ಹೆಣ್ಣಿಗೆ ತಾಳ್ಮೆ, ಸಹನೆ, ಸಮಯಪ್ರಜ್ಞೆ, ನಿರ್ವಹಣೆ ಇದ್ದರೇ ಮನೆ ಮನಸ್ಸನ್ನು ಗೆಲ್ಲುತ್ತಾಳೆ ಎನ್ನುವುದಕ್ಕೆ ಸರ್ವಮಂಗಳ ಜಯರಾಮ್ ಅವರ ಈ ಲೇಖನವನ್ನು ತಪ್ಪದೆ ಮುಂದೆ ಓದಿ…
“ಉಪ್ಪಿಗಿಂತ ರುಚಿಯಿಲ್ಲ ತಾಯಿಗಿಂತ ಬಂಧುವಿಲ್ಲ” ಎಂಬ ಗಾದೆ ಮಾತನ್ನು ಎಲ್ಲರೂ ಕೇಳಿರುತ್ತೀರಿ. ಉಪ್ಪಿಲ್ಲದ ಅಡುಗೆ ಊಹಿಸಲು ಸಾಧ್ಯವೇ? ಯಾವುದೇ ಆಹಾರ ಪದಾರ್ಥಕ್ಕೆ ರುಚಿ ಕೊಡುವುದೇ ಉಪ್ಪು. ಆಹಾರದಲ್ಲಿ ಖಾರ ಇಲ್ಲದೆ ಇದ್ದರೂ, ಹುಳಿ ಕಡಿಮೆ ಇದ್ದರೂ ಊಟ ಮಾಡಬಹುದು. ಆದರೆ ಉಪ್ಪಿಲ್ಲದಿದ್ದರೆ ಆಹಾರ ನಾಲಿಗೆಗೆ ರುಚಿಸುವುದೇ ಇಲ್ಲ. ಯಾಕೆಂದರೆ ಉಪ್ಪು ಎಲ್ಲಾ ರುಚಿಗಳ ರಾಜ. ರಾಜನಿಲ್ಲದೆ ರಾಜ್ಯವುಂಟೆ ಎಂಬಂತೆ ಉಪ್ಪಿಲ್ಲದೆ ಯಾವ ಸೊಪ್ಪೂ ನಾಲಿಗೆಗೆ ಹಿತವಾಗಿ ಅಪ್ಪುವುದೇ ಇಲ್ಲ. ನಾನೀಗ ಹೇಳ ಹೊರಟಿರುವುದು ಏನೆಂದರೆ ಇಂದು ನಾನು ಉಪ್ಪಿಲ್ಲದೆ ಉಪ್ಸಾರು ಮಾಡಿದೆ. ಇದು ಹೇಗೆ ಸಾಧ್ಯ ಎಂಬ ಕುತೂಹಲ ನಿಮಗಿದೆಯಲ್ಲವೇ… ಹಾಗಾದರೆ ಮುಂದೆ ಓದಿ.
