ಉತ್ತಾರಖಂಡ ಪ್ರವಾಸ ಚಾರಣದ ಸಮಯದಲ್ಲಿ ನಾವು ಹೆಚ್ಚಾಗಿ ತಿಂದದ್ದು ಮ್ಯಾಗಿ. ಕೊನೆಗೆ ಯಾವಾಗ ಊರು ಮುಟ್ಟುತ್ತೆವಪ್ಪ ಅನಿಸುತಿತ್ತು. ಡೆಹರಾಡೂನ್ ಏರ್ಪೋರ್ಟ್ ನಲ್ಲಿ ನಮ್ಮ ಊರಿನ ಕಡೆಯವರು ಸಿಕ್ಕಾಗ ಒಂದು ದುಃಖದ ಸಂಗತಿ ತಿಳಿಯಿತು. ಒಂದೇ ಕುಟುಂಬದ ಐದಾರು ಜನ ಯಾತ್ರೆಗೆ ಬಂದಿದ್ದರು. ಅವರಲ್ಲೊಬ್ಬರು ಕೇದಾರನಾಥ ಧಾಮಕ್ಕೆ ತೆರಳುವ ಮಾರ್ಗದಲ್ಲಿ ಹೃದಯಾಘಾತದಿಂದ ತೀರಿಕೊಂಡರಂತೆ. ಲೇಖಕಿ ಜ್ಯೋತಿ ಡಿ ಬೊಮ್ಮಾ ಅವರು ಉತ್ತಾರಖಂಡ ಪ್ರವಾಸ ಕಥನವನ್ನು ತಪ್ಪದೆ ಮುಂದೆ ಓದಿ…
ನಾವು ಉತ್ತರಾಖಂಡ ಪ್ರವಾಸ ಹೋಗಲು ಎರಡು ತಿಂಗಳು ಮೊದಲೆ ನಿರ್ಧರಿಸಿ ಟೂರ್ ಪ್ಯಾಕೇಜ್ ಬುಕ್ ಮಾಡಿದ್ದೆವು. ಹೋಗುವಾಗ ಯುದ್ಧ ಭಯ ಎಲ್ಲೆಡೆಗೂ ಆವರಿಸಿತ್ತು.ನಮ್ಮ ದೇಶದಲ್ಲಿ ಜನ ಯುದ್ದದ ಉನ್ಮಾದಲ್ಲಿ ತೊಡಗಿದ್ದಾಗಲೇ ಗಡಿ ಭಾಗದ ವಿಮಾನ ಯಾನಗಳೆಲ್ಲ ರದ್ದು ಮಾಡಲಾಗಿತ್ತು. ನಾವು ಹೋಗುವದು ಎರಡು ದಿನ ಇರುವಾಗಲೇ ಆತಂಕ ಶುರುವಾಯಿತು. ಮೊದಲೆ ಫ್ಲೈಟ್ ಮತ್ತು ಹೊಟೆಲ್ಸ ಗಳಿಗೆಲ್ಲ ಹಣ ಪಾವತಿಸಿ ಬಿಟ್ಟಿದ್ದೆವು. ಹೊಗಲು ಆಗದು, ಹೋಗದೆ ಇರಲಾಗದು. ಆದದ್ದು ಆಗಲಿ ಎಂದು ನಿರ್ಧರಿಸಿದೆವು.
ಹೋಗುತ್ತಿರುವದು ನಾವು ನಾಲ್ವರು ಗೆಳತಿಯರು ಮಾತ್ರ.ಬರಿ ಹೆಣ್ಣಮಕ್ಕಳೆ ಹೋಗುತ್ತಿರುವದಕ್ಕೆ ಮನೆಯಲ್ಲಿ ಆತಂಕ. ಹೋಗುವ ದಿನ ಬಂದೇ ಬಿಟ್ಡಿತು. ಎರಡು ತಿಂಗಳು ಮಾಡಿದ್ದ ಪ್ಲಾನ್ ಮತ್ತು ಪಾವತಿಸಿದ ಹಣ ಎಲ್ಲಾ ವೇಸ್ಟ ಆಗುತ್ತದೆಂದು ಮನೆಯವರಿಗೆಲ್ಲ ಒಪ್ಪಿಸಿ ಸೂಟ್ ಕೇಸಗೆ ಬಟ್ಟೆ ತುಂಬಿ ನಡೆದೇ ಬಿಟ್ಟೆವು.ತಡ ಮಾಡಿದ್ರೆ ಯುದ್ದದ ಕುರಿತು ಮತ್ತೆನು ಹೋಸ ಹೋಸ ಸುದ್ದಿಗಳು ಬರುತ್ತವೊ , ಮನೆಯವರೆಲ್ಲಿ ತಡೆಯುತ್ತಾರೊ ಎಂದು ಒಂದು ದಿನ ಮೊದಲೆ ಹೈದ್ರಾಬಾದ್ ಗೆ ತೆರಳಿದೆವು.
ಅಲ್ಲಿ ಗೆಳತಿಯ ಮಗಳ ಮನೆಯಲ್ಲಿ ಉಳಿದು ಮರುದಿನ ನಸುಕಿನಲ್ಲಿ ಎರ್ಪೋಟಗೆ ಹೋದೇವು. ಮುಂಜಾನೆ ಆರಕ್ಕೆ ಇದ್ದ ಫ್ಲೈಟ್ ಯುದ್ದ ದ ಕಾರಣದಿಂದ ತಡವಾಗಿ ಬರಬಹುದು ಇಲ್ಲವೆ ಕ್ಯಾನ್ಸಲ್ ಆಗಬಹುದೆ ಎಂಬ ಲೆಕ್ಕಾಚಾರದಲ್ಲಿ ಏರ್ಪೋರ್ಟ್ ತಲುಪುವದು ತಡ ಆಯ್ತು. ಆರಕ್ಕೆ ಫ್ಲೈಟ್ ಇದ್ದರೆ ನಾವು ಹೋಗಿದ್ದು ಐದುವರೆಗೆ. ಚಿಕಿಂಗ್ ನಲ್ಲಿ ನಮ್ಮ ಲಗೇಜ್ ತಗೊಳ್ಳದೆ ಬೋರ್ಡಿಂಗ್ ಕ್ಲೋಸ್ ಆಗಿದೆ ನಿಮಗೆ ನಿಮ್ಮ ಫ್ಲೈ ಟ್ ಸಿಗಲಾರದು ಎಂದು ಹೇಳಿದರು.
ಮತ್ತೆನು ಮಾಡುವದು , ಎಷ್ಟೇ ವಿನಂತಿಸಿಕೊಂಡರು ಸಾಧ್ಯವೇ ಇಲ್ಲ ಎಂದು ಬೋರ್ಡಿಂಗ್ ಪಾಸ್ ಕೊಡಲು ನಿರಾಕರಿಸಿದರು. ಯುಧ್ದದ ಲೆಕ್ಕಾಚಾರದಲ್ಲಿ ನಮ್ಮ ವಿಮಾನ ರದ್ದಾಯಿತು.
ಚಾರ್ ಧಾಮ ಯಾತ್ರಾದ ಎಲ್ಲಾ ಹೊಟೆಲ್ ಮತ್ತು ಟಿಕೆಟ್ಗಳು ಬುಕ್ ಆಗಿತ್ತು. ಹೋಗದಿದ್ರೆ ಎಲ್ಲವೂ ಕ್ಯಾನ್ಸಲ್ ಆಗುತ್ತವೆ. ಬೇರೆ ದಾರಿ ಕಾಣದೆ ನಾಲ್ಕು ಜನ ಹೈದ್ರಾಬಾದ್ ಟು ಡೆಹ್ರಾಡೂನ್ ಗೆ ಹೋಗಲು ಮತ್ತೊಮ್ಮೆ ದುಡ್ಡುಕೊಟ್ಟು ಟಿಕೆಟ್ ಕೊಳ್ಳಬೆಕಾಯಿತು. ಏರ್ಪೋರ್ಟ್ ನಲ್ಲಿ ಪ್ರಯಾಣಕ್ಕೆ ಮುಂಚೆ ಎರಡು ಗಂಟೆ ಮೊದಲೆ ಇರಬೇಕೆಂದು ಗೊತ್ತಿದ್ರೂ , ಮೊದಲು ಬೇಕಾದಷ್ಟೂ ಸಲ ವಿಮಾನಯಾನ ಮಾಡಿದ್ರೂ ಯಾಕೋ ಈ ಸಲ ಈ ರೀತಿ ಆಯ್ತು.
ಆಗಿದ್ದು ಆಯ್ತು ಎಂದು ಹೆಚ್ಚು ಯೋಚಿಸಲು ಹೋಗದೆ ಮನೆಯವರಿಗೆಲ್ಲ ಹೇಳಿ ಬೈಸಿಕೊಳ್ಳಬಾರದೆಂದು ಮತ್ತೆ ಹಣ ಕೊಟ್ಟು ಟಿಕೆಟ್ ಪಡೆದು ಚೆಕಿಂಗ್ ಮುಗಿಸಿ ಉಸ್ ಎಂದು ಕುಳಿತೆವು
ಫ್ಲೈಟ್ ಗಾಗಿ ಕಾಯುತ್ತ.

ಬರಿ ಹೆಣ್ಣ ಮಕ್ಕಳೆ ಹೋಗತಿದ್ದಿರಿ ಎಂದು ಎಲ್ಲರೂ ಹೇಳುವಾಗ ನಮಗೆ ಎಲ್ಲಾ ಗೊತ್ತು ಮತ್ತ ಈ ಯುದ್ದ ಗಿಧ್ದಕ್ಕೆಲ್ಲ ನಾವು ಅಂಜಲ್ಲ ಎಂದು ಬಿಲ್ಡಪ್ಪ ಕೊಟ್ಟು ಬಂದ ನಮಗೆ ಏರ್ಪೋರ್ಟ್ ನಲ್ಲೆ ಬಿಸಿ ತಟ್ಟಿ ನಮ್ಮ ಟೂರ್ ಆಸಕ್ತಿ ಕಡಿಮೆ ಆಗಿ ಅಲ್ಲಿವರೆಗೆ ನಾವೆ ಜಾಣರು ಎಂದು ಬೀಗತಿದ್ದವರು ಮಂಕಾದೆವು.
ಹೈದ್ರಾಬಾದ್ ನಿಂದ ಡೆಹರಾಡೂನ್ ತಲುಪಲು ಮಧ್ಯಾನ್ಹ ಹನ್ನರಡಾಗಿತ್ತು.ಅವತ್ತಿನ ನಮ್ಮ ವಾಸ್ತವ್ಯ ಅಲ್ಲಿಂದ ಎರಡನೂರ ಕಿ ಮಿ ದೂರ ಬಾರ್ಕೋಟ್ ನಲ್ಲಿ. ಅಲ್ಲಿಗೆ ತಲುಪಲು ರಾತ್ರಿ ಹತ್ತಾಯಿತು.ಅದೆಷ್ಟು ಗುಡ್ಡಗಳು ಸುತ್ತಿದೇವೋ , ಎಷ್ಡು ಪ್ರಯಾಣಿಸಿದರೂ ಅದೇ ಗುಡ್ಡಗಳಲ್ಲಿ ಸುತ್ತು ಹೊಡೆಯುತ್ತಿರುವೆವು ಅನಿಸುತಿತ್ತು.ಪಕೃತಿಯ ವೀಕ್ಷಣೆ ಮಾಡಿ ಮಾಡಿ ಕಣ್ಣು ನೋಯತೊಡಗಿದೆವು.ಕೊನೆಗೂ ನಮ್ಮ ವಾಸ್ತವ್ಯ ತಲುಪಿ ಊಟ ಮಾಡಿ ಉಸ್ ಅಂತ ನಿಟ್ಟುಸಿರು ಬಿಡುವಂತಾಯಿತು.
ರಾತ್ರಿ ಅಲ್ಲಿ ಚಳಿ ಹತ್ತು ಡಿಗ್ರಿ. ನಲವತ್ತು ಡಿಗ್ರಿಯಿಂದ ಒಮ್ಮೆಲೆ ಹತ್ತು ಡಿಗ್ರಿ ಚಳಿಗೆ ಗದಗುಡತೊಡಗಿದೆವು. ಕೈಕಾಲೆಲ್ಲ ಮರಗಟ್ಟಿ ಹಲ್ಲು ಕಟಕಟ ಅನ್ನತೊಡಗಿದೆವು. ಇಷ್ಟು ಚಳಿ ಎಂದೂ ಕಾಣದ ನಾವು ಕಂಗಾಲಾಗಿ ನಮ್ಮ ಹತ್ತು ದಿನಗಳ ಟೂರ್ ಎಲ್ಲಾ ಈ ಚಳಿಯಲ್ಲೆ ಹೇಗೆ ಮುಗಿಸಬೇಕು ಎಂಬ ಚಿಂತೆ ಶುರುವಾಯಿತು. ಚಳಿ ತಾಳದೆ ರೂಮ್ ಹೀಟರ್ ತರಿಸಿಕೊಂಡು ಸ್ವಲ್ಪ ಬೆಚ್ಚಗಾದ ಮೇಲೆ ಹೋದ ಉಸಿರು ಬಂದದ್ದು.
ಎರಡನೇ ದಿನ :
ಚಾರ್ ಧಾಮಗಳಲ್ಲಿ ಒಂದಾದ ಯಮುನೋತ್ರಿ ಮಂದಿರಕ್ಕೆ ಎಲ್ಲರೂ ಕಾಲ್ನಡಿಗೆಯಲ್ಲಿ ಹೋಗಲು ನಿರ್ಧರಿಸಿದೆವು. ನನಗೆ ಕಾಲು ನೋವು ಇದ್ದದ್ದರಿಂದ ಪಿಟ್ಟು ( ಬಾಸ್ಕೆಟ್ ರೀತಿಯ ಒಂದು ಬುಟ್ಟಿ) ನಲ್ಲಿ ಹೋಗಲು ನಿರ್ಧರಿಸಿದೆ. ಒಬ್ಬರ ಬೆನ್ನ ಮೇಲೆ ಭಾರ ಹಾಕಲು ಮನಸ್ಸು ಒಪ್ಪದಿದ್ರೂ ಅದು ಅವರ ಕಸುಬು ಎಂದು ಅರಿತು ಚೌಕಾಶಿ ಮಾಡದೆ ಅವರು ಕೇಳಿದಷ್ಟು ಕೊಡಲು ಒಪ್ಪಿ ಪಿಟ್ಟು ನಲ್ಲಿ ಕುಳಿತೆ.ನನ್ನನ್ನು ಬೆನ್ನ ಮೇಲೆ ಹೇರಿಕೊಂಡು ಅವರು ನಡೆಯ ತೊಡಗಿದರು.ಚಾರಣದ ಏರು ದಾರಿಯಲ್ಲಿ ಭಾರ ಹೊತ್ತು ನಡೆಯುವ ಗುಡ್ಡಗಾಡು ಜನರ ದೈಹಿಕ ಸಾಮರ್ಥ್ಯ ಆಶ್ಚರ್ಯ ಚಕಿತವಾಗಿಸುತ್ತದೆ.
ಡೋಲಿ, ಪಿಟ್ಟು , ಕುದುರೆ ಸವಾರಿ ಎಲ್ಲವೂ ಯಾತ್ರಿಗಳು ದರ್ಶನಕ್ಕೆ ಕರೆದೊಯ್ಯುವ ಸಾಧನಗಳು.ಮತ್ತು ಗುಡ್ಡಗಾಡು ಜನರ ಮುಖ್ಯ ಕಸುಬು. ಯಮುನೋತ್ರಿಗೆ ಹೊಗುವ ಏಳು ಕಿ ಮಿ ಮೆಟ್ಟಿಲುಗಳಿಂದ ಕೂಡಿದ ಏರು ಹಾದಿ.ಇಕ್ಕಟ್ಟಾದ ದಾರಿಯಲ್ಲಿ ಕುದರೆಗಳು , ಪಿಟ್ಟುಗಳು , ಡೋಲಿಗಳು , ಪಾದಚಾರಿಗಳೆಲ್ಲ ಸಾಗಬೇಕು.ನೂಕುನುಗ್ಗಲು.

ನನಗೆ ಪಿಟ್ಟುನಲ್ಲಿ ಕಾಲು ಇಳಿಬಿಟ್ಟು ಕುಳಿತು ಮೊಳಕಾಲು ಮತ್ತಷ್ಟು ನೋಯತೊಡಗಿತು. ಇದಕ್ಕಿಂತ ನಡೆಯುವದೆ ಉತ್ತಮ ಎಂದು ಗೆಳತಿಯರ ಜೊತೆಯಾದೆ. ಮಳೆ ಚಳಿ , ರೇನ್ ಕೋಟ್ ಹಾಕ್ಕೊಂಡು ಕೈಯಲ್ಲೊಂದು ಉರುಗೋಲು ಹಿಡಿದು ಎದುಸಿರು ಬಿಡುತ್ತ ಹೆಜ್ಜೆ ಇಡತೊಡಗಿದೆವು. ಏಳು ಕಿ ಮಿ ಮುಗಿಯುವ ಮಾತೆ ಇಲ್ಲ. ನಡೆದಷ್ಟು ತಿರುವುಗಳು , ಏರಿದಷ್ಟು ಎತ್ತರ ಎತ್ತರ. ಇಷ್ಟು ಹೈರಾಣ ಆಗಿ ಜನ ಯಾಕೆ ಬರುತ್ತಾರೋ ಎಂದು ನಾವು ಬಂದ ಕಾರಣ ಮರೆತು ಜನರ ಲೆಕ್ಕಾಚಾರದಲ್ಲಿ ತೊಡಗಿ ದಾರಿ ಸವೆಸಿ ಆರು ಗಂಟೆಯ ಚಾರಣ ಮುಗಿಸಿ ದೇವಸ್ಥಾನ ತಲುಪಿದೆವು.ಅಲ್ಲೂ ನೂಕುನುಗ್ಗಲು. ನನಗಂತೂ ಎಲ್ಲಿ ಕಾಲ್ತುಳಿತ ಸಂಭವಿಸುತ್ತದೋ ಎಂದು ಭಯ. ಗೊತ್ತಿದ್ರೂ ಮತ್ತೆ ಇಂತಹ ರಶ್ ನಲ್ಲಿ ಬರುವ ನಮ್ಮ ಹಂಬಲಕ್ಕೆ ಕೊನೆಯಂತೂ ಇಲ್ವೆ ಇಲ್ಲ.
ಅಲ್ಲಿ ಬಿಸಿ ನೀರಿನ ಕೊಳ ಗೌರಿಕುಂಡ ಎಂದು.ಅದರಲ್ಲೆಲ್ಲ ಜನ ಸ್ನಾನ ಮಾಡುತಿದ್ದರು.ಪುಣ್ಯ ಸ್ನಾನ ಮಾಡಿ ಉಟ್ಟ ಬಟ್ಟೆಗಳನ್ನು ನದಿಯಲ್ಲಿ ಬಿಟ್ಟು ನದಿಯನ್ನು ಮಲಿನ ಗೊಳಿಸಿ ಪುಣ್ಯ ಪಡೆದ ಧನ್ಯತೆಯಲ್ಲಿ ಗಡಿಬಿಡಿಯಿಂದ ಓಡಾಡುತಿದ್ದರು. ಅಲ್ಲಿ ಭೂಮಿಯಲ್ಲಿರುವ ಫಾಸ್ಫೇಟ್ ಅಂಶ ನೀರಿನೊಂದಿಗೆ ಬೆರೆತು ಭೂಮಿಯಾಳದ ನೀರಿನ ಒರತೆಗಳು ಬಿಸಿಯಾಗಿ ಮೇಲೆ ಬರುತ್ತವೆ. ಈ ಹಬೆಯಾಡುವ ನೀರಿನಲ್ಲಿ ಮೀಯುವದರಿಂದ ಚರ್ಮರೋಗ ನಿವಾರಣೆ ಯಾಗುತ್ತದೆ ಎಂಬ ಒಂದು ವೈಜ್ಞಾನಿಕ ಕಾರಣವೂ ಇದೆ.
ಮೇಲೆ ಏರಿ ಈಗ ಇಳಿಯುವ ಸಾಹಸ. ಮಳೆ ಜಾರುವ ನೆಲ.ಕೈಯಲ್ಲಿ ಉರುಗೋಲು ಹಿಡಿದು ಎಚ್ಚರಿಕೆಯಿಂದ ಒಂದೋಂದೆ ಹೆಜ್ಜೆ ಇಡುತ್ತ ಯಾವಾಗ ಮುಗಿತದಪ್ಪ ಇದು ಅನಿಸಿತು.
ಆಯಾಸ ದಿಂದ ಕಾಲುಗಳು ಮಾತಾಡತೊಡಗಿದವು. ಬರಿ ಏಳು ಕಿ ಮಿ ಅನ್ನಲಷ್ಟೆ. ಗುಡ್ಡ ಕಡಿದು ಮಾಡಿದ ರಸ್ತೆಯಲ್ಲಿ ಎದುಸಿರು ಬಿಡುತ್ತ ಹೆಜ್ಜೆಹಾಕುವದೆಂದರೆ ಅಂತರಿಕ್ಷದಲ್ಲಿ ನಡೆದಂತೆ ಅನಿಸುತಿತ್ತು.
ಅಂತೂ ಏಳು ಕಿ ಮಿ ಚಾರಣ ಮಳೆ ಚಳಿಯಲ್ಲೆ ಮುಗಿಸಿ ಮತ್ತೆ ಹೋದಷ್ಟೆ ದಾರಿ ಇಳಿದು ಬಂದೆವು.ಹೋಗುವಾಗ ಇದ್ದ ಉತ್ಸಾಹ ಯಾರ ಮುಖದಲ್ಲೂ ಇರಲಿಲ್ಲ್ಲ.ಎಲ್ಲರ ಮುಖ ಒಣಗಿದ ಸಂಡಿಗೆ ಆಗಿದ್ದೆವು.ರೂಮ್ ಗೆ ಬಂದ ಮೇಲೆ ನಡುಗುವ ಚಳಿ ತಾಳದೆ ರೂಮ್ ಹಿಟರ್ ತರಿಸಿ ಕಾಸಿಕೊಂಡ ಮೇಲೆ ಸಮಾಧಾನ ಆಗಿದ್ದು.
ನಮ್ಮ ಕಡೆ ಬಿಸಿಲಿಗೆ ಬೈಯುತ್ತ ಚಳಿಗಾಗಿ ಪರಿತಪಿಸುವ ನಾವು ಒಂದಿಷ್ಟು ಹೆಚ್ಚು ಚಳಿಯು ತಡೆದುಕೊಳ್ಳಲಾರೆವು.
ಮೂರನೇ ದಿನ
ಬಾರ್ಕೊಟ್ನಿಂದ ಉತ್ತರ ಕಾಶಿಯತ್ತ ಪ್ರಯಾಣ. ಮತ್ತೆ ನೂರೈವತ್ತು ಕಿ ಮಿ ಪ್ರಯಾಣ.ಇವತ್ತು ಬರಿ ಪ್ರಯಾಣ ಅಷ್ಟೆ.ದಾರಿಯಲ್ಲಿ ಬಿಸಿಲು.ನಿನ್ನಿನ ಚಳಿ ಬರಿ ನೆನಪು.ಉತ್ತರ ಕಾಶಿ ತಲುಪಿ ಕಾದಿಟ್ಟ ಹೋಟೇಲ್ ತಲುಪಿ ಅಲ್ಲೆ ಸುತ್ತಲೂ ಓಡಾಡಿ ದಿನ ಕಳೆದೆವು.
ನಾಲ್ಕನೇ ದಿನ
ಗಂಗೋತ್ರಿಗೆ ಪ್ರಯಾಣ. ಬೆಳಗ್ಗೆ ಆರಕ್ಕೆ ಹೊಟೇಲ್ ನವರು ಕಟ್ಟಿಕೊಟ್ಟ ಅವಲಕ್ಕಿ ಒಗ್ಗರಣೆ ತೆಗೆದುಕೊಂಡು ಪ್ರಯಾಣಕ್ಕೆ ತೊಡಗಿದೆವು.ಒಂದು ಗಂಟೆಯ ಪ್ರಯಾಣ ನಂತರ ತಿಂಡಿ ತಿನ್ನಲು ಅವಲಕ್ಕಿ ಪೊಟ್ಟಣ ಬಿಚ್ಚಿದರೆ ಅವು ಒಳಗೆ ಗಟ್ಟಿಯಾಗಿ ತಣ್ಣಗೆ ಕುಳಿತಿದ್ದವು.ಹಾಗೂ ಹೀಗೂ ತಿಂಡಿ ಶಾಸ್ತ್ರ ಮುಗಿಸಿ ಎರಡ್ಮೂರು ಗಂಟೆ ಪ್ರಯಾಣ ಮುಗಿಸಿ ಗಂಗೋತ್ರಿ ತಲುಪಿದೆವು.ಪ್ರಯಾಣದ ಉದ್ದಕ್ಕೂ ಸುಂದರ ಪ್ರಕೃತಿ ಮನಸ್ಸಿಗೆ ಮುದ ನಿಡಿತ್ತು. ಗಂಗೋತ್ರಿಯ ದೇವಿಯ ದರ್ಶನ ಕ್ಕೆ ಆಗಲೆ ದೊಡ್ಡ ಕ್ಯೂ .ನಾವು ಅದರಲ್ಲಿ ಸೇರಿಕೊಂಡು ಹಿಮಾಲಯ ಶ್ರೇಣಿಗಳಿಂದ ಹರಿದು ಗಂಗೆ ಹೆಸರು ಪಡೆದ ನದಿಯನ್ನು ನೋಡುತ್ತ ನಿಂತೆವು. ಅಲ್ಲಿನ ಸುತ್ತಲಿನ ಬೆಟ್ಟಗಳಿಂದ ಜಿನಗುವ ನೀರ ಧಾರೆ ಬೇರೆ ಬೇರೆ ಹೆಸರಿನ ಚಿಕ್ಕಚಿಕ್ಕ ನದಿಗಳೆಲ್ಲ ಗಂಗಾ ನದಿಯಲ್ಲಿ ಸೇರಿ ಅದು ಉದ್ದಕ್ಕೂ ವಿಶಾಲವಾಗಿ ಹರಿಯುತ್ತ ಅನೇಕ ರಾಜ್ಯ ಗಳ ಮೂಲಕ ಹಾದು ಹೋಗುತ್ತದೆ.
ಗುಡಿಯಲ್ಲಿರುವ ಗಂಗೆಯ ರೂಪದ ದರ್ಶನ ಕ್ಕೆ ಕ್ಯೂ ನಲ್ಲಿ ಅದೆಷ್ಟೋ ಜನ , ಮಕ್ಕಳು ವಯಸ್ಸಾದವರು ಅಸಹಾಯಕತೆಯಿಂದ ದೇವರ ದರ್ಶನ ಕ್ಕೆ ಕಾಯುವದು ನೋಡಿ ನಮ್ಮ ಜನರ ಮುಗ್ದ ಭಕ್ತಿಗೆ ವಿಷಾದವಾಯಿತು.

ನಮಗೆ ಫ್ಲೈಟ್ ನಲ್ಲಿ ಒಬ್ಬರು ಕೇಳಿದರು , ಚಾರ್ ಧಾಮ್ ಯಾತ್ರೆ ಎಪ್ಪತ್ತು ಹೆಂಬತ್ತು ವಯಸ್ಸಾದವ್ರು ಮಾಡ್ತಾರೆ , ನೀವೇನು ಇಷ್ಟು ಬೇಗ ಯಾತ್ರೆ ಮಾಡಲು ಬರತಿದ್ದಿರಿ ಎಂದು.
ನಾವು ಹೋಗತಿರೋದು ಪ್ರವಾಸಕ್ಕೆ , ಯಾತ್ರೆಗಲ್ಲ.ನಮ್ಮ ದೇಶ ಧಾರ್ಮಿಕ ನಂಬಿಕೆ ಉಳ್ಳದ್ದು. ಧಾರ್ಮಿಕ ಕ್ಷೇತ್ರಗಳೆಲ್ಲ ಒಂದೋಂದು ದೇವರ ಹೆಸರಿನಿಂದ ಪ್ರಸಿದ್ದ. ಪ್ರಸಿದ್ದ ಸ್ಥಳ ನೋಡುವ ಹಂಬಲ ಎಲ್ಲರಿಗೂ ಇರುತ್ತದೆ. ದಕ್ಷಿಣದವರಾದ ನಮಗೆ ಉತ್ತರದ ಗುಡ್ಡಗಾಡು , ಹಿಮ , ಚಳಿಯ ಬಗ್ಗೆ ಆಸಕ್ತಿ.
ಈಗ ಪ್ರವಾಸ ಮಾಡಲು ಯಾವದೇ ವಯಸ್ಸಿನ ಲೆಕ್ಕಾಚಾರವಿಲ್ಲ. ಹುಟ್ಟಿದ ಮಗುವಿನಿಂದ ನೂರು ವರ್ಷಗಳ ವರೆಗಿನವರು ಪ್ರವಾಸ ಮಾಡಲು ಅನುಕೂಲಗಳಿವೆ. ನಾವು ಕೂಡ ಈ ಬೇಸಿಗೆಯಲ್ಲಿ ಪ್ರವಾಸ ಮಾಡಲು ತಣ್ಣನೆ ಪ್ರದೇಶದ ಹುಡುಕಾಟದಲ್ಲಿ ಇದ್ದಾಗ ಹೊಳೆದದ್ದು ಉತ್ತಾರಾಂಚಲದ ಪ್ರಸಿದ್ದ ಚಾರ್ ಧಾಮಗಳ ದರ್ಶನ ಗಳೊಂದಿಗೆ ಪ್ರಕೃತಿ ಯ ಸೌಂದರ್ಯ ಸವಿಯುವ ಆಸಕ್ತಿ ಅಷ್ಟೆ.
ಆದರೆ ಮೋಕ್ಷದ ಹಂಬಲದಿಂದ ವಯಸ್ಸಾದವರು ಕಷ್ಟ ಪಟ್ಟು ಈ ಪ್ರದೇಶಗಳಿಗೆ ಬರುವದು ತೊಂದರೆ ಮೈಮೇಲೆ ಎಳೆದುಕೊಂಡತೆ. ಎಕೆಂದರೆ ಇಲ್ಲಿ ಅತೀ ಚಳಿ , ಮಳೆ ,ಹಿಮಪಾತ ನಿರಂತರ ಇರುತ್ತದೆ. ನಾವು ದರ್ಶನ ಕ್ಕೆ ಲೈನ್ ನಿಂತಷ್ಟು ಹೊತ್ತು ತಣ್ಣನೆ ಶೀತ ಗಾಳಿ ಮೈ ಕೊರೆಯುತಿತ್ತು.ಮತ್ತೆ ಮಳೆಯು ಸುರಿಯಿತು. ಪ್ರಕೃತಿ ಯ ಸೌಂದರ್ಯ ನೋಡುತ್ತ ನಿಂತ ನಮಗೆ ಇದಾವದು ಅಷ್ಟು ಭಾದಿಸಲಿಲ್ಲ.ದೇವರ ದರ್ಶನ ಕ್ಕೆ ಬಂದ ವಯಸ್ಸಾದ ವರು, ಮತ್ತು ಮಕ್ಕಳೊಂದಿಗೆ ಬಂದವರು ಹವಾಮಾನ ವೈಪರೀತ್ಯದಿಂದ ಮೂರು ಗಂಟೆ ಸರತಿಯ ಲ್ಲಿ ನಿಂತು ಕಾಯುವದು ನೋಡಿ ಮನಸ್ಸೆಕೋ ಕಸಿವಿಸಿಗೊಂಡಿತು.
ನಾವು ದರ್ಶನ ಮುಗಿಸಿ ನಡುಗುತ್ತ ವಾಪಸ್ಸು ಬಂದು ನಮ್ಮ ಕಾರಲ್ಲಿ ಕುಳಿತು ಚಾಲಕನಿಗೆ ಸ್ವಲ್ಪ ಬಿಸಿ ಗಾಳಿ ಆನ್ ಮಾಡಲು ಹೇಳಿ ಯಪ್ಪಾ ಎಷ್ಟ ಚಳಿ ಅನ್ನಕೊಂತ ಕುಳಿತೆವು.ಮತ್ತೆ ಗುಡ್ಡಗಳ ನಡುವಿನಿಂದ ವಾಪಸ್ ನಮ್ಮ ಹೋಟೆಲ್ ನತ್ತ ತೆರಳಿದೆವು.
ಐದನೇ ದಿನ
ನಮ್ಮ ಪ್ರಯಾಣ ರುದ್ರಪ್ರಯಾಗ ಜಿಲ್ಲೆಗೆ, ಅಲ್ಲಿಂದ ಕೇದಾರನಾಥ ಗೆ ಹೋಗಲು ನಮ್ಮ ಆವತ್ತಿನ ವಸತಿ ಗುಪ್ತಕಾಶಿಯ ಒಂದು ರೆಸಾರ್ಟ್ ನಲ್ಲಿ. ಬೆಳಿಗ್ಗೆ ಬರುವಾಗ ದಾರಿಯಲ್ಲಿ ಜೋರು ಬಿಸಿಲು. ಸಂಜೆ ಮಳೆಶುರುವಾಗಿ ಉಷ್ಣತೆ ಒಮ್ಮೆಲೆ ಕುಸಿಯಿತು. ಹೋಟೆಲ್ ರೂಮ್ ನಲ್ಲಿ ಜರ್ಕಿನ್ ಟೋಪಿ ಸಾಕ್ಸ್ ಗ್ಲೌವ್ಸ ಹಾಕ್ಕೊಂಡು ಕೊಕ್ಕರೆಯಂತೆ ಕುಳಿತೆವು. ಇಲ್ಲೆ ಇಷ್ಟು ಚಳಿ ಇನ್ನೂ ಕೇದಾರನಾಥ ಧಾಮದಲ್ಲಿ ಅದೇಷ್ಡಿರಬಹುದು ಎಂಬ ಚಿಂತೆ ಶುರುವಾಯಿತು. ನಮ್ಮ ಹೆಲಿಕಾಪ್ಟರ್ ಟಿಕೆಟ್ ಕನ್ಫರ್ಮ ಆಗಲಿಲ್ಲ , ಮತ್ತೆ ಕುದರೆ ಅಥವಾ ಡೋಲಿನೆ ಗತಿ.ಯಮುನೋತ್ರಿ ಯ ಚಾರಣದ ಹೈರಾಣವೆ ಇನ್ನೂ ಮಾಸಿಲ್ಲ. ಈಗ ಮತ್ತೊಂದಕ್ಕೆ ತಯ್ಯಾರಾಗಬೇಕು.ಇಲ್ಲಿನ ಚಳಿಗೆ ನೆಗಡಿ ,ಗಂಟಲಿನಲ್ಲಿ ಕಿರಿಕಿರಿ , ಸುರಿಯುವ ಮೂಗು ಇದನ್ನೆಲ್ಲ ಮನೆಯವರು ಫೋನ್ ಮಾಡಿದಾಗ ಹೇಳಿದಾಗ ಟೂರ್ ಟೂರ್ ಅಂತ ಸದಾ ಕುಣಿತಿರ್ತಿಯಾ , ಈಗ ಅನುಭವಿಸು ಎಂಬ ಉತ್ತರ.ಅದರಲ್ಲೂ ನಾವು ಬಂದಿದ್ದು ನಾಲ್ಕು ಗೆಳತಿಯರು , ಊರಲ್ಲೆಲ್ಲ ಬರೀ ನಾಲ್ಕು ಹೆಣ್ಣಮಕ್ಳೆ ಟೂರ್ ಹೊಗ್ಯಾರಂತ ಅಂತ ಸುದ್ದಿ. ಆರಾಮಾಗಿ ಟೂರ್ ಮುಗಿಲಪ್ಪ ಅಂದುಕೊಳ್ಳತ್ತ ಮರುದಿನದ ಪ್ರಯಾಣಕ್ಕೆ ತಯ್ಯಾರಾಗತಿದ್ದೆವು.

ಆರನೇ ದಿನ
ನಮ್ಮ ಡ್ರೈವ್ ರ ಮದ್ಯ ರಾತ್ರಿ ಎರಡಕ್ಕೆ ಕೇದಾರನಾಥ ಕ್ಕೆ ಹೋಗಲು ಪ್ರಯಾಣ ಶುರು ಮಾಡುವದು ಎಂದು ಹೇಳಿದ. ನಾವೆಲ್ಲರೂ ಮಲಗುವದೆ ರಾತ್ರಿ ಒಂದು ಗಂಟೆಗೆ , ಮತ್ತೆ ಎರಡಕ್ಕೆ ಎದ್ದು ರೆಡಿ ಆಗುವದು ಹೇಗೆ ಎಂಬ ಚಿಂತೆಯಲ್ಲಿ ರಾತ್ರಿ ಬೇಗ ಮಲಗಲು ಪ್ರಯತ್ನ ಪಟ್ಟು ಇತ್ತ ಮಲಗಲು ಆಗದೆ ಅತ್ತ ಕೂಡಲು ಆಗದೆ ಮದ್ಯ ರಾತ್ರಿ ಸರಿದು ಸ್ವಲ್ಪ ಹೊತ್ತಿನ ನಂತರ ಜೊಂಪು ಹತ್ತಿ ಮೂರು ಗಂಟೆಗೆ ಧಡಕ್ಕನೆ ಎದ್ದು ರೆಡಿ ಆಗಿ ನಾಲ್ಕು ಗಂಟೆಗೆ ಕಾರಲ್ಲಿ ಕುಳಿತೆವು.
ಕೇದಾರನಾಥ ಕ್ಕೆ ಹೋಗುವದು ಬಹಳ ಸಾಹಸದ ಪ್ರಯಾಣ.ಹೆಲಿಕಾಪ್ಟರ್ ನಲ್ಲಿ ಹೋಗಿ ಬರಲು ಅಷ್ಟು ಸಾಹಸ ಪಡಬೇಕಿಲ್ಲ. ಮೂರು ತಿಂಗಳ ಮೊದಲೆ ಪ್ರವಾಸ ಸಿದ್ದಪಡಿಸಿದೂ ನಮಗೆ ಹೆಲಿಕಾಪ್ಟರ್ ಟಿಕೆಟ್ ಸಿಕ್ಕಿರಲಿಲ್ಲ.ಇನ್ನೇನು ಮಾಡುವದು , ಕುದರೆ ಇಲ್ಲ ಡೋಲಿ, ಸೋನ್ ಪ್ರಯಾಗ ದಿಂದ ಗೌರಿ ಕುಂಡದವರೆಗೆ ವಾಹನದಲ್ಲಿ ಹೋಗಿ ಅಲ್ಲಿ ಡೋಲಿಗಾಗಿ ಪ್ರಯತ್ನಿಸಿದರೆ ಎಲ್ಲವೂ ಸೊಲ್ಡೌಟ್ . ಅಷ್ಡು ರಶ್ ಇತ್ತು.ಹೋಗುವವರು ಮೊದಲೆ ಬುಕ್ ಮಾಡಿಕೊಳ್ಳಬೇಕಂತೆ. ಕೊನೆಗೆ ಉಳಿದದ್ದು ಕುದರೆ ಸವಾರಿ , ಪಿಟ್ಟು ಬಾಸ್ಕೆಟ್ ಇದ್ವು.ಆದ್ರೆ ಅದರ ಪ್ರಯಾಣ ಕಷ್ಡ. ಕುದರೆಯದ್ದು ಕಷ್ಟನೆ , ಆದ್ರೆ ಇದು ಬೇಗ ತಲುಪುತ್ತೆ.ನಾವು ನಾಲ್ಕು ಜನ ಕುದುರೆ ಸವಾರಿಗೆ ತೊಡಗಿದೆವು.ಗೌರಿಕುಂಡದಿಂದ ಇಪ್ಪತ್ತು ಕಿ ಮಿ ಪ್ರಯಾಣ. ಕಿರಿದಾದ ರಸ್ತೆ , ಅವ್ಯವಸ್ಥೆ. ವಾಸನೆ , ಗಲೀಜು . ಸ್ವಚ್ಚಗೊಳಿಸುವ ಪ್ರಯತ್ನ ವೆಲ್ಲ ಅಲ್ಲಿ ವಿಫಲ.ಗಂಡಸರೆಲ್ಲ ರಸ್ತೆಯ ಇಕ್ಕೆಲಗಳಲ್ಲೆ ಮೂತ್ರ ವಿಸರ್ಜಿಸುತಿದ್ದರು .ಚಾರ್ ಧಾಮ್ ಗಳ ಪ್ರದೇಶದಲ್ಲಿ ಕುಡಿಯುವ ನೀರಿಗೆ ಸ್ಥಳಿಯರು ಗುಡ್ಡಗಳಿಂದ ಜಿನಗುವ ನೀರನ್ನೆ ಬಳಸುತ್ತಾರೆ.ಈ ರೀತಿ ಪರಿಸರ ಅನರೈಮಲ್ಯ ಗೊಳಿಸುವದು ಅಲ್ಲಿನ ಮೂಲ ನಿವಾಸಿಗಳಿಗೆ ತೊಂದರೆ ಕೊಟ್ಟಂತೆ ಸರಿ. ಶೌಚಾಲಯ ವ್ಯವಸ್ಥೆ ಗಳಿವೆ.ಆದರೆ ವಿಪರೀತ ಪ್ರವಾಸಿಗರಿರುವದರಿಂದ ಅವು ಸಾಕಾಗಲ್ಲ.
ನಾವು ಹೋದಾಗಲಂತೂ ಕೇದಾರಕ್ಕೆ ಹೋಗುವ ರಸ್ತೆ ಕಾಲ್ನಡಿಗೆಯವರು , ಕುದರೆ ಸವಾರರು , ಪಿಟ್ಟು ಸವಾರರು , ಡೋಲಿ ಸವಾರರಿಂದ ತುಂಬಿ ಒಬ್ಬರಿಗೊಬ್ಬರು ತಳ್ಳಿ ನಡೆಯಬೇಕಾಗಿತ್ತು , ಅಷ್ಟೊಂದು ರಶ್.

ನಾವು ಇಪ್ಪತ್ತು ಕಿ ಮಿ ಕುದುರೆ ಸವಾರಿ ಮುಗಿಸಿ ಕೇದಾರನಾಥ ಧಾಮ ತಲುಪಿದ್ದೆವು.ನಮ್ಮ ಮೈಕೈ ಎಲ್ಲ ಕುದರೆ ಸವಾರಿಯಿಂದ ನುಗ್ಗು ನುಗ್ಗಾಗಿತ್ತು.ದೇವರ ದರ್ಶನಕ್ಕೆ ದೊಡ್ಡ ಸಾಲು , ನಾವು ಹೋಗಿ ಸೇರಿದೆವು.ಮೂರು ಗಂಟೆ ಸರದಿಯಲ್ಲಿ ನಿಂತು ದೇವರ ದರ್ಶನ ಮಾಡಿ ನಮಗಾಗಿ ಕಾದಿರಿಸಿದ ರೂಂ ಗೆ ಹೋದೆವು. ಮುಂಜಾನೆಯಿಂದ ಚನ್ನಾಗಿದ್ದ ತಾಪಮಾನ ಒಮ್ಮೆಲೆ ಕುಸಿಯಿತು. ಚಳಿ ಚಳಿ, ಹಾಸುವ ಹೊದೆಯುವ ವಸ್ತ್ರ ಗಳೆಲ್ಲ ತಣ್ಣಗೆ ಕೊರೆಯುತಿದ್ದವು , ನಮಗೆ ಮೂಗಲ್ಲಿ ನೀರು ಸುರಿಯತೊಡಗಿತು.ಕಿವಿ ಗಡಚಿಕ್ಕಿದವು. ತಲೆ ನೋಯತೊಡಗಿತು.ಅಲ್ಲಿನ ಕಡಿಮೆ ಗಾಳಿಯ ಒತ್ತಡದಿಂದ ಆಯಾಸ. ಎಲ್ಲಕ್ಕಿಂತ ಹೆಚ್ಚಾಗಿ ತಾಳದ ಚಳಿ.ಅಲ್ಲಿ ಎಲ್ಲವೂ ತುಟ್ಟಿ.ನೀರು ಒಂದು ಬಾಟ್ಲಿಗೆ ನೂರು ರೂ.ಅವರಾದರು ಏನು ಮಾಡುತ್ತಾರೆ ಪಾಪ. ಕೆಳಗಿನಿಂದ ಅಷ್ಟು ಭಾರ ಹೊತ್ತು ತಂದು ಮಾರಬೇಕು.ಇರುವ ನಾಲ್ಕಾರು ತಿಂಗಳಲ್ಲಿ ಜುಲೈನಲ್ಲಿ ಅಧಿಕ ಮಳೆ ಇರುವದರಿಂದ ಯಾತ್ರೆ ರದ್ದು ಮಾಡುತ್ತಾತೆ.ಉಳಿದ ನಾಲ್ಕು ತಿಂಗಳಲ್ಲಿ ಅವರು ವರ್ಷಕ್ಕಾಗುವಷ್ಟು ದುಡಿದು ಉಳಿಸಿಕೊಳ್ಳಬೇಕು.ಅಲ್ಲಿನ ಜನರ ಜೀವನ ಬಹಳ ಕಷ್ಟ. ಪ್ರವಾಸೊದ್ಯಮ ಬಟ್ರೆ ಅವರಿಗೆ ಬೇರೆ ಆದಾಯ ಇಲ್ಲ.
ನಡುಗುತ್ತ ರಾತ್ರಿ ಅದೇಗೆ ಕಳೆದೆವೋ. ಮರುದಿನ ಬೆಳಿಗ್ಗೆ ವಾಪಸ್ಸ ಕೆಳಗೆ ಹೋಗಬೇಕು.ಕೇದಾರನಾಥ ಮಂದಿರದ ಆವರಣ ಬಹಳ ಸುಂದರವಾಗಿಧೆ. ಗುಡಿಯ ಹಿಂದೆ ಹಿಮಚ್ಚಾದಿತ ಪರ್ವತಗಳು. ನೋಡಿದಷ್ಡು ತಣಿಯದ ಸೌಂದರ್ಯ. ಎಷ್ಟು ರಮಣೀಯವೋ ಅಷ್ಟೇ ರೌದ್ರತೆ. ಎರಡೂಸಾವಿರದ ಹದಿಮೂರನೆ ಇಸ್ವಿಯಲ್ಲಿ ಆದ ಕೇದಾರನಾಥ ಪ್ರವಾಹದ ನೆನಪು ಭೀಕರ.ಅಲ್ಲಿ ಮಳೆಗಾಲದಲ್ಲಿ ಆಗುವ ಅವಗಡಗಳ ಅರಿವಿದ್ದರೂ ಜನ ಮತ್ತೆ ಮತ್ತೆ ಇಂತಹ ಪ್ರದೇಶಗಳಿಗೆ ಭೆಟಿಕೊಡುವದು ವಿಶ್ವಾಸದಿಂದ , ದೇವರು ಎಂಬ ವಿಶ್ವಾಸ ದಿಂದ. ಪ್ರವಾಸದ ಹಂಬಲದಿಂದ.
ಪ್ರವಾಸಿಗರು ಹೆಚ್ಚಾದಷ್ಟು ಅವರಿಗೆ ಒದಗಿಸಲು ಸೌಲಭ್ಯ ಗಳು ಹೆಚ್ಚಿಸಬೇಕು.ಇದರಿಂದ ಗುಡ್ಡಗಾಡುಗಳ ಪರಿಸರದ ಮೇಲೆ ದುಷ್ಪರಿಣಾಮ ಬೀರದೆ ಇರದು.
ಏಳನೇ ದಿನ
ಬೇಗ ಎದ್ದು ವಾಪಸು ಕೆಳಗೆ ಯಾವಾಗ ಬರುತ್ತೆವೋ ಎಂದು ಗಡಿಬಿಡಿಯಿಂದ ಕುದುರೆಗಳು ಇರುವಲ್ಲಿ ಬಂದೆವು.ಚಳಿ ತಾಳದೆ ಅಲ್ಲಿಂದ ಯಾವಾಗ ಓಡಿ ಬರಬೇಕು ಅನಿಸುತಿತ್ತು. ಎಷ್ಟೋ ಜನ ಟೆಂಟ್ ಗಳಲ್ಲಿ ರಾತ್ರಿ ಕಳೆದರು , ಕಾಲ್ನಡಿಗೆ ಚಾರಣ ಮಾಡುವವರು ಕೈಗಳಲ್ಲಿ ಭಾರದ ಬ್ಯಾಗ್ ಗಳನ್ನು ಹಿಡಿದುಕೊಂಡು ಎದುಸಿರು ಬಿಡುತ್ತ ಹೆಜ್ಜೆಗಳನ್ನು ಇಡುತ್ತ ಸಾಗುತಿದ್ದರು.ಬಹಳಷ್ಟು ಜನ ಅರ್ದ ವಯಸ್ಸು ಮೀರಿದವರು. ಇಷ್ಟು ದಿನ ಮನೆ ಮಕ್ಕಳು ಸಂಸಾರ ಎಂದು ವ್ಯಸ್ತರಾಗಿದ್ದವರು ಈಗ ಬಿಡುವಾಗಿ ಯಾತ್ರೆಯ ಶ್ರದ್ಧೆಯಿಂದ ಬಂದವರು.
ಚಾರ್ ಧಾಮ ಯಾತ್ರೆ ಬಹಳ ಸಾಹಸ ಮಯವಾದದ್ದು.ಟೂರ್ ಪ್ಯಾಕೇಜ್ ಗಳು ಒಳ್ಳೆಯ ಸೌಲಭ್ಯ ಒದಗಿಸಿದ್ದರು ಗುಡ್ಡಗಾಡಿನ ಪ್ರವಾಸ.ಚಳಿ, ಚಾರಣ , ದರ್ಶನಕ್ಕೆ ಸಾಲು ಇವೆಲ್ಲವೂ ಹೈರಾಣ ಆಗಿಸದೆ ಇರದು.ಅದು ಅವರವರ ಭಕ್ತಿ ಶ್ರದ್ಧೆಯ ಮೇಲೆ ಅವಲಂಬಿತ.
ಕೇದಾರನಾಥ ಧಾಮದಿಂದ ಕೆಳಗೆ ಬರಲು ಮತ್ತೆ ಕುದರೆ ಸವಾರಿ , ಮೇಲೆ ಹೋಗುವಾಗಿಗಿಂತ ಕೆಳಗೆ ಇಳಿಯುವಾಗ ಮೈಎಲ್ಲಾ ಮತ್ತಷ್ಟು ನುಗ್ಗುನುಗ್ಗು .ನಮಗಾಗುತ್ತಿರುವ ಹೈರಾಣದಲ್ಲಿ ಪ್ರಕೃತಿ ಯ ಸುಂದರ ದೃಶ್ಯಗಳನ್ನು ನೋಡುವ ಆಸಕ್ತಿಯು ಉಳಿದಿರಲಿಲ್ಲ.ಗೌರಿಕುಂಡ ತಲುಪುವಷ್ಟರಲ್ಲಿ ಜೋರು ಮಳೆ ಶುರುವಾಯಿತು. ರೇನ್ ಕೋಟ್ ಹಾಕ್ಕೊಂಡಿದ್ರೂ ಅರೆ ಬರೆ ತೋಯ್ದು ಹೊಟೇಲ್ ರೂಮ್ ತಲುಪಿದೆವು.
ರಾತ್ರಿ ಎಲ್ಲರಿಗೂ ಜ್ವರ , ಮೈಕೈನೋವು , ಆಯಾಸ , ಸಾಕಪ್ಪ ಈ ಯಾತ್ರೆ ಅನಿಸಿತ್ತು.ಒಂದೊಂದು ಪೇನ್ ಕಿಲ್ಲರ ಟ್ಯಾಬ್ಲೆಟ್ ತಗೊಂಡು ಮಲಗಿದೆವು.
ಎಂಟನೇ ದಿನ
ರುದ್ರಪ್ರಯಾಗ ಜಿಲ್ಲೆಯಿಂದ ಬದರಿನಾಥ ಧಾಮಕ್ಕೆ ತೆರಳಬೇಕಿತ್ತು. ಪ್ರವಾಸವಂತೂ ಮುಗಿಸಲೇಬೇಕಿತ್ತು. ಯಾವ ಉತ್ಸಾಹವೂ ಇಲ್ಲದೆ ತಯ್ಯಾರಾಗಿ ಕಾರಲ್ಲಿ ಕುಳಿತೆವು.ಮಂಕಾದ ನಮ್ಮಲ್ಲಿ ಉತ್ಸಾಹ ತುಂಬಲು ನಮ್ಮ ಚಾಲಕ ಪ್ರಯತ್ನಪಟ್ಟ. ಉತ್ತರಾಖಂಡದವನಾದ ಅವನು ಅಲ್ಲಿನ ಜನರ ಆರ್ಥಿಕ , ಸಮಾಜಿಕ ಸ್ಥಿತಿ ಬಗ್ಗೆ ವಿವರಿಸುತಿದ್ದ.
ಚಾರ್ಧಾಮ್ ಪ್ರದೇಶಗಳಲ್ಲಿ ಜನರ ಜೀವನ ಬಹಳ ಕಷ್ಟದ್ದು. ಶಾಲೆಗಳು ಇದ್ದರೂ ಮಕ್ಕಳ ಸಂಖ್ಯೆ ಕಡಿಮೆ.ಇರುವ ಕಾಲೇಜು ಗಳೆಲ್ಲ ಸ್ವಲ್ಪ ದೊಡ್ಡ ಜಿಲ್ಲೆಗಳಲ್ಲಿ. ಕೇದಾರ , ಬದರಿ ಗಳಂತ ಪ್ರದೇಶಗಳಲ್ಲಿ ಜನರು ಪೂರ್ಣ ವಾಗಿ ಪ್ರವಾಸಿಗರನ್ನೆ ಅವಲಂಬಿಸಿದ್ದಾರೆ. ಮಕ್ಕಳನ್ನು ಶಾಲೆಗೆ ಕಳಿಸಲು ಉತ್ಸುಕರಿಲ್ಲ.ವಿದ್ಯಾವಂತ ರಾಗಿ ಏನು ಮಾಡುವದು..ಎಂದು ಅವರ ಪ್ರಶ್ನೆ. ಯಾವದೇ ಉದ್ಯೋಗ ಅವಕಾಶಗಳಿಲ್ಲ. ಉದ್ಯೋಗ ಅರಸಿ ಮತ್ತೆ ದೂರ ದೂರದ ಪ್ರದೇಶಗಳಿಗೆ ವಲಸೆ ಹೋಗಬೇಕು. ಅದಕ್ಕೆ ಅವರು ಇದ್ದಲ್ಲಿಯೇ ಸಿಗುವ ಕೆಲಗಳಿಗಾಗಿ ಪ್ರಯಾಸ ಪಡುತ್ತಾರೆ. ನಮ್ಮ ದೇಶದ ಉತ್ತರದ ಪ್ರದರೆಶಗಳು ಬಹಳಷ್ಟು ಹಿಂದುಳಿದವುಗಳು , ಮತ್ತು ಆರ್ಥಿಕ ವಾಗಿ ಪ್ರವಾಸೋದ್ಯಮ ಅವಲಂಬಿಸಿವೆ.
ಅವತ್ತಿನ ಪ್ರಯಾಣ ಆಹ್ಲಾದಕರ ವಾಗಿತ್ತು. ಪ್ರಕೃತಿಯ ಸೌಂದರ್ಯ ವೀಕ್ಷಿಸುತ್ತ ಅಲ್ಲಲ್ಲಿ ನಿಂತು ಪೋಟೋ ಕ್ಲೀಕ್ಕಿಸಿಕೊಳ್ಳುತ್ತ ಸಂಜೆ ಐದಕ್ಕೆ ಬದರಿ ತಲುಪಿದೆವು. ಹೊಟೇಲ್ ಗೆ ತೆರಳಿ ಫ್ರೆಶ್ ಆಗಿ ಬದರಿನಾಥ ಮಂದಿರಕ್ಕೆ ದರ್ಶನಕ್ಕಾಗಿ ಹೋಗಿ ಕ್ಯೂ ನಿಂತೆವು.ಅಲ್ಲಿಯೂ ಹನುಮಂತನ ಬಾಲದಂತೆ ಉದ್ದ ಕ್ಯೂ. ಜಾಸ್ತಿ ಚಳಿ ಇರದ ಕಾರಣ ನಮಗೆ ತೊಂದರೆ ಅನಿಸಲಿಲ್ಲ.ಹತ್ತು ಗಂಟೆಗೆ ನೂಕು ನುಗ್ಗಲಿನಲ್ಲಿ ನುಗ್ಗಿ ದರ್ಶನ ಮುಗಿಸಿದೆವು.ಅದಾವ ಧೈರ್ಯದಿಂದ ನಾನು ಅಂತಾ ರಶ್ ನಲ್ಲಿ ನಿಂತಿದ್ಧೆ..ನನಗೆ ಆಶ್ಚರ್ಯ ಆಗತಿತ್ತು. ಜನಜಂಗುಳಿ ಅಂದ್ರೆ ದೂರ ಓಡುವ ನಾನು ಗೆಳತಿಯರ ಒತ್ತಡಕ್ಕೆ ಅವರ ಜೊತೆ ನಿಂತಿರುತಿದ್ಧ.
ಬದರಿನಾಥ ಸುಂದರ ಪ್ರದೇಶ. ಸುತ್ತಲೂ ಬೆಟ್ಟಗಳು , ತುದಿಗಳಿಗೆಲ್ಲ ಹಿಮ ಹೊದಿಕೆ. ರಸ್ತೆಯುದ್ದಕ್ಕೂ ಅಂಗಡಿಗಳು. ಶ್ವೇಟರ್ , ಶಾಲ್ , ಎನೇನೋ ತಗೊಂಡು ಮತ್ತಷ್ಟು ಲಗೇಜ್ ಹೆಚ್ಚುಸಿಕೊಂಡೆವು.

ಒಂಬತ್ತನೇ ದಿನ
ನಮ್ಮ ನಾಲ್ಕು ಧಾಮಗಳ ಪ್ರವಾಸ ಮುಗಿದಿತ್ತು. ಅವತ್ತು ಬದರಿನಾಥನಿಂದ ನಮ್ಮ ದೇಶದ ಕೊನೆಯ ಹಳ್ಳಿ ಮಾನ ಎಂಬ ಊರು ನೋಡಿಕೊಂಡು ತರಳಿದೆವು. ಮುಂದೆ ಶ್ರೀನಗರ ಎಂಬ ಊರಲ್ಲಿ ರಾತ್ರಿ ಉಳಿದುಕೊಂಡು ಮರುದಿನ ಡೆಹರಾಡೂನ್ ಹೋಗಬೇಕಿತ್ತು. ಚಾರ್ಧಾಮ ಪ್ರದೇಶಗಳಿಂದ ನೂರೈವತ್ತು ಕಿ ಮಿ ದೂರ ಬಂದ ಮೇಲೆ ಚಳಿಯು ಕಮ್ಮಿ ಆಗಿತ್ತು. ಸಾಕ್ಸ , ಗ್ಲವ್ಸ , ಶ್ವೇಟರ್ , ಜಾಕೇಟ್ ಗಳೆಲ್ಲ ಬ್ಯಾಗನಲ್ಲಿ ತುಂಬಿ ಪ್ಯಾಕ್ ಮಾಡಿ ಫ್ಯಾನ ಹಚ್ಚಿ ಮಲಗಿ ಬಿಟ್ಟೆವು.
ಹತ್ತನೇ ದಿನ
ಮರಳಿ ನಮ್ಮ ಊರಿಗೆ ಪ್ರಯಾಣ. ಹತ್ತು ದಿನದ ಉತ್ತರಖಂಡ ಪ್ರವಾಸದ ಸಮಯದಲ್ಲಿ ವಾತಾವರಣದ ಏರು ಪೇರಿನಿಂದ ನೆಗಡಿ, ಕೆಮ್ಮು, ಮೈಕೈನೋವುಗಳ ಹೊರತಾಗಿ ಯಾವದೇ ತೊಂದರೆ ಆಗಿಲ್ಲ. ಊಟದಲ್ಲಿ ಗೋಧಿಗೆ ಪ್ರಾಮುಖ್ಯತೆ. ಅಲ್ಲಿ ಬಹುತೇಕರು ಶಾಖಾಹಾರಿಗಳು. ಹೋಟೆಲ್ ಗಳಲೆಲ್ಲ ಪುಲ್ಕ , ಆಲೂಗಡ್ಡೆ ಪಲ್ಯ ಕಾಮನ್. ಚಾರ್ ಧಾಮ್ ಪ್ರದೇಶಗಳ ಊಟ, ನೀರು ಎಲ್ಲಾ ತುಟ್ಟಿ. ಹತ್ತು ದಿನದಲ್ಲಿ ಅಲ್ಲಿನ ಆಹಾರ ಸಾಕಾಯಿತು. ಚಾರಣದ ಸಮಯದಲ್ಲಿ ನಾವು ಹೆಚ್ಚಾಗಿ ತಿಂದದ್ದು ಮ್ಯಾಗಿ. ಕೊನೆಗೆ ಯಾವಾಗ ಊರು ಮುಟ್ಟುತ್ತೆವಪ್ಪ ಅನಿಸುತಿತ್ತು. ಡೆಹರಾಡೂನ್ ಏರ್ಪೋರ್ಟ್ ನಲ್ಲಿ ನಮ್ಮ ಊರಿನ ಕಡೆಯವರು ಸಿಕ್ಕಾಗ ಒಂದು ದುಃಖದ ಸಂಗತಿ ತಿಳಿಯಿತು. ಒಂದೇ ಕುಟುಂಬದ ಐದಾರು ಜನ ಯಾತ್ರೆಗೆ ಬಂದಿದ್ದರು. ಅವರಲ್ಲೊಬ್ಬರು ಕೇದಾರನಾಥ ಧಾಮಕ್ಕೆ ತೆರಳುವ ಮಾರ್ಗದಲ್ಲಿ ಹೃದಯಾಘಾತದಿಂದ ತೀರಿಕೊಂಡರಂತೆ. ಶವ ಊರಿಗೆ ಕಳಿಸಿ ಅವರೆಲ್ಲರೂ ಊರಿಗೆ ಹೊರಟಿದ್ದರು.
ಸಂತೋಷದಿಂದ ಪ್ರವಾಸ ಹೊರಟ ಕುಟುಂಬದ ಈ ರೀತಿ ವಿಷಾದ ಸಂಗತಿ ಅರಗಿಸಿಕೊಳ್ಳಲಾಗಲಿಲ್ಲ.
ಪ್ರವಾಸಗಳು ಸಂತೋಷ , ನೆಮ್ಮದಿ ಕೊಡುತ್ತವೆ , ಇಂತಹ ಅನಿರೀಕ್ಷಿತ ಅವಘಡಗಳು ಸಂತೋಷದ ಕ್ಷಣಗಳನ್ನೆಲ್ಲ ಕಸಿದುಕೊಳ್ಳುತ್ತವೆ.
ಒಟ್ಟಿನಲ್ಲಿ ಉತ್ತಾರಖಂಡ ಪ್ರವಾಸ ಪ್ರಯಾಸದ್ದು.
- ಜ್ಯೋತಿ ಡಿ ಬೊಮ್ಮಾ
