“ಮುಗ್ಧ ಪ್ರೀತಿಯ ಉಡುಗೊರೆ”

ನಮ್ಮನ್ನು ಇಷ್ಟಪಡಲಿ, ಹೊಗಳಲಿ ಅಂತ ತೋರಿಸುವ ಪ್ರೀತಿ ಶಾಶ್ವತವಾಗಿ ಅಥವಾ ಕೊನೆವರೆಗೂ ಖುಷಿಯನ್ನು ತಂದುಕೊಡುವುದಿಲ್ಲ. ನಮ್ಮನ್ನು ನಮ್ಮತನದ ಗುಣದಲ್ಲಿ ಮೆಚ್ಚಿಕೊಂಡರೆ ಮಾತ್ರ ಅದು ಶಾಶ್ವತವಾಗಿರುವ ಪ್ರೀತಿಯನ್ನು ತಂದುಕೊಡುತ್ತದೆ. ಅದೇ ಮನುಷ್ಯನಿಗೆ ಬೇಕಾದ ದೊಡ್ಡ ಉಡುಗೊರೆ  ಲೇಖಕಿ ಬಿ.ಆರ್.ಯಶಸ್ವಿನಿ ಅವರ ಭಾವನಾತ್ಮಕ ಬರಹವನ್ನು ತಪ್ಪದೆ ಮುಂದೆ ಓದಿ…

ನಾನು ಮೈತ್ರಿ ಶಿಕ್ಷಕಿಯಾಗಿರುವೆ. ಶಾಲೆಯಲ್ಲಿ ಮಕ್ಕಳಿಗೆ ಪಾಠಗಳನ್ನು ಕಲಿಸುವುದು ನನ್ನ ಜೀವನದ ಗುರಿ. ಶಿಕ್ಷಕರು ಕೇವಲ ಪಾಠ ಮಾತ್ರ ಹೇಳಿಕೊಡುವುದಲ್ಲ, ಮಕ್ಕಳ ಮನಸ್ಸು ಮತ್ತು ಮೌಲ್ಯಗಳನ್ನು ಬೆಳೆಸಲು ದಾರಿ ತೋರಿಸುವುದು ಮುಖ್ಯ ಕೂಡ. ಪ್ರತಿಯೊಬ್ಬ ವಿದ್ಯಾರ್ಥಿಗಳ ಪ್ರಗತಿ ನನ್ನ ಹೃದಯವನ್ನು ಸಂತೋಷದಿಂದ ತುಂಬಿಸುತ್ತದೆ, ಅವರ ಕನಸು ನನಸಾಗುವುದನ್ನು ನೋಡಲು ನನಗೆ ಸಂತೋಷ. ನಂಬಿಕೆ ಇಟ್ಟಿರುವೆ, ಪ್ರೀತಿ, ತಾಳ್ಮೆ ಮತ್ತು ಮಾರ್ಗದರ್ಶನದಿಂದ ಶಿಕ್ಷಕರು ಸಮಾಜದ ಬೆಳವಣಿಗೆಯನ್ನು ರೂಪಿಸುತ್ತಾರೆ.. ಇಂತಹ ಶ್ರೇಷ್ಠ ವೃತ್ತಿಯಲ್ಲಿರುವುದು ನನ್ನ ಪುಣ್ಯ. ಗುರಿಯ ಬೆನ್ನಟ್ಟಿ ಹೋಗಿದ್ಧ ನಾನು, ನನ್ನ ನೆನಪುಗಳ ಬುತ್ತಿಯನ್ನು ನಿಮ್ಮ ಮುಂದೆ ಬಿಚ್ಚಿಡುತ್ತಿದ್ದೇನೆ.

ತುಂಬಾ ವರ್ಷಗಳ ನಂತರ ನನ್ನ ಜೀವನದ ಅದ್ಭುತ ಘಳಿಗೆ ಇಂದು ಒದಗಿ ಬಂದಿದೆ. ಹೊಸತನದ ಹುರುಪಿನಿಂದ ನನ್ನ ಕುಟುಂಬ ಸೇರುವ ತವಕದಲ್ಲಿ ನಾನು ಕೆಲಸ ನಿರ್ವಹಿಸುತ್ತಿದ್ದ ಹಳ್ಳಿಯಿಂದ ನನ್ನ ಊರಿನ ಪಕ್ಕದ ಹಳ್ಳಿಯ ಪ್ರೌಢಶಾಲೆಗೆ ವರ್ಗಾವಣೆಯಾಗಿದ್ದರಿಂದ ಸಂತಸದಲ್ಲೇ ಊರಿನತ್ತ ಪಯಣ ಬೆಳಸಲು ಕಾತುರದಿಂದ ಬೆಳಗ್ಗೆಯಾಗುವುದನ್ನೆ ಕಾಯುತ್ತಿದ್ದೆ.

ಬೆಳಗ್ಗೆ ನಾನೆದ್ದು ಮನೆಯ ಬಾಗಿಲು ತೆಗೆಯುವಷ್ಟರಲ್ಲಿ ನನಗಾಗಿಯೇ ಒಂದು ಅದ್ಭುತ ಉಡುಗೊರೆ ಬಾಗಿಲ ಬಳಿ ಇತ್ತು.  ಆ ಅದ್ಭುತ ಉಡುಗೊರೆಯನ್ನು ನನ್ನ ಜೀವನದಲ್ಲಿ ಮರೆಯಲಾಗದ ಅತ್ಯಾದ್ಭುತ ಘಳಿಗೆ ಅದಾಗಿತ್ತು..

ನನ್ನ ಶಿಷ್ಯರುಗಳಾದ ಮುದ್ದು ಪುಟಾಣಿಗಳು ‘ನನ್ನನ್ನು ಹೋಗಬೇಡಿ ಮ್ಯಾಮ್.. ನೀವು ಇಲ್ಲಿಯೇ ಇರಬೇಕು, ನೀವು ಹೋದರೆ ತುಂಬಾ ಮಿಸ್ ಮಾಡಿಕೊಳ್ಳುತ್ತೇವೆ. ಹೋಗಬೇಡಿ’… ಎಂದು ಕಣ್ಣೀರು ಹಾಕುತ್ತಾ ಬಾಗಿಲ ಬಳಿ ಬಂದು ನಿಂತಿದ್ದರು. ಮುದ್ದು ಪುಟಾಣಿಗಳ ಮಾತುಗಳು ನನ್ನ ಮನಸ್ಸಿಗೆ ನಾಟಿ ಅವರ ಜೊತೆಗೆ ನನ್ನ ಕಣ್ಣುಗಳಲ್ಲೂ ಕಣ್ಣೀರು ಹೊರಹೊಮ್ಮುತ್ತಿತ್ತು.

ಒಂದು ಕಡೆ ಅವರ ಮಾತುಗಳಲ್ಲಿ ನನ್ನ ಮೇಲಿಟ್ಟಿದ್ದ ಪ್ರೀತಿ ಕಾಣಿಸುತ್ತಿದ್ದರೆ ಮತ್ತೊಂದು ಕಡೆ ಅವರಿಗಾಗುತ್ತಿದ್ದ ನೋವು, ಸಂಕಟ ನನಗೂ ನೋವು ತರಿಸಿತ್ತು. ಅಗೋ ಇಗೋ ಅವರಿಗೆಲ್ಲಾ ಸಮಾಧಾನ ಪಡಿಸಿ ಪ್ರೀತಿಯಿಂದ ಬಿಳ್ಕೊಡಲು ಕೇಳಿಕೊಂಡೆ.  ಅವರುಗಳ ಬಿಳ್ಕೊಡಲು ಒಪ್ಪಿಕೊಂಡು ಮತ್ತೊಮ್ಮೆ ನನ್ನನ್ನು ಅಪ್ಪಿಕೊಂಡು ಸಂತಸದಿಂದ ಬಿಳ್ಕೊಟ್ಟರು.
ಆ ಮುಗ್ಧತೆಯ ಪ್ರೀತಿಯನ್ನು ನಾನೆಂದು ಮರೆಯಲು ಸಾಧ್ಯವಿಲ್ಲ. ಅವರುಗಳ ಈ ಮುಗ್ಧತೆಯ ಪ್ರೀತಿಯೇ ನನಗೆ ಸಿಕ್ಕ ಅದ್ಭುತ ಉಡುಗೊರೆಗಳಲ್ಲಿ ಇದು ಒಂದು ಸವಿನೆನಪು.

ಯಾರೋ ನಮ್ಮನ್ನು ಇಷ್ಟಪಡಲಿ, ಹೊಗಳಲಿ ಅಂತ ತೋರಿಸುವ ಪ್ರೀತಿ ಶಾಶ್ವತವಾಗಿ ಅಥವಾ ಕೊನೆವರೆಗೂ ಖುಷಿಯನ್ನು ತಂದುಕೊಡುವುದಿಲ್ಲ. ನಮ್ಮನ್ನು ನಮ್ಮತನದ ಗುಣದಲ್ಲಿ ಮೆಚ್ಚಿಕೊಂಡರೆ ಮಾತ್ರ ಅದು ಶಾಶ್ವತವಾಗಿರುವ ಪ್ರೀತಿಯನ್ನು ತಂದುಕೊಡುತ್ತದೆ.

ಇದೇ ಸವಿ ನೆನಪಿನಲ್ಲಿ ನನ್ನ ಊರಿಗೆ ತಲುಪಿದೆ. ಮನೆಯಲ್ಲಿ ನನಗಾಗಿ ಅಪ್ಪ ಅಮ್ಮ, ಅಜ್ಜಿ ತಾತ, ಅಣ್ಣ ಕಾಯುತ್ತಿದ್ದರು. ತುಂಬಾ ದಿನಗಳ ಬಳಿಕ ಮನೆಗೆ ಬಂದಿದ್ದರಿಂದ ಮನೆಯು ಹಬ್ಬದ ವಾತಾವರಣದಂತೆ ಕಂಗೊಳಿಸುವುದರ ಜೊತೆಗೆ ಅಮ್ಮ ಅಜ್ಜಿ ಹಬ್ಬದ ಅಡುಗೆ ಮಾಡಿದ್ದರು.. ಇದನ್ನೆಲ್ಲಾ ನೋಡಿದಾಗ ನನಗೆ ಗೊತ್ತಿಲ್ಲದೆ ಮನಸಿನೊಳಗೆ ನನ್ನನ್ನು ಮನೆಯವರೆಲ್ಲ ಎಷ್ಟು ಮಿಸ್ ಮಾಡಿಕೊಂಡಿದ್ದಾರೆ ಎನ್ನುವುದು ನನಗರ್ಥವಾಯಿತು. ಅಲ್ಲಿ ಮಕ್ಕಳು, ಇಲ್ಲಿ ಮನೆಯವರು. ಮಿಸ್ ಮಾಡಿಕೊಂಡವರಿಗಷ್ಟೆ ಈ ನೋವು, ಸಂಕಟ ಅರ್ಥವಾಗುವುದು.

ಜೀವನದಲ್ಲಿ ಇಂತಹ ಪ್ರೀತಿ ಗಳಿಸಬೇಕೆಂದರೆ ತುಂಬಾ ಪುಣ್ಯ ಮಾಡಿರಬೇಕು. ಪುಣ್ಯ ಮಾಡಿದ್ದೇವೆ ಅಂದರೂ ಎಲ್ಲದೂ ಸುಲಭವಾಗಿ ಒಲಿದು ಬರುವುದಿಲ್ಲ. ಒಂದು ಸಂತಸದ ಘಳಿಗೆ ನಮ್ಮದಾಗಬೇಕೆಂದರೆ ಅದನ್ನು ಸೃಷ್ಟಿಸಲು ನಮ್ಮ ಶ್ರಮ ಜಾಸ್ತಿ ಇರಬೇಕು. ನಮ್ಮ ವ್ಯಕ್ತಿತ್ವ ,ಗುಣ, ಸ್ವಭಾವ ಒಳ್ಳೆಯದಾಗಿದ್ದರೆ ಅಂತಹ ಒಳ್ಳೆಯ ಪ್ರೀತಿಯನ್ನು, ಸಂತಸವನ್ನು ಭಗವಂತ ನಮಗೆ ಯಾವಾಗ ದೊರಕಿಸಬೇಕೊ ಆಗ ಖಂಡಿತವಾಗಿಯೂ ನಮಗೆ ಕರುಣಿಸುತ್ತಾನೆ.


  •   ಬಿ.ಆರ್.ಯಶಸ್ವಿನಿ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading