“ಪ್ರಾಣೇಶಾಚಾರ್ಯರು ನಿರೀಕ್ಷೆಯಲ್ಲಿ, ಆತಂಕದಲ್ಲಿ ಕಾದರು”

ಅನಂತಮೂರ್ತಿಯವರು ಅನಾರೋಗ್ಯದ ನಡುವೆಯೂ ಪ್ರಸಕ್ತ ವಿದ್ಯಮಾನಗಳಿಗೆ ಸ್ಪಂದಿಸುತ್ತಾ, ಸಾವನ್ನು ಅಣಗಿಸುತ್ತಾ ಸಾಗುತ್ತಿದ್ದ, ಜೀವನವನ್ನು ಅಪಾರವಾಗಿ ಪ್ರೀತಿಸುತ್ತಿದ್ದ ಮೂರ್ತಿ, ತಮ್ಮ ಜೀವನಯಾತ್ರೆ ಮುಗಿಸಿಬಿಟ್ಟಾಗ ಲೇಖಕರಾದ  ರಾಘವನ್ ಚಕ್ರವರ್ತಿ ಅವರು ಬರೆದ ಲೇಖನವಿದು, ತಪ್ಪದೆ ಓದಿ…

ಆಗಸ್ಟ್ ೨೩, ೨೦೧೪:

ಇಡೀ ಸಂಸ್ಕಾರ ಕಾದಂಬರಿಯ ಸಾರವನ್ನೆಲ್ಲಾ ಹೀರಿರುವ ಆ ಕಾದಂಬರಿಯ ಕೊನೆಯ ವಾಕ್ಯ..ಆದರೆ ಈ ಭಾವದ ನಿರೂಪಣೆಯಲ್ಲಿ ಇದೇ ಹೆಸರಿನ ಸಿನಿಮಾ ಸೋಲು ಕಂಡಿತು. ಅಲ್ಲಿಯವರೆಗೂ ತೆಲುಗು ಚಿತ್ರರಂಗದಲ್ಲಿ ಹೇಳಿಕೊಳ್ಳುವಂತಹ ಸಾಧನೆಯನ್ನೇನೂ ಮಾಡಿದ್ದಿರದ ತಿಕ್ಕವರುಪು ಪಟ್ಟಾಭಿರಾಮ ರೆಡ್ಡಿ, ಕನ್ನಡಕ್ಕೆ ಕಾಲಿಟ್ಟಿದ್ದೇ ಸಿನಿಮಾ ಮಾಧ್ಯಮಕ್ಕೆ ಸುಲಭವಾಗಿ ಒಗ್ಗಲಾರದ ’ಸಂಸ್ಕಾರ’ ಚಿತ್ರದಿಂದ. ಪಟ್ಟಾಭಿಯವರಿಗೆ ಚಿತ್ರ ನಿರ್ದೇಶನದಲ್ಲಿ ತಮಗಿದ್ದ ಇತಿ-ಮಿತಿಗಳ ಅರಿವಿತ್ತು. ಕೆ.ವಿ.ರೆಡ್ಡಿ ಆ ಕಾಲದ ಪೌರಾಣಿಕ ಚಿತ್ರಗಳ ಖ್ಯಾತ ನಿರ್ದೇಶಕ. ಎನ್.ಟಿ.ಆರ್.ಗೆ ’ದೈವಿಕ’ ಮೌಲ್ಯ ತಂದವರಲ್ಲಿ ಪ್ರಮುಖರು. ಅವರಲ್ಲಿ ಸಹಾಯಕರಾಗಿದ್ದ, ಇನ್ನೂ ಸಿನಿಮಾ ವ್ಯಾಕರಣ ಕಲಿಯುತ್ತಿದ್ದ ’ಸಿಂಗೀತಮ್ ಶ್ರೀನಿವಾಸ ರಾವ್’ ಎಂಬ ಯುವಕನನ್ನು ಕೆಲಸಕ್ಕೆ ಬಿಟ್ಟ ಪಟ್ಟಾಭಿ, ತಾವು ನಿರ್ದೇಶಕನ chair ನಲ್ಲಿ ಆಸೀನರಾದರು. ’ಪ್ರಾಣೇಶಾಚಾರ್ಯ’ ರ ಪಾತ್ರ ವಹಿಸಿದ ಗಿರೀಶ್ ಕಾರ್ನಾಡ್, ತಮ್ಮ ಆತ್ಮ ಕಥೆ ’ಆಡಾಡುತ ಆಯುಷ್ಯ’ ದಲ್ಲಿ ಒಂದು ಅಧ್ಯಾಯವನ್ನೇ ’ಸಂಸ್ಕಾರ’ದ ಸ್ಮರಣೆಗೆ ಮುಡಿಪಾಗಿಸಿದ್ದಾರೆ. ಕನ್ನಡದಲ್ಲಿ ’ಕಲಾತ್ಮಕ’ ಚಿತ್ರಗಳ ಸಾಧ್ಯತೆಯನ್ನು ಸ್ಪಷ್ಟವಾಗಿ ಎತ್ತಿಹಿಡಿದ ಕಾರಣಕ್ಕೆ ಮಾತ್ರ ’ಸಂಸ್ಕಾರ’ ಚಿತ್ರ ಸ್ಮರಣೀಯ ಎನಿಸುತ್ತದೆ. ಕಾದಂಬರಿಯಾಗಿ ’ಸಂಸ್ಕಾರ’ ಉಂಟುಮಾಡಿದ ಸಂಚಲನದ ಬಗ್ಗೆ ವಿಶೇಷವಾಗಿ ಬರೆಯುವುದೇನೂ ಇಲ್ಲ.

ಸಾವಿರಾರು ಮೈಲಿ ದೂರದ ಮ್ಯಾಂಚೆಸ್ಟರ್ ನಲ್ಲಿ ಕುಳಿತು, ಮೇಳಿಗೆಯ ಅಗ್ರಹಾರವನ್ನು ಗ್ರಹಿಸುತ್ತಾ ’ಸಂಸ್ಕಾರ’ ದಂತಹ, ’ಮೌನಿ’ಯಂತಹ ಕೃತಿಗಳನ್ನು ಸೃಷ್ಟಿಸಿದ ಅನಂತಮೂರ್ತಿ, ನಮ್ಮ ಕಾಲೇಜುದಿನಗಳಲ್ಲಿ ಸಾಹಿತ್ಯ ಲೋಕದ ಅಚ್ಚರಿಯಂತೆ ಕಂಡರು. ತಮ್ಮೆಲ್ಲಾ ವಿವಾದ, ’ದ್ವಂದ್ವ’ಗಳೊಂದಿಗೆ ಒಳ್ಳೆಯ ಮನುಷ್ಯರಾಗಿದ್ದವರು. ಮಧ್ವ-ಬಸವ-ಅಲ್ಲಮ-ಮಾರ್ಕ್ಸ್-ಕುವೆಂಪು-ಅರಬಿಂದೋ-ಸಾರ್ತ್ರೆ ಗಳನ್ನೆಲ್ಲಾ ಸೈಕಲ್ ಮೇಲೆ ಹೇರಿಕೊಂಡು, ಮೇಳಿಗೆಯ ಅಗ್ರಹಾರದ ಬೀದಿಗಳಲ್ಲಿ ’ಗಡಾರಿ’ ತುಳಿಯುತ್ತಾ ’ರೋಮಾಂಚನ’ ಅನುಭವಿಸುತ್ತಿದ್ದರೇನೋ ಎಂಬ ಭಾವನೆ ಮೂಡಿಸುತ್ತಿದ್ದ ಅನಂತಮೂರ್ತಿ, ತಮಗಾದ ರೋಮಾಂಚನವನ್ನು ನಿರ್ವಂಚನೆಯಿಂದ ಹಂಚಿಕೊಂಡರು. ಎ.ಕೆ.ರಾಮಾನುಜಮ್ ’ಸಂಸ್ಕಾರ’ವನ್ನು ಇಂಗ್ಲೀಷಿಗೆ ಅನುವಾದಿಸಿದ ಮೇಲೆ, ಅಂತರರಾಷ್ಟ್ರೀಯ ಮಟ್ಟದಲ್ಲಿ ಕಾದಂಬರಿ ಚರ್ಚಿತವಾಯಿತು. (ಜರ್ಮನ್ ಮನಃಶಾಸ್ತ್ರಜ್ಞ ಎರಿಕ್ ಸನ್, ’ಸಂಸ್ಕಾರ’ದ ಬಗ್ಗೆ ಮಾಡಿರುವ ವಿಶ್ಲೇಷಣೆ, ಜಾನ್ ಪೆರ್ರಿ ಎಂಬ ಅಮೆರಿಕನ್ ವಿದ್ವಾಂಸರ ವಿಮರ್ಶಾತ್ಮಕ ಬರಹಗಳು ಬಹಳ ಗಮನಾರ್ಹವಾಗಿದೆ.)

ಅನಾರೋಗ್ಯದ ನಡುವೆಯೂ ಪ್ರಸಕ್ತ ವಿದ್ಯಮಾನಗಳಿಗೆ ಸ್ಪಂದಿಸುತ್ತಾ, ಸಾವನ್ನು ಅಣಗಿಸುತ್ತಾ ಸಾಗುತ್ತಿದ್ದ, ಜೀವನವನ್ನು ಅಪಾರವಾಗಿ ಪ್ರೀತಿಸುತ್ತಿದ್ದ ಮೂರ್ತಿ, ತಮ್ಮ ಜೀವನಯಾತ್ರೆ ಮುಗಿಸಿಬಿಟ್ಟರು.

‘ಭಾರತೀಪುರ’ ಮತ್ತು ‘ಜಗನ್ನಾಥ’ ಕಾಲೇಜು ದಿನಗಳಲ್ಲಿ ಅಪಾರವಾಗಿ ಕಾಡಿದರು. ಜಗನ್ನಾಥನಲ್ಲಿಯೇ ಅನಂತಮೂರ್ತಿ ಕಾಣತೊಡಗಿದ್ದರು. ಅವರ ಸೃಷ್ಟಿಯ ಪ್ರಾಣೇಶಾಚಾರ್ಯ, ನಾರಣಪ್ಪ, ಚಂದ್ರಿ, ಕೃಷ್ಣೇಗೌಡ, ಕನ್ನಡ ಕಾದಂಬರಿ ಲೋಕದ ವಿಶಿಷ್ಟ ಪಾತ್ರಗಳು. . ಕನ್ನಡ ಸಾಹಿತ್ಯ/ಸಿನಿಮಾವನ್ನು ಭಾರತದ ಗಡಿಯಾಚೆ ಕೊಂಡೊಯ್ದ ’ಸಂಸ್ಕಾರ’, ’ಘಟಶ್ರಾದ್ಧ’ ಕನ್ನಡ ಚಿತ್ರರಂಗಕ್ಕೆ ಕೋಡು ಮೂಡಿಸಿದವು. ಭಾರತೀಯ ಸಿನಿಮಾದ ಸಂದರ್ಭದಲ್ಲಿ ಈ ಎರಡು ಚಿತ್ರಗಳನ್ನು ಉಲ್ಲೇಖಿಸಿವುದು ಕನ್ನಡಿಗರಿಗೆ ಹೆಮ್ಮೆಯ ವಿಷಯವೇ ಆಗಿದೆ.

‘ದ್ವಂದ್ವ’ದ ಹೇಳಿಕೆಗಳನ್ನು ಕೊಡುತ್ತಲೇ, ಹಲವರನ್ನು ಕೆರಳಿಸುತ್ತಲೇ, ಮೂರ್ತಿ ವರ್ತಮಾನವನ್ನು ಸೂಕ್ಷ್ಮವಾಗಿ ಸ್ಪಂದಿಸುತ್ತಿದ್ದರು. ಡಾಲರ್ ಕಾಲೊನಿಯ ಅವರ ಮನೆಯ ಮೇಲಿನ ವಿವಾದವೇ ಇರಲಿ, ಚಂಪಾ ಟೀಕೆ-ಕೋಟಲೆಗಳಾಗಲೀ, ಕುಮಾರಣ್ಣ ಉದ್ಧಟ ಹೇಳಿಕೆಗಳನ್ನು ಕೊಟ್ಟ ಸಂದರ್ಭದಲ್ಲಾಗಲೀ, ಅನಂತಮೂರ್ತಿ ವಿವೇಕ ಕಳೆದುಕೊಳ್ಳಲಿಲ್ಲ. ನಾಡಿನ ಅಕ್ಷರಪ್ರೇಮಿಗಳು, ಅಕ್ಷರ ದ್ರೋಹಿಗಳು, ಅಕ್ಷರ ದ್ವೇಷಿಗಳು, ಸಂವೇದನಾ ಶೀಲರು, ಚಿಂತಕರು, ಅಚಿಂತಕರೆಲ್ಲರ ನಡುವೆ ಅಪಾರ ಸಂಯಮದಿಂದ ಬದುಕಿದ, ನಮ್ಮ ಭಾಷೆಯ ಜೀವಂತಿಕೆ ಕಾದು ಅದರ ವ್ಯಾಪ್ತಿ ಹೆಚ್ಚಿಸಿದ ಅನಂತಮೂರ್ತಿಯವರ ಬಗ್ಗೆ ನನಗೆ ಕುತೂಹಲ ಉಂಟಾಗಿದ್ದು, ನ್ಯಾಷನಲ್ ಕಾಲೇಜಿನಲ್ಲಿ ಓದುತ್ತಿದ್ದಾಗ. ಒಂದು ದಿನ ಕನ್ನಡ ಪುಸ್ತಕ ವಿಭಾಗದಲ್ಲಿ ’ಭಾರತೀಪುರ’ ಸಿಕ್ಕಿತು. ಓದುವ ಪ್ರಯತ್ನ ಆರಂಭಿಸಿದೆ.

ಆಗ ಜಯಪಾಲ್ ರೆಡ್ಡಿ ಜನತಾದಳದ ಕಾರ್ಯದರ್ಶಿಯಾಗಿದ್ದ ದಿನಗಳು (ಸುಮಾರು ೧೯೮೫-೮೬). ತುರ್ತು-ಪರಿಸ್ಥಿತಿ ವಿರೋಧಿಸಿ ಕಾಂಗ್ರೆಸ್ ತೊರೆದ ರೆಡ್ಡಿ, ಜನತಾ ಪರಿವಾರದೊಂದಿಗೆ ಗುರುತಿಸಿಕೊಂಡಿದ್ದರು. ಅಸ್ಖಲಿತವಾದ, ವ್ಯಾಕರಣಬದ್ಧವಾದ ಇಂಗ್ಲೀಷ್ ಮಾತನಾಡುತ್ತಿದ್ದರು. ’ಭಾರತೀಪುರ’ದ, ಉದ್ದುದ್ದದ ಇಂಗ್ಲೀಷ್ ಸಂಭಾಷಣೆಗಳ ಪುರಾಣಿಕರು ಜಯಪಾಲ್ ರೆಡ್ಡಿಯಂತೆ ಕಾಣಿಸಲಾರಂಭಿಸಿದ್ದರು. ಅವರ ಮಾತುಗಳೇಕೋ ಬೋರ್ ಎನಿಸತೊಡಗಿತ್ತು. ಜಗನ್ನಾಥ ಸ್ವಲ್ಪ ’ಅರ್ಜೆಂಟ್’ಆಸಾಮಿಯಂತೆ ಕಾಣಬರಲಾಂಭಿಸಿದ. ಕಾದಂಬರಿಯಲ್ಲಿ ಪದೆಪದೇ ಬರುವ ‘ಕ್ರಿಯೆ’ , ನಮಗರಿವಿಲ್ಲದೆಯೇ ಕುಚೊದ್ಯದ ವಸ್ತುವಾಗತೊಡಗಿತು. ‘ಭಾರತೀಪುರ’ದಂತಹ ಕಾದಂಬರಿ ಓದಲು ಬೇಕಾದ ಮನಃಸಿದ್ಧತೆಯಾಗಲಿ, ಮನಃಸ್ಥಿತಿಯಾಗಲಿ, seriousness ಆಗಲೀ ಇಲ್ಲ ಎಂಬುದು ಬಹಳಬೇಗ ಅರಿವಿಗೆ ಬಂತು. ’ಮೈಸೋಪ’ (ಮೈಸೂರು ಸೋಷಿಯಲಿಸ್ಟ್ ಪಕ್ಷ)ದ ನೀಲಕಂಠಸ್ವಾಮಿಯ ಆಗಮನವಾಗುವವರೆಗೂ ಹಾಗೂ-ಹೀಗೂ ಓದಿ ’ಇನ್ನ್ಯವಾಗದರೂ ನೋಡೋಣ’ ಎಂದು ಅಲ್ಲಿಗೇ ನಿಲ್ಲಿಸಿಬಿಟ್ಟೆ. ಅನಂತಮೂರ್ತಿ ತರದವರನ್ನು ಅರ್ಥಮಾಡಿಕೊಳ್ಳಲು ಒಂದು ಹಂತದ ’ಮೂಲ-ಓದಿ’ನ ಅವಶ್ಯಕತೆ ಇದೆ ಅನಿಸಿತ್ತು.

‘ಲಂಕೇಶ್ ಪತ್ರಿಕೆ’ ಪ್ರವರ್ಧಮಾನಕ್ಕೆ ಬರುತ್ತಿದ್ದ ಕಾಲ. ಉಳಿದೆಲ್ಲವರ ಬರಹಗಳಿಗಿಂತ ಲಂಕೇಶರ ’ಟೀಕೆ-ಟಿಪ್ಪಣಿ’ ಬಹಳ ಇಷ್ಟವಾಗುತ್ತಿತ್ತು. ತಮ್ಮ ಈ ಅಂಕಣದಿಂದ ಲಂಕೇಶ್ ಅನಿವರ್ಚನೀಯವಾದ ಎಚ್ಚರವೊಂದನ್ನು ರೂಪಿಸುತ್ತಿದ್ದರಲ್ಲದೇ , ’ಓದು’ ಎಂಬ ‘ಕ್ರಿಯೆ’ಯನ್ನು ಪ್ರೀತಿಸುವುದನ್ನು ಕಲಿಸಿದರು. ’ಓದ’ನ್ನು serious ಆಗಿ ತೆಗೆದುಕೊಳ್ಳಲಾರಂಭಿಸಿದ ದಿನಗಳವು. ನಂತರವೆಂದೋ ಓದಿದಾಗ ’ಭಾರತೀಪುರ’ ಹೆಚ್ಚು ಅರ್ಥವಾಗತೊಡಗಿತು. ಜಗನ್ನಾಥ ಹೆಚ್ಚು ಅರ್ಥವಾಗತೊಡಗಿದ.

ಅಂದಿನಿಂದ ’ಭಾರತೀಪುರ’ದ ಜಗನ್ನಾಥ ಹಾಗೂ ಇಂದಿನ ಅನಂತಮೂರ್ತಿಯವರ ದ್ವಂದ್ವ/ಅಸಹಾಯಕತೆಗಳಿಗೂ ಬಹಳ ಸಾಮ್ಯಗಳು ಕಂಡುಬರುತ್ತದೆ. ಕಾದಂಬರಿಯ ’ಶುದ್ಧ ಕ್ರಿಯೆ’ಯಲ್ಲಿ ಬರುವ ಪ್ರಸಂಗ ಇದಕ್ಕೊಂದು ಪ್ರಬಲ ಸಾಕ್ಷಿ. ಅಡಿಗರು ’ಜಗನ್ನಾಥ..ನೀನೊಬ್ಬ ಗುಪ್ತ ಭಕ್ತ’ ಎಂದಾಗ ಅವರೊಬ್ಬ ’ಭೋಳೆ ಮನುಷ್ಯ’ರೆಂದು ಹಾಸ್ಯ ಮಾಡಿಕೊಳ್ಳುವ ಜಗನ್ನಾಥನ ’ಅವಸ್ಥೆ’ಯನ್ನು ಮೂರ್ತಿ ಶುದ್ಧ ಕ್ರಿಯೆಯ ಪ್ರಸಂಗದಲ್ಲಿ ವಿವರಿಸುವ ಬಗೆ ನೋಡಿ:
“(ಸಾಲಿಗ್ರಾಮದ) ಸಂಪುಟದ ಮುಚ್ಚಳ ತೆಗೆಯುವಾಗ ಜಗನ್ನಾಥನಿಗೆ ತನ್ನ ಕ್ರಿಯೆ ಎಷ್ಟು ಆಭಾಸವಾಯಿತೆಂದರೆ ’ಈಗ ಶಂಖ-ಜಾಗಟೆಗಳು ಮೊಳಗಿದರೆ ಸರಿಯಾದ ವ್ಯಾಖ್ಯಾನವಾಗುತ್ತೆ ಎಂದುಕೊಂಡ”

ತನ್ನ ಮನೆಯಲ್ಲಿ ದಿನವೂ ಶಂಖ-ಜಾಗಟೆಗಳು ಮೊಳಗುವ ’ದೈವಿಕ’ಎಂದು ಕರೆಸಿಕೊಳ್ಳಬಹುದಾದ ಕ್ರಿಯೆಯ hang-over ನಿಂದ ಜಗನ್ನಾಥ ಹೊರಬರಲಾಗಿಲ್ಲ. ಅಡಿಗರು ಹೇಳಿದಂತೆ ’ಗುಪ್ತ’ಭಕ್ತಿಯೆಲ್ಲೋ ಜಗನ್ನಾಥನನ್ನು ಆವರಿಸಿದೆ. ’ನಮ್ಮ ಯುವಕರು ಹೊರಗೆ ಕ್ರಾಂತಿಕಾರಿಗಳಂತೆ ಕಂಡರೂ, ಒಳಗೆ ಸನಾತನಿಗಳಿದ್ದಾರೆ’ ಎಂದು ಮೂರ್ತಿ ಒಮ್ಮೆ ಹೇಳಿದ ನೆನಪು. ತೀವ್ರ ಭಾವುಕ ಸ್ಥಿತಿಯಲ್ಲಿ ’ದೇಶ’ಬಿಡುವ ಮಾತನಾಡಿದ್ದ ಮೂರ್ತಿಯವರನ್ನು ನೆನೆಸಿಕೊಂಡಾಗ ಸಾಲಿಗ್ರಾಮವನ್ನು ಹಿಡಿದು ’ಮುಟ್ಟಿ..ಮುಟ್ಟೀ..’ ಎಂದು trans ಗೆ ಒಳಗಾದವನಂತೆ ಕಿರುಚಿಕೊಳ್ಳುವ ಜಗನ್ನಾಥ ಅಪ್ರಯತ್ನಪೂರ್ವಕವಾಗಿ ಕಣ್ಣ ಮುಂದೆ ಬರುತ್ತಾನೆ. ’ಭಾರತೀಪುರ’ದ ಜಗನ್ನಾಥನಿಗೆ ’ಮಂಜುನಾಥ’ ವಿರೋಧಿ.

’ಜಾತಿಗಳಿರಲಿ..ಆದರೆ ಜಾತೀಯತೆ ಬೇಡ’ ಎಂಬ ಅನಂತಮೂರ್ತಿಯವರ ’ಜಗನ್ನಾಥ ಪ್ರೇರಿತ’ ಧೋರಣೆಗೆ ಅವರು ನೀಡುವ ಕಾರಣ: ಜಾತಿಗಳಲ್ಲಿ ಹಾಸುಹೊಕ್ಕಾಗಿರುವ ವಿಭಿನ್ನ ಸಂಸ್ಕೃತಿಗಳಿಗಾಗಿ, ಆಚಾರ-ವಿಚಾರಗಳಿಗಾಗಿ, ವೈವಿಧ್ಯತೆಗಳಿಗಾಗಿ ಜಾತಿಗಳು ಬೇಕು. ಆದರೆ ಜಾತೀಯತೆ ಒಂದು ಪಿಡುಗು. ಇದು ಅವರ ಸ್ಪಷ್ಟ ನಿಲುವು.

ಹಲವು ಕೋನಗಳಿಂದ ನೋಡಿದಾಗ ಜಗನ್ನಾಥನಲ್ಲಿ ಅನಂತಮೂರ್ತಿ ತಮ್ಮನ್ನೇ ಪ್ರತಿಷ್ಟಾಪಿಸಿಕೊಂಡಂತಿದೆ. ’ಸಂಸ್ಕಾರ’ದಷ್ಟು ಮಹತ್ವ ’ಭಾರತೀಪುರ’ಕ್ಕಿಲ್ಲ. ಆದರೂ ಅನಂತಮೂರ್ತಿಯವರ ’ಸ್ವಗತ’ದಂತಿರುವ ’ಭಾರತೀಪುರ’ ಈ ಕಾರಣಕ್ಕಾಗಿಯೇ ನಮಗೆಲ್ಲಾ ಇಷ್ಟವಾಗಿತ್ತು. ಪುರಾಣಿಕರು ಜಗನ್ನಾಥನಿಗೆ ಉಪದೇಶಿಸುವ “Manjunatha represents intellectual and religious aspect of indian thinking” ಎಂಬ ವಾಕ್ಯವಿದೆ. ಆದರೆ ಜಗನ್ನಾಥನಿಗೆ ಮಂಜುನಾಥನ ಬಗ್ಗೆಯಾಗಲಿ, ಭೂತರಾಯನ ಬಗ್ಗೆಯಾಗಲಿ ಈ soft-corner ಇರುವಂತೆ ಕಾಣುವುದಿಲ್ಲ. ಪುರಾಣಿಕರಿಗೆ ಮಂಜುನಾಥ ಒಂದು ಅವ್ಯಕ್ತ ಶಕ್ತಿ…ಜಗನಾಥನಿಗೆ ಅವ ’ಅವ್ಯಕ್ತ ವೈರಿ’.  ಹಾಗೆಂದು ಮಂಜುನಾಥನ ಬಗ್ಗೆ ಅಗೌರವವಾಗಿ, ಕನಿಷ್ಟವಾಗಿ ಜಗನ್ನಾಥ ಎಲ್ಲೂ ಮಾತನಾಡುವುದಿಲ್ಲ.

ಜಗನ್ನಾಥನ ’ಶುದ್ಧ ಕ್ರಿಯೆ’ಯನ್ನು ತಮ್ಮ ರಾಜಕೀಯ ತೆವಲುಗಳಿಗಾಗಿ ರಂಗರಾವ್, ನೀಲಕಂಠಸ್ವಾಮಿ ದುರ್ಬಳಕೆ ಮಾಡಿಕೊಳ್ಳುತ್ತಾರೆ. ’ಪಬ್ಲಿಕ್ ಅಡ್ಮಿನಿಸ್ಟ್ರೇಷನ್’ ಬಗ್ಗೆ ಪುಸ್ತಕ ಬರೆದು ಮಹಾರಾಜರಿಂದ ಮುನ್ನುಡಿ ಬರೆಯಿಸಿ ಅದನ್ನು ಟೆಕ್ಸ್ಟ್ ಬುಕ್ ಮಾಡಿ ಕಾಸುಮಾಡಿಕೊಳ್ಳುವ ಹುನ್ನಾರದ ’ಸೋಷಿಯಲಿಸ್ಟ್’ ನೀಲಕಂಠಸ್ವಾಮಿಯ ಕ್ಷುಲ್ಲಕ ವರ್ತನೆಯನ್ನು ಜಗನ್ನಾಥ ಖಂಡಿಸುತ್ತಾನೆ. ಆದರೆ ವಾಸ್ತವದಲ್ಲಿ ಅನಂತಮೂರ್ತಿ ಇಲ್ಲಿ ಸೋತರು.,ತಾವು ಮೆಚ್ಚುತ್ತಿದ್ದ ಕಾಂಗ್ರೆಸ್/ದಳಗಳ ಪಕ್ಷದ ಕೆಲವೊಂದು ನಾಯಕರ ವರ್ತನೆಯನ್ನು ಅವರು ಖಂಡಿಸಲಿಲ್ಲ. ಮೋದಿ ’ಪ್ರಬುದ್ಧ ನಾಯಕ’ನಲ್ಲ ಎನ್ನುತ್ತಿದ್ದ ಅನಂತಮೂರ್ತಿ, ತಾವು ಮೆಚ್ಚಿದ್ದ ‘ದಳ’ದಲ್ಲಿ, ಕಾಂಗ್ರೆಸ್ ನಲ್ಲಿ ಎಷ್ಟು ಮಾತ್ರ ಪ್ರಬುದ್ಧರು ಅಥವಾ ಪ್ರಬುದ್ಧತೆ ಉಳಿದಿದೆ ಎಂಬುದನ್ನು ಮರೆತುಬಿಟ್ಟಿದ್ದರು. ಷರೀಫ್ ತರದ ನಿಯತ್ತಿನ ಅನುಭವಿ ರಾಜಕಾರಣಿಗೆ ಟಿಕೆಟ್ ಸಿಗದಾದಾಗ ಅನಂತಮೂರ್ತಿ ಜಾಣಕುರುಡರಾದರು. ತನ್ನ ಕ್ಷೇತ್ರವನ್ನು ಚೆನ್ನಾಗಿ ಬಲ್ಲ, ಗೆಲುವಿನ ಸಾಧ್ಯತೆಗಳಿದ್ದ ಅಪಾರ ಅನುಭವದ ವ್ಯಕ್ತಿ ಅಪಮಾನಕ್ಕೊಳಗಾದಾಗ, ಅನಂತಮೂರ್ತಿ ’ಮೌನಿ’ಯಾಗಿಬಿಟ್ಟದ್ದು ಅಚ್ಚರಿ. ಅವರ ಆತ್ಮಕಥೆ ’ಸುರಗಿ’ಯಲ್ಲಿ ತುರ್ತುಪರಿಸ್ಥಿತಿಯ ಬಗೆಗಿನ ಅಧ್ಯಾಯ ಕೊನೆಗೆ ಸಾಲ್ ಬೆಲ್ಲೋ, ಬಸವಲಿಂಗಪ್ಪರಲ್ಲಿ ಕಳೆದುಹೋಗುತ್ತದೆ. ಇಲ್ಲಿ ಅನಂತಮೂರ್ತಿಯವರಿಗೆ ತುರ್ತುಪರಿಸ್ಥಿತಿ, ವಿಹ್ವಲತೆಯನ್ನು, ಭಯವನ್ನು ತಂದ ಕೆಟ್ಟ ಘಳಿಗೆಯಾಗಿ ಮಾತ್ರ ಕಂಡಿದೆ.. ಸ್ವಾಭಿಮಾನಕ್ಕೂ, ಪ್ರಜಾತಂತ್ರಕ್ಕೂ ಪೆಟ್ಟು ಕೊಟ್ಟ ಇಂದಿರಾರ ಠೇಂಕಾರವನ್ನು ಅನಂತಮೂರ್ತಿ ಮರೆಮಾಚಿದ್ದಾರೆ.

ಫೋಟೋ ಕೃಪೆ : ಅಂತರ್ಜಾಲ

ಹತ್ತುಹಲವು ಆಭಾಸಕಾರಿ-ಅಪಮಾನಕಾರಿ ಪ್ರಸಂಗಗಳನ್ನು ಅನಂತಮೂರ್ತಿ ಸಹಿಸಿಕೊಂಡರು. “ಬಸವಶ್ರೀ ಪ್ರಶಸ್ತಿಗೆ ಅನಂತಮೂರ್ತಿ ಅರ್ಹನೋ ಅಥವಾ ಅನರ್ಹನೋ ಎಂಬುದಲ್ಲ..ಆತ ಆ ಪ್ರಶಸ್ತಿಗೆ ಅಯೋಗ್ಯ” ಎಂದು ಚಂಪಾ ಚೀರಿದ್ದರು. ಜ್ಞಾನಪೀಠ ಪಡೆದವರಲ್ಲಿ ಆರನೆಯವರಾದ ಅನಂತಮೂರ್ತಿ, ಚಂಪಾರ ದೃಷ್ಟಿಯಲ್ಲಿ ’ಆರನೇ ದರ್ಜೆ’ ಸಾಹಿತಿ. ಹಂಸರಾಜ್ ಭಾರದ್ವಾಜ್ ಎಂಬ ರಾಜ್ಯಪಾಲರಾಗಿದ್ದ ವ್ಯಕ್ತಿ, ’ಯಾರ್ರೀ ಅನಂತಮೂರ್ತಿ??..’ಅವರೊಬ್ಬ ರೋಗಿ..ಡಯಾಲಿಸಿಸ್ ಗೆ ಒಳಗಾಗುತ್ತಿರುವ ವ್ಯಕ್ತಿಗೆ ನಾನೇಕೆ ಉತ್ತರಿಸಲಿ’ ಎಂಬ ಠೇಂಕಾರದ, ಪ್ರತಿಕ್ರಿಯೆ ನೀಡಿದ್ದರು. ಆರೋಗ್ಯವಿಲ್ಲದಿದ್ದರೂ ಸಮಿತಿಯೊಂದರ ಅಧ್ಯಕ್ಷತೆ ವಹಿಸಿ ಕಾರ್ಯ ನಿರ್ವಹಿಸಿದ ಅನಂತಮೂರ್ತಿಯವರಿಗೆ ಕನಿಷ್ಟ ಕೃತಜ್ಞತೆಯನ್ನೂ ತೋರದೇ, ರಾಜ್ಯಪಾಲನಾದ ವ್ಯಕ್ತಿ ಅನಾಗರಿಕರಂತೆ ವರ್ತಿಸಿದ್ದು ತೀವ್ರ ಖಂಡನೀಯ. ಅವರ ಖಾಯಿಲೆ ಬಗ್ಗೆ ಮಾತನಾಡುವ ಅಗತ್ಯವಿರಲಿಲ್ಲ. ಸೌಜನ್ಯದಿಂದ ವರ್ತಿಸುವುದನ್ನು ರಾಜ್ಯಪಾಲನಾದ ವ್ಯಕ್ತಿಗೆ ಯಾರೂ ಹೇಳಿಕೊಡುವ ಅಗತ್ಯ ಬರಬಾರದು. ಅನಂತಮೂರ್ತಿಯವರು ಇಂತಹದನ್ನೆಲ್ಲ ಮುಜುಗರ ಎಂಬು ಭಾವಿಸಲೇ ಇಲ್ಲ. ತಣ್ಣಗೆ ಎದುರಿಸಿದರು.

ಅನಂತಮೂರ್ತಿಯವರನ್ನು ಪ್ರತ್ಯಕ್ಷವಾಗಿ ಕಂಡಿದ್ದು ಒಂದೇ ಬಾರಿ. ’ಮೌನಿ’ ಚಿತ್ರದ ಷೋ ’ಬಾದಾಮಿ ಹೌಸ್’ ನಲ್ಲಿ ಏರ್ಪಾಡಾಗಿತ್ತು. ಗೆಳೆಯ ಲಿಂಗದೇವರು ವಿಶ್ವಾಸದಿಂದ ಕರೆದಿದ್ದರು. ಅನಂತಮೂರ್ತಿ ಆಗಮಿಸಿದ್ದರು. ಅವರ ಬಳಿ ಹೋಗಿ ’ನಮಸ್ಕಾರ ಸರ್’ ಎಂದೆ. ಕೈಕುಲುಕುತ್ತಾ ’ಅನಂತಮೂರ್ತಿ’ ಎಂದು ’ಪರಿಚಯ’ ಮಾಡಿಕೊಂಡ ಅವರು ಸೌಜನ್ಯದ ಮೂರ್ತಿಯಾಗಿಯೇ ಕಂಡರು. ವೃದ್ಧ ಜಗನ್ನಾಥನೇ ಅಲ್ಲಿ ಕಂಡಂತಾಯಿತು. ಅನಂತಮೂರ್ತಿಯವರೊಂದಿಗೆ ಗಿರೀಶ್ ಕಾಸರವಳ್ಳಿ ಕೂಡಾ ಇದ್ದರು. ಚಿತ್ರ ನೋಡಿದ ನಂತರ ಮಾತನಾಡಿಸುವ ಇಚ್ಚೆ ಇತ್ತು. ಕುಪ್ಪಣ್ಣ ಭಟ್ಟನ ಪಾತ್ರದ ಬಗ್ಗೆ ಹಲವು ಗೊಂದಲಗಳಿದ್ದವು. ’ಸಾರ್..ಮೂಲಕಥೆಯ ಬಗ್ಗೆ ಒಂದೆರೆಡು ಪ್ರಶ್ನೆಗಳಿವೆ.’ಎಂದೆ. ಅನಂತಮೂರ್ತಿ ದಣಿದಿದ್ದರು. ’ಸಾರಿ ಕಣಪ್ಪಾ…ಇವಾಗ ಹೋಗಬೇಕು..ಮತ್ತೆ ಸಿಗೋಣವಂತೆ’ ಎಂದು ಊರುಗೋಲಿನ ಸಹಾಯದಿಂದ ನಡೆಯುತ್ತಿದ್ದ ಅನಂತಮೂರ್ತಿ, ಹೊರಟುಬಿಟ್ಟರು.

ಅನಂತಮೂರ್ತಿಯವ ಅಂತಿಮ ’ಸಂಸ್ಕಾರ’ ವೂ ವಿವಾದಕ್ಕೆ ಕಾರಣವಾಗಿದ್ದು ದುರದೃಷ್ಟಕರ. ಅಂತಿಮ ಸಂಸ್ಕಾರ ಹೇಗಿರಬೇಕೆನ್ನುವುದು ಅವರ ಕುಟುಂಬದವರ ವಿವೇಚನೆಗೆ ಬಿಟ್ಟ ವಿಚಾರವಾಗಬೇಕಿತ್ತು. ’ಮೂರ್ತಿ ಭಂಜಕ’ರು ಕೊನೆಯ ಅವಕಾಶವನ್ನು ಚೆನ್ನಾಗಿಯೇ ’ಉಪಯೋಗಿ’ಸಿಕೊಂಡರು. ವೈಚಾರಿಕನೇಕರ ಅಂತ್ಯ ಈ ರೀತಿಯ ದ್ವಂದ್ವದಲ್ಲಿ ನಡೆದಿದೆ. ಆನಂದರಾವ್ ವೃತ್ತದಲ್ಲಿದ್ದ ಗಣೇಶನ ಮೂರ್ತಿಯನ್ನು ಒದ್ದುಕೆಡವಿ ತಮ್ಮಲ್ಲಿದ್ದ ’ಪೆರಿಯಾರ್’ ರನ್ನು ಅನಾವರಣಗೊಳಿಸಿದ್ದ ಪ್ರೊಫೆಸರ್ ಎಮ್.ಡಿ.ಏನ್ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾಗ, ಅವರ ಕೊರಳಲ್ಲಿ ಸರಗಳು, ರೂಮಿನಲ್ಲಿ ಶಿರಡಿ ಸಾಯಿಬಾಬಾರ ಮಂತ್ರವಿದ್ದ ಕ್ಯಾಸೆಟ್ಗಳು, ರೂಮಿನೆಲ್ಲಡೇ ದೇವರ ಪಟಗಳು..ಆವರಿಸಿದ್ದವು. ಎಮ್.ಡಿ.ಏನ್. ಅಸಹಾಯಕರಾಗಿದ್ದರು. ’ನಂಜುಂಡ ಶಾಸ್ತ್ರಿ’ ಯೆಂದು ಹೆಸರು ಬದಲಾಯಿಸಿಕೊಳ್ಳುತ್ತೇನೆ’ ಎಂಬ ’ತಮಾಶೆ’ಯನ್ನೂ ಮಾಡಿದ್ದರಂತೆ. ಲಂಕೇಶರ ಅಂತ್ಯಸಂಸ್ಕಾರದ ಸಂದರ್ಭದಲ್ಲಿ ಶವದ ಹಣೆಗೆ ವಿಭೂತಿ ಬಳೆಯಲು ಬಂದ ’ಅಯ್ಯ’ರನ್ನು ಗೌರಿ ಗದರಿಸಿ ತಡೆದದ್ದರಿಂದ, ಲಂಕೇಶರಿಗೆ ಈ ಕಳಂಕಗಳ್ಯಾವುವೂ ತಟ್ಟಲಿಲ್ಲ.

ಯಾವುದೇ ದ್ವೇಷ-ಕಲ್ಮಶಗಳನ್ನು ಮನಸ್ಸಿನಲಿಟ್ಟುಕೊಳ್ಳದ, ಅನಂತಮೂರ್ತಿ, ತಮ್ಮೆಲ್ಲಾ ಸ್ವಭಾವಗಳ ನಡುವೆಯೂ ಪ್ರೀತಿಸಬಲ್ಲ, ಒಡನಾಡಬಲ್ಲ ವ್ಯಕ್ತಿಯಾಗಿದ್ದರು. ’ಪಬ್ಲಿಕ್’ನ ರಂಗನಾಥ್, ’ಅಕಸ್ಮಾತಾಗಿ ನೀವು ಮೋದಿಯನ್ನು ಎದುರುಗೊಂಡರೆ ಏನ್ಮಾಡ್ತೀರಿ’ ಎಂದಾಗ, ’ನಮಸ್ಕಾರ ಅಂತೇನೆ’ ಎಂದು ಬಹಳ ಸಹಜವಾಗಿ, ಯಾವುದೇ ಆವೇಶಕ್ಕೆ ಒಳಗಾಗದೇ ಹೇಳಿದ್ದರು.

“ಪ್ರಾಣೇಶಾಚಾರ್ಯರನ್ನು ಸೋಲಿಸಿದ್ದ ನಾರಣಪ್ಪನನ್ನು ಅನಂತಮೂರ್ತಿ ಹಲವು ಬಾರಿ ಸೋಲಿಸಿದ್ದರು” ಎಂದು ನಮ್ಮ ಮೇಷ್ಟ್ರೊಬ್ಬರು ಕುಚೋದ್ಯಮಾಡುತ್ತಿದ್ದರು.  ಅದೇನೇ ಇರಲಿ. ರೈತರ ಆತ್ಮಹತ್ಯೆ ನಿತ್ಯಸುದ್ದಿಯಾಗುತ್ತಿರುವ, ಮಲೆಕುಡಿಯರ ಮೇಲೆ ದೌರ್ಜನ್ಯಗಳಾಗುತ್ತಿರುವ, ಬೆಂಗಳೂರನ್ನು ಐದುಭಾಗ ಮಾಡಬೇಕೆನ್ನುವ….ಜಗನ್ನಾಥ, ಮಂಜುನಾಥನನ್ನು ತೀವ್ರವಾಗಿ ವಿರೋಧಿಸಿದಂತೆ, ತಾವು ವಿರೋಧಿಸುವ ಮೋದಿ ತಮಗಿಂತ ಹೆಚ್ಚು ಬಾರಿ ವಿದೇಶಗಳಿಗೆ ಹೋಗಿಬರುತ್ತಿರುವ…..ಇಂದಿನ ಸಂದರ್ಭದಲ್ಲಿ ಅನಂತಮೂರ್ತಿ ಇಲ್ಲದ್ದು ಒಂದು ಶೂನ್ಯವನ್ನು ಸೃಷ್ಟಿಸಿದೆ.

ಇದೊಂದು ತುಂಬಲಾಗದ ಶೂನ್ಯ.


  • ರಾಘವನ್ ಚಕ್ರವರ್ತಿ

5 1 vote
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW