ಕ್ರಿ.ಶ. ನಾಲ್ಕನೇ ಶತಮಾನದಲ್ಲಿ ಕರ್ನಾಟಕದ ಮೊಟ್ಟಮೊದಲನೆಯ ಕದಂಬ ಸಾಮ್ರಾಜ್ಯವನ್ನು ಸ್ಥಾಪಿಸಿ ಕನ್ನಡದ ಪ್ರಪ್ರಥಮ ಚಕ್ರವರ್ತಿಯಾಗಿ ಮೆರೆದು ಕರ್ನಾಟಕಕ್ಕೆ ಕನ್ನಡದ ಅಸ್ಮಿತೆಯನ್ನು ಮೊದಲು ತಂದಿದ್ದು ಕನ್ನಡಿಗರ ಹೆಮ್ಮೆಯ ಮಯೂರವರ್ಮನ ಕುರಿತಾಗಿ ಕಾದಂಬರಿಕಾರ ಸಂತೋಷ್ ಕುಮಾರ್ ಮೆಹೆಂದಳೆಯವರ “ವೈಜಯಂತಿಪುರ ” ಐತಿಹಾಸಿಕ ಕಾದಂಬರಿ. ಕೃತಿಯ ಕುರಿತು ಹಿರಿಯೂರು ಪ್ರಕಾಶ್ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಪುಸ್ತಕ : ವೈಜಯಂತಿಪುರ
ಲೇಖಕರು : ಸಂತೋಷ್ ಕುಮಾರ್ ಮೆಹೆಂದಳೆ
ಪ್ರಕಾಶಕರು : ಸಾಹಿತ್ಯಲೋಕ, ಬೆಂಗಳೂರು
ಬೆಲೆ : ೩೭೫.೦೦
ಸುಮಾರು ಐದೂವರೆ ಶತಮಾನಗಳ ಕಾಲ ಅಸ್ತಿತ್ವದಲ್ಲಿದ್ದ ಕದಂಬ ರಾಜಮನೆತನವನ್ನು ಹುಟ್ಟುಹಾಕಿದ ಮಯೂರನ ಬಾಲ್ಯ , ಬೆಳವಣಿಗೆ, ನಿರಂತರ ಹೋರಾಟ, ರಕ್ತಸಿಕ್ತ ಯುದ್ಧಗಳ ಸವಿಸ್ತಾರವಾದ ಹಿನ್ನೆಲೆಯನ್ನೂ ಹಾಗೂ ವೈಜಯಂತಿಯ ರತ್ನ ಸಿಂಹಾಸನದ ಮೇಲೆ ಕದಂಬ ರಾಜ್ಯಲಕ್ಷ್ಮಿಯನ್ನು ಕನ್ನಡಿಗ ಚಕ್ರವರ್ತಿ ಮಯೂರವರ್ಮ ಪ್ರತಿಷ್ಠಾಪಿಸಿದ ಕೌತುಕವನ್ನೂ ಅಭೂತಪೂರ್ವವಾಗಿ , ಎಳೆಎಳೆಯಾಗಿ ಹಾಗೂ ಓದುಗರನ್ನು ಸೂಜಿಗಲ್ಲಿನಂತೆ ಸೆಳೆಯುವ ರೋಚಕತೆಯ ನಿರೂಪಣೆಯಿಂದ ಮೆಹೆಂದಳೆಯವರು ಅಮೋಘವಾಗಿ ಕಟ್ಟಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ.
ತಾಳಗುಂದದ ಅಗ್ರಹಾರದಲ್ಲಿ ಬಾಲ್ಯದಿಂದಲೂ ಶಾಸ್ತ್ರಗಳಿಗಿಂತಲೂ ಶಸ್ತ್ರಗಳಲ್ಲೇ ಆಸಕ್ತಿಯನ್ನು ಹೊಂದಿದ್ದ ಒಬ್ಬ ಸಾಧಾರಣ ಬ್ರಾಹ್ಮಣ ಯುವಕ ಕಾಂಚಿನಗರದಲ್ಲಿ ಪಲ್ಲವರಿಂದ ತನಗಾದ ಒಂದು ಅಪಮಾನವನ್ನೇ ಜೀವನದ ದೊಡ್ಡ ಸವಾಲನ್ನಾಗಿ ಸ್ವೀಕರಿಸಿ ವೇದಾಧ್ಯಯನದ ಗ್ರಂಥಗಳನ್ನು, ಶಾಸ್ತ್ರಗಳನ್ನು ಹಿಡಿಯಬೇಕಾದ ಕರಗಳಲ್ಲಿ ಶಸ್ತ್ರಾಯುಧಗಳನ್ನು ಹಿಡಿದು, ತನ್ನನ್ನು ಅವಹೇಳನ ಮಾಡಿ ಅವಮಾನಿಸಿದ ಪಲ್ಲವರನ್ನೇ ಇನ್ನಿಲ್ಲದಂತೆ ಸೊಲ್ಲಡಗಿಸಿ, ಎದುರುಬಿದ್ದ ಸಾಮಂತರನ್ನೆಲ್ಲಾ ಒಬ್ನೊಬ್ಬರನ್ನಾಗಿ ಮಣ್ಣುಮುಕ್ಕಿಸಿ, ಅವರೆಲ್ಲರ ಸೊಕ್ಕಡಗಿಸಿ ಮಧುಕೇಶ್ವರನ ದೈವಬಲದಿಂದ, ಸ್ವಂತ ಶೌರ್ಯ ಪ್ರತಾಪದಿಂದ, ಭುಜಬಲ ಪರಾಕ್ರಮಗಳಿಂದ , ತನಗಾಗಿ ಪ್ರಾಣಕೊಡಬಲ್ಲ ಸೈನಿಕರ ಪಡೆಯಿಂದ ಹಾಗೂ ಅನನ್ಯ ಇಚ್ಛಾಶಕ್ತಿಯಿಂದ ಕದಂಬ ರಾಜ್ಯವನ್ನು ಸ್ಥಾಪಿಸಿ, ಅಂದಿನ ಕುಂತಳವನ್ನೇ ವೈಜಯಂತಿಪುರ ವನ್ನಾಗಿಸಿ , ಅದನ್ನು ದಕ್ಷಿಣ ಭಾರತದ ಭೂಪಟದಲ್ಲಿ ಸ್ವರ್ಗಸೀಮೆಯನ್ನಾಗಿ ಮಾಡಿದ ಕ್ಷಾತ್ರವೀರ, ಅಸಹಾಯ ಶೂರ, ಸೋಲರಿಯದ ವೀರ ಮಯೂರವರ್ಮನ ಅದ್ಭುತ ಕಥಾನಕವನ್ನು ಹೆಜ್ಜೆಹೆಜ್ಜೆಗೂ ರೋಮಾಂಚಕಾರಿಯಾಗಿಸಿ ವಿಭಿನ್ನವಾಗಿ ಕನ್ನಡಿಗರ ಮುಂದಿರಿಸಿದ್ದಾರೆ ಮೆಹೆಂದಳೆಯವರು.

ತಾಳಗುಂದ ಪುಟ್ಟ ಅಗ್ರಹಾರದ ಬ್ರಾಹ್ಮಣೋತ್ತಮ ರಾದ ತನ್ನ ತಾತ ವೀರಶರ್ಮರ ಆಶ್ರಯದಲ್ಲಿ ದಿವ್ಯ ತೇಜಸ್ಸಿನಂತೆ ಬೆಳೆದ ಮಯೂರಶರ್ಮ ಅಲ್ಲಿಂದ ಜೀವನೋಪಾಯ ಮತ್ತು ಹೆಚ್ಚಿನ ವೇದಾಧ್ಯಯನ ಕ್ಕಾಗಿ ಪಲ್ಲವರ ಕಂಚಿಗೆ ಬಂದು ಗುರುಕುಲವನ್ನು ಸೇರುತ್ತಾನೆ. ವೇದಾಧ್ಯಯನಕ್ಕಿಂತಲೂ ಕುಸ್ತಿ, ಕತ್ತಿವರಸೆ, ಶಸ್ತ್ರಾಭ್ಯಾಸಗಳಲ್ಲೇ ಹೆಚ್ವಿನ ಆಸ್ಥೆ ತೋರಿಸಿದ ಮಯೂರ ತನ್ನನ್ನು ಮೀರಿಸುವವರಿಲ್ಲ ದಂತೆ ದಿನೇ ದಿನೇ ರಾಜಪುತ್ರರಿಗಿಂತ , ಕ್ಷತ್ರಿಯರಿಗಿಂತ ಹೆಚ್ಚಿನ ಕೌಶಲ್ಯದಿಂದ ಬೆಳೆಯುವುದನ್ನು ಸಹಿಸದ ಪಲ್ಲವರು ಮಯೂರನನ್ನು ಬೇಕೆಂದೇ ಅಪಮಾನಿಸಿ ಅಲ್ಲಿಂದ ಹೊರಗಟ್ಟುತ್ತಾರೆ. ಅಂದೇ ಶಪಥ ಮಾಡಿದ ಮಯೂರ ಕಂಚಿಯಿಂದ ಹೊರಟು ತನ್ನ ತಾಯ್ನೆಲಕ್ಕೆ ಬಂದು ಅಲ್ಲಿನ ಕಾಡುಮೇಡುಗಳ ನಿವಾಸಿಗಳಾದ ಕಡಂಬಿಗಳು ಕೆಂಗೆರೆಯವರನ್ನು ಹುರಿದುಂಬಿಸಿ ಅವರೊಳಗೆ ಸ್ವತಂತ್ರ ರಾಜ್ಯದ ಕನಸನ್ನು ಬಿತ್ತುತ್ತಾನೆ.
ಅಷ್ಟೇ ಅಲ್ಲ, ಈಗಾಗಲೇ ಸಾಹಸಿಗಳಾಗಿದ್ದ ಅವರಲ್ಲಿ ಯುದ್ಧದ ಕೌಶಲ್ಯಗಳನ್ನು ಸಹಾ ತುಂಬಿ ಒಬ್ಬೊಬ್ಬ ಬೇಡರ ಪಡೆಯ ಯೋಧನೂ ಎಂತಹ ಪರಿಣಿತ ಸೈನ್ಯವನ್ನಾದರೂ ನಿರ್ದಯವಾಗಿ ತರಿದುಹಾಕುವ ಹುಮ್ಮಸ್ಸು ಆತ್ಮವಿಶ್ವಾಸವನ್ನು ತುಂಬಿ ಅವರೊಳಗೆ ಹೋರಾಟದ ಕಾವನ್ನು ಉದ್ದೀಪಿಸುತ್ತಾನೆ. ಗೆರಿಲ್ಲಾ ಯುದ್ಧದ ತಂತ್ರಗಳನ್ನೂ ರಚಿಸುತ್ತಾನೆ. ಇದಕ್ಕೆ ಚಂಡಸೇನಾ, ವೆಂಗಿರಸಾ, ವಲ್ಕರಾಜು ಮುಂತಾದ ವೀರ ಸೇನಾನಿಗಳ ಸಾಥ್ ಸಿಗುತ್ತದೆ. ಮಯೂರ ಕೇವಲ ಬಾಹುಬಲವೊಂದನ್ನೇ ನೆಚ್ಚಿಕೊಳ್ಳದೇ ತನ್ನ ತಾತ ವೀರಶರ್ಮ ಹಾಗೂ ತಂದೆ ಬಂಧುಸೇನರ ಮಾರ್ಗದರ್ಶನ ಮತ್ತು ರಣತಂತ್ರಗಳಿಂದ ತನ್ನ ಸುತ್ತಮುತ್ತಲಿನ ಪ್ರದೇಶಗಳ ಸಾಮಂತರನ್ನು ಅಂದರೆ ಕಿಗ್ಗಾನುವಿನ ಪದ್ಮರಾಜ, ದಂಡಾವತಿಯ ಆಂಧ್ರಪಾಲ, ಕವಲಪುರದ ಬೃಹತ್ ಬಾಣ, ಮುಂತಾದವರನ್ನು ನಿಃಶೇಷ ಮಾಡುತ್ತಾ ಒಂದೊಂದೇ ಪ್ರದೇಶವನ್ನು ವಶಮಾಡಿಕೊಳ್ಳುತ್ತಾ ಸಾಮಂತರ ಸೈನ್ಯವನ್ನೂ ತನ್ನೊಳಗೆ ಸೇರಿಸಿಕೊಂಡು ಜಾಣ್ಮೆ ತೋರುತ್ತಾನೆ.
ಮಯೂರನ ವಿಜಯೋತ್ಸವಗಳ ಬೆಳವಣಿಗೆಯನ್ನರಿತ ಪಲ್ಲವ ದೊರೆ ಶಿವಸ್ಕಂದವರ್ಮ ತನಗೆ ಮಗ್ಗುಲ ಮುಳ್ಳಾಗಿರುವ ಮಯೂರನ ಮೇಲೆ ಯುದ್ಧಕ್ಕೆ ಸ್ವತಃ ದಂಡೆತ್ತಿ ಬಂದಾಗ ಅವನನ್ಮೂ ಸಹಾ ಸಾಕ್ಷಾತ್ ಪಲ್ಲವನೂ ಬೆಚ್ಚಿ ಬೀಳುವಂತೆ ಅಚ್ಚರಿಯೆನಿಸುವ ರಣತಂತ್ರದಿಂದ, ಅಪ್ರತಿಮ ಬಾಹುಬಲದಿಂದ ಸಂಪೂರ್ಣವಾಗಿ ಸೋಲಿಸಿ ಆ ಮೂಲಕ ಕದಂಬ ರಾಜ್ಯವನ್ನು ಕನ್ನಡದ ಮಣ್ಣಿನಲ್ಲಿ ವೈಜಯಂತಿಪುರವನ್ನು ರಾಜಧಾನಿಯನ್ನಾಗಿಸಿ ವಿಜೃಂಭಣೆಯಿಂದ ಪ್ರತಿಷ್ಠಾಪಿಸುತ್ತಾನೆ. ಅಲ್ಲಿಯವರೆಗೂ ಸತತ ಯುದ್ಧಗಳಿಂದ ಶತ್ರುಗಳ ರುಂಡಗಳನ್ನು ಚೆಂಡಾಡಿದ್ದ ಮಯೂರ ಶರ್ಮ ಅಲ್ಲಿಂದ ಸಂಪೂರ್ಣ ಕ್ಷತ್ರಿಯನಾಗಿ ಮಯೂರವರ್ಮನಾಗಿ ಬದಲಾಗಿ , ತನ್ನ ಸಾಮ್ರಾಜ್ಯಕ್ಕೆ ಕದಂಬ ಎಂದೂ ತನ್ನ ಕರ್ಣಾಟ ರಾಜಧಾನಿಯನ್ನು ವೈಜಯಂತಿಪುರವೆಂದು ನಾಮಕರಣ ಮಾಡಿ ವೈಜಯಂತಿಯ ರತ್ನ ಸಿಂಹಾಸನವನ್ನಲಂಕರಿಸಿ ಅದರ ಶ್ರೇಯೋಭಿವೃದ್ಧಿಗೆ ಕಂಕಣ ತೊಡುತ್ತಾನೆ.
ಉತ್ತರದ ಗುಪ್ತರೊಂದಿಗೆ ಸ್ನೇಹ ಹಸ್ತ ಚಾಚಿ ಮುತ್ಸದ್ದಿತನ ಮೆರೆಯುವ ಮಯೂರ ತನಗೆದುರಾಗಿ ಬಿದ್ದ ಅಭೀರರನ್ನು ಮತ್ತು ಅವನ ಸಹಾಯಕ್ಕೆ ನಿಂತ ಕೆಲ ಸಾಮಂತರನ್ನು ಕೊಚ್ಚಿ ಕೆಡವಿ ಇಡೀ ದಕ್ಷಿಣ ಭರತಖಂಡದಲ್ಲಿ ತನ್ನ ಸ್ಥಾನವನ್ನು ಅಬಾಧಿತವನ್ನಾಗಿ ಮಾಡಿಕೊಳ್ಳುತ್ತಾನೆ. ಮಧ್ಯ ಕುಂತಳದಿಂದ, ಬಯಲುನಾಡು,( ಮೈಸೂರು) ಕವಲಪುರ,( ಕೋಲಾರ) ಚಂದ್ರಾವಳಿ ( ಚಂದ್ರವಳ್ಳಿ), ಪಲಶಿಕೆ ( ಧಾರವಾಡದ ಹಲಸಿ), ಆಸಂಧ್ಯಾಲೂರು ( ಆನವಟ್ಟಿ)…. ಪ್ರದೇಶಗಳನ್ನೊಳಗೊಂಡು, ಶ್ರೀಶೈಲ, ಕಂಚಿ, ಗೋವುಪಟ್ಟಣ ಹಾಗೂ ಮಂಗಳಾಪುರದ ಗಡಿ ಭಾಗಗಳವರೆಗೂ ತನ್ನ ಕದಂಬ ಸಾಮ್ರಾಜ್ಯವನ್ನು ವಿಸ್ತರಿಸಿ ಚಕ್ರವರ್ತಿಯಾಗಿ ಮೆರೆಯುತ್ತಾನೆ. ಹೀಗಾಗಿ ಅವನಿಗೆ ಎದುರಾಗಿದ್ದ ಸೇಂದ್ರಕರು, ಭೋಜರು, ಶಕಪಲ್ಲವರು, ಅಭೀರರು, ಕೇಕೇಯರು, ಪಾರಿಯಾತ್ತಿಕರು, ಪೊನ್ನಾಟರು, ಆಳುಪರು ಮುಂತಾದ ಸಾಮಂತರು ಹಾಗೂ ಮಾಂಡಲೀಕರೆಲ್ಲರ ಹೆಡೆಮುರಿ ಕಟ್ಟಿದ ಮಯೂರನಿಗೆ ಎದುರಾಳಿಗಳೇ ಇಲ್ಲದಂತಾಗಿತ್ತು.
ದಶಕಗಳ ಕಾಲ ಅವಿಚ್ಛಿನ್ನವಾಗಿ ವೈಜಯಂತಿಪುರವನ್ನು ಕೇಂದ್ರವನ್ನಾಗಿಸಿ ರಾಜ್ಯಭಾರ ಮಾಡಿ ಕದಂಬ ಸಾಮ್ರಾಜ್ಯಕ್ಕೆ ಭದ್ರ ಅಡಿಪಾಯ ಹಾಕಿದ್ದ ಮಯೂರವರ್ಮ, ಕೊನೆಗೆ ಮಧುಕೇಶ್ವರ ಸನ್ನಿಧಾನದಲ್ಲೇ ಅನಾರೋಗ್ಯದಿಂದ ಭಾವುಕನಾಗಿ ಕೊನೆಯುಸಿರೆಳೆಯುವುದರೊಂದಿಗೆ ಕಾದಂಬರಿ ಮುಕ್ತಾಯಕ್ಕೆ ಬರುತ್ತದೆ.
ಇದು ಕಾದಂಬರಿಯ ಕಥಾನಕದ ಸಣ್ಣ ಝಲಕ್ .!
ಇಡೀ ಕಾದಂಬರಿ ನಿಮ್ಮನ್ನು ಹಿಡಿದಿಟ್ಟುಕೊಳ್ಳುವುದು ಮೆಹೆಂದಳೆಯವರ ಸುಲಲಿತವಾದ ಭಾಷೆ, ದಾಖಲೆಗಳ ಸಂಗ್ರಹದಲ್ಲಿ ಎದ್ದು ಕಾಣುವ ಶ್ರಮ, ಅನನ್ಯ ನಿರೂಪಣೆ ,ಅದ್ಭುತ ವಿವರಣೆ, ಆ ಕಾಲಘಟ್ಟದ ಊರು ಕೇರಿ ಭೌಗೋಳಿಕ ಪ್ರದೇಶಗಳ ವಿಸ್ತೃತ ಪರಿಚಯ, ಯುದ್ಧಗಳ ಭೀಭತ್ಸ ವರ್ಣನೆ, ರಣತಂತ್ರಗಳ ಕುತಂತ್ರಗಳ ರಣೋಪಾಯಗಳ ವಿಸ್ಮಯಕಾರಿ ನಿರೂಪಣೆ,ವೈಜಯಂತೀಪುರದ ಪ್ರಾಕೃತಿಕ ಸೌಂದರ್ಯದ ಮನಮೋಹಕ ವರ್ಣನೆ…ಇತ್ಯಾದಿ ಅಂಶಗಳಿಂದ.

ಅದಷ್ಟೇ ಅಲ್ಲದೇ ಓದುಗನಿಗೆ ಕಾಣಸಿಗುವುದು ಮಯೂರನ ಅಪ್ರತಿಮ ಶೌರ್ಯ, ಸಾಹಸ, ಕೆಚ್ಚೆದೆ, ಸ್ವತಂತ್ರ ಸಾಮ್ರಾಜ್ಯ ಕಟ್ಟಬೇಕೆನ್ನುವ ಛಲ ಹಾಗೂ ರಣಾಂಗಣದಲ್ಲಿ ಮಯೂರನ ಎಣೆಯಿಲ್ಲದ ಪ್ರತಾಪ ಮತ್ತು ಯುದ್ಧತಂತ್ರ. ಮಯೂರನ ಯುದ್ಧ ಕೌಶಲ್ಯ ಹೇಗಿತ್ತೆಂದರೆ ಒಂದೇಬಾರಿಗೆ ಮೂರು ಕಡೆಯಿಂದ ಶತ್ರುಗಳ ಮೇಲೆ ಪ್ರಹಾರ ಮಾಡುವ ಇವನ ಶೌರ್ಯಕ್ಕೆ ಮುಕ್ಕಣ್ಣನೆಂಬ ಬಿರುದೂ ಇತ್ತಂತೆ . ಇವುಗಳನ್ನು ಲೇಖಕರು ಪ್ರತೀ ಯುದ್ಧದ ವರ್ಣನೆಯಲ್ಲೂ ಅತ್ಯಂತ ರಂಜಕವಾಗಿ ರೋಚಕವಾಗಿ ನಿರೂಪಿಸುತ್ತಾ ಹೋಗುತ್ತಾರೆ. ಹೆಚ್ಚುಕಡಿಮೆ ಮುಕ್ಕಾಲುವಾಸಿ ರಣತಂತ್ರ, ರಣಾಂಗಣದ ವೈಶಿಷ್ಟ್ಯ, ಯುದ್ಧಗಳ ಭರಾಟೆ, ಗೆರಿಲ್ಲಾ ಮಾದರಿಯ ಯುದ್ಧತಂತ್ರ ಮುಂತಾದ ರೋಚಕತೆಗಳ ನಿರೂಪಣೆಯೇ ವೈಜಯಂತಿಪುರ ಕಾದಂಬರಿಯ ಹೈಲೈಟು ಎನ್ನಬಹುದು.
ಮೆಹೆಂದಳೆಯವರ ಭಾಷಾಸೊಗಡು ಅದ್ಭುತವಾಗಿದೆ. ಸನ್ನಿವೇಶಕ್ಕೆ ತಕ್ಕಹಾಗೆ ಪದ ಜೋಡಣೆ, ರೋಷಾವೇಶದ ಪ್ರತಿಜ್ಞೆಗಳ ಸಂಧರ್ಭದಲ್ಲಿನ ಗಂಡು ಭಾಷೆ, ಯುದ್ಧಗಳ ತಂತ್ರ ಕುತಂತ್ರಗಳ ಸವಿಸ್ತಾರವಾದ ವಿವರಣೆ, ಇವೆಲ್ಲವೂ ಕೊನೆಯವರೆಗೂ ಕುತೂಹಲವನ್ನು ಹಿಡಿದಿಟ್ಟು ಕೊಳ್ಳುವಲ್ಲಿ ಯಶಸ್ವಿಯಾಗಿವೆ. ಎಲ್ಲಕ್ಕಿಂತ ಮುಖ್ಯವಾಗಿ ಈ ಕಾದಂಬರಿಗಾಗಿ ದಾಖಲೆಗಳನ್ನು ಸಂಗ್ರಹಿಸಲು ಮತ್ತು ಆ ಕಾಲಘಟ್ಟದ ಜನಜೀವನ ಹಾಗೂ ಸಾಮಾಜಿಕ ಆರ್ಥಿಕ ಪರಿಸ್ಥಿತಿ ಅರಿಯಲು ಅವರು ಪಟ್ಟಿರುವ ಪ್ರಾಮಾಣಿಕ ಪ್ರಯತ್ನ ಪುಟಪುಟದಲ್ಲೂ ಗೋಚರವಾಗುತ್ತದೆ. ಸಾಧ್ಯವಾದಲ್ಲೆಲ್ಲಾ ಕೆಲವು ಅಡಿ ಟಿಪ್ಪಣಿಗಳ ಮೂಲಕ ತಮ್ಮ ನಿಲುವನ್ನು ಸಾಕ್ಷೀಕರಿಸಲು ಲೇಖಕರು ಯತ್ನಿಸಿದ್ದಾರೆ.
ಇನ್ನು ಕಾದಂಬರಿಯ ಬಹುಮುಖ್ಯ ಹೂರಣವೆಂದರೆ ಮಯೂರನ ಹೋರಾಟದ ಹೆಜ್ಜೆಗಳ ಜೊತೆ ಜೊತೆಗೆ ಅವನು ಕ್ಷತ್ರಿಯನಾಗಿರಲಿಲ್ಲ, ಬ್ರಾಹ್ಮಣ ಎಂಬುದನ್ನು ಒತ್ತಿ ಒತ್ತಿ ನಿರೂಪಿಸುತ್ತಲೇ ಹೋಗುವ ಸೂಕ್ಷ್ಮ ಎದ್ದು ಕಾಣುತ್ತದೆ. ( ದೇವುಡು ರವರ ಕಾದಂಬರಿಯಲ್ಲಿ ಮಯೂರ ಕ್ಷತ್ರಿಯನಾಗಿ ಜನ್ಮ ತಾಳಿರುತ್ತಾನೆ. ). ಅಷ್ಟೇ ಅಲ್ಲದೇ ಒಬ್ಬ ಸಾಧಾರಣ ಬ್ರಾಹ್ಮಣ ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡಬಲ್ಲ ಎಂಬುದನ್ನು ಬಹು ಮಾರ್ಮಿಕವಾಗಿ ಮಯೂರನ ಬದುಕಿನುದ್ದಕ್ಕೂ ತಳುಕುಹಾಕಿ ಹೇಳ ಹೊರಟಿದ್ದಾರೆ. ಹೀಗಾಗಿಯೇ ಕಾದಂಬರಿಯ ಅನೇಕ ಕಡೆ ಬ್ರಾಹ್ಮಣ, ಪೌರೋಹಿತ್ಯ, ವೇದಾಧ್ಯಯನದ ಮಹತ್ವ, ಬ್ರಾಹ್ಮಣರ ಬುದ್ದಿವಂತಿಕೆ, ಅವರಿಗಿದ್ದ ಮಹತ್ವ, ಇತ್ಯಾದಿ ಬ್ರಾಹ್ಮಣ್ಯದ ಧನಾತ್ಮಕ ಅಂಶಗಳನ್ನು ಎತ್ತಿ ತೋರಿಸುವಲ್ಲಿ ಹೆಚ್ಚಿಗೆ ಶ್ರಮಿಸಿದ್ದಾರೆ.
ಒಂದು ಹಂತದಲ್ಲಿ ಮಯೂರ ಶಿವಸ್ಕಂದವರ್ಮನಿಗೆ ಹೇಳುವ ” ಒಬ್ಬ ಕ್ಷತ್ರಿಯ ಸುಲಭಕ್ಕೆ ಬ್ರಾಹ್ಮಣನಾಗಲಾರ. ಆದರೆ ಬ್ರಾಹ್ಮಣ ಮನಸ್ಸು ಮಾಡಿದರೆ ಕ್ಷಾತ್ರ ತೇಜಸ್ಸನ್ನು ವೃದ್ಧಿಸಿಕೊಳ್ಳುವುದು ಕಷ್ಟವಾಗಲಾರದು ” ಎಂಬಂತಹ ಡೈಲಾಗುಗಳು. ಜೊತೆಗೆ ಬ್ರಾಹ್ಮಣ ಅಮಾತ್ಯರ ದೆಸೆಯಿಂದಲೇ ಹಾಗೂ ವೇದಾಧ್ಯಯನದಲ್ಲಿದ್ದ ಯುದ್ಧಗಳ ರಣವ್ಯೂಹಗಳನ್ನು ಅವರು ರಾಜನಿಗೆ ತಿಳಿಸಿಕೊಡುತ್ತಿದ್ದರಿಂದಲೇ ರಾಜರು ಯುದ್ಧ ಗೆಲ್ಲುತ್ತಿದ್ದರೆಂಬ ವಾದವನ್ನೂ ಮಂಡಿಸುತ್ತಾರೆ. ಅಲ್ಲದೇ ಮಯೂರ ನಂತಹ ರಾಜ ಇತಿಹಾಸಕಾರರಿಂದ ನಿರ್ಲಕ್ಷ್ಯ ಕ್ಕೊಳಗಾಗಿದ್ದು ಆತ ಬ್ರಾಹ್ಮಣ ಎಂಬ ಕಾರಣಕ್ಕೆ ಅಥವಾ ಜಾತಿ ಬೆಂಬಲ ಇಲ್ಲದ ಕಾರಣಕ್ಕೆ ಎಂಬ ಅರ್ಥಬರುವ ವಿಚಿತ್ರತರ್ಕವನ್ನೂ ಮುಂದಿಡುತ್ತಾರೆ.
ಈ ಅಂಶಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ಇಂದಿನ ಸಾಮಾಜಿಕ ವರ್ತುಲದಲ್ಲಿ ಬ್ರಾಹ್ಮಣರ ಸ್ಥಾನಮಾನ, ಸ್ಥಿತಿಗತಿ, ಅವರಿಗೆದುರಾಗಿರ ಬಹುದಾದ ಟೀಕೆಗಳು ಹಾಗೂ ಅವರ ಅಪಾರ ಬುದ್ದಿಮತ್ತೆಯನ್ನು ಮನದಲ್ಲಿಟ್ಟುಕೊಂಡು ವೈಜಯಂತಿಪುರ ದ ಪಾತ್ರಗಳ ಮೂಲಕ, ತಮ್ಮ ನಿರೂಪಣೆಯ ಮೂಲಕ ಹತ್ತು ಹಲವು ಬಾರಿ ಅದಕ್ಕೆ ಉತ್ತರವೆಂಬಂತೆ ತಮ್ಮ ಆಕ್ರೋಶವನ್ನು ಲೇಖಕರು ವೈಜಯಂತಿಪುರದ ಸನ್ನಿವೇಶಗಳ ಮೂಲಕ ಸೂಕ್ತವಾಗಿ ಹೊರಹಾಕಿದ್ದಾರೆ.
ಆದರೆ ಈ ಅಂಶಗಳನ್ನು ಹೇಳುವ ಭರದಲ್ಲಿ ಅಖಂಡ ಕನ್ನಡಿಗರ ಗುಣ ಸ್ವಭಾವಗಳಲ್ಲಿ ಹಾಸುಹೊಕ್ಕಾದ ಕನ್ನಡಿಗರ ನ್ಯಾಯ , ನೀತಿ, ಸಂಸ್ಕೃತಿ ,ಸಾಹಸ ಸ್ವಾಭಿಮಾನ ಗಳನ್ನು ವಿಜೃಂಭಿಸಿ ಎತ್ತರಕ್ಕೇರಿಸುವ ಅಂಶಗಳು ಬಿಟ್ಟು ಹೋಗಿ, ಮಯೂರ ಕರ್ನಾಟಕದ ಪ್ರಪ್ರಥಮ ದೊರೆಯೆಂಬ ಸಣ್ಣ ಉಲ್ಲೇಖ ಕಾದಂಬರಿಯ ಕೊನೆಯ ಸಾಲುಗಳಲ್ಲಿ ಮಾತ್ರ ಇಣುಕುವಂತಾಗಿದೆ.
ಲೇಖಕರೇ ಹೇಳಿದಂತೆ, ವೈಜಯಯಂತಿಪುರ ಕಾದಂಬರಿಯಲ್ಲಿ ಅವರು ಸಂಪೂರ್ಣ ಸ್ವಾತಂತ್ರ್ಯವನ್ನು ಬಳಸಿಕೊಂಡು ಕೃತಿ ರಚಿಸಿದ್ದಾರೆಯೇ ಹೊರತು ಅದು ದಾಖಲೆಬದ್ದ ಇತಿಹಾಸವಲ್ಲ. ಏಕೆಂದರೆ ಕೇವಲ ಮೂರು ಮತ್ತೊಂದು ಪುಟಗಳ ದಾಖಲೆಯನ್ನಿಟ್ಟುಕೊಂಡು ಮುನ್ನೂರ ಇಪ್ಲತ್ನಾಲ್ಕು ಪುಟಗಳ ಐತಿಹಾಸಿಕ ಕಾದಂಬರಿಯನ್ನು ಹೆಣೆದಿರುವುದರಿಂದ , ಅಲ್ಲಲ್ಲಿ ಇತಿಹಾಸದ ವಾಸ್ತವತೆಗಿಂತ ಲೇಖಕರ ವೈಯಕ್ತಿಕ ನೀತಿ ನಿಲುವುಗಳ ಪ್ರಚುರತೆಗೆ ತಮ್ಮ ಸೃಜನಶೀಲತೆಯನ್ನು ಜಾಣ್ಮೆಯಿಂದ ಬಳಸಿಕೊಂಡ ರೀತಿಗಳೇ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡಿವೆ.
ಅದೇನೇ ಇದ್ದರೂ ಕರ್ನಾಟಕದ ಮೊಟ್ಟಮೊದಲ ಚಕ್ರೇಶ್ವರ ಕದಂಬ ರಾಜಪುತ್ರ ಮಯೂರನನ್ನು ಬಹಳ ಆಸ್ಥೆಯಿಂದ ವೈಜಯಂತಿಪುರದ ಮೂಲಕ ಕನ್ನಡಿಗರ ಕೈಗಿತ್ತಿರುವ ಸಂತೋಷ ಕುಮಾರ್ ಮೆಹೆಂದಳೆಯವರ ಶ್ರಮ ನಿಜಕ್ಕೂ ಅಭಿನಂದನಾರ್ಹ.
* ಮರೆಯುವ ಮುನ್ನ *
ಕಾದಂಬರಿಯ ಉಪಸಂಹಾರದಲ್ಲಿ ಲೇಖಕ ಮೆಹೆಂದಳೆಯವರು ಎತ್ತಿರುವ ಕೆಲವು ತರ್ಕಗಳಿಗೆ ಸಮಾಧಾನ ಹುಡುಕುವ ಯತ್ನ ಮಾಡಿದ್ದೇನೆ. ಉದಾಹರಣೆಗೆ, ಅವರ ಪ್ರಕಾರ ” ಕೇವಲ 200 ರಿಂದ 300 ಜನರನ್ನಾಳಿದ ಸಣ್ಣಪುಟ್ಟ ಪಾಳೆಯಗಾರರ ಬಗೆಗೆ ನಮ್ಮಲ್ಲಿ ಇತಿಹಾಸವಿದೆ, ಕಾದಂಬರಿಗಳಿವೆ, ಪ್ರತಿಮೆಗಳಿವೆ. ಆದರೆ ಕನ್ನಡದ ಮೊದಲ ಸಾಮ್ರಾಜ್ಯ ಸ್ಥಾಪಿಸಿದ ಮಯೂರನ ಬಗ್ಗೆ ಇತಿಹಾಸದಲ್ಲಿ ಏನೂ ಇಲ್ಲ” ಎಂಬುದು ಅವರ ಆಕ್ರೋಶ. ಅವರು ಏನನ್ನು ಯಾವ ಪಾಳೆಯಗಾರರನ್ನು ಮನಸಿನಲ್ಲಿಟ್ಟುಕೊಂಡು ಹೀಗೆ ಹೇಳಿದ್ದಾರೋ ಗೊತ್ತಿಲ್ಲ. ಇದಕ್ಕೆ ಸಕಾರಣವಿರಬಹುದಾದರೂ ಯಾವುದೇ ಪ್ರಾಂತ್ಯದ ಪಾಳೆಯಗಾರರ ಇತಿಹಾಸ ಕೇವಲ 300 ರಿಂದ 400 ವರ್ಷ ಹಳೆಯದು. ಹೀಗಾಗಿ ಇತಿಹಾಸದ ಹೆಚ್ವಿನ ದಾಖಲೆಗಳು ಲಭ್ಯವಿರಬಹುದು. ಆದರೆ ಮಯೂರ ವರ್ಮನ ಕಾಲ ಕ್ರಿ. ಶ. ನಾಲ್ಕನೆ ಶತಮಾನ. ಹೀಗಾಗಿ ಹಲ್ಮಿಡಿ, ಚಂದ್ರವಳ್ಳಿ ,ತಾಳಗುಂದ ಇವೇ ಮೊದಲಾದ ಶಾಸನಗಳನ್ನು ಬಿಟ್ಟರೆ ಹೆಚ್ಚಿಗೆ ದಾಖಲೆ ಲಭ್ಯವಿಲ್ಲದಿರಬಹುದು. ಅದಕ್ಕೆ ಪಾಳೆಯಗಾರರನ್ನು ಹೋಲಿಸಿ ತಿವಿಯುವ ಅಗತ್ಯವಿರಲಿಲ್ಲ.
ಯಾವುದೇ ಒಂದು ಕೃತಿಯನ್ನು ಅದರಲ್ಲೂ ಐತಿಹಾಸಿಕ ಕೃತಿಯನ್ನು ರಚಿಸುವಾಗ ಕಾದಂಬರಿಕಾರನಿಗಿರ ಬೇಕಾದ ಸ್ವಾತಂತ್ರ್ಯವೆಂದರೆ ತನ್ನ ವೈಯಕ್ತಿಕ ಸಿದ್ದಾಂತ ಅಥವಾ ತಾನು ಅನುಸರಿಸುವ “ಇಸಂ” ಗಳನ್ನು ವೈಭವೀಕರಿಸುವುದೂ ಅಲ್ಲ ಮೆರೆಸುವುದೂ ಅಲ್ಲ . ಆದಷ್ಟೂ ವಸ್ತುನಿಷ್ಠತೆಗೆ ಬದ್ದರಾಗಿ ಕಥಾನಾಯಕ ಒಂದು ಅಖಂಡ ರಾಜ್ಯ , ಒಟ್ಟು ಪ್ರದೇಶ, ಅಥವಾ ತನ್ನ ಪ್ರಾಂತ್ಯಕ್ಕೆ ಅವನ ಸಾಧನೆಗಳ ಮೂಲಕ ಒಟ್ಟಾರೆ ಅಸ್ಮಿತೆಯಾಗಿ ಹೇಗೆ ಅಮರನಾಗಿ ಉಳಿದ ಎಂಬುದೇ ಮುಖ್ಯ. ಈ ನಿಟ್ಟಿನಲ್ಲಿ ಯಾವುದೇ ಒಂದು ಸಮುದಾಯಕ್ಕಿಂತ ಒಟ್ಟಾರೆ ಜನಪದದ, ಈ ನೆಲದ ಕೇಂದ್ರೀಕೃತವಾದ ದೃಷ್ಟಿ ಇನ್ನೂ ಮುಖ್ಯ.
ಮೆಹೆಂದಳೆಯವರ ಮತ್ತೊಂದು ಆರೋಪವೆಂದರೆ ಮಯೂರನ ಬಗ್ಗೆ ಯಾರೂ ಆಸ್ಥೆ ವಹಿಸದೇ ಆತ ಇತಿಹಾಸದ ಕಾಲಗರ್ಭದಲ್ಲಿ ಹೂತುಹೋಗಿದ್ದ ಎಂಬುದು.
” ಕರ್ನಾಟಕದ ಮೊಟ್ಟಮೊದಲ ರಾಜಮನೆತನ ಕದಂಬ , ಪ್ರಪ್ರಥಮ ಚಕ್ರೇಶ್ವರ ಮಯೂರ ವರ್ಮ ” ಎಂಬುದು ಕರ್ನಾಟಕದ ಇತಿಹಾಸಬಲ್ಲವರಿಗೂ, ಅಕ್ಷರ ಬಾರದವರಿಗೂ ಒಬ್ಬ ಸಾಮಾನ್ಯ ಕನ್ನಡಿಗನಿಗೂ ಬಹುತೇಕ ಅರಿವಿದೆ. ಅದಕ್ಕೆ ಕಾರಣ ನಾಲ್ಕನೇ ಶತಮಾನದ ಇತಿಹಾಸದ ಕಾಲಗರ್ಭದಲ್ಲಿ ಮರೆಯಾಗಿದ್ದ ಮಯೂರನ ಕಥೆಯನ್ನು, ಕದಂಬ ರಾಜವಂಶವನ್ನು ಮೊಟ್ಟಮೊದಲು ಸುಮಾರು ಎಂಭತ್ತು ವರ್ಷಗಳ ಹಿಂದೆಯೇ ಅಕ್ಷರ ಬಲ್ಲವರಿಗೆ ಪರಿಚಯಿಸಿದವರು ಪೂಜ್ಯರಾದ ದೇವುಡು ನರಸಿಂಹ ಶಾಸ್ತ್ರಿಗಳು ( ೧೮೯೬ – ೧೯೬೨) . ಅದರ ಆಧಾರದ ಮೇಲೆ ಐವತ್ತು ವರ್ಷಗಳ ಹಿಂದೆ ನಿರ್ಮಿತವಾದ ವರನಟ ಡಾ. ರಾಜ್ ಅಭಿನಯದ ಮಯೂರ ಚಲನಚಿತ್ರ ಒಬ್ಬ ಸಾಧಾರಣ ಕೂಲಿ ಕಾರ್ಮಿಕ, ರೈತನಿಂದ ಹಿಡಿದು ಅನಕ್ಷರಸ್ಥರವರೆಗೂ ಅಖಂಡ ಕನ್ನಡ ನಾಡಿಗೆ ಕದಂಬರ ಬಗೆಗೆ ಮಾಹಿತಿ ಕೊಟ್ಟು ನಾಡಿನ ಪ್ರಪ್ರಥಮ ದೊರೆ ಮಯೂರನ ಮೇಲೆ ಅಭಿಮಾನವುಕ್ಕುವಂತೆ ಮಾಡಿತ್ತು. ಹೀಗಾಗಿ ಮಯೂರ ಇತಿಹಾಸದ ಕಾಲಗರ್ಭದಲ್ಲಿ ಹೂತು ಹೋಗಿರಲಿಲ್ಲ. ಕನ್ನಡಿಗರ ಎದೆಯಾಳದಲ್ಲಿ ಇಂದಿಗೂ ಬೆಚ್ಚಗೆ ಆತುಕೊಂಡಿದ್ದಾನೆ.
ಯಾವುದೇ ಒಂದು ಐತಿಹಾಸಿಕ ಕಾದಂಬರಿಯನ್ನು ಲೇಖಕ ರಚಿಸುವಾಗ ಅಥವಾ ಓದುಗ ಓದಿಮುಗಿಸಿದಾಗ “ಕಾದಂಬರಿಕಾರ ಇತಿಹಾಸದ ನ್ಯಾಯಾಧೀಶನಲ್ಲ” ಎಂಬ ವಾಸ್ತವ ಪ್ರಜ್ಞೆ ಇದ್ದಷ್ಟೂ ಅದು ಕೃತಿಗೆ ನ್ಯಾಯ ಸಲ್ಲಿಸಿದಂತಾಗುತ್ತದೆ.
ಈ ಎಲ್ಲದರ ನಡುವೆ ಮೆಹೆಂದಳೆಯವರ ಕಾದಂಬರಿ “ವೈಜಯಂತಿಪುರ” ಅತ್ಯದ್ಭುತವಾಗಿ ಮೂಡಿಬಂದಿದೆಯೆಂಬುದರಲ್ಲಿ ಸಂದೇಹವೇ ಇಲ್ಲ. ಮಯೂರನನ್ನು ಅವನ ಜನ್ಮ, ಜಾತಿ, ಸಮುದಾಯಗಳ ಹಿನ್ನೆಲೆಗಳಿಗೆ ಒತ್ತು ಕೊಡುವುದರ ಜೊತೆಜೊತೆಗೇ ಅದಕ್ಕಿಂತಲೂ ಹೆಚ್ಚಿಗೆ ಕನ್ನಡ, ಕರ್ನಾಟಕ, ಕನ್ನಡಿಗರ ಸಂಕೇತವೆಂಬಂತೆ ಕನ್ನಡಾಭಿಮಾನದ ಹೊಳೆಯಲ್ಲಿ ಅದ್ದಿ ತೆಗೆದಿದ್ದಲ್ಲಿ “ವೈಜಯಂತಿಪುರ” ಕನ್ನಡದ ಕೊಹಿನೂರ್ ಕಿರೀಟವಾಗಿ ಮತ್ತಷ್ಟು ಹೊಳೆಯುತ್ತಿತ್ತೇನೋ…..!!
ಪ್ರೀತಿಯಿಂದ……
‘ವೈಜಯಂತಿಪುರ’ ಪುಸ್ತಕದ ಹಿಂದಿನ ವಿಮರ್ಶೆಗಳು :
- ಹಿರಿಯೂರು ಪ್ರಕಾಶ್
