ಬದುಕಿನ ಬಗೆಗೆ ಶರಣರು ಹೆಚ್ಚು ಮಹತ್ವ ಕೊಟ್ಟಿರುವದನ್ನು ವಚನ ಸಾಹಿತ್ಯದ ಅಭ್ಯಾಸಗಳು ಸ್ಪಷ್ಟ ಪಡಿಸುತ್ತವೆ. ಡಾ.ಯಲ್ಲಪ್ಪ ಮಾಳಪ್ಪ ಯಾಕೊಳ್ಳಿ ಅವರು ‘ಒಲೆಯಲ್ಲಿ ಅಟ್ಟುಂಬರಲ್ಲದೆ ತಲೆಯಲ್ಲಿ ಅಟ್ಟುಂಬರಿಲ್ಲ ’ದ ವಚನದ ತಾತ್ಪರ್ಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಶ್ರೀಯಾದಡೆ ಉತ್ಸಾಹದಿಂದ ಉಬ್ಬದೆ,
ಕೆಟ್ಟಡೆ ಮನನೊಂದು ಖಿನ್ನವಾಗದಂತೆ ಇರಬೇಡಾ
ಹಿರಿಯರ ಮನ ಮನವಿಚ್ಛಂದವಾಗದೆ
ಒಂದೆಯದದಿ ಇಪ್ಪಂತಪ್ಪ ನಿಮ್ಮದೊಂದು ಸಮತೆಯ ಗುಣ
ಎನ್ನನೆಂದು ಪೊಂದಿಪ್ಪುದು ಕಪಿಲಸಿದ್ಧ ಮಲ್ಲಿಕಾರ್ಜುನಾ
ವಚನಕಾರರು ಬರೀ ಆಧ್ಯಾತ್ಮಿಕ ಅಥವಾ ಧಾರ್ಮಿಕ ಚಿಂತನೆ ಮಾಡಿದವರಲ್ಲ. ಅವರ ಹಲವಾರು ಚಿಂತನೆಗಳು ಇಹದ ಬದುಕನ್ನು ಸಾರ್ಥಕವಾಗಿ ಬದುಕುವದರ ಕಡೆಗೆ ಒತ್ತು ಕೊಟ್ಟಿರುವದನ್ನು ಕಾಣುತ್ತೇವೆ. ಪರದ ಬದುಕಿಗಿಂತ ಇಹದ ಬದುಕಿನ ಬಗೆಗೆ ಶರಣರು ಹೆಚ್ಚು ಮಹತ್ವ ಕೊಟ್ಟಿರುವದನ್ನು ವಚನ ಸಾಹಿತ್ಯದ ಅಭ್ಯಾಸಗಳು ಸ್ಪಷ್ಟ ಪಡಿಸುತ್ತವೆ. ಅಂಥ ಒಂದು ವಚನ ಈ ಮೇಲಿನದು.
ಮನುಷ್ಯನ ಸಹಜ ಗುಣದ ಬಗ್ಗೆ ವಚನಕಾರ ಸಿದ್ಧರಾಮರು ಈ ಪ್ರಸ್ತುತ ವಚನದಲ್ಲಿ ಚರ್ಚಿಸಿದ್ದಾರೆ. ಸುಖ ಬಂದಾಗ ಹಿಗ್ಗುವದು ದು:ಖ ಬಂದಾಗ ಕುಗ್ಗುವದು ಮನುಷ್ಯನ ಸಹಜ ಗುಣ. ಆದರೆ ಇದಕ್ಕೆ ವ್ಯತಿರಿಕ್ತವಾದದ್ದು ಶರಣರ ಗುಣ. ಅವರು ಸುಖ ಬಂದರೆ ಹಿಗ್ಗುವುದಿಲ್ಲ, ದು:ಖ ಬಂದರೆ ಕುಗ್ಗಲಾರರು. ಯಾವುದನ್ನೇ ಆಗಲಿ ಸಮಭಾವದಿಂದ ಸ್ವೀಕರಿಸುವ ಸಮಚಿತ್ತ ಅವರದು. ಇದನ್ನು ಸಾಧಿಸುವದು ಸಾಮಾನ್ಯರಿಂದ ಸಾಧ್ಯವಿಲ್ಲ.

ಶ್ರೀಮಂತಿಕೆ ಎಂಬ ಪದವನ್ನು ‘ಶ್ರೀಯಾದಡೆ’ ಎಂಬ ಮಾತಿನ ಮೂಲಕ ವಚನಕಾರರು ಗುರುತಿಸಿದ್ದಾರೆ. ಶ್ರೀ ಅಥವಾ ಸಂಪತ್ತು ಬಂದಾಗ ಉಬ್ಬುವದು ಮನುಷ್ಯನ ಸಹಜ ಗುಣ. ಅದೇ ಹಣಕಾಸಿನ ವ್ಯವಸ್ಥೆಯಲ್ಲಿ ಏರುಪೇರಾದಡೆ, ಅಂದರೆ ಕೆಟ್ಟರೆ ಮನಸ್ಸು ನೊಂದು ಖಿನ್ನವಾಗುವದು ಸಹಜ. ಆದರೆ ಹೀಗೆ ಹಣವಿದ್ದಾಗ ಉಬ್ಬುವ, ಧನವಿಲ್ಲದಾಗ ಕುಗ್ಗುವ ತನ್ನ ಸಹಜ ಗುಣವನ್ನು ಮಾಣಿಸಿ ತನಗೂ ಎರಡೂ ಸಮಯದಲ್ಲಿ ಸಮಚಿತ್ತದಿಂದ ಇರುವ ‘ಗುಣ ಎಂದಿಗೆ ಪೊಂದಿಪ್ಪುದು’ ಎಂದು ಬೇಡಿಕೊಳ್ಳುತ್ತಿದ್ದಾರೆ.
ಹೀಗೆ ನೊಂದುಕೊಳ್ಳದೇ ಸುಖ ದು:ಖ ಎರಡನ್ನು ಸಮಾನವಾಗಿ ಸ್ವೀಕರಿಸುವ ಗುಣ ಯಾರದು ಎಂದರೆ ಅದು ಹಿರಿಯರದು. ಇಲ್ಲಿ ವಚನಕಾರರ ಪ್ರಕಾರ ಹಿರಿಯರೆಂದರೆ ವಯಸ್ಸಿನಿಂದ ಹಿರಿಯರು ಎಂದು ಅರ್ಥವಲ್ಲ. ಅವರು ಶರಣರು ಎಂದು ಅರ್ಥ. ಅವರು ಹಿರಿಯರು ಎನ್ನುವದಕ್ಕೆ ಸಾಕ್ಷಿ ಹಣ ಬಂದಾಗ, ಅಥವಾ ಬಡತನ ಬಂದಾಗ ಅವರ ಮನ ವಿಚ್ಛಂದವಾಗದಿರುವದೇ ಸಾಕ್ಷಿ. ಆದ್ದರಿಂದ ಸಿದ್ಧರಾಮ ಶರಣರು ಹಿರಿಯರ ಮನ ಮನ ವಿಚ್ಛಂದವಾಗದೆ
ಒಂದೆಯAದದಿ ಇಪ್ಪತ್ತಂಪ ನಿಮ್ಮದೊಂದು ಸಮತೆಯ ಗುಣ ಎನ್ನುತ್ತಾರೆ. ಇಲ್ಲಿ ‘ಶರಣರದು’ ಎನ್ನದೇ ‘ನಿಮ್ಮದು’ ಎನ್ನುವ ಶಬ್ದ ಬಳಸಿರುವದು ಮುಖ್ಯ. ವಚನಕಾರರಿಗೆ ಶರಣರಾಗಲಿ , ದೇವರಾಗಲೀ ಇವರಿಬ್ಬರ ನಡುವೆ ಯಾವುದೆ ಅಂತರವಿಲ್ಲ. ಹಾಗೆಯೇ ಮನುಷ್ಯತ್ವದಿಂದ ದೈವತ್ವವನ್ನು ಸಾಧಿಸಲು ಹೀಗೆ ಮನ ವಿಚ್ಛಂದವಾಗದಿರುವ ಗುಣವಿರಬೇಕು ಎನ್ನುವದೂ ಇಲ್ಲಿ ಸೂಚಿತವಾಗಿದೆ. ಇದೇ ಅರ್ಥದ ಅನೇಕ ವಚನಗಳು ಶರಣರಲ್ಲಿ ಬರುತ್ತವೆ. ಬಸವಣ್ಣನವರ ‘ಸುಖ ಬಂದರೆ ಪುಣ್ಯದ ಫಲವೆನ್ನೆನು, ದು:ಖ ಬಂದರೆ ಪಾಪದ ಫಲವೆನ್ನೆನು’ ಎಂಬ ವಚನವೂ ಈ ಸಂದರ್ಭದಲ್ಲಿ ಪರಿಭಾವಿಸಬಹುದಾದ ವಚನವಾಗಿದೆ. ವಚನಕಾರ ಒಕ್ಕಲು ಮುದ್ದಣ್ಣ ‘ವ್ಯಾಧಿ ಬಂದಡೆ ಒರಲು, ನೋವು ಬಂದಡೆ ನರಳು, ಸಾವು ಬಂದಡೆ ಸಾಯಿ. ಇದಕ್ಕಾ ದೇವನ ಹಂಗೇಕೆ?’ ಎಂಬ ಧರ‍್ಯ ತುಂಬುವದೂ ಇದೇ ಅರ್ಥದಲ್ಲಿ. ಶರಣರಂತೆಯೇ ನಮ್ಮ ಜನಪದರ ಬದುಕು ಹಸನಾದದ್ದು. ಅವರೂ ಕೂಡ ‘ಸುಖ ಬರಲಿ ದು:ಖ ಬರಲಿ ನಾನು ಎರಡು ಭಾವಿಸಲಾರೆ’ ಎಂಬAತೆ ಬದುಕಿದವರು. ಒಬ್ಬ ಜನಪದ ಗರತಿ ‘ಕರುಣ ಬಂದರ ಕಾಯೋ, ಮರಣ ಬಂದರ ಒಯ್ಯೊ ,ಕರುಣಿ ಕಲ್ಯಾಣಿ ಬಸವಣ್ಣ ಕಡೆತನಕ ಕಾಯೋ ಅಭಿಮಾನ’ ಎನ್ನುವಲ್ಲಿಯೂ ಇದೇ ಭಾವ ಅಡಕವಾಗಿದೆ. ಇದನ್ನೇ ನಮ್ಮ ವರ ಕವಿ ಬೇಂದ್ರೆಯವರು
ಬಡತನ ಸಿರಿತಾನ ಕಡೆತನಕುಳಿದಾವೇನ
ಎದೆ ಹಿಗ್ಗು ಕಡೆಮಟ್ಟ
ಬದುಕಿನ ಕಡಲಾಗ ಅದನ ಮುಳುಗಿಸಬ್ಯಾಡ
ಕಡೆತನಕ ಹಿಡಿ ಹುಟ್ಟ
ಎಂದಿದ್ದರು. ಒಟ್ಟಾರೆ ಶರಣರ ಚಿಂತನೆಗೂ ಇಲ್ಲಿ ನಾನು ನೆನಪಿಸಿದ ಹಲವಾರು ಸಾಹಿತ್ಯದ ಉದಾಹರಣೆಗಳಿಗೂ ಅಂತರ ಬಹಳಿಲ್ಲ. ಶರಣರಾಗಲೀ, ಇತರ ಕವಿ, ಸಾಹಿತಿಗಳಾಗಲೀ ಬೋಧಿಸಿದ್ದು ಸುಖ ಅಥವಾ ಸಂಪತ್ತು ಬಂದರೆ ಹಿಗ್ಗದ , ದು:ಖ ಅಥವ ಬಡತನ ಬಂದರೆ ಕುಗ್ಗದ ,ಎರಡನ್ನೂ ಸಮಾನವಾಗಿ ಸ್ವೀಕರಿಸುವ ಸಮಚಿತ್ತದ ಬದುಕನ್ನೇ. ಅಂತಹ ಸಮಚಿತ್ತದ ಬದುಕು ನಮ್ಮದಾಗಬೇಕು. ಇದೇ ಬದುಕಿನ ಆದರ್ಶ.ಇಂತಹ ಆದರ್ಶವನ್ನು ಬೋಧಿಸಿದ ಅದರಂತೆ ಬದುಕಿದ ಆದ್ಯರು ನಮ್ಮ ಕನ್ನಡ ನಾಡಿನ ಶರಣರು ಎಂಬುದೇ ನಮ್ಮ ಹೆಮ್ಮೆ.
- ಡಾ.ಯಲ್ಲಪ್ಪ ಮಾಳಪ್ಪ ಯಾಕೊಳ್ಳಿ – ನಿವೃತ್ತ ಪ್ರಾಚಾರ್ಯರು.
