ಚಿಕಿತ್ಸೆಗೊಂದು “ಆಧಾರ” ಬೇಡವೇ?



ತಲೆಬರಹ ನೋಡಿ ಗಲಿಬಿಲಿಗೊಳ್ಳಬೇಡಿ. ಏನಿದು? ಯಾರಾದರೂ ಆಧಾರವಿಲ್ಲದೇ ಚಿಕಿತ್ಸೆ ಮಾಡುತ್ತಾರೆಯೇ? ಎಷ್ಟೆಲ್ಲಾ ಪರೀಕ್ಷೆಗಳನ್ನು ಮಾಡಿದ ನಂತರ ತಾನೆ ಚಿಕಿತ್ಸೆ ಮಾಡುವುದು? ಎಂಬೆಲ್ಲಾ ಸಂಶಯಗಳು ಈ ಕ್ಷಣದಲ್ಲಿ ನಿಮ್ಮ ಮನಸ್ಸಿನಲ್ಲಿ ಹಾದು ಹೋಗುವುದು ಸಹಜ. ಡಾ.ಎನ್.ಬಿ.ಶ್ರೀಧರ ಅವರ ಲೇಖನಿಯಲ್ಲಿ ಪ್ರಾಣಿ ಪ್ರಿಯರಿಗಾಗಿ ಈ ಲೇಖನ, ಮುಂದೆ ಓದಿ… 

ಒಂದೆರಡು ಘಟನೆ ನಿಮ್ಮಲ್ಲಿ ಹಂಚಿಕೊಂಡರೆ ಈ ಸಂದೇಹಗಳು ಬಗೆಹರಿದು ಬಿಡಬಹುದು.

ಘಟನೆ ೧:

ಈಗ ಒಂದಿಷ್ಟು ದಿನಗಳ ಹಿಂದೆ ಹಿರಿಯ ಜೀವವೊಂದನ್ನು ಅವರ ಬೆನ್ನು ನೋವಿನ ಚಿಕಿತ್ಸೆಗೆಂದು ಪ್ರಖ್ಯಾತ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದೆ. ಅವರಿಗೆ ಆಗಾಗ್ಗೆ ಅಸಾಧ್ಯ ಬೆನ್ನು ನೋವು ಬರುತ್ತಿತ್ತು. ಮೂಳೆ ವೈದ್ಯರು ” ನೀವು ಯಾಗಾಲಾದರೂ ಈ ಕುರಿತು ಪರೀಕ್ಷೆ ಮಾಡಿಸಿದ್ದೀರಾ? ಮಾಡಿಸಿದಲ್ಲಿ ಅದರ ವರದಿ ಕೊಡುತ್ತೀರಾ? ಏನು ಚಿಕಿತ್ಸೆ ಮಾಡಿದ್ದಾರೆ? ರಕ್ತ ಮಲ ಮೂತ್ರ ಪರೀಕ್ಷೆ ಮಾಡಿಸಿದ್ದಾರೆಯೇ? ವರದಿಯಿದೆಯೇ? ಡಯಾಬಿಟಿಸ್, ಬಿಪಿಗೆ ಚಿಕಿತ್ಸೆಗೆ ಒಳಗಾಗಿದ್ದೀರಾ? ಎಂದೆಲ್ಲಾ ಕೇಳಿ ” ನೋಡಿ ನೀವು ಈ ಪರೀಕ್ಷೆಗಳನ್ನೆಲ್ಲಾ ಇತ್ತೀಚೆಗೆ ಮಾಡಿಸಿದ್ದರೆ ನಾನು ಪುನ: ಮಾಡಿಸುವುದು ತಪ್ಪುತ್ತದೆ, ನಿಮಗೆ ಹಣ ಸಮಯ ಎರಡೂ ಉಳಿಯುತ್ತದೆ” ಎಂದರು. ಹಿರಿಯರು ಅವರ ಚೀಲವನ್ನೆಲ್ಲಾ ತಡಕಾಡಿ ಒಂದಿಷ್ಟು ಕಾಗದಗಳನ್ನು, ಹಳೆಯ ಚೀಟಿಗಳನ್ನು ನೀಡಿದರು ನಾನು ಮತ್ತು ಡಾಕ್ಟರು ಅವನ್ನೆಲ್ಲಾ ದಿನಾಂಕಕ್ಕೆ ತಕ್ಕ ಹಾಗೇ ಹೊಂದಿಸಿ ನೋಡುವಷ್ಟರಲ್ಲಿ ಸುಮಾರು ೧೦ ನಿಮಿಷ ವ್ಯರ್ಥವಾಗಿ ಈಗಾಗಲೇ ಸರತಿಯಲ್ಲಿರುವವರು ಗುರ್ರೆನುವ ಸಮಯ ಒದಗಿ ಬಂತು. ವಯಸ್ಸಾದ ಜೀವ, ಈ ವರದಿಗಳನ್ನೆಲ್ಲಾ ಅಚ್ಚುಕಟ್ಟಾಗಿ ಒಂದು ಕಡತದಲ್ಲಿ ಇಟ್ಟಿದ್ದರೆ ವೈದ್ಯರಿಗೆ ಅದೆಷ್ಟೋ ಅನುಕೂಲವಾಗುತ್ತಿತ್ತು.

