ಲೇಖಕರಾದ ಹೇಮಾ ಪಟ್ಟಣ ಶೆಟ್ಟಿ ಅವರ ‘ ಚೆಕಾವ್ ಟು ಶಾಂಪೇನ್ ‘ ಹಾಗೂ ರಾಮಮೂರ್ತಿಯವರ ‘ ಯಶೋಧರೆ ಮಲಗಿರಲಿಲ್ಲ ‘ ನಾಟಕದ ಕುರಿತು ಡಾ ಮಂಗಳ ಪ್ರಿಯದರ್ಶಿನಿ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಓದಿ…
ಏಳು ಅಪರೂಪದ ನಾಟಕಗಳನ್ನು ಅಭಿನಯಿಸಿದವರು , ನಿರ್ದೇಶಿಸಿದವರು , ವಸ್ತ್ರ ವಿನ್ಯಾಸ , ಪ್ರಸಾದನ , ಸಂಗೀತ , ಬೆಳಕು – ಹೀಗೆ ಎಲ್ಲ ವಿಭಾಗಗಳಲ್ಲೂ ಕೆಲಸ ಮಾಡಿ ಮಿರಿ ಮಿರಿ ಮಿಂಚಿದವರು ಬೆಂಗಳೂರು ವಿಶ್ವವಿದ್ಯಾಲಯದ ಪ್ರದರ್ಶನ ಕಲಾ ವಿಭಾಗದ ನಾಲ್ಕನೇ ಸೆಮಿಸ್ಟರ್ ವಿದ್ಯಾರ್ಥಿಗಳು.
ಈ ಏಳೂ ನಾಟಕಗಳು ವಿದ್ಯಾರ್ಥಿಗಳ ಪರೀಕ್ಷಾರ್ಥ ರಂಗ ಪ್ರಯೋಗವಾಗಿತ್ತು. ವೈಯಕ್ತಿಕ ಕಾರಣಗಳಿಂದ ಕೇವಲ ಎರಡೇ ನಾಟಕಗಳನ್ನು ನೋಡಿದೆನಾದರೂ , ಉಳಿದ ಐದು ನಾಟಕಗಳನ್ನು ನೋಡಲಾಗಲಿಲ್ಲವಲ್ಲಾ ಎಂಬ ಕೊರಗಿನಿಂದಲೇ ರಂಗಮಂದಿರದಿಂದ ಹೊರಬಂದಿದ್ದೆ.
ಕಾರ್ಯಕ್ರಮ ನಿಗದಿತ ಸಮಯಕ್ಕಿಂತ ಒಂದು ಗಂಟೆ ತಡವಾಗಿ ಪ್ರಾರಂಭವಾದರೂ , ಕಾದದ್ದು ನಷ್ಟವಾಲಿಲ್ಲ ಎಂಬ ಅನುಭವ. ಆಂಟನ್ ಚೆಕಾವ್ ನ ಕಥೆಗಳನ್ನು ಆಧರಿಸಿ , ಅನುವಾದಿಸಿ ನಡು ನಡುವೆ ತಮ್ಮ ಸ್ವಂತ ಸಂಭಾಷಣೆಗಳನ್ನು ಅರ್ಥಪೂರ್ಣವಾಗಿ ಹೆಣೆದ ‘ ಚೆಕಾವ್ ಟು ಶಾಂಪೇನ್ ‘ ನಿಡುಗಾಲದ ಗೆಳತಿ ಡಾ ಹೇಮಾ ಪಟ್ಟಣ ಶೆಟ್ಟಿಯವರ ಅಪರೂಪದ ಪ್ರಯೋಗಾತ್ಮಕ ನಾಟಕ . ಇದು ಅಭಿಮನ್ಯು ಭೂಪತಿಯವರ ನಿರ್ದೇಶನದಲ್ಲಿ ಮೂಡಿಬಂದಿತ್ತು.

ಚೆಕಾವ್ ನ ಸಾಹಿತ್ಯದ ಗುಣವೇ ಹಾಗೆ. ಲವಲವಿಕೆ, ಉತ್ಸಾಹ, ಹಾಡು , ನೃತ್ಯ, ಹಾಸ್ಯ, ಸಂಭ್ರಮಗಳಿಂದ ಪ್ರಾರಂಭಗೊಂಡು ಬದುಕಿನ ನೋವು, ಸಂಕಟ, ಅನ್ಯಾಯ, ವಿಷಾದಗಳನ್ನು ಅತ್ಯಂತ ಸೂಕ್ಷ್ಮ ನೆಲೆಯಲ್ಲಿ ವಿಡಂಬಿಸುತ್ತಾ ಮಾನವೀಯ ಮೌಲ್ಯಗಳ ಪರವಾಗಿ ಬಂದು ನಿಲ್ಲುವುದು. ಈ ನಾಟಕದಲ್ಲಿ ಸ್ವತಃ ಕವಿಯೇ ತನ್ನ ಬಗೆಗೆ ಆತ್ಮಾವಲೋಕನ ಮಾಡಿಕೊಳ್ಳುತ್ತಾನೆ. ತಾನು ತನ್ನ ಸಮಕಾಲೀನ ಕವಿಗಳಿಗಿಂತ ಕಮ್ಮಿ , ತನ್ನ ಸಾಹಿತ್ಯವನ್ನು ಯಾರೂ ಪ್ರೀತಿಸುವುದಿಲ್ಲ ಎನ್ನುವ ಸಂದರ್ಭದಲ್ಲಿ ಅವನ ಹಿರಿಯ ತಲೆಮಾರಿನ ಕವಿ ಟಾಲ್ಸ್ಟಾಯ್ ನೇ ಬಂದು ಚೆಕಾವ್ ನ ಬೆನ್ನು ತಟ್ಟಿ ಜೊತೆಗೇ ಕೂತು ಷಾಂಪೈನ್ ಕುಡಿಯುತ್ತಾನೆ. ಅದು ಅವನ ಘನತೆ, ಮಾನವೀಯ ಗುಣಗಳನ್ನೂ ದಾಖಿಲಿಸುತ್ತದೆ. ಅಷ್ಟಲ್ಲದೆ ಟಾಲ್ಸ್ಟಾಯ್ ಮಹಾಕವಿ ಆದಾನೇ ?
ಪಾತ್ರಧಾರಿಗಳು ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಲು ಸಾಕಷ್ಟು ಶ್ರಮಪಟ್ಟಿದ್ದರು. ಸಾಲ ಮನ್ನಕ್ಕಾಗಿ ಬರುವ ಸ್ತ್ರೀ ಹಾಗೂ ಮ್ಯಾನೇಜರ್ ಪಾತ್ರಗಳಂತೂ ಬಡತನದ ಬದುಕಿನ ನಡುವಿನ ವ್ಯಂಗ್ಯ, ವಿಷಾದಗಳನ್ನು ಬಡವರ ನಗುವಿನ ಶಕ್ತಿಯ ಮೂಲಕವೇ ಶಕ್ತಿಶಾಲಿಯಾಗಿ ಹೇಳುತ್ತಿದ್ದವು.
ಸಂಭಾಷಣೆಗಳಲ್ಲಿದ್ದ ತಿಳಿ ಹಾಸ್ಯ , ಪ್ರಾರಂಭದ ಫ್ಲೋರ್ ಟ್ಯಾಪಿಂಗ್ ಕುಣಿತ ಲವಲವಿಕೆಯ ವಾತಾವರಣವನ್ನು ನಿರ್ಮಾಣ ಮಾಡಿ ಪ್ರೇಕ್ಷಕರಲ್ಲಿ ಉಲ್ಲಾಸ ಸೃಷ್ಟಿಸಿ, ವಿಷಾದದ ಕಡಲಿನಲ್ಲಿ ಮುಳುಗಿಸಿತ್ತು.

ಎಂ ಎಸ್ ರಾಮ ಮೂರ್ತಿ ಅವರ ‘ ಯಶೋಧರೆ ಮಲಗಿರಲಿಲ್ಲ ‘ ಬುದ್ಧನ ಜನಜನಿತ ಕಥೆಗೊಂದು ಸ್ತ್ರೀವಾದೀ ನೆಲೆಯಿಂದ ಹೊಸ ವ್ಯಾಖ್ಯಾನ ನೀಡುವ ಪ್ರಯತ್ನ ಮಾಡಿತ್ತು. ಹಾಗೇ ಯಶಸ್ವಿ ಕೂಡ ಆಗಿತ್ತು . ಬುದ್ಧ ಮನೆ ಬಿಟ್ಟು ಹೋಗುವಾಗ ತಾಳುವ ತಳಮಳ , ಸಂಕಟಗಳಿಗೆ ಸೂಕ್ತ ಪರಿಹಾರ, ಸಹಕಾರ , ಮಾರ್ಗದರ್ಶನ ಮಾಡುವ ಯಶೋಧರೆ , ‘ ಬೆಳಕು ಇಲ್ಲಿಲ್ಲವೇ’ ಎಂದು ಪ್ರಶ್ನಿಸುವ ಮೂಲಕ ತನ್ನ ಬದುಕಿನಲ್ಲಿ, ತನ್ನ ನೆಲೆಯಲ್ಲಿಯೇ ಬೆಳಕನ್ನು ಕಂಡುಕೊಳ್ಳುತ್ತಾ , ಮಗ ರಾಹುಲನಿಗೆ ಒಳ್ಳೆಯ ತಾಯಿಯಾಗಿ , ಸಿದ್ಧಾರ್ಥನಿಗೆ ಒಳ್ಳೆಯ ಹೆಂಡತಿಯಾಗಿ ಗಟ್ಟಿ ಹೆಣ್ಣಿನ ಮಾದರಿಯಾಗುತ್ತಾಳೆ .ಅನೇಕ ವರ್ಷಗಳ ನಂತರ ಸಿದ್ಧಾರ್ಥ , ಬುದ್ಧ ಭಗವಾನನಾಗಿ ಬಾಗಿಲ ಬಳಿಯೇ ಬಂದು ನಿಂತರೂ , ಯಾವ ಮೋಹಕ್ಕೂ ಪಕ್ಕಾಗದೆ, ತನ್ನ ನಿಲುವನ್ನು ಸಮರ್ಥಿಸಿಕೊಳ್ಳವ ಹೆಣ್ಣಾಗಿ ಬೌದ್ಧಿಕತೆಯ ಸಂಕೇತವಾದ ಬುದ್ಧನಿಗಿಂತ , ಬದುಕನ್ನು ಪ್ರೀತಿಸುವ ಭಾವುಕ ಹೆಣ್ಣಾಗಿ ಪ್ರೇಕ್ಷಕರ ಹೃದಯಕ್ಕೆ ಲಗ್ಗೆ ಹಾಕುತ್ತಾಳೆ . ತನ್ನ ಚಿಂತನೆಗಳು , ಅಭಿಪ್ರಾಯಗಳು , ಆಯ್ಕೆಗಳನ್ನು ಎತ್ತಿ ಹಿಡಿಯುವ ವಿಚಾರ ಪತ್ನಿಯಾಗುತ್ತಾಳೆ. ಹೀಗಾಗಿ , ಈ ಯಶೋಧರೆ , ಬುದ್ಧ ಮನೆ ಬಿಟ್ಟು ಹೋಗುವ ಗೊಂದಲದಲ್ಲಿದ್ದಾಗ ಅದನ್ನು ಗೌರವಿಸಿ , ಬೆಂಬಲಿಸುವ ಹೆಣ್ಣಾಗಿದ್ದಾಳೆ. ಬುದ್ಧ ತನ್ನ ಗುರಿಯ ಅನ್ವೇಷಣೆಗೆ ಹೊರಟಾಗ ದುಃಖಿಸುವ ಅಥವಾ ನಿಂದಿಸುವ ಹೆಣ್ಣಾಗಿಲ್ಲ ,ಬದಲಿಗೆ ಪತಿಯ ಬದುಕಿನ ಆಯ್ಕೆಯನ್ನು ಗೌರವಿಸುವ ಎಚ್ಚರದ , ಪ್ರಜ್ಞಾವಂತೆಯಾಗಿದ್ದಾಳೆ. ಲೇಖಕರ ಹೊಸ ವ್ಯಾಖ್ಯಾನ ಸಮಂಜಸವಾಗಿ , ಅತ್ಯಂತ ತಾರ್ಕಿಕವಾಗಿ ನಿರೂಪಿತವಾಗಿದೆ . ಗಗನ್ ಆರ್ ಗೋಡ್ಗಲ್
ನಿರ್ದೇಶನ ಮೆಚ್ಚುಗೆಗೆ ಪಾತ್ರವಾಗಿದೆ. ಈ ನಾಟಕದ ಹೈಲೈಟ್ ಬೆಳಕಿನ ಸಂಯೋಜನೆ . ಇಡೀ ನಾಟಕದಲ್ಲಿ ಬೆಳಕು- ಕತ್ತಲೆಗಳ ವಿನ್ಯಾಸವೇ ಸಾಂಕೇತಿಕವಾಗಿ ವಸ್ತು ವನ್ನು ವ್ಯಾಖ್ಯಾನಿಸಿದ್ದು ವಿಶೇಷವಾಗಿತ್ತು .
ಯಶೋಧರೆ ಹಾಗೂ ರಾಹುಲನ ಪಾತ್ರಧಾರಿಗಳು ಪ್ರಶಂಸೆಗೆ ಪಾತ್ರರಾದರು. ಈ ಎರಡೂ ನಾಟಕಗಳ ಲೇಖಕರಾದ ಹೇಮಾ ಪಟ್ಟಣ ಶೆಟ್ಟಿ ಹಾಗೂ ರಾಮಮೂರ್ತಿ ಯವರು ಪ್ರದರ್ಶನದಲ್ಲಿ ಭಾಗಿಯಾಗಿದ್ದದು ವಿಶೇಷವಾಗಿತ್ತು.
- ಡಾ ಮಂಗಳ ಪ್ರಿಯದರ್ಶಿನಿ
