‘ಉಡುಗೊರೆ’ ಸಣ್ಣಕತೆ : ಶ್ವೇತಾ ಅನವಟ್ಟಿ

ರಮೇಶ ಮತ್ತು ರೇಣುಕಾ ಪ್ರೀತಿಸಿ ಮದುವೆಯಾಗಿದ್ದರು. ಅವರ ನೆಮ್ಮದಿ ಬದುಕಿನಲ್ಲಿ ಮೈಸೂರು ರೇಷ್ಮೆ ಸೀರೆ ಕಿಡಿ ಹಚ್ಚಿತು. ಸೀರೆಯಿಂದ ಅವರ ಮಧ್ಯೆ ಏನು ನಡೀತು ಶ್ವೇತಾ ಅನವಟ್ಟಿ ಅವರ ಸಣ್ಣಕತೆಯನ್ನು ತಪ್ಪದೆ ಓದಿ…

ಸರ್ಕಾರಿ ಆಸ್ಪತ್ರೆಲಿ ಇದ್ದ ಪುಟ್ಟ ಗಣಪನನ್ನು ಕಣ್ ಮುಚ್ಚಿ, ಹೆಂಡತಿ ರೇಣುಕಾಳ ಜೀವಕ್ಕೆ ಕುತ್ತು ಬಾರದಿರಲಿ ಎಂದು ರಮೇಶ ಪ್ರಾರ್ಥಿಸುತ್ತಿದ್ದ. ರಮೇಶನ ಅರಿವಿಗೆ ಬಾರದೆ ಕಣ್ಣೀರು ಧಾರಾಳವಾಗಿ ಕಪಾಳಕ್ಕೆ ಬಂದಿದ್ದವು. “ಅವಳ ಮಾತಿನಂತೆ ಆಗಿಬಿಟ್ರೆ..?” ಅಯ್ಯೋ ದೇವ ಬೇಡ ಎಂದು ಥಟ್ಟನೇ ಕಣ್ ಬಿಟ್ಟ. ಎದೆಯಲ್ಲಿ ದುಃಖ ಮಡುಗಟ್ಟಿತ್ತು.

ಪ್ರೀತಿಸಿ ಮದುವೆಯಾದ ಅನಾಥ ಜೋಡಿ ಇಬ್ಬರದು. ರಮೇಶ ಬೇರೆಯವರ ಟೈಲರಿಂಗ್ ಶಾಪಗೆ ಹೊಲಿಯಲು ಹೋಗಿತ್ತಿದ್ದ. ರೇಣುಕಾ ಗಂಡನಿಗೆ ಆಸರೆಯಾಗಬೇಕೆಂದು ಉಪ್ಪಿನಕಾಯಿ, ಹಪ್ಪಳ, ಚಟ್ನಿಪುಡಿ ಮಾಡಿ ಮಾರುತ್ತಿದ್ದಳು. ಬಡತನದ ಬದುಕು. ಆದರೆ ಕಷ್ಟಪಟ್ಟು ದುಡಿದು ಮುಂದೆ ಬರಬೇಕು ಎಂಬ ಛಲ ಇಬ್ಬರಿಗೂ ಇತ್ತು. ರಮೇಶ್ ನಿಗೆ ಸ್ವಂತ ಬಟ್ಟೆ ಅಂಗಡಿ ತೆಗೆಯಬೇಕೆಂಬ ಹತ್ತು ಹಲವು ಕನಸು ಕಂಡಿದ್ದ. ಇತ್ತ ರೇಣುಕಾ ಮಾಡುವ ಉಪ್ಪಿನಕಾಯಿ, ಚಟ್ನಿ ಪುಡಿಯ ರುಚಿಯೂ ಸಣ್ಣದಾಗಿ ಹೆಸರು ಮಾಡಿತ್ತು. ಅವಳೇ ಮನೆ ಮನೆಗೆ ಹೋಗಿ ಕೊಟ್ಟು ಬರುತ್ತಿದ್ದಳು.

ಒಮ್ಮೆ ರೇಣುಕಾ ಮನೆಯ ಹತ್ತಿರ ಒಬ್ಬರ ಮನೆಗೆ ಉಪ್ಪಿನಕಾಯಿ ಹಾಗು ಹಪ್ಪಳವನ್ನು ಕೊಡಲು ಹೋದಳು. ಅವರ ಮನೆಯ ಒಡತಿ ಮೈಸೂರು ರೇಷ್ಮೆ ಸೀರೆ ಉಟ್ಟು ಎಲ್ಲೊ ಹೊರಗಡೆ ಹೋಗುವ ತರಾತುರಿಯಲ್ಲಿದ್ದರು. ತುಸು ಸೀಬೆ ಹಣ್ಣಿನ ಕಲರ್ಸೀರೆ, ಗಾಢ ಹಸಿರು ಬಣ್ಣದ ಅಂಚಿನ, ಬಂಗಾರ ಬಣ್ಣದ ಹೊಳೆಯುವ ಜರಿಯ ರೇಷ್ಮೆ ಸೀರೆ ತುಂಬಾ ಚಂದ ಅನಿಸಿತು. ಕುತೂಹಲದಿಂದ ಒಮ್ಮೆಲೇ “ಈ ಸೀರೆಯ ಬೆಲೆ ಎಷ್ಟು ಮೇಡಂ ” ಎಂದಳು ರೇಣುಕಾ.

‘ಯಾಕೆ ಚೆನ್ನಾಗಿದೆಯಾ??’

‘ಹೌದು ತುಂಬಾನೇ ಚೆನ್ನಾಗಿದೆ. ಕಲರ್ ಕಾಂಬಿನೇಶನ್ ಸಕತ್ ಆಗಿದೆ. ನಿಮಗೆ ತುಂಬಾ ಚೆನ್ನಾಗಿ ಕಾಣುತ್ತಿದೆ’ ಎಂದಳು.

‘ಹೌದಾ..? ಥ್ಯಾಂಕ್ಸ್ ರೇಣುಕಾ, ಈ ಸೀರೆಯ ಬೆಲೆ ಹದಿನೆಂಟು ಸಾವಿರ’ ಎಂದಳು ಒಡತಿ, ‘ಅಂದಹಾಗೆ ನೀನು ಮಾಡುವ ಚಟ್ನಿಪುಡಿ, ಉಪ್ಪಿನಕಾಯಿ ನಮಗೆಲ್ಲ ತುಂಬಾ ಇಷ್ಟ, ಮತ್ತೆ ಬೇಕಾದರೆ ಹೇಳುವೆವು’ ಎಂದು ಹೇಳಿ ದುಡ್ಡು ಕೊಟ್ಟುರು. ‘ಮತ್ತೆ ಯಾರಿಗಾದ್ರೂ ಬೇಕಾದ್ರೆ ತಿಳಿಸಿ’ ಎಂದು ಹೊರಟಳು ರೇಣುಕಾ.

ಆದರೆ ಮೈಸೂರು ರೇಷ್ಮೆಯ ಚೆಲುವು ಮಾತ್ರ ಮನಸಲ್ಲಿ ಮನೆ ಮಾಡಿತು. ತಾನೂ ಆ ಮೋಹಕ ಸೀರೆಯ ಒಡತಿಯಾಗಬೇಕೆಂದು ಬಯಸಿದಳು. ಇವಳಿಗೆ ಆ ಸೀರೆ ಇಷ್ಟವಾದಾಗಿನಿಂದ, ಕಾಕಾತಾಳಿಯವೆಂಬತೆ ಮೈಸೂರು ಸಿಲ್ಕ್ ಸೀರೆ ಉಟ್ಟವರೇ ಕಣ್ಣಿಗೆ ಕಾಣಿಸುತ್ತಿದ್ದರು. ಕನಸಲ್ಲೂ ಇವೇ ಸೀರೆಗಳು ಬಂದು ಕಚಗುಳಿ ಇಡುತ್ತಿದ್ದವು.

ದಿನೇ ದಿನೇ ಸೀರೆ ಕೊಳ್ಳೋ ಆಸೆ ಹೆಚ್ಚುತ್ತಾ ಹೋಯಿತು. ಆದರೆ ದುಬಾರಿ ಮೈಸೂರು ಸಿಲ್ಕ್ ಸೀರೆ ಕೊಳ್ಳುವುದು ಇವರಿಗೆ ಕಷ್ಟ ಸಾಧ್ಯ. ಒಂದು ದಿನ ಗಂಡನಿಗೆ ನುಲಿಯುತ್ತಾ ಮೈಸೂರು ಸಿಲ್ಕ್ ಸೀರೆಯ ಬಗ್ಗೆ ತನ್ನ ಒಲವನ್ನು ಹೇಳಿ ‘ಸೀರೆ ಕೊಡಿಸಿರಿ’ ಎಂದಳು. ‘ಅಯ್ಯೋ ಮೊದಲೇ ಸಾಲವಾಗಿದೆ ಅಂತಹುದರಲ್ಲಿ ಹೇಗೇ ಖರೀದಿಸುವುದು’ ಎಂದಾಗ ಊಟಕ್ಕೆ ಬಡಿಸುತ್ತಿದ್ದವಳು ಮೂಗು ಏರಿಸುತ್ತ ಕಣ್ಣೀರು ಹಾಕುತ್ತ ಎದ್ದು ಒಳ ನಡೆದಳು.

ಎರಡು ಮೂರು ದಿನದಿಂದ ಮೌನ ವೃತದಲ್ಲಿದ್ದಳು. ಕಡೆಗೋಮ್ಮೆ “ನಾನು ಸತ್ತಮೇಲೆ ತರೋದಾ ಹೇಗೇ?” ಎಂದಳು. ‘ಛೇ ಬಿಡ್ತು ಅನ್ನು, ಎಂಥ ಮಾತಾಡ್ತಿ?. ನಂಗೂ ಆಸೆ ಕಣೆ ಆ ಮೈಸೂರು ರೇಷ್ಮೆ ಸೀರೇಲಿ ನಿನ್ನ ಅಂದವಾದ ಮುಖ ನೋಡೋಕೆ’ ಎಂದು, ಅವಳ ಎರಡೂ ಭುಜದ ಮೇಲೆ ಕೈಯಿಟ್ಟ. ಆಗ, ತನ್ನ ಭುಜದ ಮೇಲಿನ ಕೈ ತೆಗೆಸಿ, ಅವನ ಎದೆಗೆ ಒರಗಿ.’ಇದನ್ನ ಆವತ್ತೇ ಹೇಳಿದ್ರೆ ಏನಾಗ್ತಿತ್ತು?. ಸುಮ್ನೆ ನಿಮ್ಮ ಮೇಲೆ ಬೇಜಾರು ಮಾಡ್ಕೊಂಡುಬಿಟ್ಟೆ ‘ಎಂದಳು.

ರೇಣುಕಾಳಿಗೆ ಹಾಗೆ ಹೇಳಿದರೂ, ರಮೇಶನಿಗೆ ಒಳಗಡೆ ಕಳವಳ ಇದ್ದೆ ಇತ್ತು. ಹೇಗೇ ದುಡ್ಡು ಹೊಂದಿಸೋದು. ಎಂಬಿತ್ಯಾದಿ ವಿಷಯಗಳು ತಲೆಯಲ್ಲಿದ್ದವು.

ಒಂದು ದಿನ ಹಪ್ಪಳ, ಸಂಡಿಗೆಯ ಡೆಲಿವರಿಗೆ ಒಬ್ಬರ ಮನೆಗೆ ಹೋದಾಗ, ರೇಣುಕಾಗೆ ಆಕ್ಸಿಡೆಂಟ್ ಆಗಿ ಗಂಭೀರ ಗಾಯವಾದಾಗ ರಮೇಶನಿಗೆ ಆಕಾಶವೇ ತಲೆ ಮೇಲೆ ಬಿದ್ದಹಾಗಾಯಿತು.

ವೈದ್ಯರು ಅವಳು ಬದುಕುಳಿಯುವ ಬಗ್ಗೆ ಅನುಮಾನ ವ್ಯಕ್ತಪಡಿಸಿದರು. ಅಡ್ಮಿಟ್ ಆಗಿ ಅದಾಗಲೇ ಎರಡು ದಿನ ಕಳೆದಿದ್ದವು. ಇನ್ನೂ ಪ್ರಜ್ಞೆ ಬಂದಿರಲಿಲ್ಲ. ಇವನಿಗೋ ಬರೀ ಕೆಟ್ಟ ಆಲೋಚನೆ ಸುತ್ತುವರಿದ್ದಿದ್ದವು. “ಅವಳು ಹೇಳಿದ ಹಾಗೆ ಮೈಸೂರು ರೇಷ್ಮೆ ಸೀರೆ ಅವಳು ಹೋದ ಮೇಲೆ” ಎಂದು ದುಃಖ ಉಮ್ಮಳಿಸಿ ಬಂತು.

ಅಷ್ಟರಲ್ಲಿ ಒಬ್ಬ ನರ್ಸ್ ಏದುಸಿರು ಬಿಡುತ್ತಾ… ಓಡೋಡಿ ಬಂದು “ಡಾಕ್ಟರ್ ನಿಮ್ಮನ್ನ ಕರೀತಿದ್ದಾರೆ” ಎಂದಾಗ ಇವನು ಗಾಬರಿಯಾಗಿ ನರ್ಸ್ ಹಿಂದೆ ಐಸಿಯುನ ಕಡೆ ಓಡಿದ. ನರ್ಸ್, ‘ಒಂದು ನಿಮಿಷ ಇಲ್ಲೇ ಇರಿ’ ಎಂದು ಒಳ ನಡೆದಳು. ಐಸಿಯು ಅಲ್ಲಿ ರೇಣುಕಾಳ ಮುಖ ಕಾಣಲಿಲ್ಲ, ಅಡ್ಡವಾಗಿ ಡಾಕ್ಟರ್ ನಿಂತಿದ್ದರು. ಇವನ ಎದೆ ಒಮ್ಮೆಲೇ ಜೋರಾಗಿ ಬಡೆದುಕೊಂಡಿತು. ಏರು ಧ್ವನಿಯಲ್ಲಿ ಅಳಲು ಶುರು ಮಾಡಿದ. ಅಲ್ಲಿದ್ದ ಜನ ಇವನನ್ನೆ ದಿಟ್ಟಿಸಿದರು.

ಆಗ ಡಾಕ್ಟರ್ ಹೊರಬಂದು “ರಮೇಶ್… ಸಮಾಧಾನ ಮಾಡಿಕೊಳ್ಳಿ. ನಿಮ್ಮ ಹೆಂಡತಿಗೆ ಪ್ರಜ್ಞೆ ಬಂದಿದೆ. She is out of danger” ಎಂದಾಗ ಹೋದ ಜೀವ ಬಂದಹಾಗಾಯಿತು. ಡಾಕ್ಟರ್ ಕೈ ಹಿಡಿದು ಧನ್ಯವಾದ ಹೇಳಿ ದೇವರಿಗೆ ಕೈ ಮುಗಿದ.

ಮನೆಗೆ ಬಂದ ಮೇಲೆ ದಿನದಿಂದ ದಿನಕ್ಕೆ ಅವಳ ಆರೋಗ್ಯ ಸುಧಾರಿಸಿತು. ಕೇವಲ ಒಂದು ತಿಂಗಳಿಗೆ ಮೊದಲಿನಂತಾದಳು. ಆವತ್ತು ರೇಣುಕಾಳ ಹುಟ್ಟುಹಬ್ಬ. ರಮೇಶ್ ಸರ್ಪ್ರೈಸ್ ಆಗಿ ಮೈಸೂರು ಸಿಲ್ಕ್ ಸೀರೆ ಜೊತೆ ಮೈಸೂರು ಮಲ್ಲಿಗೆ ತಂದು ಮುಡಿಸಿದ. ಅವಳ ಮುಖದಲ್ಲಿನ ಸಂತೋಷ ಕಂಡು ಸಾಲ ಮಾಡಿ ತಂದದ್ದಕ್ಕೂ ಸಾರ್ಥಕವೆನಿಸಿತು.


  •  ಶ್ವೇತಾ ಅನವಟ್ಟಿ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW