ನಮ್ಮ ಮನೆಯಲ್ಲಿ ಮೊದಲು ಸ್ನಾನ ಮಾಡಿದವರು ‘ಪುಳಿಕೆಪ್ಪು’ ಮಾಡಬೇಕು..ಊಟಕ್ಕೂ ಮೊದಲು ಬೇವು ಬೆಲ್ಲದ ವಿತರಣೆಯಾಗಬೇಕು.ಸಂಜೆ ಉಗಾದಿ ಹಬ್ಬದ ಚಂದ್ರದರ್ಶನಕ್ಕೆ ಸೀತಾರಾಮ ಶೆಟ್ರ ಮನೆಯ ಕಟ್ಟೆ ಮೇಲೆ ಸೂರ್ಯಾಸ್ತವಾಗುತ್ತಿದ್ದಂತೇ ಒಬ್ಬಬ್ಬರಾಗಿ ಬಂದು ಕೂತು ಬಿಡುತ್ತಿದ್ದೆವು.ವಿಂಗ್ ಕಮಾಂಡರ್ ಸುದರ್ಶನ ಅವರ ನೆನಪಿನೋಕುಳಿಯಲ್ಲಿ ಯುಗಾದಿ ಹಬ್ಬವನ್ನು ತಪ್ಪದೆ ಮುಂದೆ ಓದಿ…
ಚಂದ್ರನ ಚಾಲನೆಯ ಪ್ರಕಾರ ಕಾಲನಿರ್ಣಯವನ್ನು ಚಾಂದ್ರಮಾನ ಎಂದು ಕರೆಯುತ್ತಾರೆ. ಈ ಕ್ಯಾಲೆಂಡರನ್ನು ಅನುಸರಿಸುವ ಪ್ರದೇಶಗಳಲ್ಲಿ ಚೈತ್ರ ಮಾಸದ ಶುಕ್ಲ ಪಕ್ಷದ ಮೊದಲ ದಿನವನ್ನು ಯುಗದ ಆದಿ..ಯುಗಾದಿ, ಹಿಂದೂ ಹೊಸ ವರ್ಷವಾಗಿ ಆಚರಿಸುವ ಸಂಪ್ರದಾಯವಿದೆ. ಕರ್ನಾಟಕ, ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ಇದನ್ನು ಯುಗಾದಿ ಎಂದು ಕರೆದರೆ ಮಹಾರಾಷ್ಟ್ರದಲ್ಲಿ ಗುಡಿಪಡ್ವ ಎಂದು ಕರೆಯುತ್ತಾರೆ. ಪಂಜಾಬ್, ಕಾಶ್ಮೀರ, ಮಣಿಪುರದಲ್ಲೂ ವಿವಿಧ ಹೆಸರುಗಳಲ್ಲಿ ಆಚರಿಸುವ ಸಂಭ್ರಮದ ಹಬ್ಬವಿದು.
ಬಾಲ್ಯದಲ್ಲಿ ನಮ್ಮ ಹುಟ್ಟೂರಿನಲ್ಲಿ ಆಚರಿಸುತ್ತಿದ್ದ ಈ ಹಬ್ಬದ ನೆನಪು ಸ್ಮೃತಿಪಟಲದಲ್ಲಿ ಇನ್ನೂ ಅಚ್ಚಳಿಯದೆ ಉಳಿದಿದೆ. ಬನ್ನಿ ಹಳ್ಳಿಯ ಸೊಗಡಿನ ಹಬ್ಬ ಹೇಗೆ ನಡೆಯುತ್ತಿತ್ತು ಎಂದು ನೋಡಿಕೊಂಡು ಬರೋಣ…
ನಮ್ಮ ಹಳ್ಳಿ ಗಂಗೂರು, ಬಯಲುಸೀಮೆ ಸೆರಗಿನ, ಸುಮಾರು ಇನ್ನೂರು ಮನೆಗಳ ಒಂದು ಚಿಕ್ಕ ಹಳ್ಳಿ. ಹಳ್ಳಿಯನ್ನು ಪ್ರವೇಶಿಸುತ್ತಲೇ ಮೊದಲಿಗೆ ಕಾಣುವುದು ಒಂದು ಸುಂದರ ದೇವಸ್ಥಾನ, ಊರ ದೇವರು ಚೆನ್ನಕೇಶವ ಸ್ವಾಮಿ, ಆದರೂ ಆ ದೇವಸ್ಥಾನಕ್ಕೆ ‘ತಿಮ್ಮಪ್ಪನ ಗುಡಿ’ ಎನ್ನುವುದೇ ರೂಢಿ. ಊರ ಒಳಗಡೆ ಹೋದರೆ ಸ್ವಲ್ಪ ದಿಬ್ಬದ ಮೇಲೆ ಕಾಣಿಸುವುದೇ ಮಾರಮ್ಮನ ದೇವಸ್ಥಾನ ಮತ್ತು ಅದರ ಪಕ್ಕದಲ್ಲೇ ಬೀರದೇವರ ಗುಡಿ. ಹಳ್ಳಿಯಲ್ಲಿ ಕಾಣಿಸುವ ಬಹುತೇಕ ಮನೆಗಳು ಎಲ್ಲಾ ಚಿಕ್ಕ ಚಿಕ್ಕವು ಆದರೆ ಮನೆ ತುಂಬಾ ಜನ. ಹಳೆಯ ಕಾಲದ ಮನೆಗಳಲ್ಲಿ ಮೂರು ನಾಲ್ಕು ದೊಡ್ಡ ಮನೆಗಳು ಮಾತ್ರ ಹೆಮ್ಮೆಯಿಂದ ತಲೆ ಎತ್ತಿ ನಿಂತಿರುತ್ತಿದ್ದವು. ಎರಡು ಓಣಿಗಳ ಮಧ್ಯ ಉದ್ದಕ್ಕೆ ರೈಲಿನ ಡಬ್ಬಿ ತರಹದ ಜಂಟಿಮನೆಗಳ ಸಮುಚ್ಚಾಯ ರಾಮಂಜಯ್ಯ ಮೇಷ್ಟ್ರು ಮತ್ತು ನಾರಾಣಯ್ಯ ಮೇಷ್ಟ್ರ ಮನೆಗಳಾದರೆ, ಫ್ರೆಂಚ್ ಮಾದರಿಯ ಮನೆ ವೀರಪ್ಪ ಶೆಟ್ರದ್ದು ಮತ್ತೆ ಹಂಪೆಯ ದಸರಾ ದಿಬ್ಬದಂತಹ ಎತ್ತರದ ಮನೆ ಸೀತಾರಾಮ ಶೆಟ್ರದ್ದು.
ರಾಟೆ ಚಂದ್ರಪ್ಪ ನಮ್ಮ ಗಂಗೂರಿಗೆ ಆಗಿನ ಕಾಲದಲ್ಲಿರುತ್ತಿದ್ದ ಏಕೈಕ ದರ್ಜಿ. ಅವರ ಹೊಲಿಗೆ ಯುಂತ್ರವೇ ನಮ್ಮೂರಿಗೆ ಬಂದ ಮೊಟ್ಟಮೊದಲ ಯಂತ್ರ, ಅದನ್ನು ರಾಟೆ ಎಂದು ಕರೆದು ಅದನ್ನು ನಡೆಸುತ್ತಿದ್ದವರು ರಾಟೆ ಚಂದ್ರಪ್ಪ ಆದರು! ಉಗಾದಿ ಹಬ್ಬ ಇನ್ನೇನು ಬರುತ್ತಿದ್ದ ಹಾಗೇ ಎಲ್ಲರೂ ಅವರ ಮನೆಗೆ ಲಗ್ಗೆ ಇಡುತ್ತಿದ್ದರು. ಹಗಲೂ ರಾತ್ರೆ ರಾಟೆ ತುಳಿದೂ ತುಳಿದೂ ಅಂತೂ ಹಬ್ಬಕ್ಕೆ ಎಲ್ಲರಿಗೂ ಹೊಸ ಬಟ್ಟೆ ದೊರಕುವ ಹಾಗೆ ಮಾಡುತ್ತಿದ್ದರು..ಚಂದ್ರಪ್ಪ. ಅಷ್ಟೊತ್ತಿಗಾಗಲೇ ನಮ್ಮ ಸ್ಕೂಲಿನ ಬೇಸಿಗೆ ರಜ ಶುರುವಾಗಿ ಬಿಟ್ಟಿರುತ್ತಿತ್ತು. ಹೊರ ಊರುಗಳಲ್ಲಿ ಓದುತ್ತಿದ್ದ ಹುಡುಗರೂ ಉಗಾದಿ ಹಬ್ಬಕ್ಕೆ ಹಳ್ಳಿಗೆ ವಾಪಾಸಾಗುತ್ತಿದ್ದರು. ಹಿಂದಿನ ದಿನವೇ ಹೊಲಗಳಲೆಲ್ಲಾ ಸುತ್ತಾಡಿ ಬೇವಿನ ಸೊಪ್ಪು, ಮಾವಿನ ಸೊಪ್ಪು, ಮಾವಿನ ಕಾಯಿಗಳನ್ನು ಕಿತ್ತುಕೊಂಡು ಬಂದಿರುತ್ತಿದ್ದೆವು. ಬೇವಿನ ಸೊಪ್ಪನ್ನು ರಾತ್ರೆಯೇ ನೀರು ಹಂಡೆಗೆ ಹಾಕಿಡುತ್ತಿದ್ದೆವು. ಪೂಜೆಗೆ ಬೇಕಾದ ಹೂವುಗಳು, ನೆಲಸಾರಿಸಲು ಸಗಣಿ ಮತ್ತು ಪಂಚಗವ್ಯಕ್ಕೆ ಗೋಮೂತ್ರ ಶೇಖರಿಸಿಬಿಟ್ಟರೆ ನಮ್ಮ ಪಾಲಿನ ಜವಾಬ್ದಾರಿ ಮುಗಿದಹಾಗೇ, ಇನ್ನುಳಿದಿದ್ದಲ್ಲಾ ದೊಡ್ಡವರ ಕೆಲಸಗಳು.
ಬೆಳಗ್ಗೆ ನಾವು ಏಳುವುದಕ್ಕೆ ಮೊದಲೇ ಅಡುಗೆ ಮನೆಯಲ್ಲಿದ್ದ ಪಾತ್ರೆಗಳೆಲ್ಲಾ ಹಿತ್ತಲು ಸೇರುತ್ತಿದ್ದವು. ನೀರೊಲೆಗೆ ಉರಿ ಹಚ್ಚಿ ಸ್ವಲ್ಪಹೊತ್ತು ಅಲ್ಲೇ ಬೆಂಕಿ ಕಾಯಿಸಿಕೊಂಡು ಕಾಫಿಯನ್ನು ಸವಿಯುತ್ತಾ ಕುಳಿತವರಿಗೆ ಒಂದೊಂದೇ ಕೆಲಸ ಹಚ್ಚಿ ಚದುರಿಸಿ ಬಿಡುತ್ತಿದ್ದರು ನಮ್ಮಮ್ಮ. ಉಗಾದಿಯ ವಿಶೇಷವೆಂದರೆ.. ಹೋಳಿಗೆ, ಅದಕ್ಕೆ ಬೇಳೆ ಬೇಯಿಸಲು ದೂರದ ಬಾವಿಯ ಸಿಹಿ ನೀರೇ ಆಗಬೇಕು. ಅದು ಒಬ್ಬರ ಪಾಲಿನ ಕೆಲಸವಾದರೆ, ನೀರು ಹಂಡೆ ಖಾಲಿಯಾದಂತೆಲ್ಲಾ ಅದನ್ನು ತುಂಬಿಸುವುದು ಇನ್ನೊಬ್ಬನ ಕೆಲಸ. ಅವತ್ತು ಬೆಳಗಿನ ತಿಂಡಿ ಮಾಡುತ್ತಿರಲಿಲ್ಲ ತಂಗಳನ್ನಕ್ಕೆ ‘ಗೊಡ್ಡುಸಾರು’ ಬೆರಸಿ ಕೈತುತ್ತು ನೀಡುತ್ತಿದ್ದರು..ಅದರ ಮಜವೇ ಬೇರೆ ಬಿಡಿ. ಈ ಗೊಡ್ಡುಸಾರು ನಮ್ಮಮ್ಮನ ಹಲವಾರು ಸ್ಪೆಷಾಲಿಟಿಗಳಲ್ಲೊಂದು..ಏನಿಲ್ಲಾ ಹುಣಸೇಹುಳಿಗೆ ಒಂದೆರಡು ಕೆಂಪು ಮೆಣಸಿನಕಾಯಿ ಕಿವುಚಿ, ಅದಕ್ಕೆ ಸ್ವಲ್ಪ ಉಪ್ಪು, ಬೆಲ್ಲ ಬೆರಸಿ, ಬೇಕಾದರೆ ಒಂದು ಈರುಳ್ಳಿಯನ್ನು ಸಣ್ಣದಾಗಿ ಕೊಚ್ಚಿ ಹಾಕಿದರೆ ದಿಢೀರಾಗಿ ತಯಾರಾಗುತ್ತಿದ್ದ ಅದ್ಭುತವಾದ ರೆಸಿಪಿ. ಹಿತ್ತಲಿನಲ್ಲೇ ಈ ಕೈತುತ್ತಿನ ಸಮಾರಾಧನೆ. ಆಮೇಲೆ ಎಣ್ಣೆಸ್ನಾನದ ಸಡಗರ. ಎಣ್ಣೆ ಹಚ್ಚಿಕೊಂಡ ಮೇಲೆ ಸ್ವಲ್ಪಹೊತ್ತು ಹಿತ್ತಲಲ್ಲೇ ಲಗೋರಿ ಆಟ. ಅಷ್ಟೊತ್ತಿಗಾಗಲೇ ಅಗಸರ ಹಟ್ಟಿಯಲ್ಲೂ ದೊಡ್ಡವರ ಲಗ್ಗೇ..ಎಂದು ಜೋರಾದ ಕೂಗು ಕೇಳಿಸುತ್ತಿತ್ತು. ದೊಡ್ಡವರ ಲಗ್ಗೆ ಆಟ ಕೆಲವೊಮ್ಮೆ ರೌದ್ರರೂಪ ಪಡೆಯುತ್ತಿದ್ದರಿಂದ ನಾವು ಅದನ್ನು ದೂರದಿಂದಲೇ ನೋಡುತ್ತಿದ್ದೆವು. ಬಟ್ಟೆ ಚೆಂಡಿನಿಂದ ಬೆನ್ನಿಗೆ ಬಿದ್ದ ಹೊಡೆತ ತಾಳಲಾರದೆ ಒಬ್ಬಬ್ಬರೇ..ಆಟ ಸಾಕು ಎಂದು ಸ್ನಾನಕ್ಕೆಂದು ಹಳ್ಳದ ಕಡೆ ಹೋಗುತ್ತಿದ್ದರು.
ನಮ್ಮ ಮನೆಯಲ್ಲಿ ಮೊದಲು ಸ್ನಾನ ಮಾಡಿದವರು ‘ಪುಳಿಕೆಪ್ಪು’ ಮಾಡಬೇಕು..ಅಂದರೆ ದೇವರ ವಿಗ್ರಹಗಳನ್ನು ಮತ್ತು ಪೂಜಾ ಪರಿಕರಗಳನ್ನು ಹುಣಸೇ ಹಣ್ಣು ಮತ್ತು ರಂಗೋಲಿ ಹಿಟ್ಟಿನಿಂದ ಫಳ ಫಳ ಹೊಳೆಯುವವರೆಗೂ ತಿಕ್ಕಿ ಶುಭ್ರಗೊಳಿಸುವುದು. ಇನ್ನೊಬ್ಬರಿಗೆ ಬೇವುಬೆಲ್ಲ ತಯಾರಿಸುವ ಜವಾಬ್ದಾರಿ. ಒಳಕಲ್ಲಿನಲ್ಲಿ ಹುರಿಗಡಲೆ ಕುಟ್ಟಿ ಅದಕ್ಕೆ ಬೆಲ್ಲ ಮತ್ತು ಬೇವಿನ ಹೂವು ಬೆರಸಿದರೆ ಅವತ್ತಿನ ವಿಶೇಷವಾದ ನೈವೇದ್ಯ ರೆಡಿ. ನಮ್ಮ ತಾಯಿ ಅಡುಗೆ ಮಾಡುತ್ತಲೇ ದೇವರ ನಾಮಗಳನ್ನು ಹಾಡುತ್ತಿದ್ದರು, ಜೊತೆ ಜೊತೆಗೆ ನಮ್ಮ ಪೂಜಾಮಂತ್ರಗಳು, ಗಂಟೆಗಳ ಮತ್ತು ಶಂಖನಾದಗಳ ಮಿಶ್ರಣ..ಒಂದಕ್ಕೊಂದು ತಾಳಮೇಳವಿರುತ್ತಿರಲಿಲ್ಲ ಆದರೂ ಅದೇಕೋ ಈಗಲೂ ನೆನಸಿಕೊಂಡರೆ ಮೈನವಿರೇಳುವ ಅನುಭವ. ನಮ್ಮ ತಂದೆಯವರೂ ಸ್ನಾನ ಮುಗಿಸಿ ಅಡುಗೆಯಲ್ಲಿ ತೊಡಗಿಕೊಳ್ಳುತ್ತಿದ್ದರು, ಮಾವಿನಹಣ್ಣಿನ ಸೀಕರಣೆ ತಯಾರಿಸುವಲ್ಲಿ ಅವರದ್ದು ಎತ್ತಿದ ಕೈ. ಹಬ್ಬದ ಅಡುಗೆ ಮುಗಿದು ನೈವೇದ್ಯ ಮಾಡುವಷ್ಟರಲ್ಲಿ ಮಧ್ಯಾಹ್ನದ ಒಂದು ಘಂಟೆ. ಬೆಳಗ್ಗೆ ತಿಂದ ಕೈತುತ್ತು ಯಾವಾಗಲೋ ಕರಗಿ ಹೋಗಿ ಎಲ್ಲರ ಹೊಟ್ಟೆಯೂ ತಾಳ ಹಾಕುತ್ತಿತ್ತು.
ಊಟಕ್ಕೂ ಮೊದಲು ಬೇವು ಬೆಲ್ಲದ ವಿತರಣೆಯಾಗಬೇಕು. ರುದ್ರಮ್ಮನ ಮನೆ, ಸೀತಮ್ಮನ ಮನೆ, ಭಾಗ್ಯಮ್ಮನ ಮನೆ, ವೆಂಕಕ್ಕನ ಮನೆ, ಜಾನಕಮ್ಮನ ಮನೆ ಅಂತಾ ನಮ್ಮ ತಾಯಿ ಒಂದೊಂದೇ ಪೊಟ್ಟಣಗಳನ್ನು ಕೊಡುತ್ತಿದ್ದರೆ ಶರವೇಗದಲ್ಲಿ ಹೋಗಿ ಕೊಟ್ಟುಬರುತ್ತಿದ್ದೆವು. ಯಾರು ಮೊದಲು ಕೊಟ್ಟು ಬರುತ್ತಾರೆ ಎನ್ನುವ ಸ್ಪರ್ಧೆ ಮತ್ತೆ ಈ ಬೇವುಬೆಲ್ಲದ ಹಂಚಿಕೆಯಾದ ಮೇಲೆ ಹೋಳಿಗೆ ಸೀಕರಣೆಯ ಭೋಜನದ ನಿರೀಕ್ಷೆ. ಅಷ್ಟು ಹೊತ್ತಿಗೆ ಮನೆಯ ಹತ್ತಿರ ಮಕ್ಕಳ ಹಿಂಡು ಸುಳಿದಾಡುತ್ತಿರುತ್ತಿತ್ತು..ಬೇವುಬೆಲ್ಲಕ್ಕೆ. ಕೆಲವು ಚೇಷ್ಟೆ ಮಕ್ಕಳು ಬಾಯಿತುಂಬಾ ಬೇವುಬೆಲ್ಲ ತುಂಬಿಕೊಂಡಿದ್ದ ಮಕ್ಕಳಿಗೆ..’ಬುಕ್ಕಾಂಬೂಧಿ’ ಅನ್ನು ಎಂದು ಹೇಳಿಕೊಡುತ್ತಿದ್ದರು..ಕೆಲವು ಮುಗ್ದರು ಹಾಗೆ ಅನ್ನುತ್ತಿದ್ದ ಹಾಗೇ ಬಾಯಿಯಲ್ಲಿ ತುಂಬಿಕೊಂಡಿದ್ದ ಬೇವುಬೆಲ್ಲ ಹೊರಚೆಲ್ಲಿ ಬಿಡುತ್ತಿತ್ತು..ಆಗ ಎಲ್ಲರೂ ಬಿದ್ದು ಬಿದ್ದು ನಗುವುದು. ಎಂತಹ ಸುಂದರ ದಿನಗಳವು.
ಸಂಜೆ ಉಗಾದಿ ಹಬ್ಬದ ಚಂದ್ರದರ್ಶನಕ್ಕೆ ಸೀತಾರಾಮ ಶೆಟ್ರ ಮನೆಯ ಕಟ್ಟೆ ಮೇಲೆ ಸೂರ್ಯಾಸ್ತವಾಗುತ್ತಿದ್ದಂತೇ ಒಬ್ಬಬ್ಬರಾಗಿ ಬಂದು ಕೂತು ಬಿಡುತ್ತಿದ್ದೆವು. ಅಷ್ಟೊತ್ತಿಗಾಗಲೇ ನಮ್ಮಜ್ಜ ವೆಂಕಟಯ್ಯ ಹೊಸ ಪಂಚಾಂಗ ಓದುವ ಶಾಸ್ತ್ರವನ್ನು ಮಾಡಿ ಮುಂಬರುವ ಸಂವತ್ಸರದ ಫಲಾನುಭವಗಳ ಬಗ್ಗೆ ಕೌತುಕದಿಂದ ಕಾಯುತ್ತಿದ್ದ ಕೆಲವು ಹಿರಿಯರಿಗೆ ಬಿಡಿಸಿ ಹೇಳುತ್ತಿದ್ದರು. ಮುಖ್ಯವಾಗಿ ಮಳೆ ಬೆಳೆ ಹೇಗಾಗುತ್ತದೆ ಎನ್ನುವುದೇ ಆತಂಕ. ಅಂದು ಸಂಜೆ ಚಂದ್ರನನ್ನು ನೋಡುವುದೇ ಒಂದು ಸಂಭ್ರಮ. ಶೆಟ್ರ ಕಟ್ಟೆಮೇಲೆ ಕೂತಿದ್ದ ನಮಗೆಲ್ಲಾ ಅದೊಂದು ಪಂದ್ಯದಂತೆ, ನೊಡೋಣ ಯಾರು ಮೊದಲು ನೋಡುತ್ತಾರೆ ಅಂತಾ. ಚಂದ್ರದರ್ಶನವಾದ ಕೂಡಲೇ ಹಳ್ಳಿಯ ಎಲ್ಲಾ ಹಿರಿಯರಿಗೂ ಕಾಲು ಮುಟ್ಟಿ ನಮಸ್ಕರಿಸಿ ಎರಡೂ ದೇವಸ್ಥಾನಗಳ ದರ್ಶನ ಮಾಡಿ ಮನೆಗೆ ವಾಪಾಸಾದವರಿಗೆ ಇನ್ನೊಂದು ಸುತ್ತು ಹೋಳಿಗೆ ಸೀಕರಣೆಯ ಸಮಾರಾಧನೆಯಾದರೆ ಅಲ್ಲಿಗೆ ಉಗಾದಿ ಹಬ್ಬದ ಸಂಭ್ರಮ ಮುಗಿದಹಾಗೇ.
ಹೀಗೆ ನಡೆಯುತ್ತಿತ್ತು ನಮ್ಮ ಹಳ್ಳಿಯ ಉಗಾದಿ ಹಬ್ಬ. ಈಗಂತೂ ಮರಳಿಬಾರದ ಲೋಕಕ್ಕೆ ತೆರಳಿದ ತಂದೆ ತಾಯಂದಿರೊಂದಿಗೆ ಹಳ್ಳಿಯ ಹಬ್ಬದ ಸೊಗಡು ನೆನಪುಗಳಷ್ಟೇ.
ಎಲ್ಲರಿಗೂ ಶ್ರೀ ಕ್ರೋಧಿನಾಮ ಸಂವತ್ಸರದ, ಹೊಸ ವರ್ಷದ ಶುಭಾಶಯಗಳು.
- ವಿಂಗ್ ಕಮಾಂಡರ್ ಸುದರ್ಶನ -ಇಪ್ಪತ್ತೈದು ವರ್ಷಗಳ ವಾಯುಸೇನೆಯ ಸೇವೆಯಿಂದ ನಿವೃತ್ತಿ ಪಡೆದ ನಂತರ ಇಂಡಿಗೋ ಏರ್ಲೈನ್ ನಿನಲ್ಲಿ ಏರ್ ಬಸ್ ವಿಮಾನಗಳ ವೈಮಾನಿಕ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಿಡುವಿನ ಸಮಯದಲ್ಲಿ ಪುಸ್ತಕಗಳನ್ನು ಓದುವ ಹಾಗು ಬರೆಯುವ ಹವ್ಯಾಸವನ್ನು ಇಟ್ಟುಕೊಂಡಿರುವ ಲೇಖಕರು, ‘ಹಸಿರು ಹಂಪೆ’ ಮತ್ತು ‘ಯೋಧ ನಮನ’ ಎನ್ನುವ ಎರಡು ಪುಸ್ತಕವನ್ನು ಬರೆದಿದ್ದಾರೆ
