ದೇಹದ ಮೋಹ ಹೆಚ್ಚಾದಾಗ ಮನುಷ್ಯನನ್ನು ಅಹಂಕಾರ ಆವರಿಸುತ್ತದೆ. ನಮ್ಮ ಹುಸಿ ಮೋಹವನ್ನು ಕೆಡಿಸಿ ಸರಿದಾರಿಗೆ ತರುವ ಕಾರ್ಯವನ್ನು ಮಾಡಬೇಕು ಅಲ್ಲಮಪ್ರಭು ವಚನದಲ್ಲಿ ಸಾರಿದ್ದಾರೆ, ಡಾ.ಯಲ್ಲಪ್ಪ ಮಾಳಪ್ಪ ಯಾಕೊಳ್ಳಿ ಅವರು ವಚನದ ತಾತ್ಪರ್ಯವನ್ನು ‘ವಚನ ಚಿಂತನ’ದ ಮೂಲಕ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಅಲ್ಲಮಪ್ರಭುಗಳ ಒಂದು ವಚನ
ಹೃದಯ ಕಮಲದೊಳಗೊಂದು ಮರಿದುಂಬಿ ಹುಟ್ಟಿತು
ಹಾರಿ ಹೋಗಿ ಆಕಾಶವ ನುಂಗಿತ್ತಯ್ಯಾ
ಆವತುಂಬಿಯ ಗರಿಯ ಗಾಳಿಯಲ್ಲಿ
ಮೂರುಲೋಕವೆಲ್ಲವೂ ತಲೆಕೆಳಗಾಯಿತ್ತು
ಪಂಚವರ್ಣದ ಹಂಸೆಯ ಪಂಜರವ ಖಂಡಿಸಿದಡೆ
ಗರಿಮುರಿದು ತುಂಬಿ ನೆಲಕುರುಳಿತ್ತು
ನಿಜದುದಯದ ಬೆಡಗಿನ ಕೀಲ
ಗುಹೇಶ್ವರಾ ನಿಮ್ಮ ಶರಣರ ಅನುಭವ ಸಂಗದಲ್ಲಿರ್ದು ಕಂಡೆನಯ್ಯ

ಫೋಟೋ ಕೃಪೆ : ಅಂತರ್ಜಾಲ
ಅಲ್ಲಮಪ್ರಭು ವಚನ ಸಂಪುಟ -೨(ವಚನ ನಂ೩೨)
ಅಲ್ಲಮಪ್ರಭುಗಳ ಬೆಡಗಿನ ವಚನಗಳಲ್ಲಿ ಇದೂ ಒಂದು. ದೇಹದ ಮೋಹ ಹೆಚ್ಚಾದಾಗ ಮನುಷ್ಯನನ್ನು ಅಹಂಕಾರ ಆವರಿಸುತ್ತದೆ. ಆ ಅಹಂ ನಮ್ಮಿಂದ ಮರೆಯಾಗಲು ನಮಗೆ ಶರಣರ ಸಂಗವೊಂದೇ ದಾರಿ ಎಂಬುದನ್ನು ಈ ವಚನದಲ್ಲಿ ಅಲ್ಲಮ ಪ್ರಭುಗಳು ತುಂಬಿದ್ದಾರೆ. ಯಾವಾಗ ಈ ಅಹಂ ನಾಶವಾಯಿತೋ ಆಗ ನಿಜ ಆಗುತ್ತದೆ ಎಂದು ವಚನ ಸಾರುತ್ತದೆ.
ಇಡಿ ವಚನದ ಅಂತರಾರ್ಥ ಇರುವುದೆ ನಿಜದುದಯದ ಬೆಡಗಿನ ಕೀಲ ನಿನ್ನ ಶರಣರ ಅನುಭವ ಸಂಗದಲ್ಲಿ ಅರಿದೆ ಎನ್ನುವಲ್ಲಿ. ನಿಜದುದಯ ಅಷ್ಟು ಸರಳವಲ್ಲ.ಅದು ಬೆಡಗಿನಕೀಲ ವಿದ್ದಂತೆ ಅದನ್ಬು ತಿಳಿಯಲು ಶರಣರ ಸಂಗವೇ ಬೇಕು ಎನ್ನುವದು ಅಲ್ಲಮಪ್ರಭುಗಳ ನಿಶ್ಚಿತ ಅಭಿಪ್ರಾಯ.
ಮನುಷ್ಯನ ಹೃದಯದಲ್ಲಿ ಅಹಂಕಾರ ಮೊಳೆದೋರುತ್ತದೆ. ಅಲ್ಲಿಯವರೆಗೆ ಸರಿಯಾಗಿಯೆ ಇದ್ದ ಆತ ಯಾವಾಗ ಹೃದಯ ಕಮಲದಲ್ಲಿ ಮರಿದುಂಬಿ ಎನ್ನುವ ಅಹಂ ಜನಿಸುತ್ತದೆಯೋ ಆಗ ಅವನು ಅದರ ಪ್ರಭಾವಕ್ಕೆ ಒಳಗಾಗಿ ನೆಲದಮೇಲೆ ನಿಲ್ಲುವದನ್ನು ಮರೆಯುತ್ತಾನೆ. ತನ್ನ ಮಿತಿಯನ್ನು ಮರೆತ ಮನುಷ್ಯ ಆಕಾಶದಾಚೆಗೂ ಹಾರುತ್ತಾನೆ. ತನ್ನಮುಂದೆ ಯಾರೂಇಲ್ಲ ಎಂದು ಬೀಗುತ್ತಾನೆ. ನಿಜವಾದ ಜೀವಾತ್ಮನ ಉದ್ದೇಶ ಮರೆತು ಹೋಗಿ ಆ ಅಹಂ ಎಂಬ ದುಂಬಿಯ ಕಾರಣದಿಂದ ಅವನಿಗೆ ಮೂರುಲೋಕವೆಲ್ಲ ತನ್ನ ಕೈಕೆಳಗೆ ಎಂಬ ಅಹಂಕಾರ ಬರುತ್ತದೆ.ಮೂರು ಲೋಕವೆಲ್ಲ ಅವನು ಹೇಳಿದಂತೆ ಕುಣಿಯಬೇಕು ಅಂತಹ ಭಾವಕ್ಕೆ ತುತ್ತಾಗುತ್ತಾನೆ. ಎಲ್ಲಿಯವರೆಗೆ ಈ ದೇಹವೇ ಶಾಶ್ವತ ಎಂಬ ಅಹಂ ಬರುತ್ತದೆಯೋ ಆಗ ಆತನ ಹಾರಾಟ ಇದೇ ರೀತಿಯಾಗಿರುತ್ತದೆ.
ಈ ಅಭಿಮಾನ ಹೋಗಬೇಕು ಎಂದರೆ ಇಂಥ ಅಭಿಮಾನಕ್ಕೆ ಕಾರಣವಾದ ಈ ದೇಹದ ಮೋಹ ಅಳಿಯಬೇಕು. ದೇಹ ನಾಶವಾಗುವವರೆಗೆ ಮೋಹ ಅಳಿಯಲಾರದು.
ಯಾವಾಗ “ಪಂಚವರ್ಣದ ಹಂಸೆಯ ಪಂಜರವ ಖಂಡಿಸಿದಡೆ..” ಅಂದರೆ ಜೀವನೆಂಬ ಹಂಸೆಗೆ ಆಧಾರವಾದ ಪಂಚಭೂತಗಳಿಂದಾದ ಈ ದೇಹವೆಂಬ ಪಂಜರ ಮುರಿದು ಬೀಳುತ್ತದೆಯೋ ಆಗ “ಗರಿಮುರಿದು ತುಂಬಿ ಎಂದರೆ ಜೀವ ನೆಲಕ್ಕುರುಳುತ್ತದೆ” ಈ ದೇಹದ ಮೇಲೆ ನಾವು ಇಟ್ಟಿರುವ ಅಭಿಮಾನ ಹುಸಿಯಾದದ್ದು ಎಂದು ತಿಳಿಸುವವರು ಯಾರು? ಅಂದರೆ ಶರಣರ ಸಂಗದಲ್ಲಿ ಮಾತ್ರ ತಿಳಿಯಲು ಸಾಧ್ಯ. ಅನುಭಾವ ಸಂಗ ನಮಗೆ ನಿಜದ ಕೀಲವನ್ನು ತಿಳಿಸಿ, ನಮ್ಮ ಹುಸಿ ಮೋಹವನ್ನು ಕೆಡಿಸಿ ಸರಿದಾರಿಗೆ ತರುವ ಕಾರ್ಯ ಮಾಡುವಂಥದು ಎಂಬುದನ್ನು ಈ ಬೆಡಗಿನ ವಚನದಲ್ಲಿ ಅಲ್ಲಮಪ್ರಭುಗಳು ವಿವರಿಸಿದ್ದಾರೆ.
- ಡಾ.ಯಲ್ಲಪ್ಪ ಮಾಳಪ್ಪ ಯಾಕೊಳ್ಳಿ – ನಿವೃತ್ತ ಪ್ರಾಚಾರ್ಯರು.
