ಮನುಷ್ಯ ಯಾವಾಗಲೂ ಕೇವಲ ತನ್ನದು, ತನ್ನ ಹೊಟ್ಟೆ ತುಂಬಿಕೊಳ್ಳುವದು ಎಂಬ ಸ್ವಾರ್ಥಕ್ಕೆ ಸೀಮಿತನಾಗುತ್ತಾನೆಯೋ ಆಗ ಅಲ್ಲಿ ಹೊಗೆ ಮತ್ತು ಹಗೆ ಎರಡೂ ಆರಂಭವಾಗುತ್ತವೆ. ಡಾ.ಯಲ್ಲಪ್ಪ ಮಾಳಪ್ಪ ಯಾಕೊಳ್ಳಿ ಅವರು ‘ಒಲೆಯಲ್ಲಿ ಅಟ್ಟುಂಬರಲ್ಲದೆ ತಲೆಯಲ್ಲಿ ಅಟ್ಟುಂಬರಿಲ್ಲ ’ದ ವಚನದ ತಾತ್ಪರ್ಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಒಲೆಯಲ್ಲಿ ಅಟ್ಟುಂಬರಲ್ಲದೆ ತಲೆಯಲ್ಲಿ ಅಟ್ಟುಂಬರಿಲ್ಲ
ಒಲೆಯಲ್ಲಿ ಅಟ್ಟುಂಬರೆ ಹೊಗೆ ಉಂಟು ಹಗೆ ಉಂಟು
ತಲೆಯಲ್ಲಿ ಅಟ್ಟುಂಬರೆ ಹೊಗೆ ಇಲ್ಲ ಹಗೆ ಇಲ್ಲ
ಒಲೆಯಲ್ಲಿ ಅಟ್ಟುಂಬರ ಕಂಡೆ
ತಲೆಯಲ್ಲಿ ಅಟ್ಟುಂಬರರೊಬ್ಬರನೂ ಕಾಣೆ ಗುಹೇಶ್ವರಾ
ಅಲ್ಲಮಪ್ರಭುಗಳ ಅತ್ಯಂತ ವಿಶಿಷ್ಟವಾದ ವಚನಗಳಲ್ಲಿ ಇದೂ ಒಂದು .ಇಲ್ಲಿ ಎರಡು ಬಗೆಯ ಅಟ್ಟುಣ್ಣುವ ವಿಧಾನಗಳ ಬಗೆಗೆ ಪ್ರಭು ಮಾತನಾಡುತ್ತಿದ್ದಾರೆ. ಜ್ಞಾನವೆನ್ನುವದು ಸುಮ್ಮನೆ ದೊರಕುವಂಥದ್ದಲ್ಲ ಹಾಗೂ ನಿಜವಾದ ಜ್ಞಾನದಿಂದ ದೊರಕುವ ಪರಿ ಏನು ಎಂಬ ಚಿಂತನೆ ವಚನದಲ್ಲಿದೆ. ನಾವು ಕೇವಲ ಬಾಹ್ಯ ಸುಖದ ಚಿಂತನೆ ಮಡುತ್ತೇವೆ. ನಿಜವಾದ ಆನಂದವೆನ್ನುವದು ಬಾಹ್ಯದ ಚಿಂತನೆಗಿಂತ ಅಂತರಂಗದ ಚಿಂತನೆಯಲ್ಲಿದೆ ಎನ್ನುವದು ವಚನಾರ್ಥವಾಗಿದೆ.

ಒಲೆಯಲ್ಲಿ ಅಟ್ಟುಣ್ಣುವದು ಎನ್ನುವ ರೂಪಕ ಬರೀ ಹೊಟ್ಟೆ ತುಂಬಿಕೊಳ್ಳುವ ಚಿಂತೆಯಲ್ಲಿಯೇ ಮುಳುಗಿರುವ ಸ್ವಾರ್ಥ ಮೂಲ ಬದುಕನ್ನು ಸಂಕೇತಿಸುತ್ತದೆ. ಮನುಷ್ಯ ಯಾವಾಗಲೂ ಕೇವಲ ತನು ತನ್ನದು, ತನ್ನ ಹೊಟ್ಟೆ ತುಂಬಿಕೊಳ್ಳುವದು ಎಂಬ ಸ್ವಾರ್ಥಕ್ಕೆ ಸೀಮಿತನಾಗುತ್ತಾನೆಯೋ ಆಗ ಅಲ್ಲಿ ಹೊಗೆ ಮತ್ತು ಹಗೆ ಎರಡೂ ಆರಂಭವಾಗುತ್ತವೆ. ‘ಒಲೆಯಲ್ಲಿ ಅಟ್ಟಂಬರೆ ಹೊಗೆಯುಂಟು ಹಗೆಯುಂಟು’ ಎಂದರೆ, ಬರೀ ಸ್ವಚಿಂತನೆಯೇ ಪ್ರಧಾನವಾದಾಗ ತನಗೆ ಮಾತ್ರ ಎಂಬ ಸ್ವಾರ್ಥಮೂಲ ಚಿಂತನೆ ಹೊಗೆ (ಇತರರಲ್ಲಿ ಕೋಪದ ಭಾವನೆ) ದ್ವೇಷಗಳನ್ನು ಹುಟ್ಟಿಸುತ್ತದೆ. ಹಾಗಾದರೆ ಇದನ್ನು ಮೀರಲು ಯಾವ ದಾರಿ? ಯಾವುದರಿಂದ ಮನುಷ್ಯ ಅಟ್ಟುಣ್ಣಬೇಕು? ಎಂಬ ಪ್ರಶ್ನೆಗೆ ಉತ್ತರ ಮುಂದಿನ ಸಾಲುಗಳಲ್ಲಿ ದೊರಕುತ್ತದೆ. ‘ತಲೆಯಲ್ಲಿ ಅಟ್ಟುಂಬರೆ ಹೊಗೆಯಿಲ್ಲ, ಹಗೆಯಿಲ್ಲ.’ ಎಂದರೆ ಜ್ಞಾನದ ಅರೋಗಣೆ ಜಗತ್ತಿನಲ್ಲಿ ಆಗಬೆಕು. ನಾವು ಮನುಷ್ಯರ ಹೊಟ್ಟೆ ತುಂಬಿಸಿದರೆ ಸಾಲದು, ನಿಜವಾದ ಹಸಿವಾದ ಜ್ಞಾನವನ್ನು ನೀಡುವ ಕೆಲಸ ಮಾಡಬೆಕು, ಅವರವರ ಬದುಕಿನ ದಾರಿ ಅವರಿಗೆ ಕಲಿಸುವದೇ ತಲೆಯಿಂದ ಅಟ್ಟುಣ್ಣುವ ದಾರಿಯನ್ನು. ಇದನ್ನು ಕಲಿಸಿ ಬಿಟ್ಟರೆ ಎಲ್ಲರೂ ತಮ್ಮ ತಮ್ಮ ಬದುಕಿನ ದಾರಿ ತಾವು ಕಂಡುಕೊಳ್ಳುವದರಿಂದ ಅಲ್ಲಿ ಹೊಗೆಯ , ಹಗೆಯ ಪ್ರಶ್ನೆ ಬರುವದೇ ಇಲ್ಲ.
ಶರಣರು ನಿಜವಾಗಿ ಮಾಡಬಯಸಿದ್ದು ಸಮಾಜ ಸುಧಾರಣೆಯನ್ನು, ಅವರ ಎಲ್ಲ ಚಿಂತನೆಗಳು ವ್ಯಷ್ಠಿ ಮೂಲವಾಗದೇ ಸಮಷ್ಠಿ ಮೂಲವಾಗಿವೆ. ಕೇವಲ ಸಮಕುಚಿತವಾದ ಗುರಿಗಿಂತ ಶಾಸ್ವತವಾದ ಗುರಿಯತ್ತ ಅವರ ಚಿಂತನೆ ಗಮನವಿತ್ತಿತ್ತು. ಆದರೆ ನಿಜವಾದ ದುರಂತವೆಂದರೆ ಆಸೆಗಾಗಿ ಸತ್ತವರು ಕೋಟಿ, ಹೆಣ್ಣಿಗಾಗಿ ಮಣ್ಣಿಗಾಗಿ ಸತ್ತವರು ಕೋಟೊ ಕೋಟಿ, ಜ್ಞಾನಕ್ಕಾಗಿ ಸತ್ತವರು ಒಬ್ಬರೂ ಇಲ್ಲ. ಇದನ್ನೇ ಎತ್ತಿ ಆಡುವ ಪ್ರಭು ‘ತಲೆಯಲ್ಲಿ ಅಟ್ಟುಂಬವರರೊಬ್ಬರನ್ನೂ ನಾ ಕಾಣೆ’ ಎನ್ನುವದು. ತಲೆಯಲ್ಲಿ ಅಟ್ಟುಣ್ಣುವ ದಾರಿ ಸುಮ್ಮನೆ ಸಾಧ್ಯವಾಗುವಂಥದಲ್ಲ. ಅದಕ್ಕೆ ತನ್ನದೇ ಅದ ಸಾಧನೆಬೇಕು. ಸಾಮಾನ್ಯವಾಗಿ ನಾವೆಲ್ಲರೂ ಬಾಹ್ಯ ಸುಖಾಸಕ್ತರಾಗಿ , ಹೊಗೆ ಹಗೆಗಳಲ್ಲಿ ಮುಳುಗಿ ನಿಜವಾದ ಆನಂದವನ್ನು ಕಳೆದುಕೊಳ್ಳುತ್ತಿದ್ದೇವೆ. ನಮ್ಮ ನಿಜದ ನಿಲವನ್ನರಿತು, ಲೋಕದಲ್ಲಿ ಶಾಂತಿ ಸಮಧನಗಳು ರೂಪಿತವಾಗುವ ಹಾದಿ ಹುಡುಕಬೇಕಿದೆ. ಅದು ಜ್ಞಾನಿಗಳ ಹಾದಿ. ಆ ಹಾದಿ ಎಲ್ಲರಿಗೂ ಸಾಧ್ಯವಾಗಲಿ ಎಂಬುದೇ ಶರಣರ ಆಶಯ. ಕಾರಣ ಶರಣರು ಒಲೆಯಿಂದ ಅಟ್ಟುಣ್ಣುವದಕ್ಕಿಂತ ತಲೆಯಿಂದ ಅಟ್ಟುಣ್ಣುವದನ್ನು ಹೇಳಿಕೊಟ್ಟವರು.
ಇನ್ನೊಂದು ನೆಲೆಯಲ್ಲಿ ವಚನ ಬೇರೇಯದೇ ಅರ್ಥವನ್ನು ಸಂಕೇತಿಸುವಂತಿದೆ. ಇಂದಿನ ನಮ್ಮ ಶಿಕ್ಷಣ ವ್ಯವಸ್ಥೆ ನಮಗೆ ಬರೀ ಹೊಟ್ಟೆ ತುಂಬಿಸಿಕೊಳ್ಳುವದನ್ನು ಮಾತ್ರ ಕಲಿಸುತ್ತದೆ. ನಿಜವಾದ ಜ್ಞಾನವನ್ನು ಅದು ನೀಡುತ್ತಿಲ್ಲ. ಇಂದಿನ ‘ಮಟೀರಿಯಲಿಸ್ಟಿಕ್’ ಕಾಲದ ಶಿಕ್ಷಣದ ಅರ್ಥದಲ್ಲಿ ಕೇವಲ ಹಣ ಗಳಿಸುವದು, ಹೊಟ್ಟೆ ಬಟ್ಟೆಯ ಅಗತ್ಯಗಳನ್ನು ಪೂರೈಸುವದು ಇದಷ್ಟೇ ಶಿಕ್ಷಣವೆಂದಿದೆ. ನಿಜವಾದ ಮಾನವೀಯ ಮೌಲ್ಯಗಳನ್ನು ಹೊಂದಿದ ಜ್ಞಾನ ಮರೆಯುತ್ತಿದೆ.
ಬಹಳ ಹಿಂದೆ ಕಾಲೇಜಿಗೆ ಹೋಗುವ ಒಬ್ಬ ಹುಡುಗನನ್ನು ಯಜಮಾನನೊಬ್ಬ ಪ್ರಶ್ನಿಸಿದನಂತೆ “ತಮ್ಮಾ ನೀನು ಏಕೆ ವಿಶ್ವವಿದ್ಯಾಲಯಕ್ಕೆ ಕಲಿಯಲು ಹೋಗುತ್ತೀಯ? ನಿನ್ನ ಗುರುಗಳು ಹಣವನ್ನು ಮಾಡುವದು ಹೇಗೆ ಎಂದು ಕಲಿಸುವರೋ ? ” ಎಂದು ಪ್ರಶ್ನಿಸಿದರಂತೆ ಅದಕ್ಕೆ ಆ ಹುಡುಗ ನೀಡಿದ ಉತ್ತರ ತುಂಬ ಮಾರ್ಮಿಕವಾಗಿದೆ. “ಇಲ್ಲ ಸರ್, ನನ್ನ ಗುರುಗಳು ಹಣ ಮಾಡುವದು ಹೇಗೆ ಎನ್ನುವದನ್ನು ಕಲಿಸುವದಿಲ್ಲ, ಆದರೆ ಮುಂದೆ ಹಣ ಬಂದಾಗ ಅದನ್ನು ಬಳಸುವದು ಹೇಗೆ? ಎಂಬುದನ್ನು ಹೇಳಿಕೊಡುತ್ತಾರೆ ಎಂದನಂತೆ !” ಮನುಷ್ಯ ಇಂದು ಹಣ ಗಳಿಸುವದನ್ನು ಹೇಗೆ ಎಂಬುದೇ ಶಿಕ್ಷಣವೆಂಬಂತಾಗಿದೆ. ಹಣ ಗಳಿಸಿದೊಡನೆ ಮನುಷ್ಯ ಮಾನವೀಯತೆ ಮರೆಯುತ್ತಿದ್ದಾನೆ.
ವಚನ ಇಂದು ನಾವು ಕೇವಲ ಅನ್ನ ಗಳಿಸುವದನ್ನು ಮಾತ್ರ ಕಲಿಸುತ್ತಿದ್ದೇವೆಯೇ ಹೊರತು, ಜ್ಞಾನದ ಗಳಿಕೆಯತ್ತ ಗಮನ ಕೊಡುತ್ತಿಲ್ಲ ಎನ್ನುವದನ್ನೂ ಸೂಚಿಸುತ್ತದೆ. ಅಲ್ಲಮಪ್ರಭು ಲೋಕದ ದೃಷ್ಟಿಕೋನವನ್ನು ಆಳವಾಗಿ ಗಮನಿಸಿದ ಮಹಾಜ್ಞಾನಿ. ಲೊಕ ಕೇವಲ ಸ್ವಹಿತವೇ ಮುಖ್ಯ ಎಂದು ಬದುಕಿದುದನ್ನು ಕಂಡು ರೋಸಿ ಹೋಗಿದ್ದಾನೆ ಆದ್ದರಿಂದಲೇ ತಲೆಯಲ್ಲಿ ಅಟ್ಟುಂಬರನೊಬ್ಬರನೂ ಕಾಣೆ ಎನ್ನುತ್ತಾನೆ. ಇಂತಹ ಸ್ಥಿತಿ ನೀಗಿ ಎಲ್ಲರಿಗೂ ಒಳಿತಾಗುವ ಬದುಕು ನಮ್ಮದಾಗಲಿ ಎಂಬುದು ಅವನ ವಚನದ ಆಶಯವಾಗಿದೆ.
ಹಿಂದಿನ ಸಂಚಿಕೆಗಳು :
- ಡಾ.ಯಲ್ಲಪ್ಪ ಮಾಳಪ್ಪ ಯಾಕೊಳ್ಳಿ – ನಿವೃತ್ತ ಪ್ರಾಚಾರ್ಯರು, ಲೇಖಕರು, ಚಿಂತಕರು,