ಇಂದು ಬೆಳಗ್ಗೆ ತಿಂಡಿ ಮಾಡುವಾಗಲೇ ಉಪ್ಪಿನ ಡಬ್ಬಿ ಖಾಲಿಯಾಗಿತ್ತು. ತಳದಲ್ಲೇಲ್ಲೋ ಉಳಿದಿದ್ದ ಅರ್ಧ ಚಮಚ ಉಪ್ಪನ್ನು ಗೋಚಿ ಗೋಚಿ ಚಿತ್ರಾನ್ನದ ಗೊಜ್ಜಿಗೆ ಹಾಕಿ ಹೇಗೋ ಮ್ಯಾನೇಜ್ ಮಾಡಿದೆ. ಉಪ್ಪಿನ ಕಥೆ ಸಂಜೆ ನೋಡಿಕೊಂಡರಾಯ್ತು ಎಂದುಕೊಂಡು ಸುಮ್ಮನಾದೆ. ಸ್ಟೋರ್ ರೂಂನಲ್ಲಿ ಹೊಸ ಉಪ್ಪಿನ ಪ್ಯಾಕೇಟ್ ಇರಬಹುದೆಂದು ಅಂದಾಜಿಸಿದ್ದೆ. ಆದ್ದರಿಂದಲೇ ನಿರಾಳವಾಗಿದ್ದೆ. ಆದರೆ ಅಲ್ಲೂ ಖಾಲಿ. ತಿಂಗಳ ಮೊದಲ ವಾರ ಬೇರೆ. ಇನ್ನೂ ಸ್ಯಾಲರಿ ಕ್ರೆಡಿಟ್ ಆಗಿರಲಿಲ್ಲ. ಮನೆಯಲ್ಲಿ ಎಲ್ಲಾ ದಿನಸಿ ಮುಗಿದು ಡಬ್ಬಿಗಳೆಲ್ಲಾ ಡಬ ಡಬ ಬಡಿದುಕೊಳ್ಳುತ್ತಿದ್ದವು. ಮಧ್ಯಮ ವರ್ಗದವರ ಕಥೆ ಇಷ್ಟೇ ಅಲ್ಲವೇ. ಆರಕ್ಕೇರದ ಮೂರಕ್ಕಿಳಿಯದ ತ್ರಿಶಂಕು ಸ್ಥಿತಿ. ಇರಲಿ… ಈಗ ಉಪ್ಪಿಲ್ಲದ ಉಪ್ಸಾರಿನ ಬಗ್ಗೆ ತಿಳಿಯೋಣ ಬನ್ನಿ.

ರಾತ್ರಿ ಎಂಟರ ಸುಮಾರಿಗೆ ಅಡುಗೆ ಮನೆ ಹೊಕ್ಕು ಅಡುಗೆ ಕೆಲಸ ಶುರು ಮಾಡಿದೆ. ನೀವು ಅಡುಗೆ ಮಾಡೋದು ಅಷ್ಟು ತಡವಾ ಎಂದು ಕೇಳಬೇಡಿ, ಏಕೆಂದರೆ ಸಂಜೆ ಸ್ನ್ಯಾಕ್ಸ್ ಸಮಾರಾಧನೆ ಆಗಿರುತ್ತಲ್ವಾ, ಹಾಗಾಗಿ ಅಡುಗೆ ಲೇಟ್. ಫ್ರಿಡ್ಜ್ ನಲ್ಲಿ ಫ್ರೆಶ್ ಬೀನ್ಸ್ ಇದ್ದವು. ಒಂದು ಹೊತ್ತಿನ ಊಟಕ್ಕೆ ಏನು ಸಾಂಬಾರ್ ಮಾಡುವುದು ಎಂದು ಯೋಚಿಸಿದೆ. ದಿನಾ ಬೆಳಗಾದರೆ, ರಾತ್ರಿಯಾದರೆ ಏನ್ ತಿಂಡಿ ಮಾಡ್ಲಿ, ಏನ್ ಸಾಂಬಾರ್ ಮಾಡ್ಲಿ ….ಇದೇ ತಾನೇ ಹೆಂಗಸರೆಲ್ಲರ ಚಿಂತೆ. ಈ ರೀತಿ ದಿನಕ್ಕೆರಡು ಬಾರಿ ಯೋಚಿಸಿ ಯೋಚಿಸಿಯೇ ಅಲ್ಲವೇ ಮಾರುದ್ದ ಇದ್ದ ನಮ್ಮ ತಲೆಕೂದಲು ಐದು ರೂಪಾಯಿಯ ಕೊತ್ತಂಬರಿ ಕಟ್ಟಿನಂತಾಗಿರುವುದು.
ಕೊನೆಗೆ ಬೀನ್ಸ್ ನ ಪಲ್ಯ, ಉಪ್ಸಾರು ಮಾಡೋಣವೆಂದು ತೀರ್ಮಾನಿಸಿದೆ. ಬೇಳೆ, ಬೀನ್ಸ್ ಬೇಯಿಸಿದ್ದಾಯ್ತು, ಪಲ್ಯಕ್ಕೆ ಒಗ್ಗರಣೆ ಹಾಕಿ ಉಪ್ಪು ಹಾಕಲು ನೋಡುತ್ತೇನೆ.ಉಪ್ಪಿನ ಡಬ್ಬಿ ಖಾಲಿ. ಅದು ಬೆಳಿಗ್ಗೆಯೇ ತೀರಿಹೋಗಿತ್ತು. ಬೆಳಗಿನ ಗಡಿಬಿಡಿಯಲ್ಲಿ ಉಪ್ಪು ತೀರಿಹೋಗಿದ್ದೇ ಮರೆತು ಹೋಗಿತ್ತು. ಕಾಲವೆಂದರೆ ಹಾಗೇ ಅಲ್ಲವೇ…. ಎಲ್ಲವನ್ನೂ ಮರೆಸುತ್ತದೆ. ಆದರೆ ಈಗ ಪಲ್ಯಕ್ಕೆ ಉಪ್ಪು ಹಾಕಬೇಕು, ಉಪ್ಸಾರಿಗೆ ಉಪ್ಪು ಬೇಕೇ ಬೇಕು. ಅಷ್ಟು ಹೊತ್ತಿಗೆ ಎಂಟೂವರೆ ಆಗಿತ್ತು. ಆಗ ಯಜಮಾನರಿಗೆ ಅಂಗಡಿಗೆ ಹೋಗಿ ಉಪ್ಪು ತನ್ನಿ ಎಂದರೆ ಒಪ್ಪುತ್ತಾರೆಯೇ, ಮೊದಲೇ ಹೇಳಬಾರದಿತ್ತೇ ಎಂಬ ಗೊಣಗಾಟ ಕೇಳಬೇಕಷ್ಟೇ. ಮೊದಲೇ ರಾತ್ರಿ ಹೊತ್ತಿನಲ್ಲಿ ಯಾರೂ ಉಪ್ಪು ಕೊಡುವುದಿಲ್ಲ. ಉಪ್ಪು ಲಕ್ಷ್ಮೀಯ ಪ್ರತೀಕ. ಬುದ್ಧಿ ಇರುವವರು ಯಾರಾದರೂ ಸಂಜೆ ದೀಪ ಬೆಳಗಿಸಿದ ಮೇಲೆ ಲಕ್ಷ್ಮಿ ಯನ್ನು ಆಚೆ ಕಳಿಸುತ್ತಾರೆಯೇ, ಹಾಗಾಗಿ ಅಂಗಡಿಯಲ್ಲಿ ಉಪ್ಪು ತರಿಸುವ ಆಸೆ ಕೈಬಿಟ್ಟೆ. ನಮ್ಮ ಪಕ್ಕದ ಮನೆಯವರಂತೂ ಜಪ್ಪಯ್ಯ ಅಂದರೂ ರಾತ್ರಿ ವೇಳೆ ಉಪ್ಪು ಕೊಡುವುದಿಲ್ಲ.
ಇನ್ನೊಂದೆಡೆ ರಾತ್ರಿ ಹೊತ್ತಿನಲ್ಲಿ ಉಪ್ಪು ಎಂದರೇನೆ ಅಪಶಕುನ ಎನ್ನುತ್ತಾರೆ. ಯಾವುದೋ ಓಬಿರಾಯನ ಕಾಲದಲ್ಲಿ ಬೊಚ್ಚು ಬಾಯಿಯ ಅಜ್ಜಿಯೊಬ್ಬಳು ರಾತ್ರಿ ಊಟ ಮಾಡುವಾಗ ಉಪ್ಪು ಕೊಡಮ್ಮ ಎಂದಳಂತೆ. ಆಕೆಯ ಬಾಯಲ್ಲಿ ಹಲ್ಲಿಲ್ಲದ್ದರಿಂದ ಉಪ್ಪು….. ಉಫ್ ಅಂತ ಆಗಿ ಬಾಯಿಯಿಂದ ಜೋರಾಗಿ ಉಸಿರು ನುಗ್ಗಿ ಮುಂದೆ ಇದ್ದ ದೀಪ ಆರಿ ಹೋಯಿತಂತೆ, ಅಂದಿನಿಂದ ಯಾರೂ ರಾತ್ರಿ ಹೊತ್ತಿನಲ್ಲಿ ಉಪ್ಪು ಅನ್ನುತ್ತಿರಲಿಲ್ಲವಂತೆ. ಬದಲಿಗೆ ರುಚಿ ಎನ್ನುತ್ತಿದ್ದರಂತೆ. ಇದು ನಮ್ಮ ಅಜ್ಜಿ ಹೇಳುತ್ತಿದ್ದ ಅಡಗೂಲಜ್ಜಿಯ ಕಥೆ.
ಈಗ ಅರ್ಧಂಬರ್ಧ ಆದ ಅಡುಗೆ ವಿಷಯಕ್ಕೆ ಬರೋಣ. ಒಗ್ಗರಣೆಯಲ್ಲಿ ಹದವಾಗಿ ಬೆಂದು ಸಿದ್ಧಗೊಂಡ ಪಲ್ಯಕ್ಕೆ ಉಪ್ಪು ಮತ್ತು ರುಚಿಗಾಗಿ ಒಂದೆರಡು ಚಮಚ ಚಟ್ನಿ ಪುಡಿ ಹಾಕಿ ತಿರುವಿದೆ, ಉಪ್ಸಾರಿಗೆ ಉಪ್ಪಿನ ಬದಲು ಒಂದು ಚಮಚ ಉಪ್ಪಿನ ಕಾಯಿ ಹಾಕಿ ಕಲೆಸಿದೆ. ಅದರಲ್ಲಿ ಉಪ್ಪು ಹುಳಿ ಎರಡೂ ಇರುತ್ತಲ್ವಾ. ಇದರಿಂದ ಉಪ್ಸಾರಿಗೆ ಒಂದು ವಿಶೇಷ ರುಚಿ ಬಂತು. ಹಾಗೆಯೇ ಪಲ್ಯಕ್ಕೆ ಚಟ್ನಿ ಪುಡಿ ಹಾಕಿದ್ದರಿಂದ ಉಪ್ಪಿನ ಕೊರತೆ ನೀಗಿ ಪಲ್ಯ ಇನ್ನಷ್ಟು ರುಚಿಯಾಗಿತ್ತು. ನಮ್ಮ ಯಜಮಾನರಿಗೆ ಉಪ್ಪಿನ ವಿಷಯವೇ ಒಪ್ಪಿಸಲಿಲ್ಲ. ಹೀಗೆ ಉಪ್ಪಿಲ್ಲದೆ ಉಪ್ಸಾರು ಮಾಡಿ ಬಡಿಸಿದೆ. ಅವರು ಹಾಗೇ ಉಪ್ಸಾರು ಮುದ್ದೆ……ಅಲ್ಲಲ್ಲಾ ಸಪ್ಸಾರು ಮುದ್ದೆ ಉಂಡು ಎದ್ದರು. ಹೆಂಗೆ ನಾವು…. ತಾಳ್ಮೆ, ಸಹನೆ, ಸಮಯಪ್ರಜ್ಞೆ, ನಿರ್ವಹಣೆ ಎಂದರೆ ಹೆಣ್ಣಲ್ಲವೇ…. ಏನಂತೀರಿ ?
- ಸರ್ವಮಂಗಳ ಜಯರಾಮ್ – ಶಿಕ್ಷಕಿ, ಗೌರಿಬಿದನೂರು.