ಫೋಟೋ ಕೃಪೆ : thenewsminute

ಘಟನೆ ೨:

ಹೊನ್ನಾಳಿಯ ಸಮೀಪದ ಹಳ್ಳಿಯಲ್ಲಿ ಗೋಗರ್ಭ ಯೋಜನಾ ಶಿಬಿರಕ್ಕೆ ಹೋಗಿದ್ದೆ. ನೂರಾರು ಪಶುಗಳನ್ನು ಪರೀಕ್ಷಿಸಿ ಅವುಗಳಿಗೆ ಅವಶ್ಯಕ ಸಲಹೆ ಸೂಚನೆ ನಡೆಯುತ್ತಿತ್ತು. ಜೊತೆಯಿದ್ದು ಸಹಕರಿಸುತ್ತಿದ್ದ ಯುವ ಪಶುವೈದ್ಯರು “ಸಾರ್… ಒಂದಿಷ್ಟು ಬೇಗ ಮುಗಿಸಬಹುದೇ? ಒಂದು ಪೋಸ್ಟ್ ಮಾರ್ಟಂ ಮಾಡಬೀಕು ಸಾರ್, ಓನರ್ ಬಹಳ ಖಡಕ್, ಬೇಗ ಬರದಿದ್ದರೆ ಪೇಪರಿಗೆ ಹಾಕ್ಸಿ ಮಾನ ಕಳೀತೀನಿ ಅಂತಿದಾರೆ” ಎಂದರು. ಸರಿ, ಒಂದಿಷ್ಟು ಕಾರ್ಯ ಚುರುಕು ಗೊಳಿಸಿ ನನಗೆ ಇರುವ ಸಹಜ ಕುತೂಹಲದಲ್ಲಿ #ಮರಣೋತ್ತರ_ಪರೀಕ್ಷೆಗೆ ಸಾಗಿದೆ. ಅದೊಂದು ಬಲೀಷ್ಟವಾದ ಎತ್ತು. ಸುಮಾರು ಒಂದು ಲಕ್ಷ ಬೆಲೆಯಿತ್ತಂತೆ. ಅದಕ್ಕೆ ಆಗಿದ್ದು ಹೆಗಲು ಬಾವು. ಹೂಡುವ ಸಮಯದಲ್ಲಿ ಒಂದಿಷ್ಟೂ ವಿಶ್ರಾಂತಿ ನೀಡದೇ ಊಳಿದರೆ ಆಗುವ ಸಾಮಾನ್ಯ ತೊಂದರೆ. ಮೂರು ಜನ ಡಾಕ್ಟರುಗಳು (?) ಚಿಕಿತ್ಸೆ ಮಾಡಿದರೂ ಸಹ ಚಿಕಿತ್ಸೆಗೆ ಬಗ್ಗದೇ ಸತ್ತೇ ಹೋಯಿತಂತೆ. ಇದರಿಂದ ಮನನೊಂದ ರೈತರು ಪಶುವೈದ್ಯರಿಂದ ಮರಣೋತ್ತರ ಪರೀಕ್ಷೆ ಮಾಡಿಸಿ ಅದಕ್ಕೊಂದಿಷ್ಟು ಪರಿಹಾರವಾದರೂ ಪಡೆಯುವ ಆಸೆಯಲ್ಲಿದ್ದರು. ನನಗೆ ಹೆಗಲು ಬಾವಿನಿಂದ ಯಾವುದೇ ಎತ್ತು ಸಾಯುವುದಿಲ್ಲವಲ್ಲ? ಏನಾಯ್ತು ? ಎಂಬ ಕುತೂಹಲ. ಹೋಗಲಿ, ಏನೇನು ಚಿಕಿತ್ಸೆ ಮಾಡಿದ್ದಾರೆ ಎಂಬ ವಿವರವಿದೆಯೇ? ಎಂದು ಪ್ರಶ್ನಿಸಿದೆ. ಸಾರ್.. ಹೆಗಲು ಬಾವು ಕಡಿಮೆಯಾಗದಿದ್ದಾಗ ಅವರು ಉತ್ತಮ ಚಿಕಿತ್ಸೆ ಕೊಡುತ್ತಾರೆ, ಇವರು ಚಿಕಿತ್ಸೆ ಕೊಡುತ್ತಾರೆ ಎಂದು ಕರೆದೆ. ಮೂವರೂ ಒಂದೊಂದು ವಾರ ಅವರಿಗೆ ತಿಳಿದ ಚಿಕಿತ್ಸೆ ಮಾಡಿದರು. ನನ್ನ ಹಣೆಬರಹ. ಎತ್ತೇ ಉಳಿಲಿಲ್ಲ. ನಸೀಬು ಸರಿ ಇಲ್ಲ ನಂದು” ಎಂದರು ರೈತರು. ಮರಣೋತ್ತರ ಪರೀಕ್ಷೆ ಸಮಯದಲ್ಲಿ ಆಶ್ಚರ್ಯ.. ಕರುಳೆಲ್ಲಾ ಹುಣ್ಣುಗಳು, ಉದರದಲ್ಲಿ ಹುಣ್ಣುಗಳ ಸರಮಾಲೆ ಮತ್ತು ರಕ್ತಸ್ರಾವ, ಹೃದಯದಲ್ಲಿಯೂ ಸಹ ಸಾಕಷ್ಟು ತೊಂದರೆಗಳು. ಏಕಿರಬಹುದು ? ಎಂದಾಗ ಹೊರಬಿತ್ತು ಮರಣದ ಗುಟ್ಟು. ಮೂರು ಜನ ಡಾಕ್ಟರುಗಳಲ್ಲಿ ಒಬ್ಬ ಪಶುಪಾಲನಾ ಇಲಾಖೆಯ ಜವಾನ, ಮತ್ತೊಬ್ಬ ಕೆ ಎಂ ಎಫ್ ಕೃತಕ ಗರ್ಭಧಾರಣಾಕಾರ ಮತ್ತೊಬ್ಬ ಅನುಭವದ ಆಧಾರದ ಮೇಲೆಯೇ ಚಿಕಿತ್ಸೆ ಮಾಡುವ ನಾಟಿ ವೈದ್ಯ !.. ಮೂವರೂ ಒಂದೊಂದು ವಾರದ ಅವಧಿಯಲ್ಲಿ ನೋವಿಗೆಂದು ತರಾವರಿ ಚಿಕಿತ್ಸೆ ಮಾಡಿದ್ದಾರೆ !. ಪ್ರತಿಯೊಬ್ಬರೂ ಸಹ ಅವರಿಗೆ ತೋಚಿದ ನೋವುನಿವಾರಕ ಚುಚ್ಚುಮದ್ದನ್ನು ಮನಸೋ ಇಚ್ಚೆ ಒಬ್ಬರಾದ ಮೇಲೆ ಒಬ್ಬರಂತೆ ಬಳಸಿ ಬಿಟ್ಟಿದ್ದಾರೆ !. ಇದು ನೋವು ನಿವಾರಕಗಳ ಅಡ್ಡಪರಿಣಾಮ! ಹೊಟ್ಟೆಯಲ್ಲಿ ಹುಣ್ಣಾಗುವುದು ನೋವುನಿವಾರಕಗಳ ಅಪರಿಮಿತ ಬಳಕೆಯಿಂದ. ಎತ್ತಿನ ಜೀವವೊಂದು ಅನ್ಯಾಯವಾಗಿ ರಣವೈದ್ಯಕ್ಕೆ ಬಲಿಯಾಯ್ತಲ್ಲ?

ಫೋಟೋ ಕೃಪೆ : telegraphindia

ಹೀಗೆ ಹೇಳುತ್ತಾ ಹೋದರೆ ಇದಕ್ಕೆ ಕೊನೆಯೇ ಇಲ್ಲ.ನೆನಪಿನ ಬತ್ತಳಿಕೆಯಿಂದ ಪುಂಖಾನುಪುಂಖವಾಗಿ ಸುರುಳಿಗಳು ಬರುತ್ತವೆ. ಹಾಗಿದ್ದರೆ ವೈದ್ಯಕೀಯ ಚಿಕಿತ್ಸೆಯ ವೃತ್ತಾಂತವನ್ನು ಸದಾ ನೆನಪಿಟ್ಟು, ಯಾವ #ವೈದ್ಯರು ಯಾವ ದಿನ ಏನು ಚಿಕಿತ್ಸೆ ಮಾಡಿದರು? ಏನೆಲ್ಲಾ ಪ್ರಯೋಗಶಾಲಾ ಪರೀಕ್ಷೆಗಳಾದವು? ಅದರ ಅವಶ್ಯಕತೆ ಇತ್ತೇ? ಹಣ ಹೀರಲು ಸುಮ್ಮನೆ ಮಾಡಿದರೆ? ಶಸ್ತ್ರಚಿಕಿತ್ಸೆಯಾಗಿತ್ತೇ? ಆದರೆ ಯಾವ ಚಿಕಿತ್ಸೆ? ಅದರ ವಿವರಗಳೇನು? ಇವೆಲ್ಲಾ ಒಂದೇ ಸ್ಥಳದಲ್ಲಿಯೇ ಸಿಕ್ಕರೆ ವೈದ್ಯರಿಗೆ ಅತ್ಯಂತ ಅನುಕೂಲವಾಗುವುದಲ್ಲವೇ? ಅದರಲ್ಲೂ ಸಹ ಡಿಜಿಟಲ್ ರೂಪದಲ್ಲಿ? ಹಳ್ಳಿಯ ಜನರನೇಕರಿಗೆ ಈ ಚೀಟಿಗಳನ್ನೆಲ್ಲಾ ಕಾದಿಡುವ ವ್ಯವಧಾನವೂ ಇರುವುದಿಲ್ಲ ಜ್ಞಾನವೂ ಇರಲಿಕ್ಕಿಲ್ಲ. ಕೆಲವು ಖಾಸಗಿ ಆಸ್ಪತ್ರೆಗಳಲ್ಲಿ ಇತ್ತೀಚೆಗೆ ಅವರದೇ ಆಸ್ಪತ್ರೆಗೆ ಹೋದರೆ ಹಳೆಯ ವೃತ್ತಾಂತಗಳೆಲ್ಲಾ ಅವರ ಗಣಕಯಂತ್ರದಲ್ಲಿ ನಮೂದಾಗಿರುವುದರಿಂದ ನಮ್ಮ ದೂರವಾಣಿ ಸಂಖ್ಯೆ ಹೇಳಿದರೆ ಸಾಕು ನಮ್ಮ ಜನ್ಮ ಜಾಲಾಡುವ ವ್ಯವಸ್ಥೆ ಇದ್ದರೂ ಸಹ ಅವರು ಅದನ್ನು ಆನ್ಲೈನ್ ಅಥವಾ ದತ್ತಾಂಶ ರೂಪದಲ್ಲಿ ನೀಡುವುದಿಲ್ಲ. ಇತರ ಆಸ್ಪತ್ರೆಗಳ ಜೊತೆ ಹಂಚಿಕೊಳ್ಳುವುದೂ ಇಲ್ಲ. ಆರೋಗ್ಯದ ಅತ್ಯಂತ ಖಾಸಗಿ ಮಾಹಿತಿ ರೋಗಿಯ ಆಪ್ತರು ಮತ್ತು ವೈದ್ಯರಿಗಲ್ಲದೇ ಮತ್ತಾರಿಗೂ ತಿಳಿಯಬಾರದು, ಅದು ಗೌಪ್ಯ ಸಹಾ.

ಫೋಟೋ ಕೃಪೆ : google

ಇದಕ್ಕೊಂದು ಪರಿಹಾರ ಅನೇಕ ದಿನಗಳ ಹಿಂದ ವೈದ್ಯಕೀಯ ವಿಚಾರಗಳ ಬಗ್ಗೆ ಚರ್ಚೆಗೊಳಗಾದಾಗ ಕುತೂಹಲಕಾರಿ ವಿಷಯ ಸಲಹೆ ರೂಪದಲ್ಲಿ ಹೊರಬಂತು. ಈಗ ಹೇಗೆ ಚುನಾವಣೆ, ರೇಶನ್ ಕಾರ್ಡ್, ಬ್ಯಾಂಕ್ ಖಾತೆ, ಗ್ಯಾಸು, ತೆರಿಗೆ, ವಾಹನ ನೋಂದಣಿ, ವಾಹನ ಚಾಲನಾ ರಹದಾರಿ, ವಿಮೆ, ಆಸ್ತಿತೆರಿಗೆ, ಆಸ್ತಿ ಖರೀದಿ, ನೋಂದಣಿಗೆ ಹೇಗೆ “ಆಧಾರ್” ಕಡ್ಡಾಯವಾಗಿದೆಯೋ ಹಾಗೆಯೇ ಆರೋಗ್ಯದ ವಿಚಾರಕ್ಕೂ ಸಹ ಇದನ್ನೇಕೆ ಕಡ್ಡಾಯ ಮಾಡಬಾರದು? ಬ್ಯಾಂಕಿಗೆ ಹೋದರೆ ಈಗ ಮೊಬೈಲ್ ಸಂಖ್ಯೆ ಹೇಳಿದರೆ ಸಾಕು, ಖಾತೆ ಸಂಖ್ಯೆ ಪತ್ತೆ ಮಾಡುತ್ತಾರೆ. ಗ್ಯಾಸು ಖರ್ಚಾದರೂ ಸಹ “ಆಧಾರ”ವೆ ಗತಿ. ಅನೇಕ ರೈತರ ಖಾತೆಗೆ ಮಧ್ಯವರ್ತಿಗಲ ಕಾಟವಿಲ್ಲದೇ ನೇರವಾಗಿ ಡಿಜಿಟಲ್ ರೂಪದಲ್ಲಿ ಹಣಪಾವತಿಯಾಗುವುದಕ್ಕೆ “ಆಧಾರ”ವೇ ಆಧಾರ.

ಅದಕ್ಕೆ ಈ ಲೇಖನದ ಶಿರ್ಷಿಕೆ ಚಿಕಿತ್ಸೆಗೊಂದು “ಆಧಾರ” ಬೇಡವೇ? ಎಂಬುದು.



ಹಾಗಿದ್ದರೆ ಪ್ರಯೋಜನವೇನು ಅಂತೀರಾ? “ಆಧಾರ್” ಸಂಖ್ಯೆಗೆ ಚಿಕಿತ್ಸೆ ಲಿಂಕ್ ಆಗಿ ಚಿಕಿತ್ಸೆ ಮಾಡಿದ ವೈದ್ಯನ ಅಧೀಕೃತ ನೋಂದಣಿ ಸಂಖ್ಯೆಯ ಮೂಲಕ ಮಾತ್ರ ಇದನ್ನು ನೋಡಲು ಸಾಧ್ಯವಾದರೆ ದತ್ತಾಂಶದಲ್ಲಿ ವೈದ್ಯನ ಹೆಸರು, ನೋಂದಣಿ ಸಂಖ್ಯೆ, ಆತ ಅಸಲಿಯೇ ನಕಲಿಯೇ ಎಂಬ ಮಾಹಿತಿ, ಮಾಡಿದ ಚಿಕಿತ್ಸೆ ಮತ್ತು ಪರೀಕ್ಷೆಗಳು, ಮಾತ್ರೆಗಳ ವಿವರ, ದಾದಿಯರು ನೀಡಿದ ಆರೈಕೆ, ಒಳರೋಗಿಯಾಗಿ ದಾಖಲಾದಾಗ ನೀಡಿದ ಚಿಕಿತ್ಸೆ, ಆದ ವೆಚ್ಚ, ಅನುಸರಣಾ ವಿಧಾನ ಎಲ್ಲಾ ಗಣಕೀಕರಣದ ಮೂಲಕ ನೋಂದಣಿಯಾದಲ್ಲಿ ಸುಖಾ ಸುಮ್ಮನೆ ಬರೆದು ಕೊಡುವ (?) ಪ್ರಯೋಗಶಾಲಾ ಪರೀಕ್ಷೆಗಳು, ಔಷಧಿಗಳು ಇವೆಲ್ಲಾ ಪುನರಾವರ್ತನೆಯಾಗುವ ಸಾಧ್ಯತೆ ಕಡಿಮೆಯಲ್ಲವೇ?

#ಡಿಜಿಟಲ್_ಯುಗದಲ್ಲಿ ಮನಸ್ಸು ಮಾಡಿದರೆ ಎಲ್ಲವೂ ಸಾಧ್ಯ. ಸಾರ್ವಜನಿಕರಿಂದ ಇದೊಂದು ಬೇಡಿಕೆಯಾದರೆ ಮಾತ್ರ ಇದು ಸಾಧ್ಯ! ಪಶುಚಿಕಿತ್ಸೆಯಲ್ಲಿಯೂ ಸಹ ಕಿವಿಯ ಬಿಲ್ಲೆಯ ಸಂಖ್ಯೆಯ ಮೇಲೆ ಚಿಕಿತ್ಸೆ ಮಾಡಬೇಕೆಂದರೂ ಸಹ ಅಂತರ್ಜಾಲದ ಕೊರತೆ, ಸಿಬ್ಬಂದಿ ಕೊರತೆ ಇತ್ಯಾದಿ ಸಹಸ್ರಾರು ಕಾರಣಗಳಿಂದ ಕಾರ್ಯಗತವಾಗಲೇ ಇಲ್ಲ. ಮುಂದೊಂದು ದಿನ ಇದು ಆಗುವ ಸಾಧ್ಯತೆಯ ಬಗ್ಗೆ ಭರವಸೆ ಇದೆ. ಇದು ಎಲ್ಲರೂ ವಿಚಾರ ಮಾಡುವಂತ ವಿಚಾರ. ವಿಚಾರ ಮಾಡಿ!


  • ಡಾ. ಎನ್.ಬಿ.ಶ್ರೀಧರ ( ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು, ಪಶುವೈದ್ಯಕೀಯ ಔಷಧಶಾಸ್ತ್ರ ಮತ್ತು ವಿಷಶಾಸ್ತ್ರ ವಿಭಾಗ, ಔಷಧಶಾಸ್ತ್ರ ಮತ್ತು ವಿಷಶಾಸ್ತ್ರ ವಿಭಾಗ, ಪಶುವೈದ್ಯಕೀಯ ಮಹಾವಿದ್ಯಾಲಯ) ಶಿವಮೊಗ್ಗ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW