‘ಉಜ್ಜಯನಿ’ ಪ್ರವಾಸ ಕಥನ

ಪ್ರಾಚೀನ ಭಾರತದ ಅತ್ಯಂತ ಹಳೆಯ ನಗರಗಳಲ್ಲಿ ( ಮಹಾಜನಪದ) ಒಂದಾದ ಉಜ್ಜಯಿನಿಯ ನೆಲದಲ್ಲಿ ನಿಲ್ಲುವುದೇ ಒಂದು ರೋಮಾಂಚಕ ಅನುಭವ. ಅಲ್ಲಿ ಕಾಲಿಡುವಾಗ ಅಶೋಕ, ವಿಕ್ರಮಾದಿತ್ಯ, ಭರ್ತೃಹರಿ, ಸಾಂದೀಪನಿ ಇವರೆಲ್ಲ ನೆನಪಾಗುವ ಮೊದಲು ನೆನಪಾಗುವುದು ಮಹಾಕಾಲ. ಉಜ್ಜಯಿನಿ ಪ್ರವಾಸ ಕಥನವನ್ನು ನೂತನ ದೋಶೆಟ್ಟಿ ಅವರು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಆವಂತಿ ಸಾಮ್ರಾಜ್ಯದ ರಾಜಧಾನಿಯಾಗಿದ್ದು ಆವಂತಿಪುರಿ ಎಂದು ಹೆಸರಾಗಿದ್ದ ಈ ನಗರದಲ್ಲಿ ಸಾಮ್ರಾಟನಾಗುವ ಮೊದಲು ಅಶೋಕ ಉಸ್ತುವಾರಿ ನೋಡಿಕೊಳ್ಳುತ್ತಿದ್ದು, ನಂತರ ಆಡಳಿತವನ್ನು ನಡೆಸಿದ್ದು, ವಿಕ್ರಮಾದಿತ್ಯ ಆಳಿದ್ದು, ಮುಸ್ಲಿಮರು ದಾಳಿ ಮಾಡಿದ್ದು, ಅಕ್ಬರ ಇದನ್ನು ಬಾಜ ಬಹಾದೂರನಿಂದ ರಕ್ಷಿಸಿದ್ದು , ಮರಾಠರು ( ಸಿಂಧಿಯಾ) ಆಡಳಿತ ನಡೆಸಿದ್ದು ವಿಕ್ರಮಾದಿತ್ಯನ ಕಾಲದಲ್ಲಿ ರಾಜಧಾನಿಯಾಗಿ, ಶಿಕ್ಷಣದ ಕೇಂದ್ರವಾಗಿ ಬೆಳೆದದ್ದು ..ಹೀಗೆ ಇತಿಹಾಸದುದ್ದಕ್ಕೂ ಉಜ್ಜಯನಿಯ ಹೆಸರು ಬರುತ್ತದೆ. ಇನ್ನು ಸ್ಕಂದ ಪುರಾಣದಲ್ಲಿ ಇದರ ಉಲ್ಲೇಖವಿದೆ.

