ಆ ರಾಜ ಯಾವ ಯುದ್ಧವನ್ನೂ ಮಾಡಿರಲಿಲ್ಲ. ಯಾವ ರಾಜ್ಯಕ್ಕೂ ರಾಜನಾಗ ಬಯಸಲಿಲ್ಲ, ರಾಜನಾಗಲಿಲ್ಲ ಕೂಡ ಎಲ್ಲವನ್ನೂ “ತ್ಯಾಗ” ಮಾಡಿ ಇಡೀ ಸಂಗೀತ ಪ್ರಪಂಚಕ್ಕೇ ರಾಜನಾಗಿ ತ್ಯಾಗ ಬ್ರಹ್ಮರೆನಿಸಿದವರೇ …ರಾಜ ರಾಜೇಶ್ವರ ರಾಜಮುಖ ಸಾಕೇತ, ರಾಜ ಸದ್ಗುಣ ತ್ಯಾಗರಾಜರು. ಸೌಮ್ಯ ಸನತ್ ಅವರ ಲೇಖನಿಯಯಲ್ಲಿ ತ್ಯಾಗರಾಜರ ಆರಾಧನೆ ತಪ್ಪದೆ ಓದಿ…
ಇಂದು ಪುಷ್ಯ ಬಹುಳ ಪಂಚಮಿ. ಕರ್ನಾಟಕ ಸಂಗೀತದ ಮೇರುಪುರುಷ ತ್ಯಾಗರಾಜರ ಆರಾಧನಾ ಮಹೋತ್ಸವದ ಶುಭಪರ್ವದಿನ, ಕರ್ಣಾನಂದಕರ, ಮಹದಾನಂದಕರ ಸಂಗೀತ ಸುಧೆಯನ್ನು ಸವಿಯುವ ಐತಿಹಾಸಿಕ ದಿನ. ಇಂದು ಮನೆ ಮನಗಳಲ್ಲಿ ಪಂಚರತ್ನ ಕೃತಿಗಳು ಮಾರ್ದನಿಸುವ ಮಹೋನ್ನತವಾದ ಶುಭದಿನ. ಸರಿಯಾಗಿ ನೂರಾ ಎಪ್ಪತ್ತು ಮೂರು ವರ್ಷದ ಹಿಂದಿನ ಪುಷ್ಯ ಬಹುಳ ಪಂಚಮಿಯ ದಿನ ಒಬ್ಬ ರಾಜ ತೀರಿಕೊಂಡ. ನಿಜ ಹೇಳಬೇಕೆಂದರೆ ಈ ರಾಜ ಸತ್ತುಹೋಗಲಿಲ್ಲ. ಕಣ್ಮರೆಯಾದ ಕ್ಷಣದಿಂದಲೆ ಚಿರಂಜೀವಿಯಾದ. ಸಂಗೀತವನ್ನು ಮೆಚ್ಚುವ, ಆರಾಧಿಸುವ, ಹಾಡುವ, ಗುನುಗುವ, ತಾಳಹಾಕುವ ಪ್ರತಿಯೊಬ್ಬರ ಸಮಕಾಲೀನನಾಗಿ ಅಮರನಾಗಿ ಹೋದ!
ಹೌದು, ತ್ಯಾಗರಾಜರ ದೇಹಾಂತ್ಯ ಆದದ್ದು 1847 ರ ಜನವರಿ 6ರಂದು. ಆ ದಿನ, ಹಿಂದೂ ಪಂಚಾಗದ ಪ್ರಕಾರ ಪುಷ್ಯ ಬಹುಳ ಪಂಚಮಿಯ ದಿನ. ಆ ದಿನ ತ್ಯಾಗರಾಜರ ನೆನಪಿನಲ್ಲಿ, ಅವರು ಬದುಕಿ ಬಾಳಿದ ಕಾವೇರಿ ತೀರದ ತಿರುವಯ್ಯಾರಿನಲ್ಲಿ ಆರಾಧನಾ ಮಹೋತ್ಸವ ಜರುಗುತ್ತದೆ, ಭಕ್ತಿಸಂಗೀತದ ವಾರಿಧಿ ಉಕ್ಕಿ ಹರಿಯುತ್ತದೆ. ಕನ್ನಡಿಗರಿಗೆ ಇನ್ನೂ ಹತ್ತಿರವಾದ ಕಾವೇರಿಯ ಮಡಿಲಿನ ಶ್ರೀರಂಗಪಟ್ಟಣದಲ್ಲಿಯೂ ವಿಜೃಂಭಣೆಯಿಂದ ತ್ಯಾಗರಾಜರ ಆರಾಧನೆ ನಡೆಯುತ್ತದೆ. ಇವಷ್ಟೇ ಅಲ್ಲದೆ, ಕರ್ನಾಟಕ ಸಂಗೀತದ ಅಭಿಮಾನಿಗಳು, ರಸಿಕರು ಎಲ್ಲೆಲ್ಲಿದ್ದಾರೋ, ಅಲ್ಲೆಲ್ಲ ತ್ಯಾಗರಾಜರ ಆರಾಧನೆ ಒಂದಲ್ಲ ಒಂದು ರೀತಿಯಲ್ಲಿ ನಡೆದೇ ನಡೆಯುತ್ತದೆ.

ಫೋಟೋ ಕೃಪೆ : google
ತಂಜಾವೂರು ಜಿಲ್ಲೆಯ ಕಾವೇರಿ ನದಿ ದಡದಲ್ಲಿರುವ ತಿರುವಾವೂರಿನಲ್ಲಿ 1762ನೇ ಮೇ ತಿಂಗಳು 4ನೇ ತಾರೀಖಿಗೆ ಸರ್ವಜಿತ್ ಸಂವತ್ಸರದ ಚೈತ್ರಮಾಸದಲ್ಲಿ ಪುಷ್ಯ ನಕ್ಷತ್ರ ಕರ್ಕಾಟಕ ಲಗ್ನದಲ್ಲಿ ಜನ್ಮ ತಾಳಿದರು. ಇವರು ಮುಲಕನಾಡು ತೆಲುಗು ಬ್ರಾಹ್ಮಣ ವರ್ಗಕ್ಕೆ ಸೇರಿದವರು. ಭಾರದ್ವಾಜಗೋತ್ರ- ಮೂರನೇ ಕುಮಾರರಾಗಿ ಜನ್ಮತಾಳಿದ ಇವರಲ್ಲಿ ವಂಶಪಾರಂಪರ್ಯವಾಗಿ ಮಡುಗಟ್ಟಿದ್ದ ಸಂಗೀತ ಸಾಹಿತ್ಯ ಶಾಸ್ತ್ರವಿದ್ವತ್ತುಗಳ ವಾತಾವರಣದಲ್ಲಿ ಬೆಳೆದ ಸಂಗೀತವಿದ್ಯೆ, ಸಾಹಿತ್ಯಾಭಿರುಚಿ, ಶಾಸ್ತ್ರಜ್ಞಾನಗಳು ಕೈಗೂಡಿದ್ದರಲ್ಲಿ ಅಚ್ಚರಿಯೇನಿಲ್ಲ.
ತ್ಯಾಗರಾಜರು ಸಂಗೀತದ ಮೊದಲ ಶಿಕ್ಷಣವನ್ನು ಶ್ರೀ ಸೊಂಟಿ ವೆಂಕಟರಮಣಯ್ಯನವರಿಂದ ಪಡೆದರು. ದೇವರನ್ನು ಅನುಭವಿಸುವ ದಾರಿಯಾಗಿ ಸಂಗೀತವನ್ನು ಕಂಡ ತ್ಯಾಗರಾಜರು ಭಾವ ಪೂರ್ಣ ಸಂಗೀತಕ್ಕೆ ರಾಗ- ಮತ್ತು ತಾಳ-ಬದ್ಧ ಸಂಗೀತಕ್ಕಿ೦ತ ಹೆಚ್ಚು ಪ್ರಾಮುಖ್ಯತೆಯನ್ನು ನೀಡಿದವರು. ಹದಿಮೂರನೇಯ ವಯಸ್ಸಿನಲ್ಲಿಯೇ ತಮ್ಮ ಕೃತಿಗಳಲ್ಲಿ ಒಂದಾದ “ನಮೋ ನಮೋ ರಾಘವ” ವನ್ನು ರಚಿಸಿದರು. ತಮ್ಮ 14ನೇ ವಯಸ್ಸಿನೊಳಗಾಗಿ ತೆಲುಗು, ಸಂಸ್ಕೃತ ಭಾಷೆಗಳನ್ನು ಕಲಿತು, ಕಾವ್ಯ, ನಾಟಕ, ಅಲಂಕಾರಗಳಲ್ಲಿ ವಿಶೇಷ ಪಾಂಡಿತ್ಯವನ್ನು ಹೊಂದಿದವರಾಗಿದ್ದರು .ಇವರ “ಎಂದರೋ ಮಹಾನುಭಾವುಲು” ಕೃತಿಯನ್ನು ಕೇಳಿದ ನಂತರ ಸೊಂಟಿ ವೆಂಕಟರಮಣಯ್ಯನವರು ತಂಜಾವೂರಿನ ರಾಜರಿಗೆ ಇವರ ಬಗ್ಗೆ ಪ್ರಭಾವೀ ಸಲಹೆ ನೀಡಿದರು. ಆದರೆ ತ್ಯಾಗರಾಜರು ಮಹಾರಾಜರ ಆಸ್ಥಾನ ಸಂಗೀತಗಾರರಾಗುವ ಆಹ್ವಾನವನ್ನು ನಿರಾಕರಿಸಿದರಂತೆ .
ತ್ಯಾಗರಾಜರು ’ವಸಂತ’ ರಾಗದಲ್ಲಿ ’ಸೀತಮ್ಮಮಾಯಮ್ಮ’ ಕೃತಿಯನ್ನು ರಚಿಸಿ, ತಾಯಿ ಸೀತಮ್ಮನೆಂದೂ ತಂದೆ ರಾಮ ಎಂದೂ ತಮ್ಮ ಮಾತಾಪಿತೃಗಳ ನಾಮಧೇಯಗಳ ಮತ್ತು ಆರಾಧ್ಯದೇವನಾದ ಸೀತಾರಾಮರ ಉಭಯ ಪರವಾಗಿ ಕೃತಿಗಳಲ್ಲಿ ಅಲಂಕಾರಿಕವಾಗಿ ಚಿತ್ರಿಸಿದ್ದಾರೆ. ಮಾತಾಪಿತೃಗಳ ದೈವಭಕ್ತಿಯೂ ತ್ಯಾಗರಾಜರಲ್ಲಿ ಸಂಪೂರ್ಣವಾಗಿ ಚಿಕ್ಕಂದಿನಿಂದಲೇ ಬೇರೂರಿತ್ತು.
ಅಲ್ಪ ಕಾಲದಲ್ಲಿ ರಾಮ ಷಡಕ್ಷರಿ ಮಂತ್ರೋಪದೇಶವೂ ರಾಮಕೃಷ್ಣಾನಂದರೆಂಬ ಯತಿವರ್ಯರಿಂದ ಲಭಿಸಿದ ನಂತರ ಕಂಚಿಯಿಂದ ಬಂದ ವಿದ್ವಾಂಸರಲ್ಲಿ ರಾಮತಾರಕ ಮಂತ್ರೋಪದೇಶವನ್ನು ಪಡೆದರು. ಕೋಟಿರಾಮಗಳನ್ನು ಜಪಿಸಿದರೆ ಭಗವತ್ ಸಾಕ್ಷಾತ್ಕಾರವಾಗುವುದೆಂಬ ದೃಢನಂಬಿಕೆ ಮೇಲೆ ರಾಮನಾಮಗಳನ್ನು ಜಪಿಸುತ್ತಾ ಪ್ರತಿದಿನವೂ ರಾಮವಿಗ್ರಹವನ್ನು ಪೂಜಿಸುತ್ತಾ ಅನೇಕ ಕೃತಿಗಳನ್ನು ರಚಿಸಿದರು. ಅವರ ಭಕ್ತಿಗೆ ಮೆಚ್ಚಿ ನಾರದರು ಸ್ವರಾರ್ಣವವೆಂಬ ಸಂಗೀತ ಶಾಸ್ತ್ರವನ್ನು ದೊರಕುವಂತೆ ಮಾಡಿದರು ಎಂಬ ಪ್ರತೀತಿ ಇದೆ.

ಫೋಟೋ ಕೃಪೆ : google
ಪಂಚರತ್ನ ಕೃತಿಗಳು :
ಶ್ರೀತ್ಯಾಗರಾಜರ ‘ಪಂಚರತ್ನ ಕೃತಿ’ ಕೇಳದ – ಹಾಡದ ಸಂಗೀತಾಸಕ್ತರು – ಸಂಗೀತಗಾರರು ಬಹು ವಿರಳ. ಘನರಾಗಗಳಾದ ನಾಟ,ಗೌಳ,ಆರಭಿ,ವರಾಳಿ ಮತ್ತು ಶ್ರೀ ರಾಗಗಳಲ್ಲಿ ಇವರು ರಚಿಸಿರುವ ವಿಶೇಷ ಕೃತಿಸಮೂಹಕ್ಕೆ ಘನರಾಗ ಪಂಚರತ್ನ ಎಂದು ಕರೆಯಲಾಗುತ್ತೆ. ಶ್ರೀರಾಮ ದೇವರ ಮೇಲೆ ರಚಿತವಾದ ಪಂಚರತ್ನ ಕೃತಿಗಳು…
ಜಗದಾನಂದ ಕರಕ – ರಾಗಂ ನತೈ
ದುಡುಕು ಗಲಾ – ರಾಗಂ ಗೌಳ
ಸಾಧಿಂಚನೆ – ರಾಗಂ ಆರಭಿ
ಕನಕನ ರುಚಿರ – ರಾಗಂ ವರಾಳಿ
ಎಂದರೋ ಮಹಾನುಭಾವಲು – ಶ್ರೀ ರಾಗಂ
ತ್ಯಾಗರಾಜರು ಅವರ ಕಾಲದಲ್ಲಿ ಪ್ರಚಲಿತವಿಲ್ಲದ ಹಲವಾರು ರಾಗಗಳಲ್ಲಿ ಕೃತಿ ರಚನೆ ಮಾಡಿದ್ದಾರೆ. ಖರಹರಪ್ರಿಯ, ಹರಿಕಾಂಭೋಜಿ ಮೊದಲಾದ ಕೆಲವು ಮೇಳಕರ್ತರಾಗಗಳನ್ನು ಪ್ರಸಿದ್ಧಿಗೆ ತಂದವರು ತ್ಯಾಗರಾಜರೇ. ಹೀಗೇ ತಿರುವೊಟ್ರಿಯೂರಿನ ತ್ರಿಪುರಸುಂದರಿಯ ಮೇಲೆ, ಕೋವೂರು ಸುಂದರೇಶ್ವರನ ಮೇಲೆ, ಮತ್ತು ಶ್ರೀರಂಗಂ ನ ರಂಗನಾಥನಮೇಲೆ ಇವರು ರಚಿಸಿರುವ ಐದೈದು ಕೃತಿಗಳ ಗುಂಪುಗಳು, ತಿರುವೊಟ್ರಿಯೂರ್ ಪಂಚರತ್ನ, ಕೋವೂರು ಪಂಚರತ್ನ ಮತ್ತು ಶ್ರೀರಂಗಂ ಪಂಚರತ್ನ ಕೃತಿಗಳೆಂದೇ ಪ್ರಸಿದ್ಧವಾಗಿವೆ.
ತ್ಯಾಗರಾಜರು ತಮ್ಮ ಅಂತ್ಯ ಕಾಲದ ಕೊನೆಯ ಕ್ಷಣದ ವರೆಗೂ ಕೃತಿಗಳನ್ನು ರಚಿಸುತ್ತಿದ್ದರಂತೆ. ಮನೋಹರಿ ರಾಗದ ಪರಿತಾಪಮುಕನಿಯಾಡಿನ, ಶಹಾನ ರಾಗದ ಗಿರಿಪೈನೆಲಕೊನ್ನ, ಮತ್ತು ವಾಗಧೀಶ್ವರಿ ರಾಗದ ಪರಮಾತ್ಮುಡು ವೆಲಿಗೇ ಎಂಬ ಕೃತಿಗಳನ್ನು ಅವರು ತಮ್ಮ ಜೀವನದ ಕಡೆಯ ಹತ್ತು ದಿನಗಳಲ್ಲಿ ರಚಿಸಿದರೆಂಬ ಪ್ರತೀತಿ ಯಿದೆ. ತಮ್ಮ ಮನೋಭಾವವನ್ನು ಕೃತಿಗಳಲ್ಲಿ “ಅತೀತ, ಅನಾಗತ ಗ್ರಹಗಳಲ್ಲಿ ಚೆನ್ನಾಗಿ ವ್ಯಕ್ತಪಡಿಸಿದ್ದಾರೆ. ಇವರ ವಿಳಂಬ,ಮಧ್ಯಮ,ದುರಿತ ಕಾಲಗಳಲ್ಲಿ ಪ್ರತ್ಯೇಕ ಪ್ರತ್ಯೇಕವಾದ ಕೃತಿಗಳನ್ನು ರಚಿಸಿದ್ದಾರೆ. ಸಂಗೀತ ವ್ಯಾಕರಣವೆನಿಸುವ ಯತಿ, ಪ್ರಸ್ತಾರಗಳನ್ನು ಬಿಡದೆ ತ್ರಿಸ್ಥಾಯಿಗಳಲ್ಲೂ ಸಂಚಾರವಿರುವ ಕೃತಿಗಳನ್ನು ರಚಿಸಿದ್ದಾರೆ.ತಮ್ಮ ಕೃತಿಗಳನ್ನು, ’ತ್ಯಾಗರಾಜ’ ಎಂಬ ಅಂಕಿತ ಬರೆದು ತಿರುವಾರೂರಿನ ತ್ಯಾಗರಾಜ ಸ್ವಾಮಿಗೆ ಅರ್ಪಿಸಿದರೆಂದು ಹೇಳುತ್ತಾರೆ.
ಕರ್ನಾಟಕ ಸಂಗೀತಕ್ಕೆ ಭಾವಪೂರ್ಣ ಕೀರ್ತನೆಗಳ ಮೂಲಕ ಹೊಸ ಆಯಾಮ ನೀಡಿದ ಖ್ಯಾತ ವಾಗ್ಗೇಯಕಾರರಲ್ಲಿ ತ್ಯಾಗರಾಜರದು ಬಹುದೊಡ್ಡ ಹೆಸರು. ಯಾವುದೇ ದೇವಸ್ಥಾನಗಳಲ್ಲೇ ಆಗಲಿ, ಶುಭ ಸಮಾರಂಭಗಳಲ್ಲೇ ಆಗಲಿ ನಾಗಸ್ವರ ಮತ್ತು ಡೋಲು ವಾದನ ಇಲ್ಲದಿದ್ದರೆ ಸಮಾರಂಭ ಕಳೆಗಟ್ಟುವುದಿಲ್ಲ. ಆದರಲ್ಲೂ ತ್ಯಾಗರಾಜರ ಕೃತಿಗಳು ಇಲ್ಲದಿದ್ದರೆ ಈ ಎರಡೂ ವಾದ್ಯಗಳು ಸಪ್ಪೆ ಎನಿಸದೇ ಇರಲಾರದು.
“ಎಂದರೋ ಮಹಾನುಭಾವುಲು ಅಂದರೀಕಿ ವಂದನಮು”
ಎಂದು ಹೇಳಿ ಧನ್ಯರಾದವರು ಶ್ರೀ ತ್ಯಾಗರಾಜರು. ತ್ಯಾಗರಾಜರು ಕರ್ನಾಟಕ ಸಂಗೀತಕ್ಕೆ ನೀಡಿರುವ ಕೊಡುಗೆ ಅನುಪಮ. ತ್ಯಾಗರಾಜರು ತಮ್ಮ ಸಂಗೀತ ಸಂಯೋಜನೆಯ ಜೊತೆಗೆ ಕರ್ನಾಟಕ ಸಂಗೀತಕ್ಕೆ ನೀಡಿರುವ ಸಾಹಿತ್ಯದ ಕೊಡುಗೆಯೂ ಅಪಾರ. ಕರ್ನಾಟಕ ಸಂಗೀತಪದ್ಧತಿಯ ಮುಖ್ಯ ರಚನಕಾರರಾದ ಮುತ್ತುಸ್ವಾಮಿ ದೀಕ್ಷಿತರು ಮತ್ತು ಶ್ಯಾಮಾ ಶಾಸ್ತ್ರಿಗಳ ಜೊತೆಯಲ್ಲಿ ಕರ್ನಾಟಕ ಸಂಗೀತದ ತ್ರಿಮೂರ್ತಿಗಳಲ್ಲಿ ಒಬ್ಬರಾಗಿ ಋಷಿಗಳಂತೆ ಬಾಳಿ ,ಆಧ್ಯಾತ್ಮ ತತ್ವದ ಬೆಳಕನ್ನು ಬೀರಿ ನಾದೋಪಾಸನೆಯಿಂದ ಪರಬ್ರಹ್ಮನನ್ನು ಕಂಡು ನಾದಯೋಗಿ ಯೆನಿಸಿದವರು ನಮ್ಮ ತ್ಯಾಗರಾಜರು ಶ್ರೀರಾಮನನ್ನು ನವರತ್ನಮಂಟಪದಲ್ಲಿಟ್ಟು ‘ನಾ ಭಾಗ್ಯಮಾ’ ಎಂದು ಪೂಜಿಸುವ ತ್ಯಾಗರಾಜರು ನಿಶ್ಚಯವಾಗಿ ನಮ್ಮ ಭಾಗ್ಯ. ಈ ಸಂತಮಹನೀಯರ ಪುಣ್ಯಾರಾಧನೆಯಂದು ನಾವವರನ್ನು ಪ್ರಾರ್ಥಿಸಬಹುದಾದದ್ದು ಇಷ್ಟು – ‘ಭಾವುಕಮಗು ಸಾತ್ತ್ವಿಕ ಭಕ್ತಿ ಭಿಕ್ಷಲೀಯವೇ.’…
- ಸೌಮ್ಯ ಸನತ್
