ ಕೃಷ್ಣ ಹಾಗೂ ಪೌಂರ್ಡ್ರಿಕನ ಮಧ್ಯೆ ಭಯಂಕರ ಯುದ್ಧ ನಡೆಯುತ್ತೆ, ಅಲ್ಲಿ ಪೌಂರ್ಡ್ರಿಕ ತನ್ನ ಅವಿವೇಕತನದಿಂದ ಬಾಯಿಗೆ ಬಂದಂತೆ ಮಾತಾಡಿ, “ನನ್ನ ಸುದರ್ಶನ ಚಕ್ರ ನನಗೆ ಕೊಡು” ಎಂದು ದುಂಬಾಲು ಬೀಳುತ್ತಾನೆ. ಆಗ ಕೃಷ್ಣ, “ತಗೊ ನಿನ್ನ ಚಕ್ರ” ಅಂತ ಹೇಳಿ ಅವನ ಬಳಿಗೆ ಚಕ್ರ ಬೀಸುವನು. ವೇಗದಲ್ಲಿ ಬರುತ್ತಿದ್ದ ಚಕ್ರವನ್ನು ತನ್ನಿಂದ ನಿಯಂತ್ರಿಸಲಾಗದೆ. ಪೌಂರ್ಡ್ರಿಕ ಅದೇ ಚಕ್ರಕ್ಕೆ ಬಲಿಯಾಗುವನು.
- ರಾಘವೇಂದ್ರ ಇನಾಮದಾರ( ಹುಬ್ಬಳ್ಳಿ)