ಕೃಷ್ಣ ಹಾಗೂ ಬಲರಾಮರ ಗುರು ಸಾಂದೀಪನಿ ಇಲ್ಲಿ ನೆಲೆಸಿ ಅವರಿಗೆ ತನ್ನ ಗುರುಕುಲದಲ್ಲಿ ಶಿಕ್ಷಣ ನೀಡಿದ ಎಂದೂ , ನೀತಿಶತಕದ ಕರ್ತೃ , ಭರ್ತೃಹರಿ ಇಲ್ಲಿ ನೆಲೆಸಿದ್ದರು ಎಂದೂ.. ಈ ನಗರದ ಇತಿಹಾಸ ಇನ್ನಷ್ಟು ವಿಸ್ತಾರವಾಗುತ್ತ ಹೋಗಿ ಅಲ್ಲಿಗೆ ನಿಲ್ಲುವುದಿಲ್ಲ. ಪುರಾಣಗಳು ಹೇಳುವ ಸಮುದ್ರ ಮಂಥನದ ಸಂದರ್ಭದಲ್ಲಿ, ಇಲ್ಲಿ ಈಗ ರಾಮ ಘಾಟ್ ಎಂದು ಕರೆಯಲ್ಪಡುವಲ್ಲಿ ಅಮೃತದ ಬಿಂದುವೊಂದು ಬಿದ್ದ ಕಾರಣ ಇಲ್ಲಿನ ಕ್ಷಿಪ್ರಾ ( ಶಿಪ್ರಾ) ನದಿಯಲ್ಲಿ ಕುಂಭಮೇಳ ನಡೆಯುತ್ತದೆ ಎಂದೂ ಹೇಳುತ್ತದೆ. ದೂಷಣ ಎಂಬ ರಾಕ್ಷಸನ ಸಂಹಾರ ಮಾಡಲು ಮಹಾಕಾಲ ಬಂದ ಎಂದು ನಂಬಲಾಗಿರುವ ಐತಿಹ್ಯಗಳು ಆ ಕಾರಣದಿಂದಲೇ ಶಿವನನ್ನು ಉಗ್ರಾರೂಪಿ ಮಹಾಕಾಲ ಎಂತಲೂ ಚಿತ್ರಿಸುತ್ತವೆ. ಗಣಿತ ಹಾಗೂ ಖಭೌತ ಶಾಸ್ತ್ರದಲ್ಲಿ ಮುಂಚೂಣಿಯಲ್ಲಿದ್ದ ನಗರವಾಗಿಯೂ ಇದು ಹೆಸರಾಗಿದೆ. ಹೀಗೆ ಈ ನಗರದ ಮಹತ್ವಗಳು ಹತ್ತು ಹಲವು!!. ಎಂಥ ಅಗಾಧತೆಯನ್ನು, ಗೌಪ್ಯತೆಯನ್ನು, ರೌದ್ರತೆಯನ್ನು, ಐತಿಹ್ಯಗಳನ್ನು, ನಂಬಿಕೆಗಳನ್ನು ತನ್ನ ಒಡಲಲ್ಲಿ ಈ ನಗರ ಹುದುಗಿಸಿಕೊಂಡಿರುವುದರಿಂದಲೇ ಇಂದಿಗೂ ಅತ್ಯಂತ ಆಕರ್ಷಣೀಯ ನಗರ ಇದು.

ಉಜ್ಜಯನಿಯಲ್ಲಿ ಈಗ ಗದಗುಟ್ಟಿಸುವ ಚಳಿ. ಬೆಳಿಗ್ಗೆ 10 ಗಂಟೆಗೂ 13-14 ಡಿಗ್ರಿ ಇದ್ದರೂ ಜನಸಾಗರಕ್ಕೆ ಇದರ ಯಾವ ಬಾಧೆಯೂ ಇಲ್ಲ. ಪ್ರತಿದಿನ ಹಲವು ಸಾವಿರಗಳಿಂದ ಲಕ್ಷಗಳಲ್ಲಿ ಬರುವ ಜನರನ್ನು ಸೆಳೆಯುವುದು ಅತ್ಯಂತ ರೌದ್ರಿ ಮಹಾಕಾಲ ಎನ್ನುವುದು ಸೋಜಿಗವೇ ಸರಿ. ಹೀಗೆಯೇ ನನ್ನನ್ನು ಸೆಳೆದದ್ದು ಮಹಾಕಾಲನಿಗೆ ಮಾಡುವ ಮನೋಹರವಾದ ಅಲಂಕಾರಗಳು. ಅದರಲ್ಲೂ ಭಸ್ಮಾರತಿಯನ್ನು ಒಮ್ಮೆ ನೋಡಲೇಬೇಕು ಎಂದುಕೊಂಡಿದ್ದು ಇಲ್ಲಿಗೆ ಎಳೆತಂದಿತು. ಬೆಳಿಗ್ಗೆ ಉಜ್ಜಯಿನಿಯ ಸುತ್ತಮುತ್ತಲಿನ ಸ್ಥಳಗಳನ್ನು ನೋಡಿ ರಾತ್ರಿ ಜನಜಂಗುಳಿ ಕಡಿಮೆಯಿರುವುದರಿಂದ ಆಗ ಮಹಾಕಾಲನ ದರ್ಶನಕ್ಕೆ ಹೋಗುವುದು ನನ್ನ ಯೋಜನೆಯಾಗಿತ್ತು.

ಮಧ್ಯಾನ್ಹದ ಬಿಸಿಲಲ್ಲಿ ಕಾಲಭೈರವ/ ಭೈರವನಾಥನ ಗುಡಿಗೆ ಹೋದಾಗ ಸರತಿ ಸಾಲು ದೊಡ್ಡದೇ ಇತ್ತು. ಹೂ, ಹಣ್ಣು, ಇತ್ಯಾದಿ ಪೂಜಾ ಸಾಮಗ್ರಿಗಳ ಅಂಗಡಿ ಸಾಲಿನಲ್ಲಿ ಸೆಳೆದದ್ದು ರಾಯಲ್ ಸ್ಟಾಗ್ ಎಂದು ದಪ್ಪ ಕೆಂಪು ಅಕ್ಷರಗಳಲ್ಲಿ ಬರೆದುಕೊಂಡು ನಿಂತಿದ್ದ ಬೋರ್ಡ್. ದೇವರ ಹತ್ತಿರ ಇದನ್ನು ಯಾಕೆ ಇಟ್ಟಿದಾರಪ್ಪ ಎಂದು ಅಂದುಕೊಳ್ಳುತ್ತಿರುವಾಗಲೇ ಅನೇಕರ ಪೂಜೆ ತಟ್ಟೆಯಲ್ಲಿ ಕುಳಿತಿದ್ದ ಚಿಕ್ಕ ದೊಡ್ಡ ಗಾತ್ರದ ಕೆಂಪು ದ್ರಾವಣ ತುಂಬಿದ ಬಾಟಲಿಗಳು ಕಾಣಿಸಿದವು. ಇದು ಅಲ್ಲಿಗೆ ಪ್ರಸಾದ ರೂಪದಲ್ಲಿ ಹೋಗುತ್ತಿರುವುದು ಗೊತ್ತಾಯಿತು. ಕೆಲ ಗಂಡಸರು ಇದಕ್ಕೆಷ್ಟು, ಅದಕ್ಕೆಷ್ಟು ಎಂದು ಮಾತಿಗೆ ಶುರು ಹಚ್ಚಿಕೊಂಡರು. ಕೆಲವರು ಅದರಲ್ಲಿ ತಮ್ಮ ಪಾಂಡಿತ್ಯ ಪ್ರದರ್ಶಿಸಲು ಇದು 700 ರುಪಾಯಿ.. ಎಂದು ರಾಗ ಎಳೆಯುತ್ತಿದ್ದರು. ಅರ್ಧ ಗಂಟೆಯಲ್ಲಿ ಈ ಪ್ರಾಚೀನ ಮಂದಿರದ ದರ್ಶನ ಆಯಿತು. ಪಾಪ ಆಯಾ ಕಾಲಭೈರವ. ಯಾವತ್ತಾದರೊಮ್ಮೆ ಸೋಮರಸ ಕುಡಿಯುತ್ತಿದ್ದಾನೇನೋ. ಈ ಆಧುನಿಕರು ಅವನಿಗೆ ಬ್ರ್ಯಾಂಡೆಡ್ ಮಾಲನ್ನೇ ಕುಡಿಸುತ್ತಿದ್ದಾರೆ !!

This slideshow requires JavaScript.

 

ದಾರಿಯಲ್ಲಿ ಅಲ್ಲಲ್ಲಿ ಶಿಪ್ರಾ ನದಿ ಕಾಣುತ್ತದೆ. ಈ ನದಿಯ ಉದ್ದಕ್ಕೂ ಕುಂಭಮೇಳದ ಸಂದರ್ಭದಲ್ಲಿ ಸಾವಿರಾರು ಸಾಧು ಸಂತರು ಶಾಹಿ ಸ್ನಾನ ಮಾಡುತ್ತಾರೆ. ಸಮುದ್ರ ಮಂಥನದ ಸಂದರ್ಭದಲ್ಲಿ ಈ ಜಾಗದಲ್ಲಿ ಅಮೃತದ ಬಿಂದುವೊಂದು ಬಿದ್ದ ಕಾರಣ ಇಲ್ಲಿ ಕುಂಭಮೇಳ ನಡೆಯುತ್ತದೆ ಎಂಬ ಬಲವಾದ ನಂಬಿಕೆಯಿದೆ.

ಇಲ್ಲಿಯ ಇನ್ನೊಂದು ವಿಶಿಷ್ಟ ದೇವಾಲಯವೆಂದರೆ ಮಂಗಲನಾಥ ದೇವಾಲಯ. ಇದು ಮಂಗಲಗ್ರಹದ ಅಧಿಪತಿಯನ್ನು ಆರಾಧಿಸುವ ಜಾಗ. ವಿಜ್ಞಾನವನ್ನು ಕಟ್ಟಿ ಪಕ್ಕದ ಶಿಪ್ರಾ ನದಿಗೆ ಎಸೆಯಲಾಗಿದೆ ಎಂದು ಬೇರೆ ಹೇಳಬೇಕಿಲ್ಲ. ಇಲ್ಲಿ ಪಿತೃಗಳ ಪೂಜೆ ಇತ್ಯಾದಿ ನಡೆಯುತ್ತಿರುತ್ತದೆ.

ಮಧ್ಯಾಹ್ನದ ನಾಲ್ಕು ಗಂಟೆಗೆ ಹಿಂತಿರುಗಿ ಬಂದು ಪ್ರಯಾಣದ ಆಯಾಸದಿಂದ ಮಲಗಿದೆ. ಎಚ್ಚರವಾದಾಗ ಗಂಟೆ ಆರಾಗಿತ್ತು. ಗಡಬಡಿಸಿ ಸಮೀಪದ ಮಹಾಕಾಲ ಲೋಕಕ್ಕೆ ಹೋದೆ. ಸಂಜೆಯ ದೀಪಾಲಂಕಾರದಲ್ಲಿ ಅದೊಂದು ಆಧುನಿಕ ಮಾಯಾಲೋಕವಾಗಿ ಕಾಣುತ್ತದೆ. ಉದ್ದಕ್ಕೂ ಶಿವನ ಅನೇಕ ಕಥೆಗಳು, ಭಂಗಿಗಳು ಗಣೇಶ, ಪಾರ್ವತಿ ಇತ್ಯಾದಿ ಮುರ್ತಿಗಳು ಅಲ್ಲಲ್ಲಿ ವಿರಾಜಮಾನವಾಗಿದ್ದರು ಅವು ಸೆಲ್ಫಿ ಪಾಯಿಂಟುಗಳಾಗಿರುವುದು ಈ ಕಾಲದ ದುರಂತ. ಇದನ್ನು ನೀಡುತ್ತಾ ಸಾಗುತ್ತಿರುವಾಗಲೇ ಬಂದ ಮೆಸೇಜು ಭಸ್ಮಾರತಿಯ confirmation ತಿಳಿಸಿತು. ಎದ್ದೇನೋ ಬಿದ್ದೆನೋ ಎಂದು ಟಿಕೆಟ್ ಕೌಂಟರಿಗೆ ಓಡಿದೆ. ಟಿಕೆಟ್ ಪಡೆದು ಆ ರಾತ್ರಿಯ ಶೀಘ್ರ ದರ್ಶನಕ್ಕೆ ಸಾಲಿನಲ್ಲಿ ಹೋದೆ. ಎಂಥ ಚೆಂದ ಅಲಾಂಕಾರ. ಸುಮಾರು ಹೊತ್ತು ಅಲ್ಲಿ ಕುಳಿತು ಹೊರ ಬಂದಾಗ ಹೊರಗಿನ ಟೀವಿ ಪರದೆಯ ಮೇಲೆ ಶಯನಾರತಿ ಮೂಡಿ ಬರುತ್ತಿತ್ತು. ಅದನ್ನು ನೋಡಿ ಹೊರಟಿದ್ದು ರಾತ್ರಿ 11 ಕ್ಕ. ಆಗಲೂ ಜನ ಜಂಗುಳಿ. ನಾನು ಅಲ್ಲಿಂದ ಕೇವಲ 2-3 ನಿಮಿಷಗಳ ಹಾದಿಯ ಅಂತರದಲ್ಲಿದ್ದುದರಿಂದ ಬೇಗ ತಲುಪಿದೆ.


  • ನೂತನ ದೋಶೆಟ್ಟಿ – ಆಕಾಶವಾಣಿ ಸಹಾಯಕ ನಿರ್ದೇಶಕಿ, ಕರು, ಲೇಖಕಿ, ನಿರೂಪಕಿ

 

 

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW